ಶಂಕರ ಮೊಕಾಶಿ ಪುಣೇಕರ
ಶಂಕರ ಮೊಕಾಶಿ ಪುಣೇಕರ | |
---|---|
ಜನನ | ಮೇ ೮, ೧೯೨೮ ಧಾರವಾಡ |
ಮರಣ | ಆಗಸ್ಟ್ ೧೧, ೨೦೦೪ |
ವೃತ್ತಿ | ಪ್ರಾಧ್ಯಾಪಕರು ಮತ್ತು ಸಾಹಿತಿಗಳು |
ವಿಷಯ | ಕನ್ನಡ ಸಾಹಿತ್ಯ |
ಶಂಕರ ಮೊಕಾಶಿ ಪುಣೇಕರ (ಮೇ ೮, ೧೯೨೮) ನಮ್ಮ ನಾಡಿನ ಮಹಾನ್ ವಿದ್ವಾಂಸರಾಗಿ, ಬರಹಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಜೀವನ
[ಬದಲಾಯಿಸಿ]ಶಂಕರ ಮೊಕಾಶಿ ಪುಣೇಕರ್ ಅವರು ಕನ್ನಡದ ಅತ್ಯಂತ ಸ್ವೋಪಜ್ಞ ಕವಿ-ಕಾದಂಬರಿಕಾರ-ವಿಮರ್ಶಕ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸರಾದ ಶಂಕರ ಮೊಕಾಶಿ ಪುಣೇಕರರು ಮೇ ೮, ೧೯೨೮ರಂದು ಧಾರವಾಡದಲ್ಲಿ ಹುಟ್ಟಿ ಅಲ್ಲಿಯೇ ತಮ್ಮ ಶಿಕ್ಷಣವನ್ನೆಲ್ಲ ಮುಗಿಸಿದರು. ಬಿ.ಎ ಪಡೆದ ನಂತರ ನಾಲ್ಕು ವರ್ಷಗಳ ಕಾಲ ವಿಜಯಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರದಲ್ಲಿ ಮತ್ತೊಮ್ಮೆ ಓದಿಗೆ ಹಿಂದಿರುಗಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪದವಿ ಪಡೆದು ಅಲ್ಲಿಯೇ ಪಿ.ಎಚ್.ಡಿ ಪದವಿಯನ್ನು ಗಳಿಸಿದರು. ಪಿ.ಎಚ್.ಡಿ.ಗಾಗಿ ಯೇಟ್ಸ್ ಕವಿಯನ್ನು ಕುರಿತು ಬರೆದ ಪ್ರಬಂಧ, ಮೊಕಾಶಿಯವರನ್ನು ಒಬ್ಬ ಗಮನಾರ್ಹ ಯೇಟ್ಸ್ ಪಂಡಿತರನ್ನಾಗಿ ಮಾಡಿತು. ವಿದ್ವಾಂಸರು ಅದನ್ನು ಒಂದು ಅಪರೂಪದ ಪ್ರಬಂಧ ಎಂದು ಕೊಂಡಾಡಿದರು.
ಅಧ್ಯಾಪನ
[ಬದಲಾಯಿಸಿ]ಶಂಕರ ಮೊಕಾಶಿ ಪುಣೇಕರರು ಬೆಳಗಾವಿಯ ಆರ್.ಪಿ.ಡಿ ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿನ ಕೆ.ಸಿ. ಕಾಲೇಜುಗಳಲ್ಲಿ ಅಧ್ಯಾಪನ ನಡೆಸಿದರು. ಐ ಐ ಟಿ ಯಲ್ಲಿ ಹತ್ತು ವರ್ಷ ದುಡಿದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ರೀಡರ್ ಎಂದು ಕೆಲಸ ಮಾಡಿದರು. ಈ ಸಮಯದಲ್ಲಿ ಮಲ್ಲಿಕಾರ್ಜುನ ಮನಸೂರರಲ್ಲಿ ಸಂಗೀತ ಶಿಷ್ಯತ್ವವನ್ನು ಮಾಡಿದರು. ತಮ್ಮ ಸೇವಾವಧಿಯ ಕೊನೆಯ ಘಟ್ಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಆ ಹುದ್ಧೆಯಿಂದ 1988ರಲ್ಲಿ ನಿವೃತ್ತಿ ಹೊಂದಿದರು. ಡಾ. ಮೊಕಾಶಿಯವರು ಒಂದು ವರ್ಷ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದರು.
ಸಾಹಿತ್ಯ ಕೃಷಿ
[ಬದಲಾಯಿಸಿ]- ಕನ್ನಡ ಮತ್ತ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಡಾ.ಮೊಕಾಶಿ ಮೂವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಋಗ್ವೇದದ ಕೆಲವೇ ಮಂತ್ರಗಳಲ್ಲಿ ಮತ್ತು ಹರಪ್ಪಾ-ಮೊಹೆಂಜೋದಾರೋದ ಕೆಲವೇ ಮುದ್ರಿಕೆಗಳಲ್ಲಿ ದೊರೆಯುವ ಆಧಾರದ ಮೇಲೆ ಅವರು ತಮ್ಮ ಪ್ರಸಿದ್ಧ ಕೃತಿ “ಅವಧೇಶ್ವರಿ ”ಯನ್ನು ರೂಪಿಸಿದ್ದಾರೆ. ಈ ಕೃತಿ ವೇದಕಾಲದ ರಾಜಕೀಯ ಮತ್ತು ಜನಜೀವನವನ್ನು ಮನದಟ್ಟು ಮಾಡಿಕೊಡುವ ಕೃತಿ. ಒಂದು ರೀತಿಯಲ್ಲಿ ಅಂದಿನ ಬದುಕು ಇಂದಿನ ಬದುಕಿನ ಎಳೆಯಾಗಿ ಹೇಗೆ ಮುಂದುವರೆದಿದೆ ಎಂಬ ಭಾವವನ್ನೂ ಈ ಕೃತಿ ಪೋಣಿಸಿಕೊಡುತ್ತದೆ. ಈ ಕೃತಿಗಾಗಿ ಮೊಕಾಶಿಯವರು ಮಾಡಿದ ಸಂಶೋಧನೆಯ ಹಿನ್ನೆಲೆಗಳಲ್ಲಿ, ಭಾರತದ ಸಂಸ್ಕೃತಿ ವಿಶ್ವದ ಇತರ ಪ್ರಾಚೀನ ಸಂಸ್ಕೃತಿಗಳಾದ ಈಜಿಪ್ಟ್ ಅಂತಹ ಪ್ರದೇಶಗಳಿಂದ ಹೇಗೆ ಪ್ರವಹಿತಗೊಂಡು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬಂತಹ ವಿಶಿಷ್ಟ ಚಿಂತನೆಗಳೂ ಕಾಣಬರುತ್ತವೆ. ‘ಅವಧೇಶ್ವರಿ’ ಕೃತಿಗಾಗಿ ಅವರಿಗೆ 1988ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
- ಅವರ ಮತ್ತೊಂದು ಕಾದಂಬರಿ ‘ಗಂಗವ್ವ ಗಂಗಾಮಾಯಿ’ಯನ್ನು ಇತರ ಭಾಷೆಗಳಲ್ಲಿ ಅನುವಾದಿಸಲು ನ್ಯಾಷನಲ್ ಬುಕ್ ಟ್ರಸ್ಟ್ ಆಯ್ಕೆ ಮಾಡಿತು.
- ‘ಬೇಂದ್ರೆಯವರ ಕಾವ್ಯ ಮೀಮಾಂಸೆ’, ‘ಮಾಯಿಯ ಮೂರು ಮುಖಗಳು’, ‘ನಟ ನಾರಾಯಣಿ’, ‘ಸಾಹಿತ್ಯ ಮತ್ತು ಅಭಿರುಚಿ’, ಹಾಗೂ ‘ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು’ - ಇವು ಮೊಕಾಶಿಯವರ ಕೆಲವು ಮಹತ್ವದ ಕೃತಿಗಳು. ವಿಪರ್ಯಾಸದ ವಿನೋದ, ಶ್ರೀ ಸಂಗೀತದ ನಾಟ್ಯ ನಂದೀ ಎಂಬುದು ಅವರ ನಾಟಕಗಳು.
- ಇಂಗ್ಲಿಷಿನಲ್ಲಿ ಮೊಕಾಶಿಯವರು ಕಾವ್ಯ ಮತ್ತು ವಿಮರ್ಶೆಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತದ ಹಿರಿಮೆಯನ್ನು ಇಂಗ್ಲಿಷಿನಲ್ಲಿ ಬೆಳಗಿದ್ದಾರೆ. ದಿ ಕ್ಯಾಪ್ಟಿವ್, ದಿ ಪ್ರಿಟೆಂಡರ್, ಎಪಿಸಲ್ ಟು ಡೇವಿಡ್ ಮಕ್ ಕುಚಿಯಾನ್, ದಿ ಟೆಂಟ್ ಪೋಲ್. ಪ್ಯಾರಾಡೈಮ್ಸ್ ಮುಂತಾದವು ಮೊಕಾಶಿಯವರ ಕವನ ಸಂಕಲನಗಳು.
- ಇಂಗ್ಲಿಷಿನಲ್ಲಿ ಬರೆದ ವಿಮರ್ಶಾ ಪ್ರಕಟಣೆಗಳಲ್ಲಿ ‘ಭಾರತೀಯ ನಾಟಕಗಳ ಒಳನೋಟ’, ‘ಪಿ. ಲಾಲ್: ರಸ ವಿಮರ್ಶೆ’, ‘ಭಾರತಾಂಗ್ಲ ತತ್ವ’, ‘ಭಾರತಾಂಗ್ಲ ಸಾಹಿತ್ಯ: ಕೆಲವು ಅಧ್ಯಯನಗಳು’ ಮುಂತಾದವು ಪ್ರಮುಖವಾದವು.
- ಕಾಳಿದಾಸನ ‘ಋತು ಸಂಹಾರ’ವನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಪುರೋಹಿತ ಸ್ವಾಮಿಯವರ ‘ಅವಧೂತ ಗೀತೆ’ಯ ಭಾಷಾಂತರವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಗೋಕಾಕರನ್ನು ಕುರಿತು ಇಂಗ್ಲಿಷಿನಲ್ಲಿ ವಿಮರ್ಶಾ ಕೃತಿ ರಚಿಸಿದ್ದಾರೆ. ಕುವೆಂಪು ಕುರಿತು ‘ಹಮಿಂಗ್ ಬರ್ಡ್’ ಎಂಬ ಕೃತಿ ಪ್ರಕಟಿಸಿದ್ದಾರೆ. ‘ರಾಮಾಯಣ ದರ್ಶನಂ’ ಕೃತಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇವರ ಇಂಗ್ಲಿಷ್ ಕಾವ್ಯಕೃತಿಗಳು ಹರ್ಬರ್ಟ್ ರೀಡ್ ರಂತಹ ಮಹಾನ್ ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿವೆ.[೧]
ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ
[ಬದಲಾಯಿಸಿ]ಶಿಕ್ಷಣ ಕ್ಷೇತ್ರದಲ್ಲಿ ಪುಣೇಕರ ಅವರು ಉನ್ನತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ ಚೋಮ್ ಸ್ಕಿ – ಸ್ಕಿನ್ನರ್ ಪದ್ಧತಿಯನ್ನು ಕಂಡು ಹಿಡಿದಿದ್ದಾರೆ.
ಸಂಗೀತ ವಿಮರ್ಶೆ
[ಬದಲಾಯಿಸಿ]‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಸಂಗೀತ ವಿಮರ್ಶೆಯನ್ನು ಹಲವಾರು ವರ್ಷ ಮಾಡಿದ ಪುಣೇಕರರು ಕೆಲವು ಹೊಸ ರಾಗಗಳನ್ನೂ ಕಂಡುಹಿಡಿದಿದ್ದಾರೆ.
ಸಂಶೋಧನೆ
[ಬದಲಾಯಿಸಿ]ಪುಣೇಕರ ಅವರು 1984ರಲ್ಲಿ ಯುಗೋಸ್ಲಾವಿಯಾದಲ್ಲಿ ನಡೆದ ವಿಶ್ವ ಕಾವ್ಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಇಂಗ್ಲೆಂಡ್, ಬಲ್ಗೇರಿಯಾ ಮತ್ತು ಹಂಗೇರಿ ದೇಶಗಳಲ್ಲಿಯೂ ಪುಣೇಕರ ಅವರು ಪ್ರವಾಸ ಮಾಡಿ, ಸಂಶೋಧನ ಕಾರ್ಯ ನಡೆಸಿದರು. ಈ ಸಂಶೋಧನೆ ಯಲ್ಲಿ ಅವರ ಮುಖ್ಯ ಉದ್ದೇಶ ಭಾರತದ ವೈದಿಕ ಮತ್ತು ಮಹಾಕಾವ್ಯ ಕಾಲದಲ್ಲಿನ ಸಂಸ್ಕೃತಿಗೂ, ಪಾಶ್ಚಾತ್ಯ ದೇಶಗಳಿಗೂ ಇದ್ದ ಸಂಬಂಧವನ್ನು ಹುಡುಕಿ ತೆಗೆಯುವುದು. ಪುಣೇಕರರು ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮತ್ತು ಜ್ಞಾನಪೀಠ ದ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕೃತಿ
[ಬದಲಾಯಿಸಿ]- "ಗಂಗವ್ವ ಗಂಗಾಮಾಯಿ" (೧೯೫೬), "ನಟನಾರಾಯಣಿ" (೧೯೮೨),
"ಅವಧೇಶ್ವರಿ" (೧೯೮೭)[೨]
ವಿದಾಯ
[ಬದಲಾಯಿಸಿ]ಈ ಮಹಾನ್ ವಿದ್ವಾಂಸರು ಆಗಸ್ಟ್ ೧೧, ೨೦೦೪ರಂದು ಈ ಲೋಕವನ್ನಗಲಿದರು. ಈ ಮಹಾನ್ ವಿದ್ವಾಂಸರ ಚೇತನಕ್ಕೆ ನಮ್ಮ ಅನಂತ ಪ್ರಣಾಮಗಳು.
ಉಲ್ಲೇಖ
[ಬದಲಾಯಿಸಿ]- ↑ ಪುಣೇಕರರು ಹಾಗೂ ಅವರ ಆಂಗ್ಲ ಶ್ರೀರಾಮಾಯಣ ದರ್ಶನಂ; ಪಂಜು;August 10th, 2015
- ↑ "ಅವಧೇಶ್ವರಿ - Navakarnataka Publications Pvt.Ltd ..." Archived from the original on 2020-09-25. Retrieved 2020-04-23.