ಸದಸ್ಯ:1910451pranava.k.n/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ|| ಕುಸುಮಾ ಸೊರಬ (ಕುಸುಮಕ್ಕ)[ಬದಲಾಯಿಸಿ]

ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಸೇವೆಯ ಮನಸ್ಸಾಗಿ ದಾದಿಯಾದವರು. ಇನ್ನೂ ಹೆಚ್ಚಿನ ಸೇವೆ ಮಾಡಲು ವೈದ್ಯೆ, ಶಸ್ತ್ರಚಿಕಿತ್ಸಕಿ ಆಗಿ ಪದವಿ ಗಳಿಸಿದರು. ಮುಂಬೈನ ಸುಖಜೀವನ ಬಿಟ್ಟು ತಮ್ಮ ಹಳ್ಳಿಗೆ ಹಿಂತಿರುಗಿ ಬಡಜನರಿಗಾಗಿ ಉಚಿತ ಆಸ್ಪತ್ರೆ ಸ್ಥಾಪಿಸಿದರು. ಆದರೆ, ಬಡಜನರಿಗೆ ಬರೀ ರೋಗಚಿಕಿತ್ಸೆ ಮಾತ್ರವಲ್ಲ,ಬದುಕಿನ ಚಿಕಿತ್ಸೆಯೂ ಆಗಬೇಕು ಎಂದು ತೀವ್ರವಾಗಿ ಅನ್ನಿಸಿದಾಗ ಸಮಾಜಸೇವೆಗೆ ಇಳಿದರು. ಮಹಿಳಾಟಿಸಬಲೀಕರಣ, ವಿದ್ಯಾಭ್ಯಾಸ, ದಾದಿ ತರಬೇತು ಎಂದುದುಡಿದರು. ಸಾರಾಯಿ ಹಾವಳಿ ದೊಡ್ಡದಾಗಿರುವುದನ್ನು ಕಂಡು ಅದನ್ನು ನೀಗಿಸಲು ಹೆಜ್ಜೆ ಇಟ್ಟರು.ಕಾಡುಗಳ ನಡುವೆ, ನದಿಕೊಳ್ಳಗಳು, ಬೆಟ್ಟಗುಡ್ಡಗಳ ನಡುವೆ ಬೆಳೆದ ಅವರು ತಮ್ಮೂರಿನ ಪರಿಸರದ ನಾಶ ಆಗಲಿರುವುದನ್ನು ಎದುರಿಸಿ ನಿಂತರು, ಹೋರಾಡಿದರು. ಉತ್ತರ ಕನ್ನಡ ಜಿಲ್ಲೆಯ ದಿಟ್ಟ ವ್ಯಕ್ತಿ, ಡಾ|| ಕುಸುಮಾ ಸೊರಬ ಅವರ ತ್ಯಾಗಮಯ ಹೋರಾಟ ನಮ್ಮ ನಾಡು, ನಮ್ಮ ದೇಶ ಎಂದಿಗೂ ಮರೆಯಲಾಗದಂಥದು.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಭವಾನಿಶಂಕರರಿಗೆ ನಾಲ್ವರು ಮಕ್ಕಳಲ್ಲಿ ಕೊನೆಯವಳಾಗಿ ಕುಸುಮಾ ಅಕ್ಟೋಬರ್ 13, 1937ರಂದು ಜನಿಸಿದರು.ವಿದ್ಯಾಭ್ಯಾಸದಲ್ಲೂ ಮುಂದಿದ್ದ ಕುಸುಮಾಗೆ ಎಸ್ಸೆಸ್ಸಿಯಲ್ಲಿ ಇಡೀ ಕೇಂದ್ರಕ್ಕೆ ಮೊದಲ ಸ್ಥಾನ. ತಮ್ಮ ೧೫ನೇ ವರ್ಷದಲ್ಲಿ ಅವರು ಬಿಜಾಪುರದ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಕೋರ್ಸ್ ಸೇರಿದರು, ತದನಂತರ ಮುಂಬಯಿಯಲ್ಲಿ ಎಂಬಿಬಿಎಸ್ ಮತ್ತು ೧೯೭೪ರಲ್ಲಿ ಎಂ.ಎಸ್ (ಮಾಸ್ಟರ್ ಆಫ್ ಸರ್ಜನ್) ವಿದ್ಯಾಭ್ಯಾಸ ಮುಗಿಸಿದರು.

