ವಿಷಯಕ್ಕೆ ಹೋಗು

ಸಪ್ತರ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಪ್ತ ಋಷಿಗಳು ಇಂದ ಪುನರ್ನಿರ್ದೇಶಿತ)

ಹಿಂದೂ ಧರ್ಮದ ಪುರಾಣಗಳ ಪ್ರಕಾರ ಏಳು ಜನ ಋಷಿಗಳೇ ಸಪ್ತರ್ಷಿಗಳು.ಕಶ್ಯಪ, ವಸಿಷ್ಠ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ ಗೌತಮ ಮಹರ್ಷಿಗಳನ್ನು ಸಪ್ತರ್ಷಿಗಳೆಂದು ಕರೆಯಲಾಗುತ್ತದೆ.

ಮರೀಚಿ

[ಬದಲಾಯಿಸಿ]

ಸೃಷ್ಟಿಕರ್ತ ಬ್ರಹ್ಮನ ಮಗ. ಮೊದಲ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರು ಹಾಗೂ ಹತ್ತು ಪ್ರಜಾಪತಿಗಳಲ್ಲಿ ಒಬ್ಬರು ಮರೀಚಿ ಮಹರ್ಷಿ. ಮರೀಚಿ ಮಹರ್ಷಿಯ ಪತ್ನಿ ಕಲಾ. ಇವರ ಪುತ್ರನೇ ಕಶ್ಯಪ. ಕಶ್ಯಪ ಮತ್ತು ಆದಿತಿ ಪುತ್ರನೇ ಸೂರ್ಯ.

ಅತ್ರಿ

[ಬದಲಾಯಿಸಿ]

ಅತ್ರಿ ಬ್ರಹ್ಮನ ಮಾನಸಪುತ್ರ. ಸಪ್ತರ್ಷಿಗಳಲ್ಲಿ ಒಬ್ಬ. ಮಂತ್ರದ್ರಷ್ಟನಾದ ಮಹರ್ಷಿ. ಕರ್ದಮ ಬ್ರಹ್ಮನ ಮಗಳಾದ ಅನಸೂಯೆಯನ್ನು ಮದುವೆಯಾಗಿ ಚಂದ್ರ, ದತ್ತಾತ್ರೇಯ ಮತ್ತು ದೂರ್ವಾಸರನ್ನು ಪಡೆದ. ವನವಾಸದಲ್ಲಿದ್ದ ಶ್ರೀರಾಮ, ಈತನ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಅವನಿಗೆ ಬೋಧಿಸಿದ. ಕೆಲವು ಕಾಲ ಬ್ರಹ್ಮಪಟ್ಟದಲ್ಲಿದ್ದ.

ಅಂಗಿರಸ

[ಬದಲಾಯಿಸಿ]

ಪುಲಹ ಮಹರ್ಷಿಗಳು. ಮಹರ್ಷಿ ಪುಲಹರು ಬ್ರಹ್ಮದೇವರ ಮಾನಸ ಪುತ್ರರು. ಸ್ವಾಯಂಭುವ ಮನ್ವಂತರದಲ್ಲಿ ಬ್ರಹ್ಮದೇವರ ವ್ಯಾನವಾಯುವಿನಿಂದ ಜನಿಸಿದ ಇವರಿಗೆ ದಕ್ಷಪ್ರಜಾಪತಿಯು ತನ್ನ ಮಗಳಾದ ಕ್ಷಮಾದೇವಿಯನ್ನು ಕೊಟ್ಟು ಮದುವೆ ಮಾಡಿದ್ದನು.

