ಯಾಣ
ಯಾಣ
ಯಾಣ , ಭಾರತ | |
---|---|
ಸಿರ್ಸಿ ಮತ್ತು ಕುಮಟಾ ಹತ್ತಿರದ ಪಟ್ಟಣಗಳು |
ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರಕನ್ನಡ ಜಿಲ್ಲೆಗೆ ಸೇರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಕುಮಟಾದಿಂದ ೩೧ ಕಿಲೋಮೀಟರ್ ದೂರದಲ್ಲಿದೆ. ಕಾರವಾರದಿಂದ ೯೦ ಕಿಲೋಮೀಟರ್ ದೂರದಲ್ಲಿದೆ. ಅಂಕೋಲಾದಿಂದ ೫೬ ಕಿಲೋಮೀಟರ್ ಇದೆ. ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಭೈರವೇಶ್ವರ ಶಿಖರ ಮತ್ತು ಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀಟರ್(೩೯೦ಅಡಿ) ಎತ್ತರವಿದೆ. ಮೋಹಿನಿ ಶಿಖರವು ೯೦ ಮೀಟರ್ (೩೦೦ಅಡಿ) ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ್ ಎತ್ತರವಾಗಿದೆ. ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ. ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವುದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಯ ಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.
ಭೌಗೋಳಿಕ
[ಬದಲಾಯಿಸಿ]ಯಾಣದ ಈ ಎರಡು ಶಿಖರಗಳು ಏಕಶಿಲೆಯಿಂದ ಉತ್ಪತ್ತಿಯಾಗಿವೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶವು ಹಳ್ಳ, ದಿಣ್ಣೆಗಳಿಂದ ಮತ್ತು ದಟ್ಟವಾದ ಅರಣ್ಯಗಳಿಂದ ಆವರಿಸಿಕೊಂಡಿದೆ. ಈ ಪ್ರದೇಶ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಮೊದಲನೆ ನಿಖರವಾದ ಭೈರವೇಶ್ವರ ಶಿಖರವು ೩ ಮೀಟರ್ (೯.೮ft) ತಳದಿಂದ ಇದ್ದು ಗುಹೆಯಿಂದ ವ್ಯಾಪಿಸಿಕೊಂಡಿದೆ. ಈ ಗುಹೆಯಲ್ಲಿ ಚಂಡಿಕಾ ದೇವಿಯ ಕಂಚಿನ ಮೂರ್ತಿ ಇದೆ. ಈ ಶಿಖರದ ಮತ್ತೂಂದು ತುದಿಯಲ್ಲಿ ಚಂಡಿಹೊಳೆ ಹರಿಯುತ್ತದೆ. ಈ ನದೀ ಮುಂದೆ ಉಪ್ಪಿನಪಟ್ಟಣ ಎಂಬ ಹಳ್ಳಿಯಲ್ಲಿ ಅಘನಾಶಿನಿ ನದಿಯನ್ನು ಸಂಧಿಸುತ್ತದೆ. ಈ ಸಂಗಮವನ್ನು ಇಲ್ಲಿನ ಸ್ಥಳೀಯರು ಗಂಗೋದ್ಬವ ಎಂದು ಕರೆಯುತ್ತಾರೆ. ಇಲ್ಲಿಂದ ಸರಿಯಾಗಿ ಸುಮಾರು ೧೨ ಕಿಲೋಮೀಟರ್ ದೂರದಲ್ಲಿ ನೈಸರ್ಗಿಕವಾಗಿ ರಚಿತವಾಗಿರುವ ವಿಭೂತಿ ಪಾಲ್ಸ್ ಜಲಪಾತ ಇದೆ. ಈ ಜಲಪಾತವು ೧೫೦ ಅಡಿ ಎತ್ತರ ಇದೆ.
