ಸಮಣರ್ ಮಲೈ
ಸಮಣರ್ ಮಲೈ | |
---|---|
ಧರ್ಮ ಮತ್ತು ಸಂಪ್ರದಾಯ | |
ಧರ್ಮ | ಜೈನಧರ್ಮ, ಹಿಂದೂಧರ್ಮ |
ಸ್ಥಳ | |
ಸ್ಥಳ | ಕೀಳ್ಕುಯಿಲ್ಕುಡಿ ಗ್ರಾಮ, ತಮಿಳುನಾಡು |
ವಾಸ್ತುಶಿಲ್ಪ | |
ಸ್ಥಾಪನೆ | ೨೦೦೦ ವರ್ಷಗಳಷ್ಟು ಹಿಂದೆ |
ನಿರ್ಮಾಣ ಮುಕ್ತಾಯ | ೯ನೇ ಶತಮಾನ |
ಟೆಂಪ್ಲೇಟು:ಧರ್ಮ ಸಮಣರ್ ಮಲೈ ಅಥವಾ ಅಮನರ್ ಮಲೈ ಅಥವಾ ಮೇಲ್ ಮಲೈ ಎಂದು ಕರೆಸಿಕೊಳ್ಳುವ ಸಮಣರ್ ಬೆಟ್ಟಗಳು ತಮಿಳುನಾಡು ಮದುರೈ ಪಟ್ಟಣದ ಪಡುವಣದಲ್ಲಿ ೧೦ಕಿಲೋಮೀಟರು ದೂರದಲ್ಲಿನ ಕೀಳ್ಕುಯಿಲ್ಕುಡಿ ಗ್ರಾಮದ ಬಳಿಯಿರುವ ಬಂಡೆಗಳ ಪರ್ವತ ಸಾಲಿನಲ್ಲಿದೆ. ಈ ಬೆಟ್ಟಗಳು ಮೂಡಣದ ಮುತ್ತುಪಟ್ಟಿ ಗ್ರಾಮದ ಕಡೆಗೆ ಸುಮಾರು ಮೂರು ಕಿಲೋಮೀಟರಿಗೂ ಮಿಗಿಲಾಗಿ ಚಾಚಿಕೊಂಡಿವೆ. ಈ ಬಂಡೆಗಳ ಬೆಟ್ಟಗುಡ್ಡಗಳು ಅನೇಕ ಜೈನ ಮತ್ತು ಹಿಂದೂ ಸ್ಮಾರಕಗಳ ತಾಣವಾಗಿವೆ.[೧] ಈ ಬೆಟ್ಟವು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಕಾಪಿಟ್ಟ ನೆನೆದಾಣ ಎಂದು ಘೋಷಿತವಾಗಿದೆ.[೨][೩]
ತಾಣ ಮತ್ತು ಇತಿಹಾಸ
[ಬದಲಾಯಿಸಿ]ಸಮಣರ್ ಬೆಟ್ಟಗಳು ಮದುರೈಗೆ ಪಡುವಣದಲ್ಲಿ ಇಂಡಿಯಾದ ರಾಷ್ಟ್ರೀಯ ಹೆದ್ದಾರಿಗಳಾದ ಎನ್ಎಚ್ ೪೪ ಮತ್ತು ಎನ್ಎಚ್ ೮೫ ಕೂಡುವೆಡೆಯಲ್ಲಿ ನೆಲೆಗೊಂಡಿವೆ. ಈ ಬಂಡೆಗಲ್ಲಿನ ಬೆಟ್ಟಗಳು ಕೀಳ್ಕುಯಿಲ್ಕುಡಿ ಗ್ರಾಮದಿಂದ ಶುರುವಾಗಿ ಮೂಡಣದೆಡೆಗೆ ಚಾಚುತ್ತಾ ಮದುರೈ ಪಟ್ಟಣದ ದಕ್ಷಿಣದ ಕಡೆಗೆ ಹೋಗುತ್ತವೆ. ಈ ಬಂಡೆಗಲ್ಲಿನ ಬೆಟ್ಟಗಳ ವಿವಿಧ ಭಾಗಗಳನ್ನು ವಿಧವಿಧದ ಹೆಸರುಗಳಿಂದ ಗುರುತಿಸಲಾಗುತ್ತದೆ ಹಾಗೂ ಇವೆಲ್ಲವೂ ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಹಿಡಿದು ಕ್ರಿಸ್ತಶಕ ೧೨ನೇ ಶತಮಾನವರೆಗಿನ ಕಾಲಾವಧಿಯ ಅನೇಕ ಪಳೆಯುಳಿಕೆಗಳ ತಾಣವಾಗಿವೆ. ಈ ಬೆಟ್ಟಗಳ ಪಡುವಣ ತುತ್ತತುದಿಯಲ್ಲಿ ದಕ್ಷಿಣದ ಕಡೆಗಿರುವುದೇ ಸಮಣರ್ ಬೆಟ್ಟಗಳು, ಮತ್ತು ಇವುಗಳಲ್ಲಿ ಅನೇಕ ಜೈನ ಮತ್ತು ಹಿಂದೂ ಸ್ಮಾರಕಗಳು ಮನೆಮಾಡಿವೆ.[೧] ಇದೇ ಬಂಡೆಗಲ್ಲಿನ ಬೆಟ್ಟಗಳ ಮೂಡುದಿಕ್ಕಿನಲ್ಲಿ ತಿರುಪ್ಪರನ್ಕುಂಡ್ರಂ ಜೈನ ಗವಿ ಮತ್ತು ಊಮೈ ಆಂಡಾರ್ ಎಂಬ ಮೂಕರಸನ ಹಿಂದೂ ಸ್ಮಾರಕಗಳಿರುವ ಕಂಜಮಲೈ ಬೆಟ್ಟವಿದೆ. ಕಲ್ಲಿನಲ್ಲೇ ಕೊರೆದಿರುವ ತಿರುಪ್ಪರನ್ ಕುಂಡ್ರಂ ಮುರುಗನ್ ಗುಡಿ (ಕಂದನ್) ಮತ್ತು ಮದುರೈ ಸುಲ್ತಾನ ಪರಂಪರೆಯ ಕೊನೆಯ ಸುಲ್ತಾನ ಸಿಕಂದರ್ ಶಾಹನ (ಕ್ರಿಸ್ತಶಕ ೧೩೭೨–೧೩೭೭) ೧೭-೧೮ನೇ-ಶತಮಾನದ ಮುಸಲ್ಮಾನ್ ದರ್ಗಾ ಇದೆ. [೪] ಅಲ್ಲದೆ ಸಮಣರ್ ಬೆಟ್ಟಗಳ ವಿವಿಧ ಮಜಲುಗಳಲ್ಲಿ ಹಲವಾರು ಜೈನ ಮತ್ತು ಕೆಲ ಹಿಂದೂ ಸ್ಮಾರಕಗಳೂ ಕಲ್ಬರಹಗಳೂ ಇವೆ.[೧]
ಸಮಣರ್ ಎಂಬ ಪದವು ಪ್ರಾಕೃತದ ಶ್ರಮಣ ಎಂಬುದರಿಂದ ಹುಟ್ಟಿದೆ. ಆಡುನುಡಿಯಲ್ಲಿ ಇದು ಸಂನ್ಯಾಸಿಗೆ ಸಂವಾದಿಯಾದ ಪದವಾಗಿದೆ. ಇಂದಿನ ತಮಿಳುನಾಡಿನಲ್ಲಿ ಇದನ್ನು ಜೈನ ಪರಂಪರೆಯೊಂದಿಗೆ ಸಮೀಕರಿಸಲಾಗುತ್ತಿದೆ. ತಮಿಳು ನುಡಿಯಲ್ಲಿ, ಮಲೈ ಎಂದರೆ 'ಮಲೆ' ಅಥವಾ ಬೆಟ್ಟ ಎಂದರ್ಥ. ಹಾಗಾಗಿ ಸಮಣರ್ ಮಲೈ ಎಂದರೆ "ಜೈನ ಮಲೆ".[೫] ಈ ಬೆಟ್ಟವನ್ನು ಪಡುವಣದ ಕಡೆ ಮೇಲ್ ಮಲೈ, ಅಮನರ್ ಮಲೈ ಎಂದೂ ಕರೆಯುತ್ತಾರೆ.[೧] ಕೆಲವು ತಮಿಳು ಪಠ್ಯಗಳಲ್ಲಿ, ತಿರುವೂರುವಕ್ಕಮ್ ಎಂಬ ಜೈನ ತಾಣವನ್ನು ಉಲ್ಲೇಖಿಸಲಾಗಿದ್ದು, ವಿದ್ವಾಂಸರು ಅವು ಸಮಣರ್ ಬೆಟ್ಟಗಳೇ ಇರಬಹುದೆನ್ನುತ್ತಾರೆ.[೬]
ಮಹಾಜನ್ ಅವರ ಪ್ರಕಾರ ೮ನೇ-ಶತಮಾನದ ಜೈನ ವಿದ್ವಾಂಸ ಅಕಳಂಕನು ಎದುರಾಳಿ ಕಂಚೀಪುರದ ಬೌದ್ಧ ವಿದ್ವಾಂಸರೊಂದಿಗಿನ ಪಂದ್ಯದಲ್ಲಿ ಸಮಣರ್ ಬೆಟ್ಟಗಳು ಮತ್ತು ಹತ್ತಿರದ ಮದುರೈ ಜೈನ ಬಸದಿಗಳ ಸ್ಥಾಪನೆಗೆ ಕಾರಣನಾದ. ಇದರಿಂದಾಗಿ ಇಲ್ಲಿ ೯ ಮತ್ತು ೧೨ನೇ ಶತಮಾನಗಳ ನಡುವೆ ಲೆಕ್ಕವಿಲ್ಲದಷ್ಟು ಜೈನರು ನೆಲೆಗೊಂಡು ಮಠಗಳನ್ನು ಕಟ್ಟಿದರು.[೭]
