ಸದಸ್ಯ:Bergi Jayashree/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮ್ಮಿಗನೂರಿನ ಇತಿಹಾಸ

ಪ್ರತಿಯೊಂದು ಗ್ರಾಮವೂ ತನ್ನದೇ ಆದ ಇತಿಹಾಸ ಹೊಂದಿರುವಂತೆಯೇ ಎಮ್ಮಿಗನೂರು ಗ್ರಾಮವೂ ಕೂಡ ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದೆ.[೧] ಎಮ್ಮಿಗನೂರು ತುಂಗಭದ್ರೆಯ ಕರುಣೆಯಿಂದ ಸದಾ ಹಚ್ಚಹಸಿರಾದ ಭತ್ತದ ಗದ್ದೆಗಳ ನಡುವೆ ಪರಿಶೋಭಿಸುತ್ತಿರುವ ದೊಡ್ಡ ಗ್ರಾಮ, ಇದು ತನ್ನದೇ ಆದ ಮಹತ್ವಪೂರ್ಣವಾದ ಹಿನ್ನಲೆಯನ್ನು ಹೊಂದಿದೆ. ವಿಶಿಷ್ಟ ಭಾಷೆಗಳಿಂದ ಕೂಡಿದ ಈ ಗ್ರಾಮ ಅನೇಕ ಐತಿಹ್ಯಗಳಿಂದ ಹೆಸರಾಗಿದೆ. ಐತಿಹಾಸಿಕ ತಾಣಗಳಾದ ಕಂಪ್ಲಿ ಹಾಗೂ ಕುರುಗೋಡುಗಳ ಮಧ್ಯೆ ಇರುವ ಗ್ರಾಮ ಎಮ್ಮಿಗನೂರು, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕವಾಗಿ ಸಮೃದ್ಧವಾಗಿದೆ. 'ಶ್ರೀ ಜಡೇಸಿದ್ದ ಶಿವಯೋಗಿಗಳ ತಪೋಭೂಮಿಯಾದ ಎಮ್ಮಿಗನೂರು ಆಧ್ಯಾತ್ಮ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗು ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಎಮ್ಮಿಗನೂರು ಎನ್ನುವ ಸ್ಥಳನಾಮ ಒಬ್ಬ ವ್ಯಕ್ತಿ ಅಥವಾ ಪ್ರಾಣಿಯ ಅನ್ವರ್ಥಕವಾಗಿದ್ದರೂ ಗುರು ಜಡೇಸಿದ್ಧ ಶವಯೋಗಿಗಳ ಪಾದ ಸ್ಪರ್ಶದಿಂದ ಪ್ರಾಂತ್ಯದಲ್ಲಿ ಬಹುಪ್ರಸಿದ್ಧಿ ಪಡೆದಿದ್ದು, ಸರ್ವಸಮೃದ್ಧಿ ಹೊಂದಿ ಅಭಿವೃದ್ಧಿಯತ್ತ ಮುಖಮಾಡಿದೆ.

