ವಿಷಯಕ್ಕೆ ಹೋಗು

ಹಕೀಂ ಅಜ್ಮಲ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಕೀಂ ಅಜ್ಮಲ್ ಖಾನ್
ಹಕೀಂ ಅಜ್ಮಲ್ ಖಾನ್
ಜನನ(೧೮೬೮-೦೨-೧೧)೧೧ ಫೆಬ್ರವರಿ ೧೮೬೮[೧][೨]
ಮರಣ29 December 1927
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ವೈದ್ಯ, ರಾಜಕಾರಣಿ

'ಹಕೀಂ ಅಜ್ಮಲ್ ಖಾನ್ (1868–1927) . ಪ್ರಸಿದ್ಧ ಹಕೀಂ ಮನೆತನವೊಂದರಲ್ಲಿ ಜನಿಸಿ, ವೈದ್ಯದಲ್ಲಿ ಅಸಾಧಾರಣ ಪಾಂಡಿತ್ಯ ಗಳಿಸಿ, ಹಿಂದುಳಿದ ಮುಸ್ಲಿಮರ ಏಳಿಗೆಗಾಗಿ ಶ್ರಮಿಸಿ,ಉಜ್ವಲ ರಾಷ್ಟ್ರಭಕ್ತರಾಗಿ ನಾಡಿನ ಸೇವೆ ಮಾಡಿದ ಮುಸ್ಲಿಂ ನಾಯಕರಲ್ಲಿ ಒಬ್ಬರು.

ಸಾಧನೆ[ಬದಲಾಯಿಸಿ]

ಇವರು ಯುನಾನಿ ವೈದ್ಯದಲ್ಲಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದ ದೆಹಲಿ ವೈದ್ಯ ಮನೆತನವೊಂದಕ್ಕೆ ಸೇರಿದವರು. ಈ ಮನೆತನದವರೇ ಸ್ಥಾಪಿಸಿ, ಬೆಳೆಸಿಕೊಂಡು ಬಂದಿದ್ದ ತಿಬಿಯಾ ಯುನಾನಿ ವೈದ್ಯ ಶಿಕ್ಷಣಶಾಲೆ ಅಜ್ಮಲ್ ಖಾನರ ಶ್ರಮದ ಫಲವಾಗಿ ಪ್ರೌಢ ವಿದ್ಯಾಸಂಸ್ಥೆಯಾಯಿತು. ಇವರ ಶಿಕ್ಷಣ ನಡೆದದ್ದು ಮನೆಯಲ್ಲಿಯೇ; ಚಿಕ್ಕ ವಯಸ್ಸಿನಲ್ಲಿಯೇ ಅಸಾಧಾರಣ ಪಾಂಡಿತ್ಯ ಗಳಿಸಿದರು. 1904ರಲ್ಲಿ ಪಶ್ಚಿಮ ಏಷ್ಯ ಪ್ರವಾಸಮಾಡಿ, ಎರಡು ಸಲ ಯೂರೋಪು ದೇಶಗಳಲ್ಲೂ ಸಂಚರಿಸಿ, ಅಲ್ಲಿನ ವೈದ್ಯಕೀಯ ವಿಧಾನಗಳನ್ನು ಅಭ್ಯಾಸಮಾಡಿದರು. ವೈದ್ಯಶಾಸ್ತ್ರದ ಮೇಲೆ ಇವರು ಬರೆದಿರುವ ಗ್ರಂಥಗಳು ಪ್ರಮಾಣ ಗ್ರಂಥಗಳಾಗಿವೆ. ಅಲಿಘರ್‍ನ ಮುಸ್ಲಿಂ ಪ್ರೌಢವಿದ್ಯಾಶಾಲೆಯನ್ನು ಬೆಳೆಸಿ, ಅದು ವಿಶ್ವವಿದ್ಯಾನಿಲಯವಾಗಲು ಶ್ರಮಿಸಿದವರಲ್ಲಿ ಅಜ್ಮಲ್ ಖಾನರೊಬ್ಬರು.