ಸಮಣರ್ ಬೆಟ್ಟಗಳಲ್ಲಿ ಎದ್ದುಕಾಣುವ ಎರಡು ಜೈನ ಸ್ಮಾರಕಗಳ ಸಮೂಹವಿದೆ. ನೈರುತ್ಯಮೂಲೆಯಲ್ಲಿ ಸೆಟ್ಟಿಪೊಡವು ಎಂಬ ೧೦ನೇ-ಶತಮಾನದ ಜೈನ ಗವಿ ಇದೆ. ಸೆಟ್ಟಿಪೊಡವು (ಪೊಡವು|ಪೊಟರೆ) ಬೆಟ್ಟದ ತಳಭಾಗದಿಂದ ತುಸುವೇ ಎತ್ತರದಲ್ಲಿದೆ.[೧] ದಕ್ಷಿಣಪೂರ್ವದ ಇಳಿಜಾರಿನಲ್ಲಿ ಎತ್ತರದ ಜಾಗದಲ್ಲಿ ಪೇಚ್ಚಿಪಳ್ಳಂ ತಾಣವಿದೆ. ಪೇಚ್ಚಿಪಳ್ಳಂ ತಾಣವು ಸೆಟ್ಟಿಪೊಡವುನಿಂದಾಚೆಗೆ ಬೆಟ್ಟಗಳ ಇನ್ನೊಂದು ಬದಿಯಲ್ಲಿದ್ದು, ಅಲ್ಲಿಯೂ ಜೈನ ಪಳೆಯುಳಿಕೆಗಳು ಮತ್ತು ಕಲ್ಬರಹಗಳು. ಪೇಚ್ಚಿಪಳ್ಳಂ ಕೆತ್ತನೆಗಳು ಮತ್ತು ಕಲ್ಬರಹಗಳು ಅಂದಾಜು ೧೦ನೇ ಶತಮಾನದ್ದು, ಅವುಗಳಲ್ಲಿ ಕೆಲವು ೯ನೇ ಶತಮಾನ ಮುಗಿಯುವ ಕಾಲದ್ದು ಮತ್ತು ಕೆಲವು ೧೦ನೇ ಶತಮಾನದ ನಂತರದ್ದು.[೧] ಕೆಲವು ತಮಿಳು-ಬ್ರಾಹ್ಮಿ ಕಲ್ಬರಹಗಳು ಸಹಾ ಸಮಣರ್ ಬೆಟ್ಟಗಳ ಮೇಲೆ ಕಂಡುಬರುತ್ತವೆ, ಆದರೆ ಅವು ಯಾವುದೇ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ, ಆದ್ದರಿಂದ ಅವು ಬೌದ್ಧವೋ ಜೈನವೋ ಹಿಂದೂವೋ ಎಂದು ಗುರುತಿಸಲಾಗದು.[೧] ಸಮಣರ್ ಬೆಟ್ಟಗಳ ಕಾಲಬಳಿ ಮತ್ತು ಮೇಲ್ತುದಿಯಲ್ಲಿ ಹಾಳುಬಿದ್ದ ಆದರೆ ಮರುನಿರ್ಮಿಸಿದ ಕರುಪ್ಪಸಾಮಿ ಗುಡಿ ಮತ್ತು ಪೂರ್ತಿ ನೆಲಸಮವಾದ ವಿಷ್ಣುಗುಡಿಯ ಜಗಲಿಯಷ್ಟೇ ಉಳಿದಿದೆ. [೧] ಇವು ಹೆಚ್ಚಿನಪಾಲು ಈ ಪ್ರದೇಶಗಳಲ್ಲಿ ಅಂದರೆ ತಿರುಪ್ಪರನ್ಕುಂಡ್ರಂ ಪ್ರದೇಶದಲ್ಲಿ ನಡೆದಿದ್ದ ಜೈನ-ಹಿಂದೂ ಧಾರ್ಮಿಕಕ್ಷೋಭೆ ಮತ್ತು ದಾಳಿಗಳಲ್ಲಿ ಹಾಳಾಗಿರಬಹುದು ಎಂದು ಚರಿತ್ರೆಕಾರರು ಅಭಿಪ್ರಾಯ ಪಡುತ್ತಾರೆ.[೪]
ವಿವರಣೆ
[ಬದಲಾಯಿಸಿ]ಸಮಣರ್ ಬೆಟ್ಟಗಳ ಮೇಲಿನ ಸೆಟ್ಟಿಪೊಡವು ತಾಣವನ್ನು ಸಲೀಸಾಗಿ ತಲಪಬಹುದು. ಪಡುವಣದ ಇಳಿಜಾರಿನಲ್ಲಿರುವ ಅದು ಒಂದು ಪುಟ್ಟ ಗವಿ. ಇದು ತನ್ನಿಂತಾನೇ ಆದ ಗವಿ. ಗವಿಯತ್ತ ನಡೆವಾಗ ನಮಗೆದುರಾಗಿ ಕಲ್ಲಿನ ಗೋಡೆಯ ಮೇಲೆ ಚಕ್ಕಂಬಕ್ಕಳ ಹಾಕಿ ಕುಳಿತಿರುವ ತೀರ್ಥಂಕರನ ಉಬ್ಬುಚಿತ್ತಾರ ಕಂಡುಬರುತ್ತದೆ. ಹಾಗೆಯೇ ನಿರುಕಿಸಿದಾಗ ಆತ ಸಿಂಹಚಿಹ್ನೆಯ ಮೇಲೆ ಕುಳಿತಿರುವುದು ಕಾಣುತ್ತದೆ. ಅಂದರೆ ಆತ ಮಹಾವೀರ.