ವಿಷಯಕ್ಕೆ ಹೋಗು

ಹೊರೇಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊರೇಸ್
ಹೊರೇಸ್,(ಜಿಯಾಕೊಮೊ ಡಿ ಚಿರಿಕೊ ರಚಿಸಿದ ಚಿತ್ರ
  • ಹೆಸರು= ಹೊರೇಸ್, ಕ್ವಿಂಟಸ್ ಹೊರಾಟಿಯಸ್ ಫ್ಲಕಸ್
  • ಹುಟ್ಟದ ದಿನಾಂಕ: ಕ್ರಿ.ಪೂ 27 ನವೆಂಬರ್ 8
  • ಹುಟ್ಟಿದ ಊರು = ಇಟಲಿ, ರೋಮನ್ ಗಣರಾಜ್ಯ
  • ಭಾಷೆ = ಲ್ಯಾಟಿನ್
  • ಮರಣ = ವಯಸ್ಸು 56 ರಲ್ಲಿ ಮರಣ
  • ಮರಣ ಸ್ಥಳ =ರೋಮ್
  • ಅಂತಿಮ ವಿಶ್ರಾಂತಿಧಾಮ = ರೋಮ್
  • ಪ್ರಸಿದ್ಧಿ =.ಭಾವಗೀತೆ
  • ಉದ್ಯೋಗ = ಸೈನಿಕ, ಲೇಖಕ; ಕಾವಲುಗಾರ, ಕವಿ, ಸೆನೆಟರ್
  • ಕಾವ್ಯದ ಹೆಸರು = "ಕವನ ಕಲೆ" ಓಡೆಸ್
.
ಹೊರೇಸ್ ಕ್ರಿ.ಪೂ. 65-8. ಪ್ರಸಿದ್ಧ ರೋಮನ್ ಕಾವ್ಯ ಮೀಮಾಂಸಕ, ಕವಿ ಹಾಗೂ ವಿಮರ್ಶಕ. ಕ್ಷಿಂತುಸ್ ಹೊರಾಷಿಯುಸ್ ಫ್ಲಕುಸ್ ಎಂಬುದು ಈತನ ಪೂರ್ಣ ಹೆಸರು. ಅಪುಲಿಯ ಮತ್ತು ಲುಕನಿಯದ ಸರಹದ್ದಿನಲ್ಲಿರುವ ವೆನುಸಿಯದಲ್ಲಿ ಕ್ರಿ.ಪೂ.65 ಡಿಸೆಂಬರ್ 8ರಂದು ಜನಿಸಿದ. ಈತನ ತಂದೆ ದಾಸ್ಯವರ್ಗದಿಂದ ಬಿಡುಗಡೆ ಹೊಂದಿ ತೆರಿಗೆ ವಸೂಲಿಯ ವೃತ್ತಿಯನ್ನು ಹಿಡಿದಿದ್ದ. ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ರೋಮಿಗೆ ಬಂದು ನೆಲಸಿದ.

ವಿದ್ಯಾಭ್ಯಾಸ

[ಬದಲಾಯಿಸಿ]
  • ಅರ್ಬಿಲಿಯಸ್ ಎಂಬವನ ಬಳಿ ಹೊರೇಸ್ ವಿದ್ಯಾಭ್ಯಾಸ ಆರಂಭಿಸಿ ಅನಂತರ ಅಥೆನ್ಸಿಗೆ ಹೋಗಿ (ಕ್ರಿ.ಪೂ.45) ತತ್ತ್ವಶಾಸ್ತ್ರದ ಅಧ್ಯಯನ ಕೈಗೊಂಡ. ಜೂಲಿಯಸ್ ಸೀಸರನ ಕೊಲೆಯ ಅನಂತರ ಬ್ರೂಟಸ್ ಅಥೆನ್ಸಿಗೆ ಭೇಟಿ ನೀಡಿದಾಗ ಇತರ ವಿದ್ಯಾರ್ಥಿಗಳಂತೆ ಹೊರೇಸನೂ ಅವನ ಪಕ್ಷ ಸೇರಿ ಕ್ರಿ.ಪೂ.42ರಲ್ಲಿ ನಡೆದ ಒಂದು ಕದನದಲ್ಲಿ ಸೈನ್ಯದ ಒಂದು ತಂಡದ ನಾಯಕನಾಗಿ ಹೋರಾಡಿದ. ಆ ಕದನದಲ್ಲಿ ಸೋಲುಂಟಾಗಿ ಇಟಲಿಗೆ ನಡೆದ; ಜೀವನೋಪಾಯಕ್ಕಾಗಿ ಗುಮಾಸ್ತೆಯ ಕೆಲಸವೊಂದನ್ನು ಹಿಡಿದ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕೃಷಿಯನ್ನು ಇವನು ಆರಂಭಿಸಿದ.