ಇತಿಹಾಸ
[ಬದಲಾಯಿಸಿ]ಬ್ರಿಟಿಷ್ ಸರಕಾರದ ಈಸ್ಟ್ ಇಂಡಿಯಾ ಕಂಪನಿಯ ಅಧಿಕೃತ ಅಧಿಕಾರಿ ಫ್ರಾನ್ಸಿಸ್ ಬುಚಮನ್ ಹ್ಯಾಮಿಲ್ಟನ್ ೧೮೦೧ರಲ್ಲಿ ಈ ಜಾಗವನ್ನು ಸಂಪೂರ್ಣವಾಗಿ ಸಮೀಕ್ಷೆ ನಡೆಸಿದ. ಅವನ ವರದಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೧೦ಸಾವಿರ. ೨೦ನೇ ಶತಮಾನದ ಆರಂಭದಲ್ಲಿ ಇಲ್ಲಿ ಪ್ರಸಿದ್ಧ ಕನ್ನಡ ಚಲನಚಿತ್ರ ನಮ್ಮೂರಮಂದಾರಹೂವೇ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ.
ಮೂಲಕಥೆ
[ಬದಲಾಯಿಸಿ]ಹಿಂದೂ ಧರ್ಮದ ಪುರಾಣದ ಪ್ರಕಾರ ಈ ಸ್ಥಳವು ರಾಕ್ಷಸ ಭಸ್ಮಾಸುರನ ಅಸ್ತಿತ್ವವನ್ನು ಕೊನೆಗಾಣಿಸಿದ ಸ್ಥಳ. ಭಸ್ಮಾಸುರನು ಶಿವನಿಂದ(ಈಶ್ವರ) ಒಂದು ಅಪರೂಪವಾದ ವರವನ್ನು ಪಡೆಯುತ್ತಾನೆ. ಆ ವರವೇನೆಂದರೆ ತಾನು(ಭಸ್ಮಾಸುರ) ಯಾರ ತಲೆಯ ಮೇಲೆ ಕೈ ಇಡುವೆನೋ ಅವರು ಸುಟ್ಟು ಭಸ್ಮವಾಗಬೇಕು. ಭಸ್ಮಾಸುರನು ತನಗೆ ದೂರೆತ ಈ ವರದ ಪರೀಕ್ಷೆ ನಡೆಸಲು ಸ್ವತಹ ಶಿವನ ತಲೆಯ ಮೇಲೆಯೆ ಕೈ ಇಡಲು ಮುಂದಾಗುತ್ತಾನೆ, ಇದನ್ನರಿತ ಪರಶಿವ ಭಸ್ಮಾಸುರನಿಂದ ತಪ್ಪಿಸಿಕೊಂಡು ಓಡಿಹೋಗುತ್ತಾನೆ. ಇದರೊಂದಿಗೆ ಭಸ್ಮಾಸುರನು ಶಿವನನ್ನು ಬಿಡದೆ ಹಿಂಬಾಲಿಸುತ್ತಾನೆ. ಭಸ್ಮಾಸುರನಿಂದ ತಪ್ಪಿಸಿಕೊಂಡ ಶಿವ ನೇರವಾಗಿ ವಿಷ್ಣುವನ್ನು ಭೇಟಿಯಾಗುತ್ತಾನೆ. ಭೇಟಿಯಾಗಿ ನಡೆದ ವಿಷಯ ತಿಳಿಸಿ ವಿಷ್ಣುವಿನ ಸಹಾಯ ಬೇಡುತ್ತಾನೆ. ವಿಷ್ಣುವು ಸಹಾಯ ಮಾಡಲು ಒಪ್ಪಿ ಸುಂದರ ಕನ್ಯೆಯ ರೂಪತಾಳುತ್ತಾನೆ. ಆ ಸುಂದರ ಕನ್ಯೆಯ ಹೆಸರೇ ಮೋಹಿನಿ, ಮೋಹಿನಿ ರೂಪತಾಳಿದ ವಿಷ್ಣುವು ಭಸ್ಮಾಸುರನನ್ನು ತನ್ನ ಸ್ಪುರದ್ರುಪ ಸೌಂದರ್ಯದಿಂದ ಮೋಹಿತಗೂಳಿಸುತ್ತಾನೆ. ಮೋಹಿನಿಯ ಸೌಂದರ್ಯಕ್ಕೆ ಮೋಹಗೊಂಡ ಭಸ್ಮಾಸುರ ಮೋಹಿನಿಗೆ ತಾನು ನಿನ್ನನ್ನು ವರಿಸುದಾಗಿ ಹೇಳುತ್ತಾನೆ ಆಗ ಮೋಹಿನಿಯು ನಾನು ನನ್ನನ್ನು ವರಿಸಬೇಕಾದರೆ ಕೆಲವು ಷರತ್ತುಗಳು ಇವೆ ಎಂದು ಹೇಳುತ್ತಾಳೆ. ಆಗ ಭಸ್ಮಾಸುರ ನಿನ್ನ ಷರತ್ತುಗಳು ಏನೇ ಇದ್ದರೂ ನನ್ನ ಒಪ್ಪಿಗೆ ಇದೆ ಎಂದು ಹೇಳುತ್ತಾನೆ. ಆಗ ಮೋಹಿನಿ ಭಸ್ಮಾಸುರನಿಗೆ "ನಾನು ನರ್ತಿಸಿದ ಹಾಗೆಯೆ ನರ್ತಿಸಬೇಕು" ಎಂದು ಹೇಳುತ್ತಾಳೆ. ಅದಕ್ಕೆ ಭಸ್ಮಾಸುರ ಒಪ್ಪಿಗೆ ಸೂಚಿಸುತ್ತಾನೆ. ಮೋಹಿನಿ ನರ್ತಿಸುತ್ತಾ ನರ್ತಿಸುತ್ತಾ ಒಂದು ಸಾರಿ ತಲೆಯ ಮೇಲೆ ಕೈ ಇಡುತ್ತಾಳೆ. ಆಗ ಮೋಹಿನಿಯ ಮೋಹದ ಬಲೆಯಲ್ಲಿ ಹಾಗೂ ನೃತ್ಯದ ಗುಂಗಿನಲ್ಲಿ ಭಸ್ಮಾಸುರ ತನಗರಿವಿಲ್ಲದೆ ತನ್ನ ಕೈಯನ್ನು ತನ್ನ ತಲೆಯ ಮೇಲೆ ಕೈ ಇಟ್ಟು ಬಿಡುತ್ತಾನೆ. ತಕ್ಷಣ ಭಸ್ಮಾಸುರ ಭಸ್ಮವಾಗಿ ಹೋಗುತ್ತಾನೆ. ಅಂದು ನಡೆದ ಆ ಘಟನೆಯ ಸ್ಥಳವೆ ಯಾಣ.
ಈ ಸಮಯದಲ್ಲಿ ಉದ್ಭವಿಸಿದ ಬೆಂಕಿ ಬಹಳ ತೀವ್ರವಾಗಿದ್ದರಿಂದ ಈ ಪ್ರದೇಶದಲ್ಲಿ ಬಂಡೆಗಳ ರಚನೆಯಾಯಿತು ಎಂಬುದು ನಂಬಿಕೆ. ಮತ್ತು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಘಟನೆಯಿಂದ ನಡೆದ ಬೂದಿ(ಭಸ್ಮ) ಕಂಡುಬರುತ್ತದೆ. ನಂತರದ ದಿನಗಳಲ್ಲಿ ಜನರು ದೂಡ್ಡದಿರುವ ಶಿಖರವನ್ನು ಭೈರವೇಶ್ವರ ಶಿಖರ (ಶಿವ) ಎಂದೂ, ಸ್ವಲ್ಪ ಚಿಕ್ಕದಾದ ಶಿಖರವನ್ನು ಮೋಹಿನಿ ಶಿಖರ (ಮೋಹಿನಿ/ವಿಷ್ಣು) ಎಂದೂ ಕರೆದರು. ನಂತರ ಇಲ್ಲಿ ಪಾರ್ವತಿಯ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ. ಮತ್ತು ಇಲ್ಲಿ ಹಲವಾರು ಗುಹೆಗಳು ಇವೆ ಮತ್ತು ಇಲ್ಲೆ ಹತ್ತಿರದಲ್ಲಿ ಗಣೇಶ ದೇವಾಲಯವೂ ಇದೆ.
ಹಬ್ಬ
[ಬದಲಾಯಿಸಿ]ಮಹಾಶಿವರಾತ್ರಿ ಹಬ್ಬವು ಇಲ್ಲಿ 10 ದಿನಗಳ ಕಾಲ ನಡೆಯುತ್ತದೆ. ಈ ಸಮಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಮಿಕ್ಕು ಭಕ್ತಾದಿಗಳು ಇಲ್ಲಿ ಆಗಮಿಸುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳು ಶುದ್ದೀಕರಣಗೊಂಡು ಇಲ್ಲಿನ ಗುಹೆಯಿಂದ ವಸಂತ ಕಾಲದ ಪವಿತ್ರವಾದ ನೀರನ್ನು ತೆಗೆದುಕೊಂಡು (ಈ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ.) ಹತ್ತಿರದ ಪಟ್ಟಣ ಗೋಕರ್ಣಕ್ಕೆ ತೆರಳಿ ಅಲ್ಲಿ ಮಹಾಬಲೇಶ್ವರನಿಗೆ ಮಹಾಭಿಷೇಕ ನಡೆಸುವರು. ಈ ಒಂದು ಸಂಗತಿಯು ಜನಪ್ರಿಯವಾಗಿದೆ. ಅದೇನೆಂದರೆ ಭಕ್ತರು ಗೋಕರ್ಣಕ್ಕೆ ಪೂಜೆ ಸಲ್ಲಿಸುತ್ತಾರೆ, ಆ ನಗರದ ಜನರು ಯಾಣಕ್ಕೆ ಅದೇ ಉದ್ದೇಶಕ್ಕಾಗಿ ಪ್ರಯಾಣಿಸುತ್ತಾರೆ!
ಇನ್ನೊಂದು ಗಾದೆಮಾತು ಸಹ ಇದೆ ಅದೆಂದರೆ,
"ಸೊಕ್ಕಿದ್ದವನು ಯಾಣಕ್ಕೆ ಹೋಗುತ್ತಾನೆ; ರೊಕ್ಕಿದ್ದವನು ಗೋಕರ್ಣಕ್ಕೆ ಹೋಗುತ್ತಾನೆ."
ಇಲ್ಲಿನ ಸ್ಥಳೀಯರು ಈ ಪ್ರದೇಶದವನ್ನು ರಾಷ್ಟ್ರೀಯ ನೈಸರ್ಗಿಕ ಪಾರಂಪರಿಕ ತಾಣ ಎಂದು ಕರೆಯುತ್ತಾರೆ. ಈ ಪ್ರದೇಶ ಉತ್ತರಕನ್ನಡದ ಐತಿಹಾಸಿಕ ಪ್ರಮುಖ ಪ್ರವಾಸಿಕೇಂದ್ರವಾಗಿದೆ. ಈ ಸ್ಥಳವು ಸಹ್ಯಾದ್ರಿ ಪರ್ವತದ ಜೀವ ವೈವಿಧ್ಯದ ಪ್ರೇಕ್ಷಣೀಯ ಸ್ಥಳ ಎನ್ನಬಹುದಾಗಿದೆ. ಹಾಗಾಗಿ ಈ ಪ್ರದೇಶವು ಜೀವವೈವಿಧ್ಯ ಸಂರಕ್ಷಣೆಗೆ ಒಳಪಡುತ್ತದೆ ಎಂದು ಸೂಚಿಸಲಾಗಿದೆ. ಆಕ್ಟ್ 2002 [11]
ಸಾರಿಗೆ ಸಂಪರ್ಕ
[ಬದಲಾಯಿಸಿ]ಯಾಣ ಗ್ರಾಮವನ್ನು ರಾಷ್ಟ್ರೀಯ ಹೆದ್ದಾರಿ 66 ಕುಮಟಾ ಮೂಲಕ ಸಂರ್ಪಕಿಸುತ್ತದೆ (31ಕಿಲೋಮೀಟರ್). ಶಿರಶಿ 40ಕಿಲೋಮೀಟರ್ ಶಿರಸಿಯಿಂದ ಬಂದಲ್ಲಿ ಮತ್ತಿ,ವಡ್ಡಿ, ದೇವಿಮನೆ ಘಟ್ಟಗಳ ಮಾರ್ಗವಾಗಿ ಬರಬಹುದು.
ಗೋಕರ್ಣದಿಂದ 52 ಕಿಲೋಮೀಟರ್ ಗೋಕರ್ಣ ಮುಖಾಂತರ ಮಾದನಗೇರಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಕುಮಟಾದಿಂದಲೂ ಬರಬಹುದು.
ಅಂಕೋಲಾದಿಂದ 56 ಕಿಲೋಮೀಟರ್ ಮಾದನಗೇರಿಗೆ ಬಂದು ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಅಂಕೋಲಾದಿಂದ ಮಾಸ್ತಿಕಟ್ಟೆಯಲ್ಲಿ ಹೊಸಕಂಬಿ ಕ್ರಾಸ್ ಬಳಿ ತಿರುಗಿ ಮಾಸ್ತಿಕಟ್ಟೆ, ಹೊಸಕಂಬಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು.
ಕಾರವಾರದಿಂದ 90 ಕಿಲೋಮೀಟರ್ ಕಾರವಾರದಿಂದ ಅಂಕೋಲಾ ಬಂದು ಅಂಕೋಲಾದಿಂದ ಮಾಸ್ತಿಕಟ್ಟೆಯಲ್ಲಿ ಹೊಸಕಂಬಿ ಕ್ರಾಸ್ ಬಳಿ ತಿರುಗಿ ಮಾಸ್ತಿಕಟ್ಟೆ, ಹೊಸಕಂಬಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಅಂಕೋಲಾದಿಂದ ಮಾದನಗೇರಿಗೆ ಬಂದು ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಅಥವಾ ಕುಮಟಾದಿಂದ ಬರಬಹುದು.
ಹುಬ್ಬಳ್ಳಿಯಿಂದ 142 ಕಿಲೋಮೀಟರ್ ಹೊಸಕಂಬಿ ಕ್ರಾಸ್ ಬಳಿ ತಿರುಗಿ ಮಾಸ್ತಿಕಟ್ಟೆ, ಹೊಸಕಂಬಿ, ಅಚವೆ, ಮಾಬಗಿ, ಮಾರ್ಗವಾಗಿ ಬರಬಹುದು. ಹತ್ತಿರದ ವಿಮಾನ ನಿಲ್ದಾಣ ಹುಬ್ಬಳ್ಳಿ. ಬೆಂಗಳೂರಿನಿಂದ 410 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ 4 ಶಿರಶಿ ಮುಖಾಂತರ ಸಂರ್ಪಕಿಸುತ್ತದೆ. ಯಾಣಕ್ಕೆ ಉತ್ತಮ ಮಾರ್ಗವೆಂದರೆ ಕುಮಟಾ ಮತ್ತು ಶಿರಶಿ. ಈ ಎರಡು ಪಟ್ಟಣಗಳ ಹೆದ್ದಾರಿಯ ವಿಚ್ಛೇದನವು ಕತಗಾಲ ಗ್ರಾಮದಲ್ಲಿದೆ. ಇದಕ್ಕಿಂತಲೂ ಪರ್ಯಾಯ ಮಾರ್ಗವೂಂದಿದ್ದು ಶಿರಶಿ ಮುಖಾಂತರ ದೇವನಹಳ್ಳಿ, ಮುತ್ತಿಟ್ಟಾಗ, ವಡ್ಡಿಘಾಟ್, ಮಾರ್ಗವಾಗಿ ಬರಬಹುದು. ಆದರೆ ಒಂದು ಸಮಸ್ಯೆ ಎಂದರೆ ಈ ಮಾರ್ಗದ ರಸ್ತೆಗಳು ಬಹಳ ಕಿರಿದಾಗಿದ್ದು ದಟ್ಟವಾದ ಅರಣ್ಯಗಳಿಂದ ಕೂಡಿದೆ. ಇದು 0.5 ಕಿಲೋಮೀಟರ್ (0.31 ಮೈಲಿ) ನಷ್ಟು ಉದ್ದವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಗಳು
[ಬದಲಾಯಿಸಿ]-
ಪುರಾಣದ ಮಹತ್ವ ಇರುವ ಯಾಣದ ಕಲ್ಲಿನ ಚಿತ್ರಣ
ಉಲ್ಲೇಖ
[ಬದಲಾಯಿಸಿ]- Short description is different from Wikidata
- Articles using infobox templates with no data rows
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons category link is on Wikidata
- ಉತ್ತರ ಕನ್ನಡ ಜಿಲ್ಲೆ
- ಕರ್ನಾಟಕದ ಪ್ರಮುಖ ಸ್ಥಳಗಳು
- ಕುಮಟಾ ತಾಲೂಕಿನ ಪ್ರವಾಸಿ ತಾಣಗಳು