[೧] ಮಹಾವೀರನ ಕೆಳಗೆ ೧೦ನೇ-ಶತಮಾನದ ಸುರುಳಿಸುರುಳಿ ತಮಿಳು ಕಲ್ಬರಹ (ವಟ್ಟೆಳುತ್ತು) ಇದ್ದು ಅದರ ಬರೆಹದ ರೂಪವನ್ನು ಗಮನಿಸಿ ಚಿತ್ತಾರದ ಕಾಲವನ್ನು ಅರಿಯಬಹುದಾಗಿದೆ. ಗವಿಯೊಳಗೆ ಮೂವರು ತೀರ್ಥಂಕರರು ಇದ್ದು ಅವರ ಎಡಕ್ಕೆ ಬಿಲ್ಲುಬಾಣ ಹಿಡಿದ ಹೆಣ್ಣು ರಣಕಲಿ ಅಂಬಿಕಾದೇವಿ ಎಂಬ ಜೈನ ದೇವತೆ ಇದ್ದಾಳೆ. ತೀರ್ಥಂಕರರ ಬಲಕ್ಕೆ ಪದ್ಮಾವತಿ ದೇವಿಯು ಕುಳಿತಿದ್ದಾಳೆ. ಅಂಬಿಕಾ ಬದಿಯಲ್ಲಿರುವ ಆನೆಯ ಮೇಲೆ ಮತ್ತು ಕಾಲಬಳಿ ಪುಟ್ಟ ಆಕೃತಿಗಳಿವೆ. ಈ ಉಬ್ಬುಕೆತ್ತನೆಗಳ ಕೆಳಗೆ ಮೂರು ಕಲ್ಬರಹಗಳಿದ್ದು ಅವು ೧೦ನೇ ಶತಮಾನದಲ್ಲಿ ಕೊರೆಯಲಾದ ವಟ್ಟೆಳುತ್ತು ಲಿಪಿಯಲ್ಲಿವೆ.[೧]
ಸೆಟ್ಟಿಪೊಡವು | |||||||||
---|---|---|---|---|---|---|---|---|---|
|
ಪೇಚ್ಚಿಪಳ್ಳಂ ತಾಣವು ಮೂಡುದಿಕ್ಕಿನ ಇಳಿಜಾರಿನಲ್ಲಿ, ಸಮಣರ್ ಬೆಟ್ಟಗಳ ಇನ್ನೊಂದು ಬದಿಯಲ್ಲಿದ್ದರೂ ಸೆಟ್ಟಿಪೊಡವುಗೆ ಹತ್ತಿರದಲ್ಲೇ ಇದೆ. ಪೇಚ್ಚಿಪಳ್ಳಂ ತಾಣವನ್ನು ಸಮೀಪಿಸುತ್ತಿದ್ದಂತೆಯೇ, ಕಣ್ಣ ನೋಟಕ್ಕೆ ಎಂಟು ಜೈನ ಉಬ್ಬುಚಿತ್ತಾರಗಳು ಕಂಡುಬರುತ್ತವೆ. ಅವುಗಳಲ್ಲಿ ನಾಲ್ಕು ಹಾವಿನೆಡೆಯ ಕಿರೀಟ ಹೊತ್ತು ಪಾರ್ಶ್ವನಾಥರು, ಒಂದು ಬಾಹುಬಲಿ ಮತ್ತು ಉಳಿದ ಮೂವರು ತೀರ್ಥಂಕರರು.[೬] ಇವುಗಳ ನಡುವೆ, ಜೈನಯಕ್ಷ ಧರಣೇಂದ್ರನ ಒಂದು ಅಪರೂಪದ ಚಿತ್ತಾರವೂ ಇದೆ. ಅವನ ಅರ್ಧ ಒಡಲು ಹಾವು ಮತ್ತು ಅರ್ಧ ಮನುಷ್ಯನದ್ದು, ಅವನು ಪಾರ್ಶ್ವನಾಥನ ತಲೆಯಬಳಿ ಚಾಮರ ಬೀಸುತ್ತಾ ನಿಂತಿದ್ದಾನೆ. ಇಂತಹ ಚಿತ್ತಾರಗಳು ಕಳುಗುಮಲೈ ಜೈನತಾಣದಲ್ಲಿಯೂ ಕಂಡುಬರುತ್ತವೆ.[೬]
ಪೇಚ್ಚಿಪಳ್ಳಂ ತಾಣ ಈ ಎಂಟು ಉಬ್ಬುಚಿತ್ತಾರಗಳ ಕೆಳಗೆ ದಾನಗಳ ಕುರಿತ ವಟ್ಟೆಳುತ್ತಿನ ಆರು ತಮಿಳು ಕಲ್ಬರಹಗಳು ಇವೆ. ಇವು ಕ್ರಿಸ್ತಶಕ ೯ನೇ ಮತ್ತು ೧೦ನೇ ಶತಮಾನದ ಕಾಲವನ್ನು ಸೂಚಿಸುತ್ತವೆ, ಅದರಲ್ಲಿ ಎರಡಂತೂ ೮ನೇ ಶತಮಾನದ ಕೊನೆಭಾಗದ್ದು.