ಹೊರೇಸನ ಕಾವ್ಯ

[ಬದಲಾಯಿಸಿ]
  • ವಿಡಂಬನೆಗಳು ಹಾಗೂ ಅಯಾಂಬಿಕ್ ಕವನಗಳು ಇವನ ಕಾವ್ಯಜೀವನದ ಮೊದಲ ಹೆಜ್ಜೆಗಳು. ಪ್ರಖ್ಯಾತ ಕವಿಗಳೆನಿಸಿದ್ದ ವರ್ಜಿಲ್ ಹಾಗೂ ಏನಿಯಸ್‍ರ ಸ್ನೇಹದಿಂದ ಇವನು ಅಗಸ್ಟಸ್ ಚಕ್ರವರ್ತಿಯ ಆಪ್ತಮಂತ್ರಾಲೋಚಕನಾಗಿದ್ದ. ಮೆಕೆನಸ್‍ನನ್ನು ಪರಿಚಯಿಸಿಕೊಂಡು (ಕ್ರಿ.ಪೂ. 38). ಅತ್ಯಂತ ಆಪ್ತನಾ ಇವನು ಕ್ರಿ.ಪೂ. 35ರಲ್ಲಿ ತನ್ನ ವಿಡಂಬನೆಗಳ ಮೊದಲ ಸಂಪುಟವನ್ನು ಅವನಿಗೆ ಅರ್ಪಿಸಿದ್ದಾನೆ. ಕ್ರಿ.ಪೂ. 33ರಲ್ಲಿ ಮೆಕೆನಸ್‍ನಿಂದ ಇವನಿಗೆ ಟೈಬರಿನ ಈಶಾನ್ಯಕ್ಕೆ ಇರುವ ಸಾಬೈನ್ ಪ್ರದೇಶದಲ್ಲಿ ಒಂದು ಜಹಗೀರು ಬಳುವಳಿಯಾಗಿ ದೊರೆಯಿತು. ಇವನು ತನ್ನ ಇಡೀ ಬದುಕನ್ನು ಸಾಹಿತ್ಯ ರಚನೆಗಳಿಗೆ ಮೀಸಲಿಟ್ಟು ಅಲ್ಲಿಯೇ ನೆಲಸಿದ.
  • ಕ್ರಿ.ಪೂ. 30-29ರ ಅವಧಿಯಲ್ಲಿ ಇವನು ಹಲವಾರು ಗೀತೆಗಳನ್ನೂ ವಿಡಂಬನೆಯ ಎರಡನೆಯ ಸಂಪುಟವನ್ನೂ ಪ್ರಕಟಿಸಿದ. ಅದೇ ಕಾಲದಲ್ಲಿ ಅಯಾಂಬಿಕ್ ಪದ್ಯ ಸಂಗ್ರಹವೊಂದನ್ನು ಬರೆದ. ಗ್ರೀಕ್ ಕವಿಗಳ ಮಾದರಿಯಲ್ಲಿ ಕಾವ್ಯ ಸಂಪ್ರದಾಯವನ್ನು ರೋಮಿನಲ್ಲಿ ಸ್ಥಾಪಿಸಿದವರಲ್ಲಿ ಇವನೇ ಮೊದಲಿಗ. ಸಂವಾದ ಶೈಲಿಯಲ್ಲಿ ಹೊಸ ಕಾವ್ಯಪ್ರಕಾರವನ್ನು ಹುಟ್ಟುಹಾಕಿದ. ಇಂಥ ಪದ್ಯಗಳ ಮೊದಲ ಸಂಕಲನ ಕ್ರಿ.ಪೂ. 29-19ರಲ್ಲಿ ಪ್ರಕಟವಾಯಿತು. ಇವನ ಪತ್ರಕಾವ್ಯಗಳಲ್ಲಿ ಪೀಸೋಲಿಗೆ ಬರೆದ ಪತ್ರ ಬಹಳ ಪ್ರಸಿದ್ಧವಾದದ್ದು (ಕ್ರಿ.ಪೂ.10-8). ಇದು ಕಾವ್ಯಕಲೆ (ಆರ್ಸ್ ಪೊಯೆಟಿಕಾ) ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಈ ಹೆಸರನ್ನು ನೀಡಿದವನು ರೋಮ್‍ನ ಪ್ರಖ್ಯಾತ ವಿಮರ್ಶಕ ಕ್ವಿಂಟಿಲಿಯನ್ (35-100). ಹೊರೇಸ್ ಇದನ್ನು ಪೀಸೋವಿಗೆ ಪತ್ರ ಎಂದೇ ಕರೆದಿದ್ದ. ಇದು ಅರಿಸ್ಟಾಟಲನ ಕಾವ್ಯಮೀಮಾಂಸೆಯನ್ನು ಹೋಲುತ್ತದೆ. ಸಾಹಿತ್ಯ ಅನುಕರಣ ಮಾತ್ರವಲ್ಲ ಸೃಷ್ಟಿಯೂ ಹೌದು; ವಾಚಕನನ್ನು ಹರ್ಷಚಿತ್ತನನ್ನಾಗಿಯೂ ಸದ್ಗುಣಿಯನ್ನಾಗಿಯೂ ಮಾಡುವ ದ್ವಿಮುಖ ಕಾರ್ಯ ಸಾಹಿತ್ಯದ್ದು; ಕಾವ್ಯ ಉದಾತ್ತವಾಗಿರಬೇಕು; ಕಾವ್ಯಸೃಷ್ಟಿಯಲ್ಲಿ ಸ್ಫೂರ್ತಿ, ಅಭ್ಯಾಸ ಎರಡೂ ಮುಖ್ಯ; ಪರಂಪರೆಗೆ ಕಾವ್ಯ ಬದ್ಧವಾಗಿರಬೇಕು ಇತ್ಯಾದಿಯಾಗಿ ಕಾವ್ಯಕಲಾ ಮೀಮಾಂಸೆಯ ಬಗೆಗೆ ಬಹಳಷ್ಟು ಜಿಜ್ಞಾಸೆ ನಡೆಸಿದ್ದಾನೆ.