ಎಮ್ಮಿಗನೂರು ಕ್ರಿ.ಶ. ೮೫೦ ರಿಂದಲೂ ಕುರುಗೋಡು ಹೋಬಳಿಗೆ ಸೇರಿದೆ. ರಾಜಕೀಯ ಮತ್ತು ಆಢಳಿತಾತ್ಮಕವಾಗಿ ಕುರುಗೋಡು ಹತ್ತಿರವಾದರೂ, ಕಂಪ್ಲಿ ಭೌಗೋಳಿಕವಾಗಿ ಹತ್ತಿರವಿದೆ. ಹೀಗಾಗಿ ಕಂಪ್ಲಿ ಮತ್ತು ಕುರುಗೋಡುಗಳ ಜೊತೆ ವ್ಯವಹಾರ ಸಂಬಂಧ ತೀರ ಸಾಮಿಪ್ಯ ಹೊಂದಿದೆ. ಜಿಲ್ಲಾ ಕೇಂದ್ರ ಬಳ್ಳಾರಿಯಿಂದ ೪೮ ಕಿ.ಮಿ, ಹೋಬಳಿ ಕೇಂದ್ರ ಕುರುಗೋಡಿನಿಂದ ೧೮ ಕಿ.ಮೀ. ಹಾಗು ನೆರೆಯ ಹೋಬಳಿ ಕಂಪ್ಲಿಯಿಂದ ೧೦ ಕಿ.ಮೀ ಅಂತರ ಹೊಂದಿದೆ. ಬಳ್ಳಾರಿಗೆ ಹೊರಡುವ ಜಿಲ್ಲಾ ರಸ್ತೆಯ ಉಭಯ ಬದಿಯಲ್ಲಿ ಗ್ರಾಮವು ೧೩೯೨೩ ಎಕ್ಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು ೧೫೭೧ ರೈತ ಕುಟುಂಬಗಳಿದ್ದು, ೬೨೨ ಜನ ಆತೀ ಸಣ್ಣ ರೈತರು, ೪೧೯ ಜನ ಸಣ್ಣ ರೈತರು, ೪೩೦ಜನ ದೊಡ್ಡ ರೈತ ಕುಟುಂಬಗಳಿವೆ. ಶೇ. ೬೦ ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಎಮ್ಮಿಗನೂರು ಗ್ರಾಮವು ಪ್ರಾರಂಭದಲ್ಲಿ ಕುರುಗೋಡು ತಹಶೀಲ್ದಾರರ ವ್ಯಾಪ್ತಿಗೆ ಸೇರಿದ್ದು ಪ್ರಸ್ತುತ ಕಂಪ್ಲಿ ತಾಲೂಕಿಗೆ ಸೇರಿದೆ.

  • ಐತಿಹಾಸಿಕ ಹಿನ್ನೆಲೆ

ಯಾವುದೇ ಒಂದು ಸಂಗತಿಯನ್ನು ಐತಿಹಾಸಿಕವಾಗಿ ಸ್ಥಿರಪಡಿಸಲು ಬೇಕಾದ ಆಕಾರಗಳೆಂದರೆ ಶಿಲಾಶಸನಗಳು, ಕೈಫಿಯತ್ತುಗಳು, ಸಾಹಿತ್ಯ ಕೃತಿಗಳು, ಜನಪದೀಯ ಅಂಶಗಳು, ಆದರೆ ಎಮ್ಮಿಗನೂರಿಗೆ ಯಾವುದೇ ಪುರಾವೆಗಳಿಲ್ಲ. ಇನ್ನು ಬೆಳಕಿಗೆ ಬಂದಿಲ್ಲ.ಅಂದರೆ ಖಚಿತವಾಗಿ ಹೇಳಲ್ಪಡಬಹುದಾದ ಚಾರಿತ್ರಿಕ ಸಂಗತಿಗಳು ಗ್ರಾಮದ ಇತಿಹಾಸವನ್ನು ಹೇಳಲು ಲಭ್ಯವಾಗುತ್ತಿಲ್ಲ, ಆದರೂ ಗ್ರಾಮಕ್ಕೊಂದು ನಂಬಲರ್ಹವಾದ ಪ್ರತೀತಿಗಳಿವೆ, ನಂಬಿಕೆಗಳಿವೆ, ಸಾಂಸ್ಕೃತಿಕ ಪರಂಪರೆಯ ಆಚರಣೆಗಳಿವೆ.

ಕಲ್ಯಾಣ ಚಾಲುಕ್ಯರ ಸಾಮಂತರಾದ ನೊಳಂಬಪಲ್ಲವರ ರಾಜಧಾನಿ ಕಂಪ್ಲಿ ಆಗಿದ್ದ ಕಾಲದಲ್ಲಿಯಾಗಲಿ, ಕುರುಗೋಡು ಕೇಂದ್ರವಾಗಿಟ್ಟುಕೊಂಡು ಆಳಿದ ಸಿಂಧರ ಕಾಲದಲ್ಲಾಗಲೀ, ಎಮ್ಮಿಗನೂರು ಅಸ್ಥಿತ್ವದಲ್ಲಿ ಇದ್ದ ಬಗ್ಗೆ ಕುರುಹುಗಳಿಲ್ಲ. ಇತಿಹಾಸಕಾರರು ಗುರಿತಿಸಿಲ್ಲ. ಏಕೆಂದರೆ ಕಂಪ್ಲಿಯನ್ನು ಒಳಗೊಂಡಂತೆ ಬಲ್ಲಕುಂದೆ ಮನ್ನೂರು ನಾಡಿನ ರಾಜಧಾನಿಯಾಗಿದ್ದ ಕುರುಗೋಡಿನ ಆಡಳಿತ ಕಾಲದಲ್ಲಿ ಎಮ್ಮಿಗನೂರು ಸುತ್ತಮುತ್ತಲ ಇಂದಿನ ಸಣ್ಣ ಹಳ್ಳಿಗಳೇ ಅಂದಿದ್ದವು ಎಂಬುದನ್ನು ಗುರುತಿಸಲಟ್ಟಿದೆ. ಉದಾ: ದೂರವಡಿ ೭೦ ಇಂದಿನ ಹಳ್ಳಿದರೋಜಿ, ನಲ್ವಡಿ-೧೨ ಇಂದಿನ ಹಳೇ ನೆಲ್ಲೂಡಿ, ತೆಕ್ಕೆಕಲ್ಲು ಇಂದಿನ ತೆಕ್ಕಲಕೋಟೆ, ಇವುಗಳು ಅಂದು ಉಪಕೇಂದ್ರವಾಗಿದ್ದವು ಎನ್ನುವುದನ್ನು ಸಂಶೋಧಕರು ಶೋಧಿಸಿದ್ದಾರೆ. ಪಕ್ಕದ ಚಿಕ್ಕ ಗ್ರಾಮ ಓಾಯಿಯ ಅಂದು ನಲ್ವಡಿ ಉಪವಿಭಾಗಕ್ಕೆ ಸೇರಿದ ಗ್ರಾಮವಾಗಿತ್ತು ಎನ್ನುವುದಾದರೆ ಎಮ್ಮಿಗನೂರು ಅಸ್ತಿತ್ವದಲ್ಲಿ ಇಲ್ಲದಿರಬಹುದು ಎನ್ನುವುದಾಗಲೀ ಅಥವಾ ಇದ್ದರೂ ನಗಣ್ಯವಾಗಿತ್ತು ಎನ್ನುವುದಾಗಲೀ ಅಭಿಪ್ರಾಯಕ್ಕೆ ಬರಬಹುದು. ನೊಳಂಬ ಪಲ್ಲವರ ಆಡಳಿತ ಅವಧಿಯಲ್ಲಾಗಲೀ (ಕಿ.ಶ.೧೦೧೮ ರಿಂದ ೧೦೭೬) ಅಥವಾ ಅದಕ್ಕೂ ಮೊದಲು ಕುರುಗೋಡು ಸಿಂಧರ ಕಾಲದಲ್ಲಾಗಲೀ (ಕ್ರಿ.ಶ.೭೭೫ ರಿಂದ ೧೨೦೦) ಎಮ್ಮಿಗನೂರು ಇದ್ದ ಸಂಗತಿ ತಿಳಿದಿಲ್ಲವಾದರೂ ಕಂಪಲಿರಾಯನ ಅವರ(ಸ.೧೩೦೦ ರಿಂದ ೧೩೨೭) ಅಧಿಕಾರದಲ್ಲಿ ಇದ್ದಿರಬಹುದಾದ ಗ್ರಾಮ ಎನ್ನುವುದನ್ನು ಒಂದು ಪ್ರತೀತಿಯ ಪ್ರಕಾರ ಅಭಿಪ್ರಾಯ ಪಡಬಹುದು,

ಎಮ್ಮಿಗನೂರಿನಲ್ಲಿನ ಹಂಪಿಸಾವಿರ ದೇವರು 'ಶ್ರೀ ಗುರು ಮಹಾಂತರ ಮಠ'ದ ಪರಂಪರೆಯನ್ನು, ಐತಿಹ್ಯಗಳನ್ನು ಗಮನಿಸಿದಾಗ ೧೫ನೇ ಶತಮಾನದಲ್ಲಾಗಲೇ ಎಮ್ಮಿಗನೂರು ಅಸ್ತಿತ್ವದಲ್ಲಿತ್ತು ಎನ್ನುವುದು ತಿಳಿದುಬರುತ್ತದೆ. ಪೌಢದೇವರಾಯ ವಿಜಯನಗರ ಸಾಮ್ರಾಜ್ಯವನ್ನಾಳಿದ ಪ್ರಖ್ಯಾತ ದೊರೆಯ ಅವಧಿಕ್ರಿ.ಶ.೧೪೧೯ ರಿಂದ ೧೪೬ ವೀರಶೈವ ಕವಿಗಳು ಪಂಡಿತರು ರಾಜಾಶ್ರಯ ಪಡೆದಿದ್ದ ಕಾಲಘಟ್ಟ, ಲಕ್ಕಣ್ಣ ದಂಡೇಶ, ಜಕ್ಕಣಾರ್ಯ, ಚಾಮರಸ, ಕಲ್ಲು ಮಠದ ಪ್ರಭುದೇವ, ಮಹಾಲಿಂಗದೇವ ಮುಂತಾದ ಕವಿಗಳ ಸಮಕಾಲೀನರಾಗಿದ್ದವರು ಮಹಂತರ ಮಠದ ಶ್ರೀಗುರು ವಿರೂಪಾಕ್ಷ ಮಹಾಂತರು ಇವರು ಶ್ರೀ ಮಠದ ೪ನೇ ಪಟ್ಟಾಧ್ಯಕ್ಷರು ಇವರು ಎಮ್ಮಿಗನೂರು ಮಾತ್ರವಲ್ಲದೇ ಹಂಪಿಯಲ್ಲಿ ಕಾರ್ಯಕ್ಷೇತ್ರವಾಗಿಸಿಕೊಂಡು ಆಧ್ಯಾತ್ಮಿಕ ಪ್ರಸಾರ ಮಾಡಿದವರು ಇವರ ತಪ: ಪ್ರಭಾವಕ್ಕೆ ಒಳಗಾದ ಪ್ರೌಢದೇವರಾಯ ಗುರುಗಳನ್ನು ಅರಮನೆಗೆ ಕರೆದುಕೊಂಡು ಬಂದು ಪಾದ ಪೂಜೆ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದ ಎನ್ನುವುದನ್ನು ಶ್ರೀ ಮಠದ ಪರಂಪರೆಯ ಮೂಲಕ ಕಂಡುಕೊಳ್ಳುತ್ತೇವೆ. ಈ ಪೂಜ್ಯರು ೪ನೇ ಪಟ್ಟಾಧ್ಯಕ್ಷರಾಗಿದ್ದು ಇವರ ಪೂರ್ವದಲ್ಲಿ ಜನ ಪಟ್ಟಾಧ್ಯಕ್ಷರು ಎಮ್ಮಿಗನೂರು ಮಠದ ಚುಕ್ಕಾಣಿ ಹಿಡಿದಿದ್ದರಿಂದಾಗಿ ಅಂದಾಜಿನ ಪ್ರಕಾರ ೧೪ನೇ ಶತಮಾನದಲ್ಲಾಗಲೇ ಗ್ರಾಮ ಅಸ್ತಿತ್ವದಲ್ಲಿತ್ತು ಎನ್ನಬಹುದು. ಅದಕ್ಕೂ ಪೂರ್ವದಲ್ಲಿ ಗ್ರಾಮದ ಹೊರವಲಯದಲ್ಲಿರುವ ಹೊರಗೈ ಆಂಜನೇಯ ದೇವಸ್ಥಾನವಿರುವ ಪ್ರದೇಶದಲ್ಲಿ ಚಿಕ್ಕಹಳ್ಳಿ ಸಿದ್ದಾಪೂರ' ಎನ್ನುವ ಹೆಸರಿನಲ್ಲಿ ಒಂದು ಗ್ರಾಮ ಇದ್ದಿತೆಂದೂ ಕಾಲಾಂತರದಲ್ಲಿ ಗ್ರಾಮ ನಶಿಸಿದ ಬಳಿಕ ಎಮ್ಮಿಗನೂರು ಹುಟ್ಟಿಕೊಂಡಿತೆಂದು ಪ್ರತೀತಿ ಇದೆ.

  • ಧಾರ್ಮಿಕ ಹಿನ್ನೆಲೆ

ದಯವಿಲ್ಲದ ಧರ್ಮವಾವುದಯ್ಯ ಎಂಬ ಬಸವಣ್ಣನವರ ಮಾತನಂತೆ ಎಮ್ಮಿಗನೂರು ಗ್ರಾಮವು ಸರ್ವಧರ್ಮಗಳ ಸಮನ್ವಯತೆ ಸಾಧಿಸಿದೆ. ಎಲ್ಲಾ ಧರ್ಮಿಯರಿಗೆ ಸಮಾನ ಅವಕಾಶಕಲ್ಪಿಸಿದ ಗಾವು ತನ್ನ ಹೆಸರಿನ ಹಿಂದೆಯೇ ಧರ್ಮದ ನೆಲೆಯನ್ನು ಹೊಂದಿರುವುದು ವಿಶಿಷ್ಟವಾಗಿದೆ. ಗ್ರಾಮಕ್ಕೆ ಎಮ್ಮಿಗನೂರು ಎಂದು ಹೆಸರು ಬರಲು ಇಲ್ಲಿನ ದೇವತೆ 'ಶ್ರೀ ಯಂಕಮ್ಮ ದೇವಿ' ಕಾರಣ ಎನ್ನಲಾಗುತ್ತದೆ. ಶ್ರೀ ಯಂಕಮ್ಮ ದೇವಿ ಒಂದು ದೇವಿಯ ಆವತಾರದ ಸೌಮ್ಯ ಮೂರ್ತಿ ಈ ದೇವತೆಯ ಹೆಸರು 'ಶ್ರೀ ಎಮಕೇಶ್ವರ' ಎಂತಲೂ, ಆ ದೇವಿಯ ಕೃಪೆಯಿಂದ ಹುಟ್ಟುಕೊಂಡ ಊರಿಗೆ 'ಎಮ್ಮಕನೂರು' ಎಂತಲೂ ಬರುಬರುತ್ತಾ 'ಎಮ್ಮಗನೂರು' ಆಯಿತೆಂತಲೂ ಅದೇ ಹೀಗೆ 'ಎಮ್ಮಿಗನೂರು' ಆಗಿ ಕರೆಯಲ್ಪಡುತ್ತದೆ. ಎಂತಲೂ ಪ್ರತೀತಿ ಇದೆ. ಗ್ರಾಮದ ಹೆಸರು ಏಮ್ಮಿನೂರು ಆಗಿ ಬದಲಾವಣೆಗೊಂಡಂತೆ ದೇವತೆಯ ಹೆಸರನ್ನು ಸಹ ಎಮಕೇಶ್ವರಿಯ ಬದಲು ಯಂಕಮ್ಮ ಎಂದು ಬದಲಾವಣೆಗೊಂಡು ಚಾಲ್ತಿಯಲ್ಲಿರುತ್ತದೆ.

ಎಮ್ಮಿಗನೂರು ಗ್ರಾಮ ಮಹಂತ ಮಠದ ಇತಿಹಾಸ ಸಂಬಂಧ ಹೊಂದಿರುವುದರ ಜೊತೆಗೆ ಮತ್ತೊಂದು ಆಧ್ಯಾತ್ಮಿಕ ಕ್ಷೇತ್ರವಾಗಿರುವುದಕ್ಕೆ ಕಾರಣ ಮಹಾನ್ ಶಿವಯೋಗಿ 'ಶ್ರೀ ಜಡೇಸಿದ್ದರು. ತಮ್ಮಐಕ್ಯಸ್ಥಳವನ್ನಾಗಿ ಎಮ್ಮಿಗನೂರನ್ನೇ ಆಯ್ದುಕೊಂಡು ಇಲ್ಲಿಯೇ ಸಮಾಧಿಸ್ಥರಾದುದು ವಿಶೇಷ. ಬಳ್ಳಾರಿ ತಾಲೂಕಿನ ಹಂದಿಹಾಳನಲ್ಲಿ ಶ್ರೀ ಜಡೇಸಿದ್ದರು ಜನಿಸಿದ್ದು ಎಮ್ಮಿಗನೂರಿಗೊಂದು ವಿಶಿಷ್ಟ ಹೆಸರನ್ನು ತಂದು ಕೊಟ್ಟವರು ಶ್ರೀ ಜಡೇತಾತ ಎನ್ನುವ ರೂಢಿನಾಮದಿಂದ ಇಲ್ಲಿನ ಭಕ್ತರಲ್ಲಿ ಮಾತ್ರವಲ್ಲ ನಾಡಿನೆಲ್ಲಡೆಯೂ ತಮ್ಮ ಪ್ರಭಾವ ಬೀರಿದ ಶಿವಯೋಗ ಸಾಧಕರು, ಕ್ರಿ.ಶ ೧೯೦೦ರಲ್ಲಿ ಎಮ್ಮಿಗನೂರಿನಲ್ಲಿ ಲಿಂಗಾಂಗ ಸಾಮರಸ್ಯ ಹೊಂದಿದ ಶ್ರೀ ತಾತನವರು ತಮ್ಮ ಬದುಕಿನುದ್ದಕ್ಕೂ ಅಘಟಿತ ಘಟನಾವಳಿಗಳ ಮೂಲಕ ಜನರಿಗೆ ಕೋಮುಸಾಮರಸ್ಯ, ಜಾತ್ಯಾತೀತತೆ, ಕಾಯಕ ತತ್ವ, ಶಿವಯೋಗ ಸಾಧನೆ, ಹಾಗೂ ಮಾನವೀಯ ಮೌಲ್ಯಗಳ ಕುರಿತು ಸಂದೇಶ ನೀಡಿದವರು. ಅಂದು ಹಾನಗಲ್ಲಿನ ಶ್ರೀ ಕುಮಾರ ಶಿವ ಯೋಗಿಗಳಿಗೆ ಬಂದಿದ್ದ ಲಿಂಗಧಾರಣೆಯ ಸಂದೇಹ. ಆಧ್ಯಾತ್ಮ ಲಿಂಗತತ್ವ ಪ್ರತಿಪಾದನೆಯ ಸಂದೇಹ ನಿವಾರಣೆ ಮಾಡಿದ ಮಹಾನುಭವಿಗಳು ಶ್ರೀ ಜಡೆಸಿದ್ದ ಶಿವಯೋಗಿಗಳು.

