ಲಂಕಾವಿ

ವಿಕಿಪೀಡಿಯ ಇಂದ
Jump to navigation Jump to search

ಲುಅ ದೋಷ: bad argument #1 to 'gsub' (string is not UTF-8).


ಲಂಕಾವಿ - (ಚೈನೀಸ್: 浮羅交怡) ಮಲೇಶಿಯಾ ದೇಶದಲ್ಲಿರುವ ಒಂದು ದ್ವೀಪ. ಇದರ ಅಧಿಕೃತ ಹೆಸರು Langkawi the Jewel of Kedah' (ಮಲಯ್ ಭಾಷೆಯಲ್ಲಿ: Langkawi Permata Kedah). ಇದು ೯೯ ದ್ವೀಪಗಳಿಂದ ಕೂಡಿದ ದ್ವೀಪ ಸಮೂಹವಾಗಿದೆ. ಮಲೇಶಿಯಾದ ವಾಯುವ್ಯ ಭಾಗದಲ್ಲಿ ಮುಖ್ಯಭೂಮಿಯಿಂದ ಸುಮಾರು ೩೦ ಕಿ.ಮಿ. ದೂರದಲ್ಲಿ ಅಂಡಮಾನ್ ಸಮುದ್ರದಲ್ಲಿ ಇದೆ. ಕೇದಾಹ್ ರಾಜ್ಯಕ್ಕೆ ಸೇರಿದ್ದಾಗಿದೆ. ಇಲ್ಲಿನ ಜನಸಂಖ್ಯೆ ೯೪,೭೭೭ (ಇಸವಿ ೨೦೧೦). ಇಲ್ಲಿ ಜನವಾಸವಿರುವ ಮತ್ತೊಂದು ದ್ವೀಪವೆಂದರೆ ಟುಬಾ ದ್ವೀಪ. ಲಂಕಾವಿ ಒಂದು ಜಿಲ್ಲೆಯಾಗಿದ್ದು ಕುವಾ (ಕುಆಹ್) ಪಟ್ಟಣವು ಇಲ್ಲಿನ ಮುಖ್ಯಕೇಂದ್ರ. ಲಂಕಾವಿ ಒಂದು ತೆರಿಗೆಮುಕ್ತ ದ್ವೀಪ.[೧]. ಈ ದ್ವೀಪವು ಥೈಲ್ಯಾಂಡ್ ದೇಶದ ಗಡಿಗೆ ಹತ್ತಿರದಲ್ಲಿದೆ.

ಹೆಸರಿನ ಬಗ್ಗೆ[ಬದಲಾಯಿಸಿ]

ಲಂಕಾವಿಯ ಚಿನ್ಹೆಯ ಪ್ರತಿಮೆ ಇರುವ Dataran Helang (ಈಗಲ್ ಸ್ಕ್ವೇರ್)

ಲಂಕಾವಿ ಎಂಬ ಹೆಸರು ೧೫ನೇ ಶತಮಾನದಲ್ಲೇ ಇತ್ತೆಂದು ಹೇಳಲಾದರೂ, ೧೬ನೆಯ ಶತಮಾನದ ನಕಾಶೆಗಳಲ್ಲಿ ಇದನ್ನು ಲಂಗಾ, ಲಂಗ್ಕಾ, ಲನ್ಸುರಾ, ಲಂಗಾಪುರ ಮುಂತಾದ ಹೆಸರುಗಳಿಂದ ಗುರುತುಮಾಡಲಾಗಿದೆ.[೨]

ಭೌಗೋಳಿಕತೆ[ಬದಲಾಯಿಸಿ]

ಲಂಕಾವಿ ನಕ್ಷೆ

ಇದರ ಒಟ್ಟು ವಿಸ್ತಾರ ೪೭,೮೪೮ ಹೆಕ್ಟೇರುಗಳು. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸುಮಾರು ೨೫ಕಿ.ಮೀ. ಇದೆ. ಕರಾವಳಿಗಳು ಸಮತಟ್ಟಾಗಿವೆ ಮತ್ತು ಹಲವುಕಡೆಗಳಲ್ಲಿ ಸುಣ್ಣದಕಲ್ಲಿನ ರಚನೆಗಳನ್ನೊಳಗೊಂಡಿದೆ. ದ್ವೀಪದ ಮುಕ್ಕಾಲು ಭಾಗ ಕಾಡು, ಗುಡ್ಡಬೆಟ್ಟಗಳಿಂದ ತುಂಬಿದೆ.[೩]

ಹವಾಮಾನ[ಬದಲಾಯಿಸಿ]

ಲಂಕಾವಿ ವಾರ್ಷಿಕ ಮಳೆ ಪ್ರಮಾಣ ೨೪೦೦ಮಿಮಿ (೯೪ ಇಂಚು). ಮಾರ್ಚ್ ತಿಂಗಳಿಂದ ನವೆಂಬರ್ ವರೆಗೆ ಮಳೆಗಾಲವಾಗಿದ್ದು ಇತರ ತಿಂಗಳುಗಳಲ್ಲಿ ಒಣಹವೆ ಇರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಮಳೆ (೫೦೦ಮಿಮಿಗಿಂತ ಹೆಚ್ಚು) ಬೀಳುತ್ತದೆ.

