ಸಿ. ವಿ. ವಿಶ್ವೇಶ್ವರ

ವಿಕಿಪೀಡಿಯ ಇಂದ
Jump to navigation Jump to search
ಸಿ.ವಿ.ವಿಶ್ವೇಶ್ವರ
ಜನನ೬ ಮಾರ್ಚ್ ೧೯೩೮
ಮರಣಜನವರಿ ೧೬, ೨೦೧೭(2017-01-16) (aged ೭೮)
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಳುಸಾಪೇಕ್ಷ ಸಿದ್ಧಾಂತ, ಕಪ್ಪುರಂಧ್ರ
ಸಂಸ್ಥೆಗಳುರಾಮನ್ ಸಂಶೋಧನಾ ಸಂಸ್ಥೆ
ಭಾರತೀಯ ಖಭೌತವಿಜ್ಞಾನ ಸಂಸ್ಥೆ
ಅಭ್ಯಸಿಸಿದ ಸಂಸ್ಥೆಮೇರಿಲ್ಯಾಂಡ್ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಚಾರ್ಲ್ಸ್ ಡಬ್ಲೂ. ಮಿಸ್ನರ್
ಪ್ರಸಿದ್ಧಿಗೆ ಕಾರಣಕ್ವಾಸಿನಾರ್ಮಲ್ ಮೋಡ್ಸ್
ಕಪ್ಪುರಂಧ್ರಗಳು

ಪ್ರೊ. ಸಿ. ವಿ. ವಿಶ್ವೇಶ್ವರ ಅವರು ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್‌) ವಿಜ್ಞಾನಿ. ಇವರು ತಮ್ಮ ಬಳಗದಲ್ಲಿ ವಿಶು ಎಂದೇ ಪರಿಚಿತ[೧].ಕಪ್ಪು ರಂಧ್ರಗಳ ಕುರಿತ ಸಂಶೋಧನೆ ನಡೆಸುವ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಬೀಜಾಂಕುರ ಮಾಡಿದವರಲ್ಲಿ ಒಬ್ಬರಾಗಿದ್ದರು. ಇವರನ್ನು ಭಾರತದ ಕಪ್ಪುಕುಳಿಯ ಮನುಷ್ಯನೆಂದೇ ಕರೆಯುತ್ತಾರೆ[೨].

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ವಿಶ್ವೇಶ್ವರರವರು ಮಾರ್ಚ್ ೬, ೧೯೩೮ರಲ್ಲಿ ಬೆಂಗಳೂರಿನಲ್ಲಿ ಸಿ.ಕೆ.ವೆಂಕಟರಾಮಯ್ಯ ಮತ್ತು ಕೆ.ವೆಂಕಟಸುಬ್ಬಮ್ಮ ದಂಪತಿಗಳಿಗೆ ಹುಟ್ಟಿದರು. ತಮ್ಮ ಆರಂಭಿಕ ಶಿಕ್ಷಣವನ್ನು ಅಲ್ಲೇ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಅವರು ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ. ಪದವಿಯನ್ನು ಪಡೆದರು. ನಂತರ ಉನ್ನತ ಅಧ್ಯಯನಕ್ಕಾಗಿ ಅಮೆರಿಕೆಗೆ ಹೋದರು. ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ೧೯೬೮ರಲ್ಲಿ ತಮ್ಮ ಪಿ.ಎಚ್.ಡಿ. ಪದವಿಯನ್ನು ಪಡೆದರು. ಇಲ್ಲಿ ಚಾರ್ಲ್ಸ್ ಮಿಸ್ನರ್‌ರವರ ಮಾರ್ಗದರ್ಶನದಲ್ಲಿ ಶ್ವಾರ್ಸ್‌ಚೈಲ್ಡ್ ಅಳತೆಯ (metric) ಸ್ಥಿರತೆ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿದರು[೩].

ವೃತ್ತಿ, ಪ್ರವೃತ್ತಿ[ಬದಲಾಯಿಸಿ]

ತಮ್ಮ ಅಮೆರಿಕೆಯ ವಾಸದ ಬಳಿಕ ೧೯೭೬ರಲ್ಲಿ ವಿಶ್ವೇಶರರವರು ಬೆಂಗಳೂರಿಗೆ ಬಂದು ರಾಮನ್ ಸಂಶೋಧನಾ ಸಂಸ್ಥೆಯನ್ನು ಸೇರಿದರು. ನಂತರ ೧೯೯೨ರಲ್ಲಿ ಭಾರತೀಯ ಖಭೌತವಿಜ್ಞಾನ ಸಂಸ್ಥೆಯನ್ನು ಸೇರಿ ೨೦೦೫ರಲ್ಲಿ ನಿವೃತ್ತರಾದರು. ಜವಾಹರಲಾಲ್‌ ನೆಹರೂ ತಾರಾಲಯದ ನಿರ್ದೇಶಕರಾಗಿ ೧೯೮೭ರಿಂದ ೧೯೯೦ರವರೆಗೆ ಸೇವೆ ಸಲ್ಲಿಸಿದ್ದರು. ನಂತರವೂ, ತಮ್ಮ ನಿಧನದವರೆಗೂ ತಾರಾಲಯದಲ್ಲಿ ವಿವಿಧ ಕಾರ್ಯಭಾರಗಳಲ್ಲಿ ತೊಡಗಿಸಿಕೊಂಡಿದ್ದರು. ಇದಲ್ಲದೆ ಹಲವು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದರು. ಜವಹರಲಾಲ್‌ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಶಾಸ್ತ್ರೀಯ ಸಂಗೀತದ ಬಗೆಗೂ ಅವರಿಗೆ ಆಳವಾದ ಜ್ಞಾನವಿತ್ತು.

ಸಂಶೋಧನೆ[ಬದಲಾಯಿಸಿ]

ಪಿಎಚ್‌.ಡಿ ಸಂಶೋಧನೆ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶಕರಾಗಿದ್ದ ಪ್ರೊ. ಚಾರ್ಲ್ಸ್‌ ಮಿಸ್ನರ್‌ ಅವರ ಸೂಚನೆಯಂತೆ ಕಪ್ಪು ರಂಧ್ರಗಳ ಕುರಿತು ಸಂಶೋಧನೆ ನಡೆಸಿದ್ದರು. ನಮಗೆ ದೊರಕುವ, ಕಪ್ಪು ರಂಧ್ರದ ಕಡೆಯಿಂದ ಬರುತ್ತಿರುವ ಅಲೆಗಳು ಸ್ಥಿರ ಕಂಪನಾಂಕವನ್ನು ಹೊಂದಿದ್ದು, ಅವುಗಳ ಪಾರ (ಆ್ಯಂಪ್ಲಿಟ್ಯೂಡ್‌) ಮಾತ್ರ ಕಡಿಮೆ ಆಗುತ್ತಾ ಹೋಗುತ್ತದೆ (ಕ್ವಾಸಿ ನಾರ್ಮಲ್‌ ಮೋಡ್ಸ್‌) ಎಂಬುದನ್ನು ನಿರೂಪಿಸಿದ್ದರು. ೨೦೧೬ರಲ್ಲಿ ಲೀಗೋ ವೀಕ್ಷಣಾಲಯ ಪ್ರಕಟಿಸಿದ[೪] ಗುರುತ್ವಾಕರ್ಷಕ ಅಲೆಗಳ ವೀಕ್ಷಣೆಯು ೪೬ ವರ್ಷಗಳ ಹಿಂದೆ ವಿಶ್ವೇಶ್ವರರು ತಮ್ಮ ಗಣಿತದ ಲೆಕ್ಕಾಚಾರದ ಮೂಲಕ ಮುನ್ನುಡಿದಿದ್ದನ್ನು ಸಾಬೀತುಪಡಿಸಿತು.

ಕೃತಿ, ಸಾಹಿತ್ಯ, ವಿಜ್ಞಾನ ಪ್ರಚಾರ[ಬದಲಾಯಿಸಿ]

ಸಂಶೋಧನಾ ಗ್ರಂಥಗಳಲ್ಲದೆ ಜನಸಾಮಾನ್ಯರಿಗೂ ಹಲವು ಕೃತಿಗಳನ್ನು ಬರೆದಿದ್ದಾರೆ. ಕನ್ನಡದಲ್ಲೂ[ಸೂಕ್ತ ಉಲ್ಲೇಖನ ಬೇಕು] ಅವರು ವಿಜ್ಞಾನ ಸಾಹಿತ್ಯವನ್ನು ರಚಿಸಿದ್ದಾರೆ.

ಜನಪ್ರಿಯ ಕೃತಿಗಳು[೫][ಬದಲಾಯಿಸಿ]

 • ಐನ್‌ಸ್ಟೈನ್ಸ್‌ ಎನಿಗ್ಮಾ (ಬ್ಲ್ಯಾಕ್‌ ಹೋಲ್ಸ್‌ ಇನ್‌ ಮೈ ಬಬಲ್‌ ಬಾತ್‌)
 • ಯೂನಿವರ್ಸ್ ಅನ್‍ವೀಲ್ಡ್

ವಿಜ್ಞಾನ ಪ್ರಚಾರ[ಬದಲಾಯಿಸಿ]

ವಿಜ್ಞಾನದ ಪ್ರಚಾರಕ್ಕಾಗಿ ಅವರು ನೆಹರೂ ತಾರಾಲಯದಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಆರಂಭಿಸಿದರು. ಅವುಗಳಲ್ಲಿ ಪ್ರಮುಖವಾದವು:

 • ಬೇಸ್ (BASE:Bangalore Association for Science Education)
 • ಸೀಡ್ (SEED:Science Education in Early Development)
 • ಸೋ (SOW:Science Over the Weekends)
 • ರೀಪ್ (REAP:Research Education Advancement Programme)

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಯೋಗಗಳಿಗೆ ಅವರು ಬಹಳ ಪ್ರಾಮುಖ್ಯತೆಯನ್ನು ಕೊಟ್ಟರು[೩].

ಅವರು ಹಲವು ಪ್ರದರ್ಶನಗಳನ್ನೂ ಬರೆದು, ನಿರ್ದೇಶಿಸಿದ್ದಾರೆ. ಅವುಗಳು[೬]:

 • ನಮ್ಮ ಸೂರ್ಯ ಮತ್ತವನ ಕುಟುಂಬ
 • ಬ್ರಹ್ಮಾಂಡದ ಪ್ರಯಾಣ
 • ಭುವಿಯಾಚೆಗಿನ ಜೀವನ
 • ಗ್ರಹಣ
 • ಕಾಲ - ನಿರಂತರ ಝರಿ
 • ಆಲ್ಬರ್ಟ್ ಐನ್‍ಸ್ಟೈನ್
 • ಬಾಹ್ಯಾಕಾಶದ ಬಾಣಬಿರುಸು

ನಿಧನ[ಬದಲಾಯಿಸಿ]

ಸಿ.ವಿ.ವಿಶ್ವೇಶ್ವರ (78) ಅವರು ೧೬ ಜನವರಿ ೨೦೧೭ ಸೋಮವಾರ ರಾತ್ರಿ ನಿಧನರಾದರು.[೭]

ಉಲ್ಲೇಖಾರ್ಹ ಸಂಗತಿಗಳು[ಬದಲಾಯಿಸಿ]

ವಿಶ್ವೇಶ್ವರ ಅವರ ತಂದೆ ಸಿ.ಕೆ. ವೆಂಕಟರಾಮಯ್ಯನವರು ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಭಾಷಣವನ್ನು ಅನುವಾದಿಸಿ ಓದುತ್ತಿದ್ದರಿಂದ ಜನ ಅವರನ್ನು ಪ್ರೀತಿಯಿಂದ ‘ಕನ್ನಡದ ದಿವಾನ’ರು ಎಂದು ಕರೆಯುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]