ಸುನಾದ್ ಗೌತಮ್
ಸುನಾದ್ ಗೌತಮ್ | |
---|---|
ಜನನ | ನವೆಂಬರ್ ೦೧, ೧೯೯೩, ಶೃಂಗೇರಿ, ಚಿಕ್ಕಮಗಳೂರು |
ವೃತ್ತಿ | ಸಂಗೀತ ಸಂಯೋಜಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ |
ಸಕ್ರಿಯ ವರ್ಷಗಳು | 2010 - ಪ್ರಸಕ್ತ |
ಸುನಾದ್ ಗೌತಮ್ [೧] [೨] ಅವರು ಭಾರತೀಯ ಸಂಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಲ್ಯ-ಶಿಕ್ಷಣ
[ಬದಲಾಯಿಸಿ]ಸುನಾದ್ ಗೌತಮ್ ತಂದೆ ಉಮೇಶ್ ಗೌತಮ್ ನಾಯಕ್ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಪ್ರೌಢಶಾಲಾ ಭಾಷಾ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲಿಯೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್ ಗೌತಮ್ ನಾಯಕ್ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು. ಇದು ಸುನಾದ್ ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡ ಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.
ವೃತ್ತಿ ಬದುಕು
[ಬದಲಾಯಿಸಿ]ಸುನಾದ್, ಚಂದನ (ಕಿರುತೆರೆ ವಾಹಿನಿ)ಯ 'ಕೋಟಿ ಚೆನ್ನಯ್ಯ' ಧಾರಾವಾಹಿಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ವೃತ್ತಿ ಬದುಕು ಆರಂಭಿಸಿದರು. ನಂತರ ಸಂಗೀತ ನಿರ್ದೇಶಕರಾಗಿ ಕನ್ನಡದ ಅನಂತು vs ನುಸ್ರತ್ (ಚಲನಚಿತ್ರ)[೩]
[೪], 'ಸೋಜಿಗ', 'ಪ್ರಾಣಕೊಡುವೆ ಗೆಳತಿ', 'ಚದುರಿದಕಾರ್ಮೋಡ', '400', 'ಗಲ್ಲಿಬೇಕರಿ', ಜೊತೆಗೆ ತುಳುವಿನ 'ಗೋಲ್ ಮಾಲ್'[೫],'ರಂಭಾರೂಟಿ', '2 ಎಕ್ರೆ' ಮತ್ತು ಕೊಂಕಣಿಯ 'ಬಾಯೊ' ಎಂಬ ಚಲನಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಕನ್ನಡದ 'ಸೋಜಿಗ', ತುಳುವಿನ 'ಗೋಲ್ ಮಾಲ್' ಮತ್ತು ಕೊಂಕಣಿ ಭಾಷೆಯ 'ಬಾಯೊ' ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕಿರುತೆರೆಯಲ್ಲಿ ಚಂದನ (ಕಿರುತೆರೆ ವಾಹಿನಿ)ಯ 'ಕೋಟಿಚೆನ್ನಯ್ಯ', ಉದಯ ಟಿ.ವಿಯ 'ಆನಂದ ಭೈರವಿ', 'ಸರಯೂ', 'ರಾಗಾನುರಾಗ', 'ಜೋಜೋ ಲಾಲಿ', 'ದೇವಯಾನಿ', ಝಿ ಕನ್ನಡ ವಾಹಿನಿಯ 'ಜೊತೆಜೊತೆಯಲಿ'[೬], 'ಜೀಕುಟುಂಬ ಅವಾಡ್ರ್ಸ್-2019', ಕಲರ್ಸ್ ಕನ್ನಡ ವಾಹಿನಿಯ 'ನನ್ನರಸಿ ರಾಧೆ', ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ 'ಕಿಕ್ ಡ್ಯಾನ್ಸ್ ಶೋ', 'ಆದರ್ಶ ದಂಪತಿಗಳು' ಮತ್ತು ಸುವರ್ಣ ವಾಹಿನಿಯ 'ಭರ್ಜರಿ ಕಾಮಿಡಿ ಶೋ'ಗಳಿಗೂ ಸುನಾದ್ ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.