ಶ್ರೀ ದೇವಿ ಮಹಾತ್ಮೆ (ಯಕ್ಷಗಾನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ದೇವಿ ಮಹಾತ್ಮೆ ಆಖ್ಯಾನವು ಯಕ್ಷಗಾನ ದಲ್ಲಿ ಪೂಜೆ ಮತ್ತು ಸೇವೆಯ ರೂಪದಲ್ಲಿ ಪ್ರದರ್ಶನವಾಗುವ ಆದಿಶಕ್ತಿಯ ಮಹಿಮೆ ಮತ್ತು ಲೀಲೆಗಳ ಕುರಿತಾದ ಕಥಾನಕವಾಗಿದೆ. ಈ ಪ್ರಸಂಗವು ಇಡೀ ರಾತ್ರಿಯ ಪ್ರದರ್ಶನ ಹೊಂದಿದ್ದು ದೇವಿಯು ಚಂಡ ಮುಂಡ, ಶುಂಭ ನಿಶುಂಭ ಹಾಗೂ ಮಹಿಷಾಸುರ ಮೊದಲಾದ ರಕ್ಕಸರನ್ನು ವಧಿಸುತ್ತಾಳೆ. ಯಕ್ಷಗಾನ ತಿರುಗಾಟದಲ್ಲಿ ದೇವಿ ಮಹಾತ್ಮೆ ಪ್ರಸಂಗವು ಪ್ರತಿ ವರುಷವೂ ಸುಮಾರು ೮೦೦ ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತದೆ. ೨೦೨೦ರ ವರೆಗೆ ೩೫ ೦೦೦ ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ಪ್ರಥಮ ಪ್ರದರ್ಶನ[ಬದಲಾಯಿಸಿ]

೧೯೩೦ ರಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಕಾಸರಗೋಡು ಸಮೀಪದ ಕೊರಕ್ಕೋಡು ಎಂಬಲ್ಲಿ ಮೊದಲ ಪ್ರದರ್ಶನ ಕಂಡಿತು. ಕೊರಕ್ಕೋಡು ಯಕ್ಷಗಾನ ಮೇಳದ ಯಜಮಾನರಾಗಿದ್ದ ಕಾಸರಗೋಡು ದೇವಪ್ಪ ಮೇಸ್ತ್ರಿಯವರ ನೇತೃತ್ವದಲ್ಲಿ ಏಳು ದಿನಗಳ ಕಾಲ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆದಿತ್ತು. ದೇವಿ ಮಹಾತ್ಮೆ ಪ್ರಸಂಗದ ಸಾಹಿತ್ಯವು ಮೌಕಿಖವಾಗಿದ್ದ ಕಾರಣ ಮಾಂಬಾಡಿ ನಾರಾಯಣ ಭಾಗವತರು ದೇವಿ ಮಹಾತ್ಮೆ ಪ್ರಸಂಗಕ್ಕೆ ಸ್ವಂತ ಪದ್ಯ ರಚನೆ ಮಾಡಿದ್ದರು. ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಮೊದಲ ಪ್ರದರ್ಶನದಲ್ಲಿ ಪೆರಿಯಪ್ಪಾಡಿ ಪರಮೇಶ್ವರ ಭಾಗವತರು ಹಾಡಿದ್ದರು.

ಕಲಾವಿದರು[ಬದಲಾಯಿಸಿ]

ಅಂದಿನ ಪ್ರಥಮ ಪ್ರದರ್ಶನದಲ್ಲಿ ಶ್ರೀ ದೇವಿಯ ಪಾತ್ರದಲ್ಲಿ ಪಾಣಾಜೆ ಗಣಪತಿ ಭಟ್ಟರು ಕಾಣಿಸಿಕೊಂಡಿದ್ದರು. ಪಾಣಾಜೆ ಗಣಪತಿ ಭಟ್ಟರು ಯಕ್ಷರಂಗದ ಪ್ರಥಮ ಶ್ರೀ ದೇವಿ ಪಾತ್ರಧಾರಿ ಎನಿಸಿಕೊಂಡರು. ಬಣ್ಣದ ವೇಷಧಾರಿ ಬಣ್ಣದ ಕು‌‌ಂಜ಼್ ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು.

ಎರಡನೆ ಪ್ರದರ್ಶನ[ಬದಲಾಯಿಸಿ]

ಶ್ರೀ ದೇವಿ ಮಹಾತ್ಮೆ ಪ್ರಸಂಗದ ಎರಡನೆ ಪ್ರದರ್ಶನವು ೧೯೪೧ ರಲ್ಲಿ ಕಿನ್ನಿಗೋಳಿಯಲ್ಲಿ ಕಟೀಲು ಮೇಳದವರಿಂದ ಶ್ರೀಧರ ಶೆಟ್ಟಿಯವರ ನೇತೃತ್ವದಲ್ಲಿ ಐದು ದಿನಗಳ ಕಾಲ ನಡೆದಿತ್ತು.

ಪ್ರಸಂಗ ಕರ್ತೃಗಳು ಮತ್ತು ಆಕರ ಗ್ರಂಥಗಳು[ಬದಲಾಯಿಸಿ]

ಮಾಂಬಾಡಿ ನಾರಾಯಣ ಭಾಗವತರು ಶ್ರೀ ಸಪ್ತಶತಿ ಗ್ರಂಥವನ್ನು ಆಧರಿಸಿ ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ರಚಿಸಿದ್ದರು. ಈಗ ಪ್ರದರ್ಶನ ಕಾಣುವ ಶ್ರೀ ದೇವಿ ಮಹಾತ್ಮೆ ಪ್ರಸಂಗವನ್ನು ಅಗರಿ ಶ್ರೀನಿವಾಸ ಭಾಗವತರು ಮತ್ತು ಬಲಿಪ ಭಾಗವತರು ರಚಿಸಿದ್ದಾರೆ. ಇವರು ರಚಿಸಿದ ಪ್ರಸಂಗದಲ್ಲಿ ತ್ರಿಮೂರ್ತಿಗಳ ಹುಟ್ಟಿನೊಂದಿಗೆ ಕಥೆ ಪ್ರಾರಂಭವಾಗುತ್ತದೆ.

ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಕಲಾವಿದರು[ಬದಲಾಯಿಸಿ]

ದೇವಿಯ ಪಾತ್ರದಲ್ಲಿ ಕಡಂದೇಲು ಪುರುಷೋತ್ತಮ ಭಟ್ಟ, ಮುಳಿಯಾಳ್ ಭೀಮ ಭಟ್ಟ, ಕು‍ಷ್ಟ ಗಾಣಿಗ ಖ್ಯಾತರಾಗಿದ್ದಾರೆ. ಬಣ್ಣದ ವೇಷಧಾರಿ ಚಂದ್ರಗಿರಿ ಅಂಬು ಮಹಿಷಾಸುರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಣ್ಣದ ಮಾಲಿಂಗ ಶುಂಭನ ಪಾತ್ರ ನಿರ್ವಹಿಸಿದ್ದರು. ಅಳಿಕೆ ಮೋನಪ್ಪ ದೇವೇಂದ್ರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.