ಆರ್ಥಿಕತೆ[ಬದಲಾಯಿಸಿ]

ಮುಖ್ಯವಾಗಿ ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.

ಆಡಳಿತ ವಿಭಾಗಗಳು[ಬದಲಾಯಿಸಿ]

ಲಂಕಾವಿ ಜಿಲ್ಲೆಯು ೬ ಉಪವಿಭಾಗಗಳಾಗಿ ವಿಭಾಗಿಸಲ್ಪಟ್ಟಿದೆ. ಅವೆಂದರೆ:

 • ಅಯೆರ್ ಹಂಗತ್ (Ayer Hangat)
 • ಬೊಹೊರ್ (Bohor)
 • ಕೆದಾವಾಂಗ್ (Kedawang)
 • ಕುವಾ (Kuah)
 • ಪದಂಗ್ ಮತ್ಸಿರತ್ (Padang Matsirat)
 • ಉಲು ಮೇಲಕ (Ulu Melaka)

ಜನಸಂಖ್ಯೆ ವಿವರ[ಬದಲಾಯಿಸಿ]

೯೯ ದ್ವೀಪಗಳಲ್ಲಿ ಕೇವಲ ನಾಲ್ಕು ದ್ವೀಪಗಳಲ್ಲಿ ಜನವಸತಿ ಇದೆ. ಅವೆಂದರೆ ಲಂಕಾವಿ ಮುಖ್ಯಭೂಮಿ, ತುಬಾ, ರೆಬೆಕ್ ಮತ್ತು ದಯಂಗ್ ಬಂಟಿಂಗ್. ಒಟ್ಟು ಸುಮಾರು ೯೯೦೦೦ ಜನಸಂಖ್ಯೆಯಲ್ಲಿ ೯೦% ಭಾಗ ಮಲಯರು. ಇತರರೆಂದರೆ ಚೀನೀಯರು, ಭಾರತೀಯರು ಮತ್ತು ಥಾಯ್ ಜನಾಂಗದವರು. ಇಲ್ಲಿನ ಮಲಯರು ಮುಸ್ಲಿಂ ಧರ್ಮೀಯರು. ಜೊತೆಗೆ ಹಿಂದೂ (ಭಾರತೀಯ ಮೂಲದವರು), ಬೌದ್ಧ (ಚೀನೀ ಮತ್ತು ಥಾಯ್ ಜನ) ಮತ್ತು ಕ್ರೈಸ್ತ ಧರ್ಮ (ಚೀನೀ ಜನ) ಆಚರಣೆಯಲ್ಲಿವೆ. 'ಮಲಯ ಭಾಷೆ' ಅಧಿಕೃತ ಆಡಳಿತ ಭಾಷೆ. ಜೊತೆಗೆ ಇಂಗ್ಲೀಷ್ ಪ್ರಮುಖ ವ್ಯಾವಹಾರಿಕ ಭಾಷೆಯಾಗಿ ಬಳಕೆಯಾಗುತ್ತದೆ. ಮೂಲ ಲಂಕಾವಿಗರು ಮಲಯ ಭಾಷೆಯ ಒಂದು ಉಪಶೈಲಿಯನ್ನು ಮಾತಾಡುತ್ತಾರೆ. ಚೀನಿ, ಸಿಯಾಮಿ ಮತ್ತು ಕೆಲವು ಭಾರತೀಯ ಭಾಷೆಗಳು ಅಲ್ಪಸಂಖ್ಯಾತವಾಗಿ ಬಳಕೆಯಲ್ಲಿವೆ.

ಪ್ರವಾಸೋದ್ಯಮ[ಬದಲಾಯಿಸಿ]

ಲಂಕಾವಿಯು ಒಂದು ಪ್ರಮುಖ ಪ್ರವಾಸೋದ್ಯಮ ಸ್ಥಳವಾಗಿದ್ದು ದೇಶವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿನೀಡುತ್ತಾರೆ. ಇಲ್ಲಿನ್ ಬೀಚ್ ಗಳು, ಅಭಯಾರಣ್ಯಗಳು, ರೆಸಾರ್ಟುಗಳು, ವಿವಿಧ ಜಲಕ್ರೀಡೆಗಳು, ದ್ವೀಪಪ್ರವಾಸಗಳು, ಉದ್ಯಾನಗಳು ಪ್ರವಾಸದ ಆಕರ್ಷಣೆಗಳಾಗಿವೆ. ಜೂನ್ ೧, ೨೦೦೭ರಲ್ಲಿ ಯುನೆಸ್ಕೋದಿಂದ ಲಂಕಾವಿಗೆ ವಿಶ್ವ 'ಜಿಯೋಪಾರ್ಕ್' ಸ್ಥಾನ ದೊರಕಿದೆ.

ಲಂಕಾವಿಯ ಕೆಲವು ಪ್ರವಾಸಿ ತಾಣಗಳು[ಬದಲಾಯಿಸಿ]

ಚೆನಾಂಗ್ ಬೀಚ್
ಲಂಕಾವಿ ಸ್ಕ್ರೈ ಬ್ರಿಡ್ಜ್
 • ಲಂಕಾವಿ ಕೇಬಲ್ ಕಾರ್ ಮತ್ತು ಸ್ಕೈ ಬ್ರಿಡ್ಜ್
 • ಈಗಲ್ ಸ್ಕ್ವೇರ್
 • ಅಂಡರ್ ವಾಟರ್ ವರ್ಲ್ಡ್
 • ಗುನುಂಗ್ ರಾಯ - ಲಂಕಾವಿಯ ಅತಿ ಎತ್ತರದ ಪ್ರದೇಶ. ಸಮುದ್ರಮಟ್ಟದಿಂದ ೮೮೧ ಮೀಟರ್
 • ಲಂಕಾವಿ ವೈಲ್ದ್ ಲೈಫ್ ಪಾರ್ಕ್ ಮತ್ತು ಬರ್ಡ್ಸ್ ಪ್ಯಾರಡೈಸ್
 • ಪಯಾರ್ ದ್ವೀಪದ ಮೆರೈನ್ ಪಾರ್ಕ್
 • ಲಂಕಾವಿ ತ್ರೀಡಿ ಕಲಾ ಮ್ಯೂಸಿಯಂ
 • ತೆಲಗಾ ತುಜುಹ್ ಜಲಪಾತ
 • ಕ್ರೊಕೊಡೈಲ್ ಪಾರ್ಕ್
 • ರೈಸ್ ಗಾರ್ಡನ್
 • ಓರಿಯೆಂಟಲ್ ವಿಲೇಜ್

ಒಳನಾಡು ಸಾರಿಗೆ[ಬದಲಾಯಿಸಿ]

ಖಾಸಗಿ ವಾಹನಗಳು ಮತ್ತು ದೋಣಿಗಳು ಇಲ್ಲಿನ ಮುಖ್ಯ ಸಾರಿಗೆ. ಪ್ರವಾಸಿಗರಿಗೆ ಬಾಡಿಗೆ ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳು ಬಾಡಿಗೆಗೆ ದೊರೆಯುತ್ತವೆ. ಟ್ಯಾಕ್ಸಿ ಸೇವೆಯೂ ಇದೆ.

ಸಂಪರ್ಕ ಸಾರಿಗೆ[ಬದಲಾಯಿಸಿ]

 • ವಿಮಾನ: ಲಂಕಾವಿಯಲ್ಲಿ ಒಂದು ಚಿಕ್ಕ ವಿಮಾನನಿಲ್ದಾಣವಿದ್ದು ಕೌಲಾಲಂಪುರ, ಥೈಲ್ಯಾಂಡ್, ಸಿಂಗಾಪುರಗಳಿಂದ ನೇರ ವಿಮಾನ ಸಂಪರ್ಕವಿದೆ.
 • ಫೆರ್ರಿ (ದೋಣಿ): ಮುಖ್ಯಭೂಮಿಯ ಕೌಲಾಪೆರ್ಲಿಸ್, ಕೌಲಾಕೇದಾಹ್ ಪಿನಾಂಗ್ ದ್ವೀಪ ಹಾಗೂ ಥೈಲ್ಯಾಂಡ್‍ನಿಂದ ದೋಣಿ ಸಾರಿಗೆ ಇದೆ. ಕುವಾ ಜೆಟ್ಟಿ ಎಂಬುದು ಲಂಕಾವಿಯ ದೋಣಿನಿಲ್ದಾಣ.

ಉಲ್ಲೇಖಗಳು[ಬದಲಾಯಿಸಿ]

 1. http://www.abclangkawi.com/index.php/shopping-in-langkawi/
 2. Mohamed Zahir Haji Ismail (2000). The Legends of Langkawi. Utusan Publications & Distributors.
 3. "Geography". Langkawi Online.

ಹೊರಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಲಂಕಾವಿ&oldid=728557" ಇಂದ ಪಡೆಯಲ್ಪಟ್ಟಿದೆ