ಯಲಹಂಕದ ಪಾಳೆಯಗಾರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಲಹಂಕದ ಪಾಳೆಯಗಾರರು -ಆವತಿಯ ಪಾಳೆಯಗಾರ ರಣಭೈರೇಗೌಡನ ಕಿರಿಯ ಮಗ ಜಯಗೌಡ ಅಥವಾ ಜಯದೇವಗೌಡನೆಂಬುವನಿಂದ ಬೆಂಗಳೂರು ಜಿಲ್ಲೆಯಲ್ಲಿರುವ ಯಲಹಂಕದಲ್ಲಿ ಸ್ಥಾಪಿಸಿದ ಪಾಳೆಯಗಾರರ ಮನೆತನ; ಸ್ಥಾಪನೆ-1418, ಆಳ್ವಿಕೆ ಕಾಲ 310 ವರ್ಷಗಳು.

ಯಲಹಂಕ ನಾಡಪ್ರಭುಗಳೆಂಬ ಬಿರುದನ್ನು ವಿಜಯನಗರದ ಅರಸರಿಂದ ಪಡೆದಿದ್ದರು. ಬೆಂಗಳೂರು ಜಿಲ್ಲೆಯ ಬಹುಭಾಗವನ್ನು ಆಳುತ್ತಿದ್ದ ಇವರು ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದು 1638ರ ಸುಮಾರಿನಲ್ಲಿ ಸ್ವತಂತ್ರರಾದರು. 1728ರಲ್ಲಿ ಅಂತಿಮವಾಗಿ ಮೈಸೂರು ರಾಜ್ಯದಲ್ಲಿ ಈ ಪ್ರಾಂತ್ಯ ವಿಲೀನಗೊಂಡಿತು.

ಜಯಗೌಡ ತಂದೆಯ ಆದೇಶದಂತೆ ಆವತಿಯಿಂದ ಯಲಹಂಕಕ್ಕೆ ಬಂದು 1418ರಲ್ಲಿ ಪಾಳೆಯ ಪಟ್ಟನ್ನು ಸ್ಥಾಪಿಸಿ ವಿಜಯನಗರದ ಸಾಮಂತನಾಗಿ ಯಲಹಂಕನಾಡ ಪ್ರಭುವೆಂಬ ಅಂಕಿತದಿಂದ 15 ವರ್ಷಕಾಲ ಆಳಿದ. ಅನಂತರ ಅವನ ಮಗ ಗಿಡ್ಡೇಗೌಡ (1433--43) ಕುಲದೈವ ಕೆಂಪಮ್ಮನ ಅನುಗ್ರಹದಿಂದ ಪಡೆದ ಮಗನಿಗೆ ಕೆಂಪನಂಜೇಗೌಡ ಎಂದು ಹೆಸರಿಟ್ಟಿದ್ದರಿಂದ ಮುಂದಿನ ವಂಶಜರೆಲ್ಲ ಕೆಂಪಮ್ಮನ ಹೆಸರು ಧರಿಸುವ ವಾಡಿಕೆಬಂತು. ಕೆಂಪನಂಜೇಗೌಡ (1443--1513) ದೀರ್ಘಕಾಲ ಆಳಿದ. ಅನಂತರ ಈ ವಂಶದ ಬಹಳ ಪ್ರಸಿದ್ಧನಾದ ಬೆಂಗಳೂರಿನ ನಿರ್ಮಾಪಕ ಈತ ಮೊದಲ ಕೆಂಪೇಗೌಡ (1513-69) ಆಡಳಿತಕ್ಕೆ ಬಂದ.

ಮೊದಲ ಕೆಂಪೇಗೌಡ[ಬದಲಾಯಿಸಿ]

ವಿಜಯನಗರದ ಚಕ್ರವರ್ತಿಗಳಾದ ಕೃಷ್ಣದೇವರಾಯ ಮತ್ತು ಅಚ್ಯುತರಾಯರ ಆಶ್ರಯ ಪಡೆದ ಈತ ಶಿವಸಮುದ್ರಂ (ಈಗಿನ ಬೆಂಗಳೂರು ಪ್ರದೇಶ) ಹಲವು ಸವಲತ್ತುಗಳಿಂದ ಕೂಡಿದ ಸುರಕ್ಷಿತ ಪ್ರದೇಶವೆಂದು ಭಾವಿಸಿ ಅಲ್ಲಿ ಅಚ್ಯುತರಾಯನ ಅನುಮತಿ ಪಡೆದು ಮಣ್ಣಿನ ಕೋಟೆಯನ್ನು ನಿರ್ಮಿಸಿ, ಅದನ್ನು ರಾಜಧಾನಿಯಾಗಿ ಮಾಡಿಕೊಂಡ. ಅಚ್ಯುತರಾಯ 30,000 ವರಾಹ ಆದಾಯ ತರುವ ಆ ಸುತ್ತಲ ಪ್ರದೇಶವನ್ನು ವಹಿಸಿದ. ಅದರಿಂದ ಉತ್ತೇಜಿತನಾದ ಕೆಂಪೇಗೌಡ ಪಟ್ಟಣವನ್ನು ಬೆಳೆಸಿ ವ್ಯಾಪಾರ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿದ. ಗವಿಗಂಗಾಧರೇಶ್ವರ ಮತ್ತು ಬಸವನಗುಡಿಗಳನ್ನು ಕಟ್ಟಿಸಿ ಅರ್ಚಕರಿಗೆ ಅಗ್ರಹಾರಗಳನ್ನು ನಿರ್ಮಿಸಿದ. ಭೈರವ ನಾಣ್ಯಗಳ ಮುದ್ರಣಕ್ಕೆ ಒಂದು ಟಂಕಸಾಲೆಯನ್ನು ಸ್ಥಾಪಿಸಿದ. ಅವನ ಅನಂತರ ಗಿಡ್ಡೇಗೌಡ (1569-78) ತದನಂತರ ಇಮ್ಮಡಿ ಕೆಂಪೇಗೌಡ (1578--1658) ಅಧಿಕಾರಕ್ಕೆ ಬಂದರು.

ಇಮ್ಮಡಿ ಕೆಂಪೇಗೌಡ[ಬದಲಾಯಿಸಿ]

ಸುದೀರ್ಘ ಕಾಲ ಆಳಿದ ಇಮ್ಮಡಿ ಕೆಂಪೇಗೌಡ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ತನ್ನ ನಾಡನ್ನು ವಿಸ್ತರಿಸಿದ. ಹಲವಾರು ಹೊಸ ಗ್ರಾಮಗಳನ್ನು ನಿರ್ಮಿಸಿದ. ಸಾವನದುರ್ಗ ಮತ್ತು ಮಾಗಡಿ ಕೈತಪ್ಪಿಹೋಗಿದ್ದುದನ್ನು ಮತ್ತೆ ವಶಪಡಿಸಿಕೊಂಡ. ಬಿಜಾಪುರದ ಸೈನ್ಯದ ನಾಯಕ ರಣದುಲ್ಲಾಖಾನನಿಂದ 1638ರಲ್ಲಿ ಸೋಲುಂಡರೂ ಶಾಂತಿ ಒಪ್ಪಂದ ಮಾಡಿಕೊಂಡು, ಬೆಂಗಳೂರನ್ನು ಅವನಿಗೆ ಬಿಟ್ಟುಕೊಟ್ಟು ತನ್ನ ರಾಜಧಾನಿಯನ್ನು ಮಾಗಡಿಗೆ ಬದಲಾಯಿಸಿಕೊಂಡ. ಆ ಕಾರಣದಿಂದ ಈ ವಂಶದವರನ್ನು ಮಾಗಡಿ ಕೆಂಪೇಗೌಡರೆಂದು ಕರೆಯುವಂತಾಯಿತು. ಅನಂತರ ಹುಲಿಕಲ್ಲು, ಹುಲಿಯೂರುದುರ್ಗ, ಹುತ್ರಿದುರ್ಗ, ಭೈರವನದುರ್ಗ ಮತ್ತು ಕುಣಿಗಲ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡುದುದಲ್ಲದೆ ಶ್ರೀರಂಗಪಟ್ಟಣದ ಶ್ರೀರಂಗರಾಯನನ್ನು ಸೋಲಿಸಿದ. ತನ್ನ ಜನಹಿತ ಕಾರ್ಯಗಳಿಂದ ಧರ್ಮಪ್ರಭು ಎನಿಸಿಕೊಂಡ.

ಇತರರು[ಬದಲಾಯಿಸಿ]

ಅವನ ಮರಣಾನಂತರ ಮಗ ಮುಮ್ಮಡಿ ಕೆಂಪೇಗೌಡ (1658-78). ಅವನ ಮಗ ದೊಡ್ಡವೀರಪ್ಪಗೌಡ (1678-1705) ಮತ್ತು ಅವನ ಮಗ ಮುಮ್ಮಡಿ ಕೆಂಪವೀರಪ್ಪಗೌಡ (1705-28) ಅಧಿಕಾರಕ್ಕೆ ಬಂದರು. ಅವನು ಮಾಗಡಿಯಲ್ಲದೆ ನೆಲಪಟ್ಟಣವೆಂಬ ಮತ್ತೊಂದು ದುರ್ಗವನ್ನು ನಿರ್ಮಿಸಿದ. 1728ರಲ್ಲಿ ಮೈಸೂರು ರಾಜ್ಯದ ದಳವಾಯಿ ದೇವರಾಜಯ್ಯ ಇವನನ್ನು ಸೋಲಿಸಿ ಸೆರೆಹಿಡಿದನಂತರ ಈ ಮನೆತನ ಕೊನೆಗೊಂಡು ಆ ಪ್ರದೇಶ ಮೈಸೂರು ರಾಜ್ಯಕ್ಕೆ ಸೇರಿತು.

ಅವರ ಕೊಡುಗೆಗಳು[ಬದಲಾಯಿಸಿ]

ಯಲಹಂಕದ ನಾಡಪ್ರಭುಗಳು ಹಲವಾರು ಪ್ರಜಾಹಿತ ಕಾರ್ಯಗಳನ್ನು ಮಾಡಿದ್ದರು. ನೀರಾವರಿಗೆ ಕೆರೆ ಕಾಲುವೆಗಳನ್ನು ನಿರ್ಮಿಸಿಕೊಟ್ಟಿದ್ದರು. ಕೆಂಪಾಂಬುಧಿ ಕೆರೆ, ಅಲಸೂರಿನ ಕೆರೆ, ಬಿನ್ನಿಮಿಲ್ಲಿನ ಬಳಿಯ ಕೆರೆ ಮತ್ತು ಕಾರಂಜಿ ಕೆರೆ ಅವುಗಳಲ್ಲಿ ಪ್ರಮುಖವಾದವು. ಬೆಂಗಳೂರನ್ನು ಸ್ಥಾಪಿಸಿದ ಮೊದಲ ಕೆಂಪೇಗೌಡನು ನಗರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರಗಳನ್ನು ಕಟ್ಟಿಸಿ ಮುಂದೆ ಬೆಳೆಯಬಹುದಾದ ನಗರದ ಪರಿಮಿತಿಯನ್ನು ಸೂಚಿಸಿದ್ದ; ಆದರೆ ನಗರ ಈಗ ಆ ಮೇರೆಗಳನ್ನು ಅತಿಕ್ರಮಿಸಿದೆ. ಹಲವಾರು ದೇವಾಲಯಗಳನ್ನು ಹೊಸದಾಗಿ ಕಟ್ಟಿಸಿದುದಲ್ಲದೆ ಹಿಂದಿನ ದೇವಾಲಯಗಳನ್ನು ಇವರು ವಿಸ್ತರಿಸಿದರು. ಮಾಗಡಿಯ ರಂಗನಾಥದೇವಾಲಯ, ಸಾವನದುರ್ಗದ ವೀರಭದ್ರ ದೇವಾಲಯ, ಮಾಗಡಿಯ ಚೆಲುವರಾಯಸ್ವಾಮಿ ದೇವಾಲಯ, ಬೈಚಾಪುರದ ವರದ ಚೆಲುವರಾಯಸ್ವಾಮಿ ದೇವಾಲಯ, ಮಾಗಡಿಯ ಪಶ್ಚಿಮಕ್ಕಿರುವ ಸೋಮೇಶ್ವರ ದೇವಾಲಯ, ಶಿವಗಂಗೆಯ ಗಂಗಾಧರೇಶ್ವರ ದೇವಾಲಯ ಇವುಗಳಲ್ಲಿ ಮುಖ್ಯವಾದವು. ಇದಲ್ಲದೆ ಹಲವಾರು ದೇವಾಲಯಗಳಿಗೆ ದಾನ ದತ್ತಿಗಳನ್ನು ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ. ಮುಮ್ಮಡಿ ಕೆಂಪೇಗೌಡ ಕಾಶಿಯಲ್ಲಿ ಒಂದು ಮಠ ಕಟ್ಟಿಸಿ ಅದಕ್ಕೆ ಒಂದು ಗ್ರಾಮವನ್ನು ದತ್ತಿಯಾಗಿ ಕೊಟ್ಟಿದ್ದ; ಈ ವಂಶದ ಅರಸರ ಕೆಲವು ಶಿಲಾಪ್ರತಿಮೆಗಳು, ಕಂಚಿನ ವಿಗ್ರಹ ಇವೆ. ಮುಮ್ಮಡಿ ಕೆಂಪೇಗೌಡನ ಆಸ್ಥಾನ ಕವಿ ಮುಕ್ತೀಶ್ವರನ ಮಗ ಏಕಾಮ್ರ ದೀಕ್ಷಿತ ವೀರಭದ್ರ ವಿಜಯವೆಂಬ ಚಂಪೂಕಾವ್ಯ ರಚಿಸಿದ್ದಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: