ರಹಮತ್ ತರೀಕೆರೆ

ವಿಕಿಪೀಡಿಯ ಇಂದ
Jump to navigation Jump to search
ರಹಮತ್ ತರೀಕೆರೆ
'ಪ್ರೊ.ರಹಮತ್ ತರೀಕೆರೆ'
ಜನನಆಗಸ್ಟ್ ೨೬, ೧೯೫೯
ತರೀಕೆರೆ ತಾಲೂಕಿನ ಸಮತಳ
ವೃತ್ತಿಪ್ರಾಧ್ಯಾಪಕರು, ಸಾಹಿತಿ
ವಿಷಯಕನ್ನಡ ಸಾಹಿತ್ಯ

ರಹಮತ್ ತರೀಕೆರೆ (ಆಗಸ್ಟ್ ೨೬, ೧೯೫೯) ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕರಾಗಿ, ವೈಚಾರಿಕ ಬರಹಗಾರರಾಗಿ ಹೆಸರಾಗಿದ್ದಾರೆ.

ಜೀವನ[ಬದಲಾಯಿಸಿ]

 • ಕನ್ನಡದ ಪ್ರಸಿದ್ಡ ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಅವರು ಆಗಸ್ಟ್ ೨೬, ೧೯೫೯ರಂದು ತರೀಕೆರೆ ತಾಲೂಕಿನ ಸಮತಳದಲ್ಲಿ ಜನಿಸಿದರು. ಹಳ್ಳಿಯಲ್ಲಿ ಕಮ್ಮಾರಿಕೆಯಿಂದ ಮನೆಯವರ ಹೊಟ್ಟೆ ತುಂಬುವುದು ಅಸಾಧ್ಯವಾದಾಗ ಇವರ ಕುಟುಂಬ ತರೀಕೆರೆಗೆ ಬಂತು. ಆಗ ಇವರಿಗೆ ದೊರೆತದ್ದು ಅಕ್ಷರಶಃ ಸ್ಲಂ ಬದುಕು. ಅವರಿವರ ಜೋಪಡಿ ಪಟ್ಟಿಗಳ ಬೆಳಕಿನಲ್ಲಿ ಹುಚ್ಚುಹಿಡಿದು ಓದುತ್ತ ಎಸ್ ಎಸ್ ಎಲ್ ಸಿ, ಪಿಯುಸಿ ಮುಗಿಸಿದರು. ಇದಕ್ಕೆ ತಾಯಿಯ ಒತ್ತಾಸೆಯೂ ಇತ್ತು. ತರೀಕೆರೆಯಲ್ಲಿ ಓದುವಾಗ ಅಪ್ಪ ಅಣ್ಣಂದಿರೊಂದಿಗೆ ಇವರು ಹಮಾಲಿ ಮಾಡಿದ್ದೂ ಉಂಟು.
 • ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡದ ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಥಮ ಸ್ಥಾನ ಮತ್ತು ಚಿನ್ನದ ಪದಕಗಳೊಂದಿಗೆ ಪದವಿ ಪೂರೈಸಿದ ರಹಮತ್ ಅವರು, ಮುಂದೆ ಮೈಸೂರಿನ ಮಾನಸಗಂಗೋತ್ರಿಯಲ್ಲಿ 1983ರಲ್ಲಿ ಅದೇ ಮೇಲ್ಮಟ್ಟದ ಪ್ರಥಮ ಸ್ಥಾನ ಮತ್ತು ಏಳು ಸ್ವರ್ಣಪದಕಗಳ ಸಾಧನೆಯೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. ಪ್ರೊ. ಎಚ್.ಎಂ.ಚನ್ನಯ್ಯನವರ ಮಾರ್ಗದರ್ಶನದಲ್ಲಿ 1988ರಲ್ಲಿ ಪಿಎಚ್.ಡಿ ಪದವಿ ಪಡೆದರು.
 • ೧೯೮೩-೮೪ರ ವರ್ಷದಿಂದ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭ ಮಾಡಿದ ರಹಮತ್ ತರೀಕೆರೆಯವರು 1992ರಿಂದ ಚಂದ್ರಶೇಖರ ಕಂಬಾರರ ಕರೆಯ ಮೇರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಹಾಗೂ ಭಾಷಾಕಾಯದ ಡೀನ್ ಆಗಿ ಅವರು ಸೇವೆ ಸಲ್ಲಿಸಿದರು. ಈಗ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೇಖಕರಾಗಿ[ಬದಲಾಯಿಸಿ]

 • ರಹಮತ್ ತರೀಕೆರೆಯವರು ತಮ್ಮ ಓದಿನ ದಿನಗಳಲ್ಲೇ ‘ಪ್ರಪಂಚ’, ‘ಜನಪ್ರಗತಿ’, ‘ಅಂಚೆವಾರ್ತೆ’ಗಳಂಥ ಪತ್ರಿಕೆಗಳಲ್ಲಿ ಹೃದಯಸ್ಪರ್ಶಿ ಕಥೆ ಕವಿತೆಗಳನ್ನು ಪ್ರಕಟಿಸಿ ತರೀಕೆರೆ ಸೀಮೆಯ ಜನರ ಹೆಮ್ಮೆಗೆ ಪಾತ್ರರಾಗಿದ್ದರು.
 • ಅವರು ಆಗಲೇ ‘ಐವರು ಹೇಳಿದ ಜನಪದ ಕಥೆಗಳು’ ಎಂಬ ಸಂಪಾದನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುವಷ್ಟು ಬೆಳೆದಿದ್ದರು. ಎಂ.ಎ. ಸೇರುವುದರೊಳಗಾಗಿ ದಾರಿ ಖಚಿತವಾಗಿತ್ತು. ವಿದ್ಯಾರ್ಥಿ ಬದುಕಿನ ಜೀವನದುದ್ದಕ್ಕೂ ವಿದ್ಯಾಗುರುಗಳಾದ ಗೋವಿಂದರಾಜು, ಹಾಲೇಶ್, ನೊಸಂತಿ, ಎಚ್. ಎಂ. ಚೆನ್ನಯ್ಯ, ಪ್ರಭುಶಂಕರ, ಜಿ.ಎಚ್ ನಾಯಕ ಮೊದಲಾದವರು ನೀಡಿದ ನೈತಿಕ ಬೆಂಬಲ ಅವರನ್ನು ಬೆಳೆಸಿತು.
 • ‘ಪ್ರತಿಸಂಸ್ಕೃತಿ’, ‘ಮರದೊಳಗಿನ ಕಿಚ್ಚು’, ‘ಸಂಸ್ಕೃತಿ ಚಿಂತನೆ’, ‘ಕತ್ತಿಯಂಚಿನ ದಾರಿ’, ‘ಚಿಂತನೆಯ ಪಾಡು’, ‘ಕರ್ನಾಟಕದ ಸೂಫಿಗಳು ಹಾಗೂ ಕರ್ನಾಟಕದ ನಾಥಪಂಥ’ ಮುಂತಾದವು ರಹಮತ್ ತರೀಕೆರೆ ಅವರ ವಿಮರ್ಶಾ ಗ್ರಂಥಗಳಾಗಿವೆ. ‘ಮಾತು ತಲೆ ಎತ್ತುವ ಬಗೆ’, ‘ಇಲ್ಲಿ ಯಾರೂ ಮುಖ್ಯರಲ್ಲ’ ಮುಂತಾದವು ಅವರ ಸಂಶೋಧನಾ ಕೃತಿಗಳು. ‘ಅಂಡಮಾನ್ ಕನಸು’ ಪ್ರವಾಸ ಕಥನ. ‘ಸಾಂಸ್ಕೃತಿಕ ಅಧ್ಯಯನ’, ‘ಧರ್ಮಪರೀಕ್ಷೆ’, 'ವಸಾಹತು ಪ್ರಜ್ಞೆ ಮತ್ತು ವಿಮೋಚನೆ’, ‘ಧರ್ಮವಿಶ್ವಕೋಶ’, ‘ಹೊಸ ತಲೆಮಾರಿನ ತಲ್ಲಣ’, ‘ಕವಿರಾಜಮಾರ್ಗ ಸಾಂಸ್ಕೃತಿಕ ಮುಖಾಮುಖಿ’, ‘ಅಕ್ಕನ ವಚನಗಳು ಸಾಂಸ್ಕೃತಿಕ ಮುಖಾಮುಖಿ’, ‘ಕುಮಾರವ್ಯಾಸ ಸಾಂಸ್ಕೃತಿಕ ಮುಖಾಮುಖಿ’, ‘ಇಂಗ್ಲಿಷ್ ಗೀತೆಗಳು ಸಾಂಸ್ಕೃತಿಕ ಮುಖಾಮುಖಿ’, ‘ಮಲೆಗಳಲ್ಲಿ ಮದುಮಗಳು ಸಾಂಸ್ಕೃತಿಕ ಮುಖಾಮುಖಿ’, ‘ತನ್ನತನದ ಹುಡುಕಾಟ’ ಮುಂತಾದವು ಅವರ ವೈಶಿಷ್ಟ್ಯಪೂರ್ಣ ಚಿಂತನ ಕೃತಿಗಳು. ‘ಲೋಕವಿರೋಧಿಗಳ ಜತೆಯಲ್ಲಿ’, ‘ಐವರು ಹೇಳಿದ ಜನಪದ ಕಥೆಗಳು’ ಮುಂತಾದವು ಸಂಪಾದಿತ ಕೃತಿಗಳು.

