ಹೊಳಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕತ್ತರಿಸಿದ ವಜ್ರಗಳು

ಹೊಳಪು ಎಂದರೆ ಬೆಳಕು ಒಂದು ಸ್ಫಟಿಕ, ಕಲ್ಲು, ಅಥವಾ ಖನಿಜದ ಮೇಲ್ಮೈಯೊಂದಿಗೆ ಪರಸ್ಪರವಾಗಿ ಪ್ರತಿಕ್ರಿಯಿಸುವ ರೀತಿ. ಹೊಳಪು ಶಬ್ದ ಸಾಮಾನ್ಯವಾಗಿ ಪ್ರಭೆ, ಕಾಂತಿ, ಅಥವಾ ಪ್ರಕಾಶವನ್ನು ಸೂಚಿಸುತ್ತದೆ.

ವಜ್ರದಂಥ ಖನಿಜಗಳು ಅತ್ಯುತ್ಕೃಷ್ಟ ಹೊಳಪನ್ನು ಹೊಂದಿರುತ್ತವೆ, ಎಲ್ಲಕ್ಕಿಂತ ವಿಶೇಷವಾಗಿ ವಜ್ರದಲ್ಲಿ ಕಾಣಿಸುತ್ತದೆ.[೧] ಅಂತಹ ಖನಿಜಗಳು ಪಾರದರ್ಶಕ ಅಥವಾ ಅಪಾರದರ್ಶಕವಾಗಿರುತ್ತವೆ ಮತ್ತು ಹೆಚ್ಚಿನ ವಕ್ರೀಕರಣ ಸೂಚಿಯನ್ನು (೧.೯ ಅಥವಾ ಅಧಿಕ) ಹೊಂದಿರುತ್ತವೆ. ಸಾಚಾ ವಜ್ರದಂಥ ಹೊಳಪನ್ನು ಹೊಂದಿರುವ ಖನಿಜಗಳು ಸಾಮಾನ್ಯವಾಗಿಲ್ಲ, ಉದಾಹರಣೆಗಳೆಂದರೆ ಸೆರಸೈಟ್ ಮತ್ತು ಕ್ಯೂಬಿಕ್ ಜ಼ಿರ್ಕೋನಿಯಾ. ಮಬ್ಬು (ಅಥವಾ ಒರಟಾದ) ಖನಿಜಗಳು ಸ್ವಲ್ಪವೇ ಹೊಳಪನ್ನು ಪ್ರದರ್ಶಿಸುತ್ತವೆ ಅಥವಾ ಏನೂ ಹೊಳಪನ್ನು ಪ್ರದರ್ಶಿಸುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಎಲ್ಲ ದಿಕ್ಕುಗಳಲ್ಲಿ ಬೆಳಕನ್ನು ಚದುರಿಸುವ ಒರಟಾದ ಕಣಗಳು ಮತ್ತು ಇವು ಬಹುಮಟ್ಟಿಗೆ ಒಂದು ಲ್ಯಾಂಬರ್ಷಿಯನ್ ಪ್ರತಿಫಲಕವನ್ನು ಹೋಲುತ್ತವೆ. ಒಂದು ಉದಾಹರಣೆಯೆಂದರೆ ಕೇಯೊಲನೈಟ್. ಕೆಲವೊಮ್ಮೆ ಮಬ್ಬು ಖನಿಜಗಳು ಮತ್ತು ಮಣ್ಣಿನಂಥ ಖನಿಜಗಳ ನಡುವೆ ವ್ಯತ್ಯಾಸ ಮಾಡಲಾಗುತ್ತದೆ. ಮಣ್ಣಿನಂಥ ಖನಿಜಗಳು ಹೆಚ್ಚು ಒರಟಾಗಿರುತ್ತವೆ ಮತ್ತು ಇನ್ನೂ ಕಡಿಮೆ ಹೊಳಪನ್ನು ಹೊಂದಿರುತ್ತವೆ.

