ಸದಸ್ಯ:Dhanya667/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಬಚ್ಚನಾಯಕನು ಯೇನೆಕಲ್ಲಿನಲ್ಲಿ ಆರಾಧ್ಯ ದೈವನಾಗಿ ಗುರುತಿಸಿಕೊಳ್ಳುತ್ತಿದ್ದಾನೆ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಐಗೂರು ಸೀಮೆಗೆ ಸೇರಿದ ಕಾಗೆನೂರು ಕೋಟೆಯಲ್ಲಿ ದಂಡಿನ ದಳವಾಯಿ ಮಲ್ಲಾನ ಗೌಡ ಎಂಬವನಿದ್ದನು. ಈತನ ಹೆಂಡತಿ ಲೀಲಾವತಿ. ಈ ದಂಪತಿಗಳಿಗೆ ಕೋಟೆ ನಾಯಕ, ಬಚ್ಚನಾಯಕ, ಸಣ್ಣನಾಯಕ ಎಂಬ ಗಂಡು ಮಕ್ಕಳಿಗದ್ದರು. ಹಾಗೆಯೆ ಇವರಿಗೆ ತಂಗಿಯೊಬ್ಬಳಿದ್ದಳು.ಗಂಡು ಮಕ್ಕಳು ಗರಡಿ ಸಾಧಕರಾಗಿದ್ದರು. ಬಚ್ಚನಾಯಕ ತಂದೆಗೆ ಸಹಾಯಕವಾಗಿ ಕೋಟೆಯ ರಕ್ಷಕನಾಗಿದ್ದನು.

ಇತಿಹಾಸ[ಬದಲಾಯಿಸಿ]