[೧] ಹಾಗಾಗಿ, ಪೇಚ್ಚಿಪಳ್ಳಂ ತಾಣವು ೯ನೇ ಶತಮಾನದಲ್ಲಿ ತುಂಬಾ ಸಿರಿತನದಿಂದ ಕೂಡಿತ್ತೆನ್ನಬಹುದು. ಪೇಚ್ಚಿಪಳ್ಳದ ಬಂಡೆ ಚಿತ್ತಾರಗಳಿಂದ ಮೇಲುಗಡೆ ಸಾಗಿದರೆ ಗುಡಿಯೊಂದರ ಅಡಿಪಾಯವಷ್ಟೇ ಕಂಡುಬರುತ್ತದೆ. ಅಲ್ಲೊಂದು ೧೦ನೇ ಶತಮಾನ ಕಲ್ಬರಹವಿದೆ. ಸಮಣರ್ ಬೆಟ್ಟಗಳ ಮೇಲುಗಡೆ ಒಬ್ಬಂಟಿಯಾಗಿ ನಿಂತ ಕಲ್ಲಿನ ದೀಪದಕಂಬವಿದೆ. ಕಂಬದಿಂದ ಸ್ವಲ್ವೇ ದೂರದಲ್ಲಿ ೧೧ ಅಥವಾ ೧೨ನೇ ಶತಮಾನದ ಕನ್ನಡ ಕಲ್ಬರಹವಿದ್ದು ಅದರ ಒಂದು ಸಾಲು ತಮಿಳಿನಲ್ಲಿದೆ.[೧] ಇದೂ ಸಹ ಜೈನ ಕಲ್ಬರಹ. ಒಟ್ಟಾರೆಯಾಗಿ ಮದುರೈ ಪ್ರದೇಶದಲ್ಲಿ ಹಾಗೂ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಂಡುಬರುವ ಎಲ್ಲ ೧೧-೧೩ನೇ ಶತಮಾನದ ಜೈನ ಕಲ್ಬರಹಗಳ ಸಾಲಿನಲ್ಲಿ ಈ ಕನ್ನಡ ಕಲ್ಬರಹವನ್ನು ಗಮನಿಸಿದಾಗ ಮದುರೈ ಪ್ರದೇಶದ ಸಮಣರ್ ಬೆಟ್ಟಗಳು, ಕರ್ನಾಟಕ ಮತ್ತು ತಮಿಳುನಾಡುಗಳ ದಿಗಂಬರ ಜೈನ ಪರಂಪರೆಯೊಂದಿಗೆ ಸಂಬಂಧ ಹೊಂದಿತ್ತೆಂಬುದನ್ನು ಸೂಚಿಸುತ್ತವೆ.[೧]
ಪೇಚ್ಚಿಪಳ್ಳಂ | |||||||||
---|---|---|---|---|---|---|---|---|---|
|
ಸಮಣರ್ ಬೆಟ್ಟಗಳಲ್ಲಿ ಜೈನಮುನಿಗಳು ವಿಶ್ರಮಿಸಲು ಬಳಸುತ್ತಿದ್ದ ೧೨ ಕಲ್ಲಿನ ಮಂಚಗಳಿವೆ. ಕಾಲವಶದಲ್ಲಿ ಅವು ಮಳೆಗಾಳಿಗೆ ಸಿಲುಕಿ ಹಾನಿಗೊಳಗಾಗಿವೆ.[೬]
ಕೆಳಗಿನ ಗುಡ್ಡದಲ್ಲಿ, ಅಯ್ಯನಾರ್ ಕರುಪ್ಪಸಾಮಿ ಗುಡಿ ಮತ್ತು ಕಮಲದಕೊಳ ಇದೆ. ಕರುಪ್ಪು ಸಾಮಿಯು ಒಂದು ಜಾನಪದ ಗ್ರಾಮದೈವ. ತಮಿಳು ಕಾವ್ಯಗಳಲ್ಲಿ ಉಲ್ಲೇಖವಾಗಿರುವ ಮಾದೇವಿ ಪೆರುಂಪಳ್ಳಿ ಎಂಬ ಪ್ರಾಚೀನ ವಿದ್ಯಾಕೇಂದ್ರ ಇಲ್ಲೇ ಇತ್ತು. ಮದುರೈಯಿಂದ ಆಳುತ್ತಿದ್ದ ಪಾಂಡ್ಯ ಅರಸರು, ಈ ಮಠಕ್ಕೆ ಭೇಟಿ ಕೊಡುತ್ತಿದ್ದರು.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (February 2021) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕಲ್ಬರಹಗಳು
[ಬದಲಾಯಿಸಿ]ಸಮಣರ್ ಮಲೆಯಲ್ಲಿ ಹಲವಾರು ಪ್ರಾಚೀನ ತಮಿಳು-ಬ್ರಾಹ್ಮೀ ಕಲ್ಬರಹಗಳು ಕಾಣಸಿಗುತ್ತವೆ.[೮]