ಜಿಡ್ಡಿನಂಥ ಖನಿಜಗಳು ಮೇದಸ್ಸು ಅಥವಾ ಜಿಡ್ಡನ್ನು ಹೋಲುತ್ತವೆ. ಜಿಡ್ಡಿನಂತಹ ಹೊಳಪು ಹಲವುವೇಳೆ ಬಹಳ ಸಮೃದ್ಧವಾಗಿ ಸೂಕ್ಷ್ಮದರ್ಶಕ ಅಂತರ್ವೇಶನಗಳನ್ನು ಹೊಂದಿರುವ ಖನಿಜಗಳಲ್ಲಿ ಇರುತ್ತದೆ. ಉದಾಹರಣೆಗಳಲ್ಲಿ ಕ್ಷೀರಸ್ಫಟಿಕ ಮತ್ತು ಕಾರ್ಡಿಯರೀಟ್ ಸೇರಿವೆ. ಜಿಡ್ಡಿನಂಥ ಹೊಳಪಿರುವ ಅನೇಕ ಖನಿಜಗಳು ಮುಟ್ಟಲು ಕೂಡ ಜಿಡ್ಡುಜಿಡ್ಡಾಗಿ ಅನಿಸುತ್ತವೆ. ಲೋಹೀಯ (ಅಥವಾ ಥಳಥಳಿಸುವ) ಖನಿಜಗಳು ನಯಗೊಳಿಸಿದ ಲೋಹದ ಹೊಳಪನ್ನು ಹೊಂದಿರುತ್ತವೆ, ಮತ್ತು ಉತ್ಕೃಷ್ಟ ಮೇಲ್ಮೈಗಳೊಂದಿಗೆ ಪ್ರತಿಫಲಕ ಮೇಲ್ಮೈಯಾಗಿ ಕೆಲಸ ಮಾಡುತ್ತವೆ. ಉದಾಹರಣೆಗಳಲ್ಲಿ ಗಲೀನಾ, ಪೈರೈಟ್ ಮತ್ತು ಮ್ಯಾಗ್ನಟೈಟ್ ಸೇರಿವೆ. ಮುತ್ತಿನಂಥ ಖನಿಜಗಳು ತೆಳುವಾದ ಪಾರದರ್ಶಕ ಸಮತಲೀಯ ಪದರಗಳನ್ನು ಹೊಂದಿರುತ್ತವೆ. ಈ ಪದರಗಳಿಂದ ಪ್ರತಿಫಲಿತವಾಗುವ ಬೆಳಕು ಇವುಗಳಿಗೆ ಮುತ್ತುಗಳನ್ನು ನೆನಪಿಗೆ ತರುವ ಹೊಳಪು ತರುತ್ತದೆ. ಅಂತಹ ಖನಿಜಗಳು ಪರಿಪೂರ್ಣ ಸೀಳನ್ನು ಹೊಂದಿರುತ್ತವೆ. ಉದಾಹರಣೆಗಳಲ್ಲಿ ಶ್ವೇತ ಅಭ್ರಕ ಮತ್ತು ಸ್ಟಿಲ್‍ಬೈಟ್ ಸೇರಿವೆ. ರಾಳೀಯ ಖನಿಜಗಳು ರಾಳ, ಚೂಯಿಂಗ್ ಗಂ ಅಥವಾ (ನಯವಾದ ಮೇಲ್ಮೈಯ) ಪ್ಲಾಸ್ಟಿಕ್‍ನ ನೋಟವನ್ನು ಹೊಂದಿರುತ್ತವೆ. ಒಂದು ಪ್ರಧಾನ ಉದಾಹರಣೆಯೆಂದರೆ ಪಳೆಯುಳಿಕೆಯಾಗಿಸಿದ ರಾಳದ ರೂಪವಾದ ಅಂಬರು.

ಉಲ್ಲೇಖಗಳು[ಬದಲಾಯಿಸಿ]

  1. GIA Gem Reference Guide. Gemological Institute of America. 1995. ISBN 0-87311-019-6.
"https://kn.wikipedia.org/w/index.php?title=ಹೊಳಪು&oldid=862217" ಇಂದ ಪಡೆಯಲ್ಪಟ್ಟಿದೆ