ವಿಷಯಕ್ಕೆ ಹೋಗು

ಹೊಸಬಾಳೆ ಸುಬ್ಬರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸಬಾಳೆ ಸುಬ್ಬರಾಯರು, (ಜನನ :೨೧-೬-೧೯೦೧ ; ಮರಣ :೧೬-೭-೧೯೮೬)

  • ಇವರು ಹೊಸಬಾಳೆ ಶ್ರೀ ರಾಮಪ್ಪ ಹೆಗಡೆ ಮತ್ತು ಶ್ರೀಮತಿ ಭಾಗೀರಥಿ ಇವರ ಎರಡನೆಯ ಮಗ. ಅವರು ಹೊಸಬಾಳೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಸೊರಬದಲ್ಲಿ ಮಾದ್ಯಮಿಕ ಶಿಕ್ಷಣವನ್ನು ಮಾಡಿದರು. ಸಕಾಲದಲ್ಲಿ ಉಪನಯವಾಗಿ ವೈದಿಕ (ವೇದ) ಪಾಠಶಾಲೆ ಸೇರಿ ಕಾಲೋಚಿತ (ಸಂಧ್ಯಾವಂದನೆ , ದೇವರ ಪೂಜೆ ಇತ್ಯಾದಿ ) ಮಂತ್ರಗಳನ್ನು ಕಲಿತು ಅದನ್ನು ಅನುಷ್ಠಾನದಲ್ಲಿ ಇಟ್ಟುಕೊಂಡಿದ್ದರು. ಅವರ ವಿವಾಹವು ಹತ್ತಿರದಲ್ಲಿದ್ದ ಬನದಕೊಪ್ಪ ಊರಿನ ಪಟೇಲ ಲಿಂಗಪ್ಪನವರ ಮಗಳು ಸಾವಿತ್ರಿ ಯವರ ಜೊತೆ ಅವರ ೧೬ನೆಯ ವಯಸ್ಸಿನಲ್ಲಿಯೇ ಆಯಿತು. ಇವರ ಅಣ್ಣ ಪುಟ್ಟಪ್ಪನವರು ಇರುವವರೆಗೂ ಜಮೀನು ಮನೆ ಮತ್ತು ಸೊರಬದಲ್ಲಿರವ ಇವರ ಜವಳಿ ಅಂಗಡಿಯ ವ್ಯವಹಾರವನ್ನು ನೋಡಿಕೊಂಡರು . ಅವರ ಅಕಾಲ ಮರಣಾನಂತರ , ಸುಬ್ಬರಾಯರು ಆ ಹೊಣೆಯನ್ನು ಹೊರಬೇಕಾಯಿತು. ಇವರ ತಮ್ಮ ಶ್ರೀ ಶೇಷಗಿರಿರಾಯರು ಈ ಎಲ್ಲ ಹೊಣೆಗಾರಿಕೆ ಯ ಕಾರ್ಯಗಳಲ್ಲಿ ಪೂರ್ಣ ಸಹಕಾರ ನೀಡಿದರು. ಇದರಿಂದ ಶ್ರೀ ಸುಬ್ಬರಾಯರಿಗೆ ಸಮಾಜ ಸೇವೆ ಗುರುಸೇವೆ, ಸಹಕಾರ ರಂಗದಲ್ಲಿ ಸೇವೆ, ರಾಜ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಯಿತು. s
  • ಸುಬ್ಬರಾಯರಿಗೆ ಐದು ಮಕ್ಕಳು ; ಕಾಶಮ್ಮ , ಲಲಿತಮ್ಮ , ಸುಶೀಲಾ, ಸುಲೋಚನಾ: - ಇವರು ಹೆಣ್ಣು ಮಕ್ಕಳು; ಶ್ರೀನಿವಾಸ ರಾವ್ ಮಗ.

ಹೊಸಬಾಳೆ ಸುಬ್ಬರಾಯರ ಹಿರಿಯರು

[ಬದಲಾಯಿಸಿ]
  • ಹೊಸಬಾಳೆ ಊರು, ಕರ್ನಾಟಕದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿದೆ. ಸುಬ್ಬರಾಯರ ಹಿರಿಯ ತಲೆಮಾರಿನವರು, ಹೊಸಬಾಳೆ ತಿಮ್ಮಯ್ಯ ಹೆಗಡೆ (ತಿಮ್ಮಪ್ಪ ಹೆಗಡೆ ೧೭೫೦) ಕುಟಂಬ ಸಮಾಜ ಸೇವೆಗೆ ಹೆಸರಾಗಿದೆ. ತಿಮ್ಮಯ್ಯ ಹೆಗಡೆಯವರು. ನಂತರದವರು ಪುಟ್ಟಪ್ಪನವರು :ಅವರ ಮಕ್ಕಳು ರಾಮಪ್ಪ ಹೆಗಡೆ (೧೮೫೩ -೧೯೧೪) ಅವರ ಮಕ್ಕಳು ಪುಟ್ಟಪ್ಪ ಮತ್ತು ಸುಬ್ಬರಾಯರು (೧೯೦೧ )
  • ತಿಮ್ಮಯ್ಯ ಹೆಗಡೆಯವರು ತೀರ್ಥಹಳ್ಳಿಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಕಟ್ಟಡವನ್ನ ಅನೇಕ ಅಡಚಣೆಗಳನ್ನ ಹೋಗಲಾಡಿಸಿ ಕಟ್ಟಿಸಿ ಶ್ರೀ ಮಠದ ಕೃಪೆ ಆಶೀರ್ವಾದಗಳಿಗೆ ಪಾತ್ರರಾಗಿದ್ದರು.
  • ರಾಮಪ್ಪ ಹೆಗಡೆ ಯವರು ವ್ಯವಸಾಯದ ಜೊತೆಗೆ ಅಡಿಕೆ ವ್ಯಾಪಾರವನ್ನೂ ಮಾಡುತ್ತಿದ್ದರು. ಅವರು ಮೈಸೂರು ಸಂಸ್ಥಾನದ ಪ್ರಜಾಪತಿನಿಧಿ ಸಭೆಯ ಪ್ರತಿನಿಧಿಗಳಾಗಿದ್ದು ಸಕ್ರಿಯವಾಗಿ ಭಾಗವಹಿಸಿ ಹದಿನೈದು ವರ್ಷಗಳ ಕಾಲ (೧೮೮೯-೧೯೦೪) ಸಮಾಜ ಸೇವಾಕಾರ್ಯವನ್ನು ಮಾಡಿದರು. ಅಂದಿನ ಶ್ರೀಮನ್ ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿದ್ದರು.
  • ಅವರು ಕಾಂಚೀ ಕ್ಷೇತ್ರಕ್ಕೆ ಹೋಗಿ ಶಾಸ್ತ್ರ ವ್ಯಾಸಂಗ ಮಾಡಿದರು. ಅಲ್ಲಿಯ ಮಹಾರಾಜರು ಶ್ರೀ ರಾಮಚಂದ್ರಾಪುರ ಮಠಕ್ಕೆ ಒಂದು ಆನೆಯನ್ನು ಕೊಡಿಗೆಯಾಗಿ ನೀಡಿ ಅದನ್ನು ರಾಮಪ್ಪ ಹೆಗಡೆಯವರ ವಶಕ್ಕೆ ಒಪ್ಪಿಸಿದರು. ಅದನ್ನು ಅವರು ಶ್ರೀ ಮಠಕ್ಕೆ ತಂದು ಒಪ್ಪಿಸಿದರು. ಅವರು ಶ್ರೀ ಮಠದ ೩೩ನೆಯ ಗುರುವರ್ಯರಾಗಿದ್ದ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ನಿಕಟವರ್ತಿಗಳಾಗಿದ್ದು , ಮಠದ ಕಾರ್ಯವ್ಯವಹಾರಗಳನ್ನೂ ನೋಡಿಕೊಳ್ಳತ್ತಿದ್ದರು.

ಅವರು ೧೮೯೮ನೇ ಇಸವಿಯಲ್ಲಿ ನೆರವೇರಿದ ಶ್ರೀಮಠದ ಮೂವತ್ನಾಲ್ಕನೆಯ ಪೀಠಾಧಿಪತಿಗಳಾದ ಶ್ರೀಮದ್ರಾಮಚಂದ್ರ ಭಾರತೀ ಸ್ವಾಮಿಗಳ ಸಂನ್ಯಾಸಾಶ್ರಮ ಸ್ವೀಕಾರ ಸಮಾರಂಭದಲ್ಲಿ ಪ್ರಮುಖ ಶಿಷ್ಯರಾಗಿ ಸೇವೆ ಸಲ್ಲಿಸಿದರು.

ಹಸ್ತಿ ದಂತ ಸಿಂಹಾಸನದ ಕಾರ್ಯಕ್ಕೆ ಪೀಠಿಕೆ :

[ಬದಲಾಯಿಸಿ]
  • ಅವರ ನಂತರ ಅವರ ತಮ್ಮ ಅನಂತಪ್ಪ ಹೆಗಡೆಯವರು ಶ್ರೀಮಠದ ಸೇವೆಯಲ್ಲಿ ತೊಡಗಿಕೊಂಡರು. ಅವರು ಹಸ್ತಿದಂತ ಸಿಂಹಾಸನವನ್ನು

ಮಠಕ್ಕಾಗಿ ತಯಾರಿಸುವ ಯೋಜನೆಗೆ ಚಾಲನೆ ಕೊಟ್ಟರು. ಉತ್ತರ ಸಹ್ಯಾದ್ರಿಖಂಡ ವೆಂಬ ಗ್ರಂಥವನ್ನು ಪ್ರಕಟಿಸಿದರು.

  • ನಂತರ ರಾಮಪ್ಪನವರ ಹಿರಿಯ ಮಗ ಪುಟ್ಟಪ್ಪ ಹೆಗಡೆಯವರು ಮಠದ ಸೇವಕಾರ್ಯ ಕೈಗೊಂಡರು. ಅವರು ಕಾರಣಾಂತರದಿಂದ ಹಂಪೆಯಲ್ಲಿ ಬೀಡು ಬಿಟ್ಟಿದ್ದ ಶ್ರೀಮಠದ ಗುರುಗಳಾದ ಶ್ರೀಮದ್ರಾಮಚಂದ್ರ ಭಾರತೀ ಸ್ವಾಮಿಗಳನ್ನು ಸಮಾಧಾನ ಪಡಿಸಿ ಮಠಕ್ಕೆ ಕರೆತಂದರು. ಪುಟ್ಟಪ್ಪ ಹೆಗಡೆಯವರು ನಂತರ ಮಾಡಿದ ಸಾಹಸ ಕೆಲಸ ಜಗತ್ಪ್ರಸಿದ್ಧವಾದ ಹಸ್ತಿ ದಂತ ಸಿಂಹಾಸನದ ಕಾರ್ಯ. ದೊಡ್ಡದಾಗಿದ್ದ ಆನೆಯ ದಂತ ಮಠದಲ್ಲಿತ್ತು. ಹೊಸಬಾಳೆಯ ಹತ್ತಿರ ವಿರುವ ಮೂಡುಗೋಡಿನಲ್ಲಿ ಅಸಾಧಾರಣ ಶಿಲ್ಪಚಾತುರ್ಯವುಳ್ಳ ಗುಡಿಗಾರ ಹಿರಣ್ಯಪ್ಪ ನವರಿದ್ದರು. ಪುಟ್ಟಪ್ಪ ಹೆಗಡೆಯವರು ಶ್ರೀ ಮಠದ ಗುರುಗಳೊಡನೆ ಸಿಂಹಾಸನದ ವಿಷಯ ಚರ್ಚಸಿ ಸಿಂಹಾಸನದ ರಚನೆಗೆ ಪ್ರವೃತ್ತರಾದರು. ಗುಡಿಗಾರ ಹಿರಣ್ಯಪ್ಪನ ವರನ್ನುಕಂಡು ಎರಡು ವರ್ಷಗಳಲ್ಲಿ ಯೋಜನೆ ಸಿದ್ಧಪಡಿಸಿದರು. ಅದನ್ನು ಶ್ರೀ ಗುರುಗಳಿಗೆ ತೋರಿಸಿ ಒಪ್ಪಿಗೆ ಪಡೆದು ೧೯೧೬ ರಲ್ಲಿ ಮೂಡುಗೋಡಿನ ಗುಡಿಗಾರ ಹಿರಣ್ಯಪ್ಪ ನವರ ಮನೆಯಲ್ಲಿಯೇ ಕೆತ್ತನೆಯ ಕಾರ್ಯವನ್ನು ಪ್ರಾರಂಬಿಸಲಾಯ್ತು. ಸಿಂಹಾಸನದ ಕಾರ್ಯ ಪ್ರಗತಿಯನ್ನು ಆಗಾಗ ಗುರುಗಳ ಗಮನಕ್ಕೆ ತರುತ್ತಿದ್ದರು. ಪ್ರಯಾಣ ಸೌಕರ್ಯವಿರದ ಆ ಕಾಲದಲ್ಲಿ ಸುಮಾರು ೫೦ ಮೈಲಿ (೮೦ ಕಿ.ಮೀ.) ದೂರದಲ್ಲಿದ್ದ ಶ್ರೀಮಠಕ್ಕೆ ಹೋಗಿಬರುವ ಕಾರ್ಯ ಸುಲಭವಾಗಿರಲಿಲ್ಲ. ಪುಟ್ಟಪ್ಪ ಹೆಗಡೆಯವರು ಮಧ್ಯ ಪ್ರಾಯದಲ್ಲಿಯೇ ತೀರಿಕೊಂಡಾಗ (೧೯೩೩), ಸುಬ್ಬರಾಯರು ಮಠದ ಕಾರ್ಯವನ್ನೂ ಸಿಂಹಾಸನದ ಕಾರ್ಯವನ್ನೂ ವಹಿಸಿಕೊಂಡರು. ಅವರು ಶ್ರೀಮಠದ ಸೇವೆ, ಸಮಾಜ ಸೇವೆ, ರಾಜ ಕಾರ್ಯ ಗಳನ್ನು ಜೀವನವಿಡೀ ಬಿಡುವಿಲ್ಲದೆ ಮಾಡಿದರು.

ಸಮಾಜ ಸೇವೆ

[ಬದಲಾಯಿಸಿ]
  • ಅವರ ಸರಳ ಜೀವನ , ಸಾತ್ವಿಕತೆ , ನಿರಂತರ ಕಾರ್ಯಕ್ಷಮತೆ, ಅವರಿಗೆ ಜನ ಮನ್ನಣೆಯನ್ನು ತಂದು ಕೊಟ್ಟಿತು. ತಲಕಾಲಕೊಪ್ಪದ ಹವ್ಯಕ ಸಹಕಾರ ಸಂಘವನ್ನು ಸುಬ್ಬರಾಯರ ಅಣ್ಣ ಸ್ಥಾಪಿಸಿದ್ದರು. ಅವರ ಅಕಾಲ ಮರಣಾನಂತರ ಶ್ರೀ ಸುಬ್ಬರಾಯರು ಅದರ ಅಧ್ಯಕ್ಷರಾಗಿ ೧೯೩೩ ರಲ್ಲಿ ಆಯ್ಕೆಯಾದರು. ಸಂಘಕ್ಕೆ ಅಗತ್ಯ ಠೇವಣಿ ಸಂಗ್ರಹಿಸಿ, ಅಗತ್ಯವಿರುವವರಿಗೆ ಸಾಲ ವಿತರಣೆ ಮಾಡಿ, ಜನರ ಮನ್ನಣೆ ಗೆ ಪಾತ್ರರಾದರು. ಅಚ್ಚುಕಟ್ಟಾಗಿ ಲೆಕ್ಕ ಪತ್ರಗಳನ್ನಿಟ್ಟು ಇಡೀ ಶಿವಮೊಗ್ಗಾ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಪತ್ರವನ್ನೂ, ಪಾರಿತೋಷಕ ಷೀಲ್ಡನ್ನೂ ಸಂಘಕ್ಕೆ ಲಭ್ಯವಾಗುವಂತೆ ಮಾಡಿದರು. ಇವರ ಅವಧಿಯಲ್ಲಿಯೇ ಅದರ ರಜತಮಹೋತ್ಸವವನ್ನೂ ಆಚರಿಸಿ ೧೯೫೪ ರಲ್ಲಿ ಕಟ್ಟಡದ ಅಸ್ತಿಭಾರವನ್ನು ಜಿಲ್ಲಾ ಮುಖ್ಯ ನ್ಯಾಯಾಧೀಶರಿಂದ ಹಾಕಿಸಿ ೧೯೬೩ರಲ್ಲಿ ಕಟ್ಟಡ ಕೆಲಸವನ್ನು ಪೂರ್ತಿಗೊಳಿಸಿದರು. ಅದನ್ನು ಅಂದಿನ ಸಚಿವರಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರು ಉದ್ಘಾಟಿಸಿದರು. ನಂತರ ಅದಕ್ಕೆ ಅಗತ್ಯವಾದ ಉಗ್ರಾಣ ವನ್ನೂ ಕಟ್ಟಿಸಿದರು. ಅವರು ೧೯೩೩ ರಿಂದ ೧೯೬೮ರ ವರೆಗೆ ೩೫ ವರ್ಷ ಸತತವಾಗಿ ಅವಿರೋಧವಾಗಿ ಸಂಘದ ಅದ್ಯಕ್ಷರಾಗಿ ಆಯ್ಕೆ ಯಾದರು. ಅವರು ನಿವೃತ್ತರಾಗುವ ಸಂದರ್ಭದಲ್ಲಿ ಅವರಿಗೆ ಸಂಘವು ಅವರ ಸೇವೆಯನ್ನು ಸ್ಮರಿಸಿ, ಸುವರ್ಣ ಪದಕವನ್ನಿತ್ತು ಸನ್ಮಾನಿಸಿತು.

ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರು :

[ಬದಲಾಯಿಸಿ]
  • ಹಿಂದೆ ಮಹಾರಾಜರ ಕಾಲದಲ್ಲಿ ಪ್ರಜಾಪ್ರತಿನಿಧಿ ಇತ್ತು . ಆ ಸಭೆಯ ಸದಸ್ಯರ ಅಭಿಪ್ರಾಯ ತಿಳಿದು ಆಡಳಿತನೆಡೆಸುವ ಕ್ರಮವಿತ್ತು. ಶ್ರೀಸುಬ್ಬರಾಯರು ೧೯೩೮ ರಿಂದ ೧೯೪೩ರ ವರೆಗೆ ೫ ವರ್ಷಗಳ ಕಾಲ ಪ್ರಜಾಪ್ರತಿನಿಧಿ ಸಭೆಯಲ್ಲಿ ಮಲೆನಾಡು ಪ್ರಾಂತ್ಯವನ್ನು ಪ್ರತಿನಿಧಿಸಿದ್ದರು. ಸಭೆಯಲ್ಲಿ ಅವರು ರಸ್ತೆ ಸಂಪರ್ಕ, ಶಿಕ್ಷಣ ವಿಷಯ, ಶಾಲಾಕೊಠಡಿ ನಿರ್ಮಾಣ, ಅಡಿಕೆ ಕೊಳೆ ರೋಗ ನಿವಾರಣೆ, ಈ ಸಂಬಂಧ / ಬಗೆಯ ವಿಷಯ ಪ್ರಶ್ನೆ ಕೇಳಿ ಮಲೆನಾಡಿನ ಕುಂದು ಕೊರತೆ ನಿವಾರಣೆಗೆ ಸಹಾಯ ಮಾಡಿದರು. ಇವರ ಸೇವೆಯನ್ನು ಗಮನಿಸಿ ಶ್ರೀ ಜಯಚಾಮರಾಜ ಒಡೆಯರ ಪಟ್ಟಾಭಿಷೇಕ ಸಮಯದಲ್ಲಿ ಇವರನ್ನು ಸಂಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.

ಇತರೆ ಸಂಸ್ಥೆ ಗಳಲ್ಲಿ ಸೇವೆ :

[ಬದಲಾಯಿಸಿ]
  • ಮೈಸೂರು ರಾಜ್ಯದ ಅಪೆಕ್ಸ್ ಬ್ಯಾಂಕ್ ಲಿ. ಬೆಂಗಳೂರು ಇದರ ಆಡಳಿತ ನಿರ್ದೇಶಕರಾಗಿ ೧೯೪೦ ರಿಂದ ೧೯೪೫ ರ ವರೆಗೆ ಸೇವೆ ಸಲ್ಲಿಸಿದರು.ಅದೇ ರೀತಿ ಜಮೀನು ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇದರ ನಿರ್ದೆಶಕರಾಗಿಯೂ ಆರು ವರ್ಷ(೧೯೫೦-೧೯೫೬) ಸೇವೆ ಸಲ್ಲಿಸಿದರು. ಇವಲ್ಲದೆ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ, ಸಹಕಾರಿ ಮುದ್ರಣಾಲಯ, ಶಿವಮೊಗ್ಗಾ ಅಡಿಕೆ ಮಾರಾಟ ಸಹಕಾರ ಸಂಘ (ಮ್ಯಾಮ್ಕೋಸ್), ಇವುಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾದರು .

ಸಾಗರದಲ್ಲಿರುವ ಅನ್ನಾವರ ಅಡಿಕೆ ಕಂಪನಿ :

[ಬದಲಾಯಿಸಿ]
  • ಸಾಗರ ಪ್ರಂತ ಅಡಿಕೆ ಬೆಳೆಗಾರರಿಗೆ ಅಡಿಕೆ ಮೆಣಸು ಉತ್ಪನ್ನಗಳಿಗೆ ಸರಿಯಾದ ವ್ಯಾಪಾರ ವ್ಯವಸ್ಥೆ ಇಲ್ಲದೆ ನ್ಯಾಯವಾದ ಬೆಲೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡು, ಮತ್ತಿಕೊಪ್ಪದ ಲಕ್ಷಿ ನಾರಯಣಪ್ಪನವರು ಹೊಸಬಾಳೆ ಸುಬ್ಬರಾಯರು ಮತ್ತು ಮೂಗಿಮನೆ ಗಣೇಶಯ್ಯನವರ ಜೊತೆಗೂಡಿ ಕಂಪನಿ ಕಾಯ್ದೆ ಪ್ರಕಾರ ಅನ್ನಾವರ ಅಡಿಕೆ ಕಂಪನಿ , ಸಾಗರ ಎಂಬ ಅಡಿಕೆ ಕಂಪನಿಯನ್ನು ಸಾಗರದಲ್ಲಿ ಹುಟ್ಟುಹಾಕಿದರು (೧೯೪೫). ಅದು ಈಗಲೂ ಸಮರ್ಥವಾಗಿ ನೆಡೆಯುತ್ತಿದೆ.
  • ಕೇಂದ್ರ ಸರಕಾರ ಅಡಿಕೆ ಮೇಲೆ ಪೌಂಡಿಗೆ ೨ ಆಣೆ (೧೨ ಳಿ ಪೈಸೆ) ಅಬಕಾರಿ ತೆರಿಗೆಯನ್ನು ವಿಧಸಿತ್ತು. ವಿದೇಶದಿಂದಲೂ ಅಡಿಕೆ ಅಮದಾಗುತ್ತಿತ್ತು. ಇದರಿಂದ ಅಡಿಕೆ ಬಲೆ ಕುಸಿದು ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಆಗ ಅಡಿಕೆ ಸುಪಾರಿ ಫೆಡರೇಶನ್ ಕಾರ್ಯದರ್ಶಿಗಳಾಗಿದ್ದ ಶ್ರೀ ಜಿ.ಕೆ.ಗೋವಿಂದ ಭಟ್ಟರ ನೇತ್ರತ್ವದಲ್ಲಿ ಒಂದು ಸಮಿತಿ ರಚಿಸಿದರು (ಶ್ರೀ ಜಿ.ಕೆ.ಗೋವಿಂದ ಭಟ್ಟರು ನಂತರ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದರು). ಅದರಲ್ಲಿ ಶ್ರೀ ಸುಬ್ಬರಾಯರು ಅನ್ನಾವರ ಅಡಿಕೆ ಕಂಪನಿಯ ಪರವಾಗಿ ಸಮಿತಿ ಸದಸ್ಯರಾಗಿ ಎರಡು ಮೂರುಬಾರಿ ಸಮಿತಿಯೊಡನೆ ದೆಹಲಿಗೆ ಹೋಗಿ ಸರಕಾರದ ಮೇಲೆ ಒತ್ತಡ ತಂದು ತೆರಿಗೆಯನ್ನು ಪೌಂಡಿಗೆ ಒಂದು ಆಣೆ ಯಂತೆ ಕಡಿಮೆ ಮಾಡಿಸಿ ಅಮದಾಗುವ ಅಡಿಕೆಯ ಮೇಲೆ ಐದು ಆಣೆ ತೆರಿಗೆ ಹಾಕುವಂತೆ ಆಜ್ಞೆ ಮಾಡಿಸಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಸಹಾಯ ಮಾಡಿದರು.
  • ಸುಬ್ಬರಾಯರು ೧೯೮೧ ರಲ್ಲಿ ವೃದ್ಧಾಪ್ಯ ವಶದಿಂದ ನಿವೃತ್ತರಾದರು ಆಗ ಅವರನ್ನು ೩೬ ವರ್ಷಗಳಕಾಲ ಸುದೀರ್ಘವಾಗಿ ಸಲ್ಲಿಸಿದ ಸೇವೆಗಾಗಿ ಕಂಪನಿಯು ಶ್ರೀ ಸುಬ್ಬರಾಯರನ್ನು ವಿಶೇಷವಾಗಿ ಸನ್ಮಾನಿಸಿತು.

ಸ್ವಗ್ರಾಮ ಸೇವೆ :

[ಬದಲಾಯಿಸಿ]
  • ಸ್ವಂತ ಗ್ರಾಮವಾದ ಹೊಸಬಾಳೆಯ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಕ್ರಿಯಾಶೀಲರಾಗಿ ದುಡಿದು, ಶಾಲಾಕಟ್ಟಡ, ರಸ್ತೆಗಳ ರಿಪೇರಿ ಇತ್ಯಾದಿ ಸೇವೆ ಸಲ್ಲಿಸಿದರು. ಸೀಮೆಯ ದೇವಾಲಯವಾದ ಕೋಡನಕಟ್ಟೆ ಯ ವಿನಾಯಕ ದೇವಾಲಯವು ಮುಜರಾಯಿ ಇಲಾಖೆ ಯಲ್ಲಿದೆ. ಇದರ ಜಮೀನಿನ ಕಂದಾಯ ಕಟ್ಟದೆ ಇದ್ದರಿಂದ, ಸರ್ಕಾರವು ಅದನ್ನು ಹರಾಜು ಹಾಕಿತು. ಶ್ರೀಸುಬ್ಬರಾಯರು ಅದನ್ನು ಹರಾಜಿನಲ್ಲಿ ಹಿಡಿದು ಅರ್ಚಕರಿಗೆ ಗೇಣಿಗೆ ಕೊಟ್ಟು ಪೂಜೆ ಯ ವ್ಯವಸ್ಥಮಾಡಿ ಹೀನಾಯ ಸ್ಥಿತಿಯಲ್ಲಿದ್ದ ದೇವಾಲಯವನ್ನು ಅಭಿವೃದ್ಧಿ ಪಡಿಸಿದರು. ಮೂವತ್ತೈದು ವರ್ಷಕಾಲ ದೇವಾಲಯದ ಧರ್ಮದರ್ಶಿಗಳಾಗಿದ್ದು (೧೯೪೯) ಸೀಮೆಯವರ ಸಹಕಾರ ಪಡೆದು ದೇವಾಲಯದ ನೂತನ ಕಟ್ಟಡ ನಿರ್ಮಾಣಮಾಡಿ ವಿನಾಯಕ ದೇವರ ಅಷ್ಟಬಂಧ, ಶಾಂತಿ , ಮಾಡಿಸಿ ನಿರಂತರವಾಗಿ ದೇವರಸೇವೆ ನಡೆಯುವಂತೆ ಮಾಡಿದರು.