ಸೆಟ್ಟಿಪೊಡವು ತಾಣದ ಗವಿಯೊಳಗಿನ ಹಲವಾರು ಕಲ್ಬರಹಗಳು ೧೦ನೇ ಶತಮಾನದ್ದಾಗಿದ್ದು, ಈ ಉಬ್ಬುಚಿತ್ತಾರಗಳನ್ನು ಕೆತ್ತಿಸಿದವನು ಗುಣಸೇನದೇವನ ಶಿಷ್ಯ ಎಂದು, ಮತ್ತು ಗುಣಸೇನದೇವನು ಮಠದ ಓಜಯ್ಯನೆಂದು, ಅಥವಾ ತಮಗೆ ಗುರುವಾಗಿದ್ದ ಗುಣಸೇನದೇವನ ಶಿಷ್ಯನನ್ನು ಹೊಗಳುತ್ತವೆ.[೯] ಒಟ್ಟಿನಲ್ಲಿ ಈ ಎಲ್ಲ ಬರಹಗಳು ೧೦ನೇ-ಶತಮಾನದ ಆಚೀಚೆ ಕೀಳ್ಕುಯಿಲ್ಕುಡಿ ಗ್ರಾಮದಲ್ಲಿ ನೆಲೆಗೊಂಡಿದ್ದ ಜೈನವಿದ್ಯಾಕೇಂದ್ರ ಮತ್ತು ಜೈನಮುನಿ ಗುಣಸೇನದೇವನ ಉಲ್ಲೇಖ ಮಾಡುತ್ತವೆ. ವರ್ಧಮಾನ ಪಂಡಿತರು, ದೈವಬಲದೇವ ಮತ್ತು ಆಂಡಾಳಯ್ಯನ್ ಮುಂತಾದ ಹೆಸರುಗಳು ದಾನಿಗಳ ಪಟ್ಟಿಯಲ್ಲಿದೆ. [೯] ಮತ್ತೊಂದೆಡೆ ಪೇಚ್ಚಿಪಳ್ಳಂ ತಾಣದಲ್ಲಿ ಕೂಡಾ ಗುಣಸೇನದೇವನ ಮತ್ತು ಅವನು ನಡೆಸುತ್ತಿದ್ದ ಮಠದ ಪ್ರಸ್ತಾಪವಿದೆ. ಜೊತೆಗೆ ದಾನಿಗಳಲ್ಲಿ ಜೈನ ಸಂನ್ಯಾಸಿಯೊಬ್ಬನ ತಾಯಿ ಮತ್ತು ಬಂಧುಗಳ ಪ್ರಸ್ತಾಪವೂ ಇದೆ. ಕಲ್ಬರಹದಲ್ಲಿ ತಾವು ಯಾವ ಯಾವ ಸಂನ್ಯಾಸಿಗಳ ನೆಂಟರು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಒಂದು ತೀರ್ಥಂಕರ ಚಿತ್ತಾರದ ಕಲ್ಬರಹದಲ್ಲಿ ಅದನ್ನು "ದೇವರ್" ಎನ್ನಲಾಗಿದೆ.[೯] ಸಮಣರ್ ಬೆಟ್ಟಗಳಲ್ಲಿ ಕಂಡುಬರುವ ಜೈನ ಕಲ್ಬರಹಗಳಲ್ಲಿ ಕಂಡುಬರುವ ಇತರ ಜೈನ ಸಂನ್ಯಾಸಿಗಳ ಹೆಸರುಗಳು ಚಂದ್ರಪ್ರಭ, ಬಾಲಚಂದ್ರದೇವ, ನೇಮಿದೇವ, ಅಜಿತಸೇನದೇವ ಮತ್ತು ಗೋವರ್ಧನದೇವ.[೧೦]
ಪೇಚ್ಚಿಪಳ್ಳದಲ್ಲಿ ಗುಡಿಯಿಲ್ಲದೆ ಅಡಿಪಾಯವಷ್ಟೇ ಇರುವೆಡೆ ಕಾಣುವ ಜೈನ ಉಬ್ಬುಚಿತ್ತಾರಗಳಲ್ಲಿನ ಕಲ್ಬರಹಗಳು ಬಹುತೇಕ ಸವೆದುಹೋಗಿವೆ. ಅಳಿದುಳಿದ ಅಕ್ಷರಗಳಲ್ಲಿ "ಶ್ರೀಪರಮನನ್ನು ಕಾಪಾಡಲು" ಎಂದು ಓದುತ್ತೇವೆ. ಇದು ಜೈನ ನಂಟು ಹೊಂದಿದಂತಿಲ್ಲ.[೯]
ಸಮಣರ್ ಬೆಟ್ಟದ ಮೇಲಿನ ಕನ್ನಡ ಕಲ್ಬರಹವು ಸ್ವಲ್ಪ ಸವೆದುಹೋಗಿದ್ದು ಓದಲು ಕಷ್ಟವೆನಿಸುತ್ತದೆ, ಉಳಿದಿರುವ ಅಕ್ಷರಗಳ ಜಾಡು ಹಿಡಿದರೆ ಮೂಲ ಸಂಘದ ಜೈನ ಮುನಿಯೊಬ್ಬ ಇಲ್ಲಿ ಸಲ್ಲೇಖನ ಹೊಂದಿದ್ದನ್ನು ಹೇಳುತ್ತವೆ. ಸಲ್ಲೇಖನವ್ರತವು ಸಾಯುವವರೆಗೆ ಉಪವಾಸ ಮಾಡುವ ಒಂದು ಜೈನ ನೇಮ. [೯]
