ಮಾದಕ ವ್ಯಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Shubhada Sudarshan/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)

ಮುನ್ನೋಟ[ಬದಲಾಯಿಸಿ]

ಮಾದಕ ವಸ್ತುಗಳನ್ನು ತನಗೆ ಅಥವಾ ಪರರಿಗೆ ಹಾನಿಕಾರಕ ಆಗುವಂತೆ ಉಪಯೋಗಿಸುವುದಕ್ಕೆ ಮಾದಕ ವ್ಯಸನ ಎನ್ನಲಾಗುತ್ತದೆ. ಇದು ಮಾನಸಿಕ ಅಸ್ವಸ್ಥತೆಯ ಒಂದು ರೂಪ. ಮಾದಕ ವ್ಯಸನ ಏನು ಎಂಬುದನ್ನು ಆರೋಗ್ಯ, ನ್ಯಾಯಾಂಗ, ಇತ್ಯಾದಿ ಇಲಾಖೆಗಳು ವಿವಿಧ ರೀತಿಯಲ್ಲಿ ವಿವರಿಸುತ್ತವೆ. ಮಾದಕ ವ್ಯಸನದಿಂದಾಗಿ ವ್ಯಕ್ತಿಯಲ್ಲಿ ಸಮಾಜ ವಿರೋಧಿ ನಡತೆಗಳು ಕಾಣಲ್ಪಡುವ ಸಾಧ್ಯತೆಗಳಿವೆ. ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ತೊಂದರೆಗಳಲ್ಲದೆ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಕೂಡ ಬದಲಾವಣೆಗಳನ್ನು ಕಾಣಬಹುದು. ಆಯಾ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿಕೊಂಡು ಹಲವು ಮಾದಕ ವಸ್ತುಗಳ ಬಳಕೆ ಕಾನೂನುಬಾಹಿರವಾಗಿದ್ದು ದಂಡನೆಗೆ ಒಳಗಾಗುವ ಸಾಧ್ಯತೆ ಕೂಡಾ ಇದೆ. ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾದ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಮಾರಿಜುವಾನಾ, ತಂಬಾಕು, ಗಾಂಜಾ ಮತ್ತು ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಮುಂತಾದವು ವ್ಯಸನಿಗಳು ಹೆಚ್ಚಾಗಿ ಬಳಸುವ ಮಾದಕ ದ್ರವ್ಯಗಳಾಗಿವೆ.[೧]

ಗಾಂಜಾ

ಮಾದಕ ವಸ್ತುಗಳ ಇನ್ನು ಕೆಲವು ಉದಾಹರಣೆಗಳು ಮಧ್ಯಪಾನ, ಅಂಫಟಾಮಿನ್ಗಳು, ಬಾರ್ಬಿಟುರೇಟುಗಳು, ಕೊಕೇನ್, ಬ್ರಾಹ್ಮಕ ಒಪಿಯಾಡ್ಗಳು ಇತ್ಯಾದಿ. ಮಾದಕ ವಸ್ತುಗಳೆಂದಾಗ ವ್ಯಸನಕ್ಕೆ ಒಳಗಾಗಲು ಕಾರಣವೇನೆಂದು ಸುಮಾರು ಸಂಶೋಧನೆಯಾಗಿದ್ದರೂ ವಿಜ್ಞಾನಿಗಳಿಗೆ ಇನ್ನೂ ಸರಿಯಾಗಿ ತಿಳಿದಿಲ್ಲ. ಅನುವಂಶಿಕ ಇತ್ಯರ್ಥವು ಒಂದು ಕಾರಣವಾಗಿರಬಹುದು. ಅದಲ್ಲದೆ ಮಾದಕ ವಸ್ತುವಿನ ರಾಸಾಯನಿಕ ಗುಣಗಳು ಚಟಕ್ಕೆ ಕಾರಣವಾಗುತ್ತವೆ. ಕಾರಣವೇನೇ ಇದ್ದರೂ ಮಾದಕ ವ್ಯಸನವು ಒಂದು ದೀರ್ಘಕಾಲಿಕ, ದುರ್ಬಲಗೊಳಿಸುವ ಅಸ್ವಸ್ಥತೆಯಾಗಿ ಪರಿಣಮಿಸುತ್ತದೆ.

