ವಿಜಯಪುರ ನಗರ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯ ಇಂದ
Jump to navigation Jump to search

ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ವಿಜಯಪುರ ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ.

ಕ್ಷೇತ್ರದ ಇತಿಹಾಸ[ಬದಲಾಯಿಸಿ]

1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ ಬಿಜೆಪಿಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ ಬಸನಗೌಡ ಪಾಟೀಲ(ಯತ್ನಾಳ) ಮೂಲಕ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು.

ವಿಜಯಪುರ ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ.

ಸೂಫಿ ನಾಡಿನಲ್ಲಿ ಧರ್ಮ ರಾಜಕಾರಣ[ಬದಲಾಯಿಸಿ]

ವಿಜಯಪುರ ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.

1980ರ ದಶಕದಿಂದ ಕ್ಷೇತ್ರದ ರಾಜಕಾರಣ ಧರ್ಮಾಧಾರಿತವಾಗಿದೆ. 90ರ ದಶಕದಿಂದ ಈಚೆಗೆ ಚುನಾವಣೆ ಹಿಂದೂ-ಮುಸ್ಲಿಂ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ವೋಟ್‌ ಬ್ಯಾಂಕ್‌ ಭದ್ರಗೊಳಿಸಿ ಕೊಳ್ಳಲು, ಜಿಲ್ಲೆಗೊಂದು ಅಲ್ಪ ಸಂಖ್ಯಾತರಿಗೆ ಕ್ಷೇತ್ರ ಎಂಬ ತನ್ನ ಆಂತರಿಕ ನೀತಿಯಂತೆ ನಾಲ್ಕು ದಶಕಗಳಿಂದ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಗೆ ವಿಜಯಪುರದಿಂದ ಟಿಕೆಟ್‌ ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಜಪ ಆರಂಭಗೊಂಡ ಬಳಿಕ ಬಿಜೆಪಿ, ಹಿಂದೂತ್ವ ಪ್ರತಿಪಾದಿಸುವ ವ್ಯಕ್ತಿಗಳಿಗೆ ಟಿಕೆಟ್‌ ಘೋಷಿಸಿ, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಜೆಡಿಎಸ್‌ ಎರಡೂ ಪಕ್ಷಗಳ ಪಾರಮ್ಯ ಮುರಿಯಲು ಯತ್ನಿಸಿದರೂ, ಫಲ ಸಿಕ್ಕಿಲ್ಲ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ, ಅದರಲ್ಲೂ ಈಚೆಗಿನ ವರ್ಷಗಳಲ್ಲಿ ಪಕ್ಷ, ವ್ಯಕ್ತಿಗಿಂತ ಧರ್ಮಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ.

ತುರ್ತು ಪರಿಸ್ಥಿತಿ ಬಳಿಕ 1978ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜನತಾ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಮುಸ್ಲಿಂ ಸಮುದಾಯದ ಬಕ್ಷಿ ಸೈಯ್ಯದ್‌ ಹಬೀಬುದ್ದೀನ್‌ ಶಾಮನಸಾಬ ಅವರನ್ನು ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ ಬಕ್ಷಿ ಕಾಂಗ್ರೆಸ್‌ ಸೋಲಿಸಿದರು. ನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್‌ ಮುಸ್ಲಿಂ ಸಮಾಜದ ವ್ಯಕ್ತಿಯನ್ನೇ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿರುವುದು ಇಲ್ಲಿನ ವಿಶೇಷ.

ಹೆಚ್ಚು ಮತದ ದಾಖಲೆ: ವಿಜಯಪುರ ಜಿಲ್ಲಾ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಮತ ಗಳಿಸಿ ಆಯ್ಕೆಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಬಿಜೆಪಿಯಿಂದ 2004ರಲ್ಲಿ ವಿಜಯಿಯಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೆ ಸಲ್ಲುತ್ತದೆ. ಈ ಚುನಾವಣೆಯಲ್ಲಿ ಅಪ್ಪು 70001 ಮತ ಗಳಿಸಿದ್ದರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ನೂತನವಾಗಿ ಅಸ್ತಿತ್ವಕ್ಕೆ ಬಂದಿತು. ಈ ಹಿಂದಿನ ಚುನಾವಣೆಯಲ್ಲಿ ಗಳಿಸಿದ ಮತಕ್ಕಿಂತ ಅರ್ಧದಷ್ಟು ಮತ ಪಡೆದ ಅಪ್ಪು ಮತ್ತೆ ಬಿಜೆಪಿ ಶಾಸಕರಾಗಿ ಆಯ್ಕೆಯಾದರು.

1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಡಾ.ಸರದಾರ ಬಸವರಾಜ ನಾಗೂರ ಪಕ್ಷೇತರರಾಗಿ ಆಯ್ಕೆಯಾಗಿದ್ದನ್ನು ಬಿಟ್ಟರೆ, ಉಳಿದ 12 ಚುನಾವಣೆಗಳಲ್ಲಿ ವಿಜಯಪುರದ ಮತದಾರ ಪಕ್ಷಕ್ಕೆ ಮನ್ನಣೆ ನೀಡಿದ್ದಾರೆ.

1983ರಲ್ಲೇ ವಿಜಯಪುರ ಕ್ಷೇತ್ರದಲ್ಲಿ ಕಮಲ ಅರಳಿದ ಇತಿಹಾಸವಿದೆ. ಇಲ್ಲಿವರೆಗೂ ಕಾಂಗ್ರೆಸ್‌ ಏಳು ಬಾರಿ, ಬಿಜೆಪಿ ನಾಲ್ಕು ಬಾರಿ, ಜನತಾ ಪಕ್ಷದ ಅಭ್ಯರ್ಥಿಗಳು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರದ ವಿಶೇಷತೆ[ಬದಲಾಯಿಸಿ]

  • ಕೆ.ಟಿ.ರಾಠೋಡರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು.
  • 1983ರಲ್ಲಿ ಚಂದ್ರಶೇಖರ ಗಚ್ಚಿನಮಠರು ವಿಜಯಪುರ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ದಾಖಲೆಯಿದೆ.
  • ಎಮ್.ಎಲ್.ಉಸ್ತಾದರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು.
  • 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರು ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು.
  • ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ.
  • ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ.

ಜನಪ್ರತಿನಿಧಿಗಳ ವಿವರ[ಬದಲಾಯಿಸಿ]

ವರ್ಷ ವಿಧಾನ ಸಭಾ ಕ್ಷೆತ್ರ ವಿಜೇತರು ಪಕ್ಷ ಮತಗಳು ಉಪಾಂತ ವಿಜೇತರು ಪಕ್ಷ ಮತಗಳು
ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಕರ್ನಾಟಕ ರಾಜ್ಯ
2018 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) ಬಿ.ಜೆ.ಪಿ. 76308 ಅಬ್ದುಲ್ ಹಮೀದ್ ಮುಸ್ರೀಫ್ ಕಾಂಗ್ರೇಸ್ 69895
2013 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಡಾ.ಮಕಬುಲ್ ಬಾಗವಾನ ಕಾಂಗ್ರೇಸ್ 48615 ಬಸನಗೌಡ ಪಾಟೀಲ(ಯತ್ನಾಳ) ಜೆ.ಡಿ.ಎಸ್ 39235
2008 ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿ.ಜೆ.ಪಿ. 34217 ಎಸ್.ಎ.ಹೊರ್ತಿ ಕಾಂಗ್ರೇಸ್ 16653
2004 ವಿಜಯಪುರ ವಿಧಾನಸಭಾ ಕ್ಷೇತ್ರ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿ.ಜೆ.ಪಿ. 70001 ಎಮ್.ಎಲ್.ಉಸ್ತಾದ ಕಾಂಗ್ರೇಸ್ 45968
1999 ವಿಜಯಪುರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ ಕಾಂಗ್ರೇಸ್ 42902 ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿ.ಜೆ.ಪಿ. 39749
1994 ವಿಜಯಪುರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ(ಯತ್ನಾಳ) ಬಿ.ಜೆ.ಪಿ. 45286 ಎಮ್.ಎಲ್.ಉಸ್ತಾದ ಜೆ.ಡಿ.ಎಸ್. 29158
1989 ವಿಜಯಪುರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ ಕಾಂಗ್ರೇಸ್ 45623 ಎಸ್.ಆರ್.ಔರಂಗಾಬಾದ್ ಜೆ.ಡಿ.ಎಸ್ 34355
1985 ವಿಜಯಪುರ ವಿಧಾನಸಭಾ ಕ್ಷೇತ್ರ ಎಮ್.ಎಲ್.ಉಸ್ತಾದ ಕಾಂಗ್ರೇಸ್ 26829 ಬಿ.ಆರ್.ಪಾಟೀಲ ಜೆ.ಎನ್.ಪಿ. 25914
1983 ವಿಜಯಪುರ ವಿಧಾನಸಭಾ ಕ್ಷೇತ್ರ ಚಂದ್ರಶೇಖರ ಗಚ್ಚಿನಮಠ ಬಿ.ಜೆ.ಪಿ 28795 ಖಾಜಿಹುಸೇನ್ ಜಾಹಾಗೀರದಾರ ಕಾಂಗ್ರೇಸ್ 24974
1978 ವಿಜಯಪುರ ವಿಧಾನಸಭಾ ಕ್ಷೇತ್ರ ಹಬೀಬುದ್ದೀನ್ ಬಕ್ಷಿ ಜೆ.ಎನ್.ಪಿ. 26191 ಕೆ.ಟಿ.ರಾಠೋಡ ಕಾಂಗ್ರೇಸ್ 16663
ವಿಜಯಪುರ ವಿಧಾನಸಭಾ ಕ್ಷೇತ್ರ ಮೈಸೂರು ರಾಜ್ಯ
1972 ವಿಜಯಪುರ ವಿಧಾನಸಭಾ ಕ್ಷೇತ್ರ ಕೆ.ಟಿ.ರಾಠೋಡ ಕಾಂಗ್ರೇಸ್ 23205 ವಿಷ್ಣು ಕೇಶವ ಪಂಡಿತ ಎನ್.ಸಿ.ಓ. 13970
1967 ವಿಜಯಪುರ ವಿಧಾನಸಭಾ ಕ್ಷೇತ್ರ ಬಸನಗೌಡ ಪಾಟೀಲ ಕಾಂಗ್ರೇಸ್ 18818 ಮಲ್ಲಪ್ಪ ಕರಬಸಪ್ಪ ಸುರಪುರ ಸ್ವತಂತ್ರ 5396
1962 ವಿಜಯಪುರ ವಿಧಾನಸಭಾ ಕ್ಷೇತ್ರ ರೇವಣಸಿದ್ದಪ್ಪ ನಾವದಗಿ ಕಾಂಗ್ರೇಸ್ 13828 ನಬೀಸಾಬ್ ಬಾಳಾಸಿಂಗ್ ಸ್ವತಂತ್ರ 4846
1957 ವಿಜಯಪುರ ವಿಧಾನಸಭಾ ಕ್ಷೇತ್ರ ಡಾ.ಬಸವರಾಜ ನಾಗೂರ ಪಕ್ಷೇತರ 11827 ಮೊಹದ್ದಿನ್ ಮಹಾಲ್ದಾರ ಕಾಂಗ್ರೇಸ್ 7995
ವಿಜಯಪುರ ವಿಧಾನಸಭಾ ಕ್ಷೇತ್ರ ಬಾಂಬೆ ರಾಜ್ಯ
1951 ವಿಜಯಪುರ ವಿಧಾನಸಭಾ ಕ್ಷೇತ್ರ ಮಲ್ಲನಗೌಡ ಪಾಟೀಲ ಕಾಂಗ್ರೇಸ್ 10406 ನಬೀಸಾಬ್ ಬಾಳಾಸಿಂಗ್ ಸಿ.ಪಿ.ಐ. 6069