ವೃತ್ತಿ ಜೀವನ[ಬದಲಾಯಿಸಿ]

ಎಂ.ಎಸ್. ಮುಗಿದರೂ ಹಳ್ಳಿಗೆ ಹೋಗಲು ತಯಾರಿ ಪೂರ್ತಿ ಆಗಿರಲಿಲ್ಲ. ಹಣದ ವ್ಯವಸ್ಥೆಯೇ ಆಗಿರಲಿಲ್ಲ. ಅದಕ್ಕೆ ಒಂದೆರಡು ವರ್ಷಗಳು ಯಾವುದಾದರೂ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಹಣ ಗಳಿಸಿಕೊಂಡು ಮುಂದೆ ಹಳ್ಳಿಗೆ ಹೊರಡಬೇಕೆಂದು ಡಾ. ಕುಸುಮಾ ನಿರ್ಧರಿಸಿ, ಅದರಂತೆ ಶ್ರೀರಾಂಪುರ ಎಂಬಲ್ಲಿ ವೈದ್ಯೆಯಾಗಿ ಕೆಲಸಕ್ಕೆಸೇರಿಕೊಂಡು ಎರಡು ವರ್ಷಗಳ ನಂತರ ಹಳ್ಳಿಗೆ ಹೋಗಿ ಆಸ್ಪತ್ರೆ ಮಾಡಿ ಸೇವೆ ಮಾಡುವೆನೆಂದು ನಿರ್ಧರಿಸಿದರು.ಈ ಎರಡು ವರ್ಷ ಡಾ. ಕುಸುಮಾರದ್ದು ನಿಜವಾದ ತಪಸ್ಸು. ಒಂದು ಕಡೆ ತನ್ನ ಆಸ್ಪತ್ರೆ ಕಟ್ಟುವುದಕ್ಕಾಗಿ ತಯಾರಿ ಆಗಬೇಕು, ಇನ್ನೊಂದು ಕಡೆ ಈಗ ಕೆಲಸ ಮಾಡುತ್ತಿರುವ ಈ ಆಸ್ಪತ್ರೆಯಲ್ಲಿ ನಿಸ್ಪೃಹ ಸೇವೆ ಕೊಡಬೇಕು. ಬಿಳಿ ಸೀರೆಯುಟ್ಟು ವಾರ್ಡಿನೊಳಗೆ ಹೊಕ್ಕರೆಂದರೆ ಎಲ್ಲವನ್ನೂ ಮರೆತು ನೈಟಿಂಗೇಲ್ ಆಗುತ್ತಿದ್ದರು. ಎಂಥಾ ರೋಗಿಯೇ ಬರಲಿ ಮೈದಡವಿ, ಪ್ರೀತಿಯಿಂದ ಉಪಚರಿಸಿ, ಅವರ ಸೇವೆಯಲ್ಲಿ ತೊಡಗುವರು. ಶಸ್ತ್ರಚಿಕಿತ್ಸೆಯ ಜವಾಬ್ದಾರಿಯನ್ನೂ ಹೊರುವರು. ಜೊತೆಗೆ ಅಲ್ಲಿ ದಾದಿಯರ ತರಬೇತಿಯೂ ಕೂಡ ಇದ್ದುದರಿಂದ ದಾದಿ ತರಬೇತುದಾರರಾಗಿ ವಿದ್ಯಾರ್ಥಿನಿಯರಿಗೆ ನರ್ಸಿಂಗ್, ಜೊತೆಗೆ ಹಾಡು, ನಾಟಕಗಳನ್ನೂ ಕೂಡ ಕಲಿಸುವರು.

ಬಿಡುವಿನ ವೇಳೆಯೆಲ್ಲ ತಮ್ಮ ಟ್ರಸ್ಟ್‌ನ ಕೆಲಸಗಳ ತಯಾರಿ. ಕಾಗದ ಪತ್ರಗಳನ್ನು ಹೊಂದಿಸುವುದು. ನೋಂದಣಿ ಸಲುವಾಗಿ ಓಡಾಟ. ಕಡೆಗೆ ೧೯೭೪ರಲ್ಲಿ ಕುಸುಮಾರ ಕನಸಿನ ಕೂಸು ‘ಸ್ನೇಹ ಕುಂಜ’ ಉದಯವಾಯಿತು. ಶ್ರೀರಾಂಪುರದಲ್ಲಿ ಕೆಲಸ ಬಿಟ್ಟು ಹೋಗುವ ಕಾಲ ಬಂದಾಗ ಅಲ್ಲಿನವರು ಕುಸುಮಾರನ್ನು ಬಿಟ್ಟುಕೊಡಲು ತಯಾರಿಲ್ಲ. ‘ಅಷ್ಟು ದೂರ ಹೋಗಿ ಸೇವೆ ಮಾಡಬೇಕಾ? ಇಲ್ಲೇ ಇರಿ’ ಎಂದು ಒತ್ತಾಯ. ‘ಸೇವೆಗೆ ಉತ್ತರ ಕನ್ನಡವೇ ಆಗಬೇಕಾ? ಅಲ್ಲಿನ ಜನರಲ್ಲಿ ಲೆಥಾರ್ಜಿ ತುಂಬಿದೆ’  ಎಂದು ಹೀಗಳೆದರು. ‘ಲೆಥಾರ್ಜಿ ತುಂಬಿರುವಲ್ಲೇ ನಮ್ಮಂಥವರ ಅಗತ್ಯ ಇರೋದು ಹೊರತು, ಉತ್ಸಾಹಿಗಳಿರುವಲ್ಲಿ ಅಲ್ಲ’ ಎನ್ನುತ್ತ ಕುಸುಮಾ ತಮ್ಮ ಗಂಟು ಮೂಟೆ ಕಟ್ಟಿ ತಮ್ಮ ವೈದ್ಯೆ ಗೆಳತಿಯೊಂದಿಗೆ ಉತ್ತರ ಕನ್ನಡಕ್ಕೆ ಬಂದಿಳಿದರು.