ಪ್ರತಿವರ್ಷ ಜೂನ್ ೨೬ ರಂದು ವಿಶ್ವದಾದ್ಯಂತ ಮಾದಕ ವ್ಯಸನ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.[೨]

ಮಾದಕ ವ್ಯಸನದ ಹಂತಗಳು[ಬದಲಾಯಿಸಿ]

ಮೆದುಳಿನ ಪ್ರಿ ಫ಼್ರೊನ್ಟಲ್ ಕೊರ್ಟೆಕ್ಸ್ ಮತ್ತು ಮಾದಕ ವ್ಯಸನಕ್ಕೆ ಆಳವಾದ ಸಂಬಂಧವಿದೆ

ಮಾದಕ ವ್ಯಸನದಲ್ಲಿ ನಾಲ್ಕು ಹಂತಗಳಿವೆ: ಮೊದಲನೆಯ ಹಂತ - ಪ್ರಯೋಗ ಈ ಹಂತದಲ್ಲಿ ಕುತೂಹಲ ಅಥವಾ ಭಾವನಾತ್ಮಕ ತೊಂದರೆಯಿಂದಾಗಿ ವ್ಯಕ್ತಿಯು ಮಾದಕ ವಸ್ತುವಿನ ಪ್ರಯೋಗವನ್ನು ಮಾಡಬಹುದು.[೩] ಉದಾಹರಣೆಗೆ ಹದಿಹರೆಯದ ವ್ಯಕ್ತಿಯು ಪ್ರೇಮದ ವೈಫಲ್ಯದಿಂದಾಗಿ ಗಾಂಜಾ ಸೇವಿಸುವುದು. ಎರಡನೇ ಹಂತ - ನಿಯಮಿತದಿಂದ ಅಪಾಯಕಾರಿ ಉಪಯೋಗಕ್ಕೆ ವ್ಯಕ್ತಿಯು ಒಳಗಾಗುವುದು ಇದಕ್ಕೆ ಕಾರಣವು ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆಯಾಗಿರುತ್ತದೆ. ಒಬ್ಬ ವ್ಯಕ್ತಿಯ ಮಾದಕ ವಸ್ತುವಿನ ಉಪಯೋಗ ಆತನ ಅಥವಾ ಆಕೆಯ ಹತ್ತಿರದ ಜನರಿಗೆ ಚಿಂತೆಯ ವಿಷಯವಾದ ಸಂದರ್ಭದಲ್ಲಿ ಬಳಕೆಯಿಂದ ಹೊರಬರಲು ಸಹಾಯಮಾಡಬೇಕು. ಮೂರನೇ ಹಂತ - ಅವಲಂಬನೆ ಈ ಹಂತದಲ್ಲಿ ವ್ಯಕ್ತಿಯು ಆತಂಕಕಾರಿ ಗುಣಗಳನ್ನು ಪ್ರದರ್ಶಿಸಬಹುದು ಹಾಗೂ ಮಾದಕ ವಸ್ತುವಿನ ಬಳಕೆ ವ್ಯಕ್ತಿಯ ಹಿಡಿತವನ್ನು ಮೀರಿರುತ್ತದೆ. ತನ್ನ ವ್ಯಸನದಿಂದ ತನಗೆ ಹಾಗೂ ತನ್ನ ಸುತ್ತುಮುತ್ತಲಿರುವವರಿಗೆ ಆಗುತ್ತಿರುವ ತೊಂದರೆಗಳ ಅರಿವು ಇರುವುದಿಲ್ಲ. ಈ ಹಂತದಲ್ಲಿ ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ಮರೆತು ಮಾದಕ ವಸ್ತುವಿನ ಉಪಯೋಗಕ್ಕೆ ಒಳಗಾಗುತ್ತಾನೆ. ಕೊನೆಯ(ನಾಲ್ಕನೆಯ) ಹಂತ - ತೀವ್ರ ಅವಲಂಬನೆ ವ್ಯಕ್ತಿಯು ಮಾದಕ ವಸ್ತುವಿಗೆ ಅವಲಂಬಿತನಾಗುತ್ತಾನೆ. ಅವಲಂಬನೆಯ ಹಂತದಲ್ಲಿ ಹಿಡಿತವಿಲ್ಲದ ಕಡುಬಯೆಕೆಯ ಬಲಿಪಶುವಾಗುತ್ತಾನೆ. ಸಮಯ ಹೋದಂತೆ ಚಿಕಿತ್ಸೆ ನೀಡದಿದ್ದರೆ ಅವಲಂಬನೆ ತೀವ್ರಗೊಳ್ಳುತ್ತದೆ. ಮಾದಕ ವಸ್ತುವನ್ನು ಪದೇ ಪದೇ ಉಪಯೋಗಿಸುವುದರಿಂದ ವ್ಯಕ್ತಿಯ ಮೆದುಳಿನ ರಚನಾತ್ಮಕ ಹಾಗೂ ಕ್ರಿಯಾತ್ಮಕ ಬದಲಾವಣೆ ಆಗುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಈ ಹಂತದಲ್ಲಿ ಮೆದುಳು ಸಹಜ ಸ್ಥಿತಿಯಿಂದ ಅವಲಂಬಿತ ಸ್ಥಿತಿಗೆ ಬದಲಾಗಿರುತ್ತದೆ. ಈ ಸ್ಥಿತಿಯಲ್ಲಿ ಮನಸ್ಸಿಗೆ ಹಾಗೂ ನಡವಳಿಕೆಗೆ ಎಷ್ಟರ ಮಟ್ಟಿಗೆ ತೊಂದರೆಯಾಗಿರುತ್ತದೆ ಎಂದರೆ ಹೊರಬರಲು ಚಿಕಿತ್ಸೆಯೊಂದೇ ದಾರಿ.