ರಾಜಕೀಯ[ಬದಲಾಯಿಸಿ]

1918ರ ದೆಹಲಿ ಕಾಂಗ್ರೆಸ್ಸಿನ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಇವರು ಮರು ವರ್ಷವೇ ರಾಜಕೀಯದಲ್ಲಿ ಧುಮುಕಬೇಕಾಯಿತು. 1919ರ ರೌಲತ್ ಕಾನೂನು, ಜಲಿಯನ್‍ವಾಲಾ ಬಾಗ್ ಕಗ್ಗೊಲೆ, ಖಿಲಾಫತ್ ವಿಷಯದಲ್ಲಿ ಬ್ರಿಟಿಷರು ಮುಸ್ಲಿಂಮರಿಗೆ ಮಾಡಿದ ಅನ್ಯಾಯ-ಇವೆಲ್ಲ ಅವರನ್ನು ರಾಜಕೀಯಕ್ಕೆ ಸೆಳೆದುವು. 1919ರಲ್ಲಿ ಬ್ರಿಟಿಷರು ನಡೆಸಿದ ಅತ್ಯಾಚಾರಗಳಿಂದ ತಮ್ಮ ರಾಜಕೀಯ ಅಭಿಪ್ರಾಯಗಳು ಒಮ್ಮೆಲೇ ಬದಲಾಯಿಸಿದವು ಎಂದು ಮಿತ್ರರೊಬ್ಬರಿಗೆ ಬರೆದ ಪತ್ರದಲ್ಲಿ ಅವರು ಹೇಳಿದ್ದಾರೆ. 1921ರಲ್ಲಿ ನಡೆದ ಅಹಮದಾಬಾದ್ ಕಾಂಗ್ರೆಸ್ಸಿಗೆ ಇವರು ಅಧ್ಯಕ್ಷರಾಗಿ ಆರಿಸಲ್ಪಟ್ಟು ಅಧ್ಯಕ್ಷಪೀಠದಿಂದ, ಸ್ವಾತಂತ್ರ್ಯದ ಹಾಗೂ ಹಿಂದೂ ಮುಸ್ಲಿಮ್ ಐಕ್ಯದ ಬಗ್ಗೆ ಭಾವೋದ್ರೇಕದಿಂದ ಜನತೆಗೆ ಕರೆಕೊಟ್ಟರು. ಮಹಾತ್ಮಾ ಗಾಂಧೀಜಿಯವರೊಂದಿಗೆ ಇವರ ಗೆಳೆತನ ಬೆಳೆಯಿತು. ಸೆರೆಮನೆಯಲ್ಲೇ ನಡೆದ ಗಾಂಧೀಜಿಯವರ ಶಸ್ತ್ರಚಿಕಿತ್ಸೆ, ದೆಹಲಿಯಲ್ಲಿ ಗಾಂಧೀಜಿಯವರು ಮಾಡಿದ ಮೂರು ವಾರಗಳ ಉಪವಾಸ (1924)-ಇಂಥ ಸಂದರ್ಭಗಳಲ್ಲಿ ಅಜ್ಮಲ್‍ಖಾನರು ತೋರಿಸಿದ ಕಾಳಜಿ, ಆಸಕ್ತಿಗಳು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಲ್ಲಿ ಹೃದಯಸ್ಪರ್ಶಿಯಾದ ಪ್ರಸಂಗಗಳು.

ನಿಧನ[ಬದಲಾಯಿಸಿ]

ಇವರು ಡಿಸೆಂಬರ್ ೨೯,೧೯೨೭ ರಂದು ಹೃದಯ ಸಂಬಂಧಿ ಖಾಯಿಲೆಯಿಂದ ನಿಧನ ಹೊಂದಿದರು.

ಉಲ್ಲೇಖಗಳು[ಬದಲಾಯಿಸಿ]

  1. Hameed, A., Institute of History of Medicine, Medical Research (New Delhi, India). Dept. of History of Medicine, Science (1986). Exchanges Between India and Central Asia in the Field of Medicine. Department of History of Medicine and Science, Institute of History of Medicine and Medical Research. Retrieved 24 May 2013.{{cite book}}: CS1 maint: multiple names: authors list (link)
  2. "ಆರ್ಕೈವ್ ನಕಲು". Archived from the original on 2014-09-12. Retrieved 2016-03-31. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: