ವೀಣೆ ಶೇಷಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
* 'ವೀಣೆ ಶೇಷಣ್ಣವನವರು'

'ವೀಣೆ ಶೇಷಣ್ಣ' ನವರು, (೧೮೫೨-೧೯೨೬) ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಇವರು ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. ವೀಣೆ ಶೇಷಣ್ಣನವರ ತಂದೆ, ’ಬಕ್ಷಿ ಚಿಕ್ಕರಾಮಪ್ಪ’ನವರೂ ಸಹ 'ಮುಮ್ಮಡಿ ಕೃಷ್ಣರಾಜ ಒಡೆಯರು' ಅರಸರಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದ 'ಆಸ್ಥಾನ ವಿದ್ವಾಂಸ'ರಾಗಿದ್ದರು. ಅವರಿಂದ ಮತ್ತು ಮೈಸೂರು 'ಸದಾಶಿವರಾಯ'ರಿಂದ ಸಂಗೀತವನ್ನು ಕಲಿತ 'ಶೇಷಣ್ಣ'ನವರು ವೀಣೆ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು. ವೀಣೆ ಮಾತ್ರವಲ್ಲದೆ 'ಪಿಯಾನೊ', 'ಪಿಟೀಲು', 'ಸಿತಾರ್' ಮೊದಲಾದ ವಾದ್ಯಗಳನ್ನೂ ನುಡಿಸುತ್ತಿದ್ದ ಶೇಷಣ್ಣನವರು ಕೆಲವು ರಚನೆಗಳನ್ನೂ ರಚಿಸಿದ್ದಾರೆ.

'ಬಲಗಡೆ ವೀಣೆ ಶೇಷಣ್ಣನವರು', ಮತ್ತು 'ವೀಣೆಸುಬ್ಬಣ್ಣನವರು', ಸನ್, ೧೯ಂ೨ ರಲ್ಲಿ.

'ಶೇಷಣ್ಣ'ನವರು ಹೋದೆಡೆಯೆಲ್ಲಾ ರಾಜಮರ್ಯಾದೆ[ಬದಲಾಯಿಸಿ]

ಸ್ವಾತಂತ್ರ್ಯಪೂರ್ವ ಭಾರತದ ಅನೇಕ ಅರಸರು ಇವರನ್ನು ಸನ್ಮಾನಿಸಿದ್ದರು. ಬರೋಡದ ಮಹಾರಾಜರು ಬರೋಡದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ವೀಣೆ ಶೇಷಣ್ಣನವರನ್ನು ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿದ್ದರಂತೆ. 'ವಿಕ್ಟೋರಿಯ ರಾಣಿ'ಯ ಮರಣಾನಂತರ ಗದ್ದುಗೆಗೆ ಬಂದ, ಇಂಗ್ಲೆಂಡಿನ ಅಂದಿನ ರಾಜ, ಐದನೇ ಜಾರ್ಜ್ (George V), ದೆಹಲಿಯಲ್ಲಿ ಆಯೋಜಿಸಿದ ಅವರ ದರ್ಬಾರ್ ಸಮಯದಲ್ಲಿ ಶೇಷಣ್ಣನವರ ಸಂಗೀತ-ಕಛೇರಿಯನ್ನು ಕೇಳಿ, ಸಂಪ್ರೀತರಾಗಿ ಅವರ ಒಂದು 'ತೈಲ ಚಿತ್ರ'ವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳಲು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆ'ಗೆ ತೆಗೆದುಕೊಂಡು ಹೋಗಿದ್ದರಂತೆ. ೧೯೨೪ ರ, 'ಬೆಳಗಾವಿಯ ಕಾಂಗ್ರೆಸ್ ಅಧಿವೇಶನ'ದಲ್ಲಿ 'ಮಹಾತ್ಮ ಗಾಂಧಿ'ಯವರು, ಮತ್ತು ಅವರ ಜೊತೆಗಾರರು, ತಮ್ಮ ಇತರ ಕೆಲಸಗಳನ್ನು ಮುಂದೂಡಿ, ಹಲವು ತಾಸುಗಳ ಕಾಲ ಮಂತ್ರಮುಘ್ದರಾಗಿ, ಶೇಷಣ್ಣನವರ ಕಛೇರಿಯನ್ನೇ ಕೇಳುತ್ತಾ ಕುಳಿತಿದ್ದರಂತೆ. ತಮ್ಮ ಭಾವಪೂರ್ಣ ವೀಣಾವಾದನದ ವಿಶಿಷ್ಟ ವೈಖರಿಯಿಂದ ಹಾಗೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಮೈಸೂರಿಗೆ, ಕರ್ನಾಟಕಕ್ಕೆ, ಕಲಾಪ್ರಪಂಚದಲ್ಲೇ ಅತ್ಯುನ್ನತವಾದ ಸ್ಥಾನವನ್ನು ಗಳಿಸಿಕೊಟ್ಟು ’ವೀಣೆಯ ಬೆಡಗಿದು ಮೈಸೂರು,’ ಎಂದು ಮೈಸೂರನ್ನು ಗುರುತಿಸುವಂತೆ ಮಾಡಿದವರು, ’ವೀಣೆ ಶೇಷಣ್ಣನವರು.”

ದ ಕಿಂಗ್ ಆಫ್ ವೀಣಾ ಪ್ಲೇಯರ್[ಬದಲಾಯಿಸಿ]

ಪಾಶ್ಚಾತ್ಯ ಸಂಗೀತ ವಿದ್ವಾಂಸರು, ಶೇಷಣ್ಣನವರನ್ನು ’ದ ಕಿಂಗ್ ಆಫ್ ವೀಣಾ ಪ್ಲೇಯರ್’ ಎಂದು ಕರೆದು ಗೌರವಿಸಿದ್ದಾರೆ. ಶೇಷಣ್ಣನವರಿಗೆ ವೀಣೆ ಒಂದು ವಾದ್ಯವಷ್ಟೆ ಆಗಿರದೆ ’ನಾದದೇವಿಯನ್ನು ಔಪಾಸಿಸುವ ಸಾಧನೆಯಾಗಿತ್ತು’. ಸಂಗೀತ ವಿದ್ಯಾನಿಧಿಯೇ ಆಗಿದ್ದ ಶೇಷಣ್ಣನವರು, ಪ್ರತಿದಿನ ೮ ಗಂಟೆಗಳ ಅವಿರತ ಸಾಧನೆ ಮಾಡುತ್ತಿದ್ದು, ಅವರ ಏಕಾಗ್ರತೆ, ಕಲಾಪ್ರೇಮ ಆದರ್ಶ ಪ್ರಾಯವಾದುವು. 'ಮೈಸೂರು ಸದಾಶಿವರಾಯ'ರಲ್ಲಿ ಗಾಯನವನ್ನು ಅಭ್ಯಾಸಮಾಡಿದುದರಿಂದ ಶೇಷಣ್ಣನವರು ನೇರ 'ತ್ಯಾಗರಾಜ ಶಿಷ್ಯಪರಂಪರೆ'ಗೆ ಸೇರಿದಂತಾಯಿತು. 'ಭೈರವಿ ವರ್ಣ'ದ (ವೀರಿ ಬೋಣಿ) ಕರ್ತ, 'ಆದಿ ಅಪ್ಪೈಯ್ಯ' ನವರ ವಂಶಸ್ಥರೂ, ಈ ವಂಶದ ೨೪ ನೆಯ ಕುಡಿಯೂ ಆಗಿದ್ದಾರೆ.

'ಶೇಷಣ್ಣನವರ ದರ್ಬಾರ್ ಉಡುಪು'[ಬದಲಾಯಿಸಿ]

'ಅಸ್ಥಾನದ ಪೋಷಾಕಿ' ನಲ್ಲಿ ಶೇಷಣ್ಣನವರು ಅದ್ಭುತವಾಗಿ ಕಾಣಿಸುತ್ತಿದ್ದರು. ಅತ್ಯಂತ ಗೆಲುವಿನ ಹಾಗೂ ಗೌರವಾನ್ವಿತ, ಆಕರ್ಷಕ ವ್ಯಕ್ತಿತ್ವ ಅವರದು.ಬೇರೆಯವರಿಗೆ ಹೋಲಿಸಿದರೆ ಅತಿ ಸರಳವೂ ಆಡಂಬರವಿಲ್ಲದ ಉಡುಪಾಗಿತ್ತು. ಆಗಿನಕಾಲದ ಪೋಷಾಕಿನ ಪದ್ಧತಿಯಂತೆ, ಕೊಕ್ಕರೆ ಬಿಳುಪಿನ ಕಚ್ಚೆ ಪಂಚೆ, ಉದ್ದವಾದ ಕಪ್ಪು ಕೋಟಿನ ಮೇಲೆ ಬಿಳಿಯ ಮಡಿಸಿದ ಅಂಗವಸ್ತ್ರ, ಹಾಗೂ ಬಿಳಿಯ ಪೇಟ ಧರಿಸುತ್ತಿದ್ದರು. ದಟ್ಟವಾದ ಮೀಸೆ, ವಿಶಾಲವಾದ ಹಣೆಯ ಮೇಲೆ ನಾಮ ಹಾಗೂ ಅಕ್ಷತೆ ರಂಜಿಸುತ್ತಿತ್ತು. ಕುತ್ತಿಗೆಯನ್ನು ಯಾವಾಗಲೂ ಎತ್ತರದಲ್ಲಿ ಇಟ್ಟುಕೊಂಡೇ ನಡೆಯುತ್ತಿದ್ದ, ಹೊಳಪಿನ ಕಣ್ಣುಗಳ, ಅಷ್ಟೇನೂ ಭರ್ಜರಿ ಆಳಲ್ಲದಿದ್ದರೂ ದೂರದಿಂದಲೇ ಕಂಡುಹಿಡಿಯಬಹುದಾದ ಪ್ರಭಾವೀ ವ್ಯಕ್ತಿತ್ವ. ವೀಣೆನುಡಿಸಲೋಸ್ಕರವೇ ದೇವರು ದಯಪಾಲಿಸಬಹುದಾದ ಉದ್ದವಾದ ಬೆರಳುಗಳು, ಅವರ ಇರುವಿಕೆಯಿಂದ ಸಭಾಂಗಣದ ಮಹತ್ವ ಉಜ್ವಲವಾಗಿರುತ್ತಿತ್ತು. ವೀಣೆನುಡಿಸಲು ಕುಳಿತರೆಂದರೆ ಯೋಗಿಯನ್ನು ಮೀರಿಸುವ 'ತಪಶ್ಚರ್ಯೆ' ಅವರ ಮುಖದಮೇಲೆ ಪ್ರಖರವಾಗಿ ಕಾಣಿಸುತ್ತಿತ್ತು. ತಮ್ಮ ೨೬ ವರ್ಷಗಳ ವಯಸ್ಸಿನಲ್ಲಿಯೇ, ದಕ್ಷಿಣ ಭಾರತದ ರಾಜಮಹಲ್ ಗಳಲ್ಲಿ ಮಠಗಳಲ್ಲಿ, ಜಮೀನ್ದಾರದ ಗೃಹಗಳಲ್ಲಿ, ಹಾಗೂ ಅವರ ವಾದ್ಯಸಂಗೀತಾಭಿಲಾಶಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟಿದ್ದರು. ಆ ಸಮಯದಲ್ಲಿ ಈಗಿನಂತೆ 'ಸಾರ್ವಜನಿಕ ಸಭೆ'ಗಳಲ್ಲಿ ಇಂತಹ 'ಸಂಗೀತ ವಾದ್ಯ ಕಾರ್ಯಕ್ರಮಗಳು' ಇರಲೇ ಇಲ್ಲ.

ಶೇಷಣ್ಣನವರ ಮನೆತನದ ಪರಿಚಯ[ಬದಲಾಯಿಸಿ]

ಶೇಷಣ್ಣನವರ ತಂದೆಯವರು, 'ಚಿಕ್ಕರಾಮಯ್ಯನವರು', ಅವರು 'ಮಾಧ್ವ ಬ್ರಾಹ್ಮಣರು', ಹಾಗೂ 'ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವಿದ್ವಾಂಸರಾಗಿದ್ದರು'. ಅವರಿಗೆ 'ವೀಣಾಭಕ್ಷಿ ಚಿಕ್ಕರಾಮಪ್ಪ'ನವರೆಂದೇ ಹೆಸರಾಗಿತ್ತು. 'ತಾಯಿ'ಯವರೂ ಸಂಗೀತ ವಂಶಜರೇ. ಸುಮಾರು ೧ಂ ನೇ ವಯಸ್ಸಿನಲ್ಲೇ 'ಮುಮ್ಮಡಿ ಕೃಷ್ಣರಾಜವೊಡೆಯರ ಮುಂದೆ ’ಪಲ್ಲವಿ’ಯನ್ನು ಹಾಡಿ ಸನ್ಮಾನಿತರಾಗಿದ್ದರು. ಪ್ರಾರಂಭದಲ್ಲಿ ತಂದೆಯವರಿಂದ ಸಂಗೀತ ಪಾಠ ನಡೆಯುತ್ತಿತ್ತು. ಆದರೆ, ವಿಧಿವಶಾತ್ ಶೇಷಣ್ಣನವರ ೧೩ ನೆ ವಯಸ್ಸಿನಲ್ಲಿಯೇ ತಂದೆಯವರು ಮರಣಹೊಂದಿದರು. ಆನಂತರ ಸಂಗೀತಾಭ್ಯಾಸವನ್ನು ನಿಲ್ಲಿಸದೆ, 'ವೀಣಾ ಸುಬ್ಬಣ್ಣನವರ ತಂದೆ', 'ದೊಡ್ಡ ಶೇಷಣ್ಣನವರಲ್ಲಿ ಮುಂದುವರೆಸಿದರು. ’ಅಕ್ಕ ವೆಂಕಮ್ಮನವರು’ ತಮ್ಮನ ಸಂಗೀತಾಭ್ಯಾಸಕ್ಕೆ ವಿಶೇಷ ಕಾಳಜಿ ವಹಿಸಿ ಸಹಕಾರ ಕೊಟ್ಟರು. ಶೇಷಣ್ಣನವರಿಗೆ ದೈವದತ್ತವಾಗಿ ಸಂಗೀತ-ಕಲೆ ಒಲಿದಿತ್ತು. ಸತತವಾಗಿ ಸಾಧನೆಮಾಡಿ ಅವರು ತಮ್ಮದೇ ಅದ ಸ್ವತಂತ್ರ ವೀಣಾಶೈಲಿಯನ್ನು ರೂಪಿಸಿಕೊಂಡರು. ವೀಣೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರು. ಎಂಥವರನ್ನೂ ಮರುಳುಮಾಡುವ ಮೋಡಿಗೊಳಿಸುವ ಸನ್ಮೋಹನಾಸ್ತ್ರ ಬೀರುವ ಅಧ್ಬುತ ಸಂಗೀತ ಅವರದು. 'ಮನೋಧರ್ಮ ಸಂಗೀತ'ವೇ ಅವರ ಕಛೇರಿಯ ಪ್ರಮುಖಭಾಗವಾಗಿರುತ್ತಿತ್ತು. ಕೆಲವೇ ಆಯ್ದ ಕೀರ್ತನೆಗಳನ್ನು ತೆಗೆದುಕೊಂಡು ಅದ್ಭುತವಾಗಿ ನುಡಿಸುತ್ತಿದ್ದರು. ’ತಿಲ್ಲಾನ’ ’ಜಾವಳಿಗಳು’ ಕಛೇರಿಯ ಅಂತ್ಯದಲ್ಲಿ ನುಡಿಸಲ್ಪಡುತ್ತಿದ್ದವು. ರಸಿಕರಿಗೆ ಅವುಗಳ ಆಕರ್ಷಣೆ ಹೆಚ್ಚಾಗಿತ್ತು. ’ತಾನ ಪ್ರಸ್ತುತಿ’ಯಲ್ಲಿ ಎತ್ತಿದ ಕೈ. ತಮ್ಮ ಜೀವಮಾದದಲ್ಲಿ ಎಂದೂ ಅವರು ಅಹಂಭಾವದಿಂದ ನಡೆದುಕೊಂಡ ಕ್ಷಣಗಳಿರಲಿಲ್ಲ. ’ನಾದಾನು ಸಂಧಾನದ ಉದ್ಘಾರ’ಳೆಂಬ, ’ಭಲೆ’, ’ಆಹಾ’, ’ಭೇಷ್’ ಇತ್ಯಾದಿ ಪದಗಳು ಅವರಿಗೆ ಅರಿವಿಲ್ಲದೆ ಮೂಡಿಬರುತ್ತಿದ್ದವು. ಸುಮಾರು ೨ಂ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದ ಶೇಷಣ್ಣನವರು ಪಿಟೀಲು, ಪಿಯಾನೋ, ಸ್ವರಬತ್, ಜಲತರಂಗ, ನಾಗಸ್ವರ, ಹಾರ್ಮೋನಿಯಮ್, ಮಯೂರ ವಾದ್ಯ, ಮೃದಂಗ, ಇತ್ಯಾದಿಗಳನ್ನು ನುಡಿಸುತ್ತಿದ್ದರು. ಹಲವು ವೇಳೆ ಯಾವುದಾದರೂ ಸಂಗೀತ ಕಛೇರಿಯಲ್ಲಿ ವೈಲಿನ್ ಪಕ್ಕವಾದ್ಯದವರು ಬರದಿದ್ದಾಗ, ವೈಲಿನ್ನನ್ನು ತಾವೇ ನುಡಿಸಿ ಸಹಕರಿಸಿದ ಸನ್ನಿವೇಶಗಳಿವೆ.

’ವೈಣಿಖ ಶಿಖಾಮಣಿ' ಬಿರುದು[ಬದಲಾಯಿಸಿ]

