ಲತಾ ರಾಜಶೇಖರ್

ವಿಕಿಪೀಡಿಯ ಇಂದ
Jump to navigation Jump to search
ಡಾ.ಲತಾ ರಾಜಶೇಖರ್
ಡಾ.ಲತಾ ರಾಜಶೇಖರ್
ಜನನ1954 ಜೂನ್ 2
ಅಂಬಿಗರಹಳ್ಳಿ, ಕೆ ಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
ಕಾವ್ಯನಾಮಕವಯತ್ರಿ ಡಾ.ಲತಾ ರಾಜಶೇಖರ್
ವೃತ್ತಿಕವಯತ್ರಿ, ಲೇಖಕಿ.
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ವಿಮರ್ಶೆ, ಮಹಾಕಾವ್ಯ
ವಿಷಯವಿಶ್ವಶಾಂತಿ, ಪ್ರಕೃತಿ, ಅಧ್ಯಾತ್ಮ, ವಿಚಾರ
ಸಾಹಿತ್ಯ ಚಳುವಳಿನವೋದಯ
ಬಾಳ ಸಂಗಾತಿಡಾ.ರಾಜಶೇಖರ್
ಮಕ್ಕಳುಡಾ.ಹೆಚ್ ಆರ್ ಸಂಜಯ್, ಡಾ.ಹೆಚ್ ಆರ್ ಸೌಮ್ಯ ದಿನೇಶ್, ಡಾ.ಹೆಚ್ ಆರ್ ಸೌಜನ್ಯ ಶರತ್ಚಂದ್ರ

ವಿಶ್ವ ಶಾಂತಿಗಾಗಿ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲತಾ ರಾಜಶೇಖರ್‍ರವರು ಬುದ್ಧ ದರ್ಶನ, ಯೇಸು ದರ್ಶನ, ಬಸವ ದರ್ಶನ, ಮಹಾವೀರ ದರ್ಶನ, ರಾಮ ದರ್ಶನ ಎಂಬ ಐದು ಮಹಾಕಾವ್ಯಗಳನ್ನು ರಚಿಸುವ ಮೂಲಕ ಆ ಸಾಧನೆ ಮಾಡಿದ ವಿಶ್ವದ ಏಕೈಕ ಕವಯತ್ರಿಯಾಗಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ.[೧] ಆರನೆಯದಾಗಿ ರಚಿತವಾಗುತ್ತಿರುವ ಹನುಮ ದರ್ಶನ ಮಹಾಕಾವ್ಯವು ಮುಕ್ತಾಯ ಹಂತದಲ್ಲಿದ್ದು ಬಿಡುಗಡೆಗೆ ಎದುರು ನೋಡುತ್ತಿದೆ. ಸುಮಾರು ಎರಡು ದಶಕಗಳ ಕಾಲದ ಲತಾರವರ ಸತತ ಅಧ್ಯಯನ ಮತ್ತು ಬರವಣಿಗೆಯ ಫಲವಾಗಿ ಕನ್ನಡ ನಾಡಿಗೆ ವಿಶಿಷ್ಟ ಮಹಿಳಾ ಲೇಖಕರೊಬ್ಬರು ದೊರೆತಂತಾಗಿದೆ. ಲತಾರವರ ಅದ್ವಿತೀಯ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಜನನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಡಾ. ಲತಾ ರಾಜಶೇಖರ್‍ರವರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ 1954 ಜೂನ್ 2 ರಂದು ಎಂ ಕೃಷ್ಣೇಗೌಡ ಮತ್ತು ಕೆ.ಎಸ್ ಕಾವೇರಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದರು. ಬಾಲ್ಯದಿಂದಲೂ ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಲತಾರವರು ಸಹಜವಾಗಿ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡಿದ್ದರು. ಉನ್ನತ ಶಿಕ್ಷಣದಲ್ಲಿ ಎಂ. ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಮುಗಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿರುತ್ತಾರೆ. ‘ಕೋಗಿಲೆ ಕೂಗಿದಂತೆ’ ಮೊದಲ ಕವನ ಸಂಕಲನಕ್ಕೆ ಮಂಗಳಾ ಕಲಾವೇದಿಕೆಯ ಕುವೆಂಪು ಸಾಹಿತ್ಯ ಪ್ರಶಸ್ತಿ ಹಾಗು ಡಾ| ರಾಜ್ ಸಾಹಿತ್ಯ ಪ್ರಶಸ್ತಿ ಲಭಿಸಿವೆ. ‘ಬೆಳಕಿನ ಹನಿಗಳು’ ಇವರ ೨ನೆಯ ಕವನ ಸಂಕಲನ.'ಕೋಗಿಲೆ ಕೂಗಿದಂತೆ' ಕ್ಯಾಸೆಟ್ ಬಿಡುಗಡೆಯಾಗಿದೆ.

ವೈವಾಹಿಕ ಜೀವನ[ಬದಲಾಯಿಸಿ]

ಡಾ. ಲತಾರವರ ಪತಿ ಡಾ. ರಾಜಶೇಖರ್‍ರವರು ಮೈಸೂರಿನ ಖ್ಯಾತ ಮಕ್ಕಳ ವೈದ್ಯರಾಗಿದ್ದು ಸದ್ಯ ಡಾ. ರಾಜಶೇಖರ್ ಮೆಡಿಕಲ್ ಫೌಂಡೇಷನ್ ಮತ್ತು ರೀಸರ್ಚ್ ಸೆಂಟರ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು[ಬದಲಾಯಿಸಿ]

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ವಿಶ್ವಕವಿ ಪ್ರಶಸ್ತಿ
  • ಕೆಂಪೇಗೌಡ ರಾಷ್ಟ್ರೀಯ ಪುರಸ್ಕಾರ
  • ವಿಶ್ವಕರ್ಮ ಪ್ರಶಸ್ತಿ ಮತ್ತು ಚಿನ್ನದ ಪದಕ
  • ಅಂತರರಾಷ್ಟ್ರೀಯ ವರ್ಷದ ಮಹಿಳೆ ಪ್ರಶಸ್ತಿ
  • ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ
  • ಕುಲಪತಿ ದಾ.ಕೆ.ಎಂ ಮುನ್ಷಿ ಭಾರತೀಯ ವಿದ್ಯಾ ಭವನ ಅವಾರ್ಡ್
  • ರೋಟರಿ ಸಂಸ್ಥೆಯ ಗೌರವ ಸದಸ್ಯತ್ವ
  • ಶಾಂತಲ ಪಾಟೀಲ ಸಾಹಿತ್ಯ ಪ್ರಶಸ್ತಿ.

ಡಾ.ಲತಾ ರಾಜಶೇಖರ್ ರವರ ಮಾತು-ಅನಿಸಿಕೆಗಳು[ಬದಲಾಯಿಸಿ]

ಕನ್ನಡ ಕೃತಿಗಳ ಅನುವಾದದ ಬಗ್ಗೆ
ಕನ್ನಡದ ಕೃತಿಗಳನ್ನು ಹೆಚ್ಚಾಗಿ ಬೇರೆ ಭಾಷೆಗಳಿಗೆ ಅನುವಾದಿಸುವ ಮೂಲಕ ಅನುವಾದ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕು. ಕನ್ನಡದಲ್ಲಿ ಬಹಳಷ್ಟು ಅನುವಾದ ಕಾರ್ಯವಾಗಬೇಕಿದ್ದು, ಕೇವಲ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದು ಸರಿಯಲ್ಲ. ಬದಲಿಗೆ ಕನ್ನಡದ ಸೃಜನಶೀಲ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಬೇಕಿದೆ. ಕನ್ನಡದ ಸೃಜನಶೀಲ ಹಾಗೂ ಶ್ರೇಷ್ಠ ಕೃತಿಗಳು ಬೇರೆ ಭಾಷೆಗಳಿಗೆ ಹೆಚ್ಚಾಗಿ ಅನುವಾದವಾಗುವ ಮೂಲಕ ಕನ್ನಡದ ಕಂಪು ಇತರ ಕಡೆಗಳಿಗೂ ಹರಡಬೇಕಿದೆ. ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದರೆ ಕನ್ನಡಕ್ಕೆ ನೊಬೆಲ್‌ ಪ್ರಶಸ್ತಿ ಬರುತ್ತಿತ್ತು. ಅನುವಾದವಾಗದ ಕಾರಣ ಕನ್ನಡಕ್ಕೆ ನೊಬೆಲ್‌ ಪ್ರಶಸ್ತಿ ಕೈತಪ್ಪಿದೆ. ಒಂದು ಭಾಷೆಯಿಂದ ಮತ್ತೂಂದು ಭಾಷೆಗೆ ಅನುವಾದಿಸುವುದು ಸುಂದರವಾದ ಕಲೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಇಂದು ಅನುವಾದಿಸುವುದು ಕ್ಲಿಷ್ಟಕರ ಕೆಲಸ. ಅಲ್ಲದೆ ಕೃತಿಗಳನ್ನು ತರ್ಜುಮೆ ಮಾಡುವ ಬದಲಿಗೆ ಪುನರ್‌ ಸೃಷ್ಟಿಸಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಯ ಬಗ್ಗೆ
ಸಾರಸ್ವತ ಲೋಕದಲ್ಲಿ ಕವಿಗಳು ಸರಸ್ವತಿ ಪ್ರಭಾವಕ್ಕೊಳಗಾಗ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ರಾಜಕೀಯ ಮಳೆ ಬಿರುಸಾಗಿ ಸುರಿಯುತ್ತಿದ್ದು, ಇದರಿಂದ ಕವಿಗಳು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿ ಸಾಹಿತ್ಯ ಲೋಕವನ್ನೇ ಸಂಕ್ರಮಣ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಸಾಹಿತಿಗಳು ಈ ವಿಷಯದ ಬಗ್ಗೆ ಆತ್ಮಶೋಧನೆ ಮಾಡಿಕೊಳ್ಳುವ ಮೂಲಕ ಸಾಹಿತ್ಯ ಲೋಕದ ಬೆಳವಣಿಗೆಗೆ ಶ್ರಮಿಸಬೇಕು.

ದೇಶದ ಶ್ರೀಮಂತಿಕೆ
ಯಾವುದೇ ದೇಶದ ಶ್ರೀಮಂತಿಕೆಯನ್ನು ಕೇವಲ ಹಣದಿಂದ ಅಳೆಯಲು ಸಾಧ್ಯವಿಲ್ಲ. ಅಲ್ಲಿನ ಸಾಹಿತ್ಯಿಕ ಸಮೃದ್ಧಿ ಕಲೆಯ ಹಿರಿಮೆಯಿಂದ ಮಾತ್ರ ಗುರುತಿಸಲು ಸಾಧ್ಯ

ಉಲ್ಲೇಖಗಳು[ಬದಲಾಯಿಸಿ]