ವಿಷಯಕ್ಕೆ ಹೋಗು

ಹುಲ್ಲೂರು ಶ್ರೀನಿವಾಸ ಜೋಯಿಸರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಲ್ಲೂರು ಶ್ರೀನಿವಾಸ ಜೋಯಿಸರು
ಜನನಮಾರ್ಚ್ ೨೯, ೧೮೯೨
ಚಿತ್ರದುರ್ಗ ಜಿಲ್ಲೆಯ ಹುಲ್ಲೂರು
ಮರಣನವೆಂಬರ್ ೮, ೧೯೫೬
ವೃತ್ತಿವಕೀಲರು, ಸಂಶೋಧಕರು, ಬರಹಗಾರರು
ವಿಷಯಕನ್ನಡ ಸಾಹಿತ್ಯ

ಹುಲ್ಲೂರು ಶ್ರೀನಿವಾಸ ಜೋಯಿಸರು (ಮಾರ್ಚ್ ೨೯. ೧೮೯೨) ಕನ್ನಡ ನಾಡಿನ ಪ್ರಸಿದ್ಧ ಸಂಶೋಧಕರಾಗಿ, ಬರಹಗಾರರಾಗಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರರಲ್ಲಿ ಒಬ್ಬರೆನಿಸಿದ್ದಾರೆ.

ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಪುರೋಹಿತ ಮನೆತನಕ್ಕೆ ಸೇರಿದ ಹುಲ್ಲೂರು ಶ್ರೀನಿವಾಸ ಜೋಯಿಸರು ಮಾರ್ಚ್ ೨೯, ೧೮೯೨ರ ವರ್ಷದಲ್ಲಿ ಜನಿಸಿದರು. ಅವರ ಕುಟುಂಬದ ಹಿರಿಯರು ಸುಮಾರು ಮೂರು ನೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ಅಂಬಳೆ ಗ್ರಾಮದಿಂದ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿಗೆ ವಲಸೆ ಬಂದವರು. ತಂದೆ ಪಾಂಡುರಂಗ ಜೋಯಿಸರು ಮತ್ತು ತಾಯಿ ಪಾರ್ವತಮ್ಮನವರು. ಶ್ರೀನಿವಾಸ ಜೋಯಿಸರು ಪ್ರಾಥಮಿಕ ಶಿಕ್ಷಣ ಪಡೆದುದು ಚಿತ್ರದುರ್ಗದಲ್ಲಿ. ಮೆಟ್ರಿಕ್ ಪಾಸು ಮಾಡಿದ ನಂತರ ಕೆಲಕಾಲ ಅವರು ನೌಕರಿಯಲ್ಲಿದ್ದರು. ನಂತರದಲ್ಲಿ ಕಾನೂನು ಪದವಿ ಪಡೆದ ಜೋಯಿಸರು ವಕೀಲಿ ವೃತ್ತಿಯಲ್ಲಿ ತೊಡಗಿಕೊಂಡರು[].

ಮಹತ್ವದ ಸಂಶೋಧನೆ

[ಬದಲಾಯಿಸಿ]

ಶ್ರೀನಿವಾಸ ಜೋಯಿಸರು ವೃತ್ತಿಯಲ್ಲಿ ವಕೀಲರಾಗಿದ್ದರೂ ಅಧ್ಯಯನ ಶೀಲರಾಗಿದ್ದು ಇತಿಹಾಸ ಸಂಶೋಧನೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಅವರು, ಕರ್ನಾಟಕದ ಇತಿಹಾಸದ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ತಮ್ಮ ಜಿಲ್ಲೆಯಾದ ಚಿತ್ರದುರ್ಗದ ಇತಿಹಾಸದ ಬಗೆಗಂತೂ ಅವರ ಬರಹಗಳು ಮಹತ್ವಪೂರ್ಣವೆನಿಸಿವೆ. ಐತಿಹಾಸಿಕ ಸ್ಥಳಗಳು, ವ್ಯಕ್ತಿಗಳು, ಘಟನೆಗೆ ಸಂಬಂಸಿದಂತೆ, ಭಾಷೆ, ಧರ್ಮ, ಸಂಸ್ಕೃತಿ, ಶೌರ್ಯ, ಸಾತ್ವಿಕತೆ, ಆದರ್ಶ, ಉದಾರತೆ ಮೊದಲಾದ ಗುಣಗಳನ್ನು ಚಿತ್ರಿಸುವ ಉದ್ದೇಶದಿಂದ ಅವರು ಇಪ್ಪತ್ತೈದು ವರ್ಷಗಳ ಕಾಲ ಸುಮಾರು ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದು ಕನ್ನಡಿಗರ ಕಣ್ಣು ತೆರೆಸಿದ್ದಾರೆ.

