ವಿಷಯಕ್ಕೆ ಹೋಗು

ರೇಡಿಯೊಹೆಡ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Radiohead
ಹಿನ್ನೆಲೆ ಮಾಹಿತಿ
ಮೂಲಸ್ಥಳAbingdon, Oxfordshire, England
ಸಂಗೀತ ಶೈಲಿAlternative rock, electronic music, experimental rock
ಸಕ್ರಿಯ ವರ್ಷಗಳು1985–present
L‍abelsXL, TBD, Parlophone, Capitol
Associated actsAtoms for Peace
ಅಧೀಕೃತ ಜಾಲತಾಣradiohead.com
ಸಧ್ಯದ ಸದಸ್ಯರುThom Yorke
Jonny Greenwood
Ed O'Brien
Colin Greenwood
Phil Selway

ರೇಡಿಯೊಹೆಡ್‌ ಆಕ್ಸ್ಫರ್ಡ್‌ಷೈರ್‌ ಕೌಂಟಿಯ ಅಬಿಂಗ್ಡನ್‌ ಮೂಲದ ಒಂದು ಇಂಗ್ಲಿಷ್‌ ಪರ್ಯಾಯ ರಾಕ್‌ ಸಂಗೀತ ಶೈಲಿಯ ವಾದ್ಯತಂಡ. ಇಸವಿ 1985ರಲ್ಲಿ ಈ ತಂಡದ ರಚನೆಯಾಯಿತು.

ಈ ವಾದ್ಯತಂಡದಲ್ಲಿ ಥಾಮ್‌ ಯಾರ್ಕ್‌ (ಪ್ರಮುಖ ಗಾಯನ, ರಿದಮ್‌ ಗಿಟಾರ್‌, ಪಿಯನೊ, ಬೀಟ್ಸ್‌); ಜಾನಿ ಗ್ರೀನ್ವುಡ್‌ (ಪ್ರಮುಖ ಗಿಟಾರ್‌, ಕೀಬೋರ್ಡ್‌, ಇತರೆ ವಾದ್ಯಗಳು); ಎಡ್‌ ಒ'ಬ್ರಯೆನ್ (ಗಿಟಾರ್‌, ಹಿನ್ನೆಲೆ ಗಾಯನ), ಕೊಲಿನ್‌ ಗ್ರೀನ್ವುಡ್‌ (ಬಾಸ್‌ ಗಿಟಾರ್‌, ಸಿಂತೆಸೈಜರ್‌ಗಳು); ಫಿಲ್‌ ಸೆಲ್ವೇ (ಡ್ರಮ್ಸ್‌ಗಳು, ತಾಳವಾದ್ಯಗಳು)‌.

ರೇಡಿಯೊಹೆಡ್‌ ತಂಡವು ತನ್ನ ಮೊದಲ ಏಕಗೀತೆ ಕ್ರೀಪ್‌ನ್ನು 1992ರಲ್ಲಿ ಬಿಡುಗಡೆಗೊಳಿಸಿತು. ಈ ಹಾಡು ಆರಂಭದಲ್ಲಿ ಸಫಲವಾಗಲಿಲ್ಲ. ಆದರೆ, 1993ರಲ್ಲಿ ತಮ್ಮ ಮೊಟ್ಟಮೊದಲ ಆಲ್ಬಮ್‌ ಪಾಬ್ಲೊ ಹನಿ ಬಿಡುಗಡೆಯಾದ ಹಲವು ತಿಂಗಳ ನಂತರ, 'ಕ್ರೀಪ್' ಏಕಗೀತೆಯು ವಿಶ್ವಾದ್ಯಂತ ಜನಪ್ರಿಯತೆ ಗಳಿಸಿತು. ತಮ್ಮ ಎರಡನೆಯ ಆಲ್ಬಮ್‌ ದಿ ಬೆಂಡ್ಸ್‌ (1995) ಬಿಡುಗಡೆಯಾಗುವುದರೊಂದಿಗೆ, ಯುನೈಟೆಡ್‌ ಕಿಂಗ್ಡಮ್‌ನಲ್ಲಿ ರೇಡಿಯೊಹೆಡ್‌ ವಾದ್ಯತಂಡದ ಜನಪ್ರಿಯತೆಯು ಹೆಚ್ಚಿತು. ಇಸವಿ 1997ರಲ್ಲಿ ಬಿಡುಗಡೆಯಾದ ರೇಡಿಯೊಹೆಡ್‌ ತಂಡದ ಮೂರನೆಯ ಆಲ್ಬಮ್‌ ಒಕೆ ಕಂಪ್ಯೂಟರ್ ‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಕೀರ್ತಿ ತಂದಿತು. ಆಧುನಿಕ ಪ್ರತ್ಯೇಕತೆಯ ವಿಷಯಗಳನ್ನು ಮತ್ತು ವಿಕಸನಶೀಲ ಧ್ವನಿಯನ್ನು ಸೂಚಿಸುವ ಒಕೆ ಕಂಪ್ಯೂಟರ್‌ ಆಲ್ಬಮ್‌ನ್ನು 1990ರ ದಶಕದಲ್ಲಿನ ಪ್ರಮುಖ ರೆಕಾರ್ಡ್‌ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ.

ಕಿಡ್ ಎ (2000) ಮತ್ತು ಆಮ್ನೆಸಿಯಾಕ್‌ (2001) ರೇಡಿಯೊಹೆಡ್‌ ವಾದ್ಯತಂಡದ ಸಂಗೀತಶೈಲಿಯಲ್ಲಿ ವಿಕಸನದ ಕುರುಹು ನೀಡಿತು. ಈ ತಂಡವು ಪ್ರಾಯೋಗಿಕ ವಿದ್ಯುನ್ಮಾನ ಸಂಗೀತ, ಕ್ರಾಟ್ರಾಕ್‌, ಪೋಸ್ಟ್‌-ಪಂಕ್‌ ಹಾಗೂ ಜ್ಯಾಝ್‌ ಪ್ರಭಾವಗಳನ್ನು ತನ್ನ ಸಂಯೋಜನೆಗಳಲ್ಲಿ ಬಳಸಿತು. ಇಸವಿ 2003ರಲ್ಲಿ ಬಿಡುಗಡೆಯಾದ ಹೇಯ್ಲ್‌ ಟು ದಿ ಥೀಫ್ ‌ ಆಲ್ಬಮ್‌ನಲ್ಲಿ ಯುದ್ಧದಿಂದ ಸ್ಫೂರ್ತಿ ಪಡೆದ ಗಿಟಾರ್‌-ಚಾಲಿತ ರಾಕ್‌, ವಿದ್ಯುನ್ಮಾನ ಮತ್ತು ಗೀತೆಗಳಿದ್ದವು. ಪ್ರಮುಖ ರೆಕಾರ್ಡ್‌ ಲೇಬೆಲ್‌ EMIಗಾಗಿ ಇದು ತಂಡದ ಅಂತಿಮ ಆಲ್ಬಮ್‌ ಆಗಿತ್ತು. EMI ಮೂಲಕ ಬಿಡುಗಡೆಯಾದ ತಂಡದ ಮೊದಲ ಆರು ಆಲ್ಬಮ್‌ಗಳು 2007ರೊಳಗೆ ಸುಮಾರು 25 ದಶಲಕ್ಷ ಪ್ರತಿಗಳು ಮಾರಾಟವಾಗಿದ್ದವು.[] ರೇಡಿಯೊಹೆಡ್‌ ತನ್ನ ಏಳನೆಯ ಆಲ್ಬಮ್‌ ಇನ್‌ ರೇನ್ಬೊಸ್‌ ನ್ನು 2007ರಲ್ಲಿ ಸ್ವತಂತ್ರವಾಗಿ ಬಿಡುಗಡೆಗೊಳಿಸಿತು. ಇದು ಮೂಲತಃ ಡಿಜಿಟಲ್‌ ಡೌನ್ಲೋಡ್‌ ಮೂಲಕ ಲಭ್ಯವಿದ್ದು, ಗ್ರಾಹಕರು ತಮ್ಮದೇ ಆದ ಬೆಲೆ ನಿಗದಿಪಡಿಸಲು ಸಾಧ್ಯವಾಗಿತ್ತು. ಆನಂತರ ಭೌತಿಕ ರೂಪದಲ್ಲಿ ಈ ಆಲ್ಬಮ್‌ನ್ನು ಬಿಡುಗಡೆಗೊಳಿಸಿತು ಮತ್ತು ಈ ಆಲ್ಬಮ್‌ ವಿಮರ್ಶಕರ ಮೆಚ್ಚುಗೆ ಪಡೆಯಿತು.

ದೊಡ್ಡ ಸಂಖ್ಯೆಯ ಶ್ರೋತೃಗಳ ಸಮೀಕ್ಷೆ ಮತ್ತು ವಿಮರ್ಶಕರ ಪಟ್ಟಿಯಲ್ಲಿ ರೇಡಿಯೊಹೆಡ್‌ ತಂಡದ ಸಂಯೋಜನೆಗಳು ಕಾಣಿಸಿಕೊಂಡಿವೆ.[][] ಉದಾಹರಣೆಗೆ, 2005ರಲ್ಲಿ ಪ್ರಕಟಿಸಲಾದ ರೊಲಿಂಗ್‌ ಸ್ಟೋನ್ಸ್‌ ಸರ್ವಕಾಲಿಕ ಮಹಾನ್ ಕಲಾವಿದರ ಪಟ್ಟಿ ಯಲ್ಲಿ ರೇಡಿಯೊಹೆಡ್‌ ತಂಡವು 73ನೆಯ ಸ್ಥಾನದಲ್ಲಿತ್ತು. ವಾದ್ಯತಂಡದ ಮುಂಚಿನ ಅಲ್ಬಮ್‌ಗಳು ವಿಶಿಷ್ಟವಾಗಿ ಬ್ರಿಟಿಷ್‌ ರಾಕ್‌ ಮತ್ತು ಪಾಪ್‌ ಶೈಲಿಯ ಸಂಗೀತದ ಮೇಲೆ ಪ್ರಭಾವ ಬೀರಿದ್ದರೆ,[] ಆನಂತರದ ಆಲ್ಬಮ್‌ಗಳು ಇನ್ನಷ್ಟು ಶ್ರೋತೃಗಳನ್ನು ಸಂಪಾದಿಸಿತು.[]

ಇತಿಹಾಸ

[ಬದಲಾಯಿಸಿ]

ವಾದ್ಯತಂಡದ ರಚನೆ ಮತ್ತು ಮೊದಲ ವರ್ಷಗಳು (1985-1991)

[ಬದಲಾಯಿಸಿ]
ಅಬಿಂಗ್ಡನ್‌ ಶಾಲೆ; ವಾದ್ಯತಂಡ ರಚನೆಯಾದದ್ದು ಇಲ್ಲೇ.

ಆಕ್ಸ್ಫರ್ಡ್‌ಷೈರ್‌ನ ಅಬಿಂಗ್ಡನ್‌ನಲ್ಲಿರುವ ಏಕೈಕ ಬಾಲಕರ ಪಬ್ಲಿಕ್‌ಸ್ಕೂಲ್ ಅಬಿಂಗ್ಡನ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವಾಗ ರೇಡಿಯೊಹೆಡ್ ವಾದ್ಯ ತಂಡ ರಚಿಸಿದ ಕಲಾವಿದರು ಪರಸ್ಪರ ಭೇಟಿಯಾದರು.[] ಥಾಮ್‌ ಯಾರ್ಕ್‌ ಮತ್ತು ಕೊಲಿನ್‌ ಗ್ರೀನ್ವುಡ್‌ ಒಂದೇ ವರ್ಷದಲ್ಲಿದ್ದರು, ಎಡ್‌ ಒ'ಬ್ರಿಯನ್‌ ಮತ್ತು ಫಿಲ್‌ ಸೆಲ್ವೇ ಒಂದು ವರ್ಷ ಹಿರಿಯರು, ಜಾನಿ ಗ್ರೀನ್ವುಡ್‌ ತನ್ನ ಸಹೋದರ ಕೊಲಿನ್‌ಗಿಂತಲೂ ಎರಡು ವರ್ಷ ಕಿರಿಯರು. ಇಸವಿ 1985ರಲ್ಲಿ ಈ ನಾಲ್ವರು 'ಆನ್‌ ಎ ಫ್ರೈಡೇ' ಎಂಬ ವಾದ್ಯತಂಡ ರಚಿಸಿದರು. ಶಾಲೆಯ ಸಂಗೀತ ಕೊಠಡಿಯಲ್ಲಿ ಸಾಮಾನ್ಯವಾಗಿ ಶುಕ್ರವಾರದ ಬ್ಯಾಂಡ್ ಪೂರ್ವಾಭ್ಯಾಸದ ದಿನವನ್ನೇ ಈ ಹೆಸರು ಉಲ್ಲೇಖಿಸುತ್ತಿತ್ತು.[] ತಂಡವು ತಮ್ಮ ಮೊದಲ ಸಂಗೀತಗೋಷ್ಠಿಯನ್ನು 1986ರ ಅಪರಾರ್ಧದಲ್ಲಿ ಆಕ್ಸ್ಫರ್ಡ್‌ನ ಜೆರಿಕೊ ಟೆವರ್ನ್‌ನಲ್ಲಿ ನಡೆಸಿತು.[] ಜಾನಿ ಗ್ರೀನ್ವುಡ್‌ ಮೂಲತಃ ಹಾರ್ಮೊನಿಕಾ ಹಾಗೂ ನಂತರ ಕೀಬೋರ್ಡ್‌ ವಾದಕರಾಗಿ ಸೇರಿದ್ದರು. ಆದರೆ ಅವರು ಶೀಘ್ರದಲ್ಲಿಯೇ ಪ್ರಮುಖ ಗಿಟಾರ್‌ ವಾದಕರಾದರು.[]

ಯಾರ್ಕ್‌, ಒ'ಬ್ರಿಯನ್‌, ಸೆಲ್ವೇ ಮತ್ತು ಕೊಲಿನ್‌ ಗ್ರೀನ್ವುಡ್‌ 1987ರೊಳಗೆ ಅಬಿಂಗ್ಡನ್‌ ಶಾಲೆಯಿಂದ ತೇರ್ಗಡೆಯಾಗಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಹೊರಟಿದ್ದರೂ, ವಾದ್ಯತಂಡವು ವಾರಾಂತ್ಯ ಹಾಗೂ ರಜಾ ದಿನಗಳಂದು ಪೂರ್ವಾಭ್ಯಾಸಗಳನ್ನು ಮುಂದುವರೆಸಿತು.[] ಇಸವಿ 1991ರಲ್ಲಿ, ಜಾನಿ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ತಮ್ಮ ಪದವಿ ಪೂರೈಸಿದ ನಂತರ, ಒಂದು ಶುಕ್ರವಾರ ತಂಡವು ಪುನಃ ಒಟ್ಟು ಸೇರಿ, ಮ್ಯಾನಿಕ್‌ ಹೆಡ್ಜ್‌ಹಾಗ್‌ ನಂತಹ ಪ್ರದರ್ಶನ ಸಂಗೀತದ ಧ್ವನಿಮುದ್ರಣ ಮಾಡಿ, ಆಕ್ಸ್ಫರ್ಡ್‌ ನಗರದಾದ್ಯಂತ ನೇರ ಸಂಗೀತಗೋಷ್ಠಿ ನಡೆಸಿದರು. 1980ರ ದಶಕದ ಅಪರಾರ್ಧದಲ್ಲಿ, ಇಂಡೀ ಸಂಗೀತವು ಆಕ್ಸ್ಫರ್ಡ್‌ಷೈರ್ ಮತ್ತು ಥೇಮ್ಸ್‌ ಕಣಿವೆಯಲ್ಲಿ ‌ಸಕ್ರಿಯವಾಗಿತ್ತು. ಆದರೆ ಅದು ರೈಡ್‌ ಮತ್ತು ಸ್ಲೋಡೈವ್‌ನಂತಹ ಷೂಗೇಜಿಂಗ್‌ ವಾದ್ಯತಂಡಗಳ ಸುತ್ತ ಕೇಂದ್ರೀಕೃತವಾಗಿತ್ತು. 'ಆನ್‌ ಎ ಫ್ರೈಡೆ' ವಾದ್ಯತಂಡವು ಈ ಪ್ರವೃತ್ತಿಗೆ ಸರಿಹೊಂದುವಂತೆ ಕಾಣಲಿಲ್ಲ. ತಂಡದ ಸದಸ್ಯರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿ ಹೊರಬರುವ ಹೊತ್ತಿಗೆ ಅದು ತಪ್ಪಿಹೋಗಿತ್ತು ಎಂದು ಪ್ರತಿಕ್ರಿಯಿಸಿದರು.[೧೦]

ಅದೇನೇ ಇರಲಿ, 'ಆನ್‌ ಎ ಫ್ರೈಡೆ' ತಂಡದ ನೇರಪ್ರದರ್ಶನಗಳು ಹೆಚ್ಚಿದಾಗ, ಧ್ವನಿಮುದ್ರಣಾ ಕಂಪೆನಿಗಳು ಮತ್ತು ಸಂಗೀತ ನಿರ್ಮಾಪಕರು ಆಸಕ್ತಿ ವಹಿಸಲಾರಂಭಿಸಿದರು. ಸ್ಲೋಡೈವ್‌ನ ನಿರ್ಮಾಪಕ ಮತ್ತು ಆಕ್ಸ್ಫರ್ಡ್‌ನ ಕೋರ್ಟ್‌ಯಾರ್ಡ್ ಸ್ಟುಡಿಯೊದ ಸಹ-ಮಾಲಿಕ ಕ್ರಿಸ್‌ ಹಫೊರ್ಡ್‌ ಜೆರಿಕೊ ಟೆವರ್ನ್‌ನಲ್ಲಿ ನಡೆದ 'ಆನ್‌ ಎ ಫ್ರೈಡೆ' ತಂಡದ ಆರಂಭಿಕ ಗೋಷ್ಠಿಯೊಂದಕ್ಕೆ ಹಾಜರಿದ್ದರು. ಈ ವಾದ್ಯತಂಡದ ಸಂಗೀತ ಪ್ರದರ್ಶನವನ್ನು ಮೆಚ್ಚಿದ ಅವರು ಮತ್ತು ಅವರ ಪಾಲುದಾರ ಬ್ರೈಸ್‌ ಎಡ್ಜ್‌ ಒಂದು ಡೆಮೊ ಸುರುಳಿಯನ್ನು ನಿರ್ಮಿಸಿ, 'ಆನ್‌ ಎ ಫ್ರೈಡೆ' ತಂಡದ ವ್ಯವಸ್ಥಾಪಕರಾದರು.[] ಅವರು ಇಂದಿಗೂ ಈ ತಂಡದ ವ್ಯವಸ್ಥಾಪಕರಾಗಿ ಉಳಿದಿದ್ದಾರೆ. ಕೊಲಿನ್‌ ಗ್ರೀನ್ವುಡ್‌ ಉದ್ಯೋಗಿಯಾಗಿದ್ದ ಧ್ವನಿಮುದ್ರಣಾ ಅಂಗಡಿಯಲ್ಲಿ ಅವರ ಮತ್ತು EMI ಪ್ರತಿನಿಧಿ ಕೀತ್‌ ವೊಜೆನ್ಕ್ರಾಫ್ಟ್‌ ನಡುವಿನ ಅಕಸ್ಮಾತ್‌ ಭೇಟಿಯ ಫಲವಾಗಿ, 1991ರ ಅಪರಾರ್ಧದಲ್ಲಿ ತಂಡವು ಕಂಪೆನಿಯೊಂದಿಗೆ ಆರು ಆಲ್ಬಮ್‌ಗಳ ಧ್ವನಿಮುದ್ರಣಾ ಒಪ್ಪಂದಕ್ಕೆ ಸಹಿಹಾಕಿತು.[] EMI ಕೋರಿಕೆಯ ಮೇರೆಗೆ, ವಾದ್ಯತಂಡವು ತನ್ನ ಹೆಸರನ್ನು ರೇಡಿಯೊಹೆಡ್‌ ಎಂದು ಬದಲಾಯಿಸಿತು. ಟ್ರೂ ಸ್ಟೋರೀಸ್‌ ಆಲ್ಬಮ್‌ನ ಹಾಡು ಟಾಕಿಂಗ್‌ ಹೆಡ್ಸ್‌ನ ಶೀರ್ಷಿಕೆಯು ಇದರ ಹಿಂದಿನ ಪ್ರೇರಣೆಯಾಗಿತ್ತು.[]