ಕತ್ತಿಯಂಚಿನ ದಾರಿ[ಬದಲಾಯಿಸಿ]

 • ರಹಮತ್ ತರೀಕೆರೆ ಅವರು ತಮ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಯಾದ ‘ಕತ್ತಿಯಂಚಿನ ದಾರಿ’ಯ ಕುರಿತು ಆ ಪುಸ್ತಕದಲ್ಲಿ ಬರೆದಿರುವ ಮಾತುಗಳು ಹೀಗಿವೆ:

“ಇದೊಂದು ಬಿಕ್ಕಟ್ಟಿನ ಕಾಲ. ನನ್ನ ತಲೆಮಾರಿನ ಅನೇಕರ ನಡೆ ನುಡಿಗಳ ನಡುವೆ ಕಾಣಿಸಿಕೊಳ್ಳುವ ಕಷ್ಟ ಕೂಡ. ನಮ್ಮ ನಾಡಿನ ಚರಿತ್ರೆಯಲ್ಲಿ ಯಾವೊತ್ತೂ ಇಷ್ಟೊಂದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದೀ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳವಳಿಗಾರರ ದಮನ - ಇವೆಲ್ಲವೂ ನಮ್ಮ ಓದು ಮತ್ತು ಬರಹಗಳ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ. ಮರೆಯದೆ ಬರೆದರೆ, ಬರೆದ ಬರೆಹ ಆತ್ಮವಿಶ್ವಾಸ ಕೂಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೇ ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯ ಅಲಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ. ಅದನ್ನು ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ. ಅದನ್ನು ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ ನಮ್ಮ ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ.....” ಹೀಗೆ ಸಾಗುತ್ತದೆ ಅವರ ವಿಚಾರ ಲಹರಿ.

'ರಹಮತ್ ತರೀಕೆರೆಯವರು' ಬರೆದ ಮಹತ್ವದ ಕೃತಿಗಳು[ಬದಲಾಯಿಸಿ]

 • ೧೯೯೩ ರಲ್ಲಿ ಪ್ರಕಟವಾದ ಇವರ 'ಪ್ರತಿಸಂಸ್ಕೃತಿ (ವಿಮರ್ಶಾ ಸಂಕಲನ]
 • ೧೯೯೮ ರಲ್ಲಿ, ಪ್ರಕಟವಾದ 'ಕರ್ನಾಟಕ ಸೂಫಿಗಳು' (ಸಂಶೋಧನೆ)
 • ೨೦೦೦ ರಲ್ಲಿ, ಪ್ರಕಟವಾದ'ಅಂಡಮಾನ್ ಕನಸು
 • ೨೦೦೬ ರಲ್ಲಿ ಪ್ರಕಟವಾದ ` ಕರ್ನಾಟಕದ ನಾಥಪಂಥ' (ಸಂಶೋಧನೆ)
 • ೨೦೦೯ರಲ್ಲಿ ಪ್ರಕಟವಾದ ಧಮಪರೀಕ್ಷೆ (ಚಿಂತನೆಗಳು)

ಇನ್ನಿತರ ಪುಸ್ತಕಗಳು[ಬದಲಾಯಿಸಿ]