ಪುಲಸ್ತ್ಯ

[ಬದಲಾಯಿಸಿ]

ಪುಲಸ್ತ್ಯ ಸಪ್ತರ್ಷಿಗಳಲ್ಲಿ ಒಬ್ಬ. ಬ್ರಹ್ಮನ ಮಾನಸ ಪುತ್ರ. ಕೃತಯುಗದ ಅಂತ್ಯ ಭಾಗದಲ್ಲಿ ಮೇರುಪರ್ವತದ ತಪ್ಪಲಲ್ಲಿ ತಪಸ್ಸು ಮಾಡಿಕೊಂಡಿದ್ದ. ತೃಣಬಿಂದು ಮುನಿಯ ಮಗಳಾದ ಗೋ ಎಂಬಾಕೆಯನ್ನು ಮದುವೆಯಾದ. ವಿಶ್ರವಸ ಇವನ ಹಿರಿಯ ಮಗ (ಒಂದು ಐತಿಹ್ಯದ ಪ್ರಕಾರ ಪುಲಸ್ತ್ಯನ ಅರ್ಧ ಭಾಗವೇ ಸಾಕಾರಗೊಂಡು ವಿಶ್ರವಸನ ರೂಪ ತಳೆಯಿತು). ಕಾರ್ತವೀರ್ಯಾರ್ಜುನನ ಮೇಲೆ ಯುದ್ಧಮಾಡಿ ಸೆರೆ ಸಿಕ್ಕ ರಾವಣನನ್ನು ಈತ ಬಿಡಿಸಿದ. ಕರ್ದಮ ಬ್ರಹ್ಮನ ಮಗಳಾದ ಹವಿರ್ಭುಕ್ ಎಂಬಾಕೆಯನ್ನು ಮದುವೆಯಾಗಿ ಅಗಸ್ತ್ಯನನ್ನು ಪಡೆದ. ಇಲಬಿಲೆ ಎಂಬಾಕೆಯಲ್ಲಿ ಕುಬೇರನನ್ನು ಕೇಶಿನಿ ಎಂಬಾಕೆಯಲ್ಲಿ ರಾವಣಾದಿಗಳನ್ನೂ ಪ್ರೀತಿ ಎಂಬಾಕೆಯಲ್ಲಿ ದಂಭೋಳಿಯನ್ನೂ ಪಡೆದ. ಸಂಧ್ಯಾ, ಪ್ರತೀಚ್ಯಾ ಎಂಬ ಇನ್ನಿಬ್ಬರು ಇವನ ಹೆಂಡತಿಯರು. ಭೂಪ್ರದಕ್ಷಿಣೆಯ ವಿಷಯವಾಗಿ ಈತ ಬ್ರಹ್ಮನೊಂದಿಗೆ ಸಂವಾದ ಮಾಡಿದ. ತನ್ನ ತಂದೆಯಾದ ಶಕ್ತಿಮುನಿಯನ್ನು ರಾಕ್ಷಸ ನುಂಗಿದನೆಂದು ಪರಾಶರಮುನಿ ರಾಕ್ಷಸಕುಲ ವಿನಾಶಕ್ಕೆಂದು ಯಜ್ಞ ಮಾಡತೊಡಗಿದಾಗ ಈತ ಅಲ್ಲಿಗೆ ಹೋಗಿ ಬೇಡಿ ಯಜ್ಞವನ್ನು ನಿಲ್ಲಿಸಿದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಕ್ರತು

[ಬದಲಾಯಿಸಿ]

ಅಗಸ್ತ್ಯ

[ಬದಲಾಯಿಸಿ]

ವೇದೋಕ್ತನಾದ ಈ ಬ್ರಹ್ಮರ್ಷಿಗೆ ಕುಂಭಸಂಭವ, ಕಳಶಯೋನಿಜ ಎಂಬ ಹೆಸರುಗಳೂ ಉಂಟು. ತಂದೆ ಪುಲಸ್ತ್ಯ. ತಾಯಿ ಕರ್ದಮಬ್ರಹ್ಮನ ಮಗಳಾದ ಹವಿರ್ಭುಕ್. ಪಿತೃಗಳ ಕೋರಿಕೆಯ ಮೇಲೆ ಸಂತಾನಪ್ರಾಪ್ತಿಗಾಗಿ ಲೋಪಾಮುದ್ರೆ ಎಂಬ ಕನ್ನಿಕೆಯನ್ನು ಸೃಜಿಸಿ ಮದುವೆಯಾದ. ಇವನ ಮಗ ದೃಢಸ್ಯು ಅಥವಾ ಇಧ್ಮವಾಹ. ಇಲ್ವಲ ವಾತಾಪಿ ಎಂಬ ದೈತ್ಯರನ್ನು ಕೊಂದದ್ದು, ಇಂದ್ರಪದವಿ ದೊರಕಿತೆಂಬ ಕಾರಣದಿಂದ ಮತಾಂಧನಾಗಿ ಋಷಿಗಳಿಂದ ತನ್ನ ರಥವನ್ನೆಳೆಸಿದ ನಹುಷನ ಪದಚ್ಯುತಿ, ವಿಂಧ್ಯಪರ್ವತ ಮೇರುವಿನಷ್ಟಾಗಬೇಕೆಂಬ ಉದ್ದೇಶದಿಂದ ಬೆಳೆಯುತ್ತಿದ್ದುದನ್ನು ತಡೆಗಟ್ಟಿದ್ದು, ಸಮುದ್ರಗರ್ಭ ದಲ್ಲಿ ಅಡಗಿಕೊಂಡಿದ್ದ ಕಾಲೇಯರೆಂಬ ರಾಕ್ಷಸರನ್ನು ಹೊರಗೆಡಹುವುದಕ್ಕಾಗಿ ಸಮುದ್ರವನ್ನೇ ಆಪೋಶನಯ ಮಾಡಿದ್ದು-ಇವೆಲ್ಲ ಅಗಸ್ತ್ಯನಿಂದಾದ ಲೋಕರಕ್ಷಣಾಕಾರ್ಯಗಳು, ತಮಿಳು ನಾಡಿನ ಪೊದಿಯಲ್ ಬೆಟ್ಟದಲ್ಲಿ ನೆಲೆಸಿ ತಮಿಳುಭಾಷೆಗೆ ಜನ್ಮವಿತ್ತನೆಂದೂ ಅಗತ್ತಿಯಂ ಎಂಬ ಪ್ರಥಮ ತಮಿಳುವ್ಯಾಕರಣವನ್ನು ಬರೆದನೆಂದೂ ತಮಿಳು ಪ್ರಥಮ ಸಾಹಿತ್ಯ ಸಂಘದ ಅಧ್ಯಕ್ಷನಾಗಿದ್ದನೆಂದೂ ತಮಿಳು ಸಾಹಿತ್ಯದಲ್ಲಿ ವರ್ಣಿತವಾಗಿದೆ. ಮರಣಾನಂತರ ನಕ್ಷತ್ರಪದವಿ ಇವನಿಗೆ ದೊರಕಿತು.

ಮಹಾವ್ಯಾಧ (ಒರೈಯನ್) ನಕ್ಷತ್ರಪುಂಜದ ಪೂರ್ವ-ದಕ್ಷಿಣಕ್ಕೆ ಇರುವ ಲುಬ್ಧಕದ (ಸಿರಿಯಸ್) ದಕ್ಷಿಣದಲ್ಲಿರುವ ಸಮಾನಪ್ರಕಾಶದ ನಕ್ಷತ್ರವೇ ಅಗಸ್ತ್ಯ (ಕ್ಯಾನೊಪಸ್). ಇದು ಕರಿನಾ ಪುಂಜದ ಪ್ರಥಮ ನಕ್ಷತ್ರ. ಭೂಮಿಯಿಂದ ಇದರ ದೂರ 65೦ ಜ್ಯೋತಿರ್ವರ್ಷಗಳು. ಇದರ ಪ್ರಕಾಶ ಸೂರ್ಯಪ್ರಕಾಶದ ಸುಮಾರು 1,೦೦,೦೦೦ದಷ್ಟು. ಕಾಣುವ ಅತಿ ಪ್ರಕಾಶಮಾನ ನಕ್ಷತ್ರಗಳಲ್ಲಿ ಇದು ಎರಡನೆಯದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ವಸಿಷ್ಠ

[ಬದಲಾಯಿಸಿ]

