ಶ್ಯಾಮಲಾದೇವಿ ಬೆಳಗಾವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ಯಾಮಲಾದೇವಿಯವರು ೧೯೧೦ ಅಥವಾ ೧೯೧೧ ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ಪತಿ ಬೆಳಗಾವಿ (ವಿನೀತ) ರಾಮರಾಯರು ಪ್ರದೀಪ ಮಾಸಪತ್ರಿಕೆಯನ್ನು ನಡೆಯಿಸುತ್ತಿದ್ದರಲ್ಲದೆ ಜಯಕರ್ನಾಟಕ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಶ್ಯಾಮಲಾದೇವಿಯವರೂ ಸಹ ಜಯಕರ್ನಾಟಕ ಪತ್ರಿಕೆಯ ಆಡಳಿತದಲ್ಲಿ ಹಾಗು ಸಂಪಾದಕಿಯಾಗಿ ಸುಮಾರು ಒಂದು ದಶಕದವರೆಗೆ ಕಾರ್ಯ ನಿರ್ವಹಿಸಿದರು.

ಶ್ಯಾಮಲಾದೇವಿಯವರು ಕಥೆ, ವಿಮರ್ಶೆ, ಅನುವಾದಗಳನ್ನಲ್ಲದೆ ಅನೇಕ ಸಾಂಸ್ಕೃತಿಕ, ಸಾಹಿತ್ಯಕ ಹಾಗು ಸಾಮಾಜಿಕ ಮಹತ್ವದ ಲೇಖನಗಳನ್ನೂ ಬರೆದಿದ್ದಾರೆ. ಇವರ ಕಥಾಸಂಕಲನಗಳಲ್ಲಿ ಹೂಬಿಸಿಲು ಹಾಗು ಹೊಂಬಿಸಿಲು ಜನಪ್ರಿಯವಾದಂತಹವು. ಸರಸ ಹಾಗು ತಿಳಿಹಾಸ್ಯದ ಈ ಲೇಖಕಿ ಉತ್ತರ ಕರ್ನಾಟಕದ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮ ಸ್ತ್ರೀ ಎಂದು ಹೆಸರಾಗಿದ್ದಾರೆ.

ಸಮಾಜಸೇವೆಯಲ್ಲಿ ಆಸಕ್ತರಾಗಿದ್ದ ಶ್ಯಾಮಲಾದೇವಿಯವರು ತಮ್ಮ ಜನಪ್ರಿಯತೆಯಿಂದಾಗಿ ೧೯೪೨ರ ಎಪ್ರಿಲ್ ನಲ್ಲಿ ಧಾರವಾಡ ನಗರಸಭೆಯ ಸ್ತ್ರೀಯರಿಗಾಗಿ ಕಾದಿಟ್ಟ ಸ್ಥಾನಕ್ಕೆ ಆರಿಸಿ ಬಂದರು. ಅಲ್ಲದೆ ಶಾಲಾ ಸಮಿತಿ, ಲಮಾಣಿ ಸ್ತ್ರೀ ಬೋರ್‍ಡಿಂಗ ಇವುಗಳ ಸದಸ್ಯೆಯಾಗಿದ್ದರು. ೧೯೪೦ ಜುಲೈ ತಿಂಗಳಿನಲ್ಲಿ ಜಯಕರ್ನಾಟಕ ಮಕ್ಕಳ ಸಂಘವನ್ನು ಸ್ಥಾಪಿಸಿದರು.ಒಂದೆ ವರ್ಷದಲ್ಲಿ ಈ ಸಂಘಕ್ಕೆ ೨೦೦ ಮಕ್ಕಳು ಸದಸ್ಯರಾಗಿದ್ದರು. ೧೯೪೧ ಮಾರ್ಚದಲ್ಲಿ ಉತ್ತರ ಕರ್ನಾಟಕದ ಮೊದಲ ಮಕ್ಕಳ ಮೇಳ ನಡೆಯಿಸಿದರು. ಅಖಿಲ ಭಾರತ ಮಹಿಳಾ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಕಾರ್ಯದರ್ಶಿನಿಯಾಗಿ, ಸ್ಥಾಯಿ ಸಮಿತಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿದ್ದರು. ನಾಗಪುರ, ಬಡೋದೆ, ಸಾಂಗ್ಲಿ,ಬೆಂಗಳೂರು ಹಾಗು ದೆಹಲಿ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದರು.

ಶ್ಯಾಮಲಾದೇವಿಯವರು ೧೯೪೩ ನವೆಂಬರ ೧ ರಂದು ತಮ್ಮ ತಾರುಣ್ಯದ ವಯಸ್ಸಿನಲ್ಲಿಯೆ ನಿಧನರಾದರು.