ಎಮ್ಮಿಗನೂರು ಗ್ರಾಮ ಕೇವಲ ಶ್ರೀ ಜಡೇಸಿದ್ದ ಶವಯೋಗಿಗಳು, ಮಹಾಂತ ಮಠದಿಂದ ಆಧ್ಯಾತ್ಮಿಕ ಮಹತ್ವ ಪಡೆಯುವುದಲ್ಲದೇ ನಟ್ಟರೋಟ ಬಸಪ್ಪ ತಾತವರು ಕೂಡ ಗ್ರಾಮದಲ್ಲಿ ನೆಲೆಸಿ ಪವಾಡಗಳನ್ನು ಮಾಡುತ್ತಿದ್ದಾರೆ. ಸಂಚಾರಿಗಳಾದ 'ಶ್ರೀ ಶರಣ ಬಸಪ್ಪತಾತ'ನವರು ತಮ್ಮ ಇಳಿವಯಸಿನಲ್ಲಿ ಸಂಚಾರ ಮಾಡುತ್ತಾ ಎಮ್ಮಿಗನೂರು ಗ್ರಾಮಕ್ಕೆ ಬಂದು ೨೮.೧೦.೧೯ ರಂದು ಲಿಂಗೈಕ್ಯರಾದರು. ಅವರಿಗೆ ಒಂದು ಗದ್ದುಗೆಯನ್ನು ನಿರ್ಮಿಸಲಾಯಿತು. ಆದಿನಿಂದ ಶ್ರೀ ಶರಣರು 'ಶ್ರೀ ಭಜನೆ ಬಸಪ್ಪ ತಾತ' ಎನ್ನುವ ನಾಮ ಪಡೆದು ಅಲ್ಲಿಯೇ ನೆಲೆಸಿ ಎಮ್ಮಿಗನೂರು ಗ್ರಾಮವನ್ನು ಸುಕ್ಷೇತ್ರ ಗ್ರಾಮವನ್ನಾಗಿ ಮಾಡಿದರು.

  • ಸಾಂಸ್ಕೃತಿಕ ಹಿನ್ನೆಲೆ

ಎಮ್ಮಿಗನೂರು ಗ್ರಾಮವು ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಹೊಂದಿರುವುದನ್ನು ಅಲ್ಲಗಳೆಯುವಂತಿಲ್ಲ, ಗಾಯನ ವಿಶಾರದ ಶ್ರೀ ಪಂಚಾಕ್ಷರ ಗವಾಯಿಗಳೆಗೆ ಮೊದಲ ಸಂಗೀತದ ಶಿಕ್ಷಣವನ್ನು ಕಲಿಸಿದ ಶ್ರೀ ಗದಗಯ್ಯ ಗವಾಯಿಗಳು ಎಟ್ಟುಗನೂರಿನಲ್ಲಿ ಜನಿಸಿದವರೆ, ನಂತರ ಅವರ ಶಿರಾ ಕೊಪ್ಪದಲ್ಲಿ ಸೇವಾನಿರತರಾದರು ಎನ್ನಲಾಗುತ್ತಿದೆ. ಹಾಗೆಯೇ ಜಾನಪದ ಕಲೆ, ಗಂಡು ಕಲೆ ಎನಿಸಿದ ಬಯಲಾಟಕ್ಕೂ ಎಮ್ಮಿಗನೂರು ಹೆಸರುವಾಸಿ, ಪ್ರಸಿದ್ಧ ಬಯಲಾಟ ಗಿರಿಜಾಕಲ್ಯಾಣ ರಚನೆ ಮಾಡಿದ ಕವಿ ಶ್ರೀ ಸಾಲಿ ವೆಂಕೋಬರಾಯರು ಜನಿಸಿದ್ದು ಎಮ್ಮಿಗನೂರಿನಲ್ಲೇ. ನಂತರದ ದಿನಗಳಲ್ಲಿ ಕಂದಾಯಇಲಾಖೆಯಲ್ಲಿ ಉಪ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದ ಶ್ರೀ ಕರಣಂರಂಗರಾಯರು ಸಹ ಶ್ರೀ ಕೃಷ್ಣನುಸಂಧಾನ ಕೃತಿ ರಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು,

ಹಿಂದಿನ ಕಾಲದಲ್ಲಿ ಜೈಮಿನಿ ಭಾರತ, ರಾಮಾಯಣದಂತಹ ಕಾವ್ಯಗಳನ್ನು ಜನರಿಗೆ ತಲುಪುವಂತೆ ಮಾಡುತ್ತಿದ್ದ ಕುರುಬರ ಹೊಸಕೂರು ಮರೆಪ್ಪನವರು ಬಯಲಾಟ ನಿರ್ದೇಶಕರರಾಗಿದ್ದ ಮಾಸ್ತರ ಶ್ರೀ ಪಿ.ನಾರಾಯಣಯ್ಯನವರು ಪ್ರತಿನಿತ್ಯವೂ ಭಜನೆಯ ಮೂಲಕ, ಭಕ್ತಿ ಗೀತೆಗಳ ಗಾಯನದ ಮೂಲಕ ಬೆಳಗಿನ ಜಾವದಲ್ಲಿ ಜನರನ್ನು ಜಾಗೃತಗೊಳಿಸುತ್ತಿದ್ದು ಶ್ರೀ ಪಿ.ರಂಗಯ್ಯನವರು ಜೊತೆಗೆ ಯಾರು ಇರದಿದ್ದರೂ ಲಾಂದ್ರ ಹಿಡಿದುಕೊಂಡು ಶಿವಪಂಚಾಕ್ಷರಿ ಮಂತ್ರದ ಪಟಣದ ಮೂಲಕವೇ ಭಜನೆ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡುತ್ತಿದ್ದ ಶ್ರೀ ರಾಗಿಬಸಯ್ಯನವರೂ ವೀರಗಾಸೆ ಧರಿಸುತ್ತಿದ್ದ ಶ್ರೀ ಬಳಿಗಾರ ಚನ್ನವೀರಪ್ಪನವರು ಇತ್ತಿಚೆಗೆ ಭಜನೆಗಾಗಿಯೇ ತರುಣರನ್ನೇ ಸಂಘಟಿಸಿದ್ದ ಶ್ರೀ ಕೆ.ಎಂ, ಸಿದ್ದಯ್ಯನವರು ನಾಟಿ ವೈದ್ಯ ವೃತ್ತಿ ಹಾಗೂ ಜ್ಯೋತಿಷ್ಯದಲ್ಲಿ ಹೆಸರಾಗಿದ್ದು ಶ್ರೀ ಟಿ.ಎಂ. ಚಂದಯ್ಯನವರು ಹೀಗೆ ವಿಶಿಷ್ಟ ರೀತಿಯಲ್ಲಿ ಯಾವುದೇ ಪ್ರತಿಫಲ ಬಯಸದೇ ಶ್ರಮಿಸಿ ತಮ್ಮ ಕರ್ತವ್ಯ ಮಾಡಿದೆವು ಎನ್ನುತ್ತ ಆತ್ಮ ಸಂತೃಪ್ತಿ ಹೊಂದಿದ ಸಾಂಸ್ಕೃತಿಕ ಹಿರಿಯ ಜೀವಿಗಳು ಇಲ್ಲಿ ನೆಲೆಸಿದ್ದರೆನ್ನುವುದು ಹೆಮ್ಮೆಯ ವಿಷಯ.

ಈಗಲೂ ಕೂಡ ನಾವು ಕೇಳುತ್ತಿರುವ ಇಲ್ಲಿನ ಹೆಣ್ಣುಮಕ್ಕಳ ಗೌರಿ ಮಕ್ಕಳ ಹಾಡುಗಳು, ಕಾಳಿಂಗರಾಯನ ಪದಗಳು, ಜೋಕುಮಾರನ ಪದಗಳು. ಹಿಂದೆಯೂ ಬಹಳ ಸುಶ್ರಾವ್ಯವಾಗಿ ಹಾಡುತ್ತಿದ್ದುದು ಇಲ್ಲಿನ ಹಿರಿಯರು ಹೇಳುತ್ತಿರುವ ಮಾತು ಇದರೊಂದಿಗೆ ದ್ವಿಭಾಷಾ ಸಂಸ್ಕೃತಿ ಹೊಂದಿರುವ ಬಳ್ಳಾರಿಯ ಭಾಗದಲ್ಲಿರುವ ಈ ಗ್ರಾಮದಲ್ಲಿ ತೆಲುಗು ಭಾಷೆಯಲ್ಲಿರುವ ಪಂಡರಿ ಸಂಪ್ರದಾಯದ ಪಾಂಡುರಂಗ ಭಜನೆ ಒಂದು ಜನಪದ ಕಲಾಪ್ರಕಾರವಾಗಿಯೇ ಆ ದಿನಗಳಲ್ಲಿ ವಿಜೃಂಭಿಸಿತ್ತು ಮೊಹರಂನಲ್ಲಿ ಆಡಲಡುತ್ತಿದ್ದ ಸವಾಲು ಪದಗಳು ಜನರ ಆಕರ್ಷಣೆಗೆ ಒಳಗಾಗಿದ್ದವು. ಸ್ಥಳೀಯ ಹವ್ಯಾಸಿ ತಂಡಗಳಿಂದ ರಂಗಚಟುವಟಿಕೆಗಳು ಸಹ ಇಲ್ಲಿ ನಡೆದುಕೊಂಡು ಬಂದಿದೆ. ಎನ್ನಲು ಮರೆಯುವುದಿಲ್ಲ.

ಹೀಗೆ, ಎಮ್ಮಿಗನೂರು ಗ್ರಾಮವು ತನ್ನದೇ ಆದ ವಿಶಿಷ್ಟ ರೀತಿಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಇದು ಈ ಗ್ರಾಮದ ವಿಶಿಷ್ಠತೆಯನ್ನು ಎತ್ತಿ ಹಿಡಿದಿದೆ. ಹಲವಾರು ವಿಭಿನ್ನತೆಯನ್ನು ಹೊಂದಿದ ಈ ಗ್ರಾಮವು ಧರ್ಮಸಮನ್ವಯತೆಯನ್ನು ಸಾಧಿಸಿದ ಒಂದು ಸುಕ್ಷೇತ್ರವಾಗಿ ಹೆಸರು ಪಡೆದಿದೆ.

ಉಲ್ಲೇಖಗಳು

[೨]|ತುಂಗಭದ್ರೆಯ

೧. ಮಹಾಮಾರಿ ಕೊರೋನಾದ ಪರಿಣಾಮಗಳು: ಎಮ್ಮಿಗನೂರು ಗ್ರಾಮವನ್ನು ಅನುಲಕ್ಷಿಸಿ, ಬೇರ್ಗಿ ಜಯಶ್ರೀ

  1. https://karnatakatourism.org/kn/tour-item/%E0%B2%A4%E0%B3%81%E0%B2%82%E0%B2%97%E0%B2%BE-%E0%B2%AD%E0%B2%A6%E0%B3%8D%E0%B2%B0%E0%B2%BE-%E0%B2%85%E0%B2%A3%E0%B3%86%E0%B2%95%E0%B2%9F%E0%B3%8D%E0%B2%9F%E0%B3%81/
  2. ತುಂಗಭದ್ರಾ ಅಣೆಕಟ್ಟು