ವಿದ್ಯಾ ಮತ್ತು ಸಂಸ್ಕೃತಿ ಪ್ರಸಾರ :

[ಬದಲಾಯಿಸಿ]
  • ಹೊಸಬಾಳೆಯ ಹತ್ತಿರವಿರುವ ತಲಕಾಲಕೊಪ್ಪದ ವೇದ ಸಂಸ್ಸೃತ ಪಾಠಶಾಲೆಯ ಅದ್ಯಕ್ಷರಾಗಿ ಅದರ ಅಭಿವೃದ್ಧಿಗೆ ಶ್ರಮಿಸಿದರು. ಸರ್ಕಾರದಿಂದ ಅದಕ್ಕೆ ಹೆಚ್ಚಿನ ಧನ ಸಹಾಯ ಬರುವಂತೆ ಮಾಡಿದರು.
  • ಸೊರಬ ಅಥವಾ ಸುತ್ತ ಮುತ್ತಿನ ಪ್ರದೇಶದಲ್ಲಿ ವಿದ್ಯಾರ್ಥಿಗಳಗೆ ಪ್ರೌಢಶಾಲೆ ಇರಲಿಲ್ಲ. ಸೊರಬದ ತಹಶೀಲ್ದಾ ರರ ಅದ್ಯಕ್ಷತೆಯಲ್ಲಿ ಪ್ರೌಢ ಶಿಕ್ಷಣ ಸಮಿತಿಯೊಂದನ್ನು ರಚಿಸಿ, ಸಾರ್ವಜನಿPರಿಂದ ವಂತಿಗೆ ಹಣ ಸಂಗ್ರಹಿಸಿ, ಸೊರಬದ ಪುರಸಭೆ ವತಿಯಿಂದ ೧೯೪೮ ರಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟಲು ವ್ಯವಸ್ಥೆ ಇಲ್ಲದೇ ಇದ್ದುದರಿಂದ ಬಡ ವಿದ್ಯಾರ್ಥಿಗಳಗೆ ತಮ್ಮ ಮನೆಯಲ್ಲೇ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ಬಡವರಾದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದರು; ಉದಾಹರಣೆಗೆ - ಶ್ರೀ ರಂಗನಾಥ ಶರ್ಮಾ ಅವರು ೧೯೩೪ ರಲ್ಲಿ ಮುಂದಿನ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬರಿ ಕೈಯ್ಯಲ್ಲಿ ಹೊರಟಾಗ ಸುಬ್ಬರಾಯರು ಅವರಾಗಿ ವಿಚಾರಿಸಿ , ಸಹಕಾರ ನಿಧಿಯಿಂದ ಅವರಿಗೆ ೨೦ರೂಪಾಯಿ ಸಹಾಯಮಾಡಿದ್ದರು . ಅದೇರೀತಿ ಎರಡನೇ ಬಾರಿ ಶರ್ಮಾ ಅವರು ಕಷ್ಟದಲ್ಲಿದ್ದಾಗಲೂ ಸಹಾಯ ಮಾಡಿದ್ದರು. ಆಗಿನ ಕಾಲದಲ್ಲಿ ೨೦ ರೂಪಾಯಿ ಎಂದರೆ ದೊಡ್ಡ ಮೊತ್ತ (ಪ್ರೌಡ ಶಾಲೆಯ ಶಿಕ್ಷಕರ ಒಂದು ತಿಂಗಳ ಸಂಬಳ) ; ಶರ್ಮಾ ಅವರು ಮುಂದೆ ಸಂಸ್ಕೃತ ಅಧ್ಯ ಯನ ಮುಂದುವರೆಸಿ ಪ್ರಾಧ್ಯಾಪಕರಾಗಿ- ನಂತರ ಮಹಮಹೋಪಾಧ್ಯಾಯ ಗೌರವ ಪದವಿ ಪಡೆದರು.
  • ಬೆಂಗಳೂರಿಗೆ ಹೋದಾಗ ಉತ್ತಮ ದರ್ಜೆಯ ಶ್ರೀ ಶಂಕರ ಭಗವತ್ ಪಾದರ ದೊಡ್ಡ ಚಿತ್ರಗಳನ್ನ ತಂದು ಭಕ್ತರಿಗೆ ಹಂಚುತ್ತಿದ್ದರು. ಮಹಾತ್ಮರ ವಚನಗಳು, ಎಂಬ ಶೀರ್ಷಿಕೆಯಡಿಯಲ್ಲಿ ಸುಭಾಷಿತಗಳನ್ನೂ , ಸಂಸ್ಸೃತ ಸೂಕ್ತಿಗಳನ್ನೂ, ಮಹಾತ್ಮರ ವಚನಗಳನ್ನೂ ಅಚ್ಚು ಹಾಕಿಸಿ ಜನರಿಗೂ ಯುವಕರಿಗೂ ಹಂಚುತ್ತಿದ್ದರು ಮತ್ತು ಅನುಸರಿಸಲು ಹೇಳುತ್ತಿದ್ದರು. ಇದನ್ನು ಓದಿ ತಿಳಿದು ಅನುಸರಿಸುವುದೇ ಇದರ ಬೆಲೆ ಎಂದು ಅಚ್ಚುಹಾಕಿಸಿದ್ದರು.

ದಂತ ಸಿಂಹಾಸನದ ಕಾರ್ಯ( ೧೯೧೬-೧೯೩೪) :

[ಬದಲಾಯಿಸಿ]
  • ಶ್ರೀ ರಾಮಚಂದ್ರಾಪುರ ಮಠದಂತ ಸಿಂಹಾಸನ ದ ಯೋಜನೆ, ಕಾರ್ಯ ೧೯೧೬ ರಲ್ಲಿಯೇ ಪ್ರಾರಂಭವಾಗಿ ಮೂಡುಗೋಡು ಕಲಾವಿದ ಹಿರಣ್ಯಪ್ಪನವರ ಮನೆಯಲ್ಲಿಯೇ ನಡೆಯುತ್ತಿತ್ತು. ಹಿರಣ್ಯಪ್ಪನವರು, ನೂಡುಗೋಡಿನಲ್ಲಿ ಸಿಂಹಾಸನ ಕಾರ್ಯ ಮುಂದುವರೆಸಲು ಕಷ್ಟಕರವೆಂದು ಪುಟ್ಟಪ್ಪ ಹೆಗಡೆಯವರಿಗೆ ತಿಳಸಿದಾಗ (೧೯೨೩), ಸೊರಬದಲ್ಲಿ ವಾಸವಾಗಿದ್ದ ಶ್ರೀ ಸುಬ್ಬರಾಯರ ಮನೆಯ ವಿಶಾಲ ಮಹಡಿಗೆ ಆ ಕೆಲಸವನ್ನು ಸ್ಥಳಾಂತರಿಸಲಾಯಿತು. ಸುಬ್ಬರಾಯರು ಅವರ ಜವಳಿಅಂಗಡಿಯ ಜೊತೆಗೆ ಸಿಂಹಾಸನದ ಕೆಲಸದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಪುಟ್ಟಪ್ಪನವರು ಅವರು ಇರುವವರೆಗೆ ಸಿಂಹಾಸನದ ಪ್ರಗತಿಯ ವರದಿಯನ್ನು ಶ್ರೀಗುರುಗಳಿಗೆ ಒಪ್ಪಿಸುತ್ತಿದ್ದರು. ಅವರ ನಂತರ ಆ ಕೆಲಸವೂ ಸುಬ್ಬರಾಯರಿಗೇ ಬಂದಿತು.

ಸಿಂಹಾಸನವು ಮೊದಲು ಬೀಟೆ ಮರದಲ್ಲಿ ಒಂಭತ್ತು ಅಡಿ ಎತ್ತರ ಇರುವಂತೆ ಭದ್ರವಾಗಿ ನಿರ್ಮಿಸಲಾಯಿತು . ಪೀಠದ ಹಿಂಬದಿಯಲ್ಲಿ ಪ್ರಭಾವಳಿ ಇದೆ. ಈ ಸಿಂಹಾಸನಕ್ಕೆ ಕಾಂಚಿಯ ಮಹಾರಾಜರ ಕೊಡಿಗೆಯಾದ ರಾಮಭದ್ರ ಆನೆಯ ದಂತವನ್ನು ಸಂಗ್ರಹಿಸಿ ಇಟ್ಟಿದ್ದನ್ನು ಉಪಯೋಗಿಸಿದೆ. ಕಡಿಮೆ ಬಿದ್ದ ಆನೆಯ ದಂತವನ್ನು ಸುಬ್ಬರಾಯರು ಮದರಾಸಿಗೆ ಹೋಗಿ ಕೊಂಡುತಂದರು. ಈ ಸಿಂಹಾಸನಕ್ಕೆ ಸುಮಾರು ೨೦೦ ಕೆ.ಜಿ. ಹಸ್ತಿ ದಂತವನ್ನು ಉಪಯೋಗಿಸಲಾಗಿದೆ. ಆನೆಯ ದಂತವನ್ನು ಅರ್ಧ ಇಂಚು ದಪ್ಪ, ಮೂರು ಇಂಚು ಅಗಲ, ನಾಲ್ಕು ಇಂಚು ಉದ್ದದ ಹಲಗೆಗಳನ್ನು ಮಾಡಿ ನುಣುಪು ಮಾಡಲಾಯಿತು. ಪ್ರತಿಯೊಂದು ಫಲಕಗಳಲ್ಲಿಯೂ ರಾಮಾಯಣ , ಮಹಾಭಾರತದ ಮುಖ್ಯ ಘಟನೆಗಳನ್ನು ಜಾಲಂದ್ರದಂತೆ ಕೊರೆದು ತಯಾರಿಸಿಕೊಂಡರು. ಬಂಗಾರದ ಲೇಪ ಕೊಟ್ಟ ಹಿತ್ತಾಳೆಯ ತಗಡಿಗೆ ಈದಂತದ Pಕೆತ್ತನೆಯನ್ನು ಜಾಣ್ಮೆಯಿಂದ ಜೋಡಿಸಿ ಬೀಟೆಯ ಸಿಂಹಾಸನಕ್ಕೆ ಹಾಗೂ ಪ್ರಭಾವಳಿಗೆ ಜೋಡಿಸಿದೆ. ಕೆಳಗೆ ಮಹಾಭಾರತದ ಘಟನಾವಳಗಣ್ನೂ , ಪ್ರಭಾವಳಿಗೆ ರಾಮಾಯಣದ ಘಟನಾವಳಿಗಳನ್ನೂ ಹಾಕಿದೆ. ಪ್ರತಿ ಫಲಕಕ್ಕೆ ತಗಢಿನ ಮೇಲೆ ವಿವರಣೆ ಕೊಟ್ಟಿದೆ. ಪ್ರಭಾವಳಿಯ ಮೇಲೆ ಬೆಳ್ಳಿ ದಂಡ ವಿರುವ ಛತ್ರಿಯಿದ್ದು ಅದರ ಸುತ್ತಲೂ ಮುತ್ತು ರತ್ನವಿರುವ ತೋರಣವನ್ನು ಹಾಕಿದೆ. ಛತ್ರಿಯ ಮೇಲೆ ಬಂಗಾರದಿಂದ ಮಾಡಿದ ಪಂಚ ಕಲಶವನ್ನು ಹಾಕಿದೆ. ಪ್ರಭಾವಳಿಯ ಮೇಲಿನ ಬದಿಯಲ್ಲಿ ಸಿಂಹ ಲಲಾಟ , ಕುಳಿತುಕೊಳ್ಳುವ ಬದಿಯಲ್ಲಿ ಎರಡು ಸಿಂಹಗಳು, , ನಾಲ್ಕು ಸಿಂಹಗಳೇ ಸಿಂಹಾಸನದ ಪಾದಗಳಾಗಿರುವುದು. ಈ ಎಲ್ಲಾ ಸಿಂಹಗಳ ಕಣ್ಣುಗಳಿಗೆ ಪಚ್ಚೆ ಹರಳುಗಳನ್ನು ಕೂರಿಸಿದೆ. ಈ ಸಿಂಹಾಸನವನ್ನು ಶಿಲ್ಪಿ ಶ್ರೀ ಹಿರಿಯಣ್ಣಪ್ಪನವರು ಮತ್ತು ಏಳು ಜನ ಸಹ ಕಲಾವಿದರು ಜೊತೆ ಸೇರಿ ಕೆಲಸ ಮಾಡಿ, ಸುಮಾರು ೧೭ ವರ್ಷಗಳಲ್ಲಿ ಪೂರ್ಣಗೊಳಿಸಿದರು. ಅದನ್ನು ಸುಬ್ಬರಾಯರು ೧೯೩೪ ರಲ್ಲಿ , ಶ್ರೀರಾಮಚಂದ್ರಾಪುರದ ಮಠದ ಆಗಿನ ಗುರುಗಳಾದ, ಶ್ರೀ ರಾಮಚಂದ್ರ ಭಾರತಿ ಸ್ವಾಮಿಗಳಿಗೆ ಸಮರ್ಪಿಸಿದರು.

[]

ಸಿಂಹಾಸನದ ಪ್ರದರ್ಶನ :

[ಬದಲಾಯಿಸಿ]
  • ಈ ಅಪೂರ್ವ ಆನೆ ದಂತ ಸಿಂಹಾಸನವನ್ನು ಸೊರಬ ಹಾಗೂ ಸಾಗರದಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ನಂತರ ಬೊಂಬಯಿ ,ಪೂನಾ, ಅಹಮದಾಬಾದು, ತಮಿಳುನಾಡಿನ ಹರಿಪುರಗಳಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಣೇತಾಜಿ ಸುಭಾಸ ಚಂದ್ರ ಬೋಸರು ಕಾಂಗ್ರೆಸ್ ಅದ್ಯಕ್ಷರಾಗಿ ಆಗ ಹರಿಪುರದಲ್ಲಿ ಅವರನ್ನು ಆ ಸಮಯದಲ್ಲಿ ವಿಶೇಷ ಮೆರವಣಿಗೆ ಮಾಡುತ್ತಿದ್ದರು. ಅಧಿವೇಶನದ ನಂತರ , ಶ್ರೀಯುತರುಗಳಾದ, ಗಾಂಧೀಜೀ, ನೇತಾಜೀ ಬೋಸ್, ಜವಾರಲಾಲ್ ನೆಹರೂ, ವಲ್ಲಭಬಾಯಿ ಪಟೇಲ್, ಮತ್ತು ಇತರ ಗಣ್ಯರು ಈ ಸಿಂಹಾಸನವನ್ನು ನೋಡಿ ಇದೊಂದು ಜಗತ್ತಿನ ಅದ್ಭುತ ಕಲಾಕೃತಿ ಎಂದು ಮೆಚ್ಚಿದರು. ಮೈಸೂರು ಸರ್ಕಾರದ ಆಹ್ವಾನದ ಮೇಲೆ, ಸುಬ್ಬರಾಯರ ಮೇಲ್ವಿಚಾರಣೆಯಲ್ಲಿ ಈ ಸಿಂಹಾಸನವನ್ನು ಮೈಸೂರು ದಸರಾ ಪ್ರದರ್ಶನಕ್ಕಿಟ್ಟಿದ್ದರು (೧೯೪೮). ಒಂಭತ್ತು ದಿನಗಳ ನಂತರ ಮೈಸೂರ ಅರಮನೆಯ ರಾಜರ ಸಿಂಹಾಸನದ ಪಕ್ಕದಲ್ಲಿ ಇದನ್ನು ಇಡಲಾಯಿತು. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಸಿಂಹಾಸನವನ್ನು ಭೂತ ಕನ್ನಡಿಯಿಂದ ಪ್ರತಿಯೊಂದು ಚಿತ್ರ, Pಕೆತ್ತನೆ ಗಳನ್ನೂ ನೋಡಿ , ನಮ್ಮ ಸಿಂಹಾಸನಕ್ಕೆ ಬೆಲೆ ಕಟ್ಟಬಹುದು, ಆದರೆ ಈ ದಂತ ಸಿಂಹಾಸನಕ್ಕೆ, ಅದರ ಕಲೆಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರಂತೆ. ಈ ಮಾತನ್ನು ಮಹಾರಾಜರು ಹೇಳುವಾಗ ಸುಬ್ಬರಾಯರ ಮಗ ಹೆಚ್.ಎಸ್.ಶ್ರೀನಿವಾಸ ರಾವ್ ಅವರು ಅಲ್ಲಿಯೇ ಇದ್ದರಂತೆ. ಈ ಸಿಂಹಾಸನವನ್ನು ಕಳಚಿ ದಿಂಬು ಗಳಿರುವ ಮೂರುಪೆಟ್ಟಿಗೆ ಗಳಲ್ಲಿ ಇಡುವ ವ್ಯವಸ್ಥೆ ಇದೆ.

ರತ್ನ ಖಚಿತ ಕಿರೀಟದ ನವೀಕರಣ :

[ಬದಲಾಯಿಸಿ]
  • ಶ್ರೀರಾಮಚಂದ್ರಾಪುರದ ಮಠದ ಶ್ರೀ ಗುರುವರ್ಯರು ಪರಂಪರಾ ಪ್ರಾಪ್ತ ವಾಗಿದ್ದ ಶಿಥಿಲವಾಗಿದ್ದ ಕಿರೀಟವನ್ನು ಸರಿಪಡಿಸುವ ವಿಚಾರವನ್ನು ಶ್ರೀ ಸುಬ್ಬರಾಯರಿಗೆ ತಿಳಿಸಿದರು. ಆಗ ಸುಬ್ಬರಾಯರು ಆ ಕಿರೀಟವನ್ನು ಸೊರಬದ ಮನೆಗೆ ತಂದು ಅಲ್ಲಿಯ ಕಸೂತಿ ಕಲಾನಿಪುಣರಾದ ಕೆಲಸ ಗೊತ್ತಿದ್ದ ದರ್ಜಿಯವರಿಂದ ಸರಿಪಡಿಸಿ ಮಿನುಗುತ್ತಿರುವ ಕಿರೀಟವನ್ನು ಶ್ರೀ ಗುರುಗಳಿಗೆ ಒಪ್ಪಿಸಿದರು. ಗುರುಗಳು ಸಂತಸ ಭರಿತರಾಗಿ ಆಶೀರ್ವದಿಸಿಸಿದರು.

ಮಠದ ಉತ್ತರಾಧಿಕಾರಿಗಳ ನೇಮಕ :

[ಬದಲಾಯಿಸಿ]
  • ಕ್ರಿ. ಶ. ೧೯೪೫ ರಲ್ಲಿ ಸಾಗರ ತಾಲ್ಲೂಕು ಕರೂರು ಸೀಮೆಯ ಮಾಗಲು ಊರಿನ ವಟುವನ್ನು ಮಠದ ಪ್ರಮುಖ ಶಿಷ್ಯರ ಅಭಿಪ್ರಾಯದಂತೆ ಆರಿಸಿ ಆವರಿಗೆ ಶಾಸ್ತ್ರೋಕ್ತ ವಾಗಿ ಶ್ರೀ ಮದ್‌ರಾಮಚಂದ್ರ ಭಾರತೀ ಸ್ವಾಮಿಯವರಿಂದ ಸಂನ್ಯಾಸ ದೀಕ್ಷೆಯನ್ನು ಕೊಡಿಸಿ ಅವರಿಗೆ ಶ್ರೀ ಮದ್ರಾಘವೇಂದ್ರ ಭಾರತೀ ಸ್ವಾಮಿಗಳೆಂದು ನಾಮಕರಣ ಮಾಡಿಸಿದರು. ನಂತರ ಅವರನ್ನು ೧೯೪೬ ರಲ್ಲಿ ಕಾಶೀ ಕ್ಷೇತ್ರ ಕ್ಕೆ ಕರೆದುಕೊಂಡು ಹೋಗಿ ಮುಂದಿನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿಸಿದರು. ಅವರು ಕಾಶಿಯಿಂದ ಹಿಂತಿರುಗಿದನಂತರ ಗೋಕರ್ಣದಲ್ಲಿ ೧೯೪೯ ರ ಮಾಘ ಮಾಸದಲ್ಲಿ ಶ್ರೀ ಗುರುಗಳ ( ಶ್ರೀ ಮದ್‌ರಾಮಚಂದ್ರ ಭಾರತೀ ಸ್ವಾಮಿಯವರ) ಕಿರೀಟ ಧಾರಣೆ, ಸಿಂಹಾಸನಾರೂಢ ಕಾರ್ಯಕ್ರಮದ ಜವಾಬ್ದರಿಯನ್ನುವಹಿಸಿಕೊಂಡು ನಿರ್ವಹಿಸಿದರು. ಶ್ರೀ ಮದ್ರಾಘವೇಂದ್ರ ಭಾರತೀ ಸ್ವಾಮಿಜಿವರು ಸ್ವಲ್ಪ ಕಾಲನಂತರ ಕಾಶಿಯಿಂದ ಹಿಂತಿರುಗಿಬಂದು ಮಠದಲ್ಲಿ ವಾಸವಾಗಿದ್ದರು.

ಶ್ರೀ ಮಠದ ಪೂರ್ಣ ಹೊಣೆಗಾರಿಕೆ (೧೯೪೯) :

[ಬದಲಾಯಿಸಿ]

ಕೆಕ್ಕಾರು ರಘೂತ್ತಮ ಮಠದಲ್ಲಿದ್ದ ಶ್ರೀ ಮದ್‌ರಾಮಚಂದ್ರ ಭಾರತೀ ಸ್ವಾಮಿಯವರು ೧೯೪೯ (ಫಾಲ್ಗುಣ ಮಾಸ ೧೫) ರಲ್ಲಿ ಬ್ರಹ್ಮೈಕ್ಯರಾದರು. ಆಗ ಪಂಚರು ಆ ಮಠದಲ್ಲಿ ೧೭ ಪೆಟ್ಟಿಗೆಗಳಲ್ಲಿದ್ದ ವಸ್ತುಗಳನ್ನು ಪಟ್ಟಿಮಾಡಿ ಒಂದು ಪಟ್ಟಿಯನ್ನು ಗುರುಗಳಿಗೂ ಅದರ ನಕಲನ್ನು ಸುಬ್ಬರಾಯರಿಗೂ ಕೊಟ್ಟು ಅವೆಲ್ಲವನ್ನೂ ತೀರ್ಥ ಹಳ್ಳಿ ಮಠಕ್ಕೆ ಸಾಗಿಸಿ ಭದ್ರ ಪಡಿಸುವ ಹೊಣೆಯನ್ನು ಸುಬ್ಬರಾಯರಿಗೆ ವಹಿಸಿದರು. ಅಂತೆಯೇ ಅವನ್ನು ಸುಬ್ಬರಾಯರು ತೀರ್ಥಹಳ್ಳಿ ಮಠದಲ್ಲಿ ತಂದಿಟ್ಟರು.ಕಾಶಿಯಿಂದ ಬಂದಿದ್ದ, ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳೂ ತೀರ್ಥಹಳ್ಲಿ ಮಠಕ್ಕೆ ಬಂದರು . ಮಠದ ವ್ಯವಹಾರ ನೋಡಿಕೊಳ್ಳಲು ಒಂದು ಸಮಿತಿ ರಚಿಸಿ, ಸುಬ್ಬರಾಯರನ್ನು ಅದರ ಅದ್ಯಕ್ಷರನ್ನಾಗಿ ನೇಮಿಸಿದರು. ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳು ಪುನಃ ಕಾಶೀ ಕ್ಷೇತ್ರಕ್ಕೆ ಹೋಗುವವರಿದ್ದರು ; ಅದಕ್ಕಾಗಿ ಸುಬ್ಬರಾಯರನ್ನು ಮಠದ ಸರ್ವಾಧಿಕಾರಿಯಾಗಿ (ಪವರ್ ಆಫ್ ಅಟಾರ್ನಿಯ ಮೂಲಕ) ನೇಮಿಸಿದರು.

  • ಶಿವಮೊಗ್ಗ ಜಿಲ್ಲೆ, ಕೊಡಗು ಜಿಲ್ಲೆ, ದಕ್ಷಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿರವ ಎಲ್ಲಾ ಮಠ, ಉಪಮಠಗಳ, ಅವುಗಳ ಜಮೀನು ವ್ಯವಹಾರ, ಆದಾಯವೆಚ್ಚ ಇತ್ಯಾದಿಗಳ ಸಂಪೂರ್ಣಹೊಣೆಯನ್ನು ವಹಿಸಿದರು, ಅವನ್ನು ಅವರು ಸರಿಯಾಗಿ ನಿರ್ವಹಿಸಿ ಲೆಕ್ಕ ಪತ್ರಗಳನ್ನಿಟ್ಟು ಗುರುಗಳಿಗೆ ಒಪ್ಪಿಸುತ್ತಿದ್ದರು. ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳು ಹೆಚ್ಚನ ವಿದ್ಯಾಬ್ಯಾಸಕ್ಕಾಗಿ ದಿ.೨೯-೬-೧೯೪೯ ಕಾಶಿಗೆ ಹೋಗಿ, ವಿದ್ಯಾಭ್ಯಾಸ ಪೂರೈಸಿ ೧೯೫೨ರಲ್ಲಿ ತೀರ್ಥಹಳ್ಲಿ ಮಠಕ್ಕೆ ಬಂದರು. ಸಮಾಜದ ಏಳಿಗೆಗಾಗಿ ತೀರ್ಥಹಳ್ಳಿ ಯಲ್ಲಿ ಹವ್ಯಕ ಮಹಾಧಿವೇಶನವನ್ನು ೧೯೫೫ರಲ್ಲಿ ಏರ್ಪಡಿಸಿದರು ಅದಕ್ಕೆ ಸುಬ್ಬರಾಯರು ಅದ್ಯಕ್ಷರಾಗಿದ್ದು , ಸಮಾಜದ ಏಳಿಗೆಗಾಗಿ ಎಲ್ಲಾ ತಾಲ್ಲೂಕುಗಳಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಲು ಕರೆಕೊಟ್ಟರು. ಈ ಅಧಿವೇಶನದಲ್ಲಿ ೧೦೧ ಸದಸ್ಯರ ಸಮಿತಿಯುಳ್ಳ ಹವ್ಯಕ ಮಹಾಮಂಡಳವನ್ನು ಸ್ಥಾಪಿಸಿದರು. ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳು ಅದರ ಧರ್ಮಾಚಾರ್ಯರಾಗಿ ಇರುವಂತೆ ತೀರ್ಮಾನವಾಯಿತು.
  • ಸುಬ್ಬರಾಯರು ಶ್ರೀ ಗುರುಗಳ ಆದೇಶದಂತೆ ಮಠದ ಇತಿಹಾಸವನ್ನು ಶ್ರೀ ಗ.ಸು. ಪಾಟೀಲರಿಂದ ಬರೆಯಿಸಿದರು. ಹವ್ಯಕ ಸಮಾಜ ಮತ್ತು ಶ್ರೀ ಗುರುಮಠದ ಇತಿಹಾಸ, ಎಂಬ ಪುಸ್ತಕವನ್ನು ಸಮಿತಿಯ ಅಧ್ಯಕ್ಷರಾದ ಸುಬ್ಬರಾಯರ ಹೆಸರಿನಲ್ಲಿ ಪ್ರಕಟಿಸಿದರು.
  • ಶ್ರೀ ಸುಬ್ಬರಾಯರು ೧೯-೭-೧೯೮೬ರ ರಂದು ದೈವಾಧೀನರಾದರು. ಅವರು ತಮ್ಮ ೮೬ ವರ್ಷದ ಜೀವನದಲ್ಲಿ ಒಂದು ಕ್ಷಣವನ್ನೂ ವ್ಯರ್ಥಮಾಡದೆ ಸಮಾಜ ಸೇವೆ, ಧಾರ್ಮಿಕ ಸೇವೆ ಮಾಡಿ, ಬದುಕನ್ನು ಸಾರ್ಥಕಮಾಡಿಕೊಂಡು ಇತರರಿಗೆ ಮಾರ್ಗದರ್ಶಕರಾಗಿದ್ದಾರೆ.

[]

ಆಧಾರ :

[ಬದಲಾಯಿಸಿ]
  • ಅಜಾತ ಶತ್ರು ಹೊಸಬಾಳೆ ಸುಬ್ಬರಾಯರು (ಜೀವನ ಚರಿತ್ರೆ )  : ಲೇಖಕರು ಹೆಚ್.ಎಸ್.ಶ್ರೀನಿವಾಸ ರಾವ್ ಹೊಸಬಾಳೆ , ಸೊರಬ ತಾಲ್ಲೂಕು.

ಉಲ್ಲೇಖ

[ಬದಲಾಯಿಸಿ]
  1. "ವಿಶ್ವದ ಏಕೈಕ ಆನೆಯ ದಂತ (ಹಸ್ತಿದಂತ) ಸಿಂಹಾಸನ ಇರುವುದೆಲ್ಲಿ ಗೊತ್ತಾ?Published: 16 Apr 2018 02:00". Archived from the original on 6 ಜೂನ್ 2019. Retrieved 6 ಜೂನ್ 2019. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. [ಅಜಾತ ಶತ್ರು ಹೊಸಬಾಳೆ ಸುಬ್ಬರಾಯರು (ಜೀವನ ಚರಿತ್ರೆ )  : ಲೇಖಕರು ಹೆಚ್.ಎಸ್.ಶ್ರೀನಿವಾಸ ರಾವ್ ಹೊಸಬಾಳೆ , ಸೊರಬ ತಾಲ್ಲೂಕು.]