ವಿಷಯಕ್ಕೆ ಹೋಗು

ಸ್ಕ್ಯಾಂಡಿನೇವಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಲ ಸ್ಕ್ಯಾಂಡಿನೇವಿಯ ಪ್ರದೇಶ ಕೆಂಪು ಬಣ್ಣದಲ್ಲಿವೆ. ಕಿತ್ತಾಳೆ ಬಣ್ಣದಲ್ಲಿನ ಪ್ರದೇಶವನ್ನು ಕೆಲವೊಮ್ಮೆ ಸೇರಿಸಲಾಗುತ್ತದೆ. ಹಳದಿ ಬಣ್ಣದ ಪ್ರದೇಶ ಸೇರಿದರೆ ಇದನ್ನು ನಾರ್ಡಿಕ್ ಪ್ರದೇಶ ಆಗುತ್ತದೆ.

ಸ್ಕ್ಯಾಂಡಿನೇವಿಯ ಯುರೋಪ್ ಖಂಡದ ಉತ್ತರ ಭಾಗದಲ್ಲಿನ ಸ್ಕ್ಯಾಂಡಿನೇವಿಯ ದ್ವೀಪಕಲ್ಪದ ಸುತ್ತಮುತ್ತಲಿನ ಪ್ರದೇಶ. ಐತಿಹಾಸಿಕವಾಗಿ ನಾರ್ವೆ, ಡೆನ್ಮಾರ್ಕ್ ಮತ್ತು ಸ್ವೀಡನ್ ದೇಶಗಳು ಈ ಪ್ರದೇಶಕ್ಕೆ ಸೇರುತ್ತವೆ. ಕೆಲವೊಮ್ಮೆ ಫಿನ್ಲ್ಯಾಂಡ್ ಕೂಡ ಇದಕ್ಕೆ ಸೇರಿಸಲಾಗುತ್ತದೆ. ವಿರಳವಾಗಿ ಐಸ್ಲ್ಯಾಂಡ್ ಕೂಡ ಸ್ಕ್ಯಾಂಡಿನೇವಿಯದ ಭಾಗವೆಂದು ಭಾವಿಸಲಾಗುತ್ತದೆ. ಮಾನವಿಕ, ಸಾಂಸ್ಕøತಿಕ ಹಾಗೂ ಭಾಷೆಯ ಆಧಾರದ ಮೇಲೆ ಫೆರೋ ದ್ವೀಪಗಳನ್ನು ಈ ಗುಂಪಿಗೆ ಸೇರಿಸಲಾಗಿದೆ. ಈಚೆಗೆ ನಾರ್ಡೆನ್ ಎಂಬ ಪದವನ್ನು ಸ್ಕ್ಯಾಂಡಿನೇವಿಯನ್ ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ.

ಡೆನ್ಮಾರ್ಕ್, ಫಿನ್‍ಲೆಂಡ್, ಐಸ್‍ಲೆಂಡ್, ನಾರ್ವೆ ಮತ್ತು ಸ್ವೀಡನ್‍ಗಳದು ಒಂದು ಗುಂಪು. ಇವು ಇತರ ಯುರೋಪಿನ ರಾಷ್ಟ್ರಗಳಿಗಿಂತ ಭಿನ್ನ.

ಸ್ಕ್ಯಾಂಡಿನೇವಿಯ ಪ್ರದೇಶ

[ಬದಲಾಯಿಸಿ]

ಹೆಸರಿನ ಮೂಲ

[ಬದಲಾಯಿಸಿ]

ಸ್ಕ್ಯಾಂಡಿನೇವಿಯ ಎಂಬ ಶಬ್ದವು ಬಹುಶಃ ಪುರಾತನ ರೋಮನ್ನರು ಬಳಸಿದ ಸ್ಕ್ಯಾಂಡಿಯ ಎಂಬ ಶಬ್ದದಿಂದ ಬಂದದ್ದು. ಬಾಲ್ಟಿಕ್ ಮತ್ತು ಉತ್ತರ ಸಮುದ್ರದ ಪ್ರದೇಶವನ್ನು ಇವರು ಸ್ಕ್ಯಾಂಡಿಯ ಎಂದು ಕರೆದರು. 79ರಲ್ಲಿ ರೋಮನ್ ಬರೆಹಗಾರ ಪ್ಲಿನಿ ಈ ಪ್ರದೇಶವನ್ನು ಸ್ಕ್ಯಾಂಡಿನೇವಿಯ ಎಂದು ಕರೆದ. ಅನಂತರ ಟಾಲೆಮಿ ಇದನ್ನು ಸ್ಕಂಡಿಯಾಯ್ ನೇಸರ್ ಎಂದು ಕರೆದ. ಗ್ರೀಕ್ ಭಾಷೆಯಲ್ಲಿ ನೇಸರ್ ಎಂದರೆ ದ್ವೀಪ. ಮಧ್ಯಯುಗದಲ್ಲಿ ಲ್ಯಾಟಿನ್ ವಿದ್ವಾಂಸರು ಈ ಪ್ರದೇಶವನ್ನು ಸ್ಕ್ಯಾಡಿನೇವಿಯ ಎಂದು ಕರೆದರು. ದಕ್ಷಿಣ ಸ್ವೀಡನ್ನಿನ ಸ್ಕೇನ್ ಎಂಬ ಸ್ಥಳದ ಹೆಸರಿನಿಂದ ಸ್ಕ್ಯಾಂಡಿನೇವಿಯ ಎಂಬ ಹೆಸರು ಬಂತೆಂಬುದಾಗಿ ಕೆಲವು ಸಂಶೋಧಕರ ಮತ.

ವಿಸ್ತೀರ್ಣ

[ಬದಲಾಯಿಸಿ]

ಸ್ಕ್ಯಾಂಡಿನೇವಿಯ ಪರ್ಯಾಯ ದ್ವೀಪ. ಉತ್ತರದಲ್ಲಿ ಬೇರೆಂಟ್ ಸಮುದ್ರ, ಪಶ್ಚಿಮದಲ್ಲಿ ನಾರ್ವೇಜಿಯನ್ ಸಮುದ್ರ ಇವೆ. ದಕ್ಷಿಣದಲ್ಲಿ ಡೆನ್ಮಾರ್ಕ್‍ನ್ನು ಉತ್ತರ ಸಮುದ್ರ ಬೇರ್ಪಡಿಸುತ್ತದೆ. ಪೂರ್ವದಲ್ಲಿ ಫಿನ್‍ಲೆಂಡ್‍ನ್ನು ಬಾಲ್ಟಿಕ್ ಸಮುದ್ರ ಹಾಗೂ ಬೊಥನೀಯ ಕೊಲ್ಲಿ ಪ್ರತ್ಯೇಕಿಸಿವೆ. ನಾರ್ವೆಯ ಪಶ್ಚಿಮದಲ್ಲಿ ಫೆರೋದ್ವೀಪಗಳು ಹಾಗೂ ವಾಯವ್ಯದಲ್ಲಿ ಐಸ್‍ಲೆಂಡ್, ಗ್ರೀನ್‍ಲೆಂಡ್‍ಗಳಿವೆ.

ನಾರ್ವೆ: ಉ.ಅ. 57057| ದಿಂದ 77011| ಅಕ್ಷಾಂಶಗಳು ಮತ್ತು ಪೂ.ರೇ. 04030| - 31010| ನಡುವೆ ಹಬ್ಬಿದೆ. ಇದರ ವಿಸ್ತೀರ್ಣ 3,23,895 ಚ.ಕಿಮೀ.

ಸ್ವೀಡನ್ : ಉ.ಅ. 55020| — 69005| ಹಾಗೂ ಪೂ.ರೇ. 110 — 24010| ನಡುವೆ ಇದೆ. ವಿಸ್ತೀರ್ಣ 4,49,793 ಚ.ಕಿಮೀ. ಸ್ಕ್ಯಾಂಡಿನೇವಿಯ ಪ್ರದೇಶದ ಅತ್ಯಂತ ದೊಡ್ಡ ದೇಶ. ಯುರೋಪಿನಲ್ಲಿ ಇದು 4ನೆಯ ದೊಡ್ಡ ದೇಶ.

ಫಿನ್‍ಲೆಂಡ್ : ಉ.ಅ. 59030| - 70005| ಹಾಗೂ ಪೂ.ರೇ. 19007| — 31035| ನಡುವೆ ಇದೆ. ಇದರ ವಿಸ್ತೀರ್ಣ 3,38,000 ಚ.ಕಿಮೀ.

ಐಸ್‍ಲೆಂಡ್ : ಉ.ಅ. 63025| — 66032| ಹಾಗೂ ಪ.ರೇ. 13030| — 24030| ನಡುವೆ ಇದೆ. ವಿಸ್ತೀರ್ಣ 1,02,846 ಚ.ಕಿಮೀ.

ಡೆನ್ಮಾರ್ಕ್: ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳಲ್ಲಿ ಅತ್ಯಂತ ಚಿಕ್ಕದಾದ ದೇಶ. ಇದು ಉ.ಅ. 54034| — 57045| ಪ.ರೇ. 8005| — 15012| ಇದೆ. ಇದು ಗ್ರೀನ್‍ಲೆಂಡ್ ಮತ್ತು ಫೆರೋ ದ್ವೀಪಗಳನ್ನು ಹೊಂದಿದೆ.

ಪ್ರಾಕೃತಿಕ ವಿಭಾಗಗಳು

[ಬದಲಾಯಿಸಿ]

ಭೂರಚನೆಯ ಆಧಾರದ ಮೇಲೆ ಸ್ಕ್ಯಾಂಡಿನೇವಿಯದಲ್ಲಿ ಎರಡು ಪ್ರಾಕೃತಿಕ ವಿಭಾಗಗಳಿವೆ. 1. ಸ್ಕ್ಯಾಂಡಿನೇವಿಯದ ಪರ್ವತಗಳು : ಇದು ನಾರ್ವೆ, ಸ್ವೀಡನ್, ಫಿನ್‍ಲೆಂಡ್ ಮತ್ತು ಐಸ್‍ಲೆಂಡ್‍ಗಳನ್ನು ಒಳಗೊಂಡಿದೆ. ಇದು ಪುರಾತನವಾದ ಕಠಿಣ ಶಿಲೆಗಳಿಂದ ನಿರ್ಮಿತವಾಗಿದೆ. ಹೆಚ್ಚು ಏರು-ತಗ್ಗುಗಳಿಂದ ಕೂಡಿದೆ. ನಾರ್ವೆಯ ತೀರದಲ್ಲಿ ಕಡಿದಾದ ಇಳಿಜಾರಿದೆ. ಆದರೆ ಬಾಲ್ಟಿಕ್ ಸಮುದ್ರದ ಕಡೆಗೆ ಸ್ವೀಡನ್ನಿನಲ್ಲಿ ಇಳಿಜಾರು ಅಷ್ಟು ಕಡಿದಾಗಿಲ್ಲ.

2. ಪೂರ್ವದ ಮೈದಾನ : ಇದು ದಕ್ಷಿಣ ಪೂರ್ವ ಸ್ವೀಡನ್‍ನಲ್ಲಿ ಹಬ್ಬಿದೆ, ಡೆನ್ಮಾರ್ಕ್‍ನಲ್ಲೂ ಮುಂದುವರಿದಿದೆ. ಇದು ಹಿಮನದಿಯ ಪ್ರಕ್ರಿಯೆಯಿಂದ ರೂಪಿತವಾದದ್ದು.

ಸ್ಕ್ಯಾಂಡಿನೇವಿಯನ್ ಹಿಮ ಹಾಳೆ : ಇದು ಪ್ಲೀಸ್ಟೋಸೀನ್ ಹಿಮಯುಗದಲ್ಲಿ ರಚನೆಯಾದ ಒಂದು ದೊಡ್ಡ ಹಿಮಹಾಳೆ. ಇದು ಯುರೋಪಿನ ಬಹುಪಾಲು ಪ್ರದೇಶವನ್ನು ಆಕ್ರಮಿಸಿತ್ತು. ಈ ಹಿಮಯುಗ ಸು. 10,000 ವರ್ಷಗಳ ಹಿಂದೆ ಕೊನೆಗೊಂಡಿತು. ಸ್ಕ್ಯಾಂಡಿನೇವಿಯದ ಹಿಮಹಾಳೆ ಸು. ಉ.ಅ. 480 ವರೆಗೆ ವಿಸ್ತರಿಸಿದ್ದು, 66,00,000 ಚ.ಕಿಮೀ ಪ್ರದೇಶವನ್ನು ಆವರಿಸಿತ್ತು. ಹಿಮನದಿ ಹಿಂದೆ ಸರಿಯತೊಡಗಿದಾಗ ಫಿನ್‍ಲೆಂಡಿನಲ್ಲಿ ಸಾವಿರಾರು ಸರೋವರಗಳ ನಿರ್ಮಾಣವಾಯಿತು. ಆದ್ದರಿಂದ ಅದನ್ನು ಸಾವಿರ ಸರೋವರಗಳ ನಾಡು ಎಂದು ಕರೆಯಲಾಗಿದೆ.

ವಾಯುಗುಣ

[ಬದಲಾಯಿಸಿ]

ನಾರ್ವೆ ಮತ್ತು ಸ್ವೀಡನ್‍ಗಳಲ್ಲಿ ಬೇಸಗೆ ತಂಪಾಗಿ ಮೋಡದಿಂದ ಕೂಡಿ ತೇವವನ್ನೊಳಗೊಂಡಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ತೇವ ಮತ್ತು ತೀವ್ರವಾದ ಚಳಿ ಇರುವುದು. ಚಳಿಗಾಲದಲ್ಲಿ ನಾರ್ವೇಜಿಯನ್ ತೀರದಲ್ಲಿ ಉಷ್ಣಾಂಶ 00ಸೆ. ಗಿಂತ ಕಡಿಮೆ ಇರುತ್ತದೆ. ಜನವರಿಯಲ್ಲಿ ಸರಾಸರಿ ಉಷ್ಣಾಂಶ 80 ಸೆ. ಇದ್ದರೆ, ಜುಲೈ ತಿಂಗಳಲ್ಲಿ ಸುಮಾರು 150ಸೆ.ನಷ್ಟು ಇರುತ್ತದೆ. ದಕ್ಷಿಣ ಯುರೋಪಿಗೆ ಹೋಲಿಸಿದಾಗ ಉತ್ತರದ ಕಡೆಗೆ ಹೋದಂತೆ ಮಳೆ ಕಡಿಮೆಯಾಗುತ್ತದೆ.

ಜಲವ್ಯವಸ್ಥೆ

[ಬದಲಾಯಿಸಿ]

ಸ್ಕ್ಯಾಂಡಿನೇವಿಯನ್ ಪರ್ವತಗಳಲ್ಲಿ ಉಗಮಿಸುವ ಅನೇಕ ನದಿಗಳು ಬಾಲ್ಟಿಕ್ ಸಮುದ್ರ ಮತ್ತು ಬಿಸ್ಕೇ ಆಖಾತವನ್ನು ಸೇರುತ್ತವೆ. ಚಳಿಗಾಲದಲ್ಲಿ ಇಲ್ಲಿನ ಬಹುತೇಕ ನದಿಗಳು ಹೆಪ್ಪುಗಟ್ಟಿ, ಬೇಸಗೆಯಲ್ಲಿ ತುಂಬಿ ಹರಿಯುತ್ತವೆ. ಸ್ವೀಡನ್ನಿನ ಪ್ರಮುಖ ನದಿಗಳೆಂದರೆ — ಟಾರ್ನ್, ಕಾಲಿಕ್ಸ್, ಲೂಲ್, ಸ್ಕೆಲ್ಲೆಪ್ಟೆ, ಉಮೆ, ಇಂಡಾಲ್ಸ್, ದಾಲ್, ಕ್ಲಾರ್, ಲಾಗನ್, ಗೋಟಾ ಮತ್ತು ಜುಂಗನ್, ಫಿನ್‍ಲೆಂಡಿನ ಸೇ.20ರಷ್ಟು ಪ್ರದೇಶ ಸರೋವರಗಳಿಂದ ಕೂಡಿದೆ. ಮಜೋಸ್ ಇಲ್ಲಿಯ ಅತಿ ದೊಡ್ಡ ಸರೋವರ. ನಾರ್ವೆಯ ಆಗ್ನೇಯದಲ್ಲಿ ಹರಿಯುವ ಗ್ಲೋಮಾ ಈ ದೇಶದ ಅತ್ಯಂತ ಉದ್ದವಾದ ನದಿ. ಇದು ಜಲಪಾತಗಳಿಂದ ಕೂಡಿ ವೇಗವಾಗಿ ಹರಿಯುತ್ತದೆ.

ಸ್ವಾಭಾವಿಕ ಸಸ್ಯವರ್ಗ

[ಬದಲಾಯಿಸಿ]

ಇಲ್ಲಿ ತಂಡ್ರಾ, ಟೈಗಾ ಹಾಗೂ ಮಿಶ್ರ ಅರಣ್ಯಗಳಿವೆ. ಐಸ್‍ಲೆಂಡ್ ಮತ್ತು ಉತ್ತರ ಫಿನ್‍ಲೆಂಡ್‍ನಲ್ಲಿ ತಂಡ್ರಾ ಮಾದರಿ ಸಸ್ಯ ವರ್ಗ, ಪಾಚಿ ಮತ್ತು ಹಾವಸೆಗಳೂ ಇವೆ. ಫಿನ್‍ಲೆಂಡಿನ ಬಹುತೇಕ ಪ್ರದೇಶಗಳಲ್ಲಿ ಎಲೆ ಮೊನಚಾದ ಸಸ್ಯವರ್ಗ ಕಂಡುಬರುವುದು. ಹಾಗೆಯೇ ನಾರ್ವೆ, ಫೆರೋ ದ್ವೀಪಗಳಲ್ಲಿಯೂ ಟೈಗಾ ಹಾಗೂ ಮಿಶ್ರ ಅರಣ್ಯಗಳಿವೆ. ನಾರ್ವೆ, ಫಿನ್‍ಲೆಂಡ್ ಮತ್ತು ಸ್ವೀಡನ್ ದೇಶಗಳು ಆರ್ಥಿಕತೆಯಲ್ಲಿ ಟೈಗಾ ಸಸ್ಯವರ್ಗ ಮಹತ್ತರವಾದ ಪಾತ್ರ ವಹಿಸುತ್ತದೆ. ಪೈನ್, ಸ್ತ್ರೂಸ್, ಫರ್, ಬರ್ಚ್, ಆಲ್ಡರ್, ಪಾಪ್ಲಾರ್ ಹಾಗೂ ವಿಲ್ಲೇ ಮರಗಳು ಇಲ್ಲಿ ಹೆಚ್ಚಾಗಿವೆ.

ಮಣ್ಣುಗಳು

[ಬದಲಾಯಿಸಿ]

ಇಲ್ಲಿ ಮುಖ್ಯವಾಗಿ ತೊಳೆಸಿದ ಮಣ್ಣು ಹಾಗೂ ಟಂಡ್ರಾ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ. ಸ್ಕ್ಯಾಂಡಿನೇವಿಯ ಪರ್ವತಗಳಲ್ಲಿ ಪರ್ವತ ಮಣ್ಣು ಹೆಚ್ಚಾಗಿದ್ದರೆ, ಪೂರ್ವದಲ್ಲಿ ತೊಳಿಸಿದ ಮಣ್ಣು ಹೆಚ್ಚು ಉತ್ತರದಲ್ಲಿ ತಂಡ್ರಾ ಮಣ್ಣು ಕಂಡುಬರುತ್ತದೆ.

ಪ್ರಾಣಿವರ್ಗ

[ಬದಲಾಯಿಸಿ]

ಹಿಮಸಾರಂಗ, ಧ್ರುವ ಪ್ರದೇಶದ ನರಿ, ತೋಳ, ಧ್ರುವ ಪ್ರದೇಶದ ಮೊಲ, ನಾನಾ ಬಗೆಯ ಮೀನು ವ್ಯಾಪಕವಾಗಿವೆ. ಡೆನ್ಮಾರ್ಕಿನಲ್ಲಿ ಹೈನುಗಾರಿಕೆ ಹೆಚ್ಚು ಅಭಿವೃದ್ಧಿ ಹೊಂದಿದೆ.

ಸಂಪನ್ಮೂಲಗಳು

[ಬದಲಾಯಿಸಿ]

ಉತ್ತರ ಸಮುದ್ರದ ಖಂಡಾವರಣ ಪ್ರದೇಶದ ಕಡೆಯಲ್ಲಿ, ನಾರ್ವೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ದೊರೆಯುತ್ತದೆ. ಅಲ್ಲದೆ ಕಬ್ಬಿಣಅದಿರು, ತಾಮ್ರ, ಕಲ್ಲಿದ್ದಲು ನಿಕ್ಷೇಪಗಳೂ ಇವೆ. ಐಸ್‍ಲೆಂಡಿನ ಸೇ.93 ರಷ್ಟು ವಿದ್ಯುತ್ ಜಲವಿದ್ಯುತ್ ಕೇಂದ್ರಗಳಿಂದ ಹಾಗೂ ಶೇ.7ರಷ್ಟು ವಿದ್ಯುತ್ ಶಾಖೋತ್ಪನ್ನವಾದದ್ದು.

ಸ್ಕ್ಯಾಂಡಿನೇವಿಯ ಪರ್ವತಗಳಿಂದ ಕೂಡಿದೆ. ವಾಯುಗುಣ ನಿರ್ದಿಷ್ಟ ಬೆಳೆಗಳಿಗೆ ಸಹಾಯಕ. ನಾರ್ವೆಯಲ್ಲಿ ಬಾರ್ಲಿ, ಓಟ್ಸ್, ರೈ, ಆಲೂಗೆಡ್ಡೆ, ಹಣ್ಣು; ಸ್ವೀಡನ್‍ನಲ್ಲಿ ಸಿಹಿಗೆಡ್ಡೆ, ಆಲೂಗೆಡ್ಡೆ ಮೊದಲಾದವು, ಫಿನ್‍ಲೆಂಡಿನಲ್ಲಿ ಆಲೂಗೆಡ್ಡೆ, ಡೈರಿ ಉತ್ಪನ್ನ ಮತ್ತು ಕೆಲವು ಧಾನ್ಯಗಳು ಮುಖ್ಯ ಉತ್ಪನ್ನಗಳು. ಐಸ್‍ಲೆಂಡಿನಲ್ಲಿ ಸೇ.1 ಕ್ಕಿಂತ ಕಡಿಮೆ ಪ್ರದೇಶವು ವ್ಯವಸಾಯಕ್ಕೆ ಅನುಕೂಲವಾಗಿವೆ. ಇಲ್ಲಿಯೂ ಆಲೂಗೆಡ್ಡೆಯನ್ನು ಬೆಳೆಯುತ್ತಾರೆ.


ಕೈಗಾರಿಕೆ

[ಬದಲಾಯಿಸಿ]

ಹಡಗು ನಿರ್ಮಾಣ, ಯಂತ್ರೋಪಕರಣ, ಬಟ್ಟೆ, ಕಬ್ಬಿಣ ಮತ್ತು ಉಕ್ಕು, ಚರ್ಮ, ರಾಸಾಯನಿಕ, ಆಹಾರ ಸಂಸ್ಕರಣೆ, ಕಾಗದ, ಅಲ್ಯುಮಿನಿಯಂ, ಗೊಬ್ಬರ ಹಾಗೂ ಇನ್ನಿತರ ಕೈಗಾರಿಕೆಗಳು ಇಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಮೃದು ಮರ ವ್ಯಾಪಕವಾಗಿ ದೊರೆಯುವುದರಿಂದ ಹಡಗು ನಿರ್ಮಾಣ ಮತ್ತು ಕಾಗದ ಕೈಗಾರಿಕೆಗಳು ಬೆಳೆದಿವೆ.


ಸಾರಿಗೆ

[ಬದಲಾಯಿಸಿ]

ಈ ಪ್ರದೇಶ ಪರ್ವತಮಯದಾದ್ದರಿಂದ ರಸ್ತೆ ಮತ್ತು ರೈಲು ಸಾರಿಗೆ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ಆದರೆ ಇಲ್ಲಿನ ಕೈಗಾರಿಕಾ ಕೇಂದ್ರಗಳಿಗೂ ನಗರಗಳಿಗೂ ಉತ್ತಮ ಸಾರಿಗೆ ವ್ಯವಸ್ಥೆಯಿದೆ.


ಪ್ರಮುಖ ನಗರಗಳು

[ಬದಲಾಯಿಸಿ]

ನಾರ್ವೆಯ ಸೇ.75ರಷ್ಟು, ಸ್ವೀಡನ್ನಿನ ಸೇ.75 ರಷ್ಟು ಹಾಗೂ ಐಸ್‍ಲೆಂಡ್ ಹಾಗೂ ಡೆನ್ಮಾರ್ಕಿನಲ್ಲಿ ಅತಿ ಹೆಚ್ಚಿನ ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಪ್ರಮುಖ ನಗರಗಳೆಂದರೆ — ಡೆನ್ಮಾರ್ಕಿನಲ್ಲಿ ಕೋಪೆನ್‍ಹೇಗನ್ (ರಾಜಧಾನಿ), ಓಡೆನ್ಸ್, ಆಲ್‍ಬರ್ಗ್ ಮತ್ತು ರ್ಯಾಂಡರ್, ಫಿನ್‍ಲೆಂಡಿನಲ್ಲಿ ಹೆಲ್ಸಿಂಕಿ (ರಾಜಧಾನಿ), ಟ್ಯಾಂಪರ್ ಮತ್ತು ಎಸ್ಪೊ, ನಾರ್ವೆಯಲ್ಲಿ ಓಸ್ಲೋ (ರಾಜಧಾನಿ), ಬರ್ಗನ್ ಮತ್ತು ಟ್ರಾಂಡ್ರಿಯಂ, ಸ್ವೀಡನ್ನಿನಲ್ಲಿ ಸ್ಟಾಕ್‍ಹೋಮ್ (ರಾಜಧಾನಿ), ಗೋಟೆಬರ್ಗ್ ಮತ್ತು ಉಪ್‍ಸಾಲ.


