ವಿಷಯಕ್ಕೆ ಹೋಗು

ಮಹಾವೀರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವರ್ಧಮಾನ ಇಂದ ಪುನರ್ನಿರ್ದೇಶಿತ)

ಭಗವಾನ್ ಮಹಾವೀರ
೨೪ನೇ ಜೈನ ತೀರ್ಥಂಕರರು
ಮಹಾವೀರರ ಮಿನಿಯೇಚರ್ ಕಲಾಕೃತಿ
ವಿವರಗಳು
ಇತರ ಹೆಸರುಗಳು:ವರ್ಧಮಾನ, ಸನ್ಮತಿನಾಯಕ, ವೀರ, ಮಹಾ-ಅತಿವೀರ, ಶ್ರಮಣ, ನಿಗ್ಗಂಥ
ಚಾರಿತ್ರಿಕ ಕಾಲ599-527 BC
ಕುಟುಂಬ
ತಂದೆಸಿದ್ಧಾರ್ಥ
ತಾಯಿ:ತ್ರಿಶಲಾ ಅಥವಾ ಪ್ರಿಯಕಾರಿಣಿ
ರಾಜವಂಶಇಕ್ಷ್ವಾಕು
ಸ್ಥಳ
ಜನನವೈಶಾಲಿ ನಗರದ ಬಳಿಯ ಕುಂಡಲಗ್ರಾಮ
ನಿರ್ವಾಣಬಿಹಾರದ ನಳಂದದ ಬಳಿಯ ಪಾವಾಪುರಿ

ಮಹಾವೀರ ಅಥವಾ ವರ್ಧಮಾನ ಮಹಾವೀರ (ಕಾಲ ಸುಮಾರು ಕ್ರಿ.ಪೂ. ೫೯೯ ರಿಂದ ೫೨೭ ಅಥವಾ ಕ್ರಿ.ಪೂ. ೫೪೯ ರಿಂದ ೪೭೭ರವರೆಗೆ ) ಜೈನ ಧರ್ಮದ ೨೪ನೇ (ಕೊನೆಯ) ತೀರ್ಥಂಕರರು ಹಾಗೂ ಈ ಧರ್ಮದ ಪ್ರಮುಖ ಸಿದ್ಧಾಂತಗಳ ಪ್ರಚಾರಕರು.

ಜೈನ ಧರ್ಮ

[ಬದಲಾಯಿಸಿ]

"ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದ ಕೂಡಲೇ ಇಲ್ಲಿ ಗೃಹಸ್ಥರನ್ನು ಕಡೆಗಣಿಸಲಾಗಿದೆ ಎಂದರ್ಥವಲ್ಲ. ಗೃಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಐದು ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ತೀರ್ಥಂಕರರು

[ಬದಲಾಯಿಸಿ]

ಇಡೀ ಜಗತ್ತಿಗೆ ತಿಳಿದಿರುವಂತೆ ಈ ಬಹುಪ್ರಾಚೀನ ಧರ್ಮದ ಉಗಮ ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರ ಆವಿರ್ಭಾವದೊಂದಿಗೆ ಉಂಟಾಯಿತು. ಆದರೂ 24ನೆಯ ತೀರ್ಥಂಕರರಾದ ಭಗವಾನ್ ಮಹಾವೀರರನ್ನೇ ಈ ಧರ್ಮದ ಪ್ರತಿಷ್ಠಾಪಕರೆಂದು ಕರೆದು ಗೌರವ ನೀಡಲಾಗಿದೆ. ‘ತೀರ್ಥಂಕರ’ ಶಬ್ದದ ಅರ್ಥ ‘ತೀರ್ಥಂ ಕರೋತಿ ಇತಿ’ – ಯಾರ ಚರಣ wjiwಸ್ಪರ್ಶದಿಂದ ಅತಿ ಸಾಮಾನ್ಯ ಸ್ಥಳವೂ ಮಹಾನ್ ತೀರ್ಥಕ್ಷೇತ್ರವಾಗಿ ಪರಿಣಮಿಸುವುದೋ ಅವರು. ಹೋಲಿಕೆ ಸಾಧಾರಣವಾಗಿ ಸರಿಯಲ್ಲದೇ ಹೋದರೂ, ಹಿಂದೂಧರ್ಮದ ಅವತಾರಗಳೊಂದಿಗೆ ಈ ತೀರ್ಥಂಕರರನ್ನು ಹೋಲಿಸಬಹುದು. ತೀರ್ಥಂಕರರ ಜನ್ಮ-ಕರ್ಮಗಳು ದಿವ್ಯ, ಅಭೂತಪೂರ್ವ. ಅವರ ಸಾಧನೆಗಳು ಸಾಧಾರಣ ಮಾನವನ ಕಲ್ಪನೆಯನ್ನೂ ಮೀರಿದವು.

ಇತಿಹಾಸದ ಪ್ರಕಾರ ನೋಡಿದರೆ ಜೈನಧರ್ಮದ ಪ್ರಾಚೀನತೆಯ ಅರಿವಾಗುತ್ತದೆ. ಮಹಾಭಾರತದ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ 22ನೆಯ ತೀರ್ಥಂಕರರಾದ ಭಗವಾನ್ ನೇಮಿನಾಥರು ಧರ್ಮಪ್ರಚಾರ ಮಾಡುತ್ತಿದ್ದರು. ಶ್ರೀಮದ್ಭಾಗವತದಲ್ಲಿ ಮೊದಲ ತೀರ್ಥಂಕರರ ಹೆಸರಿದೆ. ಪ್ರಥಮ ತೀರ್ಥಂಕರರು ಮತ್ತು 22ನೆಯ ತೀರ್ಥಂಕರರ ನಡುವೆ 1000 ವರ್ಷಗಳ ವ್ಯತ್ಯಾಸವಿತ್ತು ಎಂದು ನಾವು ಭಾವಿಸಿದರೂ ಪ್ರಥಮ ತೀರ್ಥಂಕರರು ಬಹಳ ಪುರಾತನರು ಎಂದೇ ಪರಿಗಣಿಸಬೇಕಾಗುತ್ತದೆ.

ಮಹಾವೀರರು

[ಬದಲಾಯಿಸಿ]

ಕಡೆಯ ತೀರ್ಥಂಕರರಾದ ಭಗವನ್ ಮಹಾವೀರರನ್ನು ಕೆಲವು ಪಂಡಿತರು ಭಗವಾನ್ ಬುದ್ಧನ ಸಮಕಾಲೀನನೆಂದರೆ, ಮತ್ತೆ ಕೆಲವರು ಸ್ವಲ್ಪ ಹಿಂದಿನವರು ಎನ್ನುತ್ತಾರೆ. ಭಗವಾನ್ ಬುದ್ಧ ಮತ್ತು ಭಗವಾನ್ ಮಹಾವೀರರ ವಂಶಾವಳಿ ಮುಂತಾದ ವೈಯಕ್ತಿಕ ವಿವರಗಳಲ್ಲಿ ಬರುವ ಹೆಸರುಗಳಲ್ಲಿ ಸ್ವಲ್ಪ ಸಾದೃಶ್ಯವಿದೆ. ಬುದ್ಧರೊಡನೆ ಮಹಾವೀರರ ಭೇಟಿಯಾಗಿತ್ತು ಎಂಬ ಒಂದು ಐತಿಹ್ಯ ಪಚಲಿತವಿದೆ. ಅದೇನೇ ಇರಲಿ, ಮಹಾವೀರರು ತ್ಯಾಗಮೂಲವಾದ ಪರಂಪರಾಗತ ಸಂಪ್ರದಾಯವೊಂದಕ್ಕೆ ಒಂದು ಸುಸ್ಪಷ್ಟ, ಸುಂದರ ರೂಪ ನೀಡಿದರು ಎನ್ನುವುದು ನಿರ್ವಿವಾದ. ಇದರ ಪರಿಣಾಮವೇ ‘ಜೈನಧರ್ಮ’. ಮಹಾವೀರರು ‘ಅರ್ಧಮಾಗಧೀ’ ಭಾಷೆಯಲ್ಲಿ ಉಪದೇಶಿಸಿದರು. ತಮ್ಮ ಜೀವನದ ಪ್ರಥಮಭಾಗವನ್ನು ಅತ್ಯಂತ ಕಠೋರ ತಪಸ್ಸಿನಲ್ಲಿ ಕಳೆದು, ಕಡೆಯ ಮೂವತ್ತು ವರ್ಷಗಳನ್ನು ಜೀವಿಗಳ ಉದ್ಧಾರಕ್ಕಾಗಿ ಮುಡಿಪಿಟ್ಟರು. ಶ್ರದ್ಧಾಸಂಪನ್ನರೂ ಸಾಧನಾಪ್ರಿಯರೂ ಆದ ಅನೇಕ ಶಿಷ್ಯರ ಜೀವನಗಳನ್ನು ಕಮಲದ ಹೂವಿನಂತೆ ಅರಳಿಸಿದರು. ಈ ಶಿಷ್ಯರುಗಳಿಗೆ ‘ಗಣಧರ’ರೆಂದು ಹೆಸರು. ಮಹಾವೀರರ ಉಪದೇಶಗಳು ಮತ್ತೆಲ್ಲಾ ಪ್ರವಾದಿಗಳ ಉಪದೇಶಗಳಂತೆಯೇ ಸಹಜಗಮ್ಯ, ಸರಳ ಮತ್ತು ಪರಿಪೂರ್ಣ.ಮಹಾವೀರರ ಜನನ ಕ್ರಿ. ಪೂ ೮ನೇ ಶತಮಾನ. ೨೩ನೇ ತೀರ್ಥಂಕರರು ನಿರ್ವಾಣ ಹೊಂದಿ ೨೫೦ ವರ್ಷಗಳಾಗಿದ್ದವು. ಮಹಾವೀರರು ಈಗಿನ ಬಿಹಾರದ ಬಸಾಢ ಎಂಬ ನಗರದಲ್ಲಿ (ಅದಕ್ಕೆ ವೈಶಾಲಿ ಎಂತಲೂ ಹೆಸರಿತ್ತು) ಆ ನಗರದ ದೊರೆ ಸಿದ್ಧಾರ್ಥ ಹಾಗು ತ್ರಿಶಲಾ ದೇವಿಯವರಿಗೆ ಮಗುವಾಗಿ ಜನಿಸಿದರು. ವರ್ಧಮಾನ ಎಂದು ನಾಮಕರಣ ಮಾಡಲಾಯ್ತು. ಓದಿನಲ್ಲಿ ಮುಂದಿದ್ದ ಇವನಿಗೆ ಗುರುಗಳು 'ಸನ್ಮತಿ' ಎಂದು ಕರೆಯುತ್ತಿದ್ದರು. ರಾಜನ ಮಗನಾಗಿದ್ದರೂ ವೈಭೋಗದಲ್ಲಿ ಆಸಕ್ತಿ ವಹಿಸದೇ ಆಗಲೇ ಜೈನ ಧರ್ಮದ ಬಗ್ಗೆ ತಿಳಿದುಕೊಳ್ಳಲು ತೊಡಗಿದರು. ಸಾಂಸಾರಿಕ ಬಂಧನಗಳಲ್ಲಿ ಆಸಕ್ತಿ ವಹಿಸದೇ ೩೦ ನೇ ವಯಸ್ಸಿನವರೆಗೆ ದೇಶ ಸಂಚಾರ ಮಾಡಿದರು. ೧೨ ವರ್ಷ ತಪಸ್ಸಿನ ನಂತರ ಜ್ಞಾನೋದಯ ಪಡೆದರು. ನಂತರ ೨೪ನೇ ತೀರ್ಥಂಕರರಾದರು. ಅವರು ಅಂದಿನ ಆಡು ಭಾಷೆ ಪ್ರಾಕೃತದಲ್ಲಿ ಬೋಧಿಸಿದರು. ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗು ಅಪರಿಗ್ರಹ ಎಂಬ ಪಂಚಶಿಲ ತತ್ತ್ವಗಳನ್ನು ಬೋಧಿಸಿದರು. ಇವರ ಮೊದಲೇ ಜೈನ ಧರ್ಮ ಇದ್ದಿತ್ತಾದರೂ ಇವರ ಬೋಧನೆಗಳ ನಂತರ ಹೆಚ್ಚು ಹೆಚ್ಚು ಜನರಿಗೆ ಹತ್ತಿರವಾಯ್ತು.ತಮ್ಮ ೭೨ನೇ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ ನಿರ್ವಾಣ ಹೊಂದಿದರು.

ಸುಷಮಾ-ಸುಷಮಾ

[ಬದಲಾಯಿಸಿ]

ಅನಾದಿಕಾಲದಲ್ಲಿ ಈ ಭೂಮಿ ದಿವ್ಯವಾಗಿತ್ತು. ಜೈನಧರ್ಮದ ಪರಿಭಾಷೆಯಲ್ಲಿ , ‘ಸುಷಮಾ-ಸುಷಮಾ’ ಆಗಿತ್ತು. ಅಂದರೆ, ಸರ್ವತ್ರ ತೃಪ್ತಿ, ಆನಂದ, ಭಕ್ತಿ, ಶಾಂತಿ – ಇತ್ಯಾದಿಗಳು ನೆಲೆಸಿದ್ದವು.

ಕ್ರಮೇಣ ಕಾಲುಷ್ಯ ಪ್ರವೇಶಿಸಿ ‘ಸುಷಮಾ-ದುಷಮಾ’ ಅವಸ್ಥೆ ಉಂಟಾಯಿತು.

ಪರಿಸ್ಥಿತಿ ಮತ್ತೂ ಹದಗೆಟ್ಟು ಕಡೆಗೆ ಎಲ್ಲವೂ ಎಲ್ಲೆಲ್ಲಿಯೂ ‘’ದುಷಮಾ-ದುಷಮಾ’ ಅವಸ್ಥೆ ಬಂದುಬಿಟ್ಟಿದೆ. ದುಃಖ, ದೌರ್ಮನಸ್ಯ, ಅಶಾಂತಿ, ನೀಚತನ – ಇತ್ಯಾದಿಗಳೇ ಜಗತ್ತಿನಲ್ಲಿ ತುಂಬಿಹೋಗಿವೆ.

ಮತ್ತೊಮ್ಮೆ ಆ ಪವಿತ್ರ ಶಾಂತ ‘ಸುಷಮಾ-ಸುಷಮಾ’ ಸ್ತರಕ್ಕೆ ಜಗತ್ತು ಏರಬೇಕು. ಇದೇ ಜೈನಧರ್ಮದ ಪ್ರಧಾನ ಉದ್ದೇಶ.

ಅವಿದ್ಯೆಅಥವಾ ಅಜ್ಞಾನದಿಂದಾಗಿ ಜೀವ ಅಜೀವದೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಜೀವದ ಸ್ವರೂಪ ಚೈತನ್ಯ; ಅಜೀವದ ಸ್ವರೂಪ ಜಡ. ಜೀವ ನಿತ್ಯ ಆನಂದಸ್ವರೂಪಿಯಾದರೂ ಈ ಅಜೀವದ, ಜಡತ್ವದ ಅಥವಾ ‘ಪುದ್ಗಲ’ದ ಮಾಲಿನ್ಯದೊಂದಿಗೆ ಬೆರೆತು ಕಳಾಹೀನವಾಗಿದೆ. ಆದ್ದರಿಂದಲೇ ಚೈತನ್ಯಸ್ವರೂಪರಾದ ನಾವು ಈ ಜಗತ್ತಿನೊಂದಿಗೆ ಬೆರೆತು ಅಜ್ಞಾನಿಗಳಾಗಿ ದುಃಖಪಡುತ್ತಿದ್ದೇವೆ; ಈ ಜಗತ್ತನ್ನೇ ಸರ್ವಸ್ವ ಎಂದು ತಿಳಿದು ಆಸೆಗಳಿಗೆ ವಶರಾಗಿ ನಾನಾ ಕರ್ಮಗಳನ್ನು ಮಾಡುತ್ತಿದ್ದೇವೆ; ಪಾಪ=ಪುಣ್ಯಗಳ ಭೇದವನ್ನೇ ಮರೆತಿದ್ದೇವೆ. ಅವಿದ್ಯೆಯಿಂದ ಆಸೆಗಳು, ಆಸೆಗಳಿಂದಾಗಿ ಕರ್ಮಗಳು, ಕರ್ಮಗಳಿಂದಾಗಿ ಜೀವದಲ್ಲಿ ಪುದ್ಗಲ, ಪುದ್ಗಲದಿಂದಾಗಿ ದುಃಖ, ದುಃಖದಿಂದಾಗಿ ಮೃತ್ಯು, ಮೃತ್ಯುವಿನ ನಂತರ ಜನ್ಮ, ಮತ್ತೆ ಆಸೆ, ಮತ್ತೆ ಪಾಪಕೃತ್ಯ, ಮತ್ತೆ ದುಃಖ – ಈ ವಿಷವರ್ತುಲದಲ್ಲಿ ನಾವು ಸಂಕಟಪಡುತ್ತಿದ್ದರೂ, ‘ಬಹಳ ಚೆನ್ನಾಗಿದ್ದೇವೆ’ ಎಂದು ಭಾವಿಸುತ್ತೇವೆ.

ಈ ಅಜ್ಞಾನ ಮತ್ತು ಕರ್ಮಗಳ ಬಂಧನದಿಂದ ಹೇಗೆ ಬಿಡಿಸಿಕೊಳ್ಳುವುದು? ಬಿಡಿಸಿಕೊಂಡು ಜೀವವನ್ನು ಅಜೀವ ಅಥವಾ ಪುದ್ಗಲಶೂನ್ಯವಾಗಿ ಮಾಡಿ ‘ಸುಷಮಾ-ಸುಷಮಾ’ ಸ್ಥಿತಿಯ ಶಾಂತಿ, ಪ್ರೀತಿ, ಆನಂದಗಳನ್ನು ಮತ್ತೆ ಅನುಭವಿಸುವುದು ಹೇಗೆ? - ಇದನ್ನೇ ಜೈನಧರ್ಮ ಹೇಳಿಕೊಡುತ್ತದೆ.

ಸಂವರಣ

[ಬದಲಾಯಿಸಿ]

ನಮ್ಮ ಪ್ರಧಾನ ಉದ್ದೇಶವೇನು? ಜೀವ ಮತ್ತು ಅಜೀವಗಳನ್ನು ಬೇರೆ ಮಾಡುವುದು. ಅಂದರೆ ನಿರಂತರವಾಗಿ ಜೀವದೊಳಗೆ ಪ್ರವೇಶಿಸುವ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳ ಪರಿಣಾಗಳನ್ನು ತಡೆಯುವುದು. ಇದಕ್ಕೆ ‘ಸಂವರಣ’ ಎಂದು ಹೆಸರು. ಸಂವರಣ ಮಾಡಿದರೆ ಕ್ರಮೇಣ ಜೀವ ‘ಪುದ್ಗಲಶೂನ್ಯ’ವಾಗುತ್ತದೆ. ಈ ಪುದ್ಗಲಶೂನ್ಯವಾಗುವ ಕ್ರಿಯೆಗೆ ‘ನಿರ್ಜರ’ ಎಂದು ಹೆಸರು. ನಿರ್ಜರದ ಫಲವಾಗಿ ಆತ್ಮ (ಜೀವ) ಶುದ್ಧವಾದಾಗ ‘ಕೇವಲಜ್ಞಾನ’ ಉದಯವಾಗುತ್ತದೆ. ಈ ಕೇವಲಜ್ಞಾನದಿಂದಲೇ ‘ನಿರ್ವಾಣ’ ಸಾಧ್ಯವಾಗುವುದು.

ಈ ‘ನಿರ್ಜರ’ ಹೇಗೆ ಸಾಧ್ಯ. ಏನು ಮಾಡಿದರೆ ಜೀವ ಶುದ್ಧವಾಗುತ್ತದೆ? ಈ ವಿಷಯದಲ್ಲಿ ಜೈನಧರ್ಮದ ಉಪದೇಶ ಹೀಗಿದೆ” ಮೊದಲನೆಯ ಹೆಜ್ಜೆ ಈ ಜಗತ್ತಿನ ಬಗ್ಗೆ ಸರಿಯಾದ, ಸುಸ್ಪಷ್ಟವಾದ ಕಲ್ಪನೆ ಇರಬೇಕು. ಇದಕ್ಕೆ ಸಮ್ಯಗ್ದರ್ಶನ ಎಂದು ಹೆಸರು. ಸಮ್ಯಗ್ದರ್ಶನದಿಂದ ಈ ಜಗತ್ತು ಭೋಗಭೂಮಿಯಲ್ಲ, ಮಹಾದುಃಖದಾಯಕ ಸ್ಥಾನ ಎಂದು ತಿಳಿದುಬರುತ್ತದೆ. ಜಗತ್ತಿನ ಯಥಾರ್ಥಸ್ಥಿತಿ ತಿಳಿದ ಮೇಲೆ ಈ ನರಕಪ್ರಾಯವಾದ ಜಗತ್ತಿನ ಮೇಲಿದ್ದ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಇದರಿಂದಲೇ ನಿರ್ವಾಣ ಸಿಗುವುದಿಲ್ಲ. ಕಾರಣ ಅಲ್ಗಿರುವ ಕರ್ಮಗಳು ಮತ್ತೆ ಮತ್ತೆ ಆಸಕ್ತಿ ಹುಟ್ಟಿಸುತ್ತವೆ. ಹಾಗಾಗಿ ಮಹಾವೀರರು ಎಂಟು ವೃತಗಳನ್ನು ಅಭ್ಯಾಸ ಮಾಡಲು ಹೇಳಿದ್ದಾರೆ. ಇವುಗಳನ್ನು ‘ಅಷ್ಟಸೋಪಾನಗಳು’ ಎಂದು ಕರೆಯುತ್ತಾರೆ. ಈ ಅಷ್ಟ ಸೋಪಾನಗಳ ಜೊತೆಗೆ ಸತ್ಯ ಅಹಿಂಸೆ ಇತ್ಯಾದಿಗಳನ್ನೂ ಪಾಲಿಸಬೇಕು. ಅರ್ಥಾತ್ ಜನ್ಮ ಜನ್ಮಾಂತರದಲ್ಲಿ ದುಃಖವನ್ನೇ ಸುಖ ಎಂದು ಭಾವಿಸಿ ನರಳಿ ನರಳಿ ದುಃಖಿಸುವ ಪುದ್ಗಲಭರಿತ ಜೀವಕ್ಕೆ ಸ್ವಲ್ಪ ‘ವ್ಯಾಯಾಮ’ ಬೇಕು. ಈ ವ್ಯಾಯಾಪದ ಫಲವಾಗಿ ಸಂವರಣ ಹಾಗೂ ನಿರ್ಜರ ಸಂಭವಿಸುತ್ತವೆ.

ಈ ಅಷ್ಟಸೋಪಾನಗಳನ್ನು ‘ಸಮಿತಿ’ ಮತ್ತು ‘ಗುಪ್ತಿ’ ಎಂಬ ಎರಡು ಭಾಗವಾಗಿ ವಿಂಗಡಿಸಲಾಗಿದೆ.

ಮೂರು ಗುಪ್ತಿಗಳು ಇವು: ವಾಗ್ ಗುಪ್ತಿ(ಮಾತಿನ ಸಂಯಮ) . ಮನೋಗುಪ್ತಿ (ಮನಸ್ಸಿನ ಸಂಯಮ) ಮತ್ತು ಕ್ರಿಯಾ ಗುಪ್ತಿ (ವಿಶೇಷವಾಗಿ ಕರ್ಮೇಂದ್ರಿಯಗಳ ಸಂಯಮ)

ಐದು ಸಮಿತಿಗಳು ಹೀಗಿವೆ. ಭಾಷಾಸಮಿತಿ (ಎಚ್ಚರಿಕೆಯಿಂದ ಚಿಂತಿಸಿ ಹಿತವಾಕ್ಯಗಳನ್ನಾಡುವುದು), ಏರ್ಷಣಾಸಮಿತಿ (ಆಸೆಗಳನ್ನು ನಿಯಂತ್ರಿಸುವುದು), ಆದಾನಸಮಿತಿ (ಆಹಾರದಲ್ಲಿ ಹಿತ, ಮಿತ ಮತ್ತು ಪರಿಶುದ್ಧಿ), ಈರ್ಯಾಸಮಿತಿ (ವಿಹಾರಾದಿಗಳಲ್ಲಿ ಸಾವಧಾನತೆಯನ್ನು ಪರಿಪಾಲಿಸುವುದು) ಮತ್ತು ವ್ಯುತ್ಸರ್ಗಸಮಿತಿ (ಪರಿಶುದ್ಧಿಯ ಸಮಯದಲ್ಲಿ ಎಚ್ಚರವಹಿಸುವುದು),

ಈ ಎಂಟು ಸರಳ ನಿಯಮಗಳನ್ನು ನಿಷ್ಠೆಯಿಂದ ಅಹೋರಾತ್ರಿ ಪರಿಪಾಲಿಸಿದರೆ ಆತ್ಮಸಂಯಮ ಬರುತ್ತದೆ; ಆಸೆಗಳು ದೂರವಾಗುತ್ತವೆ. ಜೀವ ಶುದ್ಧವಾಗುತ್ತದೆ.

ಸಾಧಾರಣ ಗೃಹಸ್ಥರು ಈ ನಿಯಮಗಳನ್ನೇ ಪಾಲಿಸಿದರೂ, ಅವರು ಇವುಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಅಣುವ್ರತಗಳನ್ನು ಅಂದರೆ ಮೇಲಿನವುಗಳಿಗಿಂತ ಸುಲಭಸಾದ್ಯವಾದ ವ್ರತಗಳನ್ನು ಜೈನಧರ್ಮವು ವಿಧಿಸುತ್ತದೆ. ಆದರೆ ಮುನಿಯ ಅಥವಾ ತ್ಯಾಗಿಯ ಜೀವನದಲ್ಲಿ ಇದೇ ನಿಯಮಗಳಿದ್ದರೂ ಅವು ಮಹಾವೃತಗಳು. ಅಂದರೆ ಅವರು ಬಹಳ ಕಠಿಣವಾಗಿರುತ್ತವೆ. ಉದಾಹರಣೆಗೆ ಭಾಷಾಸಮಿತಿಯನ್ನೇ ತೆಗೆದುಕೊಳ್ಳೋಣ. ಗೃಹಸ್ಥ ಹೆಚ್ಚು ಮಾತನಾಡದೆ ಎಚ್ಚರಿಕೆಯಿಂದ ಮಾತನಾಡುತ್ತಾನೆ. ಆದರೆ ಮುನಿ ಮೌನಧಾರಣೆ ಮಾಡುತ್ತಾನೆ. ಮುನಿ ಧ್ಯಾನಾಭ್ಯಾಸಿ, ಧ್ಯಾನದಿಂದ ಅಂತರ್ಮುಖಿಯಾಗುತ್ತಾನೆ. ಈ ಎಲ್ಲಾ ಸಾಧನೆಗಳನ್ನೂ ನಿಷ್ಠೆಯಿಂದ ಮಾಡಿದರೆ ಕ್ರಮೇಣ ಆತ್ಮವು ಪುದ್ಗಲಶೂನ್ಯವಾಗುತ್ತದೆ ಮತ್ತು ಅದರಿಂದ ಜ್ಞಾನೋದಯವಾಗುತ್ತದೆ.

ಪಂಚಪ್ರಕಾರಗಳಲ್ಲಿ ಜ್ಞಾನವನ್ನು ಗಳಿಸಲು ಸಾಧ್ಯ: ಮತಿಜ್ಞಾನ(ಸಾಧಾರಣ ಜ್ಞಾನ), ಶ್ರುತಿಜ್ಞಾನ(ಜಿನರು ಮತ್ತು ಗ್ರಂಥಗಳಿಂದ ಬರುವ ಜ್ಞಾನ), ಅವಧಿಜ್ಞಾನ(ಪ್ರಾಪಂಚಿಕ ಅನುಭವಗಳಿಂದ ಬರುವ ಜ್ಞಾನ), ಮನಃಪರ್ಯಾಯ (ಅತಿಲೌಕಿಕ ಜ್ಞಾನ) ಮತ್ತು ಕೇವಲಜ್ಞಾನ. ಅಂತಿಮವಾದ ಕೇವಲಜ್ಞಾನದಿಂದಲೇ ಮುಕ್ತಿ. ಈ ಬಗೆಯಲ್ಲಿ ಮುಕ್ತನಾದವನಿಗೆ ‘ಜಿನ’ ಎಂದು ಹೆಸರು. ಇದು ಜೈನಧರ್ಮದ ಅತಿ ಸಂಕ್ಷಿಪ್ತ ಪರಿಚಯ.

ಜೈನಧರ್ಮದಲ್ಲಿ ಎರಡು ರೀತಿಯ ಜೀವನಶೈಲಿಗಳುಳ್ಳ ಜನರನ್ನು ನೋಡಬಹುದು; ಶ್ವೇತಾಂಬರರು ಮತ್ತು ದಿಗಂಬರರು. ಶ್ವೇತಾಂಬರರು ಜಿನಮಹಾವೀರರ ಮೂರ್ತಿಗಳನ್ನು ಪೂಜಿಸಿದ್ದರ ಫಲವಾಗಿ, ಭಾರತದಲ್ಲಿ ವಿಶ್ವವಿಖ್ಯಾತವಾದ ಜೈನಮಂದಿರ ಶಿಲ್ಪಕಲೆಯನ್ನು ನೋಡಬಹುದು. ಶ್ವೇತಾಂಬಾರರು ಪ್ರಾಚೀನಗ್ರಂಥಗಳಿಗೆ ಮಹತ್ವ ನೀಡುತ್ತಾರೆ. ದಿಗಂಬರರು ದಿಗ್ ವಸನಧಾರಿಗಳು, ಧ್ಯಾನಮಗ್ನರು; ಆಕಾಶದಂತೆ ಮುಕ್ತರು; ಮಂದಿರ, ಗ್ರಂಥಗಳು ಇತ್ಯಾದಿಗಳಿಗೆ ಅವರಲ್ಲಿ ಹೆಚ್ಚು ಪ್ರಾಧಾನ್ಯವಿಲ್ಲ.

ಲೇಖನದ ಪ್ರಾರಂಭದಲ್ಲಿ ಹೇಳಿದಂತೆ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನಧರ್ಮಕ್ಕೆ ಹೊಸ ನೆಲೆ ಬೆಲೆಯನ್ನು ತಂದುಕೊಟ್ಟು ಅದರ ಹಾಸುಬೀಸನ್ನು ವಿಸ್ತರಿಸಿದ ಶಕಪುರುಷರು ಭಗವಾನ್ ಮಹಾವೀರರು. ತಮ್ಮ ನಡೆ-ನುಡಿ, ಆಚಾರ-ವಿಚಾರಗಳಿಂದ ಬದುಕಿದ್ದಾಗಲೇ ದಂತಕತೆಯಾಗಿದ್ದ ಈ ಮಹಾಪುರುಷರು ಜೈನಧರ್ಮವನ್ನು ವಿಶ್ವಧರ್ಮವಾಗಿ ಎತ್ತಿಹಿಡಿದ ಸೀಮಾಪುರುಷರು. ತಮ್ಮ ಸಾಧನೆ ಬೋಧನೆ ಮತ್ತು ತಾತ್ವಿಕ ಚಿಂತನೆಗಳಿಂದ ಭಾರತದಲ್ಲಿ ಧರ್ಮ ಪ್ರವರ್ತಕರೆಂದು ಕರೆಸಿಕೊಂಡವರ ಸಾಲಿನಲ್ಲಿ ಮಾಹಾವೀರರದು ಮರೆಯಲಾಗದ ಹೆಸರು. ಈ ಮಹಾಪುರುಷರಿಗೆ ಶಿರಬಾಗಿ ನಮಿಸೋಣ.

ಮಾಹಿತಿ ಆಧಾರ

[ಬದಲಾಯಿಸಿ]

ಸ್ವಾಮಿ ನಿರ್ಮಲಾನಂದರ ‘ಜೈನಧರ್ಮ ಮತ್ತು ಶ್ರೀರಾಮಕೃಷ್ಣರು’ ಲೇಖನ, ‘ವಿವೇಕಪ್ರಭ’

"https://kn.wikipedia.org/w/index.php?title=ಮಹಾವೀರ&oldid=1245999" ಇಂದ ಪಡೆಯಲ್ಪಟ್ಟಿದೆ