ಯ.ನಾ.ಹೊಸಕೋಟೆ
ಯ.ನಾ.ಹೊಸಕೋಟೆ
ವೈ.ಎನ್.ಹೊಸಕೋಟೆ ಯೆಲ್ಲಪ್ಪ ನಾಯಕನ ಹೊಸಕೋಟೆ | |
---|---|
village | |
Population (2001) | |
• Total | ೧೨,೭೭೯ |
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಆಂಧ್ರಪ್ರದೇಶದ ಕುಂದುರ್ಪಿ ಮಂಡಲಂ ಗೆ ಹೊಂದಿಕೊಂಡಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಹೋಬಳಿ ಕೇಂದ್ರವೇ ಯ.ನಾ.ಹೊಸಕೋಟೆ.[೧]ಪಾವಗಡ ಪಟ್ಟಣದಿಂದ ವಾಯುವ್ಯ ದಿಕ್ಕಿನಲ್ಲಿ ೩೦ ಕಿ.ಮೀಟರ್ ದೂರದಲ್ಲಿರುವ ಈ ಗ್ರಾಮವು ನಿಡಗಲ್ ಮತ್ತು ಕುಂದುರ್ಪಿ ಸಂಸ್ಥಾನಗಳಲ್ಲಿ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಯಲ್ಲಪ್ಪ ನಾಯಕ ಎಂಬ ಪಾಳೆಗಾರನು ಗಿರಿಯ ಮೇಲೆ ಪಾಳೆಪಟ್ಟು ಕಟ್ಟಿ ರಾಜ್ಯಭಾರ ಮಾಡಿದ್ದರಿಂದ ಗ್ರಾಮಕ್ಕೆ ಯಲ್ಲಪ್ಪ ನಾಯಕನ ಹೊಸಕೋಟೆ, ಯ.ನಾ.ಹೊಸಕೋಟೆ , ವೈ.ಎನ್.ಹೊಸಕೋಟೆ ಎಂದು ಹೆಸರು ಬಂದಿದೆ. ಯಲ್ಲಪ್ಪನಾಯಕನ ಹೊಸಕೋಟೆಯು ಬಯಲು ಸೀಮೆಯ ಬೆಟ್ಟಗುಡ್ಡಗಳ ನೆರಳಿನಲ್ಲಿ ಹುಲುಸಾಗಿ ಮೈದಳೆದಿದ ನೆಲೆ. ಹಚ್ಚ ಹಸಿರು ದಟ್ಟ ಸಸ್ಯಸಂಕುಲದ ಅವನತಿಯಿಂದಾಗಿ ಸದಾ ಬರಗಾಲದ ಛಾಯೆ, ಕೊರೆದಲ್ಲೆಲ್ಲಾ ಬಂಡೆಗಳ ಬೂದಿ ಎದ್ದರೂ ಓಯಸ್ಸೀಸ್ ನಂತೆ ದೊರೆಯುವ ನೀರೆಂಬ ಜೀವ ಹನಿ, ಬಿಸಿಲಿನ ಝಳ, ಬೆಟ್ಟದ ಶಾಖ, ಅತಿಥಿಯಾಗಿರುವ ಮಳೆರಾಯ, ವರ್ಷದ ಕೊನೆಯ ಚಳಿ, ಬಾಯಾರಿ ಬಿರುಕು ಬಿಟ್ಟಿರುವ ಕೆರೆ-ಕಟ್ಟೆ-ಕುಂಟೆಗಳು, ಅಗೆದಲ್ಲೆಲ್ಲಾ ದೊರೆಯುವ ಪಳಯುಳಿಕೆಯ ಕುರುಹುಗಳು, ಕೋಟೆ-ಕೊತ್ತಲುಗಳನ್ನು ಕಟ್ಟಿ ಆಳ್ವಿಕೆ ಮಾಡಿದ ಬೇಡ ಪಾಳೇಗಾರರ ಇತಿಹಾಸದ ನೆನಪುಗಳು, ತುಸು ಕಾಲ ದುಡಿದು ಬಹು ಕಾಲ ವಿರಮಿಸುವ ಸಾಲಗಾರ ರೈತ, ರೇಷ್ಮೆಸೀರೆ ನೇಯ್ದರೂ ನವಿರಾಗದ ನೇಕಾರರ ಜೀವನ, ರತ್ನಗಂಬಳಿ ಹೋಗಿ ಕರಿಕಂಬಳಿಯಲ್ಲೇ ನಿಂತಿರುವ ಕುರುಬರ ಶ್ರಮ, ಅರಳುವಲ್ಲೇ ಮುದುಡುವ ಚಿನಿವಾರ ಚಮ್ಮಾರ ಬಡಗಿ ಕಮ್ಮಾರರ ಕಲೆ, ಸರ್ವೇಜನ ಸುಖಿನೋಭವತು ಎಂದು ಸಾರುವ ಗುಡಿ-ಚರ್ಚು -ಮಸೀದಿಗಳು ನೊಂದು ಬೆಂದ ಜೀವನಕ್ಕೆ ಸ್ಫೂರ್ತಿ ತುಂಬುವ ಶ್ರಮಸಂಸ್ಕೃತಿಯ ಹಬ್ಬ ಹರಿದಿನ ಜಾತ್ರೆ ಉತ್ಸವಗಳು ಪುಟಿದೇಳುವ ಕ್ರೀಡೆ, ಸಂಘಟನೆಯ ಶಕ್ತಿ ಜಾನಪದ ಸೊಗಡು, ಆಧುನಿಕತೆಯ ಮೆರಗು, ಕಾಳಜಿಯುಕ್ತ ಯುವಜನಮನ, ಬೆಳೆಯುತ್ತಿರುವ ಶಿಕ್ಷಣ, ಮಂದಗತಿಯ ವ್ಯಾಪಾರ ಒಟ್ಟಾರೆ ಸಿಹಿ-ಸಹಿಯ ಮಿಲನದ ಜೀವನದ ನೆಲೆ ಇದು.
ಸನ್ನಿವೇಶ : ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೇಂದ್ರದಿಂದ ವಾಯುವ್ಯಕ್ಕೆ ೨೮ ಕಿಲೋಮೀಟರ್ ಅಂತರದಲ್ಲಿ ರಾಜ್ಯದ ಗಡಿಯಲ್ಲಿ ಆಂದ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮವಾದ ಯಲ್ಲಪ್ಪನಾಯಕನ ಹೊಸಕೋಟೆಯು ಸಮುದ್ರಮಟ್ಟದಿಂದ ಸುಮಾರು ೨೩೦೦ ಅಡಿಗಳಷ್ಟು ಎತ್ತರದಲ್ಲಿದೆ. ೧೪.೧೬೦ ಉತ್ತರ ಅಕ್ಷಾಂಶ ಮತ್ತು ೭೮.೧೫೦ ಪೂರ್ವ ರೇಖಾಂಶಗಳ ಸನ್ನಿವೇಶದಲ್ಲಿ ಸುಮಾರು ೪-೫ ಚದುರ ಕಿ.ಮೀ ವಿಸ್ತ್ರೀರ್ಣದಲ್ಲಿ ಹರಡಿಕೊಂಡಿರುವ ಗ್ರಾಮಕ್ಕೆ ಉತ್ತರದಲ್ಲಿ ಸಿದ್ದಲುಬೆಟ್ಟ, ದಕ್ಷಿಣದಲ್ಲಿ ಚಿನ್ನಪಾಲಮ್ಮನ ಬೆಟ್ಟ, ಪೂರ್ವಕ್ಕೆ ಬಜ್ಜಪ್ಪನಬಂಡೆ ಮತ್ತು ಪಶ್ಚಿಮಕ್ಕೆ ಕೋತಿಗುಡ್ಡ ಮತ್ತು ದೊಡ್ಡಬಂಡೆಗಳು ಸ್ವಾಭಾವಿಕ ಎಲ್ಲೆಗಳಂತಿದ್ದರೂ ಅವುಗಳನ್ನು ಮೀರಿ ಬೆಳೆಯುತ್ತಿದೆ.
ಪ್ರಾಗ್ ಇತಿಹಾಸ : ಇದು ಶಿಲಾಯುಗದ ಮಾನವ ವಾಸವಿರುವ ಪ್ರಾಚೀನ ಸ್ಥಳಗಳಲ್ಲಿ ಒಂದಾಗಿದ್ದು, ಗ್ರಾಮದ ಸುತ್ತಮುತ್ತಲಿನ ಹಲವು ಕಡೆ ಇದಕ್ಕೆ ಸಂಬಂದಿಸಿದ ಅನೇಕ ಪುರಾವೆಗಳು ದೊರೆಯುತ್ತಿವೆ. ದೊಡ್ಡಬೆಟ್ಟದ (ಸಿದ್ದಲುಬೆಟ್ಟ) ಹಿಂಭಾಗದಲ್ಲಿ ಇಂದಿಗೂ ಹಲವು ಕಡೆ ಸೂಕ್ಷ್ಮ ಶಿಲಾಯುಗದ ಜನ ಬಳಸುತ್ತಿದ್ದ ಕಲ್ಲಿನ ಆಯುಧಗಳು ಲಭ್ಯವಾಗುತ್ತಿವೆ. ಈ ಹಿಂದೆ ಬೃಹತ್ ಶಿಲಾಯುಗದ ಸಮಾಧಿಗಳು ಕಂಡುಬಂದಿದ್ದು, ಹಲವು ಕಾರಣಗಳಿಂದಾಗಿ ನಾಶಗೊಂಡಿವೆ. ಬೆಟ್ಟದ ಗುಹೆ ಮತ್ತು ಕಲ್ಲುಬಂಡೆಗಳ ಮೇಲೆ ನವಶಿಲಾಯುಗಕ್ಕೆ ಸಂಬಂದಿಸಿದ ಚಿಹ್ನೆ ಅಥವಾ ರೇಖಾ ಚಿತ್ರಗಳು ಕಂಡುಬರುತ್ತವೆ. ಈ ಕಾಲಕ್ಕೆ ಸಂಬಂಧಿಸಿದ ನುಣುಪಾದ ಮತ್ತು ಚೂಪಾದ ಕಲ್ಲಿನ ಆಯುಧಗಳು ಹೊಲಗದ್ದೆಗಳಲ್ಲಿ ದೊರೆಯುತ್ತಿದ್ದು ಜನತೆ ಅವುಗಳನ್ನು ಕೆಲವು ಕಡೆ ಇಟ್ಟು ದೇವರೆಂದು ನಂಬಿ ಪೂಜಿಸುತ್ತಿರುವುದುಂಟು. ಈ ಗ್ರಾಮವು ಶಿಲಾಯುಗದ ಇತಿಹಾಸ ಹೊಂದಿದೆ ಎಂಬುದರ ವಿಚಾರವಾಗಿ ಈಗಾಗಲೇ ಕರ್ನಾಟಕ ಇತಿಹಾಸದಲ್ಲಿ ಅನೇಕ ಕಡೆ ಉಲ್ಲೇಖವಾಗಿದೆ ಜೊತೆಗೆ ಈ ಪ್ರದೇಶದ ಸುತ್ತಮುತ್ತಲಿನ ಸ್ಥಳಗಳಾದ ಬೂದಿಬೆಟ್ಟ, ಕಾಕಾದ್ರಿಪರ್ವತಗಳಂತಹ ಅನೇಕ ಸ್ಥಳಗಳಲ್ಲಿ ಶಿಲಾಯುಗದ ಮಾನವ ವಾಸವಾಗಿದ್ದ ಎಂಬುದಕ್ಕೆ ಪುರಾವೆಗಳಿವೆ.