Continental Scandinavian languages:
  Danish
  Norwegian
  Swedish
Insular Scandinavian languages:
  Faroese
  Icelandic

ನಾರ್ವೆಯಲ್ಲಿ ನಾರ್ವೇಜಿಯನ್, ಸ್ವೀಡನ್‍ನಲ್ಲಿ ಸ್ವೀಡಿಷ್, ಡೆನ್ಮಾರ್ಕ್‍ನಲ್ಲಿ ಡೇನಿಷ್ ಮತ್ತು ಫಿನ್‍ಲೆಂಡಿನಲ್ಲಿ ಫಿನ್ನಿಷ್ ಭಾಷೆಗಳು ಪ್ರಮುಖವಾಗಿವೆ.

ಸಾಕ್ಷರತೆ

[ಬದಲಾಯಿಸಿ]

ಡೆನ್ಮಾರ್ಕ್, ಫಿನ್‍ಲೆಂಡ್, ನಾರ್ವೆ ಮತ್ತು ಸ್ವೀಡನ್‍ಗಳಲ್ಲಿ ಸಾಕ್ಷರತಾ ಪ್ರಮಾಣ ಸೇ.100 ರಷ್ಟಿದೆ.

ಇಲ್ಲಿ ಕ್ರೈಸ್ತ ಧರ್ಮಾನುಯಾಯಿಗಳ ಸಂಖ್ಯೆಯೇ ಅಧಿಕವಾಗಿದೆ.

ಮಾನವ ಸಂಪನ್ಮೂಲ

[ಬದಲಾಯಿಸಿ]

ಈ ಪ್ರದೇಶದ ರಾಷ್ಟ್ರಗಳಲ್ಲಿ ಜನಸಂಖ್ಯೆ ಮತ್ತು ಜನಸಾಂದ್ರತೆ ಬಹಳ ಕಡಿಮೆ. ನಾರ್ವೆಯಲ್ಲಿ ಜನಸಂಖ್ಯೆ 43,99,993 (1997). ಇಡೀ ಯುರೋಪಿನಲ್ಲಿ ಅತ್ಯಂತ ಕಡೆಮೆ ಜನಸಾಂದ್ರತೆ ಇಲ್ಲಿಯದು. ಇಲ್ಲಿನ ಜನಸಾಂದ್ರತೆ ಪ್ರತಿ ಚ.ಕಿಮೀಗೆ ಕೇವಲ 11. ಸ್ವೀಡನ್ನಿನ ಜನಸಂಖ್ಯೆ 88 ಲಕ್ಷ . ಜನಸಾಂದ್ರತೆ ಚ.ಕಿಮೀಗೆ 20. ಐಸ್‍ಲೆಂಡಿನಲ್ಲಿ ಸರಾಸರಿ ಜನಸಾಂದ್ರತೆ ಚ.ಕಿಮೀಗೆ 3. ಫಿನ್‍ಲೆಂಡಿನ ಜನಸಂಖ್ಯೆ 52. ಲಕ್ಷ ಜನಸಾಂದ್ರತೆ ಚ.ಕಿಮೀಗೆ 15.

ಆಮದು ರಫ್ತು

[ಬದಲಾಯಿಸಿ]

ಡೆನ್ಮಾರ್ಕ್, ಫಿನ್‍ಲೆಂಡ್, ನಾರ್ವೆ ಮತ್ತು ಸ್ವೀಡನ್ ರಾಷ್ಟ್ರಗಳಲ್ಲಿ ಆಮದಿಗಿಂತ ರಫ್ತು ಹೆಚ್ಚು ಕಂಡುಬರುತ್ತದೆ.

ಸ್ಕ್ಯಾಂಡಿನೇವಿಯದ ನಾಗರಿಕತೆ

[ಬದಲಾಯಿಸಿ]

ಡೆನ್ಮಾರ್ಕ್, ನಾರ್ವೆ, ಸ್ವೀಡನ್ - ಈ ಮೂರು ರಾಜ್ಯಗಳಿಗೆ ಸ್ಕ್ಯಾಂಡಿನೇವಿಯ ಎಂಬ ಸಾಮಾನ್ಯ ಹೆಸರಿದೆ. ಒಮ್ಮೊಮ್ಮೆ ಈ ಹೆಸರು ನಾರ್ವೆ, ಡೆನ್ಮಾರ್ಕ್ ದೇಶಗಳಿಗೆ ಮಾತ್ರವೇ ಅನ್ವಯಿಸುವುದುಂಟು. ಮಧ್ಯಕಾಲೀನಯುಗದಲ್ಲಿ ಈ ಮೂರು ದೇಶಗಳ ಜನಸಮುದಾಯಕ್ಕೆ ನಾರ್ತ್‍ಮೆನ್ (ಉತ್ತರ ದೇಶೀಯರು) ಎಂಬ ಹೆಸರು ಪ್ರಾಪ್ತವಾಗಿತ್ತು. ಭಾಷೆ, ಜೀವನ ಕ್ರಮ, ರಾಜಕೀಯ ಸ್ಥಿತಿಗತಿಗಳು - ಇವೆಲ್ಲ ಈ ಮೂರು ದೇಶಗಳಿಗೂ ಒಂದೇ ಬಗೆಯಾಗಿದ್ದ ಕಾರಣ, ಅಲ್ಲಿಯ ಜನತೆಯೂ ಒಂದೇ ಸಮೂಹವೆಂಬ ಕಲ್ಪನೆ ಮೂಡಿತ್ತು. ಸ್ಕ್ಯಾಂಡಿನೇವಿಯ ಎಂಬ ಹೆಸರು ಈಗ ಭೌಗೋಳಿಕ ದೃಷ್ಟಿಯಿಂದ ವಿರಳವಾಗಿರುವುದಾದರೂ ಸಮೂಹಸೂಚಕವಾಗಿ ಹಾಗೂ ಸಾಹಿತ್ಯ ಚರಿತ್ರೆಯಲ್ಲಿ ಈಗಲೂ ಬಳಕೆಯಲ್ಲಿದೆ.

ಈ ಪ್ರಾಂತದ ಪುರಾತನ ಚರಿತ್ರೆಯೂ ರೂಢಿಸಂಪ್ರದಾಯಗಳೂ ನಾರ್ವೆ ಹಾಗೂ ಸ್ವೀಡನ್ ದೇಶಗಳ ದಕ್ಷಿಣಭಾಗಗಳಿಗೆ ಮತ್ತು ಡೇನಿಷ್ ದ್ವೀಪ ಹಾಗೂ ಸಿಂಬ್ರಿಯನ್ ಭೂ ಖಂಡದಲ್ಲೇ ಕೇಂದ್ರೀಕೃತವಾಗಿದ್ದುವು. ಪುರಾತನ ಕಾಲದಲ್ಲಿ ಸ್ಕ್ಯಾಂಡಿನೇವಿಯ ಪ್ರಾಂತದ ಜನರ ಭಾಷೆಗಳು, ಪುರಾಣಗಳು, ರೀತಿನೀತಿಗಳು ಒಂದೇ ಆಗಿದ್ದುವು. ಕ್ರಿಸ್ತಶಕದ ಆರಂಭ ದಲ್ಲೂ ಇವರು ಪ್ರತ್ಯೇಕ ಗುಂಪಾಗಿ ತಲೆಯೆತ್ತಿರಲಿಲ್ಲ. ಸು. 8ನೆಯ ಶತಮಾನದ ಕಾಲಕ್ಕೆ ಈ ಮೂರು ರಾಜ್ಯಗಳು ಭಿನ್ನ ಭಿನ್ನ ರಾಜ್ಯಲಕ್ಷಣ ಪಡೆದು ಯುರೋಪಿನ ಇತಿಹಾಸದಲ್ಲಿ ಪ್ರತ್ಯೇಕ ಸ್ಥಾನ ಪಡೆದುಕೊಳ್ಳ ತೊಡಗಿದುವು. ಆದರೆ 11-12ನೆಯ ಶತಮಾನಗಳತನಕವೂ ಅವುಗಳ ಭಾಷೆಗಳಲ್ಲಿ ವ್ಯತ್ಯಾಸವಿರಲಿಲ್ಲ. ಆಮೇಲೆ ಕ್ರಮೇಣ ಆ ದೇಶಗಳ ರೀತಿನೀತಿಗಳು ಪಲ್ಲಟವಾದುವು. ಭಾಷೆಗಳಲ್ಲೂ ಅಷ್ಟಿಷ್ಟು ಮಾರ್ಪಾಡು ಗಳು ತಲೆದೋರಿ ನಾರ್ವೇಜಿಯನ್, ಸ್ವೀಡಿಷ್, ಡೇನಿಷ್ ಭಾಷೆಗಳು ತಲೆಯೆತ್ತತೊಡಗಿದುವು. ಆದರೆ ಈ ಮೂರು ದೇಶಗಳ ಜನರು ಪರಸ್ಪರರ ಭಾಷೆಗಳನ್ನು ಇಂದಿಗೂ ತಿಳಿಯಬಲ್ಲವರಾಗಿದ್ದಾರೆ.

ನಾಗರಿಕತೆಯ ಅರಂಭ

[ಬದಲಾಯಿಸಿ]

ಸ್ಕ್ಯಾಂಡಿನೇವಿಯದಲ್ಲಿ ಮಾನವನ ಜೀವನ ಯಾವಾಗ ಆರಂಭವಾ ಯಿತು ಎಂಬ ವಿಚಾರವಾಗಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಹಿಮಯುಗ ಕಳೆಯುವ ಮುಂಚೆ ಅಲ್ಲಿಗೆ ಮಾನವನ ಪ್ರವೇಶವಾಗಿರಲಿಲ್ಲವೆಂಬುದಂತೂ ಖಚಿತ. ಕ್ರಿ.ಪೂ. ಸು.10,000 - 6,000 ಅವಧಿಯಲ್ಲಿ ಮಾನವ ಈ ಪ್ರದೇಶಕ್ಕೆ ಕಾಲಿಟ್ಟಿರಬೇಕೆಂದು ಈಗಿನ ಊಹೆ.

ಎಪಿಪ್ಯಾಲಿಯೋಗ್ರಾಫಿಕ್ ಯುಗ

[ಬದಲಾಯಿಸಿ]

ಸ್ಕ್ಯಾಂಡಿನೇವಿಯದ ಆದ್ಯ ನಾಗರಿಕತೆ ಎಪಿಪ್ಯಾಲಿಯೋಗ್ರಾಫಿಕ್ ಯುಗದಿಂದ ಆರಂಭವಾಗುತ್ತದೆ. ಈ ಯುಗದಲ್ಲಿ ಎರಡು ಹಂತಗಳಿವೆ. ಮೊದಲನೆಯದು ಮಾಗ್ಲೆಮೋಸ್ ಕಾಲ, ಎರಡನೆಯದು ಎರ್ಟೆಬೊಲ್ಲಿ ಕಾಲ. ಮಾಗ್ಲೆಮೋಸ್ ಕಾಲವು ಬಾಲ್ಟಿಕ್ ಸಮುದ್ರ ತೀರದಲ್ಲಿ ಬೆಸ್ತರು ಮಾತ್ರವೇ ವಾಸವಾಗಿದ್ದ ಕಾಲ. ಆಗ ಬಾಲ್ಟಿಕ್ ಸಮುದ್ರ ಸಿಹಿನೀರಿನ ಸರೋವರವಾಗಿತ್ತು. (ಭೂಗರ್ಭವಿe್ಞÁನಿಗಳು ಇದಕ್ಕೆ ಅನ್ಸಿಲಸ್ ಸರೋವರ ಎಂದು ಹೆಸರು ನೀಡಿದ್ದಾರೆ). ಈ ಕಾಲಕ್ಕೆ ಸೇರಿದ ಮೂಳೆ, ಕೊಂಬು ಮತ್ತು ಕಲ್ಲಿನ ಉಪಕರಣಗಳು ಸಿಕ್ಕಿವೆ. ಇವುಗಳಲ್ಲಿ ಮುಳ್ಳುಮುಳ್ಳಾದ ಭರ್ಜಿಯೂ ಒಂದು. ಇದಕ್ಕೆ ಟ್ರಾಂಚೆಟ್ ಎಂದು ಹೆಸರು. ಆಗ ಕುಂಭಕಲೆ ಪರಿಚಿತವಾಗಿರಲಿಲ್ಲ. ಎರ್ಟೆಬೊಲ್ಲಿ ಕಾಲದಲ್ಲಿ ಸಮುದ್ರ ಉಕ್ಕಿ ಬಾಲ್ಟಿಕ್ ಸಮುದ್ರಕ್ಕೆ ಹರಿದು ಬಂತೆಂದೂ ಈ ಸ್ಥಿತಿಗೆ ಬಂದ ಬಾಲ್ಟಿಕ್ ಸಮುದ್ರಕ್ಕೆ ಭೂಗರ್ಭಶಾಸ್ತ್ರಜ್ಞರು ಲಿಟ್ಟೊರಿನಾ ಸಮುದ್ರ ಎಂದೂ ನಾಮಕರಣ ಮಾಡಿದ್ದಾರೆ. ಈ ಯುಗದ ಅವಶೇಷ ಗಳು ಮುಖ್ಯವಾಗಿ ಕಸಕುಪ್ಪೆಗಳ ರೂಪದಲ್ಲಿದ್ದುವು. ಮೂಳೆ, ಕೊಂಬು ಮುಂತಾದ ಸಾಮಗ್ರಿಗಳು ಈ ಕಾಲದಲ್ಲೂ ಬಳಕೆಯಲ್ಲಿದ್ದುವು. ಬಾಚಣಿಗೆಯ ಉಪಯೋಗ ಈ ಜನರಿಗೆ ತಿಳಿದಿತ್ತೆಂದು ತೋರುತ್ತದೆ. ಬೆಂಕಿಯ (ಚಕಮಕಿ) ಉಪಯೋಗ ಕೂಡ ಇವರಿಗೆ ತಿಳಿದಿತ್ತು. ಈ ಯುಗದಲ್ಲಿ ಕುಂಭಕಲೆಯಲ್ಲೂ ಜನ ನುರಿತಿದ್ದರು. ಅಗಲಬಾಯಿಯ ಉಬ್ಬುಹೊಟ್ಟೆಯ ಮಣ್ಣಿನ ಪಾತ್ರೆ ಆಗ ಸರ್ವಸಾಮಾನ್ಯವಾಗಿತ್ತು. ನಾರ್ವೆ, ಸ್ವೀಡನ್ ದೇಶಗಳಲ್ಲೂ ಈ ಬಗೆಯ ಜನವಸತಿಗಳಿದ್ದರ ಬಹುದಾದರೂ ಅವುಗಳ ಬಗೆಗೆ ಈ ತನಕ ತಿಳಿದು ಬಂದ ವಿವರಗಳು ಕಡಿಮೆ. ನಾರ್ವೆದೇಶದ ನಾಸ್ಟ್‍ವೆಟ್ ಎಂಬಲ್ಲಿಯೂ ಸ್ವೀಡನಿನ ಲಿಮ್‍ಹ್ಯಾಮ್ನ್ ಎಂಬಲ್ಲಿಯೂ ದೊರೆತ ಅವಶೇಷಗಳು ಎರ್ಟೆಬೊಲ್ಲಿ ಕಾಲಕ್ಕೇ ಸೇರಿದ್ದಿರಬಹುದೆಂದು ಊಹಿಸಲಾಗಿದೆ. ನಾಯಿಯೊಂದೇ ಈ ಕಾಲದ ಸಾಕು ಪ್ರಾಣಿ. ಕೃಷಿಯ ಪರಿಚಯ ಈ ಜನರಿಗೆ ಇರಲಿಲ್ಲ.

ನವ ಶಿಲಾಯುಗ

[ಬದಲಾಯಿಸಿ]

ನಾರ್ವೆ ಮತ್ತು ಸ್ವೀಡನ್ ದೇಶಗಳಲ್ಲಿ ನವ ಶಿಲಾಯುಗದ ಕುರಿತಾಗಿ ತಿಳಿದು ಬಂದಿರುವ ಅಂಶಗಳು ಅಂದಿನ ಶವಸಮಾಧಿ ರೂಢಿಗಳ ಪರಿಶೀಲನೆಯಿಂದ ಲಭಿಸಿದವುಗಳಾಗಿವೆ. ಅಂದಿನ ವಾಸದ ಮನೆಗಳು ಸಾದಾ ರೀತಿಯ ಮಣ್ಣಿನ ಮನೆಗಳಾಗಿದ್ದುವು. ಅವುಗಳಲ್ಲಿ ಪ್ರಾಣಿಗಳ ಮೂಳೆಗಳ ಹೊರತು ಬೇರೇನೂ ದೊರೆತಿಲ್ಲ. ಪ್ರಸಿದ್ಧ ಗೋರಿಗಳೆಲ್ಲ ಬೃಹತ್ ಶಿಲಾ ಸಮಾಧಿಗಳು. ಇವುಗಳಲ್ಲಿ 2,3,4ನೆಯ ಮೊಂಟೇಲಿಯಸ್ ಅವಧಿಗಳಿಗೆ ಸಂಬಂಧಿಸಿದ ಮೂರು ಬಗೆಯ ಸಮಾಧಿಗಳು ಕಂಡು ಬರುತ್ತವೆ. ಡಾಲ್ಮೆನ್ ಎಂಬ ಸಮಾಧಿ ಆ ಕಾಲದ ಆದ್ಯಪ್ರಕಾರದ ಗೋರಿ. ಇದು ಕೋಣೆಯ ರೂಪದಲ್ಲಿದೆ. ಇದರ ಸುತ್ತಲೂ ದೊರಗಾದ ಮೂರು ನಾಲ್ಕು ಕಲ್ಲುಕಂಬಗಳು ನಿಂತಿವೆ; ಛಾವಣಿಗೆ ಕಲ್ಲು ಚಪ್ಪಡಿ ಹೊದಿಸಲಾಗಿದೆ. ಛಾವಣಿ ಮೇಲ್ಗಡೆ ದಿಬ್ಬ ಕಟ್ಟಿರುವುದೂ ಇದೆ. ಈ ಬಗೆಯ ಸಮಾಧಿಗಳೊಳಗೆ ಆಕಾರ ಕೆಡದ ಶವಗಳು ದೊರಕಿವೆ. ಶವಕುಣಿಗಳಲ್ಲಿ ಹೆಚ್ಚಿನ ಅಲಂಕಾರ ವಸ್ತುಗಳೇನೂ ದೊರಕಿಲ್ಲ. ಚಕಮಕಿ ಕಲ್ಲಿನ ಕೆಲವು ಚೂಪು ಕೊಡಲಿಗಳೂ ಅವುಗಳ ಜೊತೆಗೆ ಅಲಂಕೃತ ಕುಂಭಗಳೂ ಹೂಜಿಗಳೂ ದೊರೆತಿವೆ. ಮೂರನೆಯ ಮೊಂಟೇಲಿಯಸ್ ಯುಗದಲ್ಲಿ ವೇಶ್ಮ ಸಮಾಧಿಗಳು ಬಳಕೆಗೆ ಬಂದುವು. ಇವುಗಳ ರಚನೆ ದೊಡ್ಡದು. ವೇಶ್ಮ ಸಮಾಧಿ ದೊಡ್ಡದೊಂದು ಕಲ್ಲಿನ ಕೋಣೆ. ಇದಕ್ಕೆ ಕಲ್ಲಿನ ಗೋಡೆ ಹಾಗೂ ಛಾವಣಿಯಿಂದ ಆವೃತವಾದ ಪ್ರವೇಶ ಮಾರ್ಗವಿರುತ್ತದೆ. ಸ್ವೀಡನ್ ದೇಶದಲ್ಲಿ ದೊರೆತಿರುವ ಇಂಥದೊಂದು ಸಮಾಧಿಯ ಉದ್ದ 9.75ಮೀ, ಅಗಲ 2.7ಮೀ. ಈ ಬಗೆಯ ದೊಡ್ಡ ದೊಡ್ಡ ಸಮಾಧಿಗಳಲ್ಲಿ, ಕೆಲವೊಮ್ಮೆ ಅಸ್ಥಿಪಂಜರಗಳೂ ಸುಡದ ಬೇರೆ ಬೇರೆ ಸಾಮಗ್ರಿಗಳೂ ಕಂಡುಬಂದಿವೆ. ಮುಖ್ಯವಾಗಿ ದಪ್ಪನೆಯ ಚೂಪಾದ ಕೊಡಲಿಗಳು, ತೂತು ಕೊರೆದಿರುವ ಕಲ್ಲಿನ ಕೊಡಲಿಗಳೂ ಬಾಣಗಳೂ ಚಕಮಕಿ ಕಲ್ಲಿನ ಕಠಾರಿಗಳೂ ಮಣಿಗಳೂ ತ್ರಿಕೋಣಾಕೃತಿಯ ಇಲ್ಲವೆ ವೃತ್ತಾಕೃತಿಯ ತಳವುಳ್ಳ ಪಾತ್ರೆಗಳೂ ಹೇರಳವಾಗಿ ದೊರಕಿವೆ. ಈ ಕಾಲದಲ್ಲಿ ವ್ಯಾಪಾರಿವರ್ಗವೂ ಕೃಷಿಕ ಸಮಾಜವೂ ಸುವ್ಯವಸ್ಥಿತ ರೀತಿಯಲ್ಲಿ ಏಳಿಗೆಗೆ ಬಂದಂತೆ ತೋರುವುದು. ಕುದುರೆ, ಕುರಿ, ಹಂದಿ, ಹಸು, ನಾಯಿ ಮೊದಲಾದ ಸಾಕುಪ್ರಾಣಿವರ್ಗದ ಅವಶೇಷಗಳು ಈ ಸಮಾಧಿ ನೆಲೆಗಳಲ್ಲಿ ದೊರೆತಿವೆ. ಬಾರ್ಲಿ, ಗೋದಿ ಮೊದಲಾದ ಬೆಳೆಗಳ ಕೃಷಿ ಆಗ ವಿಪುಲವಾಗಿತ್ತು. ಬೀಕರ್ ಯುಗದಲ್ಲಿ ಸ್ಕ್ಯಾಂಡಿನೇವಿ ಯದಲ್ಲಿ ನಿರ್ಮಿತವಾದ ಕೊಡಲಿ, ಕಠಾರಿ ಮೊದಲಾದ ಆಯುಧಗಳು ಬ್ರಿಟನಿನಲ್ಲೂ ಬಾಲ್ಟಿಕ್ ಮಣಿಖಚಿತ ಹಾರಗಳು ಮಧ್ಯ ಯುರೋಪಿನಲ್ಲೂ ಬ್ರಿಟನ್ ಹಾಗೂ ಮಧ್ಯ ಯುರೋಪಿನ ಸಾಮಗ್ರಿಗಳು ಸ್ಕ್ಯಾಂಡಿನೇವಿಯ ದಲ್ಲೂ ದೊರೆತಿರುವುದರಿಂದ, ಆ ಕಾಲದಲ್ಲಿ ಸ್ಕ್ಯಾಂಡಿನೇವಿಯದ ವ್ಯಾಪಾರ ವಾಣಿಜ್ಯಗಳು ಸಮೃದ್ಧವಾಗಿದ್ದುವೆಂದು ಊಹಿಸಬಹುದಾಗಿದೆ. ಈ ಸಮಾಧಿವೇಶ್ಮಗಳು ಮೊದಮೊದಲು ಸ್ವೀಡನ್, ಡೆನ್ಮಾರ್ಕ್ ದೇಶಗಳ ತೀರಪ್ರದೇಶಗಳಲ್ಲಿ ಎಲ್ಲೆಲ್ಲೂ ಹರಡಿಕೊಂಡಿದ್ದು ದೀರ್ಘ ಶಿಲಾ ವೇಷ್ಟನ ಯುಗದಲ್ಲಿ ನಾರ್ವೆ ದೇಶಕ್ಕೂ ಸ್ವೀಡನ್ ದೇಶದ ಒಳನಾಡಿಗೂ ಬಂದುವು. ಈ ಬಗೆಯ ವಿಶಾಲ ವೇಶ್ಮ ಸಮಾಧಿಗಳ ಜತೆಗೆ, ಒಂದೊಂದು ಶವವನ್ನು ಪ್ರತ್ಯೇಕ ಸಮಾಧಿಯಲ್ಲಿ ಹೂಳುವ ರೂಢಿ ಜಟ್‍ಲೆಂಡ್, ದಕ್ಷಿಣ ಸ್ವೀಡನ್ ಹಾಗೂ ಕೆಲವಾರು ಡೆನ್ಮಾರ್ಕ್ ದ್ವೀಪಗಳಲ್ಲೂ ಬಳಕೆಗೆ ಬಂತು. ಇವುಗಳಲ್ಲಿ ಹಲವು ಸಮಾಧಿಗಳಿಗೆ ಒಂದೇ ದಿನ್ನೆಯ ಆವರಣವಿತ್ತು. ಅವುಗಳ ಎತ್ತರ ಬೇರೆ ಬೇರೆಯಾಗಿತ್ತು. ಇಂಥ ಸಮಾಧಿಗಳಲ್ಲಿ ಕೆಲವು ನೆಲದಡಿಯಲ್ಲಿದ್ದರೆ, ಇನ್ನು ಕೆಲವು ನೆಲದ ಮಟ್ಟದಲ್ಲೇ ಇರುತ್ತವೆ; ಮತ್ತೆ ಕೆಲವು ದಿಣ್ಣೆಯೊಳಗಡೆಯೇ ಇರುತ್ತವೆ. ಈ ಸಮಾಧಿಗಳಲ್ಲಿ ಹೂಜಿಗಳು, ಕುಸುರಿಕೆಲಸದ ತೂತು ಕೊಡಲಿ ಮೊದಲಾದ ವಸ್ತುಗಳು ಕಂಡುಬಂದಿವೆ. ಈ ಬಗೆಯ ಕೊಡಲಿಗಳೂ ಕುಂಭಗಳೂ ಯುರೋಪಿನಲ್ಲಿ ಎಲ್ಲೂ ಕಂಡುಬಂದಿಲ್ಲ. ಈ ಕಾಲದಲ್ಲಿ ಸ್ಕ್ಯಾಂಡಿನೇವಿಯ ಪ್ರಾಂತಕ್ಕೆ ಬೇರೊಂದು ಸಮೂಹದ ಪ್ರವೇಶವಾಗಿದ್ದಿರ ಬೇಕೆಂದೂ ಕೊನೆಗೆ ಆ ಸಮೂಹ ಬೃಹತ್ ಶಿಲಾವೇಶ್ಮ ನಿರ್ಮಾಪಕ ರೊಡನೆ ಬೆರೆತು ಹೋಗಿದ್ದಿರಬೇಕೆಂದೂ ವಿದ್ವಾಂಸರು ಊಹಿಸಿದ್ದಾರೆ. ಏಕೆಂದರೆ ದೀರ್ಘ ಶಿಲಾವೇಷ್ಟನ ಯುಗದಲ್ಲಿ ಬೃಹತ್ ಶಿಲಾಸಮಾಧಿಗಳ ಉಪಸ್ತರಗಳಿಗೂ ಪ್ರತ್ಯೇಕ ಸಮಾಧಿಗಳಲ್ಲಿರುವ ಸಾಮಗ್ರಿಗಳಿಗೂ ರೂಪರಚನೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಸ್ಕ್ಯಾಂಡಿನೇವಿಯದ ನವ ಶಿಲಾಯುಗವನ್ನು ಕೂಲಂಕಷ ಪರಿಶೀಲನೆ ಮಾಡಿದ ಗಾರ್ಡನ್ ಚೈಲ್ಡ್ ಎಂಬ ಸಂಶೋಧಕ ನವ ಶಿಲಾಯುಗಕ್ಕೂ ಕಂಚುಯುಗಕ್ಕೂ ಈ ಮುಂದಿನಂತೆ ಕಾಲ ನಿರ್ಣಯ ಮಾಡಿದ್ದಾರೆ. ಡಾಲ್ಮೆನ್ ಕಾಲಾವಧಿ (ಮೊಂಟೇಲಿಯಸ್ ಕಾಲಾವಧಿ 11) ಕ್ರಿ.ಪೂ. 2500-2200; ಪ್ರವೇಶ ಮಾರ್ಗ ಸಮನ್ವಿತ ಸಮಾಧಿ ಕಾಲ (ಮೊಂಟೇಲಿಯಸ್ ಕಾಲಾವಧಿ 111) ಕ್ರಿ.ಪೂ. 2200-1650; ದೀರ್ಘ ಶಿಲಾವೇಷ್ಟನ ಕಾಲಾವಧಿ (ಮೊಂಟೇಲಿಯಸ್ ಕಾಲಾವಧಿ) ಕ್ರಿ.ಪೂ. 1650-1500. ಈ ಕೊನೆಯ ಕಾಲಾವಧಿಗೆ ಸಂಬಂಧಪಟ್ಟ ಹಿತ್ತಾಳೆ ಹಾಗೂ ಕಂಚಿನ ಸೂಜಿಗಳೂ ಚಿನ್ನದ ಕಿವಿಯೋಲೆಗಳೂ ಸಿಕ್ಕಿರುವುದ ರಿಂದ ಇವು ಕಂಚುಯುಗದವು ಎಂದು ಭಾವಿಸಬಹುದು.

ಕಂಚಿನ ಯುಗ

[ಬದಲಾಯಿಸಿ]

ಸ್ಕ್ಯಾಂಡಿನೇವಿಯ ಕಂಚಿನ ಲೋಹಕ್ಕೆ ಪರದೇಶಗಳನ್ನೇ ಅವಲಂಬಿಸ ಬೇಕಾಗಿತ್ತೆಂದೂ ಸ್ಥಳೀಯವಾಗಿ ದೊರೆಯುತ್ತಿರಲಿಲ್ಲವೆಂದೂ ತೋರುತ್ತದೆ. ಪ್ರಾಯಃ ಆ ಕಾರಣದಿಂದಲೇ ಇರಬೇಕು ಸ್ಕ್ಯಾಂಡಿನೇವಿಯ ದಲ್ಲಿ ಕಂಚುಯುಗ ವಿಳಂಬವಾಗಿ ಪ್ರಾರಂಭವಾಯಿತು. ಕ್ರಿಸ್ತಶಕದ ಆದಿಯ ತನಕವೂ ಈ ಯುಗ ಮುಂದುವರಿಯಿತು. ಈ ಕಾಲದ ಜೀವನಪದ್ಧತಿಯ ವಿವರಗಳನ್ನೂ ಶವಸಮಾಧಿ ರೂಢಿಗಳಿಂದಲೇ ತಿಳಿಯಬೇಕಾಗಿದೆ. ಆಗಿನ ವಸತಿ ವ್ಯವಸ್ಥೆಯನ್ನು ಕುರಿತು ನಮಗೆ ತಿಳಿದು ಬಂದಿರುವ ಅಂಶಗಳು ಕಡಮೆ. ಸ್ಕ್ಯಾಂಡಿನೇವಿಯದ ಕಂಚುಯುಗವನ್ನು ಮೊಂಟೇಲಿಯಸ್ ಮಹಾಶಯ ಆದಿಕಾಲ, ಉತ್ತರ ಕಾಲ ಎಂದು ಸ್ಥೂಲವಾಗಿ ವಿಂಗಡಿಸಿ, ಎರಡರಲ್ಲೂ ಮೂರು ಮೂರು ಉಪವಿಭಾಗಗಳನ್ನು ಕಲ್ಪಿಸಿದ್ದಾನೆ. ಆದಿಕಾಲ ಕ್ರಿ.ಪೂ.100 ರ ತನಕವೂ ಮುಂದುವರಿಯಿತು. ಅಲ್ಲಿಂದ ಪ್ರಾರಂಭವಾದ ಉತ್ತರಕಾಲ ಕ್ರಿಸ್ತಶಕಕ್ಕೆ ಒಂದೆರಡು ಶತಮಾನ ಹಿಂದಿನತಕವೂ ನಡೆದುಬಂತು.


ಆದಿ ಕಾಲದ ಕಂಚುಯುಗ

[ಬದಲಾಯಿಸಿ]

ಆದಿಕಾಲದ ಕಂಚುಯುಗದ ಆಯುಧೋಪಕರಣಗಳೆಲ್ಲ ಸಾಮಾನ್ಯವಾಗಿ ಒಂದೇ ಬಗೆಯಾಗಿದ್ದುವು. ಸಾದಾ ರೀತಿಯ ಚಪ್ಪಟೆ ಕೊಡಲಿ, ಪುಟ್ಟ ಚಾಕು-ಇವೆರಡು ಉಪಕರಣಗಳು ಎಲ್ಲ ಕಡೆಯಲ್ಲೂ ಬಳಕೆಯಲ್ಲಿದ್ದುವು. ಪ್ರಾಯಃ ಈ ಕಾಲದಲ್ಲಿ ಲೋಹಕ್ಕಿಂತ ಕಲ್ಲಿಗೇ ಹೆಚ್ಚಿನ ಪ್ರಾಧಾನ್ಯವಿದ್ದಿರಬೇಕು. ಕರಕುಶಲಕಲೆಯಲ್ಲಿ ಸ್ಕ್ಯಾಂಡಿನೇವಿಯದ ಜನ ಸಿದ್ಧಹಸ್ತರಾಗಿದ್ದರು. ಈ ಕಾಲದಲ್ಲಿ ಕಂಚಿನ ಆಭರಣಗಳೂ ಆಯುಧಗಳೂ ಹೇರಳವಾಗಿ ತಯಾರಾದುವು. ಇಷ್ಟೊಂದು ಚೆಲುವಾದ ಆಭರಣಗಳೂ ಆಯುಧಗಳೂ ಉತ್ತರ ಯುರೋಪಿನಲ್ಲಿ ಬೇರೆಲ್ಲೂ ಕಂಡುಬಂದಿಲ್ಲ. ಇವನ್ನು ತಯಾರಿ ಸಲು ಬಳಸಿದ ಎರಕ ಅಚ್ಚುಗಳು ಸಿಕ್ಕಿವೆ; ಇವುಗಳ ಕುಸುರಿ ಕೆಲಸಕ್ಕೂ ಬೇರೆ ದೇಶಗಳ ಆಭರಣಾದಿಗಳ ರೀತಿಗೂ ತುಂಬ ವ್ಯತ್ಯಾಸ ಕಂಡುಬರುತ್ತದೆ. ಆದ್ದರಿಂದ ಇವು ಸ್ಥಳೀಯ ರಚನೆಗಳೆಂಬುದರಲ್ಲಿ ಸಂಶಯವಿಲ್ಲ. ಮಧ್ಯ ಕಂಚುಯುಗದಲ್ಲಿ, ಯುರೋಪಿನಲ್ಲಿ ಸರ್ವಸಾಮಾನ್ಯವಾಗಿದ್ದ ಚಿಲ್ಲಾಣಗಳು(ಕತ್ತಿ) ಸ್ಕ್ಯಾಂಡಿನೇವಿಯದಲ್ಲಿ ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ. ಬ್ರಿಟನ್ ಮೊದಲಾದ ದೇಶಗಳಲ್ಲಿದ್ದ ದೊಡ್ಡ ಎಲೆಯಾಕಾರದ ಖಡ್ಗ ಸ್ಕ್ಯಾಂಡಿನೇವಿಯಕ್ಕೆ ಸು.1000ಕ್ಕೆ ಮೊದಲೇ ಬಂದಿದ್ದಿತು. ಈ ಬಗೆಯ ಖಡ್ಗಕ್ಕೆ ಇಟಲಿ ದೇಶದಲ್ಲಿದ್ದ ಕಂಚಿನ ಹಿಡಿಕೆಯ ಖಡ್ಗ ಮೂಲವಾಗಿದ್ದಿರಬೇಕೆಂದು ಕೆಲವರ ಅಭಿಪ್ರಾಯ. ಅದು ಹಂಗರಿಯಿಂದ ಬಂದುದೆಂದು ಇನ್ನು ಕೆಲವರ ಊಹೆ. ವೃತ್ತಾಕಾರದ ಗುರಾಣಿಯೊಂದೇ ಅಂದಿನ ರಕ್ಷಣಾಯುಧ. ಆ ಕಾಲದಲ್ಲಿ ಕೊಂಬಿನ ಶಿರಸ್ತ್ರಾಣಗಳೂ ಬಳಕೆಯಲ್ಲಿದ್ದುವೆಂದು ಕೆಲವರ ಅಭಿಮತ. ಕಂಚಿನ ಆಭರಣಗಳ ಜೊತೆಗೆ ಅಲ್ಲಲ್ಲಿ ಚಿನ್ನದ ಆಭರಣಗಳೂ ಕಂಡುಬಂದಿವೆ. ಅವುಗಳಲ್ಲಿ ಉಂಗುರ, ಕಡಗ, ಸೊಂಟಪಟ್ಟಿಯಲ್ಲಿ ಧರಿಸುವ ತ್ರಿಕೋಣಾಕಾರದ ಆಭರಣಗಳು ಮುಖ್ಯವಾದವು. ಕುಸುರಿ ಕೆಲಸದಿಂದ ಕೂಡಿದ ಈ ಬಗೆಯ ಆಭರಣಗಳನ್ನು ತಯಾರಿಸಲು ಈ ಜನ ವಿಶಿಷ್ಟ ಉಪಕರಣಗಳನ್ನು ಬಳಸಿಕೊಂಡಿರಬೇಕೆಂದು ಊಹಿಸಲು ಅವಕಾಶವಿದೆ. ಇಂಥ ನಿಕ್ಷೇಪಗಳು ಸ್ಕ್ಯಾಂಡಿನೇವಿಯದ ಅನೇಕ ಕಡೆ ಕಂಡುಬಂದಿವೆ.

ಈ ಕಾಲದಲ್ಲಿ ಶವಸುಡುವ ಪದ್ಧತಿ ರೂಢಿಯಲ್ಲಿರಲಿಲ್ಲ; ಶವವನ್ನು ಶವ ಪೆಟ್ಟಿಗೆಗಳಲ್ಲಿಟ್ಟು ಸಮಾಧಿ ಮಾಡಲಾಗುತ್ತಿತ್ತು. ಇವನ್ನು ಕಲ್ಲಿನಲ್ಲಿ ಅಥವಾ ಮರದಲ್ಲಿ ಮಾಡಿರುತ್ತಿದ್ದರು. ಈ ಸಮಾಧಿಕ್ರಮದಿಂದ ಅಂದಿನ ವೇಷಭೂಷಣಗಳ ಪರಿಚಯ ದೊರಕುತ್ತದೆ. ಡೆನ್ಮಾರ್ಕಿನಲ್ಲಿ ಕಂಡುಬಂದ ಇಂಥದೊಂದು ಪೆಟ್ಟಿಗೆಯಲ್ಲಿ ಪುರುಷನ ಅಸ್ಥಿಪಂಜರದ ಜೊತೆಗೆ ಉಣ್ಣೆಯ ಉದ್ದ ಟೋಪಿ, ದೊಡ್ಡದೊಂದು ಅಂಗವಸ್ತ್ರ, ಒಂದು ಗಿಡ್ಡ ಅಂಗಿ, ಚಿಂದಿ ಕಾಲುಚೀಲ, ಅಳಿದುಳಿದ ತೊಗಲಿನ ಪಾದರಕ್ಷೆಗಳು ಕಂಡುಬಂದಿವೆ. ಅಂಗವಸ್ತ್ರದ ಒಳಭಾಗಕ್ಕೂ ಉಣ್ಣೆಯ ಸೊಂಟಪಟ್ಟಿಗೂ ಅಂಚುಪಟ್ಟಿಗಳಿದ್ದುವು. ಉಣ್ಣೆಯ ಶಾಲನ್ನು ತಲೆದಿಂಬಾಗಿ ಅಳವಡಿಸಲಾಗಿತ್ತು. ದೇಹದ ಎಡಪಕ್ಕದಲ್ಲಿ, ಒರೆಯೊಳಗಿಟ್ಟ ಖಡ್ಗವಿತ್ತು; ಕಾಲಬಳಿ ದೊಡ್ಡದೊಂದು ಪೆಟ್ಟಿಗೆ, ಅದರೊಳಗೆ ಇನ್ನೊಂದು ಪೆಟ್ಟಿಗೆ ಇದ್ದುವು. ಒಳ ಪೆಟ್ಟಿಗೆಯಲ್ಲಿ ಇನ್ನೊಂದು ಟೋಪಿಯೂ ಕೊಂಬಿನ ಬಾಚಣಿಗೆಯೂ ಕಂಚಿನ ಕ್ಷೌರಕತ್ತಿಯೂ ಇದ್ದುವು. ಸಮಾಧಿಯೊಳಗೆ ಹೂತಿಟ್ಟ ಈ ಎಲ್ಲ ವಸ್ತುಗಳನ್ನು ಚರ್ಮದಲ್ಲಿ ಸುತ್ತಿಡಲಾಗಿತ್ತು. ಆರ್ಹಸ್ ಎಂಬ ಸ್ಥಳದ ಬಳಿ, ಬೋರಮ್-ಏಷಾಯ್ ಎಂಬಲ್ಲಿ ಇಂತಹದೇ ಇನ್ನೊಂದು ಸಮಾಧಿಯಿದೆ. ಮರದ ಪೆಟ್ಟಿಗೆಯಲ್ಲಿರುವ ಆ ಶವ ಸ್ತ್ರೀಯೊಬ್ಬಳದು. ಶವದ ಮೈಮೇಲೆ ದೀರ್ಘವಾದ ಉಣ್ಣೆಯ ಒಳ ಉಡುಗೆ, ತೋಳಿನ ಕುಪ್ಪಸ, ಬಲೆಬಲೆಯಾದ ಉಣ್ಣೆದಾರದ ಟೋಪಿ, ಕುಚ್ಚು ಕಟ್ಟಿದ ಉಣ್ಣೆಯ ಸೊಂಟಪಟ್ಟಿ, ನೇಯ್ದ ಉಣ್ಣೆಯ ದೊಡ್ಡದೊಂದು ಅಂಗವಸ್ತ್ರ- ಇವು ಕಂಡುಬಂದಿವೆ. ಸಮಾಧಿಯಲ್ಲಿ ಇನ್ನೊಂದು ಟೋಪಿ, ಪದಕ, ಕೊಂಬಿನ ಬಾಚಣಿಗೆ, ಉಂಗುರ, ಎರಡು ಬಳೆ, ಕೊಂಬಿನ ಹಿಡಿಕೆಯುಳ್ಳ ಕಂಚಿನ ಖಡ್ಗ - ಈ ವಸ್ತುಗಳು ದೊರಕಿವೆ.


ಉತ್ತರ ಕಂಚುಯುಗ

[ಬದಲಾಯಿಸಿ]

ಈ ಯುಗದಲ್ಲಿ ಶವದಹನ ಪದ್ಧತಿ ಸರ್ವೇಸಾಮಾನ್ಯವಾಗಿತ್ತು. ಸುಟ್ಟ ಮೂಳೆಗಳನ್ನು ಮೊದಲು ಚಿಕ್ಕ ಪೆಟ್ಟಿಗೆಯಲ್ಲಿರಿಸುತ್ತಿದ್ದರು. ತರುವಾಯ ಅವುಗಳನ್ನು ಮಡಕೆಗೆ ಹಾಕಿ ಮಡಕೆಗಳನ್ನು ಪೆಟ್ಟಿಗೆಯಲ್ಲಿರಿಸುತ್ತಿದ್ದರು. ಕೆಲವೊಮ್ಮೆ ಮೂಳೆಗಳನ್ನು ಬರಿಯ ನೆಲದಲ್ಲಿರಿಸಿ, ಅವುಗಳಿಗೆ ಕಲ್ಲಿನ ಛಾವಣಿ ಹಾಕುತ್ತಿದ್ದರು. ಈ ಮಡಕೆ ಪಾತ್ರೆಗಳು ಸಾಮಾನ್ಯವಾಗಿ ಹೂಜಿ ಇಲ್ಲವೆ ಬೋಗುಣಿಯ ಆಕಾರದಲ್ಲಿದ್ದುವು. ಇವುಗಳಿಗೆ ಕೆಲವೊಮ್ಮೆ ಹಿಡಿಕೆಗಳೂ ಇದ್ದುವು. ಸಮಾಧಿಗಳಲ್ಲಿ ಆಯುಧಗಳನ್ನು ಇರಿಸುವ ರೂಢಿ ವಿರಳವಾಗಿತ್ತು. ಆಯುಧಗಳು ಸಾಮಾನ್ಯವಾಗಿ ಹಿಂದಿನ ಯುಗದ ಆಯುಧಗಳಂತೆಯೇ ಇದ್ದುವು. ಕ್ರಮೇಣ ಹೊಸ ಬಗೆಯ ಅಲಂಕಾರದ ಕ್ರಮ ಬಳಕೆಗೆ ಬಂತು; ನವೀನ ರೀತಿಯ ಆಭರಣಗಳೂ ಗೃಹಕೃತ್ಯದ ಸಾಮಗ್ರಿಗಳೂ ತಯಾರಾದುವು. ಅಂದಚಂದದ ವಿವಿಧ ಕಂಚಿನ ಪಾತ್ರೆಗಳು, ವಿವಿಧ ಆಕಾರದ ಚಾಕುಗಳು, ನಾನಾ ಬಗೆಯ ತೊಡುಗೆಗಳೂ ಬಳಕೆಗೆ ಬರತೊಡಗಿದುವು. ಈ ಸಾಮಗ್ರಿಗಳ ಮೇಲೆ ಕೆತ್ತನೆಗಳಿವೆ. ಕೆಲವು ಸಾಮಗ್ರಿಗಳು ನಾಗಮುರಿಯಂತಿವೆ; ಇನ್ನು ಕೆಲವು ವೃತ್ತಾಕಾರವಾಗಿವೆ; ಮತ್ತೆ ಕೆಲವು ಲಾಡಿಯಂತೆ ಅಲೆಯಲೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ಇಟಲಿ ದೇಶದಿಂದ ಬಂದ ಸಾಮಗ್ರಿಗಳಂತಿದ್ದುವು; ಆಭರಣಗಳು ಹೆಚ್ಚಾಗಿ ಮಧ್ಯ ಯುರೋಪಿನ ಹಾಲ್‍ಸ್ಟಾಟ್ (ಆದ್ಯ ಲೋಹಯುಗದ) ಸಂಪ್ರದಾಯಕ್ಕೆ ಸೇರಿದವು. ಈ ಯುಗ ಕಂಚುಯುಗಕ್ಕೆ ಸೇರಿರುವುದಾದರೂ ಮಧ್ಯ ಹಾಗೂ ದಕ್ಷಿಣ ಯುರೋಪಿನ ಲೋಹಯುಗದ (ಹಾಲ್‍ಸ್ಟಾಟ್ ಯುಗದ ಸಮಕಾಲೀನ) ನಾಗರಿಕತೆಯಿಂದ ಪ್ರಬಲವಾಗಿ ಪ್ರಭಾವಿತವಾ ಗಿದ್ದಿರಬೇಕು. ಈ ಯುಗದ ಕೊನೆಗಾಲದಲ್ಲಿ ಲಾತೇನೆ ಶೈಲಿಯ ಖಡ್ಗ, ಪದಕ ಮೊದಲಾದ ಕಬ್ಬಿಣ ಸಾಮಾನುಗಳ ಉಪಯೋಗ ರೂಢಿಯಲ್ಲಿದ್ದಿರಬೇಕು. ಇವು ಅಂದಿನ ಸಮಾಧಿಗಳಲ್ಲಿ ಕಂಡುಬಂದಿವೆ. ಇದರಿಂದ ಪ್ರಾಯಃ ಕ್ರಿ.ಪೂ. 1ನೆಯ ಇಲ್ಲವೆ 2ನೆಯ ಶತಮಾನಗಳಲ್ಲಿ ಕಬ್ಬಿಣದ ಬಳಕೆ ಸ್ಕ್ಯಾಂಡಿನೇವಿಯಕ್ಕೆ ಬಂದಿರಬಹು ದೆಂದು ಸೂಚಿತವಾಗುವುದು.

ಸ್ವೀಡನ್ ಮತ್ತು ನಾರ್ವೆ ದೇಶಗಳ ಕೆಲವು ಭಾಗಗಳಲ್ಲಿ ಅನೇಕಾನೇಕ ಕೆತ್ತನೆ ಕೃತಿಗಳು ದೊರಕಿವೆ. ಯುದ್ಧ, ಪಶುಪಾಲನೆ, ಸಮುದ್ರಯಾನ ಮೊದಲಾದವನ್ನು ಇವು ಚಿತ್ರಿಸುತ್ತವೆ. ಇವೂ ಕಂಚು ಯುಗಕ್ಕೆ ಸೇರಿದವೆಂದು ಕೆಲವರ ಊಹೆ. ಆದರೆ ಇವುಗಳ ಕಾಲ ಖಚಿತವಾಗಿಲ್ಲ.

ಸ್ಕ್ಯಾಂಡಿನೇವಿಂಯ ರೋಮನ್ ಚಕ್ರಾಧಿಪತ್ಯಕ್ಕೆ ಸೇರಿರಲಿಲ್ಲವಾದರೂ ಅಲ್ಲಿಯ ನಾಗರಿಕತೆಯ ಮೇಲೆ ರೋಮ್ ನಾಗರಿಕತೆಯ ಪ್ರಭಾವ ಬಹಳ ದಟ್ಟವಾಗಿ ಆಗಿರುವುದು ಕಂಡುಬರುತ್ತದೆ. ಗಾಟ್‍ಲೆಂಡ್ ದ್ವೀಪದಲ್ಲಿ ಅನೇಕ ರೋಮನ್ ನಾಣ್ಯಗಳು ಸಿಕ್ಕಿವೆ. ದೇಶೀಯ ಕಲಾಕೃತಿಗಳಲ್ಲಿ ರೋಮ್ ಪ್ರಭಾವವನ್ನು ನಿಚ್ಚಳವಾಗಿ ಗುರುತಿಸ ಬಹುದಾಗಿದೆ.

