ವಿಷಯಕ್ಕೆ ಹೋಗು

ಹಿರೇಭಾಸ್ಕರ ಅಣೆಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿರೇಭಾಸ್ಕರ ಅಣೆಕಟ್ಟು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಡೆನೂರಿಲ್ಲಿದೆ.[೧][೨] ಇದು ಹೊಳೆಬಾಗಿಲಿನಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ ಮತ್ತು ಜೋಗ ಜಲಪಾತದಿಂದ ೨೦ ಕಿಮೀ ದೂರದಲ್ಲಿದೆ. ಶ್ರೀ ಸುಬ್ಬರಾವ್ ಅವರ ನೇತೃತ್ವದಲ್ಲಿ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಈ ಯೋಜನೆಗಾಗಿ ೧೯೩೯ ರ ಫೆಬ್ರುವರಿ ಐದರಂದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಜೋಗದಲ್ಲಿ ಅಡಿಗಲ್ಲನ್ನಿಡುತ್ತಾರೆ.[೩] ಇಂಜಿನಿಯರ್ ಶ್ರೀ ಸುಬ್ಬರಾವ್ ನೇತೃತ್ವದಲ್ಲಿ ಮಡೆನೂರಿನಲ್ಲಿ ೧೧೪ ಅಡಿ ಎತ್ತರದ ಸುಮಾರು ಇಪ್ಪತ್ತೈದು ಟಿ ಎಂ ಸಿ ಸಂಗ್ರಹ ಸಾಮರ್ಥ್ಯದ ಜಲಾಶಯದ ನಿರ್ಮಾಣಕಾರ್ಯ ಆರಂಭವಾಗುತ್ತದೆ. ಕೃಷ್ಣರಾವ್ ಎಂಬ ಸಿವಿಲ್ ಇಂಜಿನಿಯರ ಮೂಲಕ ಸರ್ವೆ ನಡೆಸಿ, ಶರಾವತಿ ನದಿಯಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶಕ್ಕಾಗಿ ಈ ಅಣೆಕಟ್ಟನ್ನು ನಿರ್ಮಿಸಲಾಯಿತು.[೪]

ನಿರ್ಮಾಣ[ಬದಲಾಯಿಸಿ]

ಇಡೀ ಅಣೆಕಟ್ಟನ್ನು ಕಾಂಕ್ರೀಟ್‍ನಿಂದ ನಿರ್ಮಾಣ ಮಾಡಲಾಗಿದೆ. ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟುಗಳನ್ನು ಅಳವಡಿಸಲಾಗಿದೆ. ಪ್ರವಾಹದ ನೀರನ್ನು ಹೊರಗೆ ಹಾಕಲು ವಿಶೇಷ ಮಾದರಿಯ ಹನ್ನೊಂದು ಸೈಫನ್‍ಗಳನ್ನು ಅಳವಡಿಸಲಾಯಿತು. ಈ ಸೈಫನ್‍ಗಳು ವೊಲ್ಯೂಟ್ ಮಾದರಿಯ ಸೈಫನ್‍ಗಳಾಗಿದ್ದು ಇವನ್ನು ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್‌ರವರು ನಿರ್ಮಿಸಿದರು. ಇವುಗಳು ಸುಮಾರು ಹದಿನೆಂಟು ಅಡಿ ವ್ಯಾಸವನ್ನು ಹೊಂದಿದ್ದು, ತಲಾ ಹನ್ನೊಂದು ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ನೀರನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಈ ಜಲಾಶಯ ಒಟ್ಟು ೧೨೦ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು.[೫] ೧೯೪೮ ರಲ್ಲಿ ಅಣೆಕಟ್ಟು ಪೂರ್ಣಗೊಂಡಿತು.[೬]

ಮುಳುಗಡೆ[ಬದಲಾಯಿಸಿ]

೧೯೫೬ ರಲ್ಲಿ ಹಳೆಯ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ಸಮಯದಲ್ಲಿ ವಿದ್ಯುತ್ ಕೊರತೆ ತೀವ್ರವಾಯಿತು. ಸರ್ಕಾರ ಹೆಚ್ ಇ ಸಿ ಪಿ ಯ ಮೂಲಕ ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಲು ಉದ್ದೇಶಿಸಿದಾಗ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟುವುದು ಅನಿವಾರ್ಯವಾಯಿತು. ೧೯೬೪ ರಲ್ಲಿ ಲಿಂಗನಮಕ್ಕಿ ಆಣೆಕಟ್ಟೆ ನಿರ್ಮಾಣವಾದಾಗ ಹಿರೇಭಾಸ್ಕರ ಅದರಲ್ಲಿ ಸಂಫೂರ್ಣ ಮುಳುಗಡೆಯಾದದ್ದಲ್ಲದೇ ಅದರ ಮೇಲೆ ಸುಮಾರು ನಲವತ್ತೊಂದು ಅಡಿ ನೀರು ನಿಲ್ಲತೊಡಗಿತು. ಲಿಂಗನಮಕ್ಕಿಯ ಪೂರ್ಣಮಟ್ಟ ಸಮುದ್ರಮಟ್ಟದಿಂದ ೧೮೧೯ ಅಡಿ ಇದೆ ಮತ್ತು ಹಿರೇಭಾಸ್ಕರ ೧೭೭೮ ಅಡಿ ಇದೆ. ಹೀಗೆ ಹಿರೇಭಾಸ್ಕರ ಅಣೆಕಟ್ಟು ೧೯೬೪ ರಿಂದ ಪ್ರತಿವರ್ಷ ಮುಳುಗಡೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಈ ಅಣೆಕಟ್ಟು ನಮ್ಮ ಕಣ್ಣಿಗೆ ಬೀಳುತ್ತದೆ. ಪ್ರತಿವರ್ಷ ಮೇ ತಿಂಗಳ ಅಂತ್ಯದಲ್ಲಿ ಅಣೆಕಟ್ಟನ್ನು ನೋಡಬಹುದು.

ಎತ್ತರ[ಬದಲಾಯಿಸಿ]

ಅಣೆಕಟ್ಟು ೧೧೪ ಅಡಿ ಎತ್ತರ ಇದೆ. ಇದು ೧೪ ಅಡಿಗಳ ವ್ಯಾಸದ ಮತ್ತು ೫೮ ಅಡಿ ಎತ್ತರದ ಸೈಫನ್‍ಗಳನ್ನು ಹೊಂದಿದೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2019-07-01. Retrieved 2019-07-01.
  2. https://www.prajavani.net/karunaada-vaibhava/%E0%B2%9C%E0%B2%B2%E0%B2%B2-%E0%B2%9C%E0%B2%B2%E0%B2%A7%E0%B2%BE%E0%B2%B0%E0%B2%BE-%E0%B2%B9%E0%B2%BF%E0%B2%B0%E0%B3%87%E0%B2%AD%E0%B2%BE%E0%B2%B8%E0%B3%8D%E0%B2%95%E0%B2%B0-2009015
  3. https://mysuruonline.in/mysuru/herebaskara-dam-sharavathi-river-shimoga/
  4. https://mysuruonline.in/mysuru/herebaskara-dam-sharavathi-river-shimoga/
  5. https://rainland.in/?p=407
  6. https://www.deccanherald.com/india/karnataka/picturesque-hirebhaskar-dam-resurfaces-2264867