ಉತ್ತರ ಕನ್ನಡದಲ್ಲೆಲ್ಲ ಸುತ್ತಾಡುತ್ತ ಹೊನ್ನಾವರ, ಕೆರವಳ್ಳಿಯ ಕಡೆಗೆ ಸಂಚರಿಸಿದಾಗ ಮಾತ್ರ ಡಾ.ಕುಸುಮಾರ ಮನಸ್ಸು ನಿರಾಳವಾಯಿತು. ಎಲ್ಲ ಹುಡುಕಾಟಗಳೂ ಪೂರ್ತಿಯಾದಂತೆನಿಸಿದವು. ತಮ್ಮ ರಂಗಭೂಮಿಕೆ ಇದೇನೇ ಎಂದು ಸ್ಪಷ್ಟವಾಯಿತು. ಆಸ್ಪತ್ರೆಗಾಗಿ ೨೦ ಎಕರೆ ಜಾಗವನ್ನು ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅರ್ಜಿ ಹಾಕಿಕೊಂಡು ಹೊನ್ನಾವರದ ಸಮೀಪ ಶರಾವತಿ ನದಿ ಕಡಲು ಸೇರುವ ಕಾಸರಕೋಡಿನಲ್ಲಿ ‘ವಿವೇಕಾನಂದ ಆರೋಗ್ಯ ಧಾಮ’ ೧೯೭೭ರಲ್ಲಿ ಜನ್ಮತಾಳಿತು. ‘ವಿವೇಕಾನಂದ ಆರೋಗ್ಯಧಾಮ’ ದಿನದಿನಕ್ಕೆ ಬೆಳೆಯುತ್ತ, ಸುತ್ತಲಿನ ಹಳ್ಳಿಗಳಲ್ಲಿ ಜನಪ್ರಿಯತೆ ಗಳಿಸುತ್ತ ಹೋಯಿತು. ಸ್ವತಃ ಇಂಗ್ಲೀಷ್ ವೈದ್ಯೆಯಾಗಿದ್ದರೂ ಕೂಡ ಡಾ. ಕುಸುಮಾ ಅವರಿಗೆ ಆಯುರ್ವೇದ, ನಿಸರ್ಗ ಚಿಕಿತ್ಸೆಗಳತ್ತ ಬಹಳ ಒಲವು. ಯೋಗಾಭ್ಯಾಸವನ್ನೂ ರೂಢಿಸಿಕೊಂಡಿದ್ದ ಅವರು ಯೋಗಚಿಕಿತ್ಸೆಯನ್ನೂ ತಮ್ಮ ಆಸ್ಪತ್ರೆಯಲ್ಲಿ ಜಾರಿಗೆ ತಂದರು. ರೋಗಿಯಾಗಿ ಬಂದವರಿಗೆ ಎಂದೂ ಬರಿಯ ಔಷಧಿ ಕೊಟ್ಟು ಕಳಿಸುವಂತಿಲ್ಲ, ಬದಲಿಗೆ ಆರೋಗ್ಯದ ಪಾಠ ಮಾಡಿಯೇ ಕಳಿಸುವುದು ಸ್ನೇಹಕುಂಜದ ಪದ್ಧತಿಯಾಯಿತು. ಶ್ರೀರಾಂಪುರದಲ್ಲಿ ದಾಯಿ (ದಾದಿ) ತರಬೇತಿಯನ್ನು ಮಾಡುತ್ತಿದ್ದ ಡಾ. ಕುಸುಮಾ ಇಲ್ಲಿಯೂ ಕೂಡ ದಾಯಿ ತರಬೇತಿಯನ್ನು ಶುರು ಮಾಡಿದರು. ಹಳ್ಳಿಮೂಲೆಯ ಅತ್ಯಂತ ಬಡ ಕುಟುಂಬದ, ಫೇಲಾದ ಹುಡುಗಿಯರಿಗೆ ಇಲ್ಲಿ ದಾದಿ ವೃತ್ತಿ ಕಲಿಯಲು ಅವಕಾಶ. ಅವರನ್ನು ಹಳ್ಳಿಯ ದಾದಿಯರನ್ನಾಗಿ ರೂಪಿಸಿ ಯಾವುದೇ ಆರೋಗ್ಯ ವ್ಯವಸ್ಥೆ ತಲಪದ ದೂರ ದೂರದ ಹಳ್ಳಿಗಳಿಗೆ ಕಳಿಸುವ ಕನಸು ಕುಸುಮಾ ಅವರದಾಗಿತ್ತು. ದಾಯಿ ತರಬೇತಿಯ ಜೊತೆಗೆ ಅಂಥಲ್ಲಿ ಕೆಲಸ ಮಾಡಲು ಬೇಕಾದ ಸೇವಾ ಮನೋಭಾವ, ಧೈರ್ಯ, ನಿಷ್ಠೆ, ಪ್ರಾಮಾಣಿಕತೆ, ಆದರ್ಶಗಳನ್ನೂ ಅವರಲ್ಲಿ ತುಂಬಿ ಕಳಿಸುತ್ತಿದ್ದರು ಅವರು.

ಎಲ್ಲ ಹಳ್ಳಿಗಳಲ್ಲಿರುವಂತೆಯೇ ಕಾಸರಕೋಡು ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಕುಡಿತ ಬಹಳ. ಬಡತನದ ಬೇಗೆ ಮರೆಯಲು, ದೈಹಿಕ ನೋವು ಮರೆಯಲು ಗಂಡಸರು ಕಂಡುಕೊಳ್ಳುವ ದಾರಿ ಕುಡಿತ. ಕೈಗೆ ದುಡಿದ ದುಡ್ಡು ಬಂತೆಂದರೆ ಎಲ್ಲವನ್ನೂ ಸಾರಾಯಿ ಅಂಗಡಿಗೆ ಸುರಿದು ಹೊಟ್ಟೆ ಬಿರಿಯುಷ್ಟು ಕುಡಿದು ರಸ್ತೆಯಲ್ಲೆಲ್ಲ ಕೂಗುತ್ತ, ಬೀಳುತ್ತ ಏಳುತ್ತ ತೂರಾಡುತ್ತಬರುವ ಗಂಡ. ದುಡಿದ ದುಡ್ಡನ್ನು ಹೆಂಡತಿ ಕೇಳಿದಾಕ್ಷಣ ಕೈಗೆ ಸಿಕ್ಕಿದ್ದು ತೆಗೆದು ಬಾರಿಸುವುದು. ಕುಡುಕ ಗಂಡನಿಂದ ಬಡಿಸಿಕೊಳ್ಳುವ ಬಡ ಮಹಿಳೆಯರ ಆಕ್ರಂದನ ರಾತ್ರಿಯನ್ನೆಲ್ಲ ತುಂಬುತ್ತಿದ್ದುದನ್ನು ಕೇಳಿ ಕೇಳಿ ಕುಸುಮಾ ಅವರಿಗೆ ರೋಸಿಹೋಗಿತ್ತು. ಹಳ್ಳಿಗಳ ಪರಿಸ್ಥಿತಿ ಅರಿವಿಗೆ ಬಂದಂತೆ ಡಾ.ಕುಸುಮಾರಿಗೆ ತಮ್ಮ ಆಸ್ಪತ್ರೆಯ ಬಗ್ಗೆಯೇ ಬೇಜಾರೆನಿಸತೊಡಗಿತು. ರೋಗ ರುಜಿನಗಳ ಮೂಲ ಪ್ರತಿ ಮನೆ ಮನೆಯಲ್ಲಿ ಇದೆ, ಪ್ರತಿ ಹಳ್ಳಿಯೊಳಗೆ ಇದೆ. ಬಡತನ, ಕುಡಿತ, ಮೂಢನಂಬಿಕೆ, ನೈರ್ಮಲ್ಯದ ಕೊರತೆ..... ಇವೆಲ್ಲ ಸಮಸ್ಯೆಗಳನ್ನು ಹಾಗೆಯೇ ಇಟ್ಟು ತಾನು ಅದರಿಂದ ಬರುವ ರೋಗಗಳಿಗೆ ಔಷಧ ಕೊಡಲು ಆಸ್ಪತ್ರೆ ಕಟ್ಟಿಸಿ ಕೂತೆನಲ್ಲ! ಜನರಿಗೆ ಮೂಲಭೂತ ಸೌಕರ್ಯಗಳೇ ಇಲ್ಲ. ಕೆಲಸ ಬೇಕು, ಸರಿಯಾದ ಕೂಲಿ ಬೇಕು, ಶುದ್ಧ ನೀರು, ಆಹಾರ ಬೇಕು, ಶಾಲೆ ಬೇಕು. ಅವೊಂದೂ ಇಲ್ಲದಲ್ಲಿ ಒಂದು ದೊಡ್ಡ ಆಸ್ಪತ್ರೆಯನ್ನು ತಂದು ನಿಲ್ಲಿಸಿದೆನಲ್ಲ! ಎಂದು ತಮ್ಮಲ್ಲೇ ಪ್ರಶ್ನೆಗಳೇಳಲು ಶುರುವಾಯ್ತು.