ಈ ಕಾಲದಲ್ಲಿ ಕಬ್ಬಿಣದ ಬಳಕೆ ಸರ್ವೇಸಾಮಾನ್ಯವಾಗಿತ್ತು. ಜಟ್‍ಲೆಂಡ್ ಮತ್ತು ಷ್ಲೆಸ್‍ವಿಗ್ ಎಂಬ ಕಡೆ ಹೆಂಟೆ ನೆಲದಲ್ಲಿ ಕಂಡುಬಂದ ನಿಕ್ಷೇಪಗಳಿಂದ ಈ ಕಾಲಕ್ಕೆ ಸಂಬಂಧಿಸಿದ ಮಹತ್ತ್ವದ ಸಂಗತಿಗಳನ್ನು ಅರಿಯಬಹುದಾಗಿದೆ. ಈ ನಿಕ್ಷೇಪಗಳು ಯುದ್ಧ ನಡೆದ ಮೇಲೆ ಜನ ಸಮರ್ಪಿಸಿದ ಕಾಣಿಕೆಗಳಾಗಿರಬಹುದು. ಇವುಗಳಲ್ಲಿ ಹಿಡಿಯುಳ್ಳ ಖಡ್ಗ, ನಾನಾ ಬಗೆಯ ಭರ್ಜಿ, ಕೊಡಲಿ, ಬೆಳ್ಳಿಯ ಶಿರಸ್ತ್ರಾಣ, ಗುರಾಣಿ ಮುಂತಾದ ಸುಂದರ ಸಾಮಗ್ರಿಗಳಿವೆ; ನಾನಾ ರೀತಿಯ ಉಪಕರಣಗಳಿವೆ; ಶೃಂಗಾರ ಸಾಧನಗಳಿವೆ. ಇವುಗಳಲೆಲ್ಲ 23 ಮೀ ಉದ್ದದ, ಮರದ ದೋಣಿ ಅತ್ಯಾಕರ್ಷಕವಾದುದು. ಇದರ ಕಾಲ ಸು. 3ನೆಯ ಶತಮಾನ. ಇದೇ ಬಗೆಯ ಕೆಂಪು ಪೈನ್ ಮರದ ಬೇರೊಂದು ದೋಣಿಯೂ ಕಂಡುಬಂದಿದೆ. 5ನೆಯ ಶತಮಾನದಲ್ಲಿ ರೋಮನ್ ಚಕ್ರಾಧಿಪತ್ಯ ಪತನ ಹೊಂದಿದಮೇಲೆ, ಸ್ಕ್ಯಾಂಡಿನೇವಿಯ ನಾಗರಿಕತೆ ದಕ್ಷಿಣದ ಹಾಗೂ ಬ್ರಿಟನ್ನಿನ ಟ್ಯುಟಾನಿಕ್ ನಾಗರಿಕತೆಯೊಡನೆ ಬೆರೆತು ಸಮೃದ್ಧವಾಗಿ ಬೆಳೆಯಿತು. ಆ ಕಾಲಕ್ಕೆ ಸಂಬಂಧಿಸಿದ ಹೆಚ್ಚಿನ ಸಂಗತಿಗಳೇನೂ ಈ ತನಕ ಬೆಳಕಿಗೆ ಬಂದಿಲ್ಲ. ಆಗ ಚತುಷ್ಕೋಣಾಕೃತಿಯ ಮನೆಗಳೇ ಹೆಚ್ಚು. ಶವಸಮಾಧಿ ರೂಢಿ ಗಳಿಂದಲೇ ಅಂದಿನ ಸಾಮಾಜಿಕ ಪದ್ಧತಿಗಳನ್ನು ಊಹಿಸಬೇಕಾಗಿದೆ. ಶವಸಮಾಧಿ ಹಾಗೂ ಶವದಹನಗಳೆರಡೂ ಬಳಕೆಯಲ್ಲಿದ್ದುವು. ಸಮಾಧಿಯ ಪರಿಕರಗಳು ವಿಪುಲವಾಗಿದ್ದುವು; ಪ್ರಸಾಧನ ಸಾಮಗ್ರಿಗಳು ಚೆಲುವಾಗಿದ್ದುವು. ಇವುಗಳ ಅಲಂಕಾರ ರೀತಿ ಹೊಸಬಗೆಯದಾಗಿತ್ತು. ಆ ಕಾಲದ ಸ್ಕ್ಯಾಂಡಿನೇವಿಯದಲ್ಲೂ ಟ್ಯುಟಾನಿಕ್ ಯುರೋಪಿನಲ್ಲೂ ಅಲಂಕಾರ ಕ್ರಮದಲ್ಲಿ ಸಾಮ್ಯವಿರುವುದು ಕಂಡುಬಂದಿದೆ. ಕಂಚು-ಬೆಳ್ಳಿ-ಚಿನ್ನದ ಸಾಮಗ್ರಿಗಳ ರಚನಾ ತಂತ್ರಗಳೂ ವಿವಿಧವಾಗಿದ್ದುವು. ಚಿನ್ನ-ಬೆಳ್ಳಿಯ ಸಾಮಗ್ರಿಗಳು ಸ್ವೀಡನಿನಲ್ಲಿ ಧಾರಾಳವಾಗಿದ್ದುವು. ಗಾಟ್‍ಲೆಂಡ್ ಪ್ರದೇಶದಲ್ಲಿ ಕೆಂಪು ಹರಳಿನ ಆಭರಣಗಳು ವಿರಳವಾಗಿದ್ದುವು. ರೋಮನ್ ಮತ್ತು ಬೆಜಾóಂಟೀಯನ್ ನಾಣ್ಯಗಳ ರೀತಿಯಲ್ಲಿರುವ ವೃತ್ತಾಕಾರದ ಚಿನ್ನದ ಪದಕ ಸ್ಕ್ಯಾಂಡಿನೇವಿಯಕ್ಕೆ ವಿಶಿಷ್ಟವಾದ ಆಭರಣವಾಗಿತ್ತು. ಗಾಜಿನ ಹಾಗೂ ಮರದ ಪಾತ್ರೆಗಳೂ ಮಣ್ಣಿನ ಮಡಕೆಗಳೂ ಇಲ್ಲಿ ಕಂಡುಬಂದಿವೆ.


ವೈಕಿಂಗ್ ಯುಗ

[ಬದಲಾಯಿಸಿ]

ಉತ್ತರ ಪ್ರಾಂತೀಯ ಜನರು ಇಲ್ಲಿಯ ತನಕ ವಿದೇಶ ವಾಣಿಜ್ಯೋದ್ಯಮದಲ್ಲಿ ತೃಪ್ತರಾಗಿದ್ದರು; ಇವರ ಯುದ್ಧ ಕಾರ್ಯಾಚರಣೆ ನಾಡಿನ ಹೊರಗಡೆಗೆ ವ್ಯಾಪಿಸಿರಲಿಲ್ಲ. 8ನೆಯ ಶತಮಾನದಲ್ಲಿ ಇವರು ಸಮುದ್ರಗಳ್ಳರಾಗಿ ನೌಕಾ ಪ್ರಯಾಣಿಕರನ್ನು ಹಿಂಸಿಸತೊಡಗಿದರು. 3-4ನೆಯ ಶತಮಾನಗಳ ಆಂಗ್ಲೊಸ್ಯಾಕ್ಸನ್ ಜನರಂತೆ ಇವರೂ ಮೊದಮೊದಲು ಚಿಕ್ಕ ಪುಟ್ಟ ಸುಲಿಗೆಗಳಿಂದಲೇ ತೃಪ್ತರಾಗುತ್ತಿದ್ದರು. ಆದರೆ ಕ್ರಮೇಣ ಇಂಗ್ಲೆಂಡ್, ಉತ್ತರ ಫ್ರಾನ್ಸ್, ಐರ್ಲೆಂಡ್, ಸ್ಕಾಟ್‍ಲಂಡ್, ಫಾರೋಸ್, ಆರ್ಕ್‍ನೀಸ್, ಷೆಟ್‍ಲೆಂಡ್, ಸಿಸಿಲಿ, ರಷ್ಯ ಮುಂತಾದೆಡೆಗಳಲ್ಲಿ ಬಲಪ್ರಯೋಗದಿಂದ ನೆಲೆಸ ತೊಡಗಿದರು. ಐಸ್‍ಲೆಂಡ್, ಗ್ರೀನ್‍ಲೆಂಡ್, ಅಮೆರಿಕ ದೇಶಗಳನ್ನೂ ಪ್ರವೇಶಿಸಿದರು. ಯುರೋಪಿನಾದ್ಯಂತ ಇವರ ಹಾವಳಿ ಹೆಚ್ಚಿತು. ಕೊನೆಗೆ ಏಷ್ಯಮೈನರ್, ಆಫ್ರಿಕ ಖಂಡಗಳಲ್ಲೂ ಹಸ್ತಕ್ಷೇಪ ಮಾಡಿದರು. ವಿದೇಶ ಸಂಚಾರಕ್ಕೆ ಇವರು ಬಳಸಿದ ಹಡಗುಗಳ ಮಾದರಿಗಳು ಸಿಕ್ಕಿವೆ. ಹಡಗಿನಲ್ಲಿ ಮೃತರಾದವರನ್ನು ಇವರು ಹಡಗುಗಳಲ್ಲಿಟ್ಟು ಹೂತು ಬಿಡುತ್ತಿದ್ದರು. ದಕ್ಷಿಣ ನಾರ್ವೆಯ ಗಾಕ್‍ಸ್ಟಾಡ್ ಎಂಬಲ್ಲಿ ಒಂದು ಚಿಕ್ಕ ಯುದ್ಧನೌಕೆಯೂ ಆಸ್‍ಬರ್ಗ್ ಎಂಬಲ್ಲಿ ರಾಜವಿಹಾರ ನೌಕೆಯೂ ಕಂಡುಬಂದಿವೆ. ಎರಡೂ ಸುಸಜ್ಜಿತವಾಗಿದ್ದುವು. ಯುದ್ಧನೌಕೆಯಲ್ಲಿ ನಾಯಕನ ಶಸ್ತ್ರಾಸ್ತ್ರಗಳು, ಅಶ್ವಗಳು ಮೊದಲಾದವುಗಳಿದ್ದುವು. ವಿಹಾರನೌಕೆಯಲ್ಲಿ ರಾಣಿಯ ಶಯ್ಯೆ, ಪಾತ್ರೆ, ಚಿಮ್ಮಟಿಗೆ, ಆಭರಣ ಇತ್ಯಾದಿಗಳಿದ್ದುವು.

ವೈಕಿಂಗ್ ಜನರಿಗೆ ಯುದ್ಧವೇ ಏಕಮಾತ್ರ ವೃತ್ತಿಯಾಗಿರಲಿಲ್ಲ. ಕೃಷಿಯಲ್ಲೂ ಇವರು ಆಸಕ್ತರಾಗಿದ್ದರು. ಇವರ ಕೃಷಿಕಲಾಪಗಳಲ್ಲಿ ಹೆಚ್ಚಾಗಿ ಗುಲಾಮರೇ ನಿಯುಕ್ತರಾಗಿದ್ದರು. ಚಳಿಗಾಲವನ್ನು ಜನರು ಮದ್ಯಪಾನ, ಕಥಾಗೋಷ್ಠಿ, ಕ್ರೀಡಾ ವಿನೋದಗಳಲ್ಲಿ ಕಳೆಯುತ್ತಿದ್ದರು. ಮನೆಯಲ್ಲೇ ತಯಾರಿಸಿದ ಹೆಂಡವನ್ನೂ ಒಣಗಿಸಿದ ಮಾಂಸ, ಮೀನು ಮೊದಲಾದ ಖಾದ್ಯ ಪದಾರ್ಥಗಳನ್ನೂ ಚಳಿಗಾಲಕ್ಕೆಂದು ಕೂಡಿಟ್ಟು ಕೊಳ್ಳುತ್ತಿದ್ದರು. ಅತಿಥಿ ಅಭ್ಯಾಗತರನ್ನು ರಾಜಾತಿಥ್ಯ ಪೂರ್ವಕವಾಗಿ ಬರಮಾಡಿಕೊಳ್ಳುತ್ತಿದ್ದರು. ವೈಕಿಂಗ್ ಜನರು ನೆಲಸಿದ ಕಡೆಗಳಲ್ಲೆಲ್ಲ ಇವರಿಗೆ ಸಂಬಂಧಿಸಿದ ಅವಶೇಷಗಳು ಸಿಕ್ಕಿವೆ. ನಾರ್ವೆ, ಐಸ್‍ಲೆಂಡ್ ಮತ್ತು ಸ್ವೀಡನಿನಲ್ಲಿ 1000ದ ತನಕ ಮೂರ್ತಿಪೂಜೆ ಇದ್ದುದರಿಂದ, ಆ ಹಿಂದಿನ ಯುಗದಲ್ಲಿ ಸಮಾಧಿ ಪರಿಕರಗಳು ವಿಪುಲವಾಗಿದ್ದುವು; ಸಮಾಧಿ ರೂಢಿಗಳು ವೈವಿಧ್ಯಪೂರ್ಣವಾಗಿದ್ದುವು. ಕ್ರೈಸ್ತಧರ್ಮ ಹರಡುವುದಕ್ಕೆ ಮುಂಚೆಯೇ ದಹನಪದ್ಧತಿ ಕಡಮೆಯಾಗುತ್ತ ಬಂದು, ಕೊನೆಗೆ ನಿಂತುಹೋಯಿತು. ಗಂಡಸರ ಶವವನ್ನು ಸುಸಜ್ಜಿತವಾಗಿ, ಆಯುಧ, ಕುದುರೆ, ನಾಯಿ ಮೊದಲಾದ ಇತರ ಪರಿಕರಗಳೊಡನೆ ಹೂಳುತ್ತಿದ್ದರು. ಅವರವರ ದೋಣಿಗಳಲ್ಲಿ ಅವರನ್ನು ಹೂಳುವ ಪದ್ಧತಿ ಹೆಚ್ಚು ಪ್ರಚುರವಾಗಿತ್ತು. ಸ್ತ್ರೀಯರ ಮೃತದೇಹಗಳನ್ನು ಅವರ ಉಡುಪು, ಆಭರಣ ಸಮೇತವಾಗಿಯೇ ಹೂಳುತ್ತಿದ್ದರು. ಡೆನ್ಮಾರ್ಕ್ ದೇಶದಲ್ಲಿ ಶವಗಳನ್ನು ದೋಣಿಗಳಲ್ಲಿಟ್ಟು ಹೂಳುವ ಪದ್ಧತಿಯಿರಲಿಲ್ಲ. ಗಣ್ಯ ವ್ಯಕ್ತಿಗಳ ಶವಗಳನ್ನು ಸಮಾಧಿವೇಶ್ಮಗಳಲ್ಲಿ ಹೂಳುತ್ತಿದ್ದರು.

ವೈಕಿಂಗ್ ಜನರ ಯುದ್ಧ ಕಾರ್ಯಾಚರಣೆ ಹೆಚ್ಚಿದಂತೆಲ್ಲ, ಇನ್ನಷ್ಟು ಪರಿಷ್ಕøತವಾದ ಆಯುಧಗಳು ಸಿದ್ಧವಾಗತೊಡಗಿದವು. ಭರ್ಜಿ ಬಳಕೆಯಲ್ಲಿದ್ದರೂ ಕೊಡಲಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯಿತು. ರಮ್ಯವಾದ ಕೊಂಬಿನ ಆಯುಧಗಳು ಅಂದಿನ ಕಮ್ಮಾರರ ಹಸ್ತ ಕೌಶಲಕ್ಕೆ ನಿದರ್ಶನವಾಗಿವೆ. ಸಮಾಧಿಗಳಲ್ಲಿ ಸ್ವರ್ಣ, ರಜತ ಖಚಿತ ಭವ್ಯ ಖಡ್ಗಾಯುಧಗಳು ಕಂಡುಬಂದಿವೆ. ಶಿರಸ್ತ್ರಾಣ, ಡಾಲು, ಕವಚಗಳೂ ಸಿಕ್ಕಿವೆ. ವೈಕಿಂಗ್‍ರಿಗೆ ಆಯುಧಗಳು ಅತ್ಯಮೂಲ್ಯ ನಿಧಿಗಳಾಗಿದ್ದವು. ಹಡುಗುಗಳಿಗೆ ಹೇಗೋ ಹಾಗೇ ಆಯುಧಗಳಿಗೂ ಇವರು ಅರ್ಥವತ್ತಾದ ಹೆಸರು ಕೊಟ್ಟಿದ್ದರು. ಖಡ್ಗಕ್ಕೆ ಐಸ್ ಆಫ್ ದಿ ಬ್ಯಾಟಲ್, ಭರ್ಜಿಗೆ ಸ್ನೇಕ್ ಆಫ್ ದಿ ಅಟ್ಯಾಕ್, ಕೊಡಲಿಗೆ ವಿಚ್ ಆಫ್ ದಿ ಫೀಲ್ಡ್, ಬಾಣಕ್ಕೆ ಟ್ವಿಗ್ ಆಫ್ ದಿ ಕಾಪ್ರ್ಸ್ ಇತ್ಯಾದಿ ಸುಂದರ ಹೆಸರುಗಳನ್ನು ಇಡುತ್ತಿದ್ದರು.

ವೈಕಿಂಗ್ ಯುಗದಲ್ಲಿ ಹೆಚ್ಚು ಕಡಮೆ ಎಲ್ಲ ಸಾಮಗ್ರಿಗಳೂ ಅಲಂಕಾರಿಕವಾಗಿರುತ್ತಿದ್ದವು. ಈ ಅಲಂಕಾರ ಶೈಲಿ ಪ್ರಾಣಿಚಿತ್ರಗಳಿಂದ ಕೂಡಿದ ಸಾಂಪ್ರದಾಯಿಕ ವೆಂಡಲ್ ಶೈಲಿಯನ್ನು ಹೋಲುವುದಾಗಿತ್ತು. ಕೊನೆಗೆ, ಐರ್ಲೆಂಡ್ ಹಾಗೂ ಕ್ಯಾರೊಲಿಂಜಿಯನ್ ಸಾಮ್ರಾಜ್ಯವೇ ಮೊದಲಾದ ವಿದೇಶಗಳ ಸಂಪರ್ಕದಿಂದ, 8ನೆಯ ಶತಮಾನದ ಕೊನೆಗೆ ಹೊಸತೊಂದು ಮಿಶ್ರಶೈಲಿ ರೂಢಿಗೆ ಬಂತು. ಆಸ್‍ಬರ್ಗ್ ನಿಕ್ಷೇಪಗಳಲ್ಲಿ ಈ ಬಗೆಯ ಶೈಲಿಗೆ ನಿದರ್ಶನಗಳು ದೊರೆತಿವೆ. 10ನೆಯ ಶತಮಾನದಲ್ಲಿ ಈ ಶೈಲಿಗೆ ಬದಲಾಗಿ ಜೆಲ್ಲಿಂಜ್ ಶೈಲಿ ಪ್ರಾಧ್ಯಾನ್ಯ ಪಡೆಯಿತು. ಇದರಲ್ಲಿ ಪ್ರಾಣಿಚಿತ್ರ ಇನ್ನಷ್ಟು ನೈಸರ್ಗಿಕವಾಗಿದೆ. ಕೆಲವು ಅಂಶಗಳಲ್ಲಿ ಇದಕ್ಕೂ ವೆಂಡಲ್ ಶೈಲಿಗೂ ಹೋಲಿಕೆಯಿದ್ದರೂ ಜೆಲ್ಲಿಂಜ್ ಶೈಲಿ ಐರಿಷ್, ಇಂಗ್ಲಿಷ್ ಹಾಗೂ ಕ್ಯಾರೊಲಿಂಜಿಯನ್ ಶೈಲಿಗಳ ಪ್ರಭಾವ ಫಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. 11ನೆಯ ಶತಮಾನದಲ್ಲಿ ಕೊಂಚಕಾಲ ಜೆಲ್ಲಿಂಜ್ ಶೈಲಿ ಅದೃಶ್ಯವಾಗಿ ರಿಂಗರೈಕ್ ಶೈಲಿ ರೂಢಿಗೆ ಬಂದಿತ್ತು. ಈ ಶೈಲಿಯಲ್ಲಿ ಎದ್ದು ಕಾಣುವುದು ಹೆಣಿಗೆ ಕೆಲಸ, ಎಲೆ ಬಳ್ಳಿಗಳ ಚಿತ್ರ. ಪ್ರಾಣಿಚಿತ್ರ ಬಹಳ ಕಡಮೆ. ಆದರೆ ಕೆಲಕಾಲಾನಂತರ, ಜೆಲ್ಲಿಂಜ್ ಶೈಲಿ ಅರ್ನೆಸ್ ರೀತಿಯಲ್ಲಿ ಪುನಃ ತಲೆಯೆತ್ತಿತ್ತು. ಕ್ರಿಸ್ತಶಕದಲ್ಲಿ ಮಿಶ್ರಜಾತಿಯ ರೊಮನೆಸ್ಕ್ಯು ಪದ್ಧತಿ ಪ್ರಧಾನವಾಯಿತು.

ಲಲಿತಕಲೆ

[ಬದಲಾಯಿಸಿ]

ಕಂಚು ಯುಗದ ಜನರು ಗೀತವಾದ್ಯಗಳಲ್ಲೂ ನೃತ್ಯಕಲೆಯಲ್ಲೂ ಆಸಕ್ತರಾಗಿದ್ದರು. ಈ ಯುಗದ ನಿಕ್ಷೇಪಗಳಲ್ಲಿ ದೊರೆತ 2.29ಮೀ ಉದ್ದದ ಕಂಚಿನ ಕಹಳೆ ಅತ್ಯದ್ಭುತವಾಗಿದೆ. ಈ ವಾದ್ಯಕ್ಕೆ ಲರ್ ಎಂದು ಹೆಸರು. ಈ ಬಗೆಯ ಕಂಚಿನ ಎರಕಕ್ಕೂ ಕಲಾಚಾತುರ್ಯಕ್ಕೂ ಎಣೆಯಾದ ವಾದ್ಯ ಬೇರೊಂದಿಲ್ಲ. ಇದರ ಭವ್ಯರಚನೆ ಇಂದಿಗೂ ವಿಸ್ಮಯಕರವಾಗಿದೆ. ನಾರ್ವೆ, ಡೆನ್ಮಾರ್ಕ್, ಸ್ವೀಡನ್ ದೇಶಗಳ ಎಲ್ಲ ಭಾಗಗಳಲ್ಲೂ ಇದು ಜನಪ್ರಿಯವಾಗಿತ್ತು. ಅನ್ಯಸಂಸ್ಕøತಿಗಳ ಪ್ರಭಾವ ಸ್ಕ್ಯಾಂಡಿನೇವಿಯವನ್ನು ಪ್ರವೇಶಿಸತೊಡಗಿದಂದಿ ನಿಂದ ಲರ್ ವಾದ್ಯದ ಬಳಕೆ ಕಡಮೆಯಾಗುತ್ತ ಬಂತು. ವೈಕಿಂಗ್ ಯುಗದಲ್ಲಿ ಯುರೋಪಿಯನ್ ದೇಶಗಳೊಡನೆ ಸ್ಕ್ಯಾಂಡಿನೇವಿಯದ ಸಂಪರ್ಕ ಮತ್ತಷ್ಟು ಬೆಳೆಯಿತು. ನಾರ್ತ್‍ಮೆನ್ ಜನರು ಇಂಗ್ಲೆಂಡಿಗೆ ಬಂದಾಗ ತಮ್ಮ ಜನಪದ ಸಂಗೀತವನ್ನೂ ತಂದರು. ಸ್ಕ್ಯಾಂಡಿನೇವಿಯದ ದೇಶಗಳಿಗೆ ಕ್ರೈಸ್ತಮತ ಧಾರ್ಮಿಕ ಸಂಗೀತ ಸಾಹಿತ್ಯವನ್ನೊದಗಿಸಿತು. ಹಳೆಯ ಜನಪದ ಗೀತೆಗಳಲ್ಲಿ ಹೆಚ್ಚಿನವು ನೃತ್ಯಗಳಾಗಿದ್ದುವು. ಇವುಗಳಿಗೆ ಪ್ರಾಚೀನ ಫ್ರೆಂಚ್ ವರ್ತುಲ ನೃತ್ಯಗಳೇ ಮೂಲ. ನಾರ್ವೆಗೆ ಸೇರಿದ್ದ ಐಸ್‍ಲೆಂಡಿನಲ್ಲಿ 15ನೆಯ ಶತಮಾನದಲ್ಲಿ, ಪ್ಲೇಗ್ ರೋಗ ಸಂಭವಿಸಿ, ಅದರಿಂದ ಸಾವಿರಾರು ಮಂದಿ ಸತ್ತರು. ಅದರೊಡನೆ ಐಸ್‍ಲೆಂಡಿನ ಅನೇಕ ಗೀತ ಪ್ರಕಾರಗಳೂ ನಾಮಾವಶೇಷವಾದುವು. ನಾರ್ವೆ ದೇಶದ ಪ್ರಾಚೀನ ಗೀತ ನೃತ್ಯಗಳಿಗೂ ಫೆಯಿರೊಯಕ್ ಗೀತಗಳಿಗೂ ಗಮನಾರ್ಹ ವಾದ ಸಾಮ್ಯ ಕಂಡುಬರುವುದು. ವೀರಪುರುಷರ ಪ್ರಣಯಗೀತೆಗಳು ಡೆನ್ಮಾರ್ಕ್ ದೇಶದಲ್ಲಿ ಬಲು ಹಿಂದೆ ಲಿಖಿತರೂಪಕ್ಕಿಳಿದುವು. ನಾರ್ವೆ ದೇಶದಲ್ಲಿ ಸು. 19ನೆಯ ಶತಮಾನದ ಮಧ್ಯಭಾಗದ ತನಕವೂ ಇವು ಜನರ ಬಾಯಲ್ಲೇ ಉಳಿದಿದ್ದುವು. ಉತ್ತರದ ಶುದ್ಧ ಜನಪದ ಸಂಗೀತದ ಹೊರತು ಬೇರೆ ಕಲಾಸಂಗೀತಗಳಲ್ಲಿ ವಿದೇಶ ಪ್ರಭಾವ ಸ್ಪಷ್ಟವಾಗಿ ವ್ಯಕ್ತವಾಗುವುದು. ಇಂದು ಸಮಗ್ರ ಸ್ಕ್ಯಾಂಡಿನೇವಿಯಕ್ಕೆ ವಿಶಿಷ್ಟವಾದ ಏಕರೀತಿಯ ಸಂಗೀತ ಪರಂಪರೆಯೇ ಇಲ್ಲ. ಅದು ಕವಲೊಡೆದು ನಾರ್ವೆ ಸಂಗೀತ, ಡೇನಿಷ್ ಸಂಗೀತ, ಸ್ಪ್ಯಾನಿಷ್ ಸಂಗೀತ ಇತ್ಯಾದಿಯಾಗಿ ಪ್ರತ್ಯೇಕ ರೂಪಗಳನ್ನು ತಾಳಿದೆ. ಆದರೆ ಇವೆಲ್ಲಕ್ಕೂ ಹಿಂದಿನ ನಾರ್ಡಿಕ್ ಸಂಗೀತವೇ ಮೂಲ ಪ್ರೇರಣೆಯೆನ್ನಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: