ವಿಷಯಕ್ಕೆ ಹೋಗು

ಮ್ಯಾಕ್ಸಿಂ ಗಾರ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಕ್ಸಿಂ ಗಾರ್ಕಿ
Portrait of Gorky, c. 1906
ಜನನಅಲೆಕ್ಸಿಮ್ಯಾಕ್ಸಿಮೋವಿಚ್ ಪೆಷ್ಕೋವ್
28 March [O.S. 16 March] 1868
Nizhny Novgorod, Russian Empire
ಮರಣ18 June 1936(1936-06-18) (aged 68)
Gorki Leninskiye, Moscow Oblast, Russia
ಕಾವ್ಯನಾಮಮ್ಯಾಕ್ಸಿಂ ಗಾರ್ಕಿ
ವೃತ್ತಿಲೇಖಕ, ನಾಟಕಕಾರ ರಾಜಕಾರಣಿ
ರಾಷ್ಟ್ರೀಯತೆರಷಿಯನ್
ಕಾಲModernism
ಪ್ರಕಾರ/ಶೈಲಿಕಾದಂಬರಿ,ನಾಟಕ
ಸಾಹಿತ್ಯ ಚಳುವಳಿSocialist realism

ಪ್ರಭಾವಿತರು

ಸಹಿ

ಮ್ಯಾಕ್ಸಿಂ ಗಾರ್ಕಿ(೨೮ ಮಾರ್ಚ್ ೧೮೬೮– ೧೮ ಜೂನ್ ೧೯೩೬) ಸೋವಿಯೆತ್ ರಷ್ಯದ ಅತಿ ಸಾಮಾನ್ಯ ಕುಟುಂಬದಲ್ಲಿ ಬಡಗಿಯೊಬ್ಬನ ಮಗನಾಗಿ ಜನಿಸಿ ಕೀರ್ತಿಯ ಶಿಖರವನ್ನೇರಿದ ಪ್ರತಿಭಾವಂತ ಸಾಹಿತಿ. ಮ್ಯಾಕ್ಸಿಂ ಗಾರ್ಕಿ ಎಂಬುದು ಕಾವ್ಯನಾಮ; ನಿಜವಾದ ಹೆಸರು ಅಲೆಕ್ಸಿಮ್ಯಾಕ್ಸಿಮೋವಿಚ್ ಪೆಷ್ಕೋವ್.

ಬಾಲ್ಯ

[ಬದಲಾಯಿಸಿ]

ಇವನು ರಷ್ಯದ ನಿಷ್ನಿನೊವ್ಗೊರಾಡ್ನಲ್ಲಿ 1868ರ ಮಾರ್ಚ್ 28ರಲ್ಲಿ ಜನಿಸಿದ. ತಂದೆ ಕಾಲರ ರೋಗದಿಂದ ಅಸುನೀಗಿದಾಗ ಈತನಿನ್ನೂ ಮೂರು ವರ್ಷದ ಹುಡುಗ. ಇದರಿಂದಾಗಿ ಗಾರ್ಕಿ ಬಾಲ್ಯದ ದಿನಗಳನ್ನು ತನ್ನ ಅಜ್ಜನ ಮನೆಯಲ್ಲಿ ಕಳೆದ. ತನ್ನ ಎಳೆಯ ವಯಸ್ಸಿನಿಂದಲೇ ಗಾರ್ಕಿ ಜೀವನೋಪಾಯಕ್ಕಾಗಿ ದುಡಿಯಲು ಪ್ರಾರಂಭಿಸಬೇಕಾ ಯಿತು. ತಾರುಣ್ಯದಲ್ಲಿ ಅಲೆಮಾರಿಯಾಗಿ ವೋಲ್ಗಾ ನದಿಯ ಮಧ್ಯಪ್ರದೇಶಗಳಿಂದ ಹಿಡಿದು ಕಾಕಸಸ್ ಪ್ರದೇಶದವರೆಗೆ ತಿರುಗಾಡಿದ. ಈ ಪರ್ಯಟನೆಗಳಲ್ಲಿ ನಾನಾ ಉದ್ಯೋಗಗಳನ್ನು ಕೈಗೊಂಡ. ಪಾತ್ರೆ ತೊಳೆಯುವವನಾಗಿ, ವಕೀಲನ ಕಾರಕೂನನಾಗಿ, ರೊಟ್ಟಿ ಬೇಯಿಸುವವನಾಗಿ ತನ್ನ ಪಾಲಿಗೆ ಬಂದ ಎಲ್ಲ ಉದ್ಯೋಗಗಳಲ್ಲೂ ದುಡಿದ. ಇದೇ ಕಾಲದಲ್ಲಿ ನಾನಾ ರೀತಿಯ ಜನಗಳ, ಬೀದಿಹೋಕರ, ಹೊಲಸುಕೇರಿ ನಿವಾಸಿಗಳ, ಕೂಲಿಕಾರರ, ಬುದ್ಧಿಜೀವಿಗಳ - ನಿಕಟ ಪರಿಚಯವನ್ನು ಪಡೆದ. ಕಜಾನ್ ನಗರದಲ್ಲಿ ಈತ ಕೆಲವು ಬುದ್ಧಿಜೀವಿಗಳು ನಡೆಸುತ್ತಿದ್ದ ರಾಜಕೀಯ ವಿಚಾರಗೋಷ್ಠಿಯನ್ನು ಸೇರಿ ಮಾಕ್ರ್ಸವಾದದ ಮೂಲಸೂತ್ರದ ದರ್ಶನವನ್ನಲ್ಲದೆ ಅರ್ಥಶಾಸ್ತ್ರದ ಅರಿವನ್ನೂ ಪಡೆದುಕೊಂಡ. ಈ ಅಲೆಮಾರಿ ಜೀವನದಲ್ಲಿ ಪಡೆದ ಅನುಭವಗಳೇ ಮುಂದಿನ ಸಾಹಿತ್ಯ ಜೀವನದ ಮೂಲಾಧಾರವಾದುವು. ಉದ್ದಾಮ ವ್ಯಕ್ತಿತ್ವ, ಅದ್ಭುತ ಪ್ರತಿಭೆ ಮತ್ತು ತೀವ್ರ ಕಾಲ್ಪನಿಕ ಶಕ್ತಿಗಳೊಂದಿಗೆ ಜೀವನದ ಬಹುಮುಖವೂ ಆಳವಾದ ಅನುಭವವೂ ಸೇರಿತಾಗಿ ಗಾರ್ಕಿ ಉತ್ತಮ ಸಾಹಿತ್ಯವನ್ನು ನಿರ್ಮಾಣ ಮಾಡಿದ.

ಸಾಹಿತ್ಯ ಸೇವೆ

[ಬದಲಾಯಿಸಿ]

ಗಾರ್ಕಿ ತನ್ನ ಲೇಖನ ಜೀವನವನ್ನು ಪ್ರಾರಂಭಿಸಿದ ಕಾಲ ಅತ್ಯಂತ ಕ್ರಾಂತಿಕಾರಿ ಸನ್ನಿವೇಶಗಳಿಂದ ಕೂಡಿತ್ತು. ಕಾರ್ಮಿಕ ಚಟುವಟಿಕೆಗಳು ಚುರುಕಿನಿಂದ ಮುನ್ನಡೆಯುತ್ತಿದ್ದವು. ಲೆನಿನ್ ಪಕ್ಷ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತ್ತು. ಗಾರ್ಕಿ ತನ್ನ ಪರ್ಯಟನೆಯ ಕಾಲದಲ್ಲಿ ಟಿಫ್ಲಿಸ್ ನಗರದಲ್ಲಿದ್ದಾಗ ಅಲ್ಲಿನ ರೈಲ್ವೆ ವರ್ಕ್‍ಶಾಪಿನ ಕೆಲಸಕ್ಕೆ ಸೇರಿದ. ಅಲ್ಲಿನ ಶ್ರಮಜೀವಿಗಳ ಕ್ರಾಂತಿಕಾರಿ ತಂಡದ ಸದಸ್ಯನಾಗಿ ಕೈಗಾರಿಕಾ ಕೂಲಿಕಾರರ ಜೀವನದ ಪರಿಚಯ ಪಡೆದ. ಇಲ್ಲಿ ಈತನಿಗೆ ಕಾಲುಜ್ನಿ ಎಂಬ ಜನನಾಯಕನ ಪರಿಚಯವಾಯಿತು. ಗಾರ್ಕಿ ತನ್ನ ಅನುಭವಗಳನ್ನೆಲ್ಲ ಬರೆಯಲು ಈತ ಪ್ರೇರೇಪಿಸಿದ. ಗಾರ್ಕಿಯ ಮೊದಲ ಕತೆಯಾದ ಮಕರಚುದ್ರಾ ಪ್ರಕಟವಾದದ್ದು ಟಿಫ್ಲಿಸ್ನ ಕಾವ್ತಾಜ್ó ಪತ್ರಿಕೆಯಲ್ಲಿ. ಈ ಕತೆ ಗಾರ್ಕಿ (ಗಾರ್ಕಿ ಎಂದರೆ ಕಟು ಎಂದು ಅರ್ಥ) ಎಂಬ ಗುಪ್ತನಾಮದಲ್ಲಿ ಪ್ರಕಟವಾಯಿತು. ಅನಂತರ ಇದೇ ಇವನ ಶಾಶ್ವತ ನಾಮವಾಗಿ ಉಳಿಯಿತು.

ಟಿಫ್ಲಿಸ್ ನಗರ ಬಿಟ್ಟಮೇಲೆ ಗಾರ್ಕಿ ತನ್ನ ಹುಟ್ಟು ಊರಾದ ನಿಷ್ನಿನೊವ್ ಗೊರಾಡ್ಗೆ ವಾಪಸಾದ (ಇದರ ಈಗಿನ ಹೆಸರು ಗಾರ್ಕಿ). ಇಲ್ಲಿ ಈತನಿಗೆ ರಷ್ಯದ ಸುಪ್ರಸಿದ್ಧ ಸಾಹಿತಿ ಕೊರೆಲೆಂಕೊನ ಪರಿಚಯವಾಯಿತು. ಆತ ಗಾರ್ಕಿಯ ಲೇಖನ ಕಲೆ ಮುಂದೆ ಸಾಗಲು ಬಹಳ ಸಹಾಯ ಮಾಡಿದ. ಗಾರ್ಕಿಯ ಕಥೆಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭವಾಯಿತು. ಮೊತ್ತ ಮೊದಲ ಕಥಾಸಂಕಲನ ಪ್ರಕಟವಾದದ್ದು 1898ರಲ್ಲಿ. ಹೀಗೆ ರಷ್ಯನ್ ಸಾಹಿತ್ಯ ಕ್ಷೇತ್ರದಲ್ಲಿ ಗಾರ್ಕಿಯ ಹೆಸರು ಅಡಿಯೂರಿತು. ಗಾರ್ಕಿಯ ಕತೆಗಳೆಲ್ಲವೂ ಪ್ರಚಂಡ ಕಾರ್ಮಿಕ ಮುನ್ನಡೆಯಿಂದ ಸಚೇತನಗೊಂಡ ಜನತೆಯ ಮನೋಭಾವದ ಚಿತ್ರಗಳಿಂದ ತುಂಬಿವೆ. ಇವನ ಮೊದಲ ಕೃತಿಗಳು ಸಮಾಜದ ಅತ್ಯಂತ ಕೀಳುವರ್ಗದ ಜನತೆಯ - ಅಂದರೆ ದಿನಗೂಲಿಯವರ, ಅಲೆಮಾರಿಗಳ, ಸ್ವಪ್ನಜೀವಿಗಳ ಮತ್ತು ಬಂಡಾಯಕೋರರ - ಉಜ್ವಲವಾದ ಭಾವನಾತ್ಮಕ ಚಿತ್ರಗಳಿಂದ ಕೂಡಿವೆ. ಗಾರ್ಕಿ ದೀನದಲಿತರ ಜೀವನದ ಕಷ್ಟಕಾರ್ಪಣ್ಯಗಳ ವಾಸ್ತವಚಿತ್ರಣದಿಂದ ತೃಪ್ತನಾಗುವುದಿಲ್ಲ. ಮಾನವ ಜೀವನದ ಘನೋದ್ದೇಶವನ್ನು, ಮಾನವ ವಿಕಾಸದ ನೀತಿನಿಯಮಗಳನ್ನು ಕುರಿತು ಆಳವಾಗಿ ವಿಚಾರ ಮಾಡುತ್ತಾನೆ. ಜೀವನದ ಸತ್ಯಸಂಗತಿಗಳ ಗ್ರಹಿಕೆ, ವ್ಯಾಪಕತೆಗಳಿಗಷ್ಟೇ ಗಮನ ಕೊಡದೆ ಈ ರೀತಿಯ ಜೀವನಕ್ಕೆ ಕಾರಣವೇನು ಅದರಿಂದ ಪಾರಾಗಲು ಮಾರ್ಗವೇನು ಎಂಬುದನ್ನು ಕುರಿತು ವಿಶ್ಲೇಷಿಸುತ್ತಾನೆ. ಈ ಸೌಂದರ್ಯರಹಿತ ಜೀವನವನ್ನು ಈ ವಾತಾವರಣದಿಂದ ಮೇಲೆತ್ತಿ ಅವರಲ್ಲಿ ಜೀವನದ ಸೌಂದರ್ಯ ಮತ್ತು ಸದ್ಗುಣಗಳ ಬಗೆಗೆ ಅರಿವನ್ನುಂಟುಮಾಡಿ ಅವರನ್ನು ಕ್ರಿಯಾಶೀಲರಾಗುವಂತೆ ಹುರಿದುಂಬಿಸುವ ಹೊಸ ಮಾರ್ಗವನ್ನು ಪ್ರತಿಪಾದಿಸುತ್ತಾನೆ. ಆದುದರಿಂದಲೇ ಅನೇಕ ವೇಳೆ ಗಾರ್ಕಿಯ ಕಥಾವ್ಯಕ್ತಿಗಳು ಜೀವನದ ಧ್ಯೇಯವನ್ನು ಕುರಿತು ಉದ್ದುದ್ದ ಭಾಷಣಗಳನ್ನು ಮಾಡುವುದಲ್ಲದೆ ಓದುಗರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಅವುಗಳಿಗೆ ತಾವೇ ಉತ್ತರ ನೀಡುತ್ತವೆ.

ಕ್ರಾಂತಿಯ ಹರಿಕಾರ

[ಬದಲಾಯಿಸಿ]

ಇವನ ಪ್ರಖ್ಯಾತ ನಾಟಕವಾದ ದಿ ಲೋಯರ್ ಡೆಪ್್ತ್ಸನಲ್ಲಿ (1902) ಕ್ರಾಂತಿಯ ಭಾವನೆ ಅತ್ಯಂತ ಪ್ರಭಾವಿಯಾಗಿ ಮೂಡಿಬಂದಿದೆ. ರಷ್ಯದಲ್ಲಿ ಇದರ ಪ್ರದರ್ಶನವನ್ನು ಬಹಿಷ್ಕರಿಸಲಾಗಿತ್ತಾದರೂ ಇದನ್ನು ಜಗತ್ತಿನ ಎಲ್ಲ ಮಹಾನಗರಗಳಲ್ಲೂ ಪ್ರದರ್ಶಿಸಲಾಗಿದೆ. ಇದರಲ್ಲಿ ಬರುವ ಪಾತ್ರಗಳು - ಕಳ್ಳರು, ವೇಶ್ಯೆಯರು, ವರ್ಗಬಾಹಿರ ಶ್ರೀಮಂತರು - ಒಂದು ಕಿಕ್ಕಿರಿದ ವಠಾರದಲ್ಲಿ, ದುರ್ಗಂಧ ವಾತಾವರಣದಲ್ಲಿ, ಜೀವಿಸುತ್ತಿರುವ ದೃಶ್ಯ ಪ್ರೇಕ್ಷಕರನ್ನು ಕುರಿತು ಇಂಥ ಪರಿಸ್ಥಿತಿ ಖಂಡಿತ ಮುಂದುವರಿಯಕೂಡದು ಎಂದು ಒಕ್ಕೊರಲಿನಲ್ಲಿ ಸಾರಿ ಹೇಳುತ್ತದೆ. ಪಾಲಿಗೆ ಬಂದದ್ದು ಪಂಚಾಮೃತವೆಂದು ನಮ್ರರಾಗಿ ತೃಪ್ತಿಕರ ಜೀವನವನ್ನು ನಡೆಸಿರಿ ಎಂದು ಬೋಧಿಸುತ್ತಿದ್ದ ಲೂಕನನ್ನು ವಠಾರದ ನಿವಾಸಿಗಳು ಅದರಲ್ಲೂ ವಿಶೇಷವಾಗಿ ತನ್ನ ದುರದೃಷ್ಟವನ್ನು ಹೋರಾಟವಿಲ್ಲದೆ ಒಪ್ಪಿಕೊಳ್ಳುವ ಭಾವನೆಯೇ ಇಲ್ಲದಿದ್ದ ಸ್ಯಾಟಿನ್ ಎಂಬ ದಂಗೆಕೋರ ಕುಡುಕ ವಿರೋಧಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇದರಷ್ಟೇ ಪ್ರಖ್ಯಾತವಾದ ಗಾರ್ಕಿಯ ಕಾದಂಬರಿ ‘ತಾಯಿ’ (ಮದರ್) ಕೂಡ ಇದೇ ರೀತಿಯ ಭಾವಪುರ್ಣ ವಿಚಾರಗಳಿಂದ ಕೂಡಿದೆ. ಈ ಕಾದಂಬರಿ ರಷ್ಯದ ಕಾರ್ಮಿಕ ಜೀವನವನ್ನು ಮತ್ತು ಅಲ್ಲಿನ ಕಾರ್ಮಿಕರು ನಡೆಸಿದ ಹೋರಾಟವನ್ನು ಕುರಿತದ್ದು. ಕಾರ್ಮಿಕರು ಕ್ರಾಂತಿಕಾರಿ ಹೋರಾಟದಲ್ಲಿ ಹೇಗೆ ಆಧ್ಯಾತ್ಮಿಕ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂಬುದೇ ಈ ಕಾದಂಬರಿಯ ಗುರಿ. ಇದರಲ್ಲಿ ಪಾವೆಲ್ ವ್ಲಾಸೋವ್ ಮತ್ತು ಅವನ ತಾಯಿ ನಿಲೋವ್ನ ತಮ್ಮ ಹೋರಾಟದ ಜೀವನದಲ್ಲಿ ಹೇಗೆ ಸತ್ಯ ಮತ್ತು ಸೌಂದರ್ಯದ ಅರಿವನ್ನು ಪಡೆಯುತ್ತಾರೆ, ಹೋರಾಟ ಹೇಗೆ ಅವರ ನೀರಸ ಕಷ್ಟಮಯ ಜೀವನವನ್ನು ಶ್ರೀಮಂತವಾಗಿ ಮಾರ್ಪಡಿಸುತ್ತದೆ - ಎಂಬುದರ ಚಿತ್ರಣವಿದೆ. ಈ ಕೃತಿಯಿಂದ ಸಮಾಜವಾದೀ ವಾಸ್ತವತೆಯ ನಾಂದಿಯಾಯಿತು.

ಸಾಹಿತ್ಯದಲ್ಲಿ ಜನಜೀವನ ಚಿತ್ರಣ

[ಬದಲಾಯಿಸಿ]

ರಷ್ಯದ ಎರಡು ಸಾಹಿತ್ಯಕ ಯುಗಗಳ ನಡುವಣ ಜೀವಂತ ಸೇತುವೆಯಂತೆ ತೋರುವ ಗಾರ್ಕಿಯ ಪಾತ್ರ ‘ತಾಯಿ’ ಕಾದಂಬರಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ, ಐತಿಹಾಸಿಕ ಮುನ್ನಡೆಯೆಂದರೆ ಮಾನವನ ಹಿತಸಾಧನೆ ಎಂಬುದನ್ನು ಸ್ಪಷ್ಟಪಡಿಸಿರುವುದೇ ಈ ಕಾದಂಬರಿಯ ಹಿರಿಮೆ. ಇದು ಬರಿಯ ನೊಂದಜೀವಿಗಳ ವಾಸ್ತವಿಕ ಚಿತ್ರಣ ಮಾತ್ರವಲ್ಲ, ಅವರು ತಮ್ಮ ಹೋರಾಟದ ಮೂಲಕ ಪ್ರಪಂಚವನ್ನು ಯಾವ ರೀತಿ ಮಾರ್ಪಡಿಸಲು ಸನ್ನದ್ಧರಾಗಿದ್ದಾರೆ ಎಂಬುದನ್ನು ಇದು ವಿವರಿಸುತ್ತದೆ. ಲೆನಿನ್ 1907ರ ಮೇ ತಿಂಗಳಲ್ಲಿ ಲಂಡನಿನಲ್ಲಿ ನಡೆದ ರಷ್ಯದ ಸೋಷಿಯಲ್ ಡೆಮೋಕ್ರಾಟಿಕ್ ಪಕ್ಷದ ಐದನೆಯ ಅಧಿವೇಶನದಲ್ಲಿ ಗಾರ್ಕಿಯನ್ನು ಸಂಧಿಸಿದಾಗ ಈ ಕಾದಂಬರಿಯನ್ನು ರಚಿಸಿದುದಕ್ಕಾಗಿ, ಸಕಾಲದಲ್ಲಿ ಪ್ರಕಟಿಸಿದುದಕ್ಕಾಗಿ ಈತನನ್ನು ಬಹುವಾಗಿ ಅಭಿನಂದಿಸಿದನೆನ್ನಲಾಗಿದೆ. ಗಾರ್ಕಿಯ ಕೃತಿಗಳಲ್ಲಿ ರಷ್ಯದ ಕಾರ್ಖಾನೆಗಳ, ಮಾಲೀಕರ, ವರ್ತಕರ, ಶ್ರೀಮಂತರ ಮತ್ತು ಬುದ್ಧಿಜೀವಿಗಳ ಚಿತ್ರಗಳನ್ನೂ ಕಾಣಬಹುದು. ಈ ವರ್ಗದ ವ್ಯಕ್ತಿಗಳನ್ನು ಚಿತ್ರಿಸುವಾಗ ಗಾರ್ಕಿ ಅವರನ್ನು ಬಂಡವಾಳಗಾರರೆಂಬ ಕಾರಣದಿಂದ ಮಾತ್ರ ಅವಹೇಳನ ಮಾಡುವುದಿಲ್ಲ. ಗಾರ್ಕಿಯ ಇತರ ಕಾದಂಬರಿಗಳಾದ ದಿತ್ರಿ, ಪೋಮಾಗಾರ್ದೇವ್, ದಿ ಲೈಫ್ ಆಫ್ ಮಾತ್ವೆ ಕೋಷ್ಮಿಯಾಕಿನ್ ಮತ್ತು ಆರ್ತ ಮನೋವ್ಸಗಳು ಕ್ರಾಂತಿಪುರ್ವ ರಷ್ಯದ ಒಡೆಯರ ಜೀವನವನ್ನು ಕುರಿತವುಗಳು. ಅನೇಕ ವೇಳೆ ಈ ಕಾದಂಬರಿಗಳಲ್ಲಿ ಬರುವ ವ್ಯಕ್ತಿಗಳು ದೃಢನಿಶ್ಚಯದಿಂದ ಕೆಲಸ ಮಾಡತಕ್ಕವರು, ಸಾಹಸಿಗಳು, ಕ್ರಿಯಾಶೀಲರು ಮತ್ತು ಸ್ವಪ್ರಯತ್ನದಿಂದ ಮಹತ್ತರವಾದ ಕೆಲಸಗಳನ್ನು ಸಾಧಿಸಿದವರು. ಈ ವರ್ಗದವರನ್ನು ಚಿತ್ರಿಸುವಾಗ ಅವರನ್ನು ನಿಂದಿಸುವುದಾಗಲೀ ಅವಹೇಳನಕ್ಕೆ ಗುರಿ ಮಾಡುವುದಾಗಲಿ ಗಾರ್ಕಿಯ ಉದ್ದೇಶವಲ್ಲ. ಇಂಥ ಜನರ ಜೀವನವನ್ನು ಬಂಡವಾಳ ಸಮಾಜ ಯಾವ ರೀತಿ ವಿರೂಪಗೊಳಿಸುತ್ತದೆ, ಅವರ ಆತ್ಮವನ್ನು ಯಾವ ರೀತಿ ಕುಂಠಿಸುತ್ತದೆ, ಹಣದ ಗಳಿಕೆಯ ಆಸೆ ಹೇಗೆ ಅವರನ್ನು ಕ್ರೂರಿಗಳನ್ನಾಗಿ ಮಾಡುತ್ತದೆ - ಎಂಬುದನ್ನು ಇವನ ಕೃತಿಗಳು ಸಾಹಿತ್ಯಕವಾಗಿ ಪ್ರತಿಬಿಂಬಿಸುತ್ತವೆ. ಆರ್ತಮನೋವ್ಸ ಕಾದಂಬರಿ ರಷ್ಯದ ವರ್ತಕವರ್ಗದ ಮೂರು ಪೀಳಿಗೆಗಳ ಜೀವನವನ್ನು ಒಳಗೊಂಡಿದೆ. ಈ ಕುಟುಂಬದ ಯಜಮಾನ ಇಲ್ಯ ಆರ್ತಮನೋವ್ ತನ್ನ ಸ್ವಂತ ನೆಲದಲ್ಲಿಯೇ ಬೆಳೆದು ಅಚಲವಾಗಿ ನಿಂತಿರುವ ಓಕ್ ಮರದಂತೆ ದೃಢನಾಗಿರುತ್ತಾನೆ. ಆತ ತನ್ನ ಹಣ, ಕಾಲ ಮತ್ತು ದುಡಿಮೆಗಳನ್ನು ತನ್ನ ಊರನ್ನು ಸಂಪದ್ಯುಕ್ತವಾದ ಪಟ್ಟಣವಾಗಿ ಮಾರ್ಪಡಿಸಲು ಸಂಕಲ್ಪ ಉಳ್ಳವನು. ಆದರೆ ಅವನ ಚಟುವಟಿಕೆಗಳೆಲ್ಲ ಶೋಷಣೆಯ ಆಧಾರದ ಮೇಲೆ ನಿಂತಿರುತ್ತವೆ. ಅವನ ಮಕ್ಕಳು ಮತ್ತು ಮೊಮ್ಮಕ್ಕಳು ಕ್ರಮೇಣ ಸೋಮಾರಿಗಳಾಗಿ, ಧ್ಯೇಯರಹಿತ ಜೀವನದ ಕೆಸರಿನಲ್ಲಿ ಬಿದ್ದು ಅಲ್ಪರಾಗುತ್ತಾರೆ. ವ್ಯಕ್ತಿ ತನಗೆ ತಾನೇ ಎಷ್ಟೇ ಉನ್ನತಸತ್ತ್ವನಾಗಿದ್ದರೂ ಸಾಮಾಜಿಕ ಅರ್ಥವ್ಯವಸ್ಥೆ ಶೋಷಣಾತ್ಮಕವಾದಾಗ ಅದರಿಂದ ಅವನೂ ಪಾರಾಗಲಾರದೆ ಅವನ ಭಾವೀ ಸಂತಾನವೆಲ್ಲ ವ್ಯರ್ಥಜೀವಿಗಳಾಗಿ ಪತನಗೊಳ್ಳುತ್ತಾರೆಂಬುದನ್ನೂ ಈ ಕಾದಂಬರಿಯಲ್ಲಿ ಸಾಂಕೇತಿಸಲಾಗಿದೆ. ಗಾರ್ಕಿಯ ಕಡೆಯ ಮತ್ತು ಬಹು ದೊಡ್ಡ ಕೃತಿಯಾದ ಕ್ಲಿಂ ಸಾಮ್ಗಿನ್ನನ ಜೀವನ - ಎಂಬುದು ಒಬ್ಬ ವ್ಯಕ್ತಿ ಹೇಗೆ ತನ್ನ ಸ್ವಪ್ರತಿಷ್ಠೆ ಮತ್ತು ಅಲ್ಪತೆಯಿಂದ ಅರಿವಿಲ್ಲದೆಯೆ ತನ್ನ ಜೀವನವನ್ನು ವಿಷಪುರಿತವನ್ನಾಗಿ ಮಾಡಿಕೊಳ್ಳುತ್ತಾನೆ ಎಂಬುದನ್ನು ಕುರಿತದ್ದು. 1880ರಿಂದ 1917ರ ವರೆಗಿನ ಅವಧಿಯ ರಷ್ಯದ ವಿಸ್ತೃತ ದೃಶ್ಯವನ್ನು ನೀಡುವ ಈ ಕಾದಂಬರಿಯ ನಾಯಕ ಕ್ಲಿಂ ಸಾಮ್ಗಿನ್. ಇವನೊಬ್ಬ ವಿಷಯ ಲಂಪಟ, ಸ್ವಪ್ರತಿಷ್ಠೆಯಿಂದ ಕೂಡಿದ ವಕೀಲ. ಇವನದು ಬಾಲ್ಯದಿಂದಲೂ ಯಾವ ಮಾತಿಗೂ ಸಿಕ್ಕಿಬೀಳದ, ಯಾವ ತತ್ವಕ್ಕೂ ತೆಕ್ಕೆಬೀಳದ ಯಾವ ಪ್ರಶ್ನೆಗೂ ಖಚಿತ ಉತ್ತರ ನೀಡದ ಪ್ರಕೃತಿ. ಸದಾ ತಾನು ಅನಾಥರಕ್ಷಕನೆಂದು ಬಡಾಯಿ ಕೊಚ್ಚುತ್ತಿರುತ್ತಾನೆ. ಆದರೆ ಇವನ ಜೀವನದ ಆಧಾರ ಶ್ರೀಮಂತರ ನೆರವು. ಇವನು ಹುಟ್ಟು ಗೋಸುಂಬೆ, ಸ್ವಾರ್ಥಿ. ಯಾವಾಗಲೂ ತನ್ನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾನೆ. ತಾನು ಎಲ್ಲರ ಪಕ್ಷಪಾತಿಯೆಂದು ನಟಿಸುತ್ತಾನೆ. ಆದರೆ ಯಾರ ಸಹಾಯಕ್ಕೂ ಒಂದು ಹುಲ್ಲುಕಡ್ಡಿಯನ್ನೂ ಎತ್ತುವುದಿಲ್ಲ. ಎಂಥ ಸನ್ನಿವೇಶಕ್ಕಾದರೂ ಹೊಂದಿಕೊಳ್ಳುವ ಚಾತುರ್ಯ ಇವನಲ್ಲಿದೆ. ಆದರೆ ಇವನಲ್ಲಿ ಮಾನವೀಯತೆ ಎಳ್ಳಷ್ಟೂ ಕಾಣುವುದಿಲ್ಲ. ಇವನ ನಿತ್ಯಜೀವನ ಕಪಟ ಮತ್ತು ಮೋಸದಿಂದ ತುಂಬಿದೆ. ಗಾರ್ಕಿ ಈ ಕಾದಂಬರಿಯ ಮೂಲಕ ಪ್ರತಿಗಾಮಿ ಶಕ್ತಿಗಳ ವಿರುದ್ಧವಾದ ಮಹತ್ತರವಾದ ಹೋರಾಟ ನಡೆಸಿದ್ದಾನೆ. ಬಂಡವಾಳ ಅರ್ಥವ್ಯವಸ್ಥೆಯಲ್ಲಿ ಮಾನವ ಎಷ್ಟು ಕೀಳುಮಟ್ಟವನ್ನು ತಲುಪಬಲ್ಲ ಎಂಬುದನ್ನು ಕುರಿತ ಇಂಥ ಇನ್ನೊಂದು ಕಾದಂಬರಿ ಇದುವರೆಗೂ ಪ್ರಾಯಶಃ ರಚಿತವಾಗಿಲ್ಲ.

ರಾಜಕೀಯ ಸಾಹಿತಿಯಾಗಿ

[ಬದಲಾಯಿಸಿ]

ಗಾರ್ಕಿ ಕೇವಲ ಸಾಹಿತಿಯಾಗಿಯೇ ಉಳಿಯಲಿಲ್ಲ. ತನ್ನ ಕಾಲದ ರಾಜಕೀಯ ಪ್ರಶ್ನೆಗಳನ್ನು ಕುರಿತು ಅನೇಕ ಉಜ್ಜ್ವಲ ಲೇಖನಗಳನ್ನು ಪ್ರಾವ್ಡಾ ಮತ್ತು ಇಜಂವೆಸ್ತಿಯಾ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾನೆ. ರಾಜಕೀಯ ಹೋರಾಟದಲ್ಲಿ ಭಾಗವಹಿಸಿದ್ದಾನೆ. 1905ರ ಜನವರಿ ಒಂಬತ್ತರಂದು ನಡೆದ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾದ ಗಾರ್ಕಿ ಅದನ್ನು ಖಂಡಿಸಿದ್ದಾನೆ. ಇದಕ್ಕಾಗಿ ಗಾರ್ಕಿಯನ್ನು ಬಂಧಿಸಿ ಗಡೀಪಾರು ಮಾಡಿದರು. ಜಾರ್ ಸರ್ಕಾರದ ಈ ಕೃತ್ಯ ಯುರೋಪನ್ನೆಲ್ಲ ಕದಡಿತು. ಯುರೋಪಿನ ಎಲ್ಲ ನಗರಗಳಲ್ಲೂ ಇದರ ವಿರುದ್ಧ ಸಭೆಗಳು ನಡೆದವು. ಫ್ರೆಂಚ್ ಮಹಾ ಸಾಹಿತಿ ಅನತೋಲ್ ಫ್ರಾನ್ಸ್ ಗಾರ್ಕಿಯಂಥ ಮನುಷ್ಯ ಪ್ರಪಂಚಕ್ಕೆ ಸೇರಿದವನು, ಪ್ರಪಂಚವೆಲ್ಲ ಅವನ ಸಹಾಯಕ್ಕಾಗಿ ಏಳಬೇಕು - ಎಂದು ಘೋಷಿಸಿದ. ಗಾರ್ಕಿ 1906-1913ರ ವರೆಗೆ ವಿದೇಶಗಳಲ್ಲಿ ವಾಸಿಸಿದ. ಇವನು 1921 ರಿಂದ 1928ರ ವರೆಗೆ ಇಟಲಿಯಲ್ಲಿ ವಾಸಿಸುತ್ತಿದ್ದ. ರಷ್ಯಕ್ಕೆ ಹಿಂತಿರುಗಿದ ಅನಂತರ ರಷ್ಯದ ಲೇಖಕರ ನಿರ್ವಿವಾದ ನಾಯಕನಾದ. 1934ರಲ್ಲಿ ಸೋವಿಯಟ್ ಲೇಖಕರ ಒಕ್ಕೂಟ ಸ್ಥಾಪನೆಯಾದಾಗ ಪ್ರಥಮ ಅಧ್ಯಕ್ಷನಾದ. ಇವನು 1936ರ ಜೂನ್ 14ರಂದು ನಿಷ್ನಿನೊವ್ಗೊರಾಡ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವಾಗಲೇ ನಿಧನ ಹೊಂದಿದ.

ಅಂಟೋನ್ ಚೆಕೋವ್ಮತ್ತು ಗಾರ್ಕಿ. 1900, ಯಾಲ್ಟ

ಗಾರ್ಕಿ ಸಾಮಾಜಿಕ ಕಾದಂಬರಿಗಳನ್ನು ರಚಿಸಿದ ಸಾಹಿತಿ ಮಾತ್ರವಲ್ಲ. ಅವನ ಉದ್ದೇಶ ಸಮಾಜದ ಭವಿಷ್ಯವನ್ನು ರೂಪಿಸುವ ಹಲವಾರು ಕಾರ್ಯವಿಶೇಷಗಳನ್ನೂ ನಿರೂಪಿಸುವುದು. ಈತ ಸಾಹಿತ್ಯರಂಗವನ್ನು ಪ್ರವೇಶಿಸಿದ ಕಾಲದಲ್ಲಿ ಬರೆಹಗಾರರು ಜನತೆಯನ್ನು ಕರುಣಮಿಶ್ರಿತ ಸಹಾನುಭೂತಿಯಿಂದ ನಿರೂಪಿಸುವುದು ವಾಡಿಕೆಯಾಗಿತ್ತು. ಗಾರ್ಕಿ ಈ ಮಾರ್ಗವನ್ನು ಸಂಪುರ್ಣವಾಗಿ ತ್ಯಜಿಸಿ ಜನತೆ ತಮ್ಮ ಕತೆಯನ್ನು ತಾವೇ ಹೇಳಿದರೆ ಯಾವ ರೀತಿ ಇರುತ್ತದೋ ಆ ರೀತಿಯಲ್ಲಿ ತನ್ನ ಕೃತಿಗಳನ್ನು ರಚಿಸಿದ. ಶುದ್ಧಕಲೆಯ ತತ್ತ್ವಗಳನ್ನು ಗಾರ್ಕಿ ಒಪ್ಪಲಿಲ್ಲ. ಅಂದಿನ ರಷ್ಯದ ಭಯಂಕರ ಅನಾಗರಿಕ ಸಮಾಜವನ್ನು ಕಟುವಾಗಿ ಟೀಕಿಸಿ ತನ್ಮೂಲಕ ರಷ್ಯದ ಜನತೆಯಲ್ಲಿ ತನಗಿದ್ದ ಉಜ್ಜ್ವಲ ವಿಶ್ವಾಸವನ್ನು ಗಾರ್ಕಿ ಪ್ರಕಟಿಸಿದ್ದಾನೆ. ಕಷ್ಟಕಾರ್ಪಣ್ಯಗಳಿಂದ ತುಂಬಿದ ನೀರಸ ಜೀವನವನ್ನು ಪ್ರತಿಭಟಿಸಿ ನಿರೋಧಿಸುವ ಸಲುವಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿರುವುದಾಗಿ ಗಾರ್ಕಿ ಹೇಳಿಕೊಂಡಿದ್ದಾನೆ. ಗಾರ್ಕಿಗೆ ಮಾನವನಲ್ಲಿ ಹಾಗೂ ಅವನಲ್ಲಿ ಅಡಗಿರುವ ಅದ್ಭುತ ಕ್ರಿಯಾಶಕ್ತಿಯಲ್ಲಿ ಅಚಲವಾದ ನಂಬಿಕೆಯಿತ್ತು. ತಾನು ಹೇಳಬೇಕಾದುದನ್ನು ಗಾರ್ಕಿ ಎಂದಿಗೂ ಹೇಳದೆ ಇರುತ್ತಿರಲಿಲ್ಲ; ಅಥವಾ ಹೇಳುವಾಗ ಅದನ್ನು ಅಸ್ಪಷ್ಟವಾಗಿ ಅನ್ಯೋಕ್ತಿಗಳ ಸಹಾಯದಿಂದ ಮಸುಕುಮಸುಕಾಗಿ ಹೇಳುತ್ತಿರಲಿಲ್ಲ. ಈತನ ಭಾವನೆಗಳು ಸದಾ ಪರಿಶುದ್ಧ ಮತ್ತು ಶಕ್ತಿಯುತವಾಗಿರುತ್ತಿದ್ದುವು. ವಿಚಾರಧಾರೆ ಪ್ರಸ್ತುತ ಹಾಗೂ ಭವಿಷ್ಯದ ಇತಿಹಾಸಗಳ ಮೇಲೆ ಆಧಾರಿತವಾಗಿರುತ್ತಿತ್ತು. ಮನಃಪಟಲದಲ್ಲಿ ಈ ಯುಗದ ಸಮಸ್ಯೆಗಳು ಮತ್ತು ಭಾವನೆಗಳು ತುಂಬಿರುತ್ತಿದ್ದವು.

ವೈಶಿಷ್ಟ್ಯಪೂರ್ಣ ಬರಹಗಾರ

[ಬದಲಾಯಿಸಿ]

ಗಾರ್ಕಿ ಒಂದು ಅರ್ಥದಲ್ಲಿ ವಿಶಿಷ್ಟ ರೀತಿಯ ಬರೆಹಗಾರ. ತನ್ನ ಬರೆಹಗಳಲ್ಲಿ ಇವನು ರಷ್ಯದ ಸಾಹಿತ್ಯದಲ್ಲಿ ಪರಿಪಕ್ವವಾಗುತ್ತ ಬಂದಿದ್ದ ಎಲ್ಲ ಪ್ರಗತಿಶೀಲ ಭಾವನೆಗಳನ್ನೂ ವಿಚಾರಧಾರೆಯನ್ನೂ ಮೂರ್ತೀಭವಿಸಿಕೊಂಡು ಅದರ ಮುನ್ನಡೆಗೆ ಕಾರಣನಾದ. ಪುಷ್ಕಿನ್ನಿಂದ ಈಚೆಗೆ ಯಾವ ರಷ್ಯನ್ ಬರೆಹಗಾರನೂ ಇವನಂತೆ ಜೀವನದಲ್ಲಿ ಆಸಕ್ತಿಯನ್ನು ಪ್ರದರ್ಶಿಸಲಿಲ್ಲ. ಮಾನವನ ಜೀವನವನ್ನು ಸುಖಮಯವನ್ನಾಗಿ ಮಾಡಲು ಅವರನ್ನು ಸಂಘಟಿಸಲು, ಕ್ರಿಯಾಶೀಲರನ್ನಾಗಿ ಮಾಡಲು ಗಾರ್ಕಿ ತನ್ನ ಲೇಖಣಿಯನ್ನು ಉಪಯೋಗಿಸಿದ. ಇದಕ್ಕಿಂತ ಹೆಚ್ಚಾಗಿ ನೇರವಾಗಿ ಜನಗಳಿಂದ, ಕಾರ್ಮಿಕ ಚಳವಳಿಯಿಂದ, ಲೆನಿನ್ನನಿಂದ ಪಡೆದುಕೊಂಡ ನವೀನ ಭಾವನೆಗಳಿಂದ ರಷ್ಯದ ಸಾಹಿತ್ಯವನ್ನು ಸಂಪದ್ಭರಿತವಾಗಿ ಮಾಡಿದುದಲ್ಲದೆ ಜನತೆಯ ಕ್ರಾಂತಿಗರ್ಭದಲ್ಲಿ ಜನ್ಮತಾಳಿದ ಈ ಭಾವನೆಗಳನ್ನು ಲೇಖನಗಳಲ್ಲಿ, ಕಾದಂಬರಿಗಳಲ್ಲಿ, ನಾಟಕಗಳಲ್ಲಿ ಮತ್ತು ಕಥೆಗಳಲ್ಲಿ ಅಭಿವೃದ್ಧಿಗೊಳಿಸಿದ; ಹಿಂದಿನ ಯಾವ ಬರೆಹಗಾರನೂ ತೋರದಿದ್ದ ರೀತಿಯಲ್ಲಿ ಸಮಾಜವಾದಿ ನವೀಕರಣದ ಅವಶ್ಯಕತೆಯನ್ನು ತೋರಿಸಿಕೊಟ್ಟ. ಹೀಗೆ ಸಾಹಿತ್ಯದಲ್ಲಿ ಸಮಾಜವಾದಿ ವಾಸ್ತವತೆಯ ನಿರೂಪಣೆಯ ಸ್ಥಾಪಕನಾದ ಗಾರ್ಕಿಯನ್ನು ಹೊಸ ರಷ್ಯನ್ ಸಾಹಿತ್ಯದ ಪಿತನೆಂದು ಗೌರವಿಸುವುದು ಸ್ವಾಭಾವಿಕವೇ ಆಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  • The most popular books of Maxim Gorky in the original Russian Daningrad