ವಸಿಷ್ಠ - ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ಕಶ್ಯಪನಿಗೆ ಅದಿತಿಯಲ್ಲಿ ಮಿತ್ರಾ ವರುಣರೆಂಬ ಅವಳಿ ಮಕ್ಕಳು ಹುಟ್ಟಿದರು. ಇವರಿಬ್ಬರು ಒಮ್ಮೆ ಮಾಡಿದ ಯಜ್ಞಕ್ಕೆ ದೇವತೆಗಳು, ಗಂಧರ್ವರು, ಪಿತೃಗಳಲ್ಲದೆ, ಅಪ್ಸರೆಯರಲ್ಲೆಲ್ಲ ಹೆಚ್ಚು ಸುಂದರಿಯಾದ ಊರ್ವಶಿಯೂ ಬಂದಳು. ದೀಕ್ಷಾಬದ್ಧರಾಗಿದ್ದ ಇವರಿಬ್ಬರ ದೃಷ್ಟಿ ಊರ್ವಶಿಯ ಮೇಲೆ ಬಿತ್ತು. ಇಬ್ಬರೂ ವಿಕಾರ ವಶರಾದರು. ಅಖಂಡನಿಷ್ಠೆಯಿಂದ ಪಾಲಿಸಿದ್ದ ಇವರ ಬ್ರಹ್ಮಚರ್ಯ ಸಡಿಲವಾಯಿತು. ಇಬ್ಬರಿಗೂ ವೀರ್ಯಸ್ಖಲನವಾಗಿ ಅದನ್ನು ಒಂದು ಕುಂಭದಲ್ಲಿಟ್ಟರು. ಅದರಲ್ಲಿ ಇಬ್ಬರು ಮಕ್ಕಳು ಜನಿಸಿದರು. ಮೊದಲನೆಯ ಮಗು ಅಗಸ್ತ್ಯ. ಆಮೇಲೆ ಕುಂಭದಲ್ಲಿದ್ದ ನೀರನ್ನು ಸರೋವರದಲ್ಲಿ ಚೆಲ್ಲಿದಾಗ ಅದರಲ್ಲಿದ್ದ ಎರಡನೆಯ ಮಗು ಸರೋವರದಲ್ಲಿ ತೇಲುತ್ತ ಬಂದು ಒಂದು ಕಮಲ ದಳದ ಮೇಲೆ ಕುಳಿತಿತು. ಇದು ವಿಶಿಷ್ಟರೀತಿಯಲ್ಲಿ ಜನಿಸಿದ್ದರಿಂದ ಇದಕ್ಕೆ ವಸಿಷ್ಠನೆಂದು ಹೆಸರಾಯಿತು. ಅಗಸ್ತ್ಯ ಹುಟ್ಟಿದ ಕೂಡಲೆ ಮಿತ್ರನಿಗೆ ನಾನು ನಿನ್ನ ವೀರ್ಯದಿಂದ ಹುಟ್ಟಿದವನಲ್ಲ ಎಂದುದರಿಂದ ವಸಿಷ್ಠ ಮಿತ್ರನ ಮಗನೆಂದಾಯಿತು. ಅರುಂಧತಿ ಈತನ ಪತ್ನಿ. ಇವರಿಬ್ಬರ ಮಗ ಶಕ್ತಿ. ಶಕ್ತಿಯ ಪತ್ನಿ ಅದೃಶ್ಯಂತಿ. ಇವರ ಮಗ ಪರಾಶರ. ಪರಾಶರನಿಗೆ ಮತ್ಸ್ಯಗಂಧಿಯಲ್ಲಿ ಜನಿಸಿದವ ವೇದವ್ಯಾಸ. ವಸಿಷ್ಠ ಯಜ್ಞದಲ್ಲಿ ತೊಡಗಿದ್ದಾಗ, ಜರೂಥನೆಂಬ ರಾಕ್ಷಸ ಅದನ್ನು ಕೆಡಿಸಲು ಯತ್ನಿಸಿದಾಗ ವಸಿಷ್ಠ ಅಗ್ನಿಯ ಸಹಾಯದಿಂದ ಅವನನ್ನು ಕೊಲ್ಲಿಸಿದ. ಕಾರ್ತವೀರ್ಯಾರ್ಜುನ ವಸಿಷ್ಠನ ಆಶ್ರಮ ದಹಿಸಿದ್ದರಿಂದ ವಸಿಷ್ಠ ಅವನಿಗೆ ಶಾಪ ಕೊಟ್ಟ. ಋಷಿಗಳು ಭಿನ್ನಜಾತಿ ಸ್ತ್ರೀಯರಲ್ಲಿ ಜನಿಸಿದರೂ ಅವರ ತಪಸ್ಸು ಮತ್ತು ವಿದ್ಯೆಗಳೇ ಅವರ ಮಹಿಮೆಗೆ ಕಾರಣ ಎಂದು ವಸಿಷ್ಠ ಕರಾಳಜನಕನೊಂದಿಗೆ ನಡೆದ ಸಂವಾದದಲ್ಲಿ ವಾದಿಸಿದ. ವಸಿಷ್ಠ ತನ್ನ ತೇಜಸ್ಸಿನಿಂದ ರಾಕ್ಷಸರನ್ನು ನಿಗ್ರಹಿಸಿ ಇಂದ್ರನನ್ನು ಕಾಪಾಡಿದ. ಗೋಮಹಿಮೆಯ ವಿಷಯವಾಗಿ ಕಲ್ಮಾಷಪಾದನ ಸಂಗಡ ವಸಿಷ್ಠ ಸಂವಾದ ನಡೆಸಿದ. ವಸಿಷ್ಠನ ಬಳಿ ಇದ್ದ ನಂದಿನಿಧೇನುವನ್ನು ಪಡೆಯಲಾರದೆ ವಿಶ್ವಾಮಿತ್ರ ವಸಿಷ್ಠನನ್ನು ದ್ವೇಷಿಸುವುದರೊಂದಿಗೆ ಬ್ರಹ್ಮರ್ಷಿಯಾಗಲು ಘೋರತಪಸ್ಸನ್ನು ಮಾಡಿ ವಸಿಷ್ಠನ ಅನುಗ್ರಹದಿಂದಲೇ ಬ್ರಹ್ಮರ್ಷಿಯಾದ(ಮಹಾಭಾರತ). ನೃಗ ಮಹಾರಾಜನೂ ವಸಿಷ್ಠನೂ ಒಬ್ಬರಿಗೊಬ್ಬರು ಶಾಪಕೊಟ್ಟರೆಂದು ರಾಮಾಯಣದಲ್ಲಿದೆ. ಆಪವನಾಮಕ ಪ್ರಜಾಪತಿಗಳಾದ ಬ್ರಹ್ಮದೇವ ಒಬ್ಬ ಸುಂದರ ಸ್ತ್ರೀಯನ್ನು ಸೃಷ್ಟಿ ಮಾಡಿದ. ಈಕೆ ಮಹಾತಪಸ್ವಿನಿ. ವಸಿಷ್ಠರು ಈಕೆಯನ್ನು ಪತ್ನಿಯಾಗಿ ಸ್ವೀಕರಿಸಿದರು. ಇವರಲ್ಲಿ ಇವಳಿಗೆ ವೀರನೆಂಬ ಮಗ ಹುಟ್ಟಿದ(ಹರಿವಂಶ). ಆತ ಕರ್ದಮ ಮುನಿಯ ಏಳನೆಯ ಮಗಳಾದ ಊರ್ಜಾದೇವಿಯನ್ನು ಮದುವೆಯಾಗಿ ಚಿತ್ರಕೇತು, ಸುರೋಚಿ, ವಿರಜ, ಮಿತ್ರ, ಉಲ್ಬಣ, ವಸುಭೃಧ್ಯಾನ, ದ್ಯುಮಂತರೆಂಬ ಏಳು ಮಕ್ಕಳನ್ನು ಪಡೆದ(ಭಾಗವತ). ಹರಿಶ್ಚಂದ್ರನ ಸತ್ಯಸಂಧತೆಯ ಬಗ್ಗೆ ವಿಶ್ವಾಮಿತ್ರನೊಡನೆ ವಾಗ್ವಾದ ನಡೆಸಿ ಕಡೆಗೆ ವಸಿಷ್ಠನೇ ಗೆದ್ದನೆಂದು ದೇವೀ ಭಾಗವತದಿಂದ ತಿಳಿದುಬರುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: