ವಿಷಯಕ್ಕೆ ಹೋಗು

ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೇಕಾರ ಇರುವೆ.

ಇರುವೆಯು ಪ್ರಾಣಿಶಾಸ್ತ್ರದ ವರ್ಗೀಕರಣದ ಪ್ರಕಾರ ಹೈಮೆನೋಪೆಟ್ರಾ ವರ್ಗದಲ್ಲಿ ಫಾರ್ಮಿಸೀಡೇ ಕುಟುಂಬಕ್ಕೆ ಸೇರಿದ ಜೀವಿ. ಕಣಜ ಮತ್ತು ದುಂಬಿಗಳು ಸಹ ಈ ವರ್ಗಕ್ಕೆ ಸೇರಿದ ಜೀವಿಗಳಾಗಿವೆ. ಇರುವೆಗಳಲ್ಲಿ ೧೨,೦೦ ಕ್ಕೂ ಅಧಿಕ ತಳಿಗಳಿವೆ. ಉಷ್ಣವಲಯದಲ್ಲಿ ಇರುವೆಗಳ ಪ್ರಬೇಧ ಉಳಿದೆಡೆಗಿಂತ ಹೆಚ್ಚು. ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬ ಜೀವನಕ್ಕೆ ಹೆಸರಾಗಿವೆ. ಇರುವೆಗಳ ಒಂದು ಗೂಡಿನಲ್ಲಿ ಕಲವೊಮ್ಮೆ ಲಕ್ಷಾಂತರ ಇರುವೆಗಳು ನೆಲೆಸುವುದುಂಟು. ಇರುವೆಗಳು ತಮ್ಮ ಶಾರೀರಿಕ ಗುಣಗಳಿಗನುಗುಣವಾಗಿ ಅರೆಬಂಜೆ ಅಥವಾ ಪೂರ್ಣಬಂಜೆ ಹೆಣ್ಣಿರುವೆಗಳು, ಗಂಡಿರುವೆಗಳು ಮತ್ತು ರಾಣಿ ಇರುವೆಗಳೆಂದು ವಿಭಾಗಿಸಲ್ಪಡುತ್ತವೆ. ರಾಣಿಯ ಹೊರತಾಗಿ ಇತರ ಹೆಣ್ಣಿರುವೆಗಳು ಕೆಲಸಗಾರ ಇರುವೆಗಳು (ಹಲ ಜಾತಿಯವು), ಸೈನಿಕ ಇರುವೆಗಳೆಂದು ಇನ್ನೆರಡು ಉಪಗುಂಪುಗಳಿಗೆ ಸೇರಿರುತ್ತವೆ. ಗಂಡಿರುವೆಯನ್ನು ಡ್ರೋನ್ ಎಂದು ಸಹ ಕರೆಯಲಾಗುವುದು. ನೆಲದಡಿಯಲ್ಲಿನ ಇರುವೆಗೂಡು ಬಲು ವಿಸ್ತಾರವಾದ ಪ್ರದೇಶವನ್ನು ಆವರಿಸಿರುತ್ತದೆ. ಇರುವೆಗಳು ವಿಶ್ವದ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ. ಆದರೆ ಅಂಟಾರ್ಕಟಿಕ, ಗ್ರೀನ್‍ಲ್ಯಾಂಡ್, ಐಸ್ಲೆಂಡ್, ಹವಾಯ್, ಮತ್ತು ಪಾಲಿನೇಷ್ಯಾಗಳಲ್ಲಿ ಸ್ಥಳೀಯ ಇರುವೆಗಳು ಕಂಡುಬರುವುದಿಲ್ಲ. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ ೧೫% ದಿಂದ ೨೫% ರಷ್ಟಾಗುವುದು. ಬಿಳಿ ಇರುವೆಯೆಂದು ಕರೆಯಲ್ಪಡುವ ಗೆದ್ದಲು ಹುಳಗಳು ಇರುವೆಗಳಂತೆಯೇ ಸಂಘಟಿತ ಕುಟುಂಬಜೀವಿಗಳಾದರೂ ಇರುವೆಗಳ ಗುಂಪಿಗೆ ಸೇರಿಲ್ಲ. ಹಾಗೆಯೇ ದೊಡ್ಡ ಇರುವೆಯನ್ನು ಹೋಲುವ ವೆಲ್ವೆಟ್ ಇರುವೆಯು ವಾಸ್ತವದಲ್ಲಿ ರೆಕ್ಕೆರಹಿತ ಹೆಣ್ಣು ಕಣಜ.