೨000 ವರ್ಷದಷ್ಟು ಸುದೀರ್ಘ ಇತಿಹಾಸವನ್ನು ದಾಖಲಿಸಿರುವ ಹುಲ್ಲೂರು ಶ್ರೀನಿವಾಸ ಜೋಯಿಸರು, ತಾವೇ ಸ್ಥಾಪಿಸಿದ ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯದ ಗೌರವ ಕ್ಯೂರೇಟರಾಗಿಯೂ ಸೇವೆ ಸಲ್ಲಿಸಿದ್ದರು.

ಚಾರಿತ್ರಿಕ ಮಹತ್ವವುಳ್ಳ ಕೃತಿಗಳು

[ಬದಲಾಯಿಸಿ]

ಚಿತ್ರದುರ್ಗ ಇತಿಹಾಸದ ಬಗ್ಗೆ ಅಧ್ಯಯನ ಕೈಗೊಳ್ಳಲು ಅವರಿಗೆ ಸ್ಪೂರ್ತಿ ಚಿತ್ರದುರ್ಗದವರೇ ಆದ ಡಾ||ಪಿ.ಕೃಷ್ಣರಾವ್ ಎಂಬುವವರು. ವಿದ್ಯಾರ್ಥಿಯಾಗಿದ್ದಾಗಲೇ “ಪ್ರಬುದ್ಧ ಕರ್ನಾಟಕ”ದಲ್ಲಿ (1901) ಪ್ರಕಟಿಸಿದ್ದ “ಚಿತ್ರದುರ್ಗದ ಬೆಟ್ಟ” ಮತ್ತು 1921ರಲ್ಲಿ ಪ್ರಕಟಿಸಿದ್ದ “ನಾಯಕ ಸಾಮ್ರಾಜ್ಯ” ಲೇಖನಗಳು ಬರೆದಿದ್ದರು. ಮುಂದೆ ಸುಮಾರು ಇನ್ನೂರು ಲೇಖನಗಳನ್ನು ಹತ್ತು ಪುಸ್ತಕಗಳನ್ನು ಬರೆದರು. ಇವುಗಳಲ್ಲಿ “ಗಂಡುಗಲಿ ಕುಮಾರರಾಮ”, “ಕನ್ನಡ ಕಲಿಸಿರುಮನ ಚರಿತೆ (ಸಿರುಮ ನೃಪಾಲ)”, “ಮಯೂರಶರ್ಮ ಮತ್ತು ಇತರ ಕಥೆಗಳು”, “ನಾಡಕತೆಗಳು”, “ಹುಳಿಯಾರು ಮಾರಭೂಪಾಲ”, “ಸಳ”, “ಕಪೋತವಾಕ್ಯ” ಇವು ಜನಪ್ರಿಯ ಪುಸ್ತಕಗಳಾಗಿವೆ. “ಚಿತ್ರದುರ್ಗದ ಬಖೈರು” ಎಂಬುದು ಅವರು ಸಂಪಾದಿಸಿರುವ, ಚಿತ್ರದುರ್ಗದ ಕೊನೆಯ ಪಾಳೆಯಗಾರ ಮದಕರಿನಾಯಕನ ಇತಿಹಾಸ ಕುರಿತು ಒಂದು ಪ್ರಮುಖ ಆಕರ ಕೃತಿ. “ಭರಮಣ್ಣನಾಯಕನ ಸಮರ ವಿಜಯ”, “ಹಿರೇಮೆದಕೇರಿನಾಯಕನ ತಾರಾವಳಿ”, “ಮದಕರಿ ರಾಜೇಂದ್ರ ದಂಡಕ” ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅಷ್ಟೇ ಅಲ್ಲದೇ ಚಿತ್ರದುರ್ಗದ ಪಾಳೆಯಗಾರರಿಗೆ ಸಂಭಂಧಿಸಿದ ಅನೇಕ ಕಾಗದ ಪತ್ರಗಳನ್ನು, ಹಸ್ತಪ್ರತಿ ದಾಖಲೆಗಳನ್ನೂ ಅಭ್ಯಸಿಸಿ ಅನೇಕ ಲೇಖನಗಳನ್ನು ಬರೆದಿದ್ದಾರೆ. “ಐತಿಹಾಸಿಕ ಪತ್ರವ್ಯವಹಾರಗಳು”, “ಚಿತ್ರದುರ್ಗ ಪತನ”, “ಚಿತ್ರದುರ್ಗ ಪತನಾನಂತರ”, “ಮಾಯಕೊಂಡದ ಮುತ್ತಿಗೆ”, “ರಸಸಿದ್ದರು” ಹಾಗೂ “ಚಿತ್ರದುರ್ಗದ ಏಳು ಸುತ್ತಿನ ಕೋಟೆ” ಮುಂತಾದ ಲೇಖನಗಳನ್ನು ಬರೆದಿದ್ದಾರೆ. ಹುಲ್ಲೂರು ಶ್ರೀನಿವಾಸ ಜೋಯಿಸರು ರಚಿಸಿರುವ ಹತ್ತು ಪುಸ್ತಕಗಳಲ್ಲಿ ಗಂಡುಗಲಿ ಕುಮಾರರಾಮ, ಕನ್ನಡ ಕಲಿ ಸಿರುಮನ ಚರಿತೆ ಬಹುಮುಖ್ಯವಾದುವು. ‘ಚಿತ್ರದುರ್ಗದ ಬಖೈರು’ ಇವರು ಸಂಪಾದಿಸಿ ಪ್ರಕಟಿಸಿದ ಅಮೂಲ್ಯ ಐತಿಹಾಸಿಕ ದಾಖಲೆಯ ಕೃತಿ[] .

