ವಿಷಯಕ್ಕೆ ಹೋಗು

ಸಸ್ಯ ವಿವಾಹಕ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಸ್ಯಗಳ ವಿವಾಹಕ್ರಮ

[ಬದಲಾಯಿಸಿ]

ಮನುಷ್ಯಜಾತಿಯಲ್ಲಿ ಸ್ತ್ರೀಪುರುಷರಿಗೆ ಸಾಮಾನ್ಯ ಪದ್ಧತಿಯೆಂದು ಎಲ್ಲೆಲ್ಲು ಎಣಿಸಲ್ಪಟ್ಟಿರುವುದು. ಈ ಪದ್ಧತಿಯನ್ನು ನಾವು ಬಹಳ ಪವಿತ್ರವಾದುದೆಂದು ನಂಬಿ, ಇದಕ್ಕೆ ವಿಶೇಷ ಪ್ರಾಶಸ್ತ್ಯವನ್ನು ಕೊಟ್ಟಿರುವುದಕ್ಕೆ, ನಮ್ಮ ದೇವರುಗಳಲ್ಲಿಯೂ ಈ ಪದ್ಧತಿಯು ಇರುವಂತೆ ಭಾವಿಸಿ, ಗಿರಿಜಾಕಲ್ಯಾಣ, ಶ್ರೀನಿವಾಸಕಲ್ಯಾಣ ಮೊದಲಾದುವನ್ನು ನಮ್ಮ ದೇವಸ್ಥಾನಗಳಲ್ಲಿ ವಿಧಿವತ್ತಾಗಿ ನಡೆಯಿಸುತ್ತಿರುವುದೇ ದೃಷ್ಟಾಂತಗಳಿವೆ. ಮೃಗ ಜಾತಿಯಲ್ಲಿಯೂ, ಇತರ ಎಲ್ಲಾ ಪ್ರಾಣಿ ವರ್ಗದಲ್ಲಿಯೂ ಇದೇ ಪದ್ಧತಿ ಇರುವುದೆಂದೇ ಹೇಳಬಹುದು. ಕೆಲವು ಪ್ರಾಣಿಗಳ ಮಿಥುನಗಳು ಅಗಲದೆ ಬಹುಕಾಲ ಅನ್ಯೋನ್ಯವಾಗಿರುವುವು; ಮತ್ತೆ ಕೆಲವು ತಾತ್ಕಾಲಿಕ ಸಂಬಂಧವನ್ನು ಮಾತ್ರ ಮಾಡುವುವು. ಹೀಗೆ ಮದುವೆಯ ಪದ್ಧತಿಯು ಪ್ರಾಣಿಕೋಟಿಯಲ್ಲೆಲ್ಲಾ ಸ್ವಾಭಾವಿಕವಾಗಿ ಹರಡಿಕೊಂಡಿರುವಲ್ಲಿ, ಜೀವರಾಶಿಗೆ ಸೇರಿದ ಸಸ್ಯಗಳಲ್ಲಿಯೂ ಇಂತಹ ಪದ್ಧತಿ ಇರಬಹುದೆ ಎಂಬುದನ್ನು ವಿಚಾರ ಮಾಡುವುದು ಅವಶ್ಯಕ.[] ಆದರೆ, ಈ ವಿಚಾರವನ್ನು ಮಾಡುವುದಕ್ಕೆ ಮೊದಲು, “ಮೊದಲು ಎಂದರೇನು?” ಎಂಬ ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಮನುಷ್ಯರಲ್ಲಿ ನಡೆಯುವ ಮದುವೆಗೂ, ಇತರ ಪ್ರಾಣಿಗಳಲ್ಲಿ ನಡೆಯುವ ಮದುವೆಗೂ ಅನೇಕ ವ್ಯತ್ಯಾಸಗಳುಂಟು. ಮನುಷ್ಯವರ್ಗದಲ್ಲಿಯೇ ಮದುವೆಯ ಪದ್ಧತಿಗಳು ಬಗೆಬಗೆಯಾಗಿರುವುವು. ಆದುದ್ದರಿಂದ ಈ ಪದ್ಧತಿಗಳು ಜೀವರಾಶಿಯಲ್ಲೆಲ್ಲಾ, ಎಷ್ಟೇ ವ್ಯತ್ಯಾಸಗಳನ್ನು ಹೊಂದಿದ್ದರೂ, ಎಲ್ಲಾ ತರದ ಮದುವೆಗಳಿಗೂ ಸಾಮಾನ್ಯವಾಗಿರುವ ವಿಷಯವು ಯಾವುದು ಎಂಬುದನ್ನು ತಿಳಿದುಕೊಳ್ಳಬೇಕು. ಗಂಡಿನಿಂದ ಒಂದು, ಹೆಣ್ಣಿನಿಂದ ಒಂದು, ಬಂದ ಎರಡು ಪ್ರಾಣ್ಯಣುಕೋಶಗಳು ಒಟ್ಟುಗೂಡಿ, ವಂಶಾಭಿವೃದ್ಧಿಯಾಗುವುದಕ್ಕೆ ಮಾರ್ಗವಾದಲ್ಲಿ, ಈ ಒಟ್ಟುಗೂಡುವ ಕಾರ್ಯಕ್ಕೆ ‘ಮದುವೆ’ ಎಂಬ ಹೆಸರನ್ನು ಕೊಡಬಹುದು. ಒಂದು ಕುಟುಂಬದಲ್ಲಿ ಎಳೆಯ ಮಗುವೊಂದನ್ನು ನೋಡಿದರೆ ಆ ಮಗುವಿನ ಮಾತಾಪಿತೃಗಳು ವಿವಾಹಿತರು ಎಂದು ಹೇಳಬಹುದು. ಹೀಗೆಯೇ ಸಸ್ಯಗಳ ಮಕ್ಕಳನ್ನು ಕಂಡಲ್ಲಿ ಸಸ್ಯಗಳಲ್ಲಿಯೂ ವಿವಾಹಕ್ರಮವಿರಬೇಕೆಂದು ಊಹಿಸಬಹುದು.

ಸಸಿಗಳ ಸಂತಾನ

[ಬದಲಾಯಿಸಿ]

ಮನುಷ್ಯರಲ್ಲಿಯೂ ಇತರ ಪ್ರಾಣಿಗಳಲ್ಲಿಯೂ ನಮಗಿರುವ ಅನುಭವದಿಂದ, ಹೆರುವ ಕಾರ್ಯವು ಹೆಣ್ಣು ಜಾತಿಯದೇ ಎಂದು ತಿಳಿದಿರುವೆವು. ಬೀಜಗಳಿರುವುದು ಸಸ್ಯಗಳ ಹಣ್ಣುಗಳಲ್ಲಿ; ಆದುದರಿಂದ ಬೀಜಗಳುಳ್ಳ ಹಣ್ಣನ್ನು ಗರ್ಭಿಣಿ ಸ್ತ್ರೀಯೊಡನೆ ಹೋಲಿಸಬಹುದು. ಸಸ್ಯಗಳಲ್ಲಿ ಬಿಡುವ ಹೂವಿಗೂ ಕಾಯಿಗೂ ಕೇವಲ ಸಮೀಪ ಸಂಬಂಧವಿರುವುದೆಂದು ನಮಗೆ ತಿಳಿದಿರುವುದು. ಹೂ ಬಿಡದಿದ್ದರೆ ಕಾಯಿಯಾಗಲು ಸಾಧ್ಯವಿಲ್ಲ. ಆದುದ್ದರಿಂದ ಸಸ್ಯಗಳ ವಿವಾಹಕ್ರಮವನ್ನು ಅರಿಯಬೇಕಾದರೆ ಹೂಗಳನ್ನು ಪರೀಕ್ಷೆ ಮಾಡಬೇಕು. ಯಾವುದಾದರೂ ಒಂದು ಸಾಮಾನ್ಯವಾದ ಹೂವನ್ನು- ಎಂದರೆ, ಅವರೆಯ ಹೂವನ್ನೋ, ಬಟಾಣಿಯ ಹೂವನ್ನೋ, ಅಗಸೆಯ ಹೂವನ್ನೋ ಪರೀಕ್ಷೆಗಾಗಿ ತೆಗೆದುಕೊಳ್ಳೋಣ. ಪ್ರತಿಯೊಂದು ಹೂವಿನಲ್ಲಿಯೂ ವಿಶೇಷ ಕಾಂತಿಯುಳ್ಳ, ಬಣ್ಣವಿರುವ ರೇಕುಗಳಿರುವುವು; ಅವು ಸುವಾಸನೆಯುಳ್ಳವಾಗಿಯೂ ಇರಬಹುದು. ಸಾಮಾನ್ಯವಾಗಿ ನಾವು ಹೂವನ್ನು ತಿಳಿಯಬೇಕಾದರೆ ಅದರ ಕಾಂತಿಯುಕ್ತವಾದ ರೇಕುಗಳಿಂದ ಸಾಧ್ಯ. ಈ ರೇಕುಗಳಿಗೆ ಹೊರಗಡೆ ಬಟ್ಟಲಿನಂತಿರುವ ಹಸಿರು ಬಣ್ಣದ ಒಂದು ಅಂಗವಿರುವುದು. ಇದನ್ನು ‘ವೃಂತ’ವೆಂದು ಕರೆಯುವರು. ಈ ಪುಷ್ಪಕೋಶವು, ಹೂವು ಮೊಗ್ಗಾಗಿರುವಾಗ, ಅದರ ಹೊದಿಕೆಯಾದ ಅಂಗವಾಗಿ ಕಾಣಬರುವುದು. ಈ ರೇಕುಗಳನ್ನೂ ವೃಂತವನ್ನೂ ಕಿತ್ತುಹಾಕಿದರೆ, ದಾರದಂತಿರುವ ಕೆಲವು ಕೇಸರಗಳು ಕಾಣಬರುವುವು. ಈ ಕೇಸರಗಳು ತಮ್ಮ ನಡುವೆ ಇರುವ ಒಂದು ಹಸಿರುಬಣ್ಣದ ಲಿಂಗವನ್ನು ಸುತ್ತಿಕೊಂಡಿರುವುವು; ಈ ಲಿಂಗವೇ ‘ಅಂಡಾಶಯ’ವು; ಇದೇ ಮುಂದೆ ಹಣ್ಣಾಗಿ ಬೆಳೆಯುವ ಅಂಗ. ಆದುದರಿಂದ ಇದನ್ನು ಹೆಣ್ಣು ಎಂದು ತಿಳಿಯಬೇಕು. ಈ ಲಿಂಗದ ಕೆಳಭಾಗವು ಟೊಳ್ಳಾಗಿದ್ದು ಮುಂದೆ ಆಗುವ ಬೀಜಗಳ ಪೂರ್ವರೂಪಗಳನ್ನು ಒಳಗೊಂಡಿರುವುದು. ಇನ್ನೂ ಅರಳದೆ ಇರುವ ಒಂದು ಹೂವಿನಲ್ಲಿನ ಅಂಡಾಶಯವನ್ನು ಪರೀಕ್ಷಿಸಿ ನೋಡಿದರೆ ಇದರಲ್ಲಿ ಬೀಜದ ಅಂಕುರಗಳು ಇರುವುದಿಲ್ಲ. ಆದರೆ ಹೆಣ್ಣು ಅಣುವಿರುವ ಅಂಡಗಳು ಮಾತ್ರ ಕಾಣಬರುವುವು. ಬೀಜಗಳು ಆಗಬೇಕಾದರೆ ಈ ಸ್ತ್ರೀ ಅಣುವಿಗೆ ಪುರುಷಾಣುವಿನ ಸಂಬಂಧವಾಗಬೇಕು. ಒಂದು ಕೇಸರವನ್ನು ಚೆನ್ನಾಗಿ ಪರೀಕ್ಷಿಸಿ ನೋಡಿದಾಗ ಅದು ಒಂದು ಉದ್ದವಾದ ದಾರದಂತಿದ್ದು, ಕೊನೆಯಲ್ಲಿ ಒಂದು ಟೊಳ್ಳು ಸಂಪುಟವನ್ನುಂಟಾಗಿರುವುದು. ಈ ಸಂಪುಟದಲ್ಲಿ ಒಂದು ಪುಡಿಯಿರುವುದು. ಇದನ್ನು ‘ಪರಾಗ’ವೆಂದು ಕರೆಯುವರು. ಅರಳಿದ ಒಂದು ಹೂವನ್ನು ಅಲ್ಲಾಡಿಸಿದರೆ ಇದರಿಂದ ಒಂದು ಹಳದಿಯ ಒಣಗಿದ ಪುಡಿಯು ಉದುರುವುದು; ಇದೇ ಪರಾಗ. ಇದರಲ್ಲಿರುವ ಪುರುಷಾಣುವು ಅಂಡದಲ್ಲಿರುವ ಸ್ತ್ರೀ ಅಣುವಿನೊಡನೆ ಕಲೆತು ಏಕೀಭವಿಸಿದರೆ ಬೀಜಗಳು ಆಗುವುದು. ಆದುದರಿಂದ ಕೇಸರವನ್ನು ಗಂಡು ಎಂದು ಕರೆಯಲಾಗುವುದು. ಆದರೆ, ಈ ಗಂಡು ಹೆಣ್ಣುಗಳು ಕಲೆಯುವ ಬಗೆ ಹೇಗೆ? ಕೇಸರದ ಪರಾಗವು ಅಂಡಾಶಯದ ಮೇಲ್ಭಾಗದಲ್ಲಿನ ಅಂಟಾಗಿರುವ ‘ಕೀಲಾಗ್ರ’ವೆಂಬ ಪ್ರದೇಶದ ಮೇಲೆ ಬೀಳುವುದು. ಈ ಕಾರ್ಯಕ್ಕೆ ‘ಪರಾಗಿತ’ವೆಂಬ ಹೆಸರಿಂದ ಕರೆಯುತ್ತಾರೆ. ಇದನ್ನು ಮದುವೆಯಲ್ಲಿ ನಡೆಯುವ ನಿಶ್ಚಿತಾರ್ಥವೆನ್ನಬಹುದು. ಹೀಗೆ ಬಿದ್ದ ಪರಾಗವು ಅಂಡವನ್ನು ತಾಕಲು ತಕ್ಕಷ್ಟು ಉದ್ದವಾದ ಒಂದು ನಾಳವನ್ನು ನೀಡುವುದು. ಈ ನಾಳವು ಅಂಡದ ಬಾಯನ್ನು ಹೊಕ್ಕು ಅಲ್ಲಿ ಅರಳುವುದು. ಅದರಲ್ಲಿನ ಪುರುಷಾಣುಗಳು ಅಂಡದಲ್ಲಿನ ಸ್ತ್ರೀಅಣುಗಳನ್ನು ಸೇರುವುವು. ಇದನ್ನು ನಿಷೇಕ ಅಥವಾ ಗರ್ಭಧಾನವೆನ್ನಬಹುದು. ಇಲ್ಲಿ, ವಿವಾಹದ ಮುಖ್ಯ ಕರ್ಮಗಳೆಲ್ಲವೂ ನಡೆದಂತಾಯಿತು. ಪುರುಷ ವರ್ಗದ ಕೇಸರದಿಂದ ಬಂದ ಅಣುವು ಸ್ತ್ರೀವರ್ಗದ ಅಂಡಾಶಯದಲ್ಲಿರುವ ಅಣುವುನೊಡನೆ ಕಲೆಯುವುದರಿಂದ ಶಿಶುವು ಜನಿಸುವುದು. ಗಂಡು ಹೆಣ್ಣು ಸಹ ಒಂದೇ ಹೂವಿನಲ್ಲಿ ಬಹಳ ಹತ್ತಿರದಲ್ಲಿದ್ದು, ಪ್ರೇಮಾತಿಶಯದಿಂದ ಬಿಗಿದಪ್ಪಿಕೊಂಡಿರುವ ದಂಪತಿಗಳಂತೆ ಮೆರೆದು, ಬಣ್ಣ ಬಣ್ಣದಿಂದ ಹೊಳೆಯುತ್ತಿರುವ ರೇಕುಗಳಿಂದ ಹೊರಕ್ಕೆ ಕಾಣದಂತೆ ಆವರಿಸಲ್ಪಟ್ಟು, ಅಂತರಿಕ್ಷಕ್ಕೆ ಮಾತ್ರ ಮೈದೆರೆದುಕೊಂಡಿರುವುವು. ಸ್ತ್ರೀ ಪುರುಷ ಭಾಗಗಳು ಒಂದರಲ್ಲಿಯೇ ಇರುವ ಹೂವು ಅರ್ಧನಾರೀಶ್ವರನನ್ನು ನೆನಪಿಗೆ ತರುವುದು. ಆದರೆ, ಒಂದೇ ಹೂವಿನಲ್ಲಿರುವ ಗಂಡು ಹೆಣ್ಣುಗಳ ಸಂಬಂಧವು ಎಂಥಾದ್ದು? ಗಂಡಹೆಂಡರಿಗಿರುವ ಸಂಬಂಧವೇ? ಅಲ್ಲ; ಸೋದರಿ-ಸೋದರರಿಗಿರುವ ಸಂಬಂಧ. ನಾವು ನಂಬಿರುವಂತೆಯೇ ಹೂಗಳೂ ಕೇವಲ ಹತ್ತಿರದ ರಕ್ತಸಂಬಂಧವು ಲಿಂಗಪುಷ್ಟಿಗೂ, ಅವಿರುದ್ಧ ಸಂಬಂಧಕ್ಕೂ ಹಾನಿಕರವೆಂದು ಅರಿತಿರುವಂತೆ ತೋರುತ್ತದೆ. ಆದುದರಿಂದ ಹೆಂಗಳಿಗೆ ಗಂಡಂದಿರನ್ನೂ, ಗಂಡಸರಿಗೆ ಹೆಂಡತಿಯರನ್ನೂ, ಹೊರಗಿನಿಂದ ಹುಡುಕಿ ತರಬೇಕಾಗಿರುವುದು. ಈ ಅನ್ವೇಷಣವು ವಿಧವಿಧವಾದ ಪದ್ಧತಿಗಳಿಗೆ ಕಾರಣವಾಗಿರುವುದು.

ಪ್ರಾಣ್ಯುಣುಗಳ ಐಕ್ಯವು ಆಗಬೇಕಾದರೆ ಕೇಸರಗಳ ಪರಾಗವು ಅಂಡಾಶಯದ ಕೀಲಾಗ್ರಕ್ಕೆ ಸೇರಬೇಕು. ಒಂದೇ ಹೂವಿನ ಕೇಸರಗಳೂ ಅಂಡಾಶಯಗಳೂ ಸಂಬಂಧವನ್ನು ಬೆಳೆಸಿದಲ್ಲಿ ಪರಾಗವನ್ನು ಕೀಲಾಗ್ರದ ಬಳಿಗೆ ಸಾಗಿಸುವುದು ಏನೂ ಕಷ್ಟವಾಗಲಾರದು. ಆದರೆ, ಒಂದು ಹೂವಿನ ಪರಾಗವು ಮತ್ತೊಂದು ಹೂವಿನ ಕೀಲಾಗ್ರಕ್ಕೆ ಹೋಗಬೇಕಾದರೆ, ಮಧ್ಯೆ ಪ್ರಯಾಣದ ತೊಂದರೆಗಳು ಅನೇಕವಾಗಿ ಬಂದು ಒದಗುವುವು; ಏಕೆಂದರೆ, ಕೇಸರಗಳೂ ಅಂಡಾಶಯಗಳೂ ಚಲನಕ್ಕೆ ಅವಕಾಶವಿಲ್ಲದಂತೆ ಹೂವಿನಲ್ಲಿ ಸ್ಥಿರವಾಗಿರುವುವು. ಆದುದರಿಂದ ಪರಾಗದ ಸಂಚಾರಕ್ಕೆ ಉಪಾಯಗಳು ಯಾವುವು?

ವಿಹಾರ ವರ್ಣನೆ

[ಬದಲಾಯಿಸಿ]

ಗಿಡದ ಮೇಲೆ ಅರಳಿರುವ ಹೂವೊಂದನ್ನು ತಾಳ್ಮೆಯಿಂದ ಸ್ವಲ್ಪ ಹೊತ್ತು ಚೆನ್ನಾಗಿ ಪರೀಕ್ಷಿಸಿ ನೋಡೋಬೇಕು. ದುಂಬಿ ಅಥವಾ ಚಿಟ್ಟೆ ಹುಳು ಬಂದು ಸೇರುವುದು. ದುಂಬಿಯೂ ಹೂವಿನೊಳಕ್ಕೆ ಆಳವಾಗಿ ಹೊಕ್ಕು, ಅಲ್ಲಿ ಕೊಂಚ ಹೊತ್ತಿದ್ದು, ಪುನ: ಹೊರಕ್ಕೆ ಬಂದು ಹಾರಿಹೋಗಿ, ಮತ್ತೊಂದು ಹೂವಿನ ಮೇಲೆ ಕುಳಿತುಕೊಳ್ಳುವುದು. ಹೀಗೆ ಹೂವಿನಿಂದ ಹೊರಕ್ಕೆ ಹೊರಟ ದುಂಬಿಯೊಂದನ್ನು ಹಿಡಿದು ಸರಿಯಾಗಿ ಗಮನಿಸಬೇಕು. ದುಂಬಿಯ ಮೈಗೆಲ್ಲಾ ಪರಾಗವು ಅಂಟಿಕೊಂಡಿರುವುದು. ಮತ್ತೊಂದು ಹೂವಿನೊಳಕ್ಕೆ ಹೊಕ್ಕು, ಈ ದುಂಬಿಯು ಆ ಪುಷ್ಪದ ಅಂಡಾಶಯದ ಕೀಲಾಗ್ರವನ್ನು ತಾಕುವುದು. ಅಂಟಾಗಿರುವ ಆ ಕೀಲಾಗ್ರಕ್ಕೆ ಪರಾಗವು ಹತ್ತಿಕೊಂಡಾಗ ನಿಶ್ಚಿತಾರ್ಥಮುಹೂರ್ತವು ನೆರವೇರಿದಂತಾಗುತ್ತದೆ. ಹೂವು ಮಗುವಾಗಿರುವಾಗ-ಎಂದರೆ, ಅದರ ಜನನೇಂದ್ರಿಯಗಳು ಇನ್ನೂ ಬಲಿಯದೆ ಇರುವಾಗ, ಅದು ಮೊಗ್ಗಾಗಿ, ಹಸಿರು ಬಣ್ಣದಿಂದ ಕೂಡಿ, ನೋಡುವುದಕ್ಕೆ ಅಂದವಿಲ್ಲದೆ ಇರುವುದು; ಬಲಿತಮೇಲೆ ಹೂವಿನ ಸುಂದರವಾದ ರೇಕುಗಳು ವಿಕಸಿತವಾಗಿರುವುವು. ಈ ರೇಕುಗಳಿಂದಲೇ ಹೂಗಳು ನಮ್ಮ ಕಣ್ಣಿಗೆ ಬೀಳುವುದು. ಇವುಗಳಿಲ್ಲದಿದ್ದರೆ, ಜನನೇಂದ್ರಿಯಗಳಿದ್ದರೂ, ಹೂವು ಕಣ್ಣಿಗೆ ಕಾಣದೆ ಹೂ ಎಂಬ ಹೆಸರಿಗೆ ಪಾತ್ರವಾಗದೆಯೇ ಇರುತ್ತಿತ್ತು. ರೇಕುಗಳಿಲ್ಲದಿದ್ದರೆ ಪುಷ್ಪವೇ ಇಲ್ಲವೆಂದು ತಿಳಿಯುವೆವು. ಆದರೆ ಯಾರ ಸಂತೋಷಕ್ಕಾಗಿ, ಯಾರ ಅಚ್ಚರಿಗಾಗಿ, ಯಾರ ಗಮನವನ್ನು ಸೆಳೆಯುವುದಕ್ಕಾಗಿ ಈ ಸೌಂದರ್ಯರಾಶಿಯು ವಿಸ್ತರಿಸುವುದು? ತಮ್ಮ ಪ್ರಿಯರಿಗಾಗಲ್ಲ. ಮನುಷ್ಯಜಾತಿಯಲ್ಲಿಯೂ ಹೀಗೆಯೇ ಅಲ್ಲವೆ? ಗಂಡನು ತನ್ನ ಪ್ರಿಯಳಿಗಾಗಿಯೂ, ಹೆಂಡತಿಯು ತನ್ನ ಪ್ರಿಯನಿಗಾಗಿಯೂ ಸಿಂಗಾರವನ್ನು ಮಾಡಿಕೊಳ್ಳವುದು ಅಪರೂಪ; ಸೊಗಸುಮಾಡಿಕೊಳ್ಳುವುದೆಲ್ಲವೂ ಸಾಮಾನ್ಯವಾಗಿ ಇತತರ ಮೆಚ್ಚಿಕೆಗಾಗಿಯೇ. ಹಾಗಾದರೆ ಹೂಗಳ ಸಿಂಗಾರವು, ಸುವರ್ಣದಲ್ಲಿಯೂ, ಸುಗಂಧದಲ್ಲಿಯೂ ಅಭಿರುಚಿಯಿಲ್ಲದ ತಮ್ಮ ಪ್ರಿಯರಿಗಲ್ಲದೆ, ಮತ್ತಾರಿಗಾಗಿ? ದುಂಬಿಗಳಿಗಾಗಿಯೂ ಇತರ ಹುಳುಗಳಿಗಾಗಿಯೂ ಅಲ್ಲವೆ! ಇವು ಹೂಗಳ ಬಣ್ಣಕ್ಕೂ ವಾಸನೆಗೂ ಭ್ರಮೆಗೊಂಡು, ಹೂಗಳನ್ನು ಹೊಕ್ಕು, ಅವುಗಳ ವಿವಾಹ ಕರ್ಮವನ್ನು ನಡೆಸುತ್ತವೆ.

ವಿವಾಹ ಕ್ರಮ

[ಬದಲಾಯಿಸಿ]

ಮದುವೆಯು ನಡೆಯುವಂತೆ ಮಾಧ್ಯಸ್ಥಮಾಡುವ ಅಜ್ಜಮ್ಮನಿಗೂ, ಮದುವೆಯನ್ನು ವಿಧಿವತ್ತಾಗಿ, ಮಾಡಿಸುವ ಪುರೋಹಿತನಿಗೂ, ಅವರು ಮಾಡಿದ ಕೆಲಸಕ್ಕೆ ಸಂಭಾವನೆಯನ್ನು ಕೊಡಬೇಕಲ್ಲವೆ? ಚಿತ್ರವರ್ಣದಿಂದ ಕೂಡಿದ ಪುಷ್ಪಪತ್ರಗಳೇ ಮದುವೆಯಾಗತಕ್ಕ ದಂಪತಿಗಳು ಎಲ್ಲಿರುವರೆಂದು ತೋರಿಸುವ ವಿವಾಹಮಂಟಪ, ಹೂವಿನ ಸುಗಂಧವೇ ಮಂಗಳವಾದ್ಯ, ದುಂಬಿಯೇ ಪುರೋಹಿತ, ಹೂಗಳಲ್ಲಿನ ಮಕರಂದವೇ ದುಂಬಿಯು ಮಾಡಿಸಿದ ವಿವಾಹಕರ್ಮಕ್ಕೆ ಕೊಟ್ಟ ಸಂಭಾವನೆ. ನಾವು ಪುರೋಹಿತನಿಗೆ ಸಂಭಾವನೆಯನ್ನು ಕೊಡುವುದು ವಿವಾಹವೆಲ್ಲವೂ ನಡೆದ ಮೇಲಲ್ಲದೆ ಮೊದಲೇ ಅಲ್ಲ; ಪುಷ್ಪಗಳು ಹೀಗೆಯೇ. ಪುಷ್ಪಪತ್ರಗಳ ಕೊನೆಯಲ್ಲಿದ್ದ ಪಕ್ಷಕ್ಕೆ ದುಂಬಿಯು ಅಲ್ಲಿಯೇ ಕುಳಿತು ಮಕರಂದವನ್ನು ಪಾನಮಾಡಿ, ತಾನು ಮಾಡಬೇಕಾದ ಕೆಲಸವನ್ನು ಮಾಡದೆಯೇ ಹಾರಿಹೋಗುತ್ತಿತ್ತು. ಆದರೆ ಮಕರಂದವು ಅಲ್ಲಿರದೆ, ಅಂಡಾಶಯವೂ, ಕೇಸರಗಳೂ, ಪುಷ್ಪಪತ್ರಗಳೂ ಹುಟ್ಟುವ ಸ್ಥಳದಲ್ಲಿ ಬಹಳ ಕೆಳಗಡೆ ಇರುವುದು. ಆದುದರಿಂದ ಮಕರಂದವನ್ನು ಪಡೆಯಬೇಕಾದರೆ ದುಂಬಿಯು ಪರಾಗವನ್ನೂ ಅಂಡಾಶಯದ ಪೀಲಾಗ್ರವನ್ನೂ ಸೋಂಕಲೇಬೇಕು. ಇದರಿಂದ ದುಂಬಿಯು ಹೂಗಳ ಮದುವೆಯನ್ನು ನಡೆಸಿದಂತಾಯಿತು.

ಸಸಿಗಳ ಸಂತಾನ

[ಬದಲಾಯಿಸಿ]

ಮದುವೆಯಾದೊಡನೆಯೇ ಮಂಗಳವಾದ್ಯಗಳನ್ನು ನಿಲ್ಲಿಸಿಬಿಡುವೆವು; ನೋಟಕ್ಕಾಗಿ ಕಟ್ಟಿದ ಮಂಟಪ ಮೊದಲಾದವನ್ನು ತೆಗೆದುಹಾಕುವೆವು. ಪುರೋಹಿತನು ಹೊರಟುಹೋಗುವನು. ಈ ರೀತಿಯಲ್ಲಿಯೇ ಹೂಗಳೂ ಬೀಜವಾದೊಡನೆ ತಮ್ಮ ರೇಕುಗಳನ್ನು ಕಳಚಿಹಾಕಿ, ದುಂಬಿಗಳ ಆಗಮನವನ್ನು ನಿಲ್ಲಿಸುವುವು. ರೇಕುಗಳು ಬಾಡಿ ನೆಲಕ್ಕೆ ಉದುರಿಹೋಗುವುವು. ಅಂಡಾಶಯವು ಗರ್ಭವನ್ನು ಧರಿಸಿ ತನ್ನ ದೇಹದಲ್ಲಿ ಬೀಜಗಳನ್ನು ಬೆಳೆಸುವುದು. ಕೊನೆಗೆ ಹಣ್ಣು ಬಿರಿದು ಬೀಜಗಳು ಹೊರಕ್ಕೆ ಬರುವುವು; ಇವೇ ಸಸಿಯ ಸಂತಾನ. ತಾಯಿಯು ಇವುಗಳ ಸುಖ ಪ್ರಯಾಣಕ್ಕೆ ಬೇಕಾಗುವ ಅನುಕೂಲಗಳನ್ನು ಕಲ್ಪಿಸಿಕೊಟ್ಟು, ಬೇಕಾಗುವಷ್ಟು ಬುತ್ತಿಯನ್ನು ಹತ್ತಿರದಲ್ಲಿಯೇ ಒದಗಿಸಿಕೊಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು