ಸದಸ್ಯರ ಚರ್ಚೆಪುಟ:AMULYA M GOWDA/sandbox
ಯುನಿಕೋಡ್ -ಮಿಥ್ಯೆ ಮತ್ತು ವಾಸ್ತವ – ಡಾ. ಯು. ಬಿ. ಪವನಜ “ಕನ್ನಡ ಯುನಿಕೋಡ್ ಸರಿಯಿಲ್ಲ. ಆದುದರಿಂದ ಸದ್ಯಕ್ಕೆ ಅದನ್ನು ಕನ್ನಡ ಭಾಷೆಗೆ ಬಳಸಲು ಸಾಧ್ಯವಿಲ್ಲ” ಎಂಬುದಾಗಿ ಕೆಲವು ಮಂದಿ ಹೇಳುತ್ತ ತಿರುಗಾಡುತ್ತಿದ್ದಾರೆ. ಇಂತಹ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು ಈ ಲೇಖನದ ಉದ್ದೇಶ. ಯುನಿಕೋಡ್ ಅನ್ನುವುದು ಕನ್ನಡ ಗಣಕೀಕರಣದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಮಾಂತ್ರಿಕ ದಂಡವಲ್ಲ. ಯುನಿಕೋಡ್ ಎನ್ನುವುದು ಒಂದು ಜಾಗತಿಕ ಶಿಷ್ಟತೆ. ಅದು ನಿಂತ ನೀರಲ್ಲ. ಆಗಾಗ ಯುನಿಕೋಡ್‌ನಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಯುನಿಕೋಡ್ ಕನ್ಸೋರ್ಶಿಯಂನಲ್ಲಿ ಭಾರತ ಸರಕಾರವೂ ಸದಸ್ಯ. ನಮ್ಮ ಭಾಷೆ ಹೀಗೆಯೇ ಇರಬೇಕು ಎಂದು ಯುನಿಕೋಡ್ ಕನ್ಸೋರ್ಶಿಯಂಗೆ ಯಾರು ಬೇಕಾದರೂ ಪತ್ರ ಬರೆಯಬಹುದು. ಅವರ ಚರ್ಚಾ ವೇದಿಕೆಗಳಲ್ಲಿ ಭಾಗವಹಿಸಬಹುದು. ಯುನಿಕೋಡ್ ಬಗ್ಗೆ ಕೆಲವರಲ್ಲಿ ಇರುವ ತಪ್ಪು ಅಭಿಪ್ರಾಯಗಳನ್ನು ಮತ್ತು ನಿಜ ಸಂಗತಿ ಏನು ಎನ್ನುವುದನ್ನು ತಿಳಿದುಕೊಳ್ಳೋಣ. “ಯುನಿಕೋಡ್‌ನಲ್ಲಿ ಕನ್ನಡದ ಅಕ್ಷರಗಳು ಸರಿಯಾಗಿ ಮೂಡಿ ಬರುವುದಿಲ್ಲ. ಮೂರು ಎಂದು ಬೆರಳಚ್ಚು ಮಾಡಿದರೆ ಮಾರು ಎಂದು ಮೂಡಿಬರುತ್ತದೆ”. ಇದು ಮೈಕ್ರೋಸಾಫ್ಟ್‌ನವರು ಆರಂಭದಲ್ಲಿ ನೀಡಿದ್ದ ತುಂಗ ಹೆಸರಿನ ಫಾಂಟ್ನಲ್ಲಿದ್ದ ಸಮಸ್ಯೆ. ಮೈಕ್ರೋಸಾಫ್ಟ್‌ನವರು ೨೦೦೧ರಲ್ಲಿ ತಮ್ಮ ವಿಂಡೋಸ್ ಎಕ್ಸ್ಪಿ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ (ಆಪರೇಟಿಂಗ್ ಸಿಸ್ಟಮ್) ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಿದರು. ಆಗ ಕನ್ನಡ ಲಿಪಿಗೆ ತುಂಗ ಹೆಸರಿನ ಫಾಂಟ್ ನೀಡಿದ್ದರು. ಅದರಲ್ಲಿ ಈ ಸಮಸ್ಯೆ ಇತ್ತು. ೨೦೦೩ರಲ್ಲಿ ವಿಂಡೋಸ್ ೨೦೦೩ ಬಿಡುಗಡೆಯಾದಾಗ ತುಂಗ ಫಾಂಟಿನ ಸಮಸ್ಯೆಯನ್ನು ಸರಿಪಡಿಸಿ ಸುಧಾರಿತ ಫಾಂಟ್ ಹೊರತಂದರು. ಆದುದರಿಂದ ಇದು ಯುನಿಕೋಡ್ ಸಮಸ್ಯೆಯಲ್ಲ. ಮೈಕ್ರೋಸಾಫ್ಟ್ ಕಂಪೆನಿಯವರ ತುಂಗ ಫಾಂಟಿನ ಸಮಸ್ಯೆ. ಗಣಕದಲ್ಲಿ ಶೇಖರಿಸಲ್ಪಟ್ಟ ಮಾಹಿತಿಯನ್ನು ಪರದೆಯ (ಮೋನಿಟರ್) ಮೇಲೆ ಮೂಡಿಸಲು ಈ ಅಕ್ಷರಶೈಲಿ ಅರ್ಥಾತ್ ಫಾಂಟ್ ಬೇಕು. ಯುನಿಕೋಡ್ ಮೂಲಕ ದಾಖಲಿಸಿದ ಮಾಹಿತಿಯನ್ನು ತೋರಿಸಲು ಓಪನ್‌ಟೈಪ್ ವಿಧಾನದ ಅಕ್ಷರಶೈಲಿ ಬೇಕು. ತುಂಗ ಎನ್ನುವುದು ಮೈಕ್ರೋಸಾಫ್ಟ್ನವರು ನೀಡಿದ ಕನ್ನಡ ಭಾಷೆಯ ಓಪನ್‌ಟೈಪ್ ಫಾಂಟ್. ಅಂತರಜಾಲದಲ್ಲಿ ಇನ್ನೂ ಹಲವು ಓಪನ್‌ಟೈಪ್ ಫಾಂಟ್‌ಗಳು ಲಭ್ಯವಿವೆ. ನೀವು ಯಾವುದನ್ನು ಬೇಕಾದರೂ ಬಳಸಬಹುದು. “ಯುನಿಕೋಡ್‌ನಲ್ಲಿ ರ್ಯಾಂಕ್ ಎಂದು ಮೂಡಿಬರುತ್ತದೆ”. ಭಾರತೀಯ ಭಾಷೆಗಳನ್ನು ಯುನಿಕೋಡ್ನಲ್ಲಿ ಅಳವಡಿಸುವಾಗ ದೇವನಾಗರಿ ಲಿಪಿಯನ್ನು ಆಧಾರವಾಗಿಟ್ಟುಕೊಂಡು ಇತರೆ ಭಾಷೆಗಳಿಗೆ ಸೂತ್ರ ನಿರ್ಮಿಸಿದರು. ಅದರ ಪ್ರಕಾರ <ರ> + <ವ್ಯಂಜನ> ಬಂದಾಗ <ವ್ಯಂಜನ> <ಅರ್ಕಾವತ್ತು> ಬರತಕ್ಕದ್ದು. ಇದಕ್ಕೆ ಅಪವಾದವೆಂದರೆ <ವ್ಯಂಜನ> ವು <ರ> ಆಗಿದ್ದಾಗ <ರ> <ರ ಒತ್ತು> ಬರತಕ್ಕದ್ದು. ಅಂದರೆ <ರ> + <ಕ> = ರ್ಕ ಮತ್ತು <ರ> + <ರ> = ರ್ರ. ಆದರೆ ಇಲ್ಲಿ ಅವರು ಒಂದು ಸಣ್ಣ ಅಂಶಕ್ಕೆ ಗಮನ ಕೊಡಲಿಲ್ಲ. ಅದೆಂದರೆ ಒಂದು ಪದದ ಪ್ರಾರಂಭದಲ್ಲಿಯೇ ಈ <ರ> ಬಂದರೆ ಎರಡನೆ ಸೂತ್ರ (<ರ> ಕ್ಕೆ <ರ ಒತ್ತು>) ಬರತಕ್ಕದ್ದು ಎಂದು. ಈ ಸಮಸ್ಯೆಗೆ ಪರಿಹಾರವನ್ನು ಯುನಿಕೋಡ್‌ನವರು ತಮ್ಮ PR-37 ರಲ್ಲಿ ಸೂಚಿಸಿದ್ದಾರೆ. ಆಸಕ್ತರು ಯುನಿಕೋಡ್ ತಾಣದಲ್ಲಿ ಪೂರ್ತಿ ವಿವರ ನೋಡಬಹುದು. ಮೈಕ್ರೋಸಾಫ್ಟ್ನವರು ತಮ್ಮ ಮುಂಬರುವ ವಿಂಡೋಸ್ ವಿಸ್ಟದಲ್ಲಿ ಇದನ್ನು ಅಳವಡಿಸಿದ್ದಾರೆ. “ಯುನಿಕೋಡ್‌ನಲ್ಲಿ ಅರ್ಕಾವೊತ್ತೇ ಬರುತ್ತದೆ. ಉದಾಹರಣೆಗೆ ತರ್ಕ ಎಂದೇ ಆಗುತ್ತದೆ. ರ ಕ್ಕೆ ಕ ಒತ್ತು ಬರುವುದೇ ಇಲ್ಲ”. ಇದೂ ಕೂಡ ಮೇಲೆ ತಿಳಿಸಿದ ಸಮಸ್ಯೆಯೇ. ಪರಿಹಾರವೂ ಮೇಲೆ ತಿಳಿಸಿದ PR-37 ರಲ್ಲಿ ಇದೆ. ಮೈಕ್ರೋಸಾಫ್ಟ್‌ನವರ ಮುಂಬರುವ ವಿಂಡೋಸ್ ವಿಸ್ಟದಲ್ಲಿ ಇದನ್ನು ಅಳವಡಿಸಲಾಗಿದೆ. “ಯುನಿಕೋಡ್‌ನಲ್ಲಿ ಕನ್ನಡದ ಅಕಾರಾದಿ ವಿಂಗಡಣೆ ಸರಿಯಿಲ್ಲ. ‘ಯ, ರ, ಲ, ಳ, ವ, ಶ, ಷ, ಸ, ಹ’ ಎಂದೇ ಇದೆ”. ಇದು ಯುನಿಕೋಡ್‌ನ ಆವೃತ್ತಿ ೩ ರಲ್ಲಿ ಇದ್ದ ಸಮಸ್ಯೆ. ಯುನಿಕೋಡ್‌ನ ಆವೃತ್ತಿ ೪ ರಲ್ಲಿ ಕನ್ನಡದ ಅಕಾರಾದಿ ವಿಂಗಡಣೆಯನ್ನು ಸರಿಪಡಿಸಲಾಗಿದೆ. ಈಗ ಅದು ‘ಯ, ರ, ಱ, ಲ, ವ, ಶ, ಷ, ಸ, ಹ, ಳ, ೞ’ ಎಂದೇ ಇದೆ. ಮೈಕ್ರೋಸಾಫ್ಟ್‌ನವರ ಎಲ್ಲ ತಂತ್ರಾಂಶಗಳಲ್ಲಿ ಕನ್ನಡದ ಅಕಾರಾದಿ ವಿಂಗಡಣೆ ಈ ಸೂತ್ರವನ್ನು ಅಳವಡಿಸಿಕೊಂಡು ಸರಿಯಾಗಿದೆ. ಆದುದರಿಂದ ಯುನಿಕೋಡ್ ಬಳಸಿ ಕನ್ನಡದ ದತ್ತಸಂಚಯ (ಡಾಟಾಬೇಸ್) ತಯಾರಿಸಲು ಯಾವ ತೊಂದರೆಯೂ ಇಲ್ಲ. “ಯುನಿಕೋಟ್‌ನಲ್ಲಿ ‘ನುಡಿ’ ಕೀಬೋರ್ಡ್ ಇಲ್ಲ”. ಯುನಿಕೋಡ್‌ಗೂ ಕೀಲಿಮಣೆಗೂ ಯಾವ ಸಂಬಂಧವೂ ಇಲ್ಲ. ಯುನಿಕೋಡ್ ಎನ್ನುವುದು ಅಕ್ಷರಗಳ ಶೇಖರಣೆ ಮತ್ತು ಅಕಾರಾದಿ ವಿಂಗಡಣೆಗೆ ಇರುವ ಶಿಷ್ಟ ಸೂತ್ರಗಳು. ಕೀಲಿಮಣೆಯು ಕಾರ್ಯಾಚರಣೆಯ ವ್ಯವಸ್ಥೆಗೆ ಸಂಬಂಧಿಸಿದ್ದು. ಬಹುಜನರು ಬಳಸುವ ಮೈಕ್ರೋಸಾಫ್ಟ್ ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಕೇಂದ್ರ ಸರಕಾರದವರು ನಿಗದಿಪಡಿಸಿರುವ ಇನ್‌ಸ್ಕ್ರಿಪ್ಟ್ ಕೀಲಿಮಣೆ ವಿನ್ಯಾಸವನ್ನು ನೀಡಲಾಗಿದೆ. ಮೈಕ್ರೋಸಾಫ್ಟ್‌ನವರದೇ ಆದ www.bhashaindia.com ತಾಣದಿಂದ ಹೆಚ್ಚಿನ ಕೀಲಿಮಣೆ ವಿನ್ಯಾಸಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಕರ್ನಾಟಕ ಸರಕಾರವು ನಿಗದಿಪಡಿಸಿರುವ ವಿನ್ಯಾಸವೂ (ನುಡಿ) ಇದೆ. ಲಿನಕ್ಸ್‌ನಲ್ಲೂ ಈ ವಿನ್ಯಾಸಗಳು ಲಭ್ಯವಿವೆ. ಮೇಲೆ ತಿಳಿಸಿದ ಎಲ್ಲ ಸಮಸ್ಯೆಗಳನ್ನು ಲಿನಕ್ಸ್‌ನವರು ಈಗಾಗಲೇ ಪರಿಹರಿಸಿಕೊಂಡಿದ್ದಾರೆ. ಸಾರಾಂಶ ರೂಪದಲ್ಲಿ ಹೇಳುವುದಾದರೆ ಈ ರೀತಿ ಸುಳ್ಳು ವದಂತಿಗಳನ್ನು ಹಬ್ಬಿಸುವವರಿಗೆ ಮೈಕ್ರೋಸಾಫ್ಟ್ ಮತ್ತು ಯುನಿಕೋಡ್‌ಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಯುನಿಕೋಡ್ ಅನ್ನುವುದು ಒಂದು ಶಿಷ್ಟತೆ. ಮೈಕ್ರೋಸಾಫ್ಟ್ ಯುನಿಕೋಡ್‌ನ್ನು ಅಳವಡಿಸಿಕೊಳ್ಳುವ ಒಂದು ಕಂಪೆನಿ. ಕೆಲವರಿಗೆ ವ್ಯತ್ಯಾಸ ಗೊತ್ತಿದ್ದರೂ ಗೊತ್ತಿಲ್ಲದವರಂತೆ ನಟಿಸಿ ಸುಳ್ಳು ಹಬ್ಬಿಸುತ್ತಲೇ ಇದ್ದಾರೆ. ಇಂತಹವರನ್ನು ರಿಪೇರಿ ಮಾಡುವುದು ಕಷ್ಟ. ನಿದ್ರಿಸುವವರನ್ನು ಎಚ್ಚರಿಸಬಹುದು. ನಿದ್ರಿಸಿದಂತೆ ನಟಿಸುವವರನ್ನು ಎಚ್ಚರಿಸಲು ಅಸಾಧ್ಯ.
Start a discussion about ಸದಸ್ಯ:AMULYA M GOWDA/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:AMULYA M GOWDA/sandbox.