ತ.ರಾ.ಸು. ಮತ್ತು ಜಿ. ವರದರಾಜರಾಯರು ಕ್ರಮವಾಗಿ ತಮ್ಮ 'ಹಂಸಗೀತೆ' ಮತ್ತು 'ಕುಮಾರರಾಮನ ಸಾಂಗತ್ಯ' ಕೃತಿಗಳನ್ನು ಶ್ರೀನಿವಾಸ ಜೋಯಿಸರಿಗೆ ಅರ್ಪಿಸಿ ಗೌರವ ತೋರಿದ್ದಾರೆ.

ಮಹತ್ವದ ಸೇವೆ

[ಬದಲಾಯಿಸಿ]

ಹುಲ್ಲೂರು ಶ್ರೀನಿವಾಸ ಜೋಯಿಸರು ಪತ್ರಿಕಾ ವರದಿಗಾರರಾಗಿ, ಚಿತ್ರದುರ್ಗ ಜಿಲ್ಲೆಯ ಪತ್ರಿಕೋದ್ಯಮಿಗಳ ಸಂಘದ ಅಧ್ಯಕ್ಷರಾಗಿ, ಮೈಸೂರು ಸಂಸ್ಥಾನ ಪತ್ರಿಕೋದ್ಯೋಗಿಗಳ ಸಂಘದ, ಮೈಸೂರು ಪ್ರಾದೇಶಿಕ, ಐತಿಹಾಸಿಕ ಪತ್ರಗಳ ಶೋಧನಾ ಸಮಿತಿ, ಯೋಜನಾ ಸಮಿತಿಗಳ ಸದಸ್ಯರಾಗಿ ಸಹಾ ಮಹತ್ವದ ಸೇವೆ ಸಲ್ಲಿಸಿದವರು.

ಬಿರುದು ಗೌರವಗಳು

[ಬದಲಾಯಿಸಿ]

ಶ್ರೀನಿವಾಸ ಜೋಯಿಸರಿಗೆ ‘ಇತಿಹಾಸ ಸಂಶೋಧನಾ ಪ್ರಸಕ್ತ’, ‘ಐತಿಹ್ಯ ವಿಮರ್ಶನ ವಿಚಕ್ಷಣ’ ಮುಂತಾದ ಬಿರುದು ಗೌರವಗಳು ಅರ್ಪಿತವಾಗಿದ್ದವು.

ವಿದಾಯ

[ಬದಲಾಯಿಸಿ]

ಈ ಮಹಾನ್ ಸಾಧಕರು ನವೆಂಬರ್ ೮, ೧೯೫೬ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಉಲ್ಲೇಖ

[ಬದಲಾಯಿಸಿ]
  1. "ಹುಲ್ಲೂರು ಶ್ರೀನಿವಾಸ ಜೋಯಿಸರು". sallapa.com. Retrieved 8-2-2014. {{cite web}}: Check date values in: |accessdate= (help)
  2. "ಹುಲ್ಲೂರು ಶ್ರೀನಿವಾಸ ಜೋಯಿಸರು". chitharadurga.in. Archived from the original on 2014-04-05. Retrieved 8-2-2014. {{cite web}}: Check date values in: |accessdate= (help); More than one of |archivedate= and |archive-date= specified (help); More than one of |archiveurl= and |archive-url= specified (help)


ಮಾಹಿತಿ ಕೃಪೆ

[ಬದಲಾಯಿಸಿ]

ಕಣಜ Archived 2013-04-12 ವೇಬ್ಯಾಕ್ ಮೆಷಿನ್ ನಲ್ಲಿ.