'ಮುಮ್ಮಡಿ ಕೃಷ್ಣರಾಜ ಒಡೆಯರು 'ಪಟ್ಟಕ್ಕೆ ಬಂದ ಸಮಯದಲ್ಲೇ ವೈಣಿಕ ಶೇಷಣ್ಣನವರ ವೀಣಾವಾದನದ ಮಾಧುರ್ಯದಿಂದ ಪ್ರಭಾವಿತರಾಗಿದ್ದ ಮಹಾರಾಜರು, ’ವೈಣಿಖ ಶಿಖಾಮಣಿ' ಬಿರುದನ್ನು ದಯಪಾಲಿಸಿದ್ದರು. 'ಜಯಚಾಮರಾಜ ವೊಡೆಯರು', 'ಶೇಷಣ್ಣ'ನವರನ್ನು ತಮ್ಮ ಅರಮನೆಯ 'ಆಸ್ಥಾನವಿದ್ವಾಂಸ'ರ ನ್ನಾಗಿ ನೇಮಿಸಿದರು.'ಸುಬ್ಬಣ್ಣನವರ ಗಾಯನ', 'ಶೇಷಣ್ಣನವರ ವೀಣೆ', 'ಮಹಾರಾಜರ ಪಿಟೀಲು,' 'ಅಪರೂಪದ ಭಾವಾನು ಸಂಧನ'ದ 'ಸಂಗೀತ ಮೇಳ'ವಾಗಿತ್ತೆಂದು ನೆನೆಸುತ್ತಿದ್ದರು. ಮೈಸೂರು ಸಂಸ್ಥಾನದ ಅರಸರ ಪ್ರತಿಷ್ಠೆ ಮತ್ತು ಭಾಗ್ಯದ ಸಂಕೇತವಾಗಿ ಶೇಷಣ್ಣನವರ ಸಂಗೀತ ಪರಿಗಣಿಸಲ್ಪಟ್ಟಿತ್ತು. 'ರಾಮನಾಥ ಪುರಂ ಭಾಸ್ಕರ ಸೇತುಪತಿ ಮಹಾರಾಜರು' ನವರಾತ್ರಿ ಮೊದಲ ದಿನದಲ್ಲಿ ಏರ್ಪಡಿಸಿದ್ದ ಶೇಷಣ್ಣನವರ ವೀಣೆಯನ್ನು ಸತತ ಕೇಳಬೇಕೆಂದು ವಿನಂತಿಸಿದರು. ಇಡೀ ನವರಾತ್ರಿ ಹಬ್ಬ ಅರಮನೆಯಲ್ಲಿ 'ವೀಣಾಮೃತ ಸುಧೆ'ಯನ್ನು ಹರಿಸಿದ ಶೇಷಣ್ಣನವರಿಗೆ ’ಕನಕಾಭಿಶೇಕ’ಮಾಡಿಸಿ ಅಂಬಾರಿಯಮೇಲೆ ಮೆರವಣಿಗೆ ಮಾಡಿಸಿದರಂತೆ. ಅನಂತರ, ಪ್ರತಿವರ್ಷವೂ ಇದೇ ತರಹದ ಸಂಗೀತೋತ್ಸವ ಇದ್ದೇ ಇರುತ್ತಿತ್ತು.

ಬರೋಡಾ ಸಂಸ್ಥಾನದಲ್ಲಿ[ಬದಲಾಯಿಸಿ]

'ಸಯ್ಯಾಜಿರಾವ್ ಗಾಯಕವಾಡ್ 'ರವರು, ಮತ್ತು ಅವರ ಮಹಾರಾಣಿಯವರು ಸತತ ಮೂರು ದಿನಗಳ ವೀಣಾವಾದನವನ್ನು ಏರ್ಪಡಿಸಿ, ಸಕಲ ರಾಜಮರ್ಯಾದೆಗಳೊಂದಿಗೆ ಸನ್ಮಾನಿಸಿ ರಾಣಿಯವರು ಸ್ವತಃ ಬಳಸುತ್ತಿದ್ದ ಮೇನೆಯನ್ನು ಬಹುಮಾನವಾಗಿ ನೀಡಿದರು. ಶೇಷಣ್ಣನವರು ಮೈಸೂರಿಗೆ ವಾಪಸ್ ಬಂದಾಗ ಒಡೆಯರೂ ಹೆಮ್ಮೆಯಿಂದ ಬೀಗಿಹೋಗಿ ಮೈಸೂರಿನಲ್ಲೂ 'ರಾಜಲಾಂಛನ'ದಲ್ಲಿ ವಿಶೇಷವಾಗಿ ಸತ್ಕಾರನೀಡಿದರು. ಮಹಾರಾಜರು, ಶೇಷಣ್ಣನವರಿಗೆ, ಮೇನೆಯಲ್ಲಿ ಉಪಾಸೀನರಾಗಬೇಕೆಂದು ಕೊಂಡಾಗ ಸುತರಾಂ ಒಪ್ಪದೆ, ’ನಾನು ಕಲಾವಿದನಷ್ಟೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ವೀಣೆಯನ್ನು ನುಡಿಸಿದ್ದೇನೆ. ವೀಣೆಯ ಸಾಮರ್ಥ್ಯಕ್ಕೆ ನಾನು ನುಡಿಸಬಲ್ಲೆನೇ’ ಎಂದು ಹೇಳಿ ವೀಣೆಯನ್ನು ಮೇನೆಯ ಪಲ್ಲಕ್ಕಿಯಲ್ಲಿ ಇಟ್ಟು ಮುಂದೆ ತಾವು ವಿನೀತರಾಗಿ ನಡೆದರಂತೆ. ತಂಜಾವೂರಿನಕೃಷ್ಣಸ್ವಾಮಿ ನಾಯಕರ ಮನೆಯಲ್ಲಿ ನಡೆದ ಒಂದು 'ಸಂಗೀತ ಗೋಷ್ಠಿ'ಯಲ್ಲಿ ಶೇಷಣ್ಣನವರೊಂದಿಗೆ ಮಹಾವೈದ್ಯನಾಥ ಅಯ್ಯರ್, ಶರಭಶಾಸ್ತ್ರಿ, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಮೊದಲಾದ ವಿದ್ವಾಂಸರುಗಳ ಕಲಾ ವಿನಿಕೆಯಲ್ಲಿ ಪರಸ್ಪರ ಅವರುಗಳಲ್ಲೇ ತೀರ್ಮಾನವಾಗುವ 'ಶ್ರೇಷ್ಟ ವಿದ್ವಾಂಸರಿಗೆ' ಅತ್ಯಂತ ಬೆಲೆ ಬಾಳುವ ’ಸೀಮೇಕಮಲದ ಉಂಗುರ’, ಬಹುಮಾನವಾಗಿತ್ತು. ಕಛೇರಿಯ ಕೊನೆಯಲ್ಲಿ 'ಮಹಾವೈದ್ಯನಾಥ ಅಯ್ಯರ್' ಮಾತನಾಡಿ, ವೀಣೆ ಶೇಷಣ್ಣನವರದ್ದು ಊಹೆಗೆ ನಿಲುಕದ ಮನೋಧರ್ಮ ಆ ನಾದ ಮಾಧುರ್ಯಕ್ಕೆ ನಾವೆಲ್ಲಾ ಮನಸೋತಿದ್ದೇವೆ. ಇಂದಿನ ಬಹುಮಾನ ನಿಷ್ಪಕ್ಷಪಾತವಾಗಿ ಅವರಿಗೇ ಸಲ್ಲಬೇಕು.

ಬರೋಡ ರಾಜದಂಪತಿಗಳಿಗೆ, 'ಆಧುನಿಕ ಸಂಗೀತದ ರಸದೌತಣ'[ಬದಲಾಯಿಸಿ]

ಬರೋಡಾದ ಮಹಾರಾಜರು ಒಮ್ಮೆ ಮೈಸೂರಿನ ದರ್ಬಾರಿಗೆ ಅತಿಥಿಯಾಗಿ ಬಂದಾಗ, ಶೇಷಣ್ಣನವರ ಸಂಗೀತವನ್ನು ದರ್ಬಾರಿನಲ್ಲಿ ಕೇಳಿದ್ದಲ್ಲದೆ ಮತ್ತೆ, ತಮ್ಮ ವಿಶ್ರಾಂತಿಯ ಸಮಯದಲ್ಲಿ ಅವರ ಸಂಗೀತವನ್ನು ಪುನಃ ಕೇಳಲು ಅಪೇಕ್ಷಿಸಿದರು. ಅವರ ಮನಸ್ಸಿಗೆ ಮುದವಾಗುವಂತ ಕರ್ನಾಟಕ, ಪಾಶ್ಚಾತ್ಯ, ಹಿಂದೂಸ್ಥಾನಿ ಸಂಗೀತಗಳ ಮಿಶ್ರಣಮಾಡಿ ಪ್ರಸ್ತುತಪಡಿಸಿದರಂತೆ. ಆ ಸಮಯದಲ್ಲಿ ಮಹಾರಾಜರು ಇರಲಿಲ್ಲ. ಅವರು ವಾಪಸ್ ಬಂದಮೇಲೆ, ವಿಷಯಗಳನ್ನು ಕೇಳಿ ತಿಳಿದುಕೊಂಡು ಹೆಮ್ಮೆಪಟ್ಟು ಆಸ್ಥಾನಕ್ಕೆ ಕರೆಸಿದರಂತೆ. ಹೆದರಿಕೆಯಿಂದ ಭೇಟಿಮಾಡಿದ ಶೇಷಣ್ಣನವರು ವಿವರಿಸುವ ಮೊದಲೇ ಮಹಾರಾಜರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಶೇಷಣ್ಣನವರ ಸಮಯಸ್ಪೂರ್ಥಿಯನ್ನು ಕೊಂಡಾಡಿದರಂತೆ.

'ಬೆಳಗಾಂ ಕಾಂಗ್ರೆಸ್ ಅಧಿವೇಶನದಲ್ಲಿ'[ಬದಲಾಯಿಸಿ]

ಸನ್, ೧೯೨೪ ರಲ್ಲಿ 'ಮಹಾತ್ಮ ಗಾಂಧಿ'ಯವರ ಅಧ್ಯಕ್ಷತೆಯಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಶೇಷಣ್ಣ ನವರ ವೀಣಾವಾದನದ ಏರ್ಪಾಡಾಗಿತ್ತು. ಆಗಲೇ ೭೩ ವರ್ಷ ಪ್ರಾಯದ, ಅಷ್ಟೇನೂ ಆರೋಗ್ಯ ಸರಿಯಿರದ ಶೇಷಣ್ಣನವರು, ಪೂರ್ವ ನಿಯೋಜಿತ ವ್ಯವಸ್ಥೆಯಂತೆ, ಕೇವಲ ಅರ್ಧಗಂಟೆಯ ವಿನಿಕೆಯ ಕಾರ್ಯಕ್ರಮಕ್ಕೆ ಒಪ್ಪಿಗೆನೀಡಿದ್ದರು. ಒಂದುಗಂಟೆಯಾದರೂ ಸಂಗೀತ ರಸಿಕರು ಮಿಸುಕಾಡದೆ ಕುಳಿತಿದ್ದರು. ಗಾಂಧೀಜಿಯವರ ಜೊತೆ, ಸಂಗೀತದಲ್ಲಿ ಭಾಗವಹಿಸಿದ್ದವರು, 'ಸರೋಜಿನಿನಾಯಿಡು', 'ಜವಹರಲಾಲ್ ನೆಹರು', ಮೋತೀಲಾಲ್ ನೆಹರು, ಮದನ ಮೋಹನ ಮಾಳವೀಯ, ಲಾಲಾ ಲಜಪತ್ ರಾಯ್, ರಾಜೇಂದ್ರ ಪ್ರಸಾದ್, ಮೊದಲಾದ ನಾಯಕರೂ ತುಟಿಪಿಟಕ್ಕನ್ನದೆ ನಾದ-ಸಾಗರದಲ್ಲಿ ತೇಲುತ್ತಿದ್ದರು. ಹಾಗೆ ಅವರನ್ನೆಲ್ಲಾ ಮೋಡಿಮಾಡಿ ಒಂದು ವಿಕ್ರಮವನ್ನೇ ಸಾಧಿಸಿದರು, ಶೇಷಣ್ಣನವರು. ಸೋಮವಾರವಾದ್ದರಿಂದ ಬಾಪೂಜಿಯವರಿಗೆ, ಮೌನವ್ರತವಿತ್ತು. ಕಛೇರಿಯು ಸಾಗಿಯೇ ಇತ್ತು. ಗಾಂಧೀಜಿಯವರ ಆಪ್ತಕಾರ್ಯದರ್ಶಿಯವರು ಒಂದು ಚೀಟಿಯಲ್ಲಿ ಬರೆದು, 'ಇನ್ನು ನಾವು ಹೋಗೋಣವೇ 'ಎಂದಾಗ, ಬಾಪು, ಕಾಗದ ಹಿಂದೆ ಬರೆದ ಟಿಪ್ಪಣಿ, ಇಂದಿಗೂ ನೆನೆಯಲು ಯೋಗ್ಯವಾಗಿದೆ. ’ಹೊತ್ತು ಮೀರಿಯೇ ಹೋದರೂ ಪ್ರಮಾದವೇನಿಲ್ಲ, ಆಗಲಂತೆ ಬಿಡಿ.’ ಸುದೀರ್ಘಕಾಲದ ಕಛೇರಿಯ ಬಳಿಕ ಗಾಂಧೀಜಿಯೇ ಕಡುಕಾಲನಿಯಮಿಯೂ ಕಟು ವ್ರತಾಚರಣಿಯೂ ಆಗಿದ್ದ ಬಾಪುರವರು, ಮೌನವನ್ನು ಮುರಿದು ಉದ್ಧರಿಸಿಯೇ ಬಿಟ್ಟರು. "ಇದು ದೇವಗಾನ. ಇದನ್ನು ಕೇಳಿದ ನಾವೇ ಧನ್ಯರು. ಇಷ್ಟನ್ನು ಹೇಳದೇ ಹೇಗೆ ಮೌನಾಚರಣೆ ವಹಿಸಲಿ". ಅದೇರೀತಿ, ಮಹಾತ್ಮರ ಮುಂದೆ ವೀಣೆ ನುಡಿಸುವ ಶೇಷಣ್ಣನವರ ಮಹದಾಶೆ ನೆರವೇರಿತು ಕೂಡ.

೨ಂ ನೆಯ ಶತಮಾನದ ವೈಣಿಕ ಶಿಖಾಮಣಿ, ಹಾಗೂ ವಾಗ್ಗೇಯ ಕಾರ[ಬದಲಾಯಿಸಿ]

'ವೀಣೆ ಶೇಷಣ್ಣ' ನವರು ೨ಂ ನೇ ಶತಮಾನದ 'ವಾಗ್ಗೇಯಕಾರರೂ ಹೌದು'. ಅನೇಕ ಕೃತಿಗಳನ್ನೂ ಸ್ವರಜತಿಗಳನ್ನೂ ವರ್ಣಗಳನ್ನೂ ತಿಲ್ಲಾನಗಳನ್ನೂ ರಚಿಸಿದ್ದಾರೆ. ಒಟ್ಟಾರೆ ೫೩ ಕ್ಕೂ ಹೆಚ್ಚು ರಚನೆಗಳನ್ನು ರಚಿಸಿದ್ದಾರೆ. ವರ್ಣಗಳು ವಿದ್ವತ್ಪೂರ್ಣವಾಗಿದ್ದು, ಖಂಡದೃವ, ಮಿಶ್ರತ್ರಿಪುಟ, ಖಂಡ, ತ್ರಿಪುಟದಂತಹ ತಾಳಗಳಲ್ಲಿದ್ದು ೨ ರಾಗಮಾಲಿಕಾ ವರ್ಣಗಳು ೧೪, ೧೮ ರಾಗಗಳನ್ನು ಹೊಂದಿವೆ. 'ಶೇಷ ಅಂಕಿತ'ದಲ್ಲಿ ರಚನೆಗಳನ್ನು ಮಾಡಿದ್ದು ಕೆಲವು ಮಾತ್ರ 'ಜಯಚಾಮರಾಜ ಒಡೆಯರ್ 'ಮತ್ತು 'ಕೃಷ್ಣರಾಜ ಒಡೆಯರ್ 'ನಾಮಾಂಕಿತದಲ್ಲಿದೆ. ಅವರ 'ತಿಲ್ಲಾನಗಳು' ಬಹು ಆಕರ್ಷಣೀಯವಾಗಿ ಹೆಣೆದಿರುವಂತವು. 'ರಾಲ್ಲಪಲ್ಲಿ ಅನಂತರಾಮ ಶರ್ಮ', ಹಾಗೂ 'ವಾಸುದೇವಾಚಾರ್ಯರು' ಅವರ ಕೃತಿಗಳನ್ನು ಶ್ಲಾಘಿಸಿದ್ದಾರೆ. ಶೇಷಣ್ಣ ನವರ ಎಲ್ಲಾ ರಚನೆಗಳನ್ನೂ 'ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾ'ದವರು ಪ್ರಕಟಿಸಿದ್ದಾರೆ. 'ಮೈಸೂರು ವಾಗ್ಗೇಯಕಾರರು' ಶೀರ್ಷಿಕೆಯಡಿಯಲ್ಲಿ 'ವಿದುಷಿ. ಎಂ ಎಸ್ ಶೀಲಾ'ರವರ 'ಹಂಸಧ್ವನಿ ಸಂಸ್ಥೆ'ಯಿಂದ ಹೊರಬಂದ ಅನೇಕ ಸಿ.ಡಿ ಗಳಲ್ಲಿ 'ವೀಣೆ ಶೇಷಣ್ಣ'ನವರ ರಚನೆಗಳೂ ಇದ್ದು ಇದನ್ನೂ ’'ಗುರು ಶೀಲಾ'” ರವರೇ ಹಾಡಿದ್ದಾರೆ.

ಬ್ರಿಟಿಷ್ ಸಾಮ್ರಾಟ, ೫ನೇ ಜಾರ್ಜ್, ವೀಣಾವಾದನದಿಂದ ಪ್ರಭಾವಿತ[ಬದಲಾಯಿಸಿ]

'ಬ್ರಿಟಿಷ್ ಚಕ್ರವರ್ತಿ, ೫ ನೇ ಜಾರ್ಜ್ ಪಟ್ಟಾಭಿಷೇಕ,' 'ದೆಹಲಿ'ಯಲ್ಲಿ ನಡೆದಾಗ, 'ಶೇಷಣ್ಣನವರ ವೀಣಾವಾದನದ ಕಛೇರಿ,' ಇತ್ತು. ಅದ್ಭುತವೂ ಸೋಜಿಗವೂ ಎನ್ನಿಸಿದ ಈ ವೀಣಾವಾದನದ ಮಾಧುರ್ಯದಿಂದ ಚಕ್ರವರ್ತಿಯವರು ಪ್ರಭಾವಿತರಾಗಿ, ಆ ಸವಿನೆನಪಿಗೆ 'ಶೇಷಣ್ಣನವರ ತೈಲ-ಚಿತ್ರವನ್ನು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆಯ ಕಲಾಮಂದಿರ' ದಲ್ಲಿ ಕೊಂಡೊಯ್ದು, ಇರಿಸಿದ್ದಾರೆ.

ಶೇಷಣ್ಣನವರ ಶಿಷ್ಯವೃಂದ[ಬದಲಾಯಿಸಿ]

ಶೇಷಣ್ಣನವರು ’ಮೈಸೂರು ವೀಣಾ ಪರಂಪರೆ ’ಗೆ, ದೊಡ್ಡ ” ಸಂಗೀತ ಶಾಸ್ತ್ರದಲ್ಲಿ ನಿಷ್ಣಾತ ಶಿಷ್ಯವೃಂದ" ವನ್ನೇ ತಮ್ಮ ಅನುಪಮ ಕೊಡುಗೆಯಾಗಿ ಸಲ್ಲಿಸಿದ್ದಾರೆ. ಅವರಲ್ಲಿ ಪ್ರಮುಖರು,

 • ವೀಣಾ ವೆಂಕಟಗಿರಿಯಪ್ಪ
 • ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರಿ,
 • ಭೈರವಿ,
 • ಲಕ್ಷ್ಮೀನಾರಣಪ್ಪ,
 • ಕಲಾವಿದ ವೆಂಕಟಪ್ಪ,
 • ನಾರಾಯಣ ಅಯ್ಯರ್,
 • ಎ,ಎಸ್. ಚಂದ್ರಶೇಖರಯ್ಯ,
 • ಎಂ.ಎಸ್. ಭೀಮರಾವ್,
 • ತಿರುಮಲೆ ರಾಜಮ್ಮ,
 • ಸ್ವರಮೂರ್ತಿ ವಿ.ಎನ್.ರಾವ್ ಮೊದಲಾದವರು.
 • ಇವರ ಶಿಷ್ಯರಾಗಿದ್ದು, ಬಿಡಾರಂ ಕೃಷ್ಣಪ್ಪನವರು, ಸುಬ್ಬಣ್ಣನವರು ಮೈಸೂರು ವಾಸುದೇವಚಾರ್ಯರು ಶೇಷಣ್ಣನವರನ್ನು ಗುರುಗಳಂತೆಯೇ ಭಾವಿಸಿದ್ದರು.

ಜಲತರಂಗ-ವಾದನದ ಸಂಗೀತ ಕಾರ್ಯಕ್ರಮ'[ಬದಲಾಯಿಸಿ]

ಒಮ್ಮೆ ಉತ್ತರಭಾರತದಿಂದ ಒಬ್ಬ 'ಜಲತರಂಗ ವಾದ್ಯದ ಸಂಗೀತಗಾರರು', 'ಮೈಸೂರು ಆಸ್ಥಾನ'ದಲ್ಲಿ ಒಂದು ಸುಂದರವಾದ ಕಾರ್ಯಕ್ರಮ ಕೊಟ್ಟರು. ಪ್ರಭುಗಳು ಸಂತೋಷಗೊಂಡಿದ್ದಲ್ಲದೆ ಅತ್ಯಂತ ಪ್ರಭಾವಿತರಾಗಿದ್ದರು. ಶೋತೃಗಳ ಸಾಲಿನಲ್ಲಿ ಕುಳಿತು ಸಂಗೀತವನ್ನು ಆಲಿಸುತ್ತಿದ್ದ 'ಶೇಷಣ್ಣ'ನವರು, ಕಾರ್ಯಕ್ರಮ ಮುಗಿದನಂತರ ಅರಸರನ್ನು ಭೆಟ್ಟಿಮಾಡಿ, 'ಜಲತರಂಗವಾದ್ಯ'ದ ಪರಿಕರಗಳನ್ನು ರಾತ್ರಿ, ತಮ್ಮ ಹತ್ತಿರ ಇಟ್ಟುಕೊಳ್ಳಲು ಅನುಮತಿ ಕೋರಿದರು. 'ಸಂಗೀತ'ದಲ್ಲಿ ಎಷ್ಟು ಸಮರ್ಪಣಾಭಾವವಿತ್ತೆಂದರೆ, ರಾತ್ರಿಯೆಲ್ಲಾ ಸಾಧನೆಮಾಡಿ ಮಾರನೆಯ ದಿನ ರಾತ್ರಿ ಮಹಾರಾಜರ ಮುಂದೆ 'ಜಲತರಂಗ ವಾದನ ದ ಕಛೇರಿ' ಕೊಟ್ಟರು. ಕಾರ್ಯಕ್ರಮ ಮುಗಿದ ಮೇಲೆ ಆ ಸಂಗೀತಕಾರರು, ಮಂಚದಮೇಲೆ ಬಂದು 'ಶೇಷಣ್ಣ'ನವರನ್ನು ಅಭಿನಂದಿಸಿದರಂತೆ. ಈ ಸಂಗತಿ, ಅವರ 'ಆಸಕ್ತಿ' ಮತ್ತು ಹೊಸದನ್ನು ಕಲಿತುಕೊಳ್ಳುವ 'ಅಸ್ತೆ'ಯನ್ನು ದರ್ಶಾಯಿಸುತ್ತದೆ.

ಮೈಸೂರು ಶೈಲಿಯ ವೀಣೆನುಡಿಸುವ ಪದ್ಧತಿ[ಬದಲಾಯಿಸಿ]

ಈಗಿನ ವೀಣೆ ನುಡಿಸುವ 'ಮೈಸೂರು ಶೈಲಿ', ಪ್ರಖ್ಯಾತವಾಗಿದೆ. ಇದನ್ನು ಪ್ರಸಿದ್ಧಿಪಡಿಸಿದವರು, ಶೇಷಣ್ಣನವರೇ. ಆದರೆ ಇದಕ್ಕೆ ಮೊದಲು ಸಿತಾರಿನಂತ ವೀಣೆಯ ಬುರುಡೆಯನ್ನು ತೊಡೆಗೆ ಒತ್ತಿಕೊಂಡು ನುಡಿಸುವ ಪದ್ಧತಿಯಿತ್ತು. ಆದರೆ ಶೇಷಣ್ಣನವರು, ಪದ್ಮಾಸನದಲ್ಲಿ ಕುಳಿತು, ಈಗಿನ ತರಹ ವೀಣೆಯನ್ನು ತಮ್ಮ ಎರದೂ ತೊಡೆಗಳ ಮೇಲೆ ಇಟ್ಟುಕೊಂಡು ನುಡಿಸುವ ಪರಿಪಾಠವನ್ನು ಜಾರಿಗೆ ತಂದರು. ತಮ್ಮ ಎರಡು ಬೆರಳುಗಳಿಂದ ತಂತಿಗಳನ್ನು ಮೀಟುವುದರ ಜೊತೆಗೆ, ಎರಡೂ ತಂತಿಗಳು ಒಂದಕ್ಕೊಂದು ತಗುಲದಂತೆ ಏರ್ಪಾಟು ಮಾಡಿಕೊಳ್ಳುವ ಪದ್ಧತಿಯೂ ಅವರದೇ.

ಗುಣಕ್ಕೆ ಮತ್ಸರವಿಲ್ಲವೆನ್ನುವ ಹೇಳಿಕೆಯ ಪ್ರತಿಪಾದಕ[ಬದಲಾಯಿಸಿ]

ಹೊರನಾಡಿನಿಂದ ಬಂದ ಕಲಾವಿದರು, ಮೈಸೂರು ದರ್ಬಾರಿನಲ್ಲಿ ’ವಿನಿಕೆ”ಮಾಡಬೇಕಾಗಿದ್ದರೆ, ಮೊದಲು ಶೇಷಣ್ಣನವರರಿಗೆ ತೃಪ್ತಿ ದೊರೆತರೆ ಮಾತ್ರ, ಎಂಬ ಮಹಾರಾಜರ ಕಟ್ಟಪ್ಪಣೆ ಇತ್ತು. ಶೇಷಣ್ಣನವರು 'ವಿದ್ಯಾಪಕ್ಷಪಾತಿಗಳು,' 'ಅರ್ಹರಾದ ಕಲಾವಿದರ'ನ್ನು ಅತ್ಯಂತ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ’ಗುಣಕ್ಕೆ ಮತ್ಸರವಿಲ್ಲ’ ಎನ್ನುವ ಹೇಳಿಕೆಯ ಪ್ರತಿಪಾದಕರಾಗಿದ್ದರು.

ಶೇಷಣ್ಣನವರ ಮನೆ, " ನಾದದೇವಿಯ ಔಪಾಸನೆಯ ತಾಣ ”ವಾಗಿತ್ತು.[ಬದಲಾಯಿಸಿ]

ಪ್ರತಿದಿನವೂ ಶೇಷಣ್ಣನವರ ಮನೆಯಲ್ಲಿ 'ವಿದ್ವಾಂಸರ ಗೋಷ್ಟಿ ಕಛೇರಿಗಳು' ನಡೆದಿರುತ್ತಿತ್ತು. ಇದಲ್ಲದೆ, ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿ ಹಬ್ಬಗಳಲ್ಲಿ ೧ಂ ದಿನಗಳು, ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ತಮ್ಮ ಮನೆಯ ಮಹಡಿಯ ಮೇಲೆ ವೀಣಾಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅರಮನೆಯಲ್ಲಿ ಹೋಗಲಾರದ ಶ್ರೋತೃಗಳಿಗೆ ಈ ಸೌಲಭ್ಯ ಮುದನೀಡಿತ್ತು. ಶೇಷಣ್ಣನವರು ತಮ್ಮ ಅಂತ್ಯದದಿನಗಳಲ್ಲಿ "ನನಗೆ ಸಾವಿನ ಭಯವಿಲ್ಲ ; ಆದರೆ, ಈ ವೀಣೆಯನ್ನು ಬಿಟ್ಟು ನಾನೊಬ್ಬನೆ ಹೋಗಬೇಕಲ್ಲಾ ಎನ್ನುವ ಸಂಕಟ," ಎನ್ನುತ್ತಿದ್ದರು.

ನಿಧನ[ಬದಲಾಯಿಸಿ]

’ವೀಣೆ ಶೇಷಣ್ಣ"ನವರು”, ಜುಲೈ, ೨೫, ೧೯೨೬ ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

ಲೇಖನ-' ಮಹಾನ್ ಕಲಾವಿದ ವೀಣೆ ಶೇಷಣ್ಣ

 • -’ವಿದುಷಿ. ’ಶ್ಯಾಮಲಾ ಪ್ರಕಾಶ್’, ಅಂಕಣ, ’ನಾದೋಪಾಸನ’, ’ಸ್ನೇಹ ಸಂಬಂಧ,’ ಮಾಸಪತ್ರಿಕೆ, ಕರ್ನಾಟಕ ಸಂಘ, ಮುಂಬಯಿ, ಸೆಪ್ಟೆಂಬರ್, ೨ಂ೧ಂ, ಪುಟ-೧೭.
 • ಇದರಲ್ಲಿ ದಾಖಲಿಸಿದ ಅಪರೂಪದ ವಿಚಾರವೊಂದು ಇಲ್ಲಿ ಉದ್ಧರಿಸಲು ಉಪಯುಕ್ತವಾದದ್ದು. 'ವೀಣೆ ಶೇಷಣ್ಣನವರ ಅಪಾರ ಕನ್ನಡದ ಶ್ರೋತೃಗಳು ಹಿಗ್ಗುವ ವಿಚಾರ. ಈ ಲೇಖನದ ಮೇಲ್ಪದರದಲ್ಲಿ ದರ್ಶಾಯಿಸಿರುವ 'ವೀಣೆ ಮಾಂತ್ರಿಕ ಶೇಷಣ್ಣನವರ ಭಾವಚಿತ್ರ', ಮುಂಬಯಿನ ಮಾಹೀಮ್ ನಲ್ಲಿರುವ 'ಕರ್ನಾಟಕ ಸಂಘ'ದಲ್ಲಿ ಸನ್, ೧೯೭೮ ರಲ್ಲಿ ಅನಾವರಣಗೊಂಡಿತ್ತು. ಅಂದು ಜರುಗಿದ 'ಕನ್ನಡ ಕಾರ್ಯಕ್ರಮ'ದಲ್ಲಿ ವೀಣೆ ಶೇಷಣ್ಣನವರ ಮರಿಮಗ, 'ಶ್ರೀ, ಮೈಸೂರು, ವಿ. ಸುಬ್ರಹ್ಮಣ್ಯಂರವರು, ಉಪಸ್ಥಿತರಿದ್ದರಂತೆ. ಸುಬ್ರಹ್ಮಮಣ್ಯಂರವರು, ವಿದ್ವಾಂಸರೂ, ಸುಪ್ರಸಿದ್ಧ ಸಂಗೀತ ವಿಮರ್ಶಕರೂ, ಹಾಗೂ ಹಿರಿಯ ಲೇಖಕರೂ, ಆಗಿದ್ದಾರೆ. ತಮ್ಮ ಹಿರಿಯ 'ತಾತಶ್ರೀ'ಗಳ ೩೨ ವರ್ಷಗಳ ಹಿಂದಿನ ಅಪರೂಪದ ಚಿತ್ರದ ಪ್ರತಿಯನ್ನು ಈಗ ಪಡೆಯಲು ಅವರು ಇಚ್ಛಿಸಿದರಂತೆ. ಹೀಗಾಗಿ, 'ಕರ್ನಾಟಕ ಸಂಘದ ಪದಾಧಿಕಾರಿಗಳು' ಆ ಚಿತ್ರವನ್ನು ಹುಡುಕಿ, ಕಳುಹಿಸಿರುತ್ತಾರೆ.

ವಿಷಯಸಂಗ್ರಹ ಮೂಲಗಳು[ಬದಲಾಯಿಸಿ]

'ಮೈಸೂರು ಸುಬ್ರಹ್ಮಣ್ಯಂ', 'ಡಾ ವಿ. ಎಸ್. ಸಂಪತ್ಕುಮಾರಾಚಾರ್ಯ', 'ಪ್ರೊ. ವಿ. ರಾಮರತ್ನಂ', 'ಮೈಸೂರು ಎ. ರಾಜಾರಾವ್' ರವರ, ಲೇಖನಗಳು, ’ಸಂಗೀತ ಸಮಯ’-'ಎಸ್. ಕೃಷ್ಣ ಮೂರ್ತಿ'.