 • ಮರದೊಳಗಿನ ಕಿಚ್ಚು (ಸಂಸ್ಕೃತಿ ಚಂತನೆ)
 • ಸಾಂಸ್ಕೃತಿಕ ಅಧ್ಯಯನ (ಚಿಂತನೆ)
 • ಲೋಕ ವಿರೋಧಿಗಳ ಜೊತೆಯಲ್ಲಿ (ಸಂದರ್ಶನಗಳು)
 • ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
 • ಹೊಸ ತಲೆಮಾರಿನ ತಲ್ಲಣ (ಹೊಸಲೇಖಕರ ಬರೆಹದ ಬಗೆಗಿನ ವಿಶ್ಲೇಷಣೆ)
 • ಚಿಂತನೆಯ ಪಾಡು (ಸಾಹಿತ್ಯ ವಿಮರ್ಶೆ)
 • ಇಲ್ಲಿ ಯಾರೂ ಮುಖ್ಯರಲ್ಲ (ಸಾಹಿತ್ಯ ಮೀಮಾಂಸೆ)
 • ಕದಳಿ ಹೊಕ್ಕು ಬಂದೆ(ತಿರುಗಾಟದ ಕಥನಗಳು)
 • ನಡೆದಷ್ಟೂ ನಾಡು (ತಿರುಗಾಟದ ಕಥನಗಳು)
 • ಅಮೀರ್ ಬಾಯಿ ಕರ್ನಾಟಕಿ (ಜೀವನಚರಿತ್ರೆ)
 • ನೇತುಬಿದ್ದ ನವಿಲು (ಲೇಖನ ಸಂಕಲನ)
 • ಸಂಶೋಧನ ಮೀಮಾಂಸೆ (ಚಿಂತನೆ)
 • ಕರ್ನಾಟಕದ ಮೊಹರಂ (ಸಂಶೋಧನೆ)
 • ಗೇರಮರಡಿ ಕತೆಗಳು (ಜನಪದ ಸಂಪಾದನೆ)

ಗೌರವ ಪ್ರಶಸ್ತಿಗಳು[ಬದಲಾಯಿಸಿ]

 • ರಹಮತ್ ತರೀಕೆರೆಯವರಿಗೆ ‘ಕತ್ತಿಯಂಚಿನ ದಾರಿ’ ಕೃತಿಗೆ ೨೦೧೦ ರ ವರ್ಷದ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
 • ಪ್ರತಿಸಂಸ್ಕೃತಿ ೧೯೯೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • ಕರ್ನಾಟಕದ ಸೂಫಿಗಳು,೧೯೯೮ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • ಅಂಡಮಾನ್ ಕನಸು, ೨೦೦೦ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 • ಸಾಹಿತ್ಯ ವಿಮರ್ಶಾ ಕ್ಷೇತ್ರದ ಒಟ್ಟು ಕೊಡುಗೆಗಾಗಿ ಅವರಿಗೆ ೨೦೦೮ ರಲ್ಲಿ ಜಿಎಸ್ಎಸ್ ಪ್ರಶಸ್ತಿ.
 • 'ಶಿವಮೊಗ್ಗದ ಕರ್ನಾಟಕ ಸಂಘ'ದಿಂದ 'ಧರ್ಮ ಪರೀಕ್ಷೆ'ಗೆ ಪಿ ಲಂಕೇಶ್ ಪ್ರಶಸ್ತಿ ಪ್ರಶಸ್ತಿ
 • ಕನ್ನಡ ಸಾಹಿತ್ಯ ಪರಿಷತ್ತಿನಿಂದ ಧರ್ಮಪರೀಕ್ಷೆಗೆ ಹಾ ಮಾ ನಾಯಕ ಪ್ರಶಸ್ತಿ
 • ಮುಂಬಯಿ ಕರ್ನಾಟಕ ಸಂಘದಿಂದ ೨೦೧೦ರ ಸುನೀತಿ ಶೆಟ್ಟಿ ಪ್ರಶಸ್ತಿ
 • ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ೨೦೧೪
 • ೨೦೧೩ನೆ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ[೧]

'ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ[ಬದಲಾಯಿಸಿ]

`ಕತ್ತಿಯಂಚಿನದಾರಿ; (೨೦೦೬)ರ ಕೃತಿಯು ೨೦೧೦ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಉಲ್ಲೇಖ[ಬದಲಾಯಿಸಿ]

 1. ಪ್ರಜಾವಾಣಿ ವರದಿ https://web.archive.org/web/20151020094502/http://www.prajavani.net/article/5-ಮಂದಿಗೆ-ಸಾಹಿತ್ಯ-ಅಕಾಡೆಮಿ-ಗೌರವ-ಪ್ರಶಸ್ತಿ