ಹೊರೇಸನಿಂದ ಸ್ಫೂರ್ತಿ

[ಬದಲಾಯಿಸಿ]
  • ಇವನ ವಿಡಂಬನೆಗಳಲ್ಲಿಯೂ ಕಾವ್ಯಮೀಮಾಂಸೆ ಮತ್ತು ವಿಮರ್ಶೆಯ ತಾತ್ತ್ವಿಕ ವಿಚಾರಗಳನ್ನು ಕಾಣಬಹುದು. ಅನೇಕ ಪ್ರಪಂಚ ಪ್ರಸಿದ್ಧ ಇಂಗ್ಲಿಷ್ ವಿಡಂಬನಕಾರರು ಇವನಿಂದ ಸ್ಫೂರ್ತಿ ಪಡೆದಿದ್ದಾರೆ. ಡ್ರೈಡನ್, ಅಗಸ್ಟಸ್ ಮೊದಲಾದವರ ಪ್ರಗಾಥ ಹಾಗೂ ವಿಮರ್ಶೆಯ ವಿಧಾನಗಳ ಮೇಲೂ ಇವನ ಪ್ರಭಾವವನ್ನು ಕಾಣಬಹುದು. ಒಂದರ್ಥದಲ್ಲಿ ಇವನ ಕಾವ್ಯಕಲೆ ಪಾಶ್ಚಾತ್ಯರ ಔಚಿತ್ಯ ವಿಚಾರ ಚರ್ಚೆಯಾಗಿದೆ. 17-18ನೆಯ ಶತಮಾನಗಳ ಸಂಪ್ರದಾಯವಾದಿಗಳು ಅರಿಸ್ಟಾಟಲ್ ಮತ್ತು ಹೊರೇಸ್‍ನ ಗ್ರಂಥಗಳನ್ನು ಪ್ರಸ್ಥಾನ ಗ್ರಂಥಗಳೆಂದು ಗೌರವಿಸಿದರು. ಆಂಗ್ಲ ಸಂಸ್ಕøತಿಯ ಒಂದು ಬಹುಮುಖ್ಯ ಭಾಗವಾಗಿ ಇವನ ಕಾವ್ಯವನ್ನು ಪ್ರತಿಯೊಂದು ಶಾಲೆಯಲ್ಲಿಯೂ ಬೋಧಿಸಿ, ಕಲಿಸಲಾಗುತ್ತಿತ್ತು. ಇವನು ಕಾವ್ಯದ ಎರಡು ಪ್ರಧಾನ ಕಾರ್ಯಗಳೆಂದು ಗುರುತಿಸಿದ ಮನರಂಜನೆ ಮತ್ತು ನೀತಿಬೋಧೆ ಎಂಬ ತತ್ತ್ವಗಳು ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ತನ್ನದೇ ಮಹತ್ತ್ವವನ್ನು ಸ್ಥಾಪಿಸಿಕೊಂಡಿದೆ.[]
ಕ್ವಿಂಟಸ್ ಹೊರಾಟಿಯಸ್ ಫ್ಲಕಸ್

ಉಲ್ಲೇಖ

[ಬದಲಾಯಿಸಿ]
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೊರೇಸ್
"https://kn.wikipedia.org/w/index.php?title=ಹೊರೇಸ್&oldid=1163902" ಇಂದ ಪಡೆಯಲ್ಪಟ್ಟಿದೆ