ಬಚ್ಚನಾಯಕನ ಮೂಲಕ ಕಡಬದರಸನು ಯೇನೆಕಲ್ಲು ಗ್ರಾಮವನ್ನು ಸೂರೆ ಮಾಡಲು ಪ್ರಯತ್ನ ಮಾಡಿದನು. ಓಲೆಕಾರನ ಮೂಲಕ ಬಂದ ಕಡಬದ ಸ್ನೇಹಿತನ ಓಲೆಯನ್ನು ಓದಿ ತಾನು ತುಳುನಾಡಿಗೆ ಹೋಗುವ ವಿಚಾರವನ್ನು ತಂದೆಗೆ ತಿಳಿಸುತ್ತಾನೆ. ತಂದೆಯು ಮಗನ ಮಾತು ಕೇಳಿ "ಮಗನೇ ತುಳುನಾಡು ಬಂಟರ ರಾಜ್ಯ-ತುಂಟರ ಸೀಮೆ ಮುಂದೆ ನಿಂತರೆ ಕಾಲು ಕಡಿದಾರು. ಹಿಂದೆ ನಿಂತರೆ ಕತ್ತು ಕೊಯ್ದರು, ಆದ್ದರಿಂದ ನೀನು ಹೊಗಕೂಡದು" ಎಂದು ಹೇಳುತ್ತಾನೆ. ಆದರೆ ಬಚ್ಚನು ಮಾತು ಕೊಟ್ಟಿದ್ದೇನೆ ತಪ್ಪಿ ನಡೆಯಲಾರೆ, ಬಂದದ್ದನು ಎದುರಿಸುತ್ತೇನೆಂದನು. ಹಾಗೆಯೇ ತಾಯಿ "ಮಗನೇ ತುಳುವರು ಮೋಸಗಾರರು,ಉಣ್ಣುವ ಅನ್ನಕ್ಕೆ ವಿಷವಿಕ್ಕುವರು,ಕುಡಿಯುವ ಹಾಲಿಗೆ ಪಾಷಾಣವಿಕ್ಕುವರು,ನೀನು ನಮ್ಮನು ಬಿಟ್ಟು ಹೋಗಕೂಡದು" ಎನ್ನುತ್ತಾಳೆ. ಆದರೆ ಬಚ್ಚನು ಮಾತು ಮೀರಿ ಹೊರಡಲು ಸಿದ್ಧನಾಗುತ್ತಾನೆ. ಆಗ ತುಂಬು ಬಸುರಿ ತಂಗಿ ತುಳುನಾಡಿಗೆ ಹೋಗುವ ಸಿದ್ಧತೆಯಲ್ಲಿದ್ದ ಬಚ್ಚನನಲ್ಲಿಗೆ ಗಿಂಡಿ ಹಾಲು ಹಿಡಿದು ಬಂದಳು. ಅಣ್ಣಾ ನೀನು ತುಳುನಾಡಿಗೆ ಹೋಗಬಾರದೆಂದು ಬಿನ್ನವಿಸಿದಳು. 'ಅಣ್ಣಾ ನೀನು ಬೆನ್ನು ಹಾಕಿ ಹೋದರೆ ತಲೆಯೆತ್ತಿ ಬರಲಾರೆ ಇದಕ್ಕೆ ಗಡಿ ಚೌಡಮ್ಮಳ ಆಣೆ' ಎಂದಳು. ಬಚ್ಚ ಕೋಪದಿಂದ ತಂಗಿಯನ್ನು ಕಾಲಿನಿಂದ ತುಳಿಯುತ್ತಾನೆ. ಗಿಂಡಿ ಹಾಲು ಚೆಲ್ಲಿತು;ಗರ್ಭಪಾತವಾಯಿತು. ಕುದುರೆಯೇರಿ ಐಗೂರು ಬಿಟ್ಟ ಬಚ್ಚ ಅಡ್ಡ ಹೊಳೆಗೆ ಬಂದು ಬುತ್ತಿ ಬಿಚ್ಚುತಾನೆ. ಮನೆಯವರ ಮಾತನ್ನು ದಿಕ್ಕರಿಸಿ ಬಂದ ಅವನು ತಳಮಳಗೊಂಡಿದ್ದ. ಭವಿಷ್ಯದ ಕುರಿತಂತೆ ಯೋಚಿಸಿ ಬುತ್ತಿಯ ಅನ್ನದ ತುತ್ತನ್ನು ಮೀನುಗಳಿಗೂ ಕಾಗೆಗಳಿಗೂ ಹಾಕುತ್ತಾನೆ. ಸತ್ಯಶೋಧನೆಯಲ್ಲಿ ಅವು ಮುಟ್ಟಲಿಲ್ಲ. ಈ ಮೂಲಕ ತನ್ನ ದು:ಸ್ಥಿತಿಯನ್ನು ಅರಿಯುತ್ತಾನೆ. ಕಡಬದಲ್ಲಿಂದ ಯೇನೆಕಲ್ಲಿಗೆ ಕೊಂಬಾರು ಮೂಲಕ ಪಯಣಿಸಿ ಬರುತ್ತಾನೆ. ಬಾಣಡ್ಕ ಸುಬ್ಬೇಗೌಡ ಯೇನೆಕಲ್ಲು ಮುನ್ನೂರೊಕ್ಕಲಿಗ ಗುತ್ತುಗಾರನಾಗಿದ್ದ. ಬಚ್ಚನಿಂದ ಊರು ಸೂರೆಯಾದ ವಿಷಯ ತಿಳಿಯಿತು. ಸುಬ್ಬೇಗೌಡ ತನ್ನ ಮನೆಯ ಪಕ್ಕದ ಮರಗಳಲ್ಲಿ ಉಳಿಕಟ್ಟೆ ಮೂಲದ ಮುಗೇರನನ್ನು ವಿರೋಧಿಗಳ ನಾಶಕ್ಕಾಗಿ ಕಾವಲು ಕುಳ್ಳಿರಿಸಿದ. ಅವರು ಹುಲಿಕಂದಡಿ ಹಾವಿನ ವಿಷ ಲೇಪಿತ ಪಗರಿ ಹಿಡಿದಿದ್ದರು. ಗುತ್ತು ಗೌಡ ಬಾನಡ್ಕ ಸುಬ್ಬನನ್ನು ಸೆರೆ ಹಿಡಿಯುವ ಸಲುವಾಗಿ ಬಚ್ಚ ಕುದುರೆಯೇರಿ ಬರುತ್ತಾನೆ. ಮುಗೇರರು ಮರೆಯಿಂದ ಪಗರಿ ಬಿಟ್ಟು ಬಚ್ಚನನ್ನು ನೆಲಕ್ಕುರುಳಿಸುತ್ತಾನೆ. ಸುಬ್ಬೇಗೌಡನು ಜನ ಸೇರಿಸಿ ಸಮಾಲೋಚನೆ ನಡೆಸುತ್ತಾನೆ. ಬಚ್ಚನು ಕುದುರೆಯಿಂದ ಉರುಳಿ ತೋಡಿಗೆ ಬೀಳುತ್ತಾನೆ. ಸಾವನ್ನು ಹೊಂದಿರುವುದಿಲ್ಲ. ಸಂಜೆಯ ಹೊತ್ತಿಗೆ ಸುಬ್ಬ ಗೌಡನ ಹೆಂಡತಿಯರಿಬ್ಬರು ಹುಲ್ಲಿಗಾಗಿ ಬಂದಾಗ ಬಚ್ಚನು ನರಳುವುದು ಕೇಳುತ್ತದೆ. ನರಳಾಟವನ್ನು ನಿಲ್ಲಿಸಲು ಉಪಾಯ ಕಂಡುಕೊಂಡ ಅವರಲ್ಲಿ ಅಕ್ಕ ವೈರಿಯ ಕೊರಳನ್ನು ಒತ್ತಿ ಹಿಡಿಯುತ್ತಾಳೆ. ತಂಗಿಯು ಹೊರಚಾಚಿದ ನಾಲಗೆಯನ್ನು ಕತ್ತರಿಸುತ್ತಾಳೆ.

ದೈವ ಪುರಾಣ[ಬದಲಾಯಿಸಿ]

ಬಚ್ಚನಾಯಕನು ಸಾಯುವಾಗ ಮಾಯದಲ್ಲಿ ನಾನು ದೈವವಾಗಿರುತ್ತೇನೆ ನೀವು ಆರಾಧಿಸಿರಿ. ನಿಮ್ಮನ್ನು ಕಾಯುತ್ತೇನೆಂದು ಹೇಳುತ್ತಾನೆ. ಈ ಪ್ರಕಾರವೇ ಇಂದು ಯೇನೆಕಲ್ಲಿನಲ್ಲಿ ಬಚ್ಚನಾಯಕನು ಆರಾಧ್ಯ ದೈವನಾಗಿ ಗುರುತಿಸಿಕೊಳ್ಳುತ್ತಿದ್ದಾನೆ.[೧]

ಉಲ್ಲೇಖಗಳು[ಬದಲಾಯಿಸಿ]

[೨] [೩]

  1. ಪುಸ್ತಕದ ಹೆಸರು-ಸ್ಥಳ ನಾಮಗಳು ಮತ್ತು ಐತಿಹ್ಯಗಳು,ಪುಟ ಸಂ.೧೧-೧೨,ಲೇಖಕರು- ಪೂವಪ್ಪ ಕಣಿಯೂರು; ಕನ್ನಡ ಸಂಘ ನೆಹರೂ ಮೆಮೋರಿಯಲ್ ಕಾಲೇಜು,ಸುಳ್ಯ.
  2. ಕುಕ್ಕೆಯಲ್ಲಿ ನಾಗರ ಮಡಿಕೆ; ಪ್ರಾದೇಶಿಕ ಅಧ್ಯಯನ; ೨೦೧೭; ಡಾ.ಪೂವಪ್ಪ ಕಣಿಯೂರು; ತರಂಗಿಣಿ ಪ್ರಕಾಶನ , ಸುಳ್ಯ
  3. ಬಳ್ಪ ಗ್ರಾಮದ ಕ್ಷೇತ್ರ ಇತಿಹಾಸ; ಲಿಂಗಪ್ಪ ಗೌಡ ಕಟ್ಟ(ಸಂ.); ಸಿಧ್ದಿ ಸಾಧನೆ ಬೆಳ್ಳಿಹಬ್ಬ ಸಮಿತಿ ,ಬಳ್ಪ, ಸುಳ್ಯ ,ದ.ಕ