ಸಿಟಿಎಸ್ ೨೦೧೦
ಚೆಕ್ ಮೊಟಕುಗೊಳಿಸುವ ವ್ಯವಸ್ಥೆ (ಚೆಕ್ ಟ್ರಂಕೇಶನ್ ಸಿಸ್ಟಮ್ ಅಥವಾ ಚೆಕ್ ವಿಲೆವಾರಿ ವ್ಯವಸ್ಥೆ ಅಥವಾ ಸಿಟಿಎಸ್ 2010) ಭೌತಿಕ ರೂಪದ ಬ್ಯಾಂಕ್ ಚೆಕ್ಕುಗಳನ್ನು ವಿಲೆವಾರಿ ಮಾಡುವ ಒಂದು ಆಧುನಿಕ ವ್ಯವಸ್ಥೆಯಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಇದನ್ನು ೧ ಅಗಸ್ಟ್ ೨೦೧೩ರಂದು ಭಾರತದಾದ್ಯಂತ ಜಾರಿಗೆ ತಂದಿತು. ಬ್ಯಾಂಕ್ ಚೆಕ್ಕುಗಳನ್ನು ಅತಿ ಶೀಘ್ರವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ[೧].
ಸಿಟಿಎಸ್ 2010 ಬರುವ ಮುನ್ನ
[ಬದಲಾಯಿಸಿ]ಸಿಟಿಎಸ್ 2010 ಜಾರಿಯಾಗುವ ಮುನ್ನಿನ ವ್ಯವಸ್ಥೆಯನ್ನು, ಒಂದು ಉದಾಹರಣೆಯ ಮೂಲಕ ನೋಡೋಣ. ನೀವು ಕರ್ನಾಟಕ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೀರಿ. ಯಾರೋ ಒಬ್ಬರಿಗೆ ನೀವು ನಿರ್ದಿಷ್ಟ ಮೊತ್ತದ ಚೆಕ್ ಬರೆದು ಕೊಟ್ಟಿದ್ದೀರಿ. ಚೆಕ್ ಪಡೆದವರು ಚೆಕ್ಕಿನಲ್ಲಿ ನಮೂದಿಸಿದ ಮೊತ್ತವನ್ನು ಪಡೆಯಲು ಆ ಚೆಕ್ಕನ್ನು ಅವರು ಕರ್ನಾಟಕ ಬ್ಯಾಂಕಿನ ಬೇರೆ ಯಾವುದೋ ಶಾಖೆಯಲ್ಲಿ ಜಮಾ ಮಾಡುತ್ತಾರೆ. ಈಗ ಈ ಚೆಕ್ಕು ಆ ಶಾಖೆಯಿಂದ ವಿಲೆವಾರಿ ಕೇಂದ್ರಕ್ಕೆ(ಕ್ಲಿಯರಿಂಗ್ ಹೌಸ್) ರವಾನೆಯಾಗುತದೆ. ಅಲ್ಲಿ ವಿವಿಧ ರೀತಿಯ ಮಾಹಿತಿಯನ್ನು ಪರಿಶೀಲಿಸಿದ ನಂತರ ಮತ್ತೆ ನಿಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಗೆ ಭೌತಿಕವಾಗಿ ರವಾನೆಯಾಗುತ್ತದೆ. ಇಲ್ಲಿ ನಿಮ್ಮ ಖಾತೆಯಲ್ಲಿನ ಮೊತ್ತ, ನೀವು ಚೆಕ್ಕಿನಲ್ಲಿ ಬರೆದ ಮೊತ್ತ ಖಾತೆಯ ಮಾಹಿತಿ ಮತ್ತಿತರ ವಿವರಗಳನ್ನು ಪರಿಶೀಲಿಸಿ ಕೊನೆಗೆ, ಚೆಕ್ ಜಮಾಕರ್ತರಿಗೆ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ.
ಈ ವ್ಯವಸ್ಥೆಯಲ್ಲಿ, ಒಂದು ಚೆಕ್ ವಿಲೇವಾರಿಯಾಗಲು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು. ಚೆಕ್ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ರವಾನೆಯಾಗುವ ಸಂದರ್ಭದಲ್ಲಿ ಚೆಕ್ ಹಾಳೆಯು ಹಾನಿಯಾಗುವ ಸಂಭವ ಇತ್ತು. ಅಲ್ಲದೆ ಬ್ಯಾಂಕುಗಳ ಚೆಕ್ಕುಗಳಲ್ಲಿ ಏಕರೂಪತೆ ಇರಲಿಲ್ಲ. ಅಂದರೆ, ಬ್ಯಾಂಕಿಗೆ ಅನುಗುಣವಾಗಿ ಚೆಕ್ಕಿನ ವಿನ್ಯಾಸ, ಗಾತ್ರ ಬದಲಾಗುತ್ತಿತ್ತು. ಮುಖ್ಯವಾಗಿ ಸಾಕಷ್ಟು ಭದ್ರತಾ ವೈಶಿಷ್ಟ್ಯಗಳು ಇರಲಿಲ್ಲ. ಆದ್ದರಿಂದ ಅವುಗಳನ್ನು ದುರುದ್ದೇಶಪೂರ್ವಕವಾಗಿ ತಿದ್ದಿ, ಬ್ಯಾಂಕು ಮತ್ತು ಗ್ರಾಹಕರಿಗೆ ಸುಲಭವಾಗಿ ಮೋಸ ಮಾಡಬಹುದಾಗಿತ್ತು.
ಅನುಷ್ಠಾನ
[ಬದಲಾಯಿಸಿ]ಸಿಟಿಎಸ್ 2010 ವ್ಯವಸ್ಥೆಯ ಗುಣಾವಗುಣಗಳನ್ನು ಪರೀಕ್ಷಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್, ೨೦೦೮ರ ಫೆಬ್ರವರಿ ೧ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹತ್ತು ಬ್ಯಾಂಕುಗಳ ಸಹಕಾರದೊಂದಿಗೆ ಸಿಟಿಎಸ್ ಆಧಾರಿತ ಚೆಕ್ಕನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತು[೨]. ಅದರ ಲೋಪದೋಷಗಳನ್ನು ತನಗೆ ವರದಿ ಮಾಡಲು ರಿಸರ್ವ್ ಬ್ಯಾಂಕ್, ಬ್ಯಾಂಕುಗಳಿಗೆ ೩೦ ಎಪ್ರಿಲ್ ೨೦೦೮ರವರೆಗೆ ಗಡುವು ನಿಗದಿಪಡಿಸಲಾಯಿತು.
೨೪ನೇ ಸೆಪ್ಟೆಂಬರ್ ೨೦೧೧ರಂದು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಸಹ ಸಿಟಿಎಸ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು[೩]. ಅದೇ ರೀತಿ ಮುಂಬೈನಲ್ಲಿ ಎಪ್ರಿಲ್ ೨೭, ೨೦೧೩ರಂದು ಸಿಟಿಎಸ್ ಆಧಾರಿತ ಚೆಕ್ಕನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು[೪].
ಚೆನ್ನೈ ಮತ್ತು ದೆಹಲಿಯಲ್ಲಿ ಸಿಕ್ಕ ತೃಪ್ತಿಕರವಾದ ಫಲಿತಾಂಶಗಳನ್ನು ಗಮನಿಸಿದ ಭಾರತೀಯ ರಿಸರ್ವ್ ಬ್ಯಾಂಕ್, ಸಿಟಿಎಸ್ 2010 ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತರಲು ನಿರ್ಧರಿಸಿತು. ಅದರಂತೆ ಆಗಸ್ಟ್ ೧ ೨೦೧೩ರಂದು ದೇಶದಾದ್ಯಂತ ಸಿಟಿಎಸ್ 2010 ಮಾನದಂಡದ ಚೆಕ್ ಅನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡುವಂತೆ ಬ್ಯಾಂಕುಗಳಿಗೆ ಆದೇಶಿಸಲಾಯಿತು[೫].
೧೭ನೇ ಜುಲೈ ೨೦೧೩ರಂದು ಒಂದು ಅಧಿಸೂಚನೆಯನ್ನು ಹೊರಡಿಸಿದ ಭಾರತೀಯ ರಿಸರ್ವ್ ಬ್ಯಾಂಕ್, ಹಳೆಯ ಮಾದರಿಯ ಚೆಕ್ಕುಗಳನ್ನು ವಿಲೇವಾರಿ ಮಾಡಲು, ೩೧ ಡಿಸೆಂಬರ್ ೨೦೧೩ರವರೆಗೆ ಗಡುವನ್ನು ವಿಸ್ತರಿಸಿತು[೬].
ಕೆಲಸ ಮಾಡುವ ಬಗೆ
[ಬದಲಾಯಿಸಿ]ಸಿಟಿಎಸ್ 2010 ವ್ಯವಸ್ಥೆಯಲ್ಲಿ ಚೆಕ್, ಭೌತಿಕವಾಗಿ ರವಾನೆಯಾಗುವುದಿಲ್ಲ. ಬದಲಾಗಿ ಆ ಚೆಕ್ಕನ್ನು ಸ್ಕ್ಯಾನ್ ಮಾಡಿ ಅದರ ಎಲೆಕ್ಟ್ರಾನಿಕ್ ಸ್ವರೂಪದ ಚಿತ್ರವನ್ನು ಮತ್ತು ಚೆಕ್ಕಿನಲ್ಲಿ ಮುದ್ರಿಸಲಾದ ಎಮ್‍ಐಸಿಆರ್ ಸಂಕೇತಾಕ್ಷರದಲ್ಲಿರುವ ದತ್ತಾಂಶಗಳನ್ನು ಸೆರೆಹಿಡಿಯಲಾಗುತ್ತದೆ. ನಂತರ ಈ ದತ್ತಾಂಶವನ್ನು ಒಳಗೊಂಡ ಕಡತವನ್ನು ಗೂಢಲಿಪೀಕರಣಗೊಳಿಸಿ(ಎನ್‍ಕ್ರಿಪ್ಟೆಡ್), ಉಚ್ಛಮಟ್ಟದ ಭದ್ರತಾ ವ್ಯವಸ್ಥೆ ಇರುವ ಗಣಕಜಾಲದ ಮೂಲಕ ವಿಲೆವಾರಿ ಕೇಂದ್ರ(ಕ್ಲಿಯರಿಂಗ್ ಹೌಸ್)ಕ್ಕೆ ಕಳಿಸಲಾಗುತ್ತದೆ. ದತ್ತಾಂಶಗಳನ್ನು ಪಡೆದುಕೊಂಡು, ವಿಲೆವಾರಿ ಕೇಂದ್ರದಲ್ಲಿ ತಂತ್ರಾಂಶದ ಸಹಾಯದಿಂದ ಸಂಸ್ಕರಿಸಲಾಗುತ್ತದೆ. ಹೀಗೆ ಪಡೆದ ದತ್ತಾಂಶಗಳನ್ನು ಮತ್ತು ಎಲೆಕ್ಟ್ರಾನಿಕ್ ಸ್ವರೂಪದ ಚಿತ್ರಗಳನ್ನು, ವಿಲೆವಾರಿ ಕೇಂದ್ರವು ಮೊತ್ತವನ್ನು ಪಾವತಿಸುವ ಬ್ಯಾಂಕುಗಳಿಗೆ (ಚೆಕ್ ವಿತರಿಸಿದ ಬ್ಯಾಂಕ್ ಶಾಖೆ ಮತ್ತು ಮೊತ್ತವನ್ನು ಜಮಾ ಮಾಡಬೇಕಾದ ಬ್ಯಾಂಕ್ ಶಾಖೆ) ತಲುಪಿಸುತ್ತದೆ. ಕೊನೆಗೆ ಚೆಕ್ ಜಮಾಕರ್ತನಿಗೆ ಚೆಕ್‍ನಲ್ಲಿ ನಮೂದಿಸಿದ ಮೊತ್ತವನ್ನು ಪಾವತಿಸಲಾಗುತ್ತದೆ[೭].
ಪ್ರಯೋಜನಗಳು
[ಬದಲಾಯಿಸಿ]- ಬ್ಯಾಂಕ್‍ಗಳಿಗೆ[೮]
- ಚೆಕ್ ವಿಲೇವಾರಿ ಮಾಡುವಲ್ಲಿ ಸಮಯದ ಉಳಿತಾಯ
- ದಿನದಲ್ಲಿ ಹೆಚ್ಚು ಚೆಕ್ಕುಗಳ ವಿಲೇವಾರಿ
- ಭೌತಿಕವಾಗಿ ಚೆಕ್ ರವಾನಿಸುವ ಅಗತ್ಯವಿಲ್ಲ, ಚೆಕ್ಕಿನ ಇಲೆಕ್ಟ್ರಾನಿಕ್ ಚಿತ್ರವನ್ನು ವಿಲೇವಾರಿ ಕೇಂದ್ರಕ್ಕೆ ಕಳಿಸಿದರೆ ಸಾಕು
- ಚೆಕ ಹಾಳೆಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.
- ಬ್ಯಾಂಕಿಗೆ ಮತ್ತು ಗ್ರಾಹಕರಿಗೆ ಆಗುವ ವಂಚನೆಯಿಂದ ಪಾರಾಗಬಹುದು.
- ಗ್ರಾಹಕರಿಗೆ[೯]
- ಕಡಿಮೆ ಸಮಯದಲ್ಲಿ ಚೆಕ್ಕುಗಳ ವಿಲೇವಾರಿ
- ಮೊತ್ತಕ್ಕಾಗಿ ಕಾಯುವ ಸಮಯದಲ್ಲಿ ಉಳಿತಾಯ
- ಹೆಚ್ಚು ಸುರಕ್ಷಿತವಾದ ವ್ಯವಹಾರ
- ಬಳಕೆದಾರಸ್ನೇಹಿ ವ್ಯವಹಾರ
ಸಿಟಿಎಸ್ 2010ರ ಮಾನದಂಡಗಳು
[ಬದಲಾಯಿಸಿ]ಸಿಟಿಎಸ್ 2010 ಬರುವ ಮುನ್ನ ಬ್ಯಾಂಕ್ ಚೆಕ್‍ಗಳ ಗಾತ್ರದಲ್ಲಿ ಅಗಾಧವಾದ ವ್ಯತ್ಯಾಸಗಳು ಇದ್ದವು. ಮುಖ್ಯವಾಗಿ ಸಾಕಷ್ಟು ಭದ್ರತಾ ವ್ಯವಸ್ಥೆ ಇರಲಿಲ್ಲ. ಸಿಟಿಎಸ್ 2010 ಮಾನದಂಡವು ಅಧೀಕೃತವಾಗಿ ಜಾರಿಯಾದ ಮೇಲೆ ಬ್ಯಾಂಕ್ ಚೆಕ್ಕುಗಳಿಗೆ ಒಂದು ನಿಗದಿತವಾದ ಗಾತ್ರ, ಸ್ವರೂಪ ದೊರಕಿತು, ಸಾಕಷ್ಟು ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಯಿತು.
ಸಿಟಿಎಸ್ 2010ರ ಮಾನದಂಡಗಳು, ಬ್ಯಾಂಕ್ ಚೆಕ್ಕಿನ ನಿರ್ದಿಷ್ಟ ಗಾತ್ರ, ಸ್ವರೂಪ, ಭದ್ರತಾ ವೈಶಿಷ್ಟ್ಯಗಳ ಬಗ್ಗೆ ತಿಳಿಸುತ್ತದೆ. ಕೆಲವೊಂದು ಮುಖ್ಯವಾದ ಅಂಶಗಳು[೧೦]:
- ಸಾಮಾನ್ಯ ನಿಯಮಗಳು
- ಹಾಳೆಯ ಗಾತ್ರ- ಚೆಕ್ ಹಾಳೆಯು ೧೦.೧ ಸೆಂಟಿ ಮೀಟರ್ ಉದ್ದ ೩.೯ ಸೆಂಟಿ ಮೀಟರ್ ಅಗಲ ಪ್ರಮಾಣದಲ್ಲಿ ಇರಬೇಕು.
- ಮುದ್ರಣಕ್ಕೆ ಬಳಸುವ ಶಾಯಿ- ಎಂಐಸಿಆರ್ ಸಂಕೇತಗಳನ್ನು ಮುದ್ರಿಸಲು ಕಪ್ಪು ಮ್ಯಾಗ್ನೆಟಿಕ್ ಶಾಯಿಯನ್ನು ಬಳಸಬೇಕು.
- ಕಾಗದದ ದಪ್ಪ- ಚೆಕ್ ಮುದ್ರಣಕ್ಕೆ ಬಳಸಲಾಗುವ ಕಾಗದ ೯೦ ಜಿಎಸ್‍ಎಮ್‍ನಷ್ಟು ದಪ್ಪ ಇರಬೇಕು.
- ಹಿನ್ನೆಲೆ ಬಣ್ಣ- ಕಪ್ಪು ಶಾಯಿಯಲ್ಲಿ ಬರೆದ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವಂತಾಗಲು, ಚೆಕ್ ಹಾಳೆಯು ತಿಳಿಯಾದ ಹಿನ್ನೆಲೆ ಬಣ್ಣವನ್ನು ಹೊಂದಿರಬೇಕು.
- ಭದ್ರತಾ ವೈಶಿಷ್ಟ್ಯಗಳು
- ಜಲಚಿಹ್ನೆ- ಚೆಕ್ಕಿನ ಹಾಳೆಯು ಸಿಟಿಎಸ್ ಇಂಡಿಯಾ ಜಲಚಿಹ್ನೆಯನ್ನು ಹೊಂದಿರಬೇಕು. ಜಲಚಿಹ್ನೆಯು ಅಂಡಾಕಾರದಲ್ಲಿದ್ದು, ವ್ಯಾಸವು 2.6 ರಿಂದ 3.0 ಸೆಂ.ಮೀ ಆಗಿರಬೇಕು. ಚೆಕ್ಕಿನ ಪ್ರತಿಯೊಂದು ಹಾಳೆಯು ಕನಿಷ್ಟ ಒಂದು ಪೂರ್ಣಪ್ರಮಾಣದ ಜಲಚಿಹ್ನೆಯನ್ನು ಹೊಂದಿರಬೇಕು.
- ವಾಯ್ಡ್ ಪಾಂಟೋಗ್ರಾಫ್- ಮೇಲ್ನೋಟಕ್ಕೆ ಇದೊಂದು ಕಲಸುಮೇಲೊಗರವಾಗಿರುವ ವಿನ್ಯಾಸದಂತೆ ಕಾಣಿಸುತ್ತದೆ. ಯಾವುದಾದರೂ ಚೆಕ್ ಹಾಳೆಯನ್ನು ನಕಲು ತೆಗೆದಾಗ, ಆ ನಕಲು ಪ್ರತಿಯಲ್ಲಿ ವಾಯ್ಡ್ (ನಕಲಿ, ಅನೂರ್ಜಿತ ಎಂಬರ್ಥದಲ್ಲಿ) ಎಂಬ ಅಕ್ಷರ ಕಾಣಿಸುತ್ತದೆ.
- ಅಗೋಚರ ಚಿಹ್ನೆ- ಬ್ಯಾಂಕಿನ ಲೋಗೋವನ್ನು ನೇರಳಾತೀತ ಶಾಯಿಯಲ್ಲಿ ಮುದ್ರಿಸಬೇಕು. ಈ ಚಿಹ್ನೆ ಬರಿಗಣ್ಣಿಗೆ ಕಾಣಿಸುವುದಿಲ್ಲ. ಚೆಕ್ ಹಾಳೆಯನ್ನು ನೇರಳಾತೀತ ಬೆಳಕಿಗೆ ಒಡ್ಡಿದಾಗ ಮಾತ್ರ ಈ ಚಿಹ್ನೆ ಕಾಣಿಸುತ್ತದೆ.
- ಮೈಕ್ರೋ ಲೆಟರಿಂಗ್(ಅತಿ ಚಿಕ್ಕ ಅಕ್ಷರಗಳು)- ಚೆಕ್ ಹಾಳೆಯಲ್ಲಿ ದಿನಾಂಕ, ಅಥವಾ ಮೊತ್ತವನ್ನು ಬರೆಯಬೇಕಾದ ಜಾಗದ ಅಡಿಗೆರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬ್ಯಾಂಕಿನ ಹೆಸರನ್ನು ಅತೀ ಚಿಕ್ಕ ಅಕ್ಷರಗಳಲ್ಲಿ ಮುದ್ರಿಸಿರುವುದನ್ನು ಕಾಣಬಹುದು. ಈ ಅಕ್ಷರಗಳು ಬರಿಗಣ್ಣಿಗೆ ಗೋಚರಿಸುವುದು ಕಷ್ಟ. ಹಾಗಾಗಿ ಭೂತಗನ್ನಡಿಯ ಸಹಾಯದಿಂದ ಈ ಅಕ್ಷರಗಳನ್ನು ನೋಡಬಹುದಾಗಿದೆ.
ಚೆಕ್ ವಿಲೆವಾರಿಗೆ ಗ್ರಿಡ್ ವ್ಯವಸ್ಥೆ
[ಬದಲಾಯಿಸಿ]ಗ್ರಾಹಕರಿಂದ ಸಲ್ಲಿಕೆಯಾದ ಚೆಕ್ಕುಗಳನ್ನು ತ್ವರಿತವಾಗಿ ವಿಲೆವಾರಿ ಮಾಡಲು ಬ್ಯಾಂಕುಗಳಿಗೆ ಗ್ರಿಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ಹಿಂದೆ ಇದ್ದ ೬೬ ಚೆಕ್ ವಿಲೆವಾರಿ ಕೇಂದ್ರಗಳನ್ನು ದಕ್ಷಿಣ, ಪಶ್ಚಿಮ ಮತ್ತು ಉತ್ತರ ಗ್ರೀಡ್‍ಗಳಲ್ಲಿ (ಒಟ್ಟು ೩ ಗ್ರಿಡ್‌ಗಳು) ಕ್ರೋಢೀಕರಿಸಲಾಗಿದೆ.
ಅವುಗಳ ಪಟ್ಟಿ ಈ ಕೆಳಗಿದೆ[೧೧].
ದಕ್ಷಿಣ ವಿಭಾಗ | ಪಶ್ಚಿಮ ವಿಭಾಗ | ಉತ್ತರ ವಿಭಾಗ |
---|---|---|
ಚೆನ್ನೈ | ಮುಂಬೈ | ದೆಹಲಿ |
ಕೊಯಂಬತ್ತೂರು | ಅಹ್ಮದಾಬಾದ್ | ಆಗ್ರಾ |
ಹೈದರಾಬಾದ್ | ಪುಣೆ | ಅಲಹಾಬಾದ್ |
ತಿರುವನಂತಪುರ | ಸೂರತ್ | ಅಮೃತ್‍ಸರ್ |
ಇರೋಡ್ | ನಾಗ್ಪುರ | ಭಿಲ್ವಾರಾ |
ತಿರುಪ್ಪೂರ್ | ವಡೋದರಾ | ಚಂಢೀಗಡ |
ಬೆಂಗಳೂರು | ಇಂದೋರ್ | ಡೆಹ್ರಾಡೂನ್ |
ಕೊಲ್ಕತ್ತಾ | ರಾಜ್‍ಕೋಟ್ | ಗೋರಖ್‍ಪುರ |
ತಿರುನಲ್ವೇಲಿ | ನಾಸಿಕ್ | ಜೈಪುರ |
ಎರ್ನಾಕುಲಮ್ | ಭೋಪಾಲ್ | ಜಲಂಧರ್ |
ಸೇಲಮ್ | ಪಂಜಿಮ್ | ಜಮ್ಮು |
ತ್ರಿಶೂರು | ಗ್ವಾಲಿಯರ್ | ಜೆಮ್‍ಶೆಡ್‍ಪುರ |
ವಿಶಾಖಪಟ್ಟಣಂ | ರಾಯ್ಪುರ | ಜೋಧಪುರ |
ವಿಜಯವಾಡ | ಕೊಲ್ಹಾಪುರ | ಕಾನ್ಪುರ |
ಹುಬ್ಬಳ್ಳಿ | ಔರಂಗಾಬಾದ್ | ಕೋಟಾ |
ಕೋಝಿಕೋಡ್ | ಜಬಲ್ಪುರ | ಲಖ್ನೋ |
ಮಧುರೈ | ಸೋಲಾಪುರ | ಲುಧಿಯಾನಾ |
ತಿರುಚಿರಾಪಳ್ಳಿ | ಜಾಮ್ನಗರ್ | ಪಾಟ್ನಾ |
ಪುದುಚೇರಿ | ಭಾವ್‍ನಗರ್ | ರಾಂಚಿ |
ಮೈಸೂರು | ಆನಂದ್ | ಉದಯಪುರ |
ಮಂಗಳೂರು | ವಾರಣಾಸಿ | |
ಬೆಳಗಾವಿ | ||
ಭುವನೇಶ್ವರ | ||
ಗುವಾಹಟಿ | ||
ಕಟಕ್ |
ಇವನ್ನೂ ಗಮನಿಸಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "FREQUENTLY ASKED QUESTIONS (FAQ) ON CHEQUE TRUNCATION PROJECT IN THE NATIONAL CAPITAL REGION" (PDF). rbidocs.rbi.org.in. Reserve Bank of India Department of Payment & Settlement Systems Central Office Mumbai. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "Non-CTS-2010 cheques to be cleared till Dec 31: RBI". indiainfoline.com. IIFL Finance Ltd. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ ""CTS-2010 Standard" for Cheque Forms – Specifications" (PDF). rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.
- ↑ "FREQUENTLY ASKED QUESTIONS". www.rbi.org.in. ಭಾರತೀಯ ರಿಸರ್ವ್ ಬ್ಯಾಂಕ್. Retrieved 26 September 2020.