ವಿಷಯಕ್ಕೆ ಹೋಗು

ಪಾವಗಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾವಗಡ
ಪಾವಗಡ
ನಗರ
Population
 (೨೦೦೧)
 • Total೨೮,೦೩೬

ಪಾವಗಡ

[ಬದಲಾಯಿಸಿ]

ಪಾವಗಡ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಪಾವಗಡ ತಾಲ್ಲೂಕು ಕೇಂದ್ರವಾಗಿದೆ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಕೊಂಡಿದ್ದರೂ, ರಾಜಕೀಯವಾಗಿ ತುಮಕೂರು ಜಿಲ್ಲ್ಗೆಗೆ ಸೇರುತ್ತದೆ. ಮಳೆಯ ಅಭಾವದಿಂದ ಇಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆ ಇದೆ. ಇಲ್ಲಿನ ಬಹು ಮುಖ್ಯ ಬೆಳೆ ನೆಲಗಡಲೆಯಾಗಿದ್ದು, ಮಳೆಯ ಮೇಲೆ ಅವಲಂಬಿತವಾಗಿದೆ. ಪಟ್ಟಣವು ಬೆಟ್ಟದ ತಪ್ಪಲಲ್ಲಿದ್ದು, ಸುತ್ತಲೂ ಬೆಟ್ಟ ಪ್ರದೇಶಗಳಿಂದ ಕೂಡಿದೆ. ಹಿಂದೆ ಈ ಪ್ರದೇಶವೆಲ್ಲಾ ಗೋಂಡಾರಣ್ಯಕ್ಕೆ ಸೇರಿತ್ತೆಂದು, ಪುರಾಣದಲ್ಲಿ ಉಲ್ಲೇಖನವಿದೆ. ಪಾವಗಡ ಈ ಹೆಸರು ಬರಲು ಇಲ್ಲಿನ ಬೆಟ್ಟವು ಹಾವಿನ ಆಕಾರದಲ್ಲಿ ಇರುವುದೇ ಕಾರಣವೆಂದು ತಿಳಿದು ಬರುತ್ತದೆ

. ಹಿಂದೆ ಇದಕ್ಕೆ 'ಪಾಮುಕೊಂಡ' ಎಂದು ಹೆಸರಿದ್ದು ನಂತರ ಪಾವುಕೊಂಡ>ಪಾವುಕೊಡವಾಗಿ ಈಗ ಪಾವಗಡ ಆಗಿದೆ. ನಗರದಲ್ಲಿ ಶನಿ ಮಹಾತ್ಮ ದೇವರ ದೇವಸ್ಥಾನವಿದ್ದು ಸುತ್ತಮುತ್ತಲೂ ಬಹಳ ಪ್ರಸಿದ್ಧಿ ಪಡೆದಿದೆ.

ಪಾವಗಡದ ಬಹುಮುಖ್ಯ ಮೂಲಭೂತ ಸಮಸ್ಯೆಗಳು

[ಬದಲಾಯಿಸಿ]

ನೀರಿಗಾಗಿ ಪರಿಪಾಟಲು ಹೌದು ಈ ತಾಲೂಕಿನ ಉದ್ದಗಲಕ್ಕೂ ಸಿಗೋದು ಉಪ್ಪು ನೀರು. ಅದು ಫ್ಲೋರೈಡ್ ಮಿಶ್ರಿತ ನೀರು. ನೀರಿಗಾಗಿ ಪರಿತಪಿಸುವ ಇವರು ಇಲ್ಲಿ ಸಿಗುವ ಫ್ಲೋರೈಡ್ ನೀರನ್ನೇ ಕುಡಿದು ಬದುಕು ದೂಡುತ್ತಿದ್ದಾರೆ. ಹಾಗಾಗಿ ಇಲ್ಲಿನ ಬಹುಪಾಲು ಜನ ಫ್ಲೋರೈಡ್​ ಪೀಡಿತರಾಗಿದ್ದಾರೆ. ಪಾವಗಡ ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಫ್ಲೋರೈಡ್‌ಯುಕ್ತ ನೀರು ಸೇವಿಸಿ ಹಲವರು ವಿವಿಧ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇಲ್ಲಿ ಯಾವುದೇ ನದಿ ಮತ್ತು ಕಾಲುವೆಯ ಸಂಪರ್ಕವಿಲ್ಲ. ಹಾಗಾಗಿ ಭೂಮಿಯನ್ನು ಕೊರೆದು ಕೊರೆದು ಬೋರ್ ಹಾಕಿಸಿಕೊಳ್ಳಲಾಗುತ್ತಿದೆ. ಇದರಿಂದ ಅಂತರ್ಜಲದ ಮಟ್ಟದಲ್ಲಿ ಕುಸಿತ ಕಂಡು ಬಂದು, ಅದು ಗಿಡಮರಗಳ ಉಳಿವಿಗೂ ಕುತ್ತಾಗಿದೆ. ಬಿರುಬಿಸಿಲಿಗೆ ಇದು ಹೆಸರಾಗಿದ್ದು, ರೈತರ ಬೆಳೆ ಮಳೆಯನ್ನೇ ಅವಲಂಬಿಸಿದೆ. ಕುಡಿಯುವ ನೀರಿಗಾಗಿ ಆಗ್ರಹಿಸಿ ಫೆಬ್ರವರಿ 8, 2012ರಂದು ಪಾವಗಡದಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲಾಗಿತ್ತು. ಆದ್ರೆ ಪಾದಯಾತ್ರೆಗೆ ಸಿಕ್ಕಿದ್ದು ಬರಿ ಭರವಸೆ ಮಾತ್ರ.

ರಾಜಕೀಯವಾಗಿಯೂ ಇದು ಬಹಳ ಹಿಂದೂಳಿದಿದ್ದು, ಯಾವುದೇ ರಾಜಕೀಯ ನಾಯಕರೂ ಈ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಲೇ ಇಲ್ಲ. 2008ರಲ್ಲಿ ಈ ತಾಲೂಕಿನ ಶಾಸಕ ವೆಂಕಟರಮಣಪ್ಪನವರು ಮೊದಲ ಬಾರಿಗೆ ಮಂತ್ರಿ ಪದವಿ ಅಲಂಕರಿಸಿದ್ದರು. ಆದ್ರೆ ಇವರೆಗೂ ಈ ತಾಲೂಕಿನ ಜನರಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಮಾತ್ರ ಸಿಗಲೇ ಇಲ್ಲ. ಐತಿಹಾಸಿಕ ಹಿನ್ನೆಲೆ ಹೊಂದಿರೋ ಈ ತಾಲೂಕಿಗೆ ಯಾವ ಮುಖ್ಯಮಂತ್ರಿಯೂ ಭೇಟಿ ಕೊಡುವುದಿಲ್ಲ. ಯಾಕೆಂದರೆ ಇಲ್ಲಿಗೆ ಬಂದರೆ ಶನಿ ವಕ್ಕರಿಸುತ್ತದೆ ಮತ್ತು ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಅನ್ನೋದು ಅವರ ನಂಬಿಕೆ. ಈ ಮೊದಲು ಬಂಗಾರಪ್ಪ ಮತ್ತು ಕುಮಾರಸ್ವಾಮಿ ಭೇಟಿ ಕೊಟ್ಟಿದ್ದು ಬಿಟ್ಟರೇ, ಬೇರೆ ಯಾವ ಮುಖ್ಯಮಂತ್ರಿಯೂ ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಹಾಗಾಗಿ ಈ ತಾಲೂಕು ರಿಮೋಟ್​ ಆಗೇ ಉಳಿದಿದೆ.

ಪ್ರವಾಸಿ ಸ್ಥಳಗಳು

[ಬದಲಾಯಿಸಿ]

ಶ್ರೀ ಶನಿ ಮಹಾತ್ಮ ದೇವಸ್ಥಾನ

[ಬದಲಾಯಿಸಿ]

ಪಾವಗಡದ ಶ್ರೀ ಶನೇಶ್ವರ ದೇವಸ್ಥಾನವು ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ. ಶ್ರೀ ಶನಿದೇವರು ವಿಸ್ವಂತನೆಂಬ ಸೂರ್ಯನಿಂದ ಛಾಯಾದೇವಿಯಲ್ಲಿ ಜನಿಸಿದವ. ನವಗ್ರಹ ಸಮುದಾಯಗಳಲ್ಲಿ ಅತ್ಯಂತ ಪ್ರಭಾವಿತನು, ಅತಿ ಬೇಗ ಪೂಜೆಗೆ ಫಲಿಸುವವನು ಆಗಿದ್ದಾನೆ. ಶನಿದೇವನೆಂದರೆ ದೇವಾನುದೇವತೆಗಳಿಗೂ ಭಯಭಕ್ತಿ. ಯಾರನ್ನೂ ಬಿಡದೇ ವರ್ಷವಾರು ಕಾಡಿದವ. ಆದ್ದರಿಂದ ಜನತೆಗೆ ಅತ್ಯಂತ ಭಯ ಭಕ್ತಿಗಳಿಂದ ಹರಕೆ, ಧ್ಯಾನ, ಮುಡಿ ಸಲ್ಲಿಸಿ ಪೂಜೆ ಸಲ್ಲಿಸುತ್ತಾರೆ.

ಸಹೃದಯ ಭಕ್ತಾದಿಗಳು ಹಾಗೂ ದಾನಿಗಳ ಸಹಾಯದಿಂದ ಈ ಕಾರ್ಯವು ಉತ್ತರೋತ್ತರ ಪ್ರಗತಿಯನ್ನು ಹೊಂದುತ್ತಾ ೧೯೫೫ ರಲ್ಲಿ ದೇವಸ್ಥಾನದ ನಿರ್ಮಾಣವಾಗಿ ಶ್ರೀ ಶನಿಮಹಾತ್ಮನ ವಿಗ್ರಹದ ಪ್ರತಿಷ್ಟಾಪನೆಯಾಯಿತು. ನವಗ್ರಹಗಳ ಪ್ರತಿಷ್ಟಾಪನೆ ಆಯಿತು. ಗಣಪತಿ, ಲಕ್ಷ್ಮಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿಯ ಪುಟ್ಟ ದೇಗುಲಗಳು ದೇವಾಲಯದ ಪ್ರಾಂಗಣದಲ್ಲೇ ನಿರ್ಮಾಣವಾದವು.

ಶ್ರೀ ಶನೈಶ್ವರ ಸ್ವಾಮಿ ದೇವಾಲಯದ ಗೋಪುರದಲ್ಲಿ ನಿರ್ಮಿತವಾಗಿರುವ ಶೈವ ಹಾಗೂ ವೈಷ್ಣವ ಪಂಥದ ಬಹುವರ್ಣ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತದೆ. ದೇವಸ್ಥಾನದ ಹೊರಾಂಗಣದಲ್ಲಿರುವ ವರ್ಣಾಲಂಕೃತ ಶ್ರೀ ಶನೈಶ್ವರ ಸ್ವಾಮಿಯ ಸುಂದರಮೂರ್ತಿ, ಪಂಚಮುಖಿ ಆಂಜನೇಯ, ನಾಟ್ಯ ಗಣಪತಿ, ವೆಂಕಟರಮಣಸ್ವಾಮಿ, ಅನಂತಶಯನ ಮೂರ್ತಿಗಳು, ಚಿತ್ತಾಕರ್ಷಕವಾಗಿದ್ದು, ದೇವಾಲಯದ ಸೌಂದರ್ಯವನ್ನು ನೂರ್ಮಡಿಗೊಳಿಸಿವೆ.

ಪಾವಗಡದ ಕೋಟೆ/ಬೆಟ್ಟ

[ಬದಲಾಯಿಸಿ]

ಪಾವಗಡ ಬೆಟ್ಟವು ಚಾರಣಿಗರಿಗೆ, ಸಾಹಸ ಪ್ರಿಯರಿಗೆ, ಸವಾಲೆಸೆದರೆ: ಇತಿಹಾಸಕಾರರಿಗೆ, ಸಂಶೋಧಕರಿಗೆ ಮೊಗೆದಷ್ಟು ಐತಿಹಾಸಿಕ ವಿಚಾರಗಳನ್ನುಸಾರುವ ಚಿಲುಮೆಯಾಗಿದೆ. ಪಾವಗಡದ ಬೆಟ್ಟಕ್ಕೆ/ಕೋಟೆಗೆ ಹತ್ತು ದಿಡ್ಡಿ ಬಾಗಿಲು ಅಥವಾ ಹೆಬ್ಬಾಗಿಲುಗಳಿವೆ. ಇವುಗಳ ಮೂಲಕ ಬೆಟ್ಟದ ಮೇಲೇರಬಹುದು. ಬೆಟ್ಟವನ್ನೇರಲು ಮೆಟ್ಟಿಲುಗಳ ವ್ಯವಸ್ಥೆ ಸಹ ಇದೆ. ಬೆಟ್ಟದ ತಪ್ಪಲಲ್ಲಿ ಕಮ್ಮಾರ ಮಂಟಪವಿದೆ. ಇಲ್ಲಿ ಆಯುಧ ಯುದ್ದ ಶಸ್ತ್ರಾಸ್ತ್ರಗಳ ತಯಾರಿ ಹಾಗೂ ಹದಗೊಳಿಸುವಿಕೆ ನಡೆಯುತ್ತಿತ್ತೆಂದು ಹೇಳಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕುಲುಮೆಗಳು ಇಲ್ಲಿ ಇದ್ದವೆಂದು ಹಿರಿಯರು ಹೇಳುತ್ತಾರೆ.

ಆಂಜನೇಯಸ್ವಾಮಿ

[ಬದಲಾಯಿಸಿ]

ಇಲ್ಲಿಂದ ಮುಂದೆ ಹೋದರೆ ಆಂಜನೇಯಸ್ವಾಮಿ ಮೂರ್ತಿ ಸಿಗುತ್ತದೆ. ಈ ದೇವರು ಅತಿ ಶಕ್ತಿವಂತರು ಅಂತ ನಂಬಲಾಗಿದೆ. ಬೃಹದಾಕಾರದ ಈ ಮೂರ್ತಿಯು ಹೆಬ್ಬಂಡೆಯಲ್ಲಿ ಕೆತ್ತಲ್ಪಟ್ಟಿದೆ. ಈ ವಿಗ್ರಹದ ಕೆಳಭಾಗದಲ್ಲಿ ಅತಿ ಚಿಕ್ಕದಾದ ವಾನರ(ಕಪಿ) ಏನನ್ನೋ ಕೈಯಲ್ಲಿಡಿದು ಕಚ್ಚಿ ತಿನ್ನುತ್ತಿರುವಂತೆ ಕೆತ್ತಲ್ಪಟ್ಟಿದೆ. ಇಲ್ಲಿಂದ ಮುಂದೆ ಹೋದರೆ ಕೋನೇರು (ಕಲ್ಯಾಣಿ) ದೊಣೆ ಸಿಗುತ್ತದೆ. ಇದರ ಸನಿಹದಲ್ಲೇ ಕೋನೇರು ಮಂಟಪವಿದೆ. ಹತ್ತಿರದಲ್ಲೇ ತುಪ್ಪದ ಕೊಳವಿದೆ. ಇದರಲ್ಲಿ ತುಪ್ಪವನ್ನು ಸಂಗ್ರಹಿಸಿಡುತ್ತಿದ್ದರು. ಈ ಬೆಟ್ಟದಲ್ಲಿ ಇರೋ ಕೋಟೆಗಳು ಬೆಟ್ಟವನ್ನು ಮತ್ತಷ್ಟು ಆಕರ್ಷಿಸುತ್ತವೆ. ಐತಿಹಾಸಿಕ ಹಿನ್ನೆಲೆ ಹೊಂದಿರೋ ಈ ಬೆಟ್ಟದಲ್ಲಿ ಪಾಳೇಗಾರರ ಆಳ್ವಿಕೆಯಲ್ಲಿ ಬೆಟ್ಟದಲ್ಲೇ ಈಜುಕೋಳಗಳು, ಮಸೀದಿ, ರಾಜನ ಮಗಳ ಗೋರಿ, ಭೀಮನ ದೊಣಿ(ಚಿಲುಮೆ) ಇತ್ಯಾದಿ ಚಾರಣಿಗಾರ ಗಮನ ಸೆಳೆಯುತ್ತವೆ. ಹಬ್ಬ-ಹರಿದಿನಗಳಲ್ಲಿ ಇಲ್ಲಿನ ಜನ ಬೆಟ್ಟ ಹತ್ತಿ ಸಂಭ್ರಮ ಪಡುವುದು ಒಂದು ವಿಶೇಷ. ಇಲ್ಲಿನ ಮತ್ತೊಂದು ಬಹುಮುಖ್ಯ ದೇಗುಲ ಅಕ್ಕಮ್ಮನ ದೇವಸ್ಥಾನ. ಈ ದೇವರಿಗೆ ನಾಗಪ್ಪ ಪೂಜೆ ಮಾಡುತ್ತಿದರು. ಪಾವಗಡ ತಾಲ್ಲೂಕು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು ೧೭೦ ಕಿ.ಮೀ.ದೂರವಿದ್ದು, ನಗರದಿಂದ ನೇರ ಬಸ್ ಸಂಪರ್ಕ ಹೊಂದಿದೆ.

ನಾಗಲಮಡಿಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

[ಬದಲಾಯಿಸಿ]

ಪಾವಗಡ ತಾಲ್ಲೂಕಿನ ಮತ್ತೊಂದು ಸುಪ್ರಸಿದ್ದವಾದ ಪವಿತ್ರ ಪುಣ್ಯಕ್ಷೇತ್ರ ನಾಗಲಮಡಿಕೆ. ಇಲ್ಲಿರುವ ಸುಬ್ರಮಣ್ಯ ದೇವಾಲಯ ತನ್ನದೇ ಆದ ವಿಶೇಷತೆ ಹಾಗೂ ಇತಿಹಾಸದಿಂದ ಅಪಾರ ಭಕ್ತ ಸಮೂಹವನ್ನು ದಕ್ಷಿಣ ಭಾರತಾದ್ಯಂತ ಹೊಂದಿದೆ. ಈ ದೇವಾಲಯದ ಸನಿಹದಲ್ಲೇ ಉತ್ತರ ಪುನಾಕಿನಿ ನದಿ ಹರಿಯುತ್ತದೆ. ಅಲ್ಲಿ ಹರಿಯುವ ಉತ್ತರ ಪಿನಾಕಿನಿ ನದಿ ಪ್ರಸಿದ್ಧಿ ಪಡೆದಿವೆ. ತಿಪ್ಪಯ್ಯನದುರ್ಗ ಬೆಟ್ಟದ ತಪ್ಪಲಲ್ಲಿದ್ದು, ಸುತ್ತಲೂ ಬೆಟ್ಟ ಪ್ರದೇಶಗಳಿಂದ ಕೂಡಿದೆ. ಈ ಪ್ರದೇಶಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಹಿಂದೆ ಇದಕ್ಕೆ 'ಪೂಜ್ಯಾರನ ಹಳ್ಳಿ' ಎಂದು ಹೆಸರಿತ್ತು. ಮತ್ತೊಂದು ಐತಿಹಾಸಿಕ ಹಿನ್ನೆಲೆ ಪ್ರಕಾರ, ಗುಟ್ಟಕಿಂದಗೊಲ್ಲಪಲ್ಲಿ (ಕನ್ನಡದಲ್ಲಿ ಗುಡ್ಡದ ಕೆಳಗಿನ ಗೋಲ್ಲರಹಳ್ಳಿ) ೧೮೦೦-೧೯೯೦ ರ ತನಕ ಮನೆ ಕಟ್ಟಿದ ಕುರುಹು ಕಂಡು ಬರುತ್ತಿತ್ತು. ಒಂದು ಕಾಲದಲ್ಲಿ ತಿಪ್ಪೇರುದ್ರಸ್ವಾಮಿ ಇಲ್ಲಿ ವಾಸ ಮಾಡಿದ್ದರು. ಪಾಳೆಗಾರ ತಿಪ್ಪನಾಯಕ ಆಳುತಿದ್ದರು.

ಇಲ್ಲಿ ಪ್ರತಿವರ್ಷವು ರಥೋತ್ಸವ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಡಿಸೆಂಬರ್ ಜನವರಿ ಮಾಹೆಯಲ್ಲಿ ನಡೆಯುತ್ತವೆ. ಕರ್ನಾಟಕ ಆಂದ್ರಪ್ರದೇಶ ತಮಿಳುನಾಡಿನ ವಿವಿಧ ಭಾಗಗಳ ಭಕ್ತರನ್ನು ಹೊಂದಿರುವ ಈ ದೇವಾಲಯವು ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಮಂಗಳ ವನ್ನುಂಟು ಮಾಡುವ ಪುಣ್ಯಸ್ಥಳವಾಗಿದೆ. ಇಲ್ಲಿ ಭಕ್ತಾದಿಗಳಿಗೆ ನಾಗಪೂಜೆ, ನಾಗಪ್ರತಿಷ್ಠೆ ಮುಂತಾದ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಈ ದೇವಾಲಯವು ಪಾವಗಡದಿಂದ ೧೮ ಕಿ.ಮೀ ದೂರದಲ್ಲಿದೆ. ನಾಗಲಮಡಿಕೆ ಜಾತ್ರಾ ಸಂದರ್ಭದಲ್ಲಿ ಹೆಂಜಲು ಎಲೆಯನ್ನು ಹೊತ್ತ ಭಕ್ತಾದಿಗಳು ಪಿನಾದಿನಿ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯಗಳು ಇಂದಿಗೂ ಹಾಗೇ ಇವೆ.

ಕೊನೆಯ ಮಾತು

[ಬದಲಾಯಿಸಿ]

ಪಾವಗಡ ಪಟ್ಟಣ ಚಿಕ್ಕದಾದರೂ ಚೊಕ್ಕವಾಗಿದೆ. ನಕ್ಸಲ್ ಪೀಡಿತ ಮತ್ತು ಬರಪೀಡಿತ ಪ್ರದೇಶ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ಇಲ್ಲಿ ನಕ್ಸಲರ ಹಾವಳಿ ಅಷ್ಟಾಗಿ ಕಾಣಿಸುವುದಿಲ್ಲ. ಆದರೆ ಬರ ಪೀಡಿತ ಅನ್ನೋದಂತೂ ಸರ್ವ ಸತ್ಯ. ಈ ತಾಲೂಕಿನ ಜನತೆ ಈಗ ಬದಲಾಗುತ್ತಿದ್ದಾರೆ. ಮೊದಲು ಕೃಷಿಯನ್ನೆ ಬೆನ್ನೆಲುಬಾಗಿ ನಂಬಿಕೊಂಡಿದ್ದವರು. ಈಗ ಬಿಸಿನೆಸ್​ಗೆ ಇಳಿದುಬಿಟ್ಟಿದ್ದಾರೆ. ಬೆಟ್ಟದ ಬುಡದಲ್ಲಿ ಹರಡಿ ಕೊಂಡಿರೋ ಈ ತಾಲೂಕಿಗೆ ಸಂಪರ್ಕ ಮಾಧ್ಯಮದ ಕೊರತೆಯೇನು ಇಲ್ಲ. ರಾಜಧಾನಿ ಬೆಂಗಳೂರಿನಿಂದ ಪ್ರತಿ ಕಾಲು ಗಂಟೆಗೊಂದು ಕೆಎಸ್​ಆರ್​ಟಿಸಿ ಬಸ್ ಸೌಲಭ್ಯವಿದೆ. ಮಳೆ ಬೆಳೆ ಇಲ್ಲವಾದ್ರೂ, ಜನರ ಮಾತಿನಲ್ಲಿನ ಗತ್ತು. ಆಂಧ್ರ-ಕನ್ನಡದ ಬೆರಗು ಇಲ್ಲಿ ಇದೆ. ಬಡ ಪೀಡಿತ ಪ್ರದೇಶವಾದ್ರೂ ಇಲ್ಲಿನ ೪೦ ರಷ್ಟು ವಿದ್ಯಾರ್ಥಿಗಳು ತುಮಕೂರು-ಬೆಂಗಳೂರು ನಗರಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳಲ್ಲಿದ್ದಾರೆ. ಹಾಗಾಗಿ ಪಾವಗಡ ಪ್ರತಿಭಾವಂತರ ತಾಣವಾಗಿದೆ. ಆದರೆ ದುರದೃಷ್ಟವೆಂದರೆ ಇದರ ಅಭಿವೃದ್ಧಿಗೆ ನೀರು ಮತ್ತು ರೈಲು ಸಂಪರ್ಕ ಬೇಕಾಗಿದೆ.

"https://kn.wikipedia.org/w/index.php?title=ಪಾವಗಡ&oldid=742232" ಇಂದ ಪಡೆಯಲ್ಪಟ್ಟಿದೆ