ಪಾಬ್ಲೊ ಹನಿ , ದಿ ಬೆಂಡ್ಸ್‌ ಹಾಗೂ ಆರಂಭಿಕ ಯಶಸ್ಸುಗಳು (1992–1995)

[ಬದಲಾಯಿಸಿ]

ರೇಡಿಯೊಹೆಡ್‌ ವಾದ್ಯತಂಡವು ತನ್ನ ಮೊಟ್ಟಮೊದಲ ಬಿಡುಗಡೆಡ್ರಿಲ್‌ EPಯನ್ನು ಕ್ರಿಸ್ ಹಫೊರ್ಡ್‌ ಮತ್ತು ಬ್ರೈಸ್‌ ಎಡ್ಜ್‌ರೊಂದಿಗೆ ಕೋರ್ಟ್ ಯಾರ್ಡ್ ಸ್ಟುಡಿಯೊದಲ್ಲಿ ಧ್ವನಿಮುದ್ರಣ ನಡೆಸಿತು‌. ಮಾರ್ಚ್‌ 1992ರಲ್ಲಿ ಬಿಡುಗಡೆಯಾದ ಅದರ ಸಾಧನೆಯ ಪಟ್ಟಿ ಕಳಪೆಯಾಗಿತ್ತು. ಆನಂತರ, US ಇಂಡೀ ಶೈಲಿಯ ವಾದ್ಯತಂಡಗಳಾದ ಪಿಕ್ಸೀಸ್‌ ಮತ್ತು ಡೈನೊಸಾರ್‌ ಜೂನಿಯರ್ ವಾದ್ಯತಂಡದೊಂದಿಗೆ ಕೆಲಸ ಮಾಡಿದ್ದ ಪಾಲ್‌ ಕೊಲ್ಡೆರೀ ಮತ್ತು ಸೀನ್‌ ಸ್ಲೇಡ್‌ರನ್ನು ರೇಡಿಯೊಹೆಡ್‌ ತಂಡವು ಸೇರಿಸಿಕೊಂಡಿತು. ಇಸವಿ 1992ರಲ್ಲಿ ಆಕ್ಸ್‌ಫರ್ಡ್‌ನ ಸ್ಟುಡಿಯೊದಲ್ಲಿ ತಕ್ಷಣವೇ ಧ್ವನಿಮುದ್ರಿತವಾದ ಚೊಚ್ಚಲ ಆಲ್ಬಂ ತಯಾರಿಸಿತು.[] ಅದೇ ವರ್ಷ ಬಿಡುಗಡೆಯಾದ ಏಕಗೀತೆ 'ಕ್ರೀಪ್‌'ನೊಂದಿಗೆ ರೇಡಿಯೊಹೆಡ್‌ ಬ್ರಿಟಿಷ್‌ ಸಂಗೀತ ಮಾಧ್ಯಮದ ಗಮನ ಸೆಳೆಯಿತು. ಆದರೆ ಎಲ್ಲಾ ವಿಮರ್ಶೆಗಳೂ ಸಕಾರಾತ್ಮಕವಾಗಿರಲಿಲ್ಲ. 'ವಾದ್ಯತಂಡವೊಂದಕ್ಕೆ ಹೇಡಿತನದ ನೆಪ' ಎಂದು NME ಅದನ್ನು ಟೀಕಿಸಿತು.[೧೧] ಕ್ರೀಪ್‌ ಏಕಗೀತೆಯು ತುಂಬಾ ಖಿನ್ನತೆ ಮೂಡಿಸುವಂತ ಗೀತೆ ಎಂಬ ಕಾರಣ ನೀಡಿ BBC ರೇಡಿಯೊ 1 ಅದನ್ನು ಕಪ್ಪುಪಟ್ಟಿಗೆ ಸೇರಿಸಿತು.[೧೨]

ತಮ್ಮ ಮೊಟ್ಟಮೊದಲ ಆಲ್ಬಮ್‌ ಪಾಬ್ಲೊ ಹನಿ ಯನ್ನು ಫೆಬ್ರುವರಿ 1993ರಲ್ಲಿ ಬ್ಯಾಂಡ್ ಬಿಡುಗಡೆಗೊಳಿಸಿತು. UK ಸಂಗೀತ ಪಟ್ಟಿಯಲ್ಲಿ ಅದು 22ನೆಯ ಸ್ಥಾನದಲ್ಲಿತ್ತು."ಕ್ರೀಪ್" ಮತ್ತು ಸ್ತುತಿಗೀತೆಯಂತಿದ್ದ ನಂತರದ ಎರಡು ಏಕಗೀತೆಗಳಾದ 'ಎನಿವನ್‌ ಕೆನ್‌ ಪ್ಲೇ ಗಿಟಾರ್‌' ಹಾಗೂ 'ಸ್ಟಾಪ್‌ ವಿಸ್ಪರಿಂಗ್'‌ ರೇಡಿಯೊ ಅಥವಾ ವೀಡಿಯೊ ಜನಪ್ರಿಯತೆ ಗಳಿಸಲು ವಿಫಲವಾದವು. ವಾದ್ಯತಂಡವು ಆನಂತರ 'ಜವಾಬ್ದಾರಿ ತೆಗೆದುಕೊಳ್ಳದ' ಪಾಪ್‌ ಈಸ್‌ ಡೆಡ್‌ ಎಂಬ ಆಲ್ಬಮೇತರ ಏಕಗೀತೆಯು ಕಳಪೆ ಮಾರಾಟ ಕಂಡಿತು. 'ವಾದ್ಯತಂಡದ ಆರಂಭಿಕ ಶೈಲಿ 1990ರ ದಶಕದ ಮೊದಲಾರ್ಧದಲ್ಲಿ ಜನಪ್ರಿಯ ಗ್ರಂಜ್‌ ಸಂಗೀತವನ್ನು ಹೋಲುತ್ತದೆ' ಎಂದು ಕೆಲವು ಟೀಕಾಕಾರರು ಅಭಿಪ್ರಾಯ ಸೂಚಿಸಿದರು. ರೇಡಿಯೊಹೆಡ್‌ನ್ನು ನಿರ್ವಾಣ-ಲೈಟ್‌ [೧೩] ಎನ್ನುವ ಮಟ್ಟಕ್ಕೂ ತಲುಪಿದರು. ಇಷ್ಟಾದರೂ ಪಾಬ್ಲೊ ಹನಿ ಆರಂಭದ ಬಿಡುಗಡೆಯಲ್ಲಿ ವಿಮರ್ಶಾತ್ಮಕ ಅಥವಾ ವಾಣಿಜ್ಯ ಯಶಸ್ಸು ಕಾಣಲಿಲ್ಲ.[೧೧] ಜನಪ್ರಿಯ ಗಿಟಾರ್‌-ಆಧರಿತ ಶೈಲಿಯನ್ನು ಹಂಚಿಕೊಂಡ ಪ್ರಭಾವಗಳು, ಜೊತೆಗೆ ಯಾರ್ಕ್‌ ಕೀಚಲು ಧ್ವನಿಯಲ್ಲಿ ಹಾಡಿ ಗಮನ ಸೆಳೆದರೂ, ರೇಡಿಯೊಹೆಡ್‌ ತಮ್ಮ ಪ್ರದರ್ಶನ ಪ್ರವಾಸಗಳನ್ನು ಕೇವಲ ಬ್ರಿಟಿಷ್‌ ವಿಶ್ವವಿದ್ಯಾನಿಲಯ ಮತ್ತು ಕ್ಲಬ್‌ಗಳಿಗೆ ಸೀಮಿತಗೊಳಿಸಿತ್ತು.[೧೪]

ಇಸವಿ 1993ರ ಮೊದಲ ಕೆಲವು ತಿಂಗಳುಗಳಲ್ಲಿ, ರೇಡಿಯೊಹೆಡ್‌ ಇತರೆಡೆ ವಾಸಿಸುವ ಶ್ರೋತೃಗಳ ಗಮನವನ್ನೂ ಸೆಳೆಯಿತು. ಒಬ್ಬ ಪ್ರಭಾವೀ DJಯಿಂದ ಕ್ರೀಪ್‌ ಆಗಾಗ್ಗೆಇಸ್ರೇಲಿ ರೇಡಿಯೊದಲ್ಲಿ ನುಡಿಸಲಾಗುತ್ತಿತ್ತು. ಆ ದೇಶದ ಸಂಗೀತ ಪಟ್ಟಿಗಳಲ್ಲಿ ಜನಪ್ರಿಯತೆ ಗಳಿಸಿದ ನಂತರ, ಅದೇ ವರ್ಷ ಮಾರ್ಚ್‌ ತಿಂಗಳಲ್ಲಿ ರೇಡಿಯೊಹೆಡ್‌ ತಂಡಕ್ಕೆ ಟೆಲ್‌ ಅವಿವ್‌ನಲ್ಲಿ ಸಾಗರೋತ್ತರ ಸಂಗೀತಗೋಷ್ಠಿ ನಡೆಸಲು ಆಮಂತ್ರಣ ಲಭಿಸಿತು. ಇದು ರೇಡಿಯೋಹೆಡ್‌ನ ಮೊಟ್ಟಮೊದಲ ವಿದೇಶೀ ವಾದ್ಯಗೋಷ್ಠಿ ಎನಿಸಿತು.[೧೬] ಇದೇ ಸಮಯದಲ್ಲಿ, ಸ್ಯಾನ್‌ ಫ್ರಾನ್ಸಿಸ್ಕೊ ಪರ್ಯಾಯ ರೇಡಿಯೊ ವಾಹಿನಿ KITS ತನ್ನ ಹಾಡುಪಟ್ಟಿ (ಪ್ಲೇಲಿಸ್ಟ್‌)ಗೆ ಈ ಹಾಡನ್ನು ಸೇರಿಸಿತು. ಶೀಘ್ರದಲ್ಲಿಯೇ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪಶ್ಚಿಮ ತೀರದಲ್ಲಿರುವ ಇತರೆ ರೇಡಿಯೊ ವಾಹಿನಿಗಳು ಸಹ ಅದನ್ನು ಅನುಸರಿಸಿದವು. ಜೂನ್‌1993ಲ್ಲಿ ರೇಡಿಯೊಹೆಡ್‌ ತನ್ನ ಮೊದಲ ಉತ್ತರ ಅಮೆರಿಕಾ ಪ್ರವಾಸ ಹೋಗುವಷ್ಟರಲ್ಲಿ MTVಯಲ್ಲಿ 'ಕ್ರೀಪ್'‌ ಹಾಡಿನ ಸಂಗೀತ ವೀಡಿಯೊ ಆಗಾಗ್ಗೆ ಪ್ರಸಾರಗೊಳ್ಳುತ್ತಿತ್ತು.[] ಈ ಹಾಡು US ಆಧುನಿಕ ರಾಕ್‌ ಶೈಲಿ ಸಂಗೀತ ಪಟ್ಟಿಗಳಲ್ಲಿ ಎರಡನೆಯ ಸ್ಥಾನಕ್ಕೇರಿತು. ಇದು 40 ಅತಿ ಜನಪ್ರಿಯ ಪಾಪ್ ಪಟ್ಟಿಗಳ ಕೆಳಭಾಗಕ್ಕೆ ಮುಟ್ಟಿ, ಅಂತಿಮವಾಗಿ ವರ್ಷಾಂತ್ಯದಲ್ಲಿ ಬ್ರಿಟನ್‌ನಲ್ಲಿ ಪುನಃ ಬಿಡುಗಡೆಗೊಳಿಸಿದಾಗ, UK ಏಕಗೀತೆಗಳ ಪಟ್ಟಿಯಲ್ಲಿ ಏಳನೆಯ ಸ್ಥಾನ ಗಿಟ್ಟಿಸಿತು.[೧೭]

ಏಕಗೀತೆಗೆ ಅಮೆರಿಕಾದಲ್ಲಿ ಲಭಿಸಿದ ಅನಿರೀಕ್ಷಿತ ಗಮನದ ಫಲವಾಗಿ, ಧ್ವನಿಮುದ್ರಣಾ ಕಂಪೆನಿ EMI ನೂತನ ಉತ್ತೇಜನಾ ಯೋಜನೆಗಳನ್ನು ರೂಪಿಸಲಾರಂಭಿಸಿತು. ರೇಡಿಯೊಹೆಡ್‌ ವಾದ್ಯತಂಡವು ವಿವಿಧ ಭೂಖಂಡಗಳ ನಡುವೆ ಪ್ರವಾಸ ನಡೆಸಿ, 1993ರಲ್ಲಿ 150ಕ್ಕಿಂತಲೂ ಹೆಚ್ಚು ವಾದ್ಯಗೋಷ್ಠಿ ನಡೆಸಿತ್ತು.[೧೪] ಪಾಬ್ಲೊ ಹನಿ ಉತ್ತೇಜನಾ ಪ್ರವಾಸವು ತನ್ನ ಎರಡನೆಯ ವರ್ಷಕ್ಕೂ ವಿಸ್ತರಿಸುವುದರೊಂದಿಗೆ, ಇದ್ದಕ್ಕಿದಂತೆ ಲಭಿಸಿದ ಯಶಸ್ಸಿನ ಒತ್ತಡದ ಕಾರಣ ರೇಡಿಯಹೆಡ್ ತಂಡವು ಒಡೆದುಹೋಗುವ ಹಂತ ತಲುಪಿತ್ತು.[೧೮] ತಂಡವು ಇದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು ಎಂದು ರೇಡಿಯೊಹೆಡ್ ಸದಸ್ಯರು ತಿಳಿಸಿದರು. ಪ್ರವಾಸದ ಅಂತಿಮ ಹಂತಗಳಲ್ಲಿ, ಎರಡು ವರ್ಷಗಳ ಹಿಂದೆ ಧ್ವನಿಮುದ್ರಣ ಮಾಡಲಾದ ಹಾಡುಗಳನ್ನೇ ಹಾಡುತ್ತಿದ್ದರು... ಅವರು ಹೊಸ ಹಾಡುಗಳನ್ನು ರಚಿಸುವ ಇಂಗಿತ ಹೊಂದಿದ್ದರೂ ಕಾಲವಕ್ರತೆಯಲ್ಲಿ ಸಿಲುಕಿದ್ದರೇನೋ ಎನಿಸಿತ್ತು.[೧೯]

ಇಸವಿ 1994ರಲ್ಲಿ ಅಬ್ಬೆ ರೋಡ್‌ ಸ್ಟುಡಿಯೊಸ್‌ ನಿರ್ಮಾಪಕ ಜಾನ್‌ ಲೆಕೀಯವರನ್ನು ನೇಮಿಸಿಕೊಂಡ ವಾದ್ಯತಂಡವು, ತನ್ನ ಎರಡನೆಯ ಆಲ್ಬಮ್‌ ರಚಿಸಲಾರಂಭಿಸಿತು. ಕ್ರೀಪ್‌ ಯಶಸ್ಸಿಗೆ ಸರಿಸಮವಾದ ಅಥವಾ ಅದನ್ನೂ ಮೀರಿಸುವಂತಹ ಉತ್ತಮ ಗೀತೆಗಳನ್ನು ಸಂಯೋಜಿಸುವ ನಿರೀಕ್ಷೆಗಳೊಂದಿಗೆ ಬಹಳಷ್ಟು ಬಿಗುವಿನ ವಾತಾವರಣವನ್ನೂ ತಂದಿಟ್ಟಿತು.[೨೦] ವಾದ್ಯತಂಡದ ಸದಸ್ಯರು ಹಾಡುಗಳನ್ನು ಅತಿಯಾಗಿ ಪೂರ್ವಾಭ್ಯಾಸ ನಡೆಸಿದ ಕಾರಣ, ಸ್ಟುಡಿಯೊದಲ್ಲಿ ಧ್ವನಿಮುದ್ರಣವು ಅಸ್ವಾಭಾವಿಕ ಎನಿಸಿತು.[೨೧] ತಂಡದ ಸದಸ್ಯರು ದೃಶ್ಯಾವಳಿಯಲ್ಲಿ ಬದಲಾವಣೆಗಾಗಿ ಇಚ್ಛಿಸಿದರು. ಒತ್ತಡವನ್ನು ಕಡಿಮೆಗೊಳಿಸಲು ದೂರಪ್ರಾಚ್ಯ, ಆಸ್ಟ್ರಲಾಸಿಯ ಹಾಗೂ ಮೆಕ್ಸಿಕೊ ದೇಶಗಳ ಪ್ರವಾಸ ಹೋಗಿಬಂದರು. ತಮ್ಮ ಹೊಸ ಸಂಯೋಜನೆಗಳನ್ನು ತಮ್ಮ ಸಂಗೀತಗೋಷ್ಠಿಯಲ್ಲಿ ನುಡಿಸುವ ಮೂಲಕ ತಂಡಕ್ಕೆ ಇನ್ನಷ್ಟು ವಿಶ್ವಾಸ ಪ್ರಾಪ್ತವಾಯಿತು.[೨೧] ಆದರೂ, ತಾವು ಸಾಧಿಸಿದ ಖ್ಯಾತಿಯನ್ನು ಪುನಃ ಹೋಲಿಕೆ ಮಾಡಿದ ಯಾರ್ಕ್‌, ತಾವು ಪ್ರಪಂಚಕ್ಕೆ ಪ್ರಸ್ತುತಪಡಿಸಲು ನೆರವಾಗಿದ್ದೇನೆಂದು ಭಾವಿಸಿದ 'ಲೈಂಗಿಕತೆಯ, ದುರಹಂಕಾರದ, MTV ಸಮೂಹ ಆಕರ್ಷಣೆಯ ಜೀವನಶೈಲಿ'ಯ ಭ್ರಮೆಯಿಂದ ಹೊರಬಂದರು.[೨೨]

ಇಸವಿ 1994ರ ಅಪರಾರ್ಧದಲ್ಲಿ ತಂಡವು ಮೈ ಐರನ್‌ ಲಂಗ್ ‌ ಎಂಬ ಏಕಗೀತೆಯನ್ನು EP ರೂಪದಲ್ಲಿ ಬಿಡುಗಡೆಗೊಳಿಸಿ ಪ್ರತಿಕ್ರಿಯಿಸಿತು. ವಾದ್ಯತಂಡವು ತನ್ನ ಎರಡನೆಯ ಆಲ್ಬಮ್‌ನಲ್ಲಿ ಹೆಚ್ಚಿನ ಆಳವಾದ ಸಂಗೀತ ನೀಡಬೇಕೆಂಬ ಅವರ ಗುರಿಯತ್ತ ಪರಿವರ್ತನೆಯಾದ ಗುರುತಾಗಿತ್ತು.[೨೩] ಪರ್ಯಾಯ ರೇಡಿಯೊ ವಾಹನಿಗಳ ಮೂಲಕ ಉತ್ತೇಜಿತವಾದ ಈ ಏಕಗೀತೆಯು ನಿರೀಕ್ಷೆಗೂ ಮೀರಿ ಮಾರಾಟವಾಯಿತು. ಮೊದಲ ಬಾರಿಗೆ, ವಾದ್ಯತಂಡವು ಒಂದು ಹಿಟ್‌ ಗೀತೆ ದಾಟಿ ನೆಚ್ಚಿನ ಅಭಿಮಾನಿಗಳ ನೆಲೆಯನ್ನು ಸಂಪಾದಿಸಿದ್ದನ್ನು ಸೂಚಿಸಿತು.[೨೪] ಪ್ರವಾಸದಲ್ಲಿ ಇನ್ನಷ್ಟು ಹೊಸ ಹಾಡುಗಳನ್ನು ಪರಿಚಯಿಸಿದ ರೇಡಿಯೊಹೆಡ್‌, ವರ್ಷದ ಕೊನೆಯಲ್ಲಿ ತನ್ನ ಎರಡನೆಯ ಆಲ್ಬಮ್‌ ಧ್ವನಿ ಮುದ್ರಣ ಸಂಪೂರ್ಣಗೊಳಿಸಿತು. ದಿ ಬೆಂಡ್ಸ್ ‌ ಆಲ್ಬಮ್‌ನ್ನು ಮಾರ್ಚ್‌ 1995ರಲ್ಲಿ ಬಿಡುಗಡೆಗೊಳಿಸಿತು. ಆಲ್ಬಮ್‌ನ ಹಾಡುಗಳಲ್ಲಿ ವಾದ್ಯತಂಡದ ಮೂರು ಗಿಟಾರ್‌ ವಾದಕರಿಂದ ದಟ್ಟ ಪುನರಾವರ್ತಿಸುವ ಗೀತಭಾಗಗಳು ಮತ್ತು ಹಗುರ ರೂಪಕಗಳಿದ್ದವು; ಜೊತೆಗೆ, ಕೀಬೋರ್ಡ್ಗಳ‌ ಬಳಕೆಯ ಮೊಟ್ಟಮೊದಲ ಧ್ವನಿಮುದ್ರಣದ ಹಾಡಿಗಿಂತಲೂ ಈ ಆಲ್ಬಮ್‌ನಲ್ಲಿ ಹೆಚ್ಚಾಗಿತ್ತು.[] ಈ ಆಲ್ಬಮ್‌ ಗೀತೆಯ ಸಾಹಿತ್ಯ ಮತ್ತು ಪ್ರದರ್ಶನಗಳು ಎರಡಕ್ಕೂ ಸಕಾರಾತ್ಮಕ ವಿಮರ್ಶೆ ಸಂಪಾದಿಸಿತು.[೧೧]

ಆ ಕಾಲದಲ್ಲಿ ಬ್ರಿಟ್‌ಪಾಪ್‌ ಕ್ಷೇತ್ರವು ಮಾಧ್ಯಮದ ಹೆಚ್ಚು ಗಮನ ಸೆಳೆಯುತ್ತಿರುವಾಗ, ರೇಡಿಯೊಹೆಡ್‌ ಹೊರಗಿನದು ಎಂದು ಪರಿಗಣಿಸಲಾಗಿತ್ತು. ಅಂತಿಮವಾಗಿ 'ದಿ ಬೆಂಡ್ಸ್ ‌' [೧೦] ನೊಂದಿಗೆ ತಮ್ಮ ತಾಯ್ನಾಡಿನಲ್ಲಿ ಯಶಸ್ಸು ಕಂಡಿತು. "ಫೇಕ್‌ ಪ್ಲ್ಯಾಸ್ಟಿಕ್‌ ಟ್ರೀಸ್‌", "ಹೈ ಅಂಡ್‌ ಡ್ರೈ", "ಜಸ್ಟ್‌" ಹಾಗೂ "ಸ್ಟ್ರೀಟ್‌ ಸ್ಪಿರಿಟ್‌ (ಫೇಡ್‌ ಔಟ್‌)" ಏಕಗೀತೆಗಳು UK ಸಂಗೀತ ಪಟ್ಟಿಗಳಲ್ಲಿ ಯಶಸ್ಸಿನತ್ತ ಸಾಗಿತು. ಎರಡನೆಯ ಹಾಡು ರೇಡಿಯೊಹೆಡ್‌ ತಂಡಕ್ಕೆ ಮೊದಲ ಬಾರಿ ಟಾಪ್‌ ಫೈವ್‌ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿಕೊಟ್ಟಿತು. ಇಸವಿ 1995ರಲ್ಲಿ ರೇಡಿಯೊಹೆಡ್‌ ಪುನಃ ಉತ್ತರ ಅಮೆರಿಕಾ ಮತ್ತು ಯುರೋಪ್‌ ಪ್ರವಾಸ ಕೈಗೊಂಡಿತು. ಈ ಬಾರಿ, ತನ್ನ ಆರಂಭಿಕ ವರ್ಷಗಳಲ್ಲಿ ಪ್ರೇರಣೆಗಳಾಗಿದ್ದ, ಆ ಕಾಲದಲ್ಲಿ ಅತಿದೊಡ್ಡ ರಾಕ್‌ ಸಂಗೀತ ತಂಡವಾಗಿದ್ದ R.E.M.ಗೆ ಬೆಂಬಲವಾಗಿ ಪ್ರವಾಸ ಕೈಗೊಂಡಿತು.[೧೯] ಮೈಕಲ್‌ ಸ್ಟೈಪ್ಸ್‌ರಂತಹ ಖ್ಯಾತ ಅಭಿಮಾನಿಗಳು ಹಾಗೂ 'ಜಸ್ಟ್‌' ಮತ್ತು 'ಸ್ಟ್ರೀಟ್‌ ಸ್ಪಿರಿಟ್‌' ಹಾಡುಗಳಿಗಾಗಿ ವಿಶಿಷ್ಟತೆಯುಳ್ಳ ಸಂಗೀತ ವೀಡಿಯೊಗಳು ಸೃಷ್ಟಿಸಿದ ಸಂಚಲನ, UKಯಾಚೆ ರೇಡಿಯೊಹೆಡ್‌ನ ಜನಪ್ರಿಯತೆ ಗಳಿಸಿ, ಉಳಿಸಿಕೊಳ್ಳಲು ನೆರವಾಯಿತು.

ಆದರೂ, ಹೆಚ್ಚುತ್ತಿದ್ದ ಅಭಿಮಾನಿಗಳ ನೆಲೆಯು 'ಕ್ರೀಪ್'ನ ವಿಶ್ವಾದ್ಯಂತ ವಾಣಿಜ್ಯ ಯಶಸ್ಸನ್ನು‌ ಪುನರಾವರ್ತಿಸಲು ಸಾಲದಾಗಿತ್ತು. 'ಹೈ ಅಂಡ್‌ ಡ್ರೈ' ಅಲ್ಪಪ್ರಮಾಣದಲ್ಲಿ ಯಶಸ್ವಿಯಾಯಿತು, ಆದರೆ ದಿ ಬೆಂಡ್ಸ್ ‌ US ಸಂಗೀತ ಪಟ್ಟಿಯಲ್ಲಿ 88ನೆಯ ಸ್ಥಾನ ಗಳಿಸಿತು. ಇದು ರೇಡಿಯೊಹೆಡ್‌ ತಂಡದ ಅತಿ ಕಡಿಮೆ ಶ್ರೇಯಾಂಕವಾಗಿ ಉಳಿಯಿತು.[೨೫] ಆಲ್ಬಮ್‌ನ ಸ್ವಾಗತದೊಂದಿಗೆ ರೇಡಿಯೋಹೆಡ್‌ ವಾದ್ಯತಂಡ ಸಮಾಧಾನ ವ್ಯಕ್ತಪಡಿಸಿತು. ಜಾನಿ ಗ್ರೀನ್ವುಡ್ ಹೇಳಿದ್ದು ಹೀಗೆ: "ನನ್ನ ಪ್ರಕಾರ, ಡಿ ಬೆಂಡ್ಸ್‌ ಬಿಡುಗಡೆಯಾಗಿ 9ರಿಂದ 12 ತಿಂಗಳುಗಳ ನಂತರ ನಮಗೆ ಮಹತ್ವದ ತಿರುವು ಸಿಕ್ಕಿತು. ವರ್ಷದ ಅಂತ್ಯದಲ್ಲಿ ಪ್ರಕಟಿಸಲಾದ ಶ್ರೋತೃಗಳ ಅತ್ಯುತ್ತಮ ಸಮೀಕ್ಷೆಗಳಲ್ಲಿ ಈ ಆಲ್ಬಮ್‌ ಕಾಣಿಸಿಕೊಳ್ಳತೊಡಗಿತು. ನಾವು ವಾದ್ಯತಂಡವಾಗಿ ರೂಪುಗೊಳ್ಳುವ ಸರಿಯಾದ ನಿರ್ಧಾರ ತೆಗೆದುಕೊಂಡೆವೆಂದು ಆಗಲೇ ಭಾವಿಸಲು ಆರಂಭಿಸಿದ್ದು.' [೨೬]

ಒಕೆ ಕಂಪ್ಯೂಟರ್‌ , ಖ್ಯಾತಿ ಮತ್ತು ವಿಮರ್ಶಕ ಪ್ರಶಂಸೆ (1996–1998)

[ಬದಲಾಯಿಸಿ]

ಇಸವಿ 1995ರ ಅಪರಾರ್ಧದಲ್ಲಿ, ರೇಡಿಯೊಹೆಡ್‌ ತನ್ನ ಮುಂದಿನ ರೆಕಾರ್ಡ್‌ಗಾಗಿ ಹಾಡೊಂದನ್ನು ಆಗಲೇ ಧ್ವನಿಮುದ್ರಣ ಮಾಡಿಯಾಗಿತ್ತು. ವಾರ್‌ ಚೈಲ್ಡ್‌ ದಾನಧರ್ಮ ಸಂಸ್ಥೆಯ ದಿ ಹೆಲ್ಪ್‌ ಆಲ್ಬಮ್‌ ನ್ನು ಉತ್ತೇಜಿಸಲೆಂದು ಲಕಿಯನ್ನು ಏಕಗೀತೆಯಾಗಿ ಬಿಡುಗಡೆಯಾಯಿತು.[೨೭] ದಿ ಬೆಂಡ್ಸ್‌ ಆಲ್ಬಮ್‌ ರಚನೆಯಲ್ಲಿ ಸಹಾಯ ಮಾಡಿ, 1996ರಲ್ಲಿ B-ಸೈಡ್‌ "ಟಾಕ್‌ ಷೋ ಹಾಸ್ಟ್‌" ನಿರ್ಮಿಸಿದ್ದ ನೈಗೆಲ್‌ ಗಾಡ್ರಿಕ್‌ ಎಂಬ ಒಬ್ಬ ಯುವ ಧ್ವನಿ ಇಂಜಿನಿಯರ್‌ ಜತೆ ಸಂಕ್ಷಿಪ್ತ ಚರ್ಚೆಯ ಬಳಿಕ ಇದು ಹೊರಬಂತು. ವಾದ್ಯತಂಡವು ತಮ್ಮ ಮುಂದಿನ ಆಲ್ಬಮ್‌ನ್ನು ಗಾಡ್ರಿಚ್‌ರ ಸಹಯೋಗದೊಂದಿಗೆ ನಿರ್ಮಿಸಲು ನಿರ್ಧರಿಸಿತು. ಇಸವಿ 1996ರ ಪೂರ್ವಾರ್ಧದಲ್ಲಿ ಸಂಗೀತ ಸಂಯೋಜನಾ ಕಾರ್ಯ ಆರಂಭವಾಯಿತು. ಜುಲೈ ತಿಂಗಳೊಳಗೆ ತಂಡವು ತಮ್ಮ ಸಂಗೀತ ಪೂರ್ವಾಭ್ಯಾಸದ ಸ್ಟುಡಿಯೊ ಕ್ಯಾನ್ಡ್‌ ಅಪ್ಲಾಸ್‌‌ನಲ್ಲಿ ನಾಲ್ಕು ಹಾಡುಗಳ ಧ್ವನಿಮುದ್ರಣ ನಡೆಸಿತ್ತು.ಇದೊಂದು ಆಕ್ಸ್‌ಫರ್ಡ್‌ಶೈರ್ ಡಿಡ್ಕೋಟ್ ಬಳಿಯ ಗ್ರಾಮದಲ್ಲಿ ಪರಿವರ್ತಿತ ಆಪಲ್ ಶೆಡ್ ಆಗಿತ್ತು.[೨೮]

ಆಗಸ್ಟ್‌ 1996ರಲ್ಲಿ ರೇಡಿಯೊಹೆಡ್‌ ಅಲಾನಿಸ್‌ ಮೊರಿಸೆಟ್‌ರ ಕಾರ್ಯಕ್ರಮದ ಆರಂಭದಲ್ಲಿ ಸಂಗೀತಗೋಷ್ಠಿ ನೀಡಲು ಪ್ರವಾಸ ಹೊರಟಿತು. ಧ್ವನಿಮುದ್ರಣ ಮಾಡುವ ಮುಂಚೆ ತಮ್ಮ ಹೊಸ ಹಾಡುಗಳ ನೇರ ಪ್ರದರ್ಶನದಲ್ಲಿ ಪರಿಪೂರ್ಣತೆ ಗಳಿಸಲು ಅವರು ಪ್ರಯತ್ನಿಸಿದ್ದರು. ವಾದ್ಯತಂಡದವರು ಪುನಃ ಧ್ವನಿಮುದ್ರಣ ಮುಂದುವರೆಸಿದರು. ಈ ಸಲವೂ ಅವರು ಸಾಂಪ್ರದಾಯಿಕ ಸಂಗೀತ ಸ್ಟುಡಿಯೊದಿಂದ ಹೊರಗೆ, ಬಾತ್‌ ಬಳಿ ಸೇಂಟ್‌ ಕ್ಯಾತರಿನ್ಸ್‌ ಕೋರ್ಟ್‌ನ 15ನೆಯ ಶತಮಾನದ ದೊಡ್ಡ ಭವನದಲ್ಲಿ ಧ್ವನಿಮುದ್ರಣ ನಡೆಸಿದರು.[೨೯] ಧ್ವನಿಮುದ್ರಣಾ ಅವಧಿಗಳು ಸುಗಮವಾಗಿ ನಡೆದವು. ಎಲ್ಲಾ ಸದಸ್ಯರೂ ಇಡೀ ದಿನವೂ ವಿವಿಧ ಕೊಠಡಿಗಳಲ್ಲಿ ಹಾಡುಗಳ ಧ್ವನಿಮುದ್ರಣ ನಡೆಸುತ್ತಿದ್ದರು. ಸ್ಫೂರ್ತಿ ಮತ್ತು ಪ್ರೇರಣೆಗಾಗಿ ಅವರು ದಿ ಬೀಟ್‌ಲ್ಸ್‌, DJ ಷ್ಯಾಡೊ, ಎನಿಯೊ ಮೊರಿಕೊನ್‌ ಹಾವೂ ಮೈಲ್ಸ್ ಡೇವಿಸ್‌ರ ಸಂಗೀತಗಳನ್ನು ಆಲಿಸಿದರು.[][೨೬] ರೇಡಿಯೊಹೆಡ್‌ ತಂಡವು, "ಟಾಕ್‌ ಷೋ ಹೋಸ್ಟ್‌", ಜೊತೆಗೆ "ಎಕ್ಸಿಟ್‌ ಮ್ಯೂಸಿಕ್‌ (ಫಾರ್‌ ಎ ಫಿಲ್ಮ್‌)" ಎಂಬ ಹೊಸದಾಗಿ ಧ್ವನಿಮುದ್ರಿತ ಗೀತೆ, ಅದೇ ವರ್ಷದ ಅಪರಾರ್ಧದಲ್ಲಿ ಬಾಜ್‌ ಲುಹ್ರ್‌ಮನ್‌ರೊಮಿಯೊ + ಜೂಲಿಯೆಟ್‌ ರೂಪಾಂತರಕ್ಕಾಗಿ ಸಂಗೀತ ನೀಡಿದರು.

ಇಸವಿ 1996ರ ಅಂತ್ಯದೊಳಗೆ ಆಲ್ಬಮ್‌ನ ಉಳಿದ ಭಾಗವು ಸಂಪೂರ್ಣವಾಗಿತ್ತು. ಮಾರ್ಚ್‌ 1997ರೊಳಗೆ ಧ್ವನಿಮುದ್ರಣದ ಮಿಶ್ರಣಕಾರ್ಯ ಮತ್ತು ಮಾಸ್ಟರಿಂಗ್ ಪ್ರಕ್ರಿಯೆಗಳು ನಡೆದವು.

ರೇಡಿಯೊಹೆಡ್‌ ತನ್ನ ಮೂರನೆಯ ಆಲ್ಬಮ್‌ 'ಒಕೆ ಕಂಪ್ಯೂಟರ್ '‌ನ್ನು ಜೂನ್‌ 1997ರಲ್ಲಿ ಬಿಡುಗಡೆಗೊಳಿಸಿತು. ಇದರಲ್ಲಿ ಬಹುಮಟ್ಟಿಗೆ ಸುಮಧುರ ರಾಕ್‌ ಶೈಲಿ ಸಂಗೀತವಿತ್ತು. ಈ ಹೊಸ ರೆಕಾರ್ಡ್‌ನಲ್ಲಿ ವಾದ್ಯತಂಡವು ಹಾಡಿನ ರಚನೆಯೊಂದಿಗೆ ಪ್ರಯೋಗಗಳನ್ನು ನಡೆಸಿ, ಅವುಗಳಲ್ಲಿ ಆಂಬಿಯೆಂಟ್, ನವ್ಯ ಪ್ರಯೋಗಿ ಮತ್ತು ವಿದ್ಯುನ್ಮಾನ ಪ್ರಭಾವಗಳನ್ನು ಸೇರಿಸಿತು. ಆಲ್ಬಮ್‌ನ ಗೀತೆಗಳು ಇನ್ನಷ್ಟು ಗಮನ ಹರಿಸುವಂತಹ, ದಿ ಬೆಂಡ್ಸ್‌ ಗಿಂತಲೂ ಕಡಿಮೆ ವೈಯಕ್ತಿಕ ಧ್ವನಿ ಹೊಂದಿತ್ತು. ಪತ್ರಿಕೆಯೊಂದರ ಪ್ರಕಾರ, ಇದು 'ಸಹಸ್ರಮಾನದ ಬ್ಲೂಸ್‌ನ ಅಂತ್ಯ‌' ಎಂದು ವರ್ಣಿಸಿತು.[೩೦] ಒಕೆ ಕಂಪ್ಯೂಟರ್ ಗೆ‌ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿತು. ಈ ರೀತಿಯ ಉತ್ತಮ ಪ್ರತಿಕ್ರಿಯೆ ದೊರಕಿದ್ದು ತಮಗೆ ಅಚ್ಚರಿಯಾಗಿದೆಯೆಂದು ಯಾರ್ಕ್‌ ಒಪ್ಪಿಕೊಂಡರು. 'ಈ ಆಲ್ಬಮ್‌ ಚೆನ್ನಾಗಿದೆಯೋ ಇಲ್ಲವೋ ನಮಗೇ ಹೇಳಲಾಗುತ್ತಿರಲಿಲ್ಲ. ನಾವು ಸೃಷ್ಟಿಸಲು ಪ್ರಯತ್ನಿಸಿದ ಎಲ್ಲಾ ರೀತಿಯ ಧ್ವನಿವಿನ್ಯಾಸಗಳು ಮತ್ತು ಸ್ವರಗಳು ಮತ್ತು ಪರಿಸರಗಳು ಎಲ್ಲವನ್ನೂ ಜನರು ಗುರುತಿಸಿದ್ದು ನನಗೆ ಪರಮಚ್ಚರಿಗೊಳಿಸಿದೆ.' [೩೧]

ಒಕೆ ಕಂಪ್ಯೂಟರ್ ‌UK ಸಂಗೀತಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಇದರ ಫಲವಾಗಿ ರೇಡಿಯೊಹೆಡ್‌ಗೆ ವಿಶ್ವಾದ್ಯಂತ ವಾಣಿಜ್ಯರೂಪದ ಯಶಸ್ಸು ತಂದುಕೊಟ್ಟಿತು. US ಸಂಗೀತ ಪಟ್ಟಿಯಲ್ಲಿ 21ನೆಯ ಸ್ಥಾನದಲ್ಲಿದ್ದರೂ, ಆಲ್ಬಮ್ ಮುಖ್ಯವಾಹಿನಿಯಲ್ಲಿ ಮನ್ನಣೆ ಗಳಿಸಿತು. ರೇಡಿಯೊಹೆಡ್‌ ವೃತ್ತಿಜೀವನದಲ್ಲಿ ಈ ಅಲ್ಬಮ್‌ ಮೊದಲ ಗ್ರ್ಯಾಮಿ ಪ್ರಶಸ್ತಿ ತಂದುಕೊಟ್ಟಿತು. ಇಷ್ಟೇ ಅಲ್ಲದೆ, ಅತ್ಯುತ್ತಮ ಪರ್ಯಾಯ ಆಲ್ಬಮ್‌ನಲ್ಲಿ ಜಯ, ವರ್ಷದ ಆಲ್ಬಮ್‌ ಪ್ರಶಸ್ತಿ ನಾಮನಿರ್ದೇಶನವನ್ನೂ ಸಂಪಾದಿಸಿತು.[೩೨] "ಪ್ಯಾರನಾಯ್ಡ್‌ ಆಂಡ್ರಾಯ್ಡ್‌", "ಕರ್ಮಾ ಪೊಲೀಸ್‌" ಹಾಗೂ "ನೋ ಸರ್ಪ್ರೈಸಸ್‌" ಹಾಡುಗಳು ಆ ಆಲ್ಬಮ್‌ನಿಂದ ಏಕಗೀತೆಗಳಾಗಿ ಬಿಡುಗಡೆಯಾದವು. ಇವುಗಳಲ್ಲಿ 'ಕರ್ಮಾ ಪೊಲೀಸ್‌' ಅಂತಾರಾಷ್ಟ್ರೀಯವಾಗಿ ಅತಿ ಯಶಸ್ವೀ ಏಕಗೀತೆಯಾಯಿತು.[೧೭]

ಒಕೆ ಕಂಪ್ಯೂಟರ್ ‌ ಬಿಡುಗಡೆಯ ನಂತರ ರೇಡಿಯೊಹೆಡ್ ತಂಡದ 'ಎಗೇನ್ಸ್ಟ್‌ ಡೆಮೊನ್ಸ್'‌ ವಿಶ್ವ ಪ್ರವಾಸ ನಡೆಯಿತು. 'ನೋ ಸರ್ಪ್ರೈಸಸ್'‌ ವೀಡಿಯೊದ ನಿರ್ದೇಶಕ ಗ್ರ್ಯಾಂಟ್‌ ಜೀ ಈ ವಾದ್ಯತಂಡದೊಂದಿಗೆ ಪ್ರಯಾಣಿಸಿ, ಚಿತ್ರೀಕರಣವನ್ನೂ ನಡೆಸಿದರು. ಈ ವೀಡಿಯೊವನ್ನು 1999ರಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರ ಮೀಟಿಂಗ್‌ ಪೀಪಲ್‌ ಈಸ್‌ ಈಸಿ 'ಯಲ್ಲಿ ಬಿಡುಗಡೆಗೊಳಿಸಲಾಯಿತು.[೩೩] ಸಂಗೀತ ಉದ್ದಿಮೆ ಮತ್ತು ಮಾಧ್ಯಮದ ಬಗ್ಗೆ ವಾದ್ಯತಂಡದ ಅಸಮಾಧಾನವನ್ನು ಚಿತ್ರವು ಬಿಂಬಿಸುತ್ತದೆ. ಅವರು ಇಸವಿ 1997ರ ಮಧ್ಯಾವಧಿಯಲ್ಲಿ ತಮ್ಮ ಮೊಟ್ಟಮೊದಲ ಪ್ರವಾಸದಿಂದ ಹಿಡಿದು ಸುಮಾರು ಒಂದು ವರ್ಷದ ನಂತರ,1998ರ ಮಧ್ಯಾವಧಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದಂತೆ ಅವರ ಅತೃಪ್ತಿಯನ್ನು ತೋರಿಸಿದ್ದಾರೆ.[] ಈ ವೀಡಿಯೊ ಚಿತ್ರದಲ್ಲಿ ಬಿಡುಗಡೆಯಾಗದ ಹಾಡುಗಳ ಮುಂಚಿನ ಆವೃತ್ತಿಗಳು ಅಥವಾ ಹಲವು ವರ್ಷಗಳ ತನಕ ಬಿಡುಗಡೆಯಾಗದ ಹಾಡುಗಳನ್ನು ದಾಖಲಿಸಿಕೊಂಡಿದೆ - ಉದಾಹರಣೆಗೆ, 'ಹೌ ಟು ಡಿಸಪಿಯರ್‌ ಕಂಪ್ಲೀಟ್ಲಿ', 'ಲೈಫ್‌ ಇನ್‌ ಎ ಗ್ಲ್ಯಾಸ್‌ಹೌಸ್‌' ಮತ್ತು 'ನ್ಯೂಡ್‌'. ಈ ಸಮಯದಲ್ಲಿ ವಾದ್ಯತಂಡವು 7 ಟೆಲಿವಿಷನ್‌ ಕಮರ್ಷಿಯಲ್ಸ್‌ ' ಎಂಬ ಸಂಗೀತ ವೀಡಿಯೊ ಸಂಕಲನ, ಹಾಗೂ ಎರಡು EPಗಳಲ್ಲಿ ಏರ್‌ಬ್ಯಾಗ್‌/ಹೌ ಆಮ್‌ ಐ ಡ್ರೈವಿಂಗ್‌ ಬಿಡುಗಡೆಗೊಳಿಸಿತು. ಜೊತೆಗೆ, ಒಕೆ ಕಂಪ್ಯೂಟರ್‌ ಏಕಗೀತೆಗಳ B-ಬದಿಗಳ ಹಾಡುಗಳನ್ನು ಸಂಕಲನ ಮಾಡಿದ ನೋ ಸರ್ಪ್ರೈಸಸ್‌/ರನಿಂಗ್‌ ಫ್ರಮ್‌ ಡೆಮನ್ಸ್‌ ಸಹ ಬಿಡುಗಡೆ ಮಾಡಿತು.

ಕಿಡ್‌ ಎ , ಆಮ್ನೆಸಿಯಾಕ್‌ ಹಾಗೂ ಧ್ವನಿ-ವಿನ್ಯಾಸದಲ್ಲಿ ಬದಲಾವಣೆ (1999–2001)

[ಬದಲಾಯಿಸಿ]
ಗ್ಲಾಕೆನ್‌ಸ್ಪಿಯಲ್‌ ಸೇರಿದಂತೆ, ಜಾನಿ ಗ್ರೀನ್ವುಡ್‌ ವಿವಿಧ ವಾದ್ಯಗಳನ್ನು ನೇರ ವಾದ್ಯಗೋಷ್ಠಿ ಮತ್ತು ಧ್ವನಿಮುದ್ರಣಗಳಲ್ಲಿ ಬಳಸಿದ್ದಾರೆ.

ಇಸವಿ 1997-1998 ಪ್ರವಾಸದ ನಂತರ ರೇಡಿಯೊಹೆಡ್‌ ಬಹುಮಟ್ಟಿಗೆ ನಿಷ್ಕ್ರಿಯವಾಗಿತ್ತು. ಈ ಅವಧಿ ಮುಗಿದ ನಂತರ, 1998ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಆಮ್ನೆಸ್ಟಿ ಇಂಟರ್ನ್ಯಾಷನಲ್ ಗೋಷ್ಠಿಯು ಅವರ ಏಕೈಕ ಸಾರ್ವಜನಿಕ ಪ್ರದರ್ಶನವಾಗಿತ್ತು.[೩೪] ಆನಂತರ ಯಾರ್ಕ್‌ ಒಪ್ಪಿಕೊಂಡಂತೆ, ಈ ಅವಧಿಯಲ್ಲಿ ವಾದ್ಯತಂಡವು ಒಡೆದುಹೋಗುವ ಸನಿಹಕ್ಕೆ ತಲುಪಿತ್ತು ಹಾಗೂ ಅವರು ತೀವ್ರ ಖಿನ್ನತೆಗೊಳಗಾಗಿದ್ದರು.[೩೫] ಇಸವಿ 1999ರ ಆರಂಭದಲ್ಲಿ ರೇಡಿಯೊಹೆಡ್‌ ಒಕೆ ಕಂಪ್ಯೂಟರ್ ‌ ಆಲ್ಬಮ್‌ನ ನಂತರದ ಸಂಪುಟದ ಕುರಿತು ಕಾರ್ಯ ಆರಂಭಿಸಿತು. ತಂಡದ ರೆಕಾರ್ಡ್‌ ಉದ್ದಿಮೆಯಿಂದ ಯಾವುದೇ ರೀತಿಯ ಒತ್ತಡ ಅಥವಾ ಗಡುವು ಇಲ್ಲದಿದ್ದರೂ ಸಹ, ಈ ಅವಧಿಯಲ್ಲಿ ಉದ್ವೇಗ ಬಹಳ ಹೆಚ್ಚಿತ್ತು. ರೇಡಿಯೊಹೆಡ್‌ ವಾದ್ಯತಂಡದ ಭವಿಷ್ಯ ಕುರಿತು ಸದಸ್ಯರು ವಿವಿಧ ದೃಷ್ಟಿಕೋನಗಳನ್ನು ಹೊಂದಿದ್ದರು. ಯಾರ್ಕ್‌ ಹಾಡುಗಳನ್ನು ರಚಿಸಿ ಬರೆಯಲು ಮಾನಸಿಕವಾಗಿ ಅಸಮರ್ಥರಾದರು. ಇದರಿಂದಾಗಿ ಅವರ ಹಾಡುಗಳು ಒಂದು ರೀತಿಯ ಛಿದ್ರ, ಆಮೂರ್ತ ರೂಪದ ಗೀತೆಗಳಿಗೆ ಪ್ರೇರೇಪಣೆ ನೀಡಿತು.[೩೫] ಪ್ಯಾರಿಸ್‌, ಕೊಪನ್‌ಹ್ಯಾಗೆನ್‌ ಹಾಗೂ ಗ್ಲೌಸೆಸ್ಟರ್‌ ನಗರಗಳ ಸ್ಟುಡಿಯೊಗಳು, ಹಾಗೂ ಆಕ್ಸ್ಫರ್ಡ್‌ನಲ್ಲಿ ಹೊಸದಾಗಿ ನಿರ್ಮಿಸಿ ಪೂರ್ಣಗೊಳಿಸಲಾದ ಸ್ಟುಡಿಯೊದಲ್ಲಿ ತಂಡವು ನಿರ್ಮಾಪಕ ನೈಗೆಲ್‌ ಗಾಡ್ರಿಚ್‌ರೊಂದಿಗೆ ಕುಳಿತು ಏಕಾಂತದಲ್ಲಿ ಕೆಲಸ ಮಾಡಿತು. ಅಂತಿಮವಾಗಿ, ತಂಡದ ಸಂಗೀತವು ಹೊಸ ದಿಕ್ಕಿನತ್ತ ಸಾಗಲು, ಬ್ಯಾಂಡ್‌ನಲ್ಲಿ ವಾದ್ಯಗಳ ಪಾತ್ರಗಳನ್ನು ಪುನರ್‌ವ್ಯಾಖ್ಯಾನಿಸಲು ಎಲ್ಲ ಸದಸ್ಯರು ಸಮ್ಮತಿಸಿದರು.[೧೩] ಹದಿನೆಂಟು ತಿಂಗಳುಗಳ ಬಳಿಕ, ರೇಡಿಯೊಹೆಡ್‌ ತಂಡದ ಧ್ವನಿಮುದ್ರಣಾ ಅವಧಿಗಳು ಏಪ್ರಿಲ್‌ 2000ರಲ್ಲಿ ಸಂಪೂರ್ಣಗೊಂಡವು.[೩೫]

ಅಕ್ಟೋಬರ್‌ 2000ರಲ್ಲಿ ರೇಡಿಯೊಹೆಡ್‌ ಕಿಡ್‌ ಎ ಎಂಬ ತನ್ನ ನಾಲ್ಕನೆಯ ಆಲ್ಬಮ್‌ನ್ನು ಬಿಡುಗಡೆಗೊಳಿಸಿತು. ಈ ಧ್ವನಿಮುದ್ರಣಾ ಅವಧಿಗಳಲ್ಲಿ ರಚಿಸಲಾದ ಎರಡು ಆಲ್ಬಮ್‌ಗಳಲ್ಲಿ ಇದು ಮೊದಲನೆಯದಾಗಿತ್ತು. ಒಕೆ ಕಂಪ್ಯೂಟರ್‌ ಗೆ ಶೈಲಿಯ ಅನುಕ್ರಮ ಆಗುವ ಬದಲಿಗೆ ಕಿಡ್‌ ಎ ಅತಿ ಸರಳವಾದ ಹಾಗೂ ರಚನಾ ವಿನ್ಯಾಸದಿಂದ ಕೂಡಿತ್ತು. ಅತಿರೇಕವಿಲ್ಲದ ಗಿಟಾರ್‌ ಭಾಗಗಳು, ಇನ್ನಷ್ಟು ವೈವಿಧ್ಯಮಯ ವಾದ್ಯಗಳಿದ್ದವು - ಇವುಗಳಲ್ಲಿ ಓಡ್‌ ಮಾರ್ಟೆನೊ, ನಿಗದಿಪಡಿಸಲಾದ ವಿದ್ಯುನ್ಮಾನ ತಾಳಗಳು, ತಂತಿಗಳು ಹಾಗೂ ಜ್ಯಾಝ್‌ ಹಾರ್ನ್‌ಗಳು ಸೇರಿದ್ದವು.[೩೫]

US ಸೇರಿದಂತೆ ಹಲವು ದೇಶಗಳಲ್ಲಿ ಅದು ಅಗ್ರಸ್ಥಾನ ಪಡೆಯಿತು. USನ ಬಿಲ್ಬೋರ್ಡ್‌ ಸಂಗೀತಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು, ವಾದ್ಯತಂಡವೊಂದಕ್ಕೆ ಅಗ್ರಸ್ಥಾನ ಲಭಿಸಿದ್ದು ಇದೇ ಮೊದಲ ಬಾರಿ. ಜೊತೆಗೆ, US ನಲ್ಲಿ UK ಸಂಗೀತಗಾರರು ಅಪರೂಪದ ಯಶಸ್ಸು ಗಳಿಸಿದರು.[] ಮಾರುಕಟ್ಟೆ ತಂತ್ರಗಳು, ಆಲ್ಬಮ್‌ ಬಿಡುಗಡೆಗೆ ಕೆಲವು ತಿಂಗಳುಗಳ ಮುಂಚೆ ಕಡತ ಹಂಚಿಕೊಳ್ಳುವ ಜಾಲ ನ್ಯಾಪ್ಸ್ಟರ್‌ನಲ್ಲಿ ಆಲ್ಬಮ್‌‌ನ ಸೋರಿಕೆ ಹಾಗೂ,ಆಂಶಿಕವಾಗಿ ಒಕೆ ಕಂಪ್ಯೂಟರ್ ‌ನ ಯಶಸ್ಸಿನ ಆಧಾರದ ಮೇಲೆ ಮುಂಚಿತವಾದ ನಿರೀಕ್ಷೆಯೆ 'ಕಿಡ್‌ ಎ' ಯಶಸ್ಸಿಗೆ ಕಾರಣವಾಯಿತು.[೩೬][೩೭][೩೮] ಕಿಡ್‌ ಎ ಆಲ್ಬಮ್‌ನಿಂದ ರೇಡಿಯೊಹೆಡ್‌ ಯಾವುದೇ ಏಕಗೀತೆಯನ್ನು ಬಿಡುಗಡೆಗೊಳಿಸದಿದ್ದರೂ, 'ಆಪ್ಟಿಮಿಸ್ಟಿಕ್‌' ಮತ್ತು 'ಇಡಿಯೊಟೆಕ್‌'ನ ಜಾಹೀರಾತುಗಳು ರೇಡಿಯೊದಲ್ಲಿ ಪ್ರಸಾರವಾದವು. ಜೊತೆಗೆ, 'ಬ್ಲಿಪ್ಸ್‌' ಎಂಬ ಕಿರುವೀಡಿಯೊ ಸರಣಿಗಳು ಸಂಗೀತ ವಾಹಿನಿಗಳಲ್ಲಿ ಪ್ರಸಾರವಾದವು ಮತ್ತು ಅಂತರಜಾಲದಲ್ಲಿ ಮುಕ್ತವಾಗಿ ಬಿಡುಗಡೆಯಾದವು.[೩೯] ಧ್ವನಿಮುದ್ರಣಾ ಸಮಯದಲ್ಲಿ, ನಾವೊಮಿ ಕ್ಲೇನ್‌ ಬರೆದ ನೊ ಲೋಗೊ ಎಂಬ ಜಾಗತೀಕರಣ-ವಿರೋಧಿ ಪುಸ್ತಕವನ್ನು ಓದಿದ್ದ ಬ್ಯಾಂಡ್ ಸದಸ್ಯರು,ಜಾಹೀರಾತುಮುಕ್ತ ಸಾಂಪ್ರದಾಯಿಕ ಶಿಬಿರದಲ್ಲಿ 2000ರ ಬೇಸಿಗೆಯಲ್ಲಿ ಯುರೋಪ್‌ನ ಪ್ರವಾಸವನ್ನು ಮುಂದುವರೆಸಲು ನಿರ್ಧರಿಸಿದರು. ಮೂರು ಸಂಪೂರ್ಣ ಮಾರಾಟವಾದ ಉತ್ತರ ಅಮೆರಿಕ ಥಿಯೇಟರ್ ಗೋಷ್ಠಿಗಳೊಂದಿಗೆ ಕಿಡ್ A ಗೆ ಉತ್ತೇಜನ ನೀಡಿದರು.[೩೯]

ಇಸವಿ 2001ರ ಆರಂಭದಲ್ಲಿ, ಕಿಡ್‌ ಎ ಆಲ್ಬಮ್‌ಗಾಗಿ ರೇಡಿಯೊಹೆಡ್‌ ವಾದ್ಯತಂಡಕ್ಕೆ ಅತ್ಯುತ್ತಮ ಪರ್ಯಾಯ ಸಂಗೀತ ಆಲ್ಬಮ್ ವರ್ಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತಲ್ಲದೆ, ವರ್ಷದ ಅತ್ಯುತ್ತಮ ಆಲ್ಬಮ್‌ ಪ್ರಶಸ್ತಿಗಾಗಿ ನಾಮನಿರ್ದೇಶನವೂ ದೊರಕಿತು. ಆದರೂ, ಕಿಡ್‌ ಎ ಆಲ್ಬಮ್‌ನಲ್ಲಿ ಸಂಗೀತದ 'ಭೂಗತ ಶೈಲಿ' ಅಯ್ದುಕೊಂಡಿದ್ದಕ್ಕಾಗಿ 'ಸ್ವತಂತ್ರ ಸಂಗೀತ' ವಲಯಗಳಲ್ಲಿ ಈ ಆಲ್ಬಮ್‌ಗೆ ಹೊಗಳಿಕೆ-ತೆಗಳಿಕೆಗಳೆರಡೂ ಲಭಿಸಿದವು. ಕೆಲವು ಮುಖ್ಯವಾಹಿನಿಯ ಬ್ರಿಟಿಷ್‌ ವಿಮರ್ಶಕರು ಕಿಡ್‌ ಎ ಆಲ್ಬಮ್‌ನ್ನು ಒಂದು ರೀತಿಯ 'ವಾಣಿಜ್ಯದ ಆತ್ಮಹತ್ಯಾ ಚೀಟಿ', 'ಉದ್ದೇಶಪೂರ್ವಕ ಜಟಿಲ' ಎಂದು ಪಟ್ಟಕಟ್ಟಿದರು ಹಾಗೂ ವಾದ್ಯತಂಡವು ಆದಷ್ಟು ಬೇಗನೆ ತಮ್ಮ ಮುಂಚಿನ ಶೈಲಿಯ ಸಂಗೀತಕ್ಕೆ ಮರಳುವುದನ್ನು ಬಯಸಿದರು.[೧೦][೧೧] ಇದೇ ರೀತಿ ರೇಡಿಯೊಹೆಡ್‌ ಅಭಿಮಾನಿಗಳಲ್ಲಿಯೂ ಸಹ ಭಿನ್ನಾಭಿಪ್ರಾಯಗಳಿದ್ದವು. ದಿಗಿಲು ಮತ್ತು ತಬ್ಬಿಬ್ಬಿನ ಪ್ರತಿಕ್ರಿಯೆಗಳನ್ನು ನೀಡಿದವರ ಜತೆಗೆ ಇತರೆ ಕೆಲವರು ಈ ಆಲ್ಬಮ್‌ ರೇಡಿಯೊಹೆಡ್‌ನ ಅತ್ಯುತ್ತಮ ಕೃತಿ ಎಂದು ಶ್ಲಾಘಿಸಿದ್ದುಂಟು.[೨೨][೪೦] ಆದರೂ, ರೇಡಿಯೊಹೆಡ್‌ ವಾಣಿಜ್ಯ ನಿರೀಕ್ಷೆಗಳಿಗೆ ತಿಲಾಂಜಲಿಯಿಡಲಿದೆ ಎಂಬ ಊಹೆಗಳನ್ನು ಯಾರ್ಕ್ ಸಾರಾಸಗಟಾಗಿ ತಳ್ಳಿಹಾಕಿದರು. 'ಕಿಡ್‌ ಎ ‌ಯನ್ನು ಎಷ್ಟೊಂದು ಕೆಟ್ಟದಾಗಿ ನೋಡುತ್ತಿರುವುದು ನನಗೆ ಅಚ್ಚರಿ ತಂದಿದೆ, ಏಕೆಂದರೆ ಸಂಗೀತವನ್ನು ಗ್ರಹಿಸುವುದು ಅಷ್ಟೇನೂ ಕಷ್ಟವಲ್ಲ. ನಾವು ಅತೀ ಕ್ಲಿಷ್ಟವಾದ ಸಂಗೀತ ರಚಿಸಲು ಹೊರಟಿಲ್ಲ ... ನಾವು ನಿಜವಾಗಿಯು ಸಂವಹನ ನಡೆಸಲು ಹೊರಟಿದ್ದೇವೆ. ನಾವು ಅನೇಕ ಜನರನ್ನು ನಿರುತ್ಸಾಹಗೊಳಿಸಿದಂತೆ ಕಾಣುತ್ತದೆ... ನಾವು ಮಾಡುತ್ತಿರುವುದು ಅಷ್ಟು ಆಮೂಲಾಗ್ರವಾಗಿಲ್ಲ.' [೧೦]

ಜೂನ್‌ 2001ರಲ್ಲಿ ಬಿಡುಗಡೆಯಾದ ಆಮ್ನೆಸಿಯಾಕ್‌ ಆಲ್ಬಮ್‌ ಕಿಡ್‌ ಎ ಧ್ವನಿಮುದ್ರಣಾ ಅವಧಿಯಲ್ಲಿ ರಚಿಸಲಾದ ಹೆಚ್ಚುವರಿ ಹಾಡುಗಳನ್ನು ಹೊಂದಿತ್ತು. ಈ ಹಾಡುಗಳಲ್ಲಿ ವಿದ್ಯುನ್ಮಾನ ಸಂಗೀತ ಮತ್ತು ಜ್ಯಾಝ್‌ ಪ್ರಭಾವದ ಮಿಶ್ರಣದ ವಿಚಾರದಲ್ಲಿ, ರೇಡಿಯೊಹೆಡ್‌ ತಂಡದ ಸಂಗೀತ ಶೈಲಿಯು ಕಿಡ್‌ ಎ ತರಹವೇ ಇತ್ತು. ಆದರೆ, ಗಿಟಾರ್‌ಗಳ ಬಳಕೆಯ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆಮ್ನೆಸಿಯಾಕ್‌ ವಿಶ್ವಾದ್ಯಂತ ವಿಮರ್ಶಾತ್ಮಕ ಮತ್ತು ವಾಣಿಜ್ಯ ರೀತ್ಯಾ ಯಶಸ್ಸು ಕಂಡಿತು. UK ಆಲ್ಬಮ್‌ ಸಂಗೀತ ಪಟ್ಟಿಯಲ್ಲಿ ಅಗ್ರಸ್ಥಾನ ಹಾಗೂ USನಲ್ಲಿ ಎರಡನೆಯ ಸ್ಥಾನ ಗಳಿಸಿತು. ಗ್ರ್ಯಾಮಿ ಪ್ರಶಸ್ತಿ ಹಾಗೂ ಮರ್ಕ್ಯುರಿ ಮ್ಯೂಸಿಕ್‌ ಪ್ರಶಸ್ತಿಗಾಗಿ ನಾಮನಿರ್ದೇಶನ ಸಂಪಾದಿಸಿತು.[][೧೧] ಆಮ್ನೆಸಿಯಾಕ್‌ ಬಿಡುಗಡೆಯಾದ ನಂತರ, ವಾದ್ಯತಂಡವು ವಿಶ್ವ ಪ್ರವಾಸ ಹೊರಟು, ಉತ್ತರ ಅಮೆರಿಕಾ, ಯುರೋಪ್‌ ಮತ್ತು ಜಪಾನ್ ದೇ ಶಗಳಿಗೆ ಭೇಟಿ ನೀಡಿತು .

ಏತನ್ಮಧ್ಯೆ, 1998ರಿಂದಲೂ ಬಿಡುಗಡೆಯಾಗಿದ್ದ ರೇಡಿಯೋಹೆಡ್‌ ತಂಡದ 'ಪಿರಮಿಡ್‌ ಸಾಂಗ್‌' ಹಾಗೂ 'ನೈವ್ಸ್‌ ಔಟ್‌'ಏಕಗೀತೆಗಳು ಸಾಧಾರಣ ಮಟ್ಟದ ಯಶಸ್ಸು ಗಳಿಸಿದವು. ಮೊದಲಿಗೆ, ಮೂರನೆಯ ಏಕಗೀತೆಯೆಂದು ಯೋಜಿಸಲಾದ "ಐ ಮೈಟ್‌ ಬಿ ರಾಂಗ್‌", ರೇಡಿಯೊಹೆಡ್‌ ತಂಡದ ಏಕೈಕ 'ಲೈವ್‌ ರೆಕಾರ್ಡ್'‌ ಆಗಿ ವಿಸ್ತರಣೆಯಾಯಿತು. I Might Be Wrong: Live Recordingsಕಿಡ್ಸ್ A ಮತ್ತು ಆಮ್ನೆಸಿಯಾಕ್‌ನ, ನವೆಂಬರ್‌ 2001ರಲ್ಲಿ ಬಿಡುಗಡೆಯಾದ,I Might Be Wrong: Live Recordingsಏಳು ಹಾಡುಗಳ ಪ್ರದರ್ಶನ , ಮತ್ತು ಜತೆಗೆ ಮುಂಚೆ ಬಿಡುಗಡೆಯಾಗಿರದ, ಧ್ವನಿತರಂಗಗಳಿಂದಲೇ ರಚಿಸಲಾದ 'ಟ್ರೂ ಲವ್‌ ವೇಯ್ಟ್ಸ್‌' ಸಹ ಹೊಂದಿತ್ತು .

ಹೇಯ್ಲ್‌ ಟು ದಿ ಥೀಫ್‌ ಮತ್ತು ವಿರಾಮ(2002–2004)

[ಬದಲಾಯಿಸಿ]

ಜುಲೈ ಮತ್ತು ಆಗಸ್ಟ್‌ 2002ರಲ್ಲಿ, ರೇಡಿಯೊಹೆಡ್‌ ಪೋರ್ಚುಗಲ್‌ ಮತ್ತು ಸ್ಪೇನ್‌ ದೇಶಗಳ ಪ್ರವಾಸ ನಡೆಸಿ, ಹಲವು ನೂತನ ಹಾಡುಗಳನ್ನು ತಮ್ಮ ಗೋಷ್ಠಿಯಲ್ಲಿ ನುಡಿಸಿದರು. ಆನಂತರ, ತಂಡದ ಸದಸ್ಯರು ನೈಗೆಲ್‌ ಗಾಡ್ರಿಚ್‌ರೊಂದಿಗೆ ಕಾರ್ಯಗತರಾಗಿ ಲಾಸ್‌ ಏಂಜಲೀಸ್‌ನ ಒಂದು ಸ್ಟುಡಿಯೊದಲ್ಲಿ ಹೊಸ ಹಾಡುಗಳನ್ನು ಎರಡು ವಾರಗಳಲ್ಲಿ ಧ್ವನಿಮುದ್ರಣ ಮಾಡಿದರು. ಮುಂದಿನ ವರ್ಷ ಆಕ್ಸ್ಫರ್ಡ್‌ನಲ್ಲಿ ಇದೇ ಧ್ವನಿಮುದ್ರಣ ಕಾರ್ಯವನ್ನು ಮುಂದುವರೆಸಿ, ಇನ್ನೂ ಹಲವು ಹಾಡುಗಳನ್ನು ಸೇರಿಸಿದರು. ರೇಡಿಯೋಹೆಡ್‌ ತಂಡದ ಸದಸ್ಯರ ಪ್ರಕಾರ, ಕಿಡ್‌ ಎ ಮತ್ತು ಆಮ್ನೆಸಿಯಾಕ್ ‌ ಧ್ವನಿಮುದ್ರಣಾ ಸಮಯದ ಉದ್ವೇಗ ವಾತಾವರಣಕ್ಕೆ ತದ್ವಿರುದ್ಧವಾಗಿ, ಈ ಧ್ವನಿಮುದ್ರಣಾ ಕಾರ್ಯವು ಸುಗಮವಾಗಿ ನಡೆಯಿತು.[] ವಾದ್ಯತಂಡದ ಆರನೆಯ ಆಲ್ಬಮ್‌ ಹೇಯ್ಲ್‌ ಟು ದಿ ಥೀಫ್ ‌ ಜೂನ್‌ 2003ರಲ್ಲಿ ಬಿಡುಗಡೆಯಾಯಿತು. ತಂಡದ ವೃತ್ತಿಜೀವನದುದ್ದಕ್ಕೂ ಬಳಸಿದ ಧ್ವನಿಗಳನ್ನು ಮಿಶ್ರಿಸಿ ರಚಿಸಲಾದ ಹೇಯ್ಲ್‌ ಟು ದಿ ಥೀಫ್‌ , ವಿದ್ಯುನ್ಮಾನ ಪ್ರಭಾವವುಳ್ಳ ಗಿಟಾರ್‌-ಆಧಾರಿತ ರಾಕ್‌ ಶೈಲಿಯೊಂದಿಗೆ ಯಾರ್ಕ್‌ರ ಸಾಮಯಿಕ ಗೀತೆಗಳನ್ನು ಮಿಶ್ರಣ ಮಾಡಿತು.[೪೧] ಈ ಆಲ್ಬಮ್‌ಗೆ ವಿಮರ್ಶಕರಿಂದ ಪ್ರಶಂಸೆ ಲಭಿಸಿದರೂ, ಒಕೆ ಕಂಪ್ಯೂಟರ್ ‌ನೊಂದಿಗೆ ಆರಂಭಗೊಳಿಸಿದ 'ಶೈಲಿ-ಮರುವ್ಯಾಖ್ಯಾನ'ದ ಪ್ರವೃತ್ತಿಯನ್ನು ಮುಂದುವರೆಸುವುದಕ್ಕಿಂತ ಹೆಚ್ಚಾಗಿ, ರೇಡಿಯೊಹೆಡ್‌ ತಂಡವು ಸೃಜನಾತ್ಮಕವಾಗಿ ನೀರಿನಲ್ಲಿ ಈಜಲು ಯತ್ನಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟರು.[೪೨] ಅದೇನೇ ಇರಲಿ, ಹೇಯ್ಲ್‌ ಟು ದಿ ಥೀಫ್‌ ವಾಣಿಜ್ಯ ಯಶಸ್ಸು ಗಳಿಸಿತು. ಬಿಡುಗಡೆಯಾದಾಗಲೇ UKಯ ಜನಪ್ರಿಯ ಸಂಗೀತ ಪಟ್ಟಿಯಲ್ಲಿ ಆಗ್ರಸ್ಥಾನ ಮತ್ತು US ಬಿಲ್ಬೋರ್ಡ್‌ ಪಟ್ಟಿಯಲ್ಲಿ ಮೂರನೆಯ ಸ್ಥಾನ ಗಳಿಸಿತು. ಅಂತಿಮವಾಗಿ ಇದಕ್ಕೆ UKಯಲ್ಲಿ ಪ್ಲ್ಯಾಟಿನಮ್‌ ಹಾಗೂ USನಲ್ಲಿ ಸ್ವರ್ಣ ಎಂದು ಪ್ರಮಾಣೀಕರಿಸಲಾಯಿತು. ಆಲ್ಬಮ್‌ನ 'ದೇರ್‌ ದೇರ್ ‌', 'ಗೋ ಟು ಸ್ಲೀಪ್‌' ಹಾಗೂ '2 + 2 = 5' ಏಕಗೀತೆಗಳು ಆಧುನಿಕ ರಾಕ್‌ ಶೈಲಿ ಸಂಗೀತ ರೇಡಿಯೊದಲ್ಲಿ ಶ್ರೋತೃಗಳಿಂದ ಬಹಳಷ್ಟು ಕೋರಿಕೆ ಸಂಪಾದಿಸಿತು. ಇಸವಿ 2003ರ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ರೇಡಿಯೊಹೆಡ್‌ ತಂಡಕ್ಕೆ ಅತ್ಯುತ್ತಮ ಪರ್ಯಾಯ ಅಲ್ಬಮ್‌ಗಾಗಿ ಪುನಃ ನಾಮನಿರ್ದೇಶನ ಲಭಿಸಿತು. ನಿರ್ಮಪಕ ಗಾಡ್ರಿಚ್‌ ಮತ್ತು ಇಂಜಿನಿಯರ್‌ ಡ್ಯಾರೆಲ್‌ ಥೋರ್ಪ್‌ರಿಗೆ ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ಎಂಜಿನಿಯರ್ಡ್ ಆಲ್ಬಮ್‌ಗಾಗಿ ಗ್ರಾಮಿ ಪ್ರಶಸ್ತಿ ಸ್ವೀಕರಿಸಿದರು.[೪೩]

ಹೇಯ್ಲ್‌ ಟು ದಿ ಥೀಫ್‌ ಶೀರ್ಷಿಕೆ ವಿವಾದಗ್ರಸ್ಥ 2000ದ US ರಾಷ್ಟ್ರಾಧ್ಯಕ್ಷ ಚುನಾವಣೆಯ ಕುರಿತು ಅಭಿಪ್ರಾಯವಲ್ಲ. BBC ರೇಡಿಯೊ 4ರಲ್ಲಿ ಪ್ರಸಾರವಾದ 19ನೆಯ ಶತಮಾನದ ಅಮೆರಿಕನ್‌ ರಾಜಕೀಯ ಕುರಿತು ಚರ್ಚೆಯಲ್ಲಿ ಈ ಉಕ್ತಿಯನ್ನು ಮೊದಲ ಬಾರಿಗೆ ಕೇಳಿಸಿಕೊಂಡೆ ಎಂದು ಯಾರ್ಕ್‌ ಸ್ಪಷ್ಟಪಡಿಸಿದರು.[] ಇಸವಿ 2001ರಿಂದ 2002ರ ವರೆಗಿನ ಯುದ್ಧದ ವರದಿಗಳಿಂದ ತಮ್ಮ ಗೀತೆಗಳು ಪ್ರಭಾವಿತವಾಗಿದೆ ಎಂದು ಯಾರ್ಕ್‌ ತಿಳಿಸಿದರು. 'ನಾವು ಅಸಹಿಷ್ಣುತೆ ಹಾಗೂ ಭೀತಿಯ ಯುಗವನ್ನು ಪ್ರವೇಶಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಅಭಿಪ್ರಾಯ ತಿಳಿಸುವ,ನಮ್ಮ ಧ್ವನಿಕೇಳುವಂತೆ ಮಾಡುವ ಅಧಿಕಾರ ನಮಗೆ ನಿರಾಕರಿಸಲಾಗಿದೆ' [೪೪] ಎಂದೂ ಯಾರ್ಕ್‌ ಹೇಳಿದರು. 'ರೇಡಿಯೊಹೆಡ್‌ ಪ್ರತಿಭಟಿಸುವಂತಹ ಗೀತೆಗಳನ್ನು ಬರೆಯಲಿಲ್ಲ; ನಾವು ರಾಜಕೀಯ ಗೀತೆಗಳನ್ನು ಬರೆಯಲಿಲ್ಲ' ಎಂದರು.[] ಹೇಯ್ಲ್‌ ಟು ದಿ ಥೀಫ್ಬಿಡುಗಡೆಯಾದ ನಂತರ , ರೇಡಿಯೊಹೆಡ್‌ ಮೇ 2003ರಲ್ಲಿ ವಿಶ್ವ ಪ್ರವಾಸ ಹೊರಟಿತು. ಇದರಲ್ಲಿ ಗ್ಲ್ಯಾಸ್ಟನ್‌ಬ್ಯುರಿ ಫೆಸ್ಟಿವಲ್‌ನಲ್ಲಿ ಪ್ರಮುಖ ಪ್ರದರ್ಶನವೂ ಸೇರಿತ್ತು. ಮೇ 2004ರಲ್ಲಿ ಕೋಚೆಲ್ಲಾ ಫೆಸ್ಟಿವಲ್‌ನಲ್ಲಿ ಪ್ರದರ್ಶನ ನೀಡುವುದರೊಂದಿಗೆ ಈ ಪ್ರವಾಸವು ಮುಗಿಯಿತು. ವಾದ್ಯತಂಡವು ಈ ಪ್ರವಾಸದಲ್ಲಿ, ತನ್ನ ಅನೇಕ ಸಂಕಲನಗಳ ಹಲವು ಬಿ-ಸೈಡ್‌ ಹಾಡುಗಳುಳ್ಳ EPಯನ್ನು COM LAG ಎಂಬ ಸಂಪುಟದ ಮೂಲಕ ಬಿಡುಗಡೆಗೊಳಿಸಿತು . ಪ್ರವಾಸದ ನಂತರ, ವಾದ್ಯತಂಡವು ತನ್ನ ಆಕ್ಸ್ಫರ್ಡ್‌ ಸ್ಟುಡಿಯೊದಲ್ಲಿ ಹಾಡುಗಳ ರಚನೆ ಮತ್ತು ಫೂರ್ವಾಭ್ಯಾಸ ನಡೆಸಿತು, ಆದರೆ ಶೀಘ್ರದಲ್ಲೇ ವಿರಾಮದ ಸ್ಥಿತಿಗೆ ಪ್ರವೇಶಿಸಿತು. ಧ್ವನಿಮುದ್ರಣಾ ಉದ್ದಿಮೆಯೊಂದಿಗಿನ ತನ್ನ ಗುತ್ತಿಗೆಯಿಂದ ಮುಕ್ತರಾಗಿ , ರೇಡಿಯೋಹೆಡ್‌ ತಂಡದ ಸದಸ್ಯರು ತಮ್ಮ ತಮ್ಮ ಕುಟುಂಬಗಳೊಂದಿಗೆ ವಿರಮಿಸಿದರು ಹಾಗೂ ತಮ್ಮ ಒಂಟಿ ಯೋಜನೆಗಳಲ್ಲಿ ಕೆಲಸ ಮಾಡಿದರು.[೪೫]

ಇನ್‌ ರೇನ್ಬೊಸ್‌ ಹಾಗೂ ಸ್ವತಂತ್ರ ರಚನೆಗಳು (2005–2009)

[ಬದಲಾಯಿಸಿ]
ಇಸವಿ 2006ರಲ್ಲಿ ರೇಡಿಯೊಹೆಡ್‌ನೊಂದಿಗೆ ಗೋಷ್ಠಿಯಲ್ಲಿ ಯಾರ್ಕ್‌

ರೇಡಿಯೊಹೆಡ್‌ ಫೆಬ್ರವರಿ 2005ರಲ್ಲಿ ತನ್ನ ಏಳನೆಯ ಆಲ್ಬಮ್‌ ರಚನೆ ಆರಂಭಿಸಿತು.[೪೫] ಹೆಲ್ಪ್‌: ಎ ಡೇ ಇನ್‌ ದಿ ಲೈಫ್ ‌ ಎಂಬ ವಾರ್‌ ಚೈಲ್ಡ್‌ ಸಹಾಯಾರ್ಥ ಆಲ್ಬಮ್‌ಗಾಗಿ ತಂಡವು 'ಐ ವಾಂಟ್‌ ನನ್‌ ಆಫ್ ದಿಸ್‌' ಎಂಬ ಪಿಯಾನೊ-ಆಧಾರಿತ ಹಾಡಿನ ಧ್ವನಿಮುದ್ರಣವನ್ನು ಸೆಪ್ಟೆಂಬರ್‌ 2005ರಲ್ಲಿ ನಡೆಸಿತು. ಈ ಅಲ್ಬಮ್‌ನ್ನು ಆನ್‌ಲೈನ್‌ (ಅಂತರಜಾಲದ ಮೂಲಕ) ಮಾರಾಟ ಮಾಡಲಾಯಿತು. ಇದರಲ್ಲಿ 'ಐ ವಾಂಟ್‌ ನನ್‌ ಆಫ್‌ ದಿಸ್‌' ಏಕಗೀತೆಯಾಗಿ ಬಿಡುಗಡೆಯಾಗದಿದ್ದರೂ, ಅತಿ ಹೆಚ್ಚು ಡೌನ್ಲೋಡ್‌ ಆದ ಹಾಡಾಗಿತ್ತು.[೪೬] ಈಗಾಗಲೇ ರೇಡಿಯೊಹೆಡ್‌ ತಂಡವು ಸ್ವತಂತ್ರವಾಗಿ ತನ್ನ ಮುಂದಿನ ಆಲ್ಬಮ್‌ನ ಧ್ವನಿಮುದ್ರಣವನ್ನು ಆರಂಭಿಸಿತ್ತು, ಆನಂತರ ನಿರ್ಮಾಪಕ ಮಾರ್ಕ್‌ ಸ್ಟೆಂಟ್‌ರ ಸಹಯೋಗದೊಂದಿಗೆ ತನ್ನ ಕಾರ್ಯ ನಡೆಸಿತ್ತು. ಆದರೂ, ಯುರೋಪ್‌ ಹಾಗೂ ಉತ್ತರ ಅಮೆರಿಕಾ ಪ್ರವಾಸ ನಡೆಸಿ, 13 ಹಾಡುಗಳನ್ನು ಮೊದಲ ಬಾರಿಗೆ ನುಡಿಸಿದ ನಂತರ, ಬ್ಯಾಂಡ್ 2006ರ ಅಪರಾರ್ಧದಲ್ಲಿ, ನೈಗೆಲ್‌ ಗಾಡ್ರಿಚ್‌ರೊಂದಿಗೆ ಲಂಡನ್‌, ಆಕ್ಸ್ಫರ್ಡ್‌ ಹಾಗೂ (ಇಂಗ್ಲೆಂಡ್‌ನ) ಸಮರ್ಸೆಟ್‌ (ಕೌಂಟಿಯ) ಹಲವು ಗ್ರಾಮಾಂತರ ಸ್ಥಳದಲ್ಲಿ ತನ್ನ ಕಾರ್ಯ ಮುಂದುವರೆಸಿತು.[೪೭] ಸಂಗೀತ ರಚನಾ ಕಾರ್ಯವು ಜೂನ್‌ 2007ರಲ್ಲಿ ಸಂಪೂರ್ಣಗೊಂಡು, ಮುಂದಿನ ತಿಂಗಳು ಇವುಗಳ ಧ್ವನಿಮುದ್ರಣದ ಮಾಸ್ಟರಿಂಗ್‌ ನಡೆಯಿತು.[೪೮]

ಇನ್‌ ರೇನ್ಬೊಸ್‌ ಎಂಬ ರೇಡಿಯೊಹೆಡ್‌ರ ಏಳನೆಯ ಆಲ್ಬಮ್‌ನ್ನು ವಾದ್ಯತಂಡವು 10 ಅಕ್ಟೋಬರ್‌ 2007ರಂದು ತನ್ನ ಸ್ವಂತ ಅಂತರಜಾಲತಾಣದಲ್ಲಿ ಡಿಜಿಟಲ್‌ ಡೌನ್ಲೋಡ್‌ ಮೂಲಕ ಬಿಡುಗಡೆಗೊಳಿಸಿತು. ಇದಕ್ಕೆ ಗ್ರಾಹಕರು ತಮಗಿಷ್ಟವಾದಂತೆ ಹಣ ಪಾವತಿಸಬಹುದು. ಹಣ ಪಾವತಿಸದೆಯೂ ಇರಬಹುದು ಜಾಲತಾಣದ ಏಕೈಕ ಸಲಹೆ, 'ನಿಮಗೆ ಬಿಟ್ಟದ್ದು' ಎಂದಾಗಿತ್ತು.[೪೯] ರೇಡಿಯೊಹೆಡ್‌ ವಾದ್ಯತಂಡವು ಈ ಅನಿರೀಕ್ಷಿತ ಘೋಷಣೆಯನ್ನು ಹತ್ತು ದಿನಗಳ ಮುಂಚೆಯೇ ನೀಡಿದ ಕಾರಣ, ಈ ಅಸಾಮಾನ್ಯ ತಂತ್ರವು ಸಂಗೀತ ಕ್ಷೇತ್ರ ಮತ್ತು ಅದರಾಚೆಗೂ ಬಹಳಷ್ಟು ಗಮನ ಸೆಳೆಯಿತು.[೫೦] ಬಿಡುಗಡೆಯ ದಿನದೊಳಗೆ, 1.2 ದಶಲಕ್ಷ ಡೌನ್ಲೋಡ್‌ಗಳ‌ ಮೂಲಕ ಹಾಡುಗಳು ಮಾರಾಟವಾಗಿದ್ದವು. ಆದರೆ ವಾದ್ಯತಂಡದ ವ್ಯವಸ್ಥಾಪಕ ವೃಂದವು ಅಧಿಕೃತ ಮಾರಾಟ ಅಂಕಿಅಂಶಗಳನ್ನು ಬಿಡುಗಡೆಗೊಳಿಸಲಿಲ್ಲ. 'ಅಂತರಜಾಲ-ಮೂಲಕ-ಮಾತ್ರ' ವಿತರಣೆಯು, ತಮ್ಮ ಆಲ್ಬಮ್‌ನ ನಂತರದ ಚಿಲ್ಲರೆ ಮಾರಾಟವನ್ನು ಹೆಚ್ಚಿಸುವ ಉದ್ದೇಶ ಎಂದು ಸ್ಪಷ್ಟಪಡಿಸಿತು.[೫೧]‌ ಇಸವಿ 2007ರ ಅಪರಾರ್ಧದಲ್ಲಿ, ಧ್ವನಿಮುದ್ರಣಾ ಅವಧಿಗಳಿಂದ ಎರಡನೆಯ ಡಿಸ್ಕ್‌ ,ಸೇರಿದಂತೆ ಆಲ್ಬಮ್‌ನ ವಿನೈಲ್‌ ಮತ್ತು CD ಆವೃತ್ತಿಗಳು, ಹಾಗೂ ಚಿತ್ರಕೃತಿಗಳಿರುವ ಗಟ್ಟಿರಟ್ಟಿನ ಪುಸ್ತಕ - ಇವೆಲ್ಲವನ್ನೂ ಹೊಂದಿರುವ 'ಡಿಸ್ಕ್‌ಬಾಕ್ಸ್'‌ನ್ನು ಮಾರಾಟ ಮಾಡಿ, ರವಾನಿಸಲಾಯಿತು.[೫೨]

ಇನ್‌ ರೇನ್ಬೊಸ್‌ ಆಲ್ಬಮ್‌ನ್ನು UKಯಲ್ಲಿ XL ರೆಕಾರ್ಡಿಂಗ್ಸ್‌ ಮೂಲಕ ಡಿಸೆಂಬರ್‌‌ 2007ರ ಅಪರಾರ್ಧದಲ್ಲಿ, ಉತ್ತರ ಅಮೆರಿಕಾದಲ್ಲಿ TBD ರೆಕಾರ್ಡ್ಸ್‌ ಮೂಲಕ ಜನವರಿ 2008ರಲ್ಲಿ ಬಿಡುಗಡೆಗೊಳಿಸಲಾಯಿತು.[೫೨] UK ಮತ್ತು US ಎರಡೂ ದೇಶಗಳಲ್ಲಿ ಸಂಗೀತ ಪಟ್ಟಿಗಳಲ್ಲಿ ಅಗ್ರಸ್ಥಾನ ಗಳಿಸಿತು.[೫೩][೫೪]

USನಲ್ಲಿ ಈ ಆಲ್ಬಮ್‌ನ ಯಶಸ್ಸು, ಆ ದೇಶದಲ್ಲಿ ಕಿಡ್‌ ಎ ನಂತರ ರೇಡಿಯೊಹೆಡ್‌ ತಂಡದ ಅತ್ಯುನ್ನತ ಯಶಸ್ಸಾಗಿತ್ತು. ಆ ಸಮಯದಲ್ಲಿ ತಂಡದ ಐದನೆಯ ಹಾಗೂ UKಯ ಅಗ್ರಸ್ಥಾನದ ಆಲ್ಬಂ. ಆಲ್ಬಮ್‌ನ ಮೊದಲ ಏಕಗೀತೆ ಜಿಗ್ಸಾ ಫಾಲಿಂಗ್‌ ಇಂಟು ಪ್ಲೇಸ್‌ ಜನವರಿ 2008ರಲ್ಲಿ UKಯಲ್ಲಿ ಬಿಡುಗಡೆಯಾಯಿತು.[೫೫] ಈ ಆಲ್ಬಮ್‌ನ ಎರಡನೆಯ ಏಕಗೀತೆ 'ನ್ಯೂಡ್'‌, ಬಿಲ್ಬೋರ್ಡ್‌ ಹಾಟ್‌ 100 ಪಟ್ಟಿಯಲ್ಲಿ 37ನೆಯ ಸ್ಥಾನದೊಂದಿಗೆ ಆರಂಭಿಸಿತು. ಇಸವಿ 1995ರ 'ಹೈ ಅಂಡ್ ಡ್ರೈ' ಈಚೆಗೆ ಪಟ್ಟಿಯಲ್ಲಿ ಸ್ಥಾನ ಪಡೆದ ರೇಡಿಯೊಹೆಡ್ ಮೊದಲ ಗೀತೆ ಹಾಗೂ, 'ಕ್ರೀಪ್‌' ನಂತರ ಇದು USನಲ್ಲಿನ ಮೊದಲ ಟಾಪ್‌ 40 ಹಿಟ್ ಆಗಿತ್ತು. ‌[೧೭] EMI ಧ್ವನಿಮುದ್ರಣಾ ಕಂಪೆನಿಯು ಜೂನ್‌ 2008ರಲ್ಲಿ Radiohead: The Best Of ಶೀರ್ಷಿಕೆಯ ಗ್ರೇಟೆಸ್ಟ್‌ ಹಿಟ್ಸ್‌ ಆಲ್ಬಮ್‌ನ್ನು ಬಿಡುಗಡೆಗೊಳಿಸಿತು.[೫೬] ಈ ಸಂಕಲನವು ವಾದ್ಯತಂಡದ ಯಾವುದೇ ಸೂಚನೆ/ಮಾಹಿತಿಯನ್ನು ಒಳಗೊಂಡಿರಲಿಲ್ಲ. ಜೊತೆಗೆ, ಬ್ಯಾಂಡ್ ಈಗಾಗಲೇ ಕಂಪೆನಿಯನ್ನು ತೊರೆದಿದ್ದರಿಂದ ಇನ್‌ ರೇನ್ಬೊಸ್‌ ಆಲ್ಬಮ್‌ನ ಯಾವುದೇ ಹಾಡುಗಳನ್ನು ಹೊಂದಿರಲಿಲ್ಲ.[೫೭] ರೇಡಿಯೊಹೆಡ್‌ ತಂಡವು ಇನ್‌ ರೇನ್ಬೊಸ್‌ ಆಲ್ಬಮ್‌ನ ಹಾಡುಗಳನ್ನು ಏಕಗೀತೆ ಮತ್ತು ವೀಡಿಯೊಗಳ ಮೂಲಕ ಹೊರಡಿಸುವುದನ್ನು ಮುಂದುವರೆಸಿತು. ಜುಲೈ ತಿಂಗಳಲ್ಲಿ 'ಹೌಸ್‌ ಆಫ್‌ ಕಾರ್ಡ್ಸ್‌'ಗಾಗಿ ಡಿಜಿಟಲ್ ರೀತ್ಯಾ ಚಿತ್ರೀಕರಿಸಿದ ವೀಡಿಯೊ ಲಭ್ಯವಾಗಿಸಿತು.[೫೮] ಬಾಡಿಸ್ನ್ಯಾಚರ್ಸ್‌ ಒಂದಿಗೆ 'ಹೌಸ್‌ ಆಫ್‌ ಕಾರ್ಡ್ಸ್'‌ ಸಹ ರೇಡಿಯೊ ಮೂಲಕ ಏಕಗೀತೆಯಾಗಿ ಬಿಡುಗಡೆಯಾಯಿತು. ಸೆಪ್ಟೆಂಬರ್‌ ತಿಂಗಳಲ್ಲಿ ವಾದ್ಯತಂಡವು ತನ್ನ ನಾಲ್ಕನೆಯ ಏಕಗೀತೆ 'ರೆಕಾನರ್‌'ನ್ನು ಘೋಷಿಸಿತು. ಜೊತೆಗೆ 'ನ್ಯೂಡ್‌'ಗಾಗಿ ಆಯೋಜಿಸಿದಂತೆ, ಒಂದು ರಿಮಿಕ್ಸ್‌ ಸ್ಪರ್ಧೆಯನ್ನು ಆಯೋಜಿಸಲಾಯಿತು.[೫೯]

ಇನ್‌ ರೇನ್ಬೊಸ್‌ ಆಲ್ಬಮ್‌ ನಿರೀಕ್ಷೆಗೂ ಮೀರಿದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದು ರೇಡಿಯೊಹೆಡ್‌ ತಂಡದ ವೃತ್ತಿಯಲ್ಲಿಯೇ ಅತ್ಯುತ್ತಮ ವಿಮರ್ಶೆಯಾಗಿತ್ತು. ಇನ್‌ ರೇನ್ಬೊಸ್‌ ಆಲ್ಬಮ್‌ ರೇಡಿಯೊಹೆಡ್‌ನ ಮುಂಚಿನ ಆಲ್ಬಮ್‌ಗಿಂತಲೂ ಇನ್ನಷ್ಟು ಗ್ರಹಿಕೆಯಾಗಬಲ್ಲ ಧ್ವನಿಗಳು ಮತ್ತು ಗೀತೆಗಳ ವೈಯಕ್ತಿಕ ಶೈಲಿಯನ್ನು ಹೊಂದಿದೆ ಎಂದು ವಿಮರ್ಶಕರು ಹೊಗಳಿದರು. ಬಿಡುಗಡೆಯಾದ ಒಂದು ವರ್ಷದೊಳಗೆ ಮೂರು ದಶಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು.[೬೦][೬೧] ಜುಲೈ 2008ರಲ್ಲಿ, ಇನ್‌ ರೇನ್ಬೊಸ್‌ ಮರ್ಕ್ಯುರಿ ಮ್ಯೂಸಿಕ್‌ ಪ್ರೈಜ್‌ನ ಕಿರುಪಟ್ಟಿಗಾಗಿ ನಾಮನಿರ್ದೇಶನ ಗಳಿಸಿತು.[೬೨] ಇಸವಿ 2009ರ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ವಾದ್ಯತಂಡವು ಅತ್ಯುತ್ತಮ ಪರ್ಯಾಯ ಸಂಗೀತ ಆಲ್ಬಮ್‌ ವರ್ಗದಲ್ಲಿ ಪ್ರಶಸ್ತಿ ಗಳಿಸಿತು. ಅದರ ನಿರ್ಮಾಣ ತಂಡವೂ ಸಹ, ಬೆಸ್ಟ್ ಬಾಕ್ಸಡ್ ಅಥವಾ ಸ್ಪೆಷಲ್ ಲಿಮಿಟೆಡ್ ಎಡಿಷನ್ ಪ್ಯಾಕೇಜ್‌ಗಾಗಿ ಪ್ರಶಸ್ತಿ ಗಳಿಸಿತು. ಇನ್ನೂ ಮೂರು ಇತರೆ ನಾಮನಿರ್ದೇಶನಗಳ ಜೊತೆಗೆ, ವಾದ್ಯತಂಡವು ವರ್ಷದ ಆಲ್ಬಮ್‌ಗಾಗಿ ಮೂರನೆಯ ನಾಮನಿರ್ದೇಶನ ಪಡೆಯಿತು. ಜೊತೆಗೆ, ಗಾಡ್ರಿಚ್‌ನ ನಿರ್ಮಾಣ ಕಾರ್ಯ ಹಾಗೂ 'ಹೌಸ್‌ ಆಫ್‌ ಕಾರ್ಡ್ಸ್'‌ ವೀಡಿಯೊಗಾಗಿ ನಾಮನಿರ್ದೇಶನಗಳನ್ನು ಪಡೆಯಿತು.[೬೩] ಇಸವಿ 2008ರ ಮಧ್ಯದಿಂದ 2009ರ ಆರಂಭದವರೆಗೂ, ಇನ್‌ ರೇನ್ಬೊಸ್‌ ಆಲ್ಬಮ್‌ ಉತ್ತೇಜಿಸಲು ರೇಡಿಯೊಹೆಡ್‌ ತಂಡವು ಉತ್ತರ ಅಮೆರಿಕಾ, ಯುರೋಪ್‌, ಜಪಾನ್‌, ಮೆಕ್ಸಿಕೊ ಹಾಗೂ ದಕ್ಷಿಣ ಅಮೆರಿಕಾದ ಪ್ರವಾಸ ನಡೆಸಿತು. ಆಗಸ್ಟ್‌ 2009ರಲ್ಲಿ ತಂಡವು ರೀಡಿಂಗ್‌ ಅಂಡ್‌ ಲೀಡ್ಸ್‌ ಫೆಸ್ಟಿವಲ್‌ ಎಂಬ ಶೀರ್ಷಿಕೆಯಡಿ ಕಾಣಿಸಿಕೊಂಡಿತು.[೬೪][೬೫][೬೬]

2009 ಮತ್ತು 2010 ಅವಧಿಗಳು (2009ರಿಂದ ಇಂದಿನವರೆಗೆ)

[ಬದಲಾಯಿಸಿ]

ಮೇ 2009ರಲ್ಲಿ ತಂಡವು ನಿರ್ಮಾಪಕ ನೈಗೆಲ್‌ ಗಾಡ್ರಿಚ್‌ರೊಂದಿಗೆ ಹೊಸ ಧ್ವನಿಮುದ್ರಣಾ ಅವಧಿಗಳನ್ನು ಆರಂಭಿಸಿತು.[೬೭] ಕೆಲವು ತಿಂಗಳ ಬಳಿಕ, ಆಗಸ್ಟ್‌ನಲ್ಲಿ ರೇಡಿಯೊಹೆಡ್‌ ಈ ಧ್ವನಿಮುದ್ರಣಾ ಅವಧಿಗಳಿಂದ ಎರಡು ಏಕಗೀತೆಗಳನ್ನು ತಮ್ಮ ಅಂತರಜಾಲತಾಣದ ಮೂಲಕ ಬಿಡುಗಡೆಗೊಳಿಸಿತು. ಮೊದಲಿಗೆ, ಕೆಲ ದಿನಗಳ ಹಿಂದೆ ನಿಧನರಾದ, ಮೊದಲನೆಯ ಮಹಾಯುದ್ಧದಲ್ಲಿ ಹೋರಾಡಿದ ಕೊನೆಯದಾಗಿ ಬದುಕುಳಿದಿದ್ದ ಬ್ರಿಟಿಷ್‌ ಯೋಧ ಹ್ಯಾರಿ ಪ್ಯಾಚ್‌ರಿಗೆ ಶ್ರದ್ಧಾಂಜಲಿ ಅರ್ಪಿಸಲು 'ಹ್ಯಾರಿ ಪ್ಯಾಚ್‌ (ಇನ್‌ ಮೆಮೊರಿ ಆಫ್‌)'ನ್ನು ಧ್ವನಿಮುದ್ರಣ ಮಾಡಲಾಗಿತ್ತು. ಈ ಹಾಡನ್ನು £1 ಬೆಲೆಗೆ ಮಾರಲಾಗಿ, ಇದರಿಂದ ಬಂದ ಆದಾಯವನ್ನು ಬ್ರಿಟಿಷ್‌ ಲೀಜನ್‌ಗೆ(ಮಾಜಿ ಯೋಧರ ಸಂಘ)ದಾನ ಮಾಡಲಾಯಿತು.[೬೮][೬೯] ತಮ್ಮ ಯುದ್ಧದ ಅನುಭವಗಳ ಕುರಿತು ಸ್ವತಃ ಪ್ಯಾಚ್‌ರ ವೃತ್ತಾಂತಗಳನ್ನು ಅಧರಿಸಿದ ಗೀತೆಯನ್ನು ಥೊಮ್‌ ಯಾರ್ಕ್‌ ರಚಿಸಿ ಹಾಡಿದ್ದಾರೆ. ಇದಕ್ಕೆ ಜಾನಿ ಗ್ರೀನ್ವುಡ್‌ ತಂತಿವಾದ್ಯಮೇಳ ಹಿನ್ನೆಲೆ ಒದಗಿಸಿದ್ದರು. ಅದೇ ತಿಂಗಳಲ್ಲಿ ಇನ್ನೂ ಕೆಲ ದಿನಗಳ ನಂತರ,ದೀಸ್‌ ಆರ್‌ ಮೈ ಟ್ವಿಸ್ಟೆಡ್‌ ವರ್ಡ್ಸ್‌ ಎಂಬ ಹಾಡು ಉಚಿತ ಡೌನ್ಲೋಡ್‌ ಅಥವಾ ಟೊರೆಂಟ್‌ ಮೂಲಕ ಲಭ್ಯವಾಯಿತು. ಚಿತ್ರಗಳ ಡಿಜಿಟಲ್‌ ಸಂಪುಟವೂ ಸಹ ಇದರಲ್ಲಿ ಸೇರಿಸಲಾಗಿತ್ತು. ವಾದ್ಯತಂಡದ ಇತ್ತೀಚೆಗಿನ ಸ್ಟುಡಿಯೊ ಅವಧಿಗಳ ಮೊದಲ ಕೆಲವು ಹಾಡುಗಳಲ್ಲಿ ಇದೂ ಒಂದಾಗಿತ್ತು; ರೇಡಿಯೊಹೆಡ್‌ನ ಇನ್‌ ರೇನ್ಬೊಸ್ ‌ ಪ್ರವಾಸದ ಅಂತಿಮ ದಿನಾಂಕಗಳಂದು ಆಗಸ್ಟ್‌ ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ನುಡಿಸುವ ಸಾಧ್ಯತೆಯಿತ್ತೆಂದು ಎಂದು ಜಾನಿ ಗ್ರೀನ್ವುಡ್‌ ವಿವರಿಸಿದರು.[೭೦]

ರೇಡಿಯೊಹೆಡ್ ತಂಡವು‌ ಪೂರ್ಣಪ್ರಮಾಣದ ಆಲ್ಬಮ್‌ಗಳಿಂದ EPಗಳ ಬಿಡುಗಡೆಯತ್ತ ಗಮನ ಹರಿಸುವ ಇಂಗಿತವಿದೆ; ಇದರಲ್ಲಿ ವಾದ್ಯವೃಂದದ ಸಂಗೀತದ EP ಕೂಡ ಹೊರತರುವ ಸಾಧ್ಯತೆಯಿದೆ ಎಂದು ಯಾರ್ಕ್‌ ಇಸವಿ 2009ರ ಮಧ್ಯದಲ್ಲಿ NME ಗಾಗಿ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು.[೭೧]‌ ಆದರೆ, ವಾದ್ಯತಂಡವು ತನ್ನ ಮುಂದಿನ ಆಲ್ಬಮ್‌‌ ಕುರಿತು ಅವಧಿಯನ್ನು ಜನವರಿ 2010ರಲ್ಲಿ ಆರಂಭಿಸುವುದೆಂದು ಒ'ಬ್ರಿಯೆನ್‌ ಡಿಸೆಂಬರ್‌ 2009ರ ಮಧ್ಯದಲ್ಲಿ ತಂಡದ ಜಾಲತಣದಲ್ಲಿ ನಮೂದಿಸಿದರು. ಅವರು ಹೇಳಿದ ಪ್ರಕಾರ, 'ಸದ್ಯಕ್ಕೆ ನಮ್ಮ ತಂಡದಲ್ಲಿ ಸಂಚಲನ ಬಹಳ ಅದ್ಭುತವಾಗಿದೆ. ನಾವೆಲ್ಲರೂ ಬರುವ ಜನವರಿಯಲ್ಲಿ ಸ್ಟುಡಿಯೊಗೆ ಹೋಗಿ, ಕಳೆದ ಬೇಸಿಗೆಯಲ್ಲಿ ಆರಂಭಿಸಿದ ಕಾರ್ಯವನ್ನು ಮುಂದುವರೆಸುವೆವು... 10 ವರ್ಷಗಳ ಹಿಂದೆ ನಾವೆಲ್ಲರೂ ಒಟ್ಟಿಗೆ (ವಾದ್ಯತಂಡ) ಕಿಡ್‌ ಎ ನೆಲೆಯಲ್ಲಿದ್ದೆವು... ಆ ರೆಕಾರ್ಡ್‌ ಬಗ್ಗೆ ಹೆಮ್ಮೆಪಟ್ಟರೂ, ಅದು ತಮಾಷೆ ಮಾಡುವ ತಾಣವಾಗಿರಲಿಲ್ಲ... ನಾವು ಇಂದು ಖಂಡಿತವಾಗಿ ವಿಭಿನ್ನ ವಾದ್ಯತಂಡವಾಗಿದ್ದೇವೆ ಎಂಬುದು ಭರವಸೆಯ ಸಂಗತಿಯಾಗಿದೆ. ಅದರ ಅರ್ಥ ನಮ್ಮ ಸಂಗೀತವು ಬೇರೆ ಶೈಲಿಯದ್ದು ಹಾಗೂ ಅದು ನಮ್ಮ ಆಟದ ಗುರಿ.' [೭೨]

ಶೈಲಿ ಮತ್ತು ಗೀತೆ-ರಚನೆ

[ಬದಲಾಯಿಸಿ]

ಕ್ವೀನ್‌, ಸ್ಕಾಟ್‌ ವಾಕರ್‌ ಹಾಗೂ ಎಲ್ವಿಸ್‌ ಕಾಸ್ಟೆಲೊ ರೇಡಿಯೊಹೆಡ್‌ ತಂಡದ ಸದಸ್ಯರ ಮೇಲೆ ಆರಂಭಿಕ ಹಂತದಲ್ಲಿ ಪ್ರಭಾವ ಬೀರಿದ್ದರು; ಜಾಯ್‌ ಡಿವಿಷನ್‌ ಮತ್ತು ಮ್ಯಾಗಜೀನ್‌, R.E.M., ಪಿಕ್ಸೀಸ್‌, ದಿ ಸ್ಮಿತ್ಸ್‌ ಹಾಗೂ ಸೊನಿಕ್‌ ಯೂತ್‌ ಅಂತಹ ಪೋಸ್ಟ್-ಪಂಕ್‌ಸಂಗೀತ ಸಹ ರೇಡಿಯೊಹೆಡ್‌ ತಂಡದವರಿಗೆ ಸ್ಫೂರ್ತಿಯಾದವು.[][][೨೨][೭೩]

1990ರ ದಶಕದ ಮಧ್ಯದಲ್ಲಿ ರೇಡಿಯೊಹೆಡ್‌ ತಂಡವು ವಿದ್ಯುನ್ಮಾನ ಸಂಗೀತ, ಅದರಲ್ಲೂ ವಿಶಿಷ್ಟವಾಗಿ DJ ಷ್ಯಾಡೊರ ಸಂಗೀತದಲ್ಲಿ ಆಸಕ್ತಿ ವಹಿಸಲಾರಂಭಿಸಿತು. ತನ್ನ ಒಕೆ ಕಂಪ್ಯೂಟರ್ ‌ ಆಲ್ಬಮ್‌ ಮೇಲೆ ಇದು ಭಾಗಶಃ ಪ್ರಭಾವ ಬೀರಿತ್ತೆಂದು ರೇಡಿಯೊಹೆಡ್‌ ಹೇಳಿಕೊಂಡಿದೆ.[೭೪] ಆಲ್ಬಮ್‌ ಮೇಲೆ ಮೈಲ್ಸ್‌ ಡೇವಿಸ್‌ ಹಾಗೂ ಎನಿಯೊ ಮೊರಿಕೊನ್‌, ಜೊತೆಗೆ 1960ರ ದಶಕದ ರಾಕ್‌ ಶೈಲಿಯ ಸಂಗೀತ ತಂಡಗಳಾದ ದಿ ಬೀಟಲ್ಸ್‌ ಹಾಗೂ ದಿ ಬೀಚ್‌ ಬಾಯ್ಸ್‌ ಇತರೆ ಪ್ರಭಾವಗಳಾಗಿದ್ದವು.[][೨೬] OK ಕಂಪ್ಯೂಟರ್‌ ನ ಧ್ವನಿಯ ಹಿಂದೆ ಸಂಯೋಜಕ ಕ್ರಿಝ್ಟಾಫ್‌ ಪೆಂಡೆರೆಕಿ ಸ್ಫೂರ್ತಿಯಾಗಿದ್ದರೆಂದು ಕೂಡ ಜಾನಿ ಗ್ರೀನ್ವುಡ್‌ ಉದಾಹರಿಸಿದರು.[೨೬]

ಕಿಡ್‌ ಎ ಹಾಗೂ ಆಮ್ನೆಸಿಯಾಕ್‌ ಆಲ್ಬಮ್‌ಗಳ ವಿದ್ಯುನ್ಮಾನ ಶೈಲಿಯ ಹಿಂದೆ, ಥಾಮ್‌ ಯಾರ್ಕ್‌ ಗ್ಲಿಚ್‌, ಆಂಬಿಯೆಂಟ್ ಟೆಕ್ನೊ ಹಾಗೂ IDM ಶೈಲಿಗಳ ಮೆಚ್ಚುಗೆಯ ಫಲವಾಗಿತ್ತು. ವಾರ್ಪ್‌ ರೆಕಾರ್ಡ್ಸ್‌ಆಟೆಕ್ರ್‌ ಹಾಗೂ ಎಫೆಕ್ಸ್‌ ಟ್ವಿನ್ನಂತಹ ವಾದ್ಯತಂಡಗಳ ಕಲಾವಿದರು ಈ ಶೈಲಿಯಲ್ಲಿ ಸಂಗೀತ ರಚಿಸುತ್ತಿದ್ದರು.[೧೩] ಚಾರ್ಲ್ಸ್‌ ಮಿಂಗಸ್‌, ಅಲೀಸ್‌ ಕೊಲ್ಟ್ರೇನ್‌ ಮತ್ತು ಮೈಲ್ಸ್‌ ಡೇವಿಸ್‌, ಹಾಗೂ 1970ರ ದಶಕದಲ್ಲಿ ಕ್ಯಾನ್‌ ಮತ್ತು ನೌ! ಅಂತಹ ಕ್ರಾಟ್ರಾಕ್‌ ವಾದ್ಯತಂಡಗಳ ಜಾಝ್‌ ಶೈಲಿಯ ಸಂಗೀತವು ಈ ಅವಧಿಗಳಲ್ಲಿ ಗಮನಾರ್ಹ ಪ್ರಭಾವ ಬೀರಿತ್ತು.[೭೫]

ಜಾನಿ ಗ್ರೀನ್ವುಡ್‌ 20ನೆಯ ಶತಮಾನದ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯೂ ಪಾತ್ರವಹಿಸಿತ್ತು. ಪೆಂಡೆರೆಕಿ ಮತ್ತು ಸಂಯೋಜಕ ಒಲಿವಿಯರ್‌ ಮೆಸಿಯೆನ್‌- ಇವರಿಬ್ಬರ ಪ್ರಭಾವವು ಸ್ಪಷ್ಟವಾಗಿತ್ತು. ಏಕೆಂದರೆ, ಒಕೆ ಕಂಪ್ಯೂಟರ್ ‌ ಮತ್ತು ಆನಂತರದ ಆಲ್ಬಮ್‌ಗಳಲ್ಲಿ ಗ್ರೀನ್ವುಡ್‌ ಓಂಡ್‌ ಮರ್ಟೆನೊಎಂಬ ಮೆಸಿಯೆನ್‌ ಜನಪ್ರಿಯಗೊಳಿಸಿದ ಮುಂಚಿನ ಎಲೆಕ್ಟ್ರಾನಿಕ್ ವಾದ್ಯವನ್ನು ನುಡಿಸಿದ್ದರು.[] ಹೇಯ್ಲ್‌ ಟು ದಿ ಥೀಫ್‌ ಆಲ್ಬಮ್ ರಚನಾಕಾರ್ಯ ನಡೆಸುತ್ತಿದ್ದಾಗ, ರೇಡಿಯೋಹೆಡ್‌ ವಾದ್ಯತಂಡವು ಗಿಟಾರ್‌ ರಾಕ್‌ ಶೈಲಿಯ ಮೇಲೆ ಪುನಃ ಒತ್ತು ನೀಡಿತ್ತು.[೪೧] ಈ ಅವಧಿಯಲ್ಲಿ ರೇಡಿಯೊಹೆಡ್‌ ತಂಡಕ್ಕೆ ದಿ ಬೀಟಲ್ಸ್‌, ದಿ ರೋಲಿಂಗ್‌ ಸ್ಟೋನ್ಸ್‌ ಹಾಗೂ ವಿಶಿಷ್ಟವಾಗಿ ನೀಲ್‌ ಯಂಗ್‌ ಸ್ಫೂರ್ತಿಯಾಗಿದ್ದವೆಂದು ಹೇಳಲಾಗಿದೆ.[೭೬][೭೭] ಇನ್‌ ರೇನ್ಬೊಸ್ ‌ ಆಲ್ಬಮ್ ಧ್ವನಿಮುದ್ರಣದ ಆರಂಭದಿಂದಲೂ, ಜೋರ್ಕ್‌, ಲಯರ್ಸ್‌, ಮೋಡ್‌ಸೆಲೆಕ್ಟರ್‌ ಹಾಗೂ ಸ್ಪ್ಯಾಂಕ್‌ ರಾಕ್‌ ಸೇರಿದಂತೆ ರಾಕ್‌, ವಿದ್ಯುನ್ಮಾನ, ಹಿಪ್‌-ಹಾಪ್‌ ಮತ್ತು ಪ್ರಾಯೋಗಿಕ ಸಂಗೀತಗಾರರು ಪ್ರಭಾವ ಬೀರಿದ್ದರೆಂದು ರೇಡಿಯೊಹೆಡ್‌ ತಂಡದವರು ತಿಳಿಸಿದ್ದಾರೆ.[೭೮][೭೯]

ರೇಡಿಯೊಹೆಡ್‌ ತಂಡ ರಚನೆಯಾದಾಗಿನಿಂದಲೂ, ಯಾರ್ಕ್‌ ಪ್ರಮುಖ ಗೀತರಚನೆಕಾರರಾಗಿದ್ದಾರೆ. ಆದರೆ, ಸಂಗೀತದ ದೃಷ್ಟಿಯಿಂದ, ಹಾಡಿನ ರಚನೆಯು ಸಹಯೋಗದ ಪ್ರಯತ್ನವಾಗಿದೆ. ತಂಡದ ಸದಸ್ಯರು ನೀಡಿದ ಸಂದರ್ಶನಗಳಲ್ಲಿ ಗಮನಿಸಿದಂತೆ, ಈ ಪ್ರಕ್ರಿಯೆಯಲ್ಲಿ ಎಲ್ಲಾ ಸದಸ್ಯರದೂ ಕೊಡುಗೆಯುಂಟು.[೩೫] ಇದರ ಫಲವಾಗಿ, ತಂಡದ ಎಲ್ಲ ಹಾಡುಗಳಿಗೂ ಅಧಿಕೃತವಾಗಿ 'ರೇಡಿಯೊಹೆಡ್' ಎಂದಲೇ ಮನ್ನಣೆ ನೀಡಲಾಗಿದೆ. ಕಿಡ್‌ ಎ/ಆಮ್ನೆಸಿಯಾಕ್‌ ಆಲ್ಬಮ್‌ ರಚನಾ ಅವಧಿಗಳಲ್ಲಿ ರೇಡಿಯೊಹೆಡ್‌ ತಂಡದ ಸಂಗೀತ ಶೈಲಿಯಲ್ಲಿ ಬದಲಾವಣೆ ಹಾಗೂ ತಂಡದ ಕಾರ್ಯರೀತಿಯಲ್ಲಿ ಇನ್ನಷ್ಟು ಗಮನಾರ್ಹ ಬದಲಾವಣೆಗಳಾದವು.[೩೫] ವಾದ್ಯತಂಡವು ಸಹಜ ರಾಕ್‌ ಶೈಲಿಯ ಸಂಗೀತ ವಾದ್ಯಗೀತೆರಚನೆಯಿಂದ ವಿದ್ಯುನ್ಮಾನ ಧ್ವನಿಗೆ ಒತ್ತು ನೀಡುವತ್ತ ಸಾಗಿದಾಗಿನಿಂದಲೂ, ತಂಡದ ಸದಸ್ಯರು ಸಂದರ್ಭಕ್ಕೆ ಹೆಚ್ಚು ಹೊಂದಿಕೊಂಡು,ಈಗ ನಿರ್ದಿಷ್ಟ ಗೀತೆಯ ಅಗತ್ಯಗಳಿಗೆ ಅನುಗುಣವಾಗಿ ನಿಯಮಿತವಾಗಿ ಸಂಗೀತವಾದ್ಯ ಬದಲಿಸುತ್ತಾರೆ.[೩೫] ಉದಾಹರಣೆಗೆ, ಕಿಡ್‌ ಎ ಮತ್ತು ಆಮ್ನೆಸಿಯಾಕ್‌ ಆಲ್ಬಮ್‌ಗಳಲ್ಲಿ ಯಾರ್ಕ್‌ ಕೀಬೋರ್ಡ್‌ ಹಾಗೂ ಬಾಸ್‌ ನುಡಿಸಿದರೆ, ಜಾನಿ ಗ್ರೀನ್ವುಡ್ ಆಗಾಗ್ಗೆ ಗಿಟಾರ್‌ಗಿಂತಲೂ ಹೆಚ್ಚಾಗಿ ಓಂಡ್‌ ಮರ್ಟೆನೊ ನುಡಿಸುತ್ತಿದ್ದರು. ಬಾಸ್‌ ವಾದಕ ಕೊಲಿನ್‌ ಗ್ರೀನ್ವುಡ್‌ ಸ್ಯಾಂಪ್ಲಿಂಗ್‌ ನುಡಿಸುತ್ತಿದ್ದರು. ಒ'ಬ್ರಿಯೆನ್‌ ಮತ್ತು ಸೇಲ್ವೇ ಡ್ರಮ್‌ ಮೆಷಿನ್ಸ್‌ ಹಾಗೂ ಡಿಜಿಟಲ್‌ ಮ್ಯಾನಿಪುಲೇಷನ್‌ ಬಳಸುತ್ತಿದ್ದರು. ಈ ಹೊಸ ಧ್ವನಿಯಲ್ಲಿ ಅವರು ಕ್ರಮವಾಗಿ ತಮ್ಮ ಪ್ರಾಥಮಿಕ ವಾದ್ಯಗಳಾದ ಗಿಟಾರ್‌ ಮತ್ತು ತಾಳವಾದ್ಯಗಳನ್ನು‌ ಅಳವಡಿಸಲು ಹೊಸ ರೀತಿಗಳನ್ನು ಪರಿಶೋಧಿಸುತ್ತಿದ್ದರು.[೩೫] ಯಾವುದೇ ಬಿಗು ವಾತಾವರಣವಿಲ್ಲದೆ ನಡೆದ ಹೇಯ್ಲ್‌ ಟು ದಿ ಥೀಫ್‌ ಅಲ್ಬಮ್‌ ಧ್ವನಿಮುದ್ರಣಾ ಅವಧಿಯು, ರೇಡಿಯೊಹೆಡ್‌ ತಂಡದಲ್ಲಿ ಹೊಸ ರೀತಿಯ ಸೃಜನಶೀಲತೆಗೆ ಕಾರಣವಾಯಿತು. ಸ್ವತಃ ಯಾರ್ಕ್‌ ಅವರೇ ಸಂದರ್ಶನಗಳಲ್ಲಿ ಒಪ್ಪಿಕೊಂಡ ಪ್ರಕಾರ, 'ತಂಡದಲ್ಲಿ [ಅವರ] ಪ್ರಾಬಲ್ಯವು ಸಂಪೂರ್ಣ ಅಸಮತೋಲನದಿಂದ ಕೂಡಿದ್ದು,[ತಾವು] ಇತರರ ಅಧಿಕಾರವನ್ನು ಹೇಗಾದರೂ ಮಾಡಿ ತಲೆಕೆಳಗು ಮಾಡುವಷ್ಟಿತ್ತು. ಆದರೆ... ಈಗ ಇದು ನಿಜಕ್ಕೂ ಬಹಳ ಅನುಕೂಲಕರವಾಗಿದೆ, ಹಿಂದಿನಕ್ಕಿಂತಲೂ ಪ್ರಜಾಪ್ರಭುತ್ವ ಶೈಲಿಯಲ್ಲಿದೆ.' [೮೦]

ಸಹಯೋಗಿಗಳು

[ಬದಲಾಯಿಸಿ]
ಚಿತ್ರ:RHbear.svg
ಸ್ಟ್ಯಾನ್ಲೇ ಡಾನ್ವುಡ್‌ ಮತ್ತು ಚಾಕ್‌ (ಥಾಮ್‌ ಯಾರ್ಕ್‌)ರಿಂದ ಕಿಡ್‌ ಏ ಗಾಗಿ 'ಮಾಡಿಫೈಡ್‌ ಬಿಯರ್‌' ಲಾಂಛನ

ರೇಡಿಯೊಹೆಡ್‌ ತಂಡವು ತನ್ನ ನಿರ್ಮಾಪಕ ನೈಗೆಲ್‌ ಗಾಡ್ರಿಚ್‌ ಹಾಗೂ ರೇಖಾಚಿತ್ರಕಲಾವಿದ ಸ್ಟ್ಯಾನ್ಲೇ ಡಾನ್ವುಡ್‌ರೊಂದಿಗೆ ನಿಕಟ ಸಂಬಂಧವಿಟ್ಟುಕೊಂಡಿದೆ. ದಿ ಬೆಂಡ್ಸ್ ‌ ಆಲ್ಬಮ್‌ ರಚನೆ ಆರಂಭದಿಂದ ರೇಡಿಯೊಹೆಡ್‌ ತಂಡದೊಂದಿಗೆ ತಮ್ಮ ಸಹಯೋಗ ಆರಂಭಿಸಿ ಖ್ಯಾತಿ ಪಡೆದ ಗಾಡ್ರಿಚ್‌, ಒಕೆ ಕಂಪ್ಯೂಟರ್ ‌ ಆಲ್ಬಮ್‌ನೊಂದಿಗೆ ಮೊದಲ ಬಾರಿ ನಿರ್ಮಾಪಕರಾದರು.[೮೧] ಬೀಟಲ್ಸ್‌ ತಂಡದ ಜಾರ್ಜ್‌ ಮಾರ್ಟಿನ್‌ರನ್ನು ಐದನೆಯ ಬೀಟಲ್‌ ಎಂದು ಕರೆಯುವಂತೆ, ನೈಗೆಲ್‌ರನ್ನು ಕೆಲವೊಮ್ಮೆ ರೇಡಿಯೊಹೆಡ್‌ನ 'ಆರನೆಯ ಸದಸ್ಯ' ಎಂದು ಉಲ್ಲೇಖಿಸಲಾಯಿತು.[೮೧] ತಂಡದ ಇನ್ನೊಬ್ಬ ದೀರ್ಘಕಾಲಿಕ ಸದಸ್ಯ ಡಾನ್ವುಡ್‌, 1994ರಿಂದಲೂ ರೇಡಿಯೊಹೆಡ್‌ ತಂಡದ ಆಲ್ಬಮ್‌ ರಕ್ಷಾಪುಟದ ಮತ್ತು ಕಲಾವಿನ್ಯಾಸದ ಜವಾಬ್ದಾರಿ ನಿರ್ವಹಿಸಿದ್ದಾರೆ.[೮೨] ಗ್ರಂಥಾಲಯದ ಪುಸ್ತಕದಂತೆ ನಿರೂಪಿಸಲಾದ ಆಮ್ನೆಸಿಯಾಕ್‌ ಅಲ್ಬಮ್‌ನ ವಿಶೇಷ ಆವೃತ್ತಿಗಾಗಿ 2002ರಲ್ಲಿ ಯಾರ್ಕ್‌ ಮತ್ತು ಡಾನ್ವುಡ್‌ ಗ್ರ್ಯಾಮಿ ಪ್ರಶಸ್ತಿ ಗಳಿಸಿದರು.[೮೨] ಇತರೆ ಸಹಯೋಗಿಗಳಲ್ಲಿ ಡಿಲ್ಲಿ ಜೆಂಟ್‌ ಮತ್ತು ಪೀಟರ್‌ ಕ್ಲೆಮೆಂಟ್ಸ್‌ ಇದ್ದಾರೆ. ಜೆಂಟ್‌ ಒಕೆ ಕಂಪ್ಯೂಟರ್‌ ಆಲ್ಬಮ್‌ನಿಂದ ಹಿಡಿದು ರೇಡಿಯೊಹೆಡ್‌ ತಂಡದ ಎಲ್ಲಾ ಸಂಗೀತ ವೀಡಿಯೊಗಳನ್ನು ಸಿದ್ಧಪಡಿಸುವ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರತಿಯೊಂದು ಕಾರ್ಯಕ್ಕೂ ಸೂಕ್ತವಾದ ನಿರ್ದೇಶಕರನ್ನು ಆನ್ವೇಷಿಸುವಲ್ಲಿ ತಂಡಕ್ಕೆ ನೆರವಾಗಿದ್ದಾರೆ.[೮೩] ತಂಡದ ಲೈವ್‌ ಟೆಕ್ನಿಷಿಯನ್‌ ಪೀಟರ್‌ ಕ್ಲೆಮೆಂಟ್ಸ್‌ (ಅಡ್ಡಹೆಸರು 'ಪ್ಲ್ಯಾಂಕ್') ದಿ ಬೆಂಡ್ಸ್‌ ‌ ಮುಂಚಿನ ಕಾಲದಿಂದಲೂ ರೇಡಿಯೊಹೆಡ್‌ ತಂಡದೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಅವರು ಸ್ಟುಡಿಯೊ ಧ್ವನಿಮುದ್ರಣ ಹಾಗೂ ಕಾರ್ಯಕ್ರಮ ಸಂಗೀತಗೋಷ್ಠಿಗಳಿಗಾಗಿ ತಂಡದ ಸದಸ್ಯರಿಗಾಗಿ ವಾದ್ಯಗಳನ್ನು ಸಿದ್ಧಪಡಿಸುವರು.[]

ಧ್ವನಿಮುದ್ರಿಕೆ ಪಟ್ಟಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Sherwin, Adam (2007-12-28), "EMI accuses Radiohead after group's demands for more fell on deaf ears", The Times, retrieved 2008-01-29 {{citation}}: Check date values in: |date= (help)
  2. Radiohead gun for Beatles' Revolver, news.bbc.co.uk, 2000-09-03, retrieved 2008-09-28 {{citation}}: Unknown parameter |source= ignored (help)
  3. Radiohead — In Rainbows Is Overwhelming Critics Choice for Top Album, Contact Music, 2007-12-18, retrieved 2009-10-03
  4. "The 50 albums that changed music", The Observer, 2006-07-16, retrieved 2009-10-03
  5. ೫.೦ ೫.೧ ೫.೨ US Success for Radiohead, BBC News, 2001-06-14, retrieved 2007-03-22
  6. ೬.೦ ೬.೧ ೬.೨ ೬.೩ McLean, Craig (2003-07-14), "Don't worry, be happy", The Sydney Morning Herald, retrieved 2007-12-25
  7. ೭.೦ ೭.೧ ೭.೨ ೭.೩ ೭.೪ ೭.೫ ೭.೬ ೭.೭ ೭.೮ Randall, Mac (1998-04-01), "The Golden Age of Radiohead", Guitar World
  8. Clarke, Martin (2006-05-05), Radiohead: Hysterical and Useless, Plexus, ISBN 0859653838
  9. ೯.೦ ೯.೧ ೯.೨ ೯.೩ ೯.೪ ೯.೫ ೯.೬ Ross, Alex (2001-08-20), "The Searchers", The New Yorker, archived from the original on 2008-02-14, retrieved 2007-12-24{{citation}}: CS1 maint: bot: original URL status unknown (link)
  10. ೧೦.೦ ೧೦.೧ ೧೦.೨ ೧೦.೩ ೧೦.೪ Kent, Nick (2001-06-01), "Happy now?", Mojo
  11. ೧೧.೦ ೧೧.೧ ೧೧.೨ ೧೧.೩ ೧೧.೪ "Radiohead: The right frequency", BBC News, 2001-02-22, retrieved 2007-11-24
  12. "Creepshow", Melody Maker, 1992-12-19
  13. ೧೩.೦ ೧೩.೧ ೧೩.೨ Smith, Andrew (2000-10-01), "Sound and Fury", The Observer, retrieved 2007-03-17
  14. ೧೪.೦ ೧೪.೧ Radiohead gigography: 1993, Green Plastic Radiohead, archived from the original on 2011-09-12, retrieved 2010-06-22
  15. Randall, Mac (2000-09-12), Exit Music: The Radiohead Story, Delta, pp. 71–73, ISBN 0385333935
  16. Rubinstein, Harry (2009-01-20), "The Radiohead — Israel connection", israelity.com
  17. ೧೭.೦ ೧೭.೧ ೧೭.೨ "Radiohead: Artist Chart History", Billboard, archived from the original on 2007-11-22, retrieved 2007-11-09
  18. Richardson, Andy (1995-12-09), "Boom! Shake The Gloom!", NME
  19. ೧೯.೦ ೧೯.೧ Harding, Nigel (1995), "Radiohead's Phil Selway", consumable.com, archived from the original on 2007-08-10, retrieved 2007-05-28
  20. Black, Johnny (2003-06-01), "The Greatest Songs Ever! Fake Plastic Trees", Blender, retrieved 2007-04-15
  21. ೨೧.೦ ೨೧.೧ Randall, Mac (2000-09-12), Exit Music: The Radiohead Story, Delta, pp. 127–134, ISBN 0385333935
  22. ೨೨.೦ ೨೨.೧ ೨೨.೨ Reynolds, Simon (June 2001), "Walking on Thin Ice", The Wire{{citation}}: CS1 maint: date and year (link)
  23. Mallins, Steve (1995-04-01), "Scuba Do", Vox magazine {{citation}}: Italic or bold markup not allowed in: |magazine= (help)
  24. Randall, Mac (2000-09-12), Exit Music: The Radiohead Story, Delta, pp. 98–99, ISBN 0385333935
  25. "Radiohead: Biography", Rolling Stone, archived from the original on 2006-11-09, retrieved 2009-01-20
  26. ೨೬.೦ ೨೬.೧ ೨೬.೨ ೨೬.೩ DiMartino, Dave (1997-05-02), "Give Radiohead to Your Computer", LAUNCH {{citation}}: |access-date= requires |url= (help)
  27. Courtney, Kevin (1997-05-17), "Radiohead calling", Irish Times, archived from the original on 2012-02-08, retrieved 2007-12-24
  28. Glover, Adrian (1997-08-01), "Radiohead — Getting More Respect", Circus
  29. "The All-Time 100 albums", Time, 2006-11-13, archived from the original on 2007-03-07, retrieved 2007-03-11
  30. "Subterranean Aliens", Request Magazine, 1997-09-01
  31. "Renaissance Men", Select, December 1997
  32. "Screen Source presents: The 40th Annual Grammy Awards", Screen Source, amug.com, 1998-02-27, retrieved 2007-11-20
  33. Deming, Mark (2007-11-20), "Meeting People is Easy (1999)", New York Times, retrieved 2007-11-20
  34. Art for Amnesty, archived from the original on 2007-10-30, retrieved 2007-12-22
  35. ೩೫.೦ ೩೫.೧ ೩೫.೨ ೩೫.೩ ೩೫.೪ ೩೫.೫ ೩೫.೬ ೩೫.೭ Eccleston, Danny (2000-10-01), Q {{citation}}: |access-date= requires |url= (help); Missing or empty |title= (help)
  36. Evangelista, Benny (2000-10-12), "CD Soars After Net Release: Radiohead's 'Kid A' premieres in No. 1 slot", San Francisco Chronicle, retrieved 2007-03-17
  37. Menta, Richard (2000-10-28), "Did Napster Take Radiohead's New Album to Number 1?", MP3 Newswire
  38. Oldham, James (2000-06-24), "Radiohead — Their Stupendous Return", NME
  39. ೩೯.೦ ೩೯.೧ Zoric, Lauren (2000-09-22), "I think I'm meant to be dead", The Guardian
  40. "Kid A by Radiohead", Metacritic, archived from the original on 2007-06-09, retrieved 2007-05-20
  41. ೪೧.೦ ೪೧.೧ "Radiohead: Hail to the Thief (2003): Reviews", Metacritic, archived from the original on 2007-09-26, retrieved 2007-03-17
  42. Petridis, Alexis (2003-06-06), "Radiohead: Hail to the Thief", The Guardian, retrieved 2007-11-22
  43. "Rock on the Net: 45th Annual Grammy Awards", rockonthenet.com, 2003-02-23, retrieved 2007-11-22
  44. Sutcliffe, Phil (2003-06-08), "Radiohead heeds the alarms", The Los Angeles Times {{citation}}: |access-date= requires |url= (help); Check date values in: |accessdate= (help); Missing pipe in: |accessdate= (help)
  45. ೪೫.೦ ೪೫.೧ O'Brien, Ed (2005-08-21), "Here we go", Dead Air Space, Radiohead, archived from the original on 2011-08-27, retrieved 2007-12-23
  46. "Rush to download War Child album", BBC News, 2005-09-12, retrieved 2007-10-19
  47. Marshall, Julian (2007-10-02), "Radiohead: Exclusive Interview", NME {{citation}}: |access-date= requires |url= (help)
  48. "Radiohead mastering seventh album in New York", NME, 2007-07-16
  49. Tyrangiel, Josh (2007-10-01), "Radiohead Says: Pay What You Want", Time Magazine, archived from the original on 2013-08-24, retrieved 2009-01-11
  50. Byrne, David (2007-11-18), "David Byrne and Thom Yorke on the Real Value of Music", Wired, retrieved 2008-01-06
  51. Edgecliffe-Johnson, Andrew (2007-10-11), "Radiohead MP3 release a tactic to lift CD sales", Financial Times
  52. ೫೨.೦ ೫೨.೧ Grossberg, Josh (2007-11-06), "Fans Shortchanging Radiohead's Rainbows?", Yahoo! News[ಶಾಶ್ವತವಾಗಿ ಮಡಿದ ಕೊಂಡಿ]
  53. Griffiths, Peter (2008-01-06), "Radiohead top album chart", Reuters, retrieved 2008-01-07
  54. Cohen, Jonathan (2008-01-09), "Radiohead Nudges Blige From Atop Album Chart", Billboard, archived from the original on 2008-02-12, retrieved 2008-01-09{{citation}}: CS1 maint: bot: original URL status unknown (link)
  55. "Radiohead's 'In Rainbows' to be released on CD this year", NME, 2007-11-08, retrieved 2007-11-19
  56. Radiohead to release 'Best Of' compilation, NME, 2008-04-03, retrieved 2008-04-03
  57. Reynolds, Simon (2008-05-09), Yorke slams Radiohead 'Best Of' LP, Digital Spy, retrieved 2008-09-27
  58. Dodson, Sean (2008-07-17), Is Radiohead the latest band to go open source?, The Guardian, retrieved 2008-09-27
  59. Dead Air Space (2008-09-23), Reckoner remix, Radiohead.com, archived from the original on 2008-09-25, retrieved 2008-09-27
  60. "Radiohead: In Rainbows (2007): Reviews", Metacritic, archived from the original on 2010-05-10, retrieved 2007-11-06
  61. Kreps, Daniel (2008-10-15), "Radiohead Publishers Reveal "In Rainbows" Numbers", Rolling Stone, archived from the original on 2011-08-27, retrieved 2008-11-07
  62. Radiohead News - 2008 Mercury Music Prize Nominees Announced, idiomag, 2008-07-24, retrieved 2008-09-12 {{citation}}: Cite has empty unknown parameter: |unused_data= (help); Text "Radiohead, Adele & Estelle" ignored (help)
  63. Grammy Awards 2009: British artists dominate Los Angeles ceremony, 2009-02-00 {{citation}}: |access-date= requires |url= (help); Check date values in: |date= (help); Text "http://www.telegraph.co.uk/culture/music/4566240/Grammy-Awards-2009-British-artists-dominate-Los-Angeles-ceremony.html" ignored (help)
  64. ಉಲ್ಲೇಖ ದೋಷ: Invalid <ref> tag; no text was provided for refs named tour
  65. "ರೀಡಿಂಗ್‌ ಅಂಡ್‌ ಲೀಡ್ಸ್‌ 2009 ಲೈನ್‌-ಅಪ್‌". NME . 30 ಮಾರ್ಚ್‌ 2009
  66. Radiohead, por primera vez en Buenos Aires, lanacion.com.ar, 2008-11-13, retrieved 2009-01-14 {{citation}}: Unknown parameter |source= ignored (help)
  67. Lindsay, Andrew (2009-05-18). "Radiohead begin recording new album". Stereokill.net. Retrieved 2009-05-18.
  68. "Harry Patch (In Memory Of)". Radiohead.com. Archived from the original on 2013-06-26. Retrieved 2009-08-05.
  69. Harris, John (2009-08-06). "Radiohead's farewell to old first world war soldier in song". G2. The Guardian. Retrieved 2009-08-06.
  70. http://stereokill.net/2009/08/17/radiohead-officially-release-these-are-my-twisted-words/
  71. "Radiohead's Thom Yorke: 'We need to get away from releasing albums'". NME.com. 2009-08-10. Retrieved 2009-08-10.
  72. "A rant and some other stuff". radiohead.com. 2009-12-19. Archived from the original on 2007-08-16. Retrieved 2009-12-22.
  73. "ಆರ್ಕೈವ್ ನಕಲು". Archived from the original on 2012-12-26. Retrieved 2010-06-22.
  74. Gillespie, Ian (1997-08-17), "It all got very surreal", London Free Press {{citation}}: |access-date= requires |url= (help)
  75. Zoric, Lauren (2000-10-01), "Fitter, Happier, More Productive", Juice {{citation}}: |access-date= requires |url= (help)
  76. Duno, Borja (2003-05-30), "Ed & Thom interview", Mondosonoro
  77. ಹೇಯ್ಲ್ ಟು ದಿ ಥೀಫ್‌ ಗೀತೆಯ ಪಂಕ್ತಿ-ನಾದಗಳು, 2003.
  78. "Radiohead's Secret Influences, from Fleetwood Mac to Thomas Pynchon". Rolling Stone. 2008-01-24. Archived from the original on 2009-06-12. Retrieved 2008-02-06.
  79. Kent, Nick (2006-08-01). "Ghost in the Machine". Mojo. pp. 74–82. {{cite news}}: |access-date= requires |url= (help); Italic or bold markup not allowed in: |work= (help)
  80. Dalton, Stephen (2004-04-01), "Are we having fun yet?", The Age, retrieved 2007-03-26
  81. ೮೧.೦ ೮೧.೧ McKinnon, Matthew (2006-07-24), "Everything In Its Right Place", CBC, archived from the original on 2007-07-03, retrieved 2007-03-11
  82. ೮೨.೦ ೮೨.೧ Stanley Donwood, Eyestorm, retrieved 2007-05-29
  83. Dilly Gent videography, mvdbase.com, archived from the original on 2013-01-18, retrieved 2007-06-18

ಮೂಲಗಳು

[ಬದಲಾಯಿಸಿ]
  • ರಾಂಡಲ್‌, ಮ್ಯಾಕ್‌. ಎಕ್ಸಿಟ್‌ ಮ್ಯೂಸಿಕ್‌: ದಿ ರೇಡಿಯೊಹೆಡ್ ಸ್ಟೋರಿ . 2000. ISBN 0-385-33393-5
  • ಕ್ಲಾರ್ಕ್‌, ಮಾರ್ಟಿನ್‌. ರೇಡಿಯೊಹೆಡ್‌: ಹಿಸ್ಟೀರಿಕಲ್‌ ಅಂಡ್‌ ಯೂಸ್ಲೆಸ್‌ . 2000. ISBN 0-85965-332-3

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಡೊಹೆನಿ, ಜೇಮ್ಸ್‌. ರೇಡಿಯೊಹೆಡ್‌: ಬ್ಯಾಕ್‌ ಟು ಸೇವ್‌ ದಿ ಯುನಿವರ್ಸ್‌ . 2002. ISBN 0-8264-1663-2
  • ಫುಟ್ಮನ್‌, ಟಿಮ್‌. ವೆಲ್ಕಮ್‌ ಟು ದಿ ಮೆಷಿನ್‌: ಒಕೆ ಕಂಪ್ಯೂಟರ್‌ ಅಂಡ್‌ ದಿ ಡೆತ್‌ ಆಫ್‌ ದಿ ಕ್ಲಾಸಿಕ್‌ ಅಲ್ಬಮ್‌ . 2007. ISBN 1-84240-388-5
  • ಫೋರ್ಬ್ಸ್‌, ಬ್ರಾಂಡನ್‌ ಡಬ್ಲ್ಯೂ. ಅಂಡ್‌ ರೇಷ್‌, ಜಾರ್ಜ್‌ ಎ. (ಸಂಪಾದಕರು). "ರೇಡಿಯೊಹೆಡ್‌ ಅಂಡ್‌ ಫಿಲಾಸಫಿ". 2009. ISBN 0-8126-9664-6
  • ಗ್ರಿಫಿತ್ಸ್‌, ಡಾಯ್‌. ರೇಡಿಯೊಹೆಡ್‌'ಸ್‌ ಒಕೆ ಕಂಪ್ಯೂಟರ್‌ (33⅓ ಸೀರೀಸ್‌). 2004. ISBN 1-56025-398-3
  • ಜಾನ್ಸ್ಟೋನ್‌, ನಿಕ್‌. ರೇಡಿಯೊಹೆಡ್‌: ಎನ್‌ ಇಲುಸ್ಟ್ರೇಟೆಡ್‌ ಬಯೊಗ್ರಫಿ . 1997. ISBN 0-7119-6581-1
  • ಪೇಯ್ಟ್ರೆಸ್‌, ಮಾರ್ಕ್‌. ರೇಡಿಯೊಹೆಡ್‌: ದಿ ಕಂಪ್ಲೀಟ್‌ ಗೈಡ್ ಟೊ ದೇರ್‌ ಮ್ಯೂಸಿಕ್‌ . 2005. ISBN 1-84449-507-8
  • ಟೇಟ್‌, ಜೋಸೆಫ್‌ (ಸಂಪಾದಕರು). ದಿ ಮ್ಯೂಸಿಕ್‌ ಅಂಡ್‌ ಆರ್ಟ್‌ ಆಫ್‌ ರೇಡಿಯೊಹೆಡ್‌ . 2005. ISBN 0-7546-3979-7.

ಬಾಹ್ಯ ಕೊಂಡಿಗಳು

[ಬದಲಾಯಿಸಿ]