ವಿಷಯಕ್ಕೆ ಹೋಗು

ಸೈಯ್ಯದ್ ಅಹಮದ್ ಖಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೈಯ್ಯದ್ ಅಹಮದ್ ಖಾನ್ (೧೮೧೭ - ೧೮೯೮ ) ಆಧುನಿಕ ಭಾರತದ ಇಸ್ಲಾಂ ಚಿಂತಕರಲ್ಲಿ ಮೊದಲಿಗರು. ಆಧುನಿಕ ಉನ್ನತ ಶಿಕ್ಷಣ ಹಾಗೂ ಆಡಳಿತದ ಮೂಲಕ ಮಾತ್ರ ಭಾರತೀಯ ಮುಸ್ಲಿಂರ ಏಳ್ಗೆ ಸಾಧ್ಯವೆಂದು ಅರಿತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದವರು, ಹೆಸರಾಂತ ಬರಹಗಾರರು.

ಸೈಯ್ಯದ್ ಅಹಮದ್ ಖಾನ್
Born೧೮೧೭ ಅಕ್ಟೋಬರ್ ೧೭
ದೆಹಲಿ
Died೧೮೯೮ ಮಾರ್ಚ್ ೨೭
Nationalityಬ್ರಿಟಿ‍ಷ್ ಇಂಡಿಯನ್
Other namesಸರ್ ಸೈಯ್ಯದ್
Era೧೯ನೇ ಶತಮಾನ
Notable workThe Mohammadan Commentary on the Holy Quran (Tafsir on QURAN).
Signature

ಇವರು ೧೮೧೭ ಅಕ್ಟೋಬರ್ ೧೭ರಂದು ದೆಹಲಿಯಲ್ಲಿ ಜನಿಸಿದರು. ಇವರ ತಂದೆ ಸೈಯದ್ ಅಹಮದ್ ತಾಖಿ. ಇವರ ವಂಶಜರು ಮೊಗಲ್ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದರು. ಇವರ ತಾತ ಈಸ್ಟ್ ಇಂಡಿಯ ಕಂಪನಿಯ ಸೇವೆಯಲ್ಲಿದ್ದ ಕಾರಣ ಸಹಜವಾಗಿಯೇ ಅಹಮದ್ ಖಾನ್ ಅವರಿಗೆ ಉತ್ತಮ ಶಿಕ್ಷಣ ದೊರಕಿತು. ಇವರು ಲಖನೌನಲ್ಲಿ ವ್ಯಾಸಂಗ ಮುಗಿಸಿ ತಮ್ಮ ೩೦ನೆಯ ವಯಸ್ಸಿನಲ್ಲಿ ಮೊಗಲರ ಕೊನೆಯ ದೊರೆ ಎರಡನೆಯ ಬಹದ್ದೂರ್ ಷಾನ ಆಸ್ಥಾನದಲ್ಲಿ ಹುದ್ದೆಗೆ ಸೇರಿದರು. ಆ ಕಾಲದಲ್ಲಿ ಮೊಗಲ್ ಸಾಮ್ರಾಟ ಕೇವಲ ತೋರಿಕೆಗಷ್ಟೆ ಅಡಿಕಾರ ಹೊಂದಿದ್ದು ಬ್ರಿಟಿಷರ ಆಣತಿಯ ಮೇಲೆ ಆಡಳಿತ ನಡೆಸುತ್ತಿದ್ದ ಕಾರಣ ಆ ಕೆಲಸ ತ್ಯಜಿಸಿ ಬ್ರಿಟಿ‍ಷ್ ಈಸ್ಟ್ ಇಂಡಿಯ ಕಂಪನಿಯ ಶಿರಸ್ತೇದಾರ್ ಆಗಿ ನೇಮಕಗೊಂಡರು. ೧೮೪೬-೫೫ರ ವರೆಗೆ ಕಲ್ಕತ್ತದಲ್ಲಿ ಸೇವೆ ಸಲ್ಲಿಸಿ ಅನಂತರ ದೆಹಲಿಗೆ ವರ್ಗಗೊಂಡರು.[]

೧೮೫೫ರಲ್ಲಿ ಬಿಜನೂರ್ ನಲ್ಲಿ ನ್ಯಾಯಾಧೀಶರಾಗಿ ಸೇವೆಗೆ ಸೇರಿದರು. ಈ ವೇಳೆಯಲ್ಲಿ ದೆಹಲಿಯಲ್ಲಿ ಉಂಟಾದ ಸಿಪಾಯಿದಂಗೆ ಅಥವಾ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಕಣ್ಣಾರೆ ಕಂಡು ಮುಸ್ಲಿಂ ಸಮುದಾಯದ ಮೇಲೆ ಬ್ರಿಟಿಷ್ ಅಧಿಕಾರಿಗಳು ನಡೆಸಿದ ಕ್ರೂರ ದೌರ್ಜನ್ಯಕ್ಕಾಗಿ ಮರುಗಿದರು. ಆಡಳಿತದಲ್ಲಿ ಭಾಗವಹಿಸಲು ಆಧುನಿಕ ಉನ್ನತ ಶಿಕ್ಷಣದ ಅವಶ್ಯಕತೆಯ ಮನಗಂಡು ಅದಕ್ಕಾಗಿ ಶ್ರಮಿಸಲು ಕಂಕಣ ತೊಟ್ಟರು. ಈ ವೇಳೆಯಲ್ಲಿ ದೆಹಲಿಯ ಪುರಾತತ್ತ್ವ ಚರಿತ್ರೆ ಎಂಬ ತಮ್ಮ ಪ್ರಥಮ ಗ್ರಂಥವನ್ನು ರಚಿಸಿ ದೆಹಲಿಯ ವಾಸ್ತುಶಿಲ್ಪದ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿದರು. ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಅಬುಲ್ ಫಜಲ್ ರಚಿಸಿರುವ ಐನ್-ಇ-ಅಕ್ಬರಿ ಕೃತಿಯನ್ನು ಸಂಪಾದಿಸಿ ಅದಕ್ಕೆ ಜಹಾಂಗೀರ್ ಹಾಗೂ ಜಿಯಾ ಉದ್-ದಿನ್-ಬರಾಸ್ ರ ಆತ್ಮಕತೆಯನ್ನು ಸೇರಿಸಿ ಪ್ರಕಟಿಸಿದರು. ೧೮೬೧ರಲ್ಲಿ ಎಂ. ಗಾರ್ಸಿನ್ ಡಿ ತಾಸಿಯವರು ರಚಿಸಿದ ಫ್ರೆಂಚ್ ಭಾಷೆಯ ದೆಹಲಿ ಪುರಾತತ್ತ್ವ ಬಗೆಗಿನ ಗ್ರಂಥವನ್ನು ಭಾಷಾಂತರಿಸಿ ಪ್ರಕಟಿಸಿದರು. ೧೮೬೪ರಲ್ಲಿ ಇವರಿಗೆ ಲಂಡನ್ ನ ರಾಯಲ್ ಏಷಿಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ ದೊರೆಯಿತು. ೨೦ ವರ್ಷ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅನಂತರ ೧೮೬೯ರಲ್ಲಿ ತಮ್ಮ ಮಗನೊಡನೆ ಕೇಂಬ್ರಿಜ್ ಗೆ ತೆರಳಿದರು.

ಲಂಡನ್ ನಲ್ಲಿನ ಸಹವಾಸ, ಚರ್ಚೆ, ಅಧ್ಯಯನಗಳ ಫಲವಾಗಿ ಉನ್ನತ ಚಿಂತನೆಗಳು ಇವರಿಗೆ ಮನವರಿಕೆಯಾದವು. ಭಾರತದ ಶಾಸಕಾಂಗ ಸಭೆಯಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯ ಅನಿವಾರ್ಯತೆಯ ಬಗ್ಗೆ ಬ್ರಿಟಿ‍ಷ್ ಸಂಸತ್ತಿನಲ್ಲಿ ವಿಚಾರ ಮಂಡಿಸಿ ಯಶಸ್ವಿಯಾದರು. ೧೮೬೬ರಲ್ಲಿ ಪ್ರಾರಂಭವಾದ ಅಲಿಘರ್ ಇನ್ಸ್ಟಿಟ್ಯೂಟ್ ಗೆಜೆಟ್ ಭಾರತೀಯರಿಗೆ ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುವಂತಾಯಿತು. ೧೮೬೬ರ ಫೆಬ್ರವರಿ ೧೪ ರಂದು ವಿಜ್ಙಾನ ಸಂಸ್ಥೆಯನ್ನು ಅಲಿಘರ್ ನಲ್ಲಿ ಸ್ಥಾಪಿಸಿದರು. ೧೮೭೦ರಲ್ಲಿ ಮಹಮ್ಮದೀಯರ ಸಾಮಾಜಿಕ ವ್ಯವಸ್ಥೆ ಕುರಿತು ಒಂದು ಲೇಖನ ಪ್ರಕಟಿಸಿದರು. ಆಗ ಇಸ್ಲಾಂ ಸಂಪ್ರದಾಯಸ್ಥರ ವಿರೋಧವನ್ನು ಎದುರಿಸಿ ತಮ್ಮದೇ ಆದ ವೈಜ್ಙಾನಿಕ ಹಿನ್ನಲೆಯಲ್ಲಿ ಕುರಾನ್ ಧರ್ಮಗ್ರಂಥವನ್ನು ಕುರಿತು ವಿಮರ್ಶೆಯನ್ನು ಪ್ರಕಟಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ೧೮೫೮ರಲ್ಲಿ ಮುರಾದ್ ಬಾದ್, ೧೮೬೩ ಗಾಜೀಪುರದಲ್ಲಿ ಶಿಕ್ಷಣ ಸಂಸ್ಥೆ ತೆರೆದದ್ದು ಇವರ ಪ್ರಮುಖ ಸಾಧನೆ. ೧೮೭೬ರಲ್ಲಿ ಬನಾರಸ್ ನಲ್ಲಿ ಉರ್ದು ಅಥವಾ ಪರ್ಷಿಯನ್ ಭಾಷೆ ಮಾಧ್ಯಮದ ಉನ್ನತ ಶಿಕ್ಷಣ ಕೇಂದ್ರವನ್ನು ತೆರೆಯಲು ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸಿದಾಗ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಕಂಡುಬಂದಿತು. ಸಂಸ್ಕೃತ ಹಾಗೂ ಉರ್ದು ಸಮಸ್ಯೆ ಕೋಮುವಾದಕ್ಕೆ ಕಾರಣವಾಗಬಾರದೆಂದು ಅರಿತು ಅಲಿಘರ್ ಗೆ ಹಿಂದಿರುಗಿದರು. [][]

ಕಲ್ಕತ್ತ ವಿಶ್ವವಿದ್ಯಾಲಯದಂತೆಯೆ (೧೮೫೮) ಅಲಿಘರ್ ನಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾಗಿ ಭಾರತದಾದ್ಯಂತ ಸಂಚರಿಸಿ ದೇಣಿಗೆ ಸಂಗ್ರಹಿಸಿದರು. ೧೮೭೩ರಲ್ಲಿ ಅಖಿಲ ಭಾರತ ಮುಸ್ಲಿಂ ಸಮ್ಮೇಳನ ಆಯೋಜಿಸಿದರು. ೧೮೭೭ ಜನವರಿ ೮ ರಂದು ಭಾರತದ ಮೊದಲ ವೈಸ್ ರಾಯ್ ಲಾರ್ಡ್ ಲಿಟ್ಟನ್ ನಿಂದ ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದರು. ಎಲ್ಲ ಸಮುದಾಯದವರಿಗೂ ಉನ್ನತ ಶಿಕ್ಷಣಕ್ಕೆ ಈ ಸಂಸ್ಥೆ ತನ್ನ ಬಾಗಿಲು ತೆರೆಯಿತು. ಇದೇ ಮುಂದೆ ಪ್ರಸಿದ್ಧ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವೆಂದು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆಯಿತು. ಇವರು ತಮ್ಮ ಜೀವನದ ಅಂತಿಮ ವರ್ಷಗಳಲ್ಲಿ ಬಹುತೇಕ ಮುಸ್ಲಿಂ ಸಮುದಾಯದ ಪರವಾದ ನಿಲುವು ಹೊಂದಿದ್ದುದು ಕಂಡುಬರುತ್ತದೆ. ಅಲಿಘರ್ ನಲ್ಲಿ ಇಸ್ಲಾಂ ಸಂಸ್ಕೃತಿಯನ್ನು ಪ್ರಚಾರ ಪಡಿಸಲು ಸ್ಥಾಪಿಸಿದ್ದ ವಿಜ್ಙಾನ ಸಂಘ ಇವರ ನಿಧನಾನಂತರ ಲಖನೌಗೆ ವರ್ಗಾಯಿಸಲ್ಪಟ್ಟು (೧೯೦೩) ಮುಸ್ಲಿಂ ಲೀಗ್ ಎಂದು ಮರುನಾಮಕರಣಗೊಂಡಿತು. ಬ್ರಿಟಿ‍ಷ್ ಸರ್ಕಾರ ೧೮೮೩ರಲ್ಲಿ ಇವರಿಗೆ ಸರ್ ಎಂಬ ಪದವಿ ನೀಡಿ ಗೌರವಿಸಿತು.

ಉಲ್ಲೇಖ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2009-07-09. Retrieved 2020-09-28.{{cite web}}: CS1 maint: bot: original URL status unknown (link)
  2. ಇತಿಹಾಸ ಮತ್ತು ಪುರಾತತ್ವ, A Volume on HISTORY AND ARCHAEOLOGY (2009). ಕನ್ನಡ ವಿಷಯ ವಿಶ್ವಕೋಶ - ಇತಿಹಾಸ ಮತ್ತು ಪುರಾತತ್ತ್ವ. p. 1110.
  3. https://www.britannica.com/biography/Sayyid-Ahmad-Khan. {{cite web}}: Missing or empty |title= (help)