ವಿಷಯಕ್ಕೆ ಹೋಗು

ರೊದ್ದ ಶ್ರೀನಿವಾಸರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೊದ್ದ ಶ್ರೀನಿವಾಸರಾವ್ ಮುಂಬಯಿ ಕರ್ನಾಟಕದಲ್ಲಿ ಕನ್ನಡದ ಶಿಕ್ಷಣಕ್ಕಾಗಿ ಹಾಗು ಕರ್ನಾಟಕ ಕಾಲೇಜಿನ ಸ್ಥಾಪನೆಗಾಗಿ ಯಶಸ್ವಿ ಪ್ರಯತ್ನ ಕೈಗೊಂಡವರು .


ಇವರು ೧೮೫೦ ಸಪ್ಟಂಬರ ೧೭ರಂದು ಧಾರವಾಡ ಜಿಲ್ಲೆಯ ಮದಿಹಾಳದಲ್ಲಿ ಜನಿಸಿದರು. ಇವರ ತಾಯಿ ಸುಬ್ಬಮ್ಮ ; ತಂದೆ ಕೊನೇರರಾವ. ಬಡತನದಿಂದಾಗಿ ಹೆಚ್ಚಿನ ಶಿಕ್ಷಣ ಪಡೆಯಲಾಗದೆ ಹುಬ್ಬಳ್ಳಿಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿದರು. ಕೆಲಕಾಲದ ನಂತರ ರೆವಿನ್ಯೂ ಖಾತೆಯಲ್ಲಿ ಕೆಲಸಮಾಡಿ ವಿದ್ಯಾಖಾತೆಯನ್ನು ಸೇರಿದರು. ಅನೇಕ ಹೈಸ್ಕೂಲುಗಳಲ್ಲಿ ದುಡಿದ ನಂತರ 1878ರಲ್ಲಿ ಅಸಿಸ್ಟೆಂಟ್ ಡೆಪ್ಯುಟಿ ಕಮೀಷನರ್ ಆದರು. ನಂತರ ಡೆಪ್ಯುಟಿ ಕಮೀಷನರ್ ಆದರು. 1889ರಲ್ಲಿ ಟ್ರೇನಿಂಗ್ ಕಾಲೇಜಿನ ಪ್ರಿನ್ಸಿಪಾಲರಾದರು. 1908ರಲ್ಲಿ ನಿವೃತ್ತರಾದರು. ಶಿಕ್ಷಣಕ್ಷೇತ್ರದಲ್ಲಿ ಅವರ ಸೇವೆಗಾಗಿ ಆಗಿನ ಬ್ರಿಟಿಷ್ ಸರಕಾರವು ಅವರನ್ನು 'ರಾವ್ ಬಹದ್ದೂರ್ ' ಪದವಿಯನ್ನು ಕೊಟ್ಟು ಗೌರವಿಸಿತು. ತಮ್ಮ ನೌಕರಿಯ ಅವಧಿಯಲ್ಲಿಯೇ ಮಿತ್ರಸಮಾಜದ ಸ್ಥಾಪನೆಗಾಗಿ ದುಡಿದರು, ಕ್ಷಾಮನಿವಾರಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು, ಧಾರವಾಡ ನಗರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.

ನಿವೃತ್ತಿಯ ನಂತರ ತಮ್ಮನ್ನು ಸಂಪೂರ್ಣವಾಗಿ ಸಮಾಜಸೇವೆಗೇ ಒಪ್ಪಿಸಿಕೊಂಡರು. 1908ರಲ್ಲಿ ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಆರಿಸಿ ಬಂದರು. ಮೂರು ಚುನಾವಣೆಗಳಲ್ಲಿ ಗೆದ್ದು ಆರು ವರ್ಷ ಈ ಸಭೆಯ ಸದಸ್ಯರಾಗಿದ್ದರು. ಅಲ್ಲಿ ಅವರು ಮಾಡಿದ ಅತ್ಯಂತ ಮಹತ್ವದ ಕೆಲಸವೆಂದರೆ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನ ಪ್ರತಿಪಾದನೆ. ಕಾಲೇಜು ಸ್ಥಾಪನೆಗೆ ಕರ್ನಾಟಕದಜನತೆ ಎರಡು ಲಕ್ಷ ರೂಪಾಯಿಗಳನ್ನು ನಿರ್ದಿಷ್ಟ ತಾರೀಕಿನ ಒಳಗೆ ಕೊಡಬೇಕೆಂಬ ಕರಾರನ್ನು ಸರಕಾರವು ಹಾಕಿತ್ತು. ರಾಯರು ಮತ್ತು ರಾವ್ ಬಹದ್ದೂರ ಅರಟಾಳವರು ಈ ಕರಾರನ್ನು ಪೂರೈಸಿದರು. 1917ರ ಜೂನ್ ನಲ್ಲಿ ಕಾಲೇಜಿನ ಸ್ಥಾಪನೆಯೊಂದಿಗೆ ಕರ್ನಾಟಕದ ಬಹು ದಿನಗಳ ಕನಸು ನನಸಾಯಿತು. ಹುಬ್ಬಳ್ಳಿ ಕಾರವಾರ ರೈಲುಮಾರ್ಗಕ್ಕಾಗಿ ಯೂ ಪ್ರಯತ್ನಿಸಿದರು. ಸಾಹಿತ್ಯದಲ್ಲಿ ಅವರಿಗೆ ವಿಶೇಷ ಆಸಕ್ತಿಯಿತ್ತು. ಕೆಲವು ಅನುವಾದಗಳನ್ನೂ ಮಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕಟ್ಟುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದರು. ಕರ್ನಾಟಕದ ಏಕೀಕರಣದ ಬಗ್ಗೆ ಕಳಕಳಿಯನ್ನು ಹೊಂದಿದ್ದರು.


‘ನಂದಿನಿ (ಬುದ್ಧನ ಚರಿತೆ)’ , ಸ್ತ್ರೀಶಿಕ್ಷಣದ ಅವಶ್ಯಕತೆ ಇವು ಅವರ ಕೆಲವು ಪ್ರಮುಖ ಕೃತಿಗಳು.


೧೯೨೦ರಲ್ಲಿ ಹೊಸಪೇಟೆಯಲ್ಲಿ ಜರುಗಿದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


ರೊದ್ದ ಶ್ರೀನಿವಾಸರಾಯರು ೧೯೨೯ ಅಗಸ್ಟ ೪ ರಂದು ನಿಧನರಾದರು.