ಸಂಬಂಧಿತ ತಾಣಗಳು
[ಬದಲಾಯಿಸಿ]ತಮಿಳುನಾಡಿನಲ್ಲಿ ಪಾರಂಪರಿಕ ಸಂನ್ಯಾಸ ತಾಣಗಳನ್ನು ಅದರಲ್ಲೂ ಜೈನ ತಾಣಗಳನ್ನು ಸಮಣರ್ ತಾಣಗಳೆಂದು ಕರೆಯುವುದು ವಾಡಿಕೆ. ಇಲ್ಲಿ ಹಲವಾರು ತಾಣಗಳಿವೆ. ಉದಾಹರಣೆಗೆ ಪುದುಕೋಟ್ಟೈಗೆ ಬಡಗಲ ಕಡೆ ೧೮ ಕಿ.ಮೀ. ದೂರದಲ್ಲಿನ ಜೈನತಾಣವನ್ನೂ "ಸಮಣರ್ ಮಲೈ" ಎನ್ನುತ್ತಾರೆ. ಈ ತಾಣವೂ ಐತಿಹಾಸಿಕವಾಗಿದ್ದು ಬೊಮ್ಮಮಲೈ (ಬೊಮ್ಮಡಿಮಲೈ) ಎಂಬಲ್ಲಿ ಜೈನಮಠ ಇತ್ತೆಂದೂ ತಿಳಿದುಬರುತ್ತದೆ. ಆದರೆ ಈ ಸಮಣರ್ ಮಲೆಯು ಮದುರೆಯದಕ್ಕಿಂತ ಬೇರೆಯೇ ತೆರನಾಗಿದೆ.[೧೧] ಮದುರೆ ಪಟ್ಟಣಕ್ಕೆ ನೈರುತ್ಯದಲ್ಲಿ ಸುಮಾರು ೫೦ಕಿ.ಮೀ. ದೂರವಿರುವ ಕುಪ್ಪಲನಾತ್ತಮ್ ಎಂಬ ಹಳ್ಳಿಯಲ್ಲಿ ಪೊಯಿಗೈಮಲೈ ಎಂಬ ಜೈನತಾಣವಿದ್ದು ಜನರ ಬಾಯಲ್ಲಿ ಕುಪ್ಪಲನಾತ್ತಮ್ ಪೊಯಿಗೈಮಲೈ ಜೈನ ಗವಿ ಎಂದು ಕರೆಸಿಕೊಂಡಿದೆ. ಇದೂ ಕೂಡಾ ಮದುರೈ ಜಿಲ್ಲೆಯ ಒಂದು ಮುಖ್ಯವಾದ ಜೈನತಾಣ. ಇಲ್ಲಿಯೂ ಸಹ ಗವಿಯೊಳಗೆ ಎಂಟು ಜಿನ ಚಿತ್ತಾರಗಳು ಇವೆ. ಇದರೊಂದಿಗಿನ ಕಲ್ಬರಹವು ತಮಿಳುನಾಡಿನ ಪುರಾತನ ಜೈನಧರ್ಮದ ಅಧ್ಯಯನದಲ್ಲಿ ಉಲ್ಲೇಖವಾಗುತ್ತದೆ.[೧೨][೧೩][೧೪]
Gallery
[ಬದಲಾಯಿಸಿ]-
ಸಮಣರ್ ಮಲೆಯ ಕೆಳಗೆ ಕರುಪ್ಪಸಾಮಿ ಗುಡಿ ಮತ್ತು ತಾವರೆಕೆರೆ
-
ಸಮಣರ್ ಬೆಟ್ಟದ ಮೇಲಿಂದ ತಾವರೆಕೆರೆಯ ನೋಟ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ T.S. Sripal (1954), Samanar Malai, University of Madras Press, Appendix on Samanar Malai Inscriptions by M Venkataramayya, pp. 1-14
- ↑ "List of Centrally Protected Monuments – Tamilnadu". Archaeological Survey of India. Retrieved 20 ಜನವರಿ 2014.
- ↑ "Green hope amidst ruins". Frontline.in. 14 ಸೆಪ್ಟೆಂಬರ್ 2013. Retrieved 19 ಜನವರಿ 2014.
- ↑ ೪.೦ ೪.೧ Crispin Branfoot (2003), The Madurai Nayakas and the Skanda Temple at Tirupparankundram, Ars Orientalis, Volume 33, pp. 146-179, JSTOR 4434276
- ↑ M. K. Chandrashekaran (1 ಜನವರಿ 2005). Time in the Living World. Universities Press. pp. 83–. ISBN 978-81-7371-546-4.
- ↑ ೬.೦ ೬.೧ ೬.೨ ೬.೩ R Kannan and K Lakshminarayanan (2002), Iconography of the Jain Images in the Districts of Tamilnadu, The Commissioner of Archaeology and Museums, Pub Vol XVII, Chennai, p. 49-50
- ↑ D. G. Mahajan (1956), Ancient Dravidian Jain Heritage, Proceedings of the Indian History Congress, Volume 19, pp. 70-79, JSTOR 44140800
- ↑ T. S. Subramanian (24 ಮಾರ್ಚ್ 2012). Brahmi-Inscription-found-on-samanamalai/article3220674.ece "2,200-year-old Tamil- Brahmi-Inscription found on Samanamalai". TheHindu. Retrieved 19 ಜನವರಿ 2014.
{{cite news}}
: Check|url=
value (help) - ↑ ೯.೦ ೯.೧ ೯.೨ ೯.೩ ೯.೪ T.S. Sripal (1954), Samanar Malai, University of Madras Press, Appendix on Samanar Malai Inscriptions by M Venkataramayya, pp. 7-14
- ↑ K.V. Raman (1972), Some aspects of Pandyan History in the Light of Recent Discoveries, University of Madras, p. 71, OCLC 615404288
- ↑ P.B. Desai (1957), Jainism in South India and Some Jain Epigraphs, Ocotacamund Department of Archaeology, Jain Samskriti Samrakshaka Sangha, Editors: AN Upadhye ಮತ್ತು HL Jain, p. 53-54
- ↑ P.B. Desai (1957), Jainism in South India and Some Jain Epigraphs, Ocotacamund Department of Archaeology, Jain Samskriti Samrakshaka Sangha, Editors: AN Upadhye and HL Jain, p. 60
- ↑ Robert Sewell (1882). Lists of the Antiquarian Remains in the Presidency of Madras. Government Press. p. 296.
- ↑ W Francis (1905), Madura, Volume 1, Madras District Gazetteers, p. 327
- CS1 errors: URL
- EngvarB from ಜನವರಿ ೨೦೨೩
- Articles with invalid date parameter in template
- Use dmy dates from ಜನವರಿ ೨೦೨೩
- Infobox religious building with unknown affiliation
- ಉಲ್ಲೇಖವಿಲ್ಲದ ಲೇಖನಗಳು
- Commons link is defined as the pagename
- Commons category without a link on Wikidata
- ತಮಿಳುನಾಡು ಪ್ರಾಚ್ಯವಸ್ತು ತಾಣಗಳು
- ಜೈನ ಕಲ್ಕೊರೆತ ವಾಸ್ತುಕಲೆ
- ತಮಿಳುನಾಡಿನ ಬೆಟ್ಟಗಳು
- ಮದುರೈ ಜಿಲ್ಲೆ
- ಮದುರೈ ನೆಲರಚನೆ
- ತಮಿಳುನಾಡಿನ ಗವಿಗಳು
- ಮದುರೈ ಪ್ರವಾಸತಾಣಗಳು
- ೯ನೇ ಶತಮಾನದ ಜೈನತಾಣಗಳು