ವ್ಯಸನದ ಪರಿಣಾಮ[ಬದಲಾಯಿಸಿ]

ಮಾದಕ ವ್ಯಸನದಿಂದಾಗಿ ಅವಲಂಬಿತ ವ್ಯಕ್ತಿಗೆ ಹಾಗೂ ಸುತ್ತುಮುತ್ತಲಿನವರಿಗೆ (ಮುಖ್ಯವಾಗಿ ಕುಟುಂಬ ಮತ್ತು ಗೆಳೆಯರಿಗೆ) ಹಲವು ರೀತಿಯ ತೊಂದರೆಗಳಾಗುತ್ತವೆ. ಮಾದಕವಸ್ತುವಿನ ವ್ಯಸನದಿಂದ ವ್ಯಕ್ತಿಯಲ್ಲಿ ಮಾನಸಿಕ ತೊಂದರೆಗಳು ಹಾಗೂ ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತದೆ. ಉದಾಹರಣೆಗೆ ' ಗೋ ಆಸ್ಕ್ ಆಲಿಸ್ ' ಎಂಬ ಪುಸ್ತಕದಲ್ಲಿ ಈ ತೊಂದರೆಯನ್ನು ನೈಜ ರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ವ್ಯಕ್ತಿಯ ವಿವೇಕ ಸಾಮರ್ಥ್ಯವು ಕುಗ್ಗಿರುವುದರಿಂದ ಅಪರಾಧಗಳನ್ನು ಮಾಡುವ ಸಾಧ್ಯತೆ ಹೆಚ್ಚು. ವ್ಯಕ್ತಿ ತನಗೆ ಹಾಗೂ ಸಮಾಜಕ್ಕೆ ಬಾಧಕವಾಗುತ್ತಾನೆ. ಉದಾಹರಣೆಗೆ ಮದ್ಯಪಾನ ಸೇವಿಸಿ ಬೇರೆ ಜನರಿಗೆ ಬಡಿಯಿವುದು ಅಥವಾ ಅತ್ಯಾಚಾರ ಮಾಡುವುದಕ್ಕೆ ಶಿಕ್ಷೆ ನೀಡಲಾಗುತ್ತದೆ. ವ್ಯಕ್ತಿಯು ಆರ್ಥಿಕವಾಗಿ ತನಗೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಬಾಧಕವಾಗುತ್ತಾನೆ. ತನಗಿರುವ ಸಾಮರ್ಥ್ಯವನ್ನು ದುರುಪಯೋಗ ಮಾಡುವುದನ್ನು ಅಥವಾ ಉಪಯೋಗ ಮಾಡದಿರುವುದನ್ನು ಸಮಾಜ ಒಪ್ಪುವುದಿಲ್ಲ. ಸಮಾಜವು ವ್ಯಸನಕ್ಕೆ ಒಳಗೊಂಡವರನ್ನು ದೂರ ಮಾಡುವುದರಿಂದ ಅವರು ಹೆಚ್ಚು ಹೆಚ್ಚು ವ್ಯಸನಕ್ಕೆ ಒಳಗಾಗುತ್ತಾರೆ. ಒಂದು ಸಮಸ್ಯೆ ಏನೆಂದರೆ ವ್ಯಸನಕ್ಕೆ ಒಳಗಾದವರಿಗೆ ಸಹಾಯ ಬೇಕಾಗಿರುತ್ತದೆ, ಆದರೆ ಎಲ್ಲರಿಗೂ ಸಹಾಯ ತಲುಪುವುದಿಲ್ಲ. ಚಿಕಿತ್ಸೆಯು ಸುಮಾರು ಜನರಿಗೆ ದುಬಾರಿಯಾಗಿತ್ತದೆ.

ಹದಿಹರೆಯದಲ್ಲಿ ಮಾದಕ ವ್ಯಸನ[ಬದಲಾಯಿಸಿ]

ಹದಿಹರೆಯರು ಮಾದಕ ವ್ಯಸನಕ್ಕೆ ಹೆಚ್ಚಿನ ಮಟ್ಟಿಗೆ ಒಳಗಾಗುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಬೆಳವಣಿಗೆಯ ಈ ಹಂತದಲ್ಲಿ ಹಾರ್ಮೋನುಗಳು ಅಂದರೆ ಶರೀರದ ರಾಸಾಯನಿಕ ಬಗೆಗಳು ಅಸಮತೋಲನೆಯಲ್ಲಿರುತ್ತವೆ. ಈ ಸಮಯದಲ್ಲಿ ಹೊರಗಿನ ಪ್ರಪಂಚವನ್ನು ಅನ್ವೇಷಿಸುತ್ತಾರೆ. ಕುತೂಹಲದ ಸಾಧ್ಯತೆ ಹೆಚ್ಚು. ಗೆಳೆಯರ ಒತ್ತಡದಿಂದಾಗಿ ಮಾದಕ ವಸ್ತುವಿನ ಸೇವನೆ ಮಾಡಬಹುದು. ಅಲ್ಲದೆ ಯಾವುದಾದರೂ ಆಘಾತದ ನೋವಿನಿಂದಾಗಿ ಸೇವಿಸಬಹುದು. ಶಾಲಾ -ಕಾಲೇಜುಗಳ ವ್ಯವಸ್ಥೆ ಸರಿಯಿಲ್ಲದಿದ್ದರೆ ಅಥವಾ ಅದು ಮಕ್ಕಳಿಗೆ ಕಲಿಯಲು ಉತ್ಸಾಹ ಕೊಡದಿದ್ದರೆ ಕೂಡಾ ವ್ಯಸನಕ್ಕೊಳಗಾಗುವ ಸಾಧ್ಯತೆ ಇದೆ.[೪]

ಅಂಕಿಅಂಶಗಳು[ಬದಲಾಯಿಸಿ]

ಅಂಕಿಅಂಶಗಳಲ್ಲಿ ಮಾದಕ ವ್ಯಸನದ ವರದಿ ತಿಳಿದುಬರುತ್ತದೆ. ೨೦೧೦ರಲ್ಲಿ ವಿಶ್ವದಾದ್ಯಂತ ೫ ಶೇಖಡಾ ಜನರು ಈ ವ್ಯಸನಕ್ಕೆ ಬಲಿಯಾಗಿದ್ದರು. ೧೯೯೦ರಿಂದ ೨೦೧೫ರ ವರೆಗಿನ ವ್ಯಸನದ ಸಂಖ್ಯೆ ಗಮನಿಸಿದರೆ ಪಟ್ಟಿ ಹೆಚ್ಚಾಗಿದೆ. ೨೦೧೫ರಲ್ಲಿ ೩೦೭೪೦೦ ಜನರು ಮಾದಕ ವ್ಯಸನದಿಂದಾಗಿ ಮರಣಗೊಂಡರು. ಮನೋವಿಜ್ಞಾನದಲ್ಲಿ ಮಾದಕ ವ್ಯಸನಕ್ಕೆ ಹಲವು ರೀತಿಯ ಚಿಕಿತ್ಸೆಗಳಿವೆ. ಆದರೆ ಮರುಕಳಿಸುವಿಕೆ ಅಥವಾ ರೇಲಾಪ್ಸ್ ಆಗುವ ಸಾಧ್ಯತೆ ಇದೆ. ವಾಪಸಾತಿ ಅಥವಾ ವಿಥ್ಡ್ರಾವಲ್ ಅನ್ನು ಮೀರುವುದರಿಂದ ಹಿಡಿದು ವ್ಯಕ್ತಿಯನ್ನು ಸಮತೋಲನೆಗೆ ತರುವಂತೆ ಈ ಚಿಕಿತ್ಸೆಗಳು ಪ್ರಯತ್ನಿಸುತ್ತವೆ.


ಉಲ್ಲೇಖಗಳು[ಬದಲಾಯಿಸಿ]

  1. https://kannada.whiteswanfoundation.org/mental-health-matters/understanding-mental-health/addicted-to-drugs-how-can-medication-and-therapy-help
  2. https://www.prajavani.net/art-culture/article-features/international-day-against-drug-abuse-and-illicit-trafficking-2022-949017.html
  3. https://kannada.whiteswanfoundation.org/mental-health-matters/understanding-mental-health/addicted-to-drugs-how-can-medication-and-therapy-help
  4. https://kannada.whiteswanfoundation.org/mental-health-matters/understanding-mental-health/addicted-to-drugs-how-can-medication-and-therapy-help