ಡಾ. ಕುಸುಮಾ ಸೊರಬ ಅವರ ಮನಸ್ಸಿನಲ್ಲಿ ಹೊಸ ವಿಚಾರದ ಅಲೆಗಳು ಸುಳಿಯತೊಡಗಿದವು. ಶಸ್ತ್ರಚಿಕಿತ್ಸಕಳಾಗಿ ತಾನು ಈ ಊರಿಗೆ ಬಂದೆ, ಆದರೆ ಇಲ್ಲಿ ಮನುಷ್ಯರಿಗಿಂತ ಇಡೀ ಸಮಾಜಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಜನರ ಆರೋಗ್ಯ ಸುಧಾರಿಸಲು ರೋಗವನ್ನು ಹುಟ್ಟುಹಾಕುವ ಪದ್ಧತಿಗಳನ್ನು ತೊಡೆದುಹಾಕಬೇಕು, ಮನೆಮುರುಕ ಚಟಗಳಿಂದ ಜನರನ್ನು ಮುಕ್ತರಾಗಿಸಬೇಕು. ಸದಾ ಇದೇ ಗುಂಗು, ಯಾರ ಜೊತೆ ಮಾತಾಡಿದರೂ ಇದೇ ವಿಚಾರ.

ಸಮಾಜ ಸೇವೆ ಮತ್ತು ಹೋರಾಟ[ಬದಲಾಯಿಸಿ]

ಗ್ರಾಮವಿಕಾಸ

ಯಾರು ಏನೇ ಹೇಳಿದರೂ ಡಾ. ಕುಸುಮಾರ ಮನಸ್ಸಿಗೆ ಆಸ್ಪತ್ರೆಯ ಕೆಲಸಕ್ಕಿಂತ ಸಮಾಜದ ಕೆಲಸವೇ ಮುಖ್ಯ ಎನ್ನುವುದು ಹೆಚ್ಚೆಚ್ಚು ನಿಚ್ಚಳವಾಗತೊಡಗಿತು. ಕಡೆಗೆ ತಮ್ಮ ಟ್ರಸ್ಟಿನ ಸಭೆಯಲ್ಲೂ ಈ ವಿಚಾರವನ್ನಿಟ್ಟು ಎಲ್ಲರನ್ನು ಒಪ್ಪಿಸಿ ‘ಗ್ರಾಮವಿಕಾಸ’ ಯೋಜನೆಯೊಂದಕ್ಕೆ ಚಾಲನೆ ಕೊಟ್ಟೇಬಿಟ್ಟರು. ಒಂದು ದೊಡ್ಡ ಆಸ್ಪತ್ರೆಯಷ್ಟೇ ಮಹತ್ತ್ವ ಹಳ್ಳಿ ಹಳ್ಳಿಯಲ್ಲಿ ಆರೋಗ್ಯ ಕೇಂದ್ರಕ್ಕಿರಬೇಕು ಎಂದು ತಿಳಿದು ತಮ್ಮ ಕೆರವಳ್ಳಿಯ ಮನೆಯನ್ನು ಸ್ನೇಹಕುಂಜಕ್ಕೆ ದಾನ ಬರೆದು ಕೊಟ್ಟು ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದರು. ಎಂ.ಎಸ್. ಮಾಡಿದ ವೈದ್ಯೆ ತಮ್ಮ ಆಸ್ಪತ್ರೆಯನ್ನು ಬಿಟ್ಟು ಹಳ್ಳಿ ಹಳ್ಳಿಗೆ ತಿರುಗಿ ಜನರೊಂದಿಗೆ ಕುಳಿತು ಸಂಪರ್ಕ ಮಾಡಲಾರಂಭಿಸಿದರು. ಬಲು ಬೇಗ ಡಾ.ಕುಸುಮಾ ಹೋಗಿ ಹಳ್ಳಿಗರ ಬಾಯಲ್ಲಿ ಕುಸುಮಕ್ಕ ಆದರು. ಸಂಸ್ಥೆಯ ವತಿಯಿಂದ ಊರಲ್ಲಿ ಏನಾದರೂ ಕಾರ್ಯಕ್ರಮ ಮಾಡೋಣ ಎಂದು ಹಳ್ಳಿಗರಿಂದ ಬೇಡಿಕೆ. ಕಾರ್ಯಕ್ರಮಗಳನ್ನು ಹಾಕಬೇಕೆಂದರೆ ನಿಮ್ಮ ಚಟಗಳನ್ನು ಬಿಡಿ ಎಂದು ಜನಕ್ಕೆ ಕುಸುಮಕ್ಕ ಅವರ ಪ್ರತಿ ಸವಾಲು. ರಾತ್ರಿ ಶಾಲೆಯನ್ನು ಆರಂಭಿಸಿ ಹಗಲು ಹೊತ್ತು ಕೂಲಿಗೆ ಹೋಗುವ ಮಂದಿಗೆ ಅಕ್ಷರಾಭ್ಯಾಸ ಶುರುವಾಯಿತು. ಜೊತೆಗೆ ಹಾಡು, ಕೋಲಾಟ, ಯಕ್ಷಗಾನಗಳ ಪ್ರಾಕ್ಟೀಸು. ಉತ್ತರ ಕನ್ನಡದಲ್ಲಿ ಆಗ ದಟ್ಟ ಕಾಡು ಇತ್ತು. ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗುವಾಗ ಐದಾರು ಕಿಲೋ ಮೀಟರ್‌ಗಳ ಈ ದಟ್ಟ ಕಾಡನ್ನು ದಾಟಿಯೇ ಹೋಗಬೇಕು. ಆ ಹಳ್ಳಿಗಳಲ್ಲಿ ಜನರು ನೂರಕ್ಕೆ ನೂರು ಅನಕ್ಷರಸ್ಥರು. ನೂರಕ್ಕೆ ೯೦ ರಷ್ಟು  ಜನರು ದುರ್ವ್ಯಸನಿಗಳು. ಮಾತಾಡುವ ಭಾಷೆ ಮರಾಠಿ.

ಇಂಥ ಕಾಡುಹಳ್ಳಿಗೆ ಹೆಣ್ಣುಮಕ್ಕಳನ್ನು ಒಂಟೊಂಟಿಯಾಗಿ ಹೋಗಲು ಕುಸುಮಕ್ಕ ತಯಾರು ಮಾಡುತ್ತಿದ್ದರು. ನಾಗರಿಕ ಸೌಲಭ್ಯಗಳು ಒಂದೂ ಇಲ್ಲವಾದ ಕಾಡಿನ ದುರ್ಗಮ ಮಾರ್ಗದಲ್ಲಿ, ಕುಡಿತದ ಚಟ ಇರುವಂಥ ಜನರೇ ಹೆಚ್ಚಾಗಿ ತುಂಬಿರುವ ಹಳ್ಳಿಗಳಿಗೆ ರಾತ್ರಿ ಶಾಲೆಗಳನ್ನು ಮಾಡಲು ಹುಡುಗಿಯರು ಒಬ್ಬೊಬ್ಬರೇ ಹೋಗಬೇಕು. ಕುಸುಮಕ್ಕ ಪ್ರತಿ ದಿನವೂ ಪ್ರತಿ ಸಂಜೆ ಹೆಣ್ಣುಮಕ್ಕಳನ್ನು ಕಳಿಸುತ್ತಿದ್ದರು. ಹಾಗೆಂದು ತಯಾರಿ ಇಲ್ಲದೆ ಕಳಿಸಿ ಶಿಕ್ಷಿಸುತ್ತಿದ್ದರೆಂದಲ್ಲ. ನಿತ್ಯ ಪ್ರಾರ್ಥನೆ, ಯೋಗಾಭ್ಯಾಸ, ಶಿಸ್ತು, ಸಂಯಮಗಳ ತರಬೇತಿ ನೀಡಿ ತಯಾರು ಮಾಡಿ ಕಳಿಸುತ್ತಿದ್ದರು. ಹಾಗಾಗಿಯೇ ಸ್ನೇಹಕುಂಜದಲ್ಲಿ ತಯಾರಾದ ಹುಡುಗಿಯರು ಕುಡುಕರ ಮಧ್ಯೆಯೂ ರಾತ್ರಿಶಾಲೆ ನಡೆಸುವ ಎದೆಗಾರಿಕೆ ತೋರಿಸಿದರು.

‘ಗ್ರಾಮವಿಕಾಸ’ ಯೋಜನೆಗೆ ಪ್ರತಿ ದಿನವೂ ಹೊಸದೊಂದು ಸವಾಲು ಎದುರಾಗಿರುತ್ತಿತ್ತು. ಕೆರವಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ಹಾಲಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ಜನರು ಮಾತಾಡಿಕೊಳ್ಳುತ್ತಿದ್ದರು. ಊರ ಮುಂದೆಯೇ ಶರಾವತಿ ಹರಿಯುತ್ತಿದ್ದರೂ ಅಲ್ಲಿ ಕುಡಿಯುವ ನೀರಿಗೆ ತೊಂದರೆ ಇತ್ತು. ಮಳೆಗಾಲದಲ್ಲಿ ಮಳೆ ಭೋರೆಂದು ಸುರಿದರೂ ಬೇಸಿಗೆಯಲ್ಲಿ ಎರಡನೆ ಬೆಳೆ ತೆಗೆಯಲು ನೀರಿರುತ್ತಿರಲಿಲ್ಲ. ನೀರಿನ ವ್ಯವಸ್ಥೆ ಬೇಕು, ಹಾಲಿನ ಡೈರಿ ಬೇಕು, ಇವೆಲ್ಲವೂ ಆಗಬೇಕೆಂದರೆ ಹಣಕಾಸಿನ ವ್ಯವಸ್ಥೆ ಆಗಬೇಕು. ಜನರಿಗೆ ನಿರ್ವಹಿಸಿಕೊಂಡು ಹೋಗಲಿಕ್ಕೆ ತರಬೇತಿ ಆಗಬೇಕು. ಜನರಲ್ಲಿ ಉತ್ಸಾಹವಿತ್ತು. ಕುಸುಮಕ್ಕ ಈ ಜನರನ್ನು ಒಂದುಗೂಡಿಸಿ ಬೇರೆಬೇರೆ ಕಡೆ ಕರೆದೊಯ್ದು, ಬೇರೆ ಕಡೆ ಮಾಡಿದ್ದ ಪ್ರಯತ್ನಗಳನ್ನೂ ಪ್ರಯೋಗಗಳನ್ನೂ ತೋರಿಸಿಕೊಂಡು ಬಂದರು. ಸಹಕಾರ ತತ್ತ್ವದ ತರಬೇತಿಗಳನ್ನು ನಡೆಸಿದರು. ಫಲವಾಗಿ ಕೆರವಳ್ಳಿಯ ಊರ ಜನರೆಲ್ಲ ಕಲೆತು ತಮ್ಮ ಊರಿಗೆ ಏನು ಬೇಕು, ಅದಕ್ಕಾಗಿ ತಾವು ಏನು ಮಾಡಬೇಕು ಎಂಬುದನ್ನೆಲ್ಲ ಒಟ್ಟಾಗಿ ಚಿಂತಿಸಲು ಕಲಿತರು. ಜನರೇ ಅಭಿವೃದ್ಧಿಪಡಿಸಿದ ‘ಕಲ್ಪತರು ನೀರಾವರಿ ಅಭಿವೃದ್ಧಿ ಸಹಕಾರಿ ಸಂಘ’ದಿಂದಾಗಿ ಊರಲ್ಲಿ ಎರಡು ಬೆಳೆ ತೆಗೆಯುವ, ಜನಕ್ಕೆ ವರ್ಷವೆಲ್ಲ ಕೆಲಸ ಕೊಡುವ ಕೃಷಿ ಬೆಳೆದು ನಿಂತಿತು.


ಸಾರಾಯಿ ಹೋರಾಟ

ಉತ್ತರ ಕನ್ನಡದ ಕರ್ಕಿಯ ಹತ್ತಿರದ ಹಳದೀಪುರ, ಸಾಲಿಕೇರಿ, ಅಗ್ರಹಾರ, ಅಪ್ಪೆಕೇರಿ ಎಂಬ ಹತ್ತಾರು ಹಳ್ಳಿಗಳಲ್ಲಿ ಹಾಲಕ್ಕಿ ಜನಾಂಗದ ಒಕ್ಕಲಿಗರು ಹೆಚ್ಚಾಗಿ ಇದ್ದಾರೆ. ಒಂದೆರಡೆಕರೆ ಗದ್ದೆಯಲ್ಲಿ ಒಂದು ಬೆಳೆ ಬಿಟ್ಟರೆ ಇನ್ನಾವ ಜೀವನಾಧಾರವೂ ಇಲ್ಲ. ಹರಿದು ತಿನ್ನುವ ಬಡತನ. ಬಡತನವಿದ್ದಲ್ಲೆಲ್ಲ ಶೆರೆ ಮಹಾರಾಜನ ರಾಜ್ಯ. ಎಲ್ಲಾ ಗಂಡಸರೂ ಕುಡುಕರೇ ಒಮ್ಮೆ ಯುಗಾದಿ ಹಬ್ಬದ ದಿನ ತಾಯಿಯನ್ನು ಅವಳ ಮಗನೇ ಕುಡಿದ ಅಮಲಿನಲ್ಲಿ ಹಾಕಿ ಬಡಿದಾಗ ಆಕೆಯ ತಾಳ್ಮೆ ನುಚ್ಚು ನೂರಾಯ್ತು. ಕೂಡಲೇ ಸಿಡಿದು ನಿಂತ ಆಕೆ ತಮ್ಮೂರಿನ ಮಹಿಳೆಯರನ್ನೆಲ್ಲ ಒಂದು ಗೂಡಿಸಿಕೊಂಡು ಗ್ರಾಮಪಂಚಾಯತಿ ಸದಸ್ಯೆಯೊಬ್ಬಳೊಂದಿಗೆ ಸಾರಾಯಿ ವಿರುದ್ಧ ಆಂದೋಲನವನ್ನು ಶುರು ಮಾಡಿಯೇಬಿಟ್ಟರು.

ಹೋರಾಟದ ನೇತೃತ್ವವನ್ನು ವಹಿಸಲು ಕುಸುಮಕ್ಕ ಅವರಿಗೆ ಕರೆ ಬಂತು. ಹೆಣ್ಣುಮಕ್ಕಳು ಈ ಸಾರಾಯಿಯಿಂದ ಅನುಭವಿಸುತ್ತಿರುವ ಅವಹೇಳನ, ನೋವನ್ನೆಲ್ಲ ಪ್ರತ್ಯಕ್ಷ ನೋಡುತ್ತಿದ್ದ ಕುಸುಮಕ್ಕ ತಕ್ಷಣವೇ ಹೋರಾಟಕ್ಕೆ ಧುಮುಕಿದರು. ಸರಿಯಾದ ಪದ್ಧತಿಯಲ್ಲಿ ಹೋರಾಟ ಮಾಡಲು ಹೆಣ್ಣುಮಕ್ಕಳಿಗೆ ತರಬೇತಿ ನೀಡುವುದರೊಂದಿಗೆ ಆರಂಭಿಸಿ ಕಡೆಗೆ ಗುತ್ತಿಗೆದಾರರ ಕಛೇರಿಯ ಮುಂದೆಯೇ ಧರಣಿ ಕುಳಿತುಕೊಳ್ಳುವಲ್ಲಿಗೆ ಹೋಯಿತು. ತಮ್ಮ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದ್ದಾರೆಂದು

ಅಬಕಾರಿ ಗುತ್ತಿಗೆದಾರರು ಕುಸುಮಕ್ಕನ ವಿರುದ್ದ ದೂರು ಕೊಟ್ಟಾಗ ಪೊಲೀಸರು ವಿಚಾರಣೆ ಮಾಡದೆ ಕುಸುಮಕ್ಕ ಮತ್ತು ಸಂಗಡಿಗರನ್ನು ಹಿಡಿದು ಜೈಲಿಗೆ ಹಾಕಿಬಿಟ್ಟರು. ೧೯ ದಿನಗಳ ಕಾಲ ಜೈಲಲ್ಲಿ ಇರಬೇಕಾಯ್ತು ಕುಸುಮಕ್ಕ. ಆಗ ಅದನ್ನು ವಿರೋಧಿಸಿ ಹಲವರು ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಆಮರಣ ಉಪವಾಸ ಕುಳಿತಿದ್ದರು.

ಹೀಗೆ ಪ್ರಾರಂಭಗೊಂಡ ಅವರ ಚಳವಳಿ ಜೀವನ ಮುಂದೆ ಉತ್ತರ ಕನ್ನಡದ ಪರಿಸರ ಸಂರಕ್ಷಣೆಯ ವಿವಿಧ ಹೋರಾಟಗಳಲ್ಲಿ ನೇತೃತ್ವ ವಹಿಸುವಂತೆ ಅವರನ್ನು ಪ್ರೆರೇಪಿಸಿತು. ಅವುಗಳಲ್ಲಿ ಪಶ್ಚಿಮ ಘಟ್ಟ ಉಳಿಸಿ ಆಂದೋಲನ, ಕೈಗಾ ಮುಂತಾದವು ಪ್ರಮುಖವಾದವು.

ಮರಣ[ಬದಲಾಯಿಸಿ]

೧೯೯೮ರ ಮಾರ್ಚ್ ೧೪ರ ರಾತ್ರಿ ರಸ್ತೆ ಅಪಘಾತದಲ್ಲಿ ತೀರಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಹೋರಾಟಗಳ ಅಧ್ಯಾಯಕ್ಕೊಂದು ಅಪೂರ್ಣ ವಿರಾಮ ಬಿತ್ತು.

ಉಲ್ಲೇಖಗಳು[ಬದಲಾಯಿಸಿ]

<r>https://snehakunja.org/history.php</r>

<r>https://sg.inflibnet.ac.in/bitstream/10603/96083/13/13_chapter%204.pdf</r>

<r>https://www.facebook.com/kannadasampada/photos/a.1015784915150497.1073741877.101548536574144/1222191957843124/?type=3</r>