ವಿಷಯಕ್ಕೆ ಹೋಗು

ಮೊರಾಕೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮೊರಾಕ್ಕೋ ಇಂದ ಪುನರ್ನಿರ್ದೇಶಿತ)
ಮೊರಾಕೊ ರಾಜ್ಯ
المملكة المغربية
ಅಲ್-ಮಮ್ಲಾಕ ಅಲ್-ಮಘ್ರಿಬಿಯ್ಯ
ತಗ್ಲದಿತ್ ನ್ ಲ್ಮೆಘ್ರಿಭ್
Royaume du Maroc
Motto: "Allāh, al Waţan, al Malik"
"ದೇವರು, ದೇಶ, ರಾಜ"
Anthem: Hymne Chérifien
ಪಟ್ಟೆ ಹಾಕಿರುವ ಪ್ರದೇಶ ಪಶ್ಚಿಮ ಸಹಾರ ಅನ್ನು ತೋರಿಸುತ್ತದೆ.
ಪಟ್ಟೆ ಹಾಕಿರುವ ಪ್ರದೇಶ ಪಶ್ಚಿಮ ಸಹಾರ ಅನ್ನು ತೋರಿಸುತ್ತದೆ.
Capitalರಬತ್
Largest cityಕ್ಯಾಸಬ್ಲಾಂಕ
Official languagesಅಧಿಕೃತವಾಗಿ: ಅರಬಿಕ್[]
ಇತರ: ಫ್ರೆಂಚ್1
Demonym(s)Moroccan
Governmentಸಾಂವಿಧಾನಿಕ ಚಕ್ರಾಧಿಪತ್ಯ
• ರಾಜ
ಆರನೇ ಮೊಹಮ್ಮದ್
ಅಬ್ಬಾಸ್ ಎಲ್ ಫಸ್ಸಿ
ಸ್ವಾತಂತ್ರ್ಯ
• ಫ್ರಾನ್ಸ್ ಇಂದ
ಮಾರ್ಚ್ ೨, ೧೯೫೬
• ಸ್ಪೇನ್ ಇಂದ
ಏಪ್ರಿಲ್ ೭, ೧೯೫೬
• Water (%)
250km²
Population
• 2007 estimate
33,757,175 (37th)
GDP (PPP)೨೦೦೬ estimate
• Total
$152.5 billion (54th)
• Per capita
$4,600 (109th)
HDI (2004)Increase 0.640
Error: Invalid HDI value · 123rd
Currencyಮೊರಾಕೊದ ಡಿರ್ಹಾಮ್ (MAD)
Time zoneUTC+0 (UTC)
Calling code212
Internet TLD.ma
  1. French is equally used as an administrative language though not on an official basis. Moroccan Arabic, an Arabic vernacular is the most common native language. Amazigh is also widely spoken.
*All data excludes Western Sahara, much of which is under Moroccan de facto administrative control.

ಮೊರಾಕೊ (المغرب), ಅಧಿಕೃತವಾಗಿ ಮೊರಾಕೊ ರಾಜ್ಯ[] (المملكة المغربية), ಉತ್ತರ ಆಫ್ರಿಕಾದ ಒಂದು ದೇಶ. ಅದು ಆಫ್ರಿಕ ಖಂಡದ ವಾಯುವ್ಯದಲ್ಲಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಕ್ಕೊಡ್ಡುವ ಈ ದೇಶದ ಕರಾವಳಿ, ಉತ್ತರದಲ್ಲಿ ಮೆಡಿಟೆರೇನಿಯನ್ ಸಮುದ್ರದವರೆಗೆ ಹರಡಿದೆ. ಇದರ ದಕ್ಷಿಣಕ್ಕೆ ಮೌರಿಟೇನಿಯ, ಪೂರ್ವಕ್ಕೆ ಅಲ್ಜೀರಿಯ ಮತ್ತು ಉತ್ತರಕ್ಕೆ ಜಿಬ್ರಾಲ್ಟಾರ್ ಸ್ಟ್ರೈಟ್ ಆಚೆಗೆ ಸ್ಪೇನ್ ದೇಶಗಳಿವೆ. ಸ್ಪೇನ್ ದೇಶದ ಎರಡು ನಗರಗಳು ಚ್ಯುಟ ಮತ್ತು ಮೆಲಿಲ್ಲ ಆಫ್ರಿಕಾದ ಖಂಡಭೂಮಿಗೆ ಸೇರಿದ್ದು, ಮೊರಾಕೊ ಇವನ್ನು ಸುತ್ತುವರೆದಿದೆ.[]

ಉತ್ತರದಲ್ಲಿ ಜಿûಬ್ರಾಲ್ಟರ್ ಜಲಸಂಧಿ, ವ್ಯಾಯುವ್ಯದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ, ಈಶಾನ್ಯದಲ್ಲಿ ಮೆಡಿಟರೇನಿಯನ್ ಸಮುದ್ರ; ಪೂರ್ವ ಆಗ್ನೇಯ ಮತ್ತು ದಕ್ಷಿಣದಲ್ಲಿ ಆಲ್ಜೀರಿಯ, ನೈಋತ್ಯದಲ್ಲಿ ಸ್ಪ್ಯಾನಿಷ್ ಸಹರ ಪ್ರದೇಶ ಸುತ್ತುವರಿದಿದೆ. 1876 ರಲ್ಲಿ ಸೇರ್ಪಡೆಯಾದ ಸ್ಪ್ಯಾನಿಷ್ ಸಹರದ ವಿಸ್ತೀರ್ಣ 252, 120 ಚಕಿಮೀ ಹಾಗೂ ಈ ಪ್ರದೇಶದ ಜನಸಂಖ್ಯೆ 163,868 (1982). ಇದನ್ನು ಬಿಟ್ಟು ಮೊರಾಕೋ ಈ ಪ್ರದೇಶದ ವಿಸ್ತೀರ್ಣ 4,58,730 ಚಕಿಮೀ ಮತ್ತು ಜನಸಂಖ್ಯೆ 2,70,50,000 (1997). ಪೂರ್ವ - ಪಶ್ಚಿಮವಾಗಿ 1.223 ಚಕೀಮಿ ಮತ್ತು ಉತ್ತರ ದಕ್ಷಿಣವಾಗಿ 703 ಚಕಿಮೀ ಇದ್ದು ಅಟ್ಲಾಂಟಿಕ್ ಸಾಗರದ 985 ಕಿಮೀ ಮತ್ತು ಮೆಡಿಟರೇನಿಯನ್ ಸಮುದ್ರದ 377 ಕಿಮೀ ತೀರಪ್ರದೇಶ ಹೊಂದಿದೆ. ರಾಜಧಾನಿ ರೆಬಾತ್.

ಮೇಲ್ಮೈ ಲಕ್ಷಣ

[ಬದಲಾಯಿಸಿ]

ಮೊರಾಕೋದ ಬಹುಭಾಗ ಪ್ರಸ್ಥಭೂಮಿ ಪ್ರದೇಶ. ಸರಾಸರಿ ಎತ್ತರ 806 ಮೀ. ಈ ಪ್ರಸ್ಥಭೂಮಿಯ ಉತ್ತರದಲ್ಲಿ ಆರ್‍ರಿಫ್ ಪರ್ವತ ಶ್ರೇಣಿ ಪ್ರದೇಶವಿದೆ. ಮೋರಾಕೋವನ್ನು ಹೆಚ್ಚಾಗಿ ವ್ಯಾಪಿಸಿರುವ ಅಟ್ಲಾಸ್ ಪರ್ವತ ಶ್ರೇಣಿಯಿದೆ. ಇವು ಪೂರ್ವ ಮೊರಾಕೋವನ್ನು ವಾಯುವ್ಯ ಮೊರಾಕೋವಿನಿಂದ ಮತ್ತು ಅಟ್ಲಾಂಟಿಕ್ ತೀರದಿಂದ ಬೇರ್ಪಡಿಸುತ್ತದೆ. ಈ ಪೂರ್ವ ಮೊರಾಕೋ ಮತ್ತು ಅಟ್ಲಾಂಟಿಕ್ ಮೊರಾಕೋ ನಡುವೆ ದುರ್ಗಮ ಪರ್ವತ ಶ್ರೇಣಿಯಿದ್ದು ಈಶಾನ್ಯ ಭಾಗದಲ್ಲಿರುವ ಕಿರಿದಾದ ತಾಜ್ ಕಣಿವೆಯೊಂದೇ ಈ ಪರ್ವತ ಶ್ರೇಣಿಗಳ ನಡುವಿನ ಮಾರ್ಗವಾಗಿದೆ. ಆರ್‍ರಿಫ್ ಪರ್ವತ ಶ್ರೇಣಿ ಯುರೋಪಿನ ಐಬೀರಿಯನ್ ಪರ್ಯಾಯ ದ್ವೀಪದಿಂದ ದಕ್ಷಿಣಾಭೀಮುಖವಾಗಿ ಹಬ್ಬಿರುವ ಸಂಕೀರ್ಣ ಪರ್ವತ ವಲಯದ ಒಂದು ಭಾಗ. ಮುಂದೆ ಭೌಗೋಳಿಕವಾಗಿ ಬದಲಾವಣೆಗಳುಂಟಾಗಿ ಆಫ್ರಿಕ ಮತ್ತು ಯುರೋಪುಗಳು ಪ್ರತ್ಯೇಕಗೊಂಡಾಗ ಈ ಪರ್ವತ ಶ್ರೇಣಿಯ ಅವಿರತತೆ ಕಡಿದು ಹೋಯಿತು. ಸುಣ್ಣ ಕಲ್ಲಿನ ಅತ್ಯಂತ ಎತ್ತರವುಳ್ಳ ಶಿಖರವನ್ನು ಗ್ರಾಂಡ್ ಅಟ್ಲಾಸ್ ಪರ್ವತ ಶ್ರೇಣಿಯಲ್ಲಿ ಕಾಣಬಹುದು. ಈ ಪರ್ವತ ಪ್ರದೇಶಗಳಲ್ಲಿ ಆಗಾಗ ಭೂಕಂಪನಗಳು ಸಂಭವಿಸುತ್ತದೆ. ಇಲ್ಲಿಯ ಅಟ್ಲಾಸ್ ಪರ್ವತ ಮೂರು ಪ್ರತ್ಯೇಕ ಶ್ರೇಣಿಗಳಿಂದ ಕೂಡಿದೆ. ಈ ಪೈಕಿ ಹೈ ಅಟ್ಲಾಸ್ 736 ಕಿಮೀ ಉದ್ದವಿರುವ ಮತ್ತು ಅತಿ ಎತ್ತರದ ಶ್ರೇಣಿ, ಇದು ಅಟ್ಲಾಂಟಿಕ್ ತೀರದಂಚಿನಿಂದ ಸಣ್ಣಗುಡ್ಡಗಳೋಪಾದಿಯಲ್ಲಿ ಪ್ರಾರಂಭವಾಗಿ ಇದ್ದಕ್ಕಿದ್ದಂತೆ 2015 ಮೀ ಎತ್ತರದವರೆಗೆ ಏರಿ ಮುಂದುವರಿದು ಅತ್ಯುನ್ನತ ಎತ್ತರ 4,615 ಮೀ ಮುಟ್ಟುತ್ತದೆ. ಮಧ್ಯ ಅಟ್ಲಾಸ್ ಹೈ ಅಟ್ಲಾಸ್‍ನಿಂದ ಕವಲೊಡೆದು ಉತ್ತರಾಭಿಮುಖವಾಗಿ ಹಬ್ಬಿ 3,290 ಮೀ ಮುಟ್ಟಿದೆ. ದಕ್ಷಿಣದ ಕವಲು ಹೈ ಅಟ್ಲಾಸ್‍ನಿಂದ ನೈಋತ್ವಾಭಿಮುಖವಾಗಿ ಹಬ್ಬಿ ಅಟ್ಲಾಂಟಿಕ್ ಸಾಗರದ ಕಡೆಗೆ ಚಾಚಿಕೊಂಡಿದೆ. ಅಟ್ಲಾಸ್‍ನಿಂದ ಪೂರ್ವಕ್ಕೆ ಪೂರ್ವ ಮೊರಾಕೊವಿನ ಎತ್ತರದ ಪ್ರಸ್ಥಭೂಮಿಗಳು ಇವೆ. ಒಳನಾಡಿನ ಬಯಲುಗಳು ಚಿಕ್ಕವಾಗಿವೆ. ಸುಮಾರು 217 ಮೀ ಎತ್ತರವಿರುವ ತೀರ ಪ್ರದೇಶದ ಪ್ರಸ್ಥಭೂಮಿ ರಬಾತ್‍ನಿಂದ ಎತ್ತರ ಕುಗ್ಗುತ್ತ ಹೋಗುತ್ತದೆ. ಕೊನೆಗೆ ಅದು ಸಹರಾ ಅಟ್ಲಾಸ್ ಎಂದು ಕರೆಸಿಕೊಂಡು ಆಲ್ಜೀರಿಯಾದಲ್ಲಿ ಮುಂದುವರಿಯುತ್ತದೆ.

ನದಿಗಳು

[ಬದಲಾಯಿಸಿ]

ಮುಲೂಯ ಮೊರಾಕೋದ ಮುಖ್ಯ ನದಿ. ಪೂರ್ವ ಮೊರಾಕೋವಿನ ಸಹರಾ ಪ್ರದೇಶದಲ್ಲಿ ಡೆಡೆಸ್ ರ್ಹೆರಿಸ್, ಜಿಜ್ ಮತ್ತು ಗೀರ್ ನದಿಗಳು ಹರಿಯುತ್ತವೆ. ಇವೆಲ್ಲ ಹೈ ಅಟ್ಲಾಸ್‍ನಲ್ಲಿ ಹುಟ್ಟುತ್ತವೆ. ಅವು ಈ ಪರ್ವತ ಭಾಗದಲ್ಲಿ ರಮಣೀಯ ಕಣಿವೆಗಳನ್ನುಂಟುಮಾಡಿವೆ. ಮುಂದೆ ಅವು ಮರುಭೂಮಿಯಲ್ಲಿ ಇಂಗಿಹೋಗುತ್ತದೆ.

ಮುಲೂಯ ನದಿ ಮಧ್ಯ ಅಟ್ಲಾಸ್‍ನಲ್ಲಿ ಹುಟ್ಟಿ ಸುಮಾರು 515 ಕಿಮೀ ದೂರ ಹರಿದು ಮೆಡಿಟರೇನಿಯನ್ ಸಮುದ್ರ ಸೇರುತ್ತದೆ. ಅರ್‍ರಿಫ್ ಪರ್ವತ ಶ್ರೇಣಿಯಲ್ಲಿ ಲೋನ್ ರ್ಹಿಸ್ ಮೊದಲಾದ ತೊರೆಗಳಿವೆ. ಪಶ್ಚಿಮ ಅರ್‍ರಿಫ್‍ನಲ್ಲಿ ಹುಟ್ಟುವ ಲಾಕಸ್, ಅಟ್ಲಾಂಟಿಕ್ ಸಾಗರವನ್ನು ಲರಾಸ್ ಬಳಿ ಸೇರುತ್ತದೆ. ಸೀಬೊ ನದಿ ಮ್ಹೆದಿಯಾ ಬಳಿ ಸಾಗರ ಸೇರುತ್ತದೆ.

ವಾಯುಗುಣ

[ಬದಲಾಯಿಸಿ]

ಮೊರಾಕೋದ ತೀರಪ್ರದೇಶದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡರೆ ಉಳಿದಂತೆ ಸಮಶೀತೋಷ್ಣ ವಾಯುಗುಣ ಹೊಂದಿದೆ. ಪಶ್ಚಿಮದ ಮಾರುತಗಳು ವರ್ಷದ ಬಹುಕಾಲ ಬೀಸುತ್ತಿದ್ದು ಅದು ವಾಯುಗುಣ ಬದಲಾವಣೆಗೆ ಮತ್ತು ಅನಿಯತ ಮಳೆ ಬೀಳುವುದಕ್ಕೆ ಕಾರಣವಾಗಿದೆ. ಬೇಸಗೆಯಲ್ಲಿ ಸೌಮ್ಯ ಹವೆ ಇರುತ್ತದೆ. ಇದಕ್ಕೆ ಕ್ಯಾನರಿ ದ್ವೀಪಗಳ ಕಡೆಯಿಂದ ಆಗ್ನೇಯಕ್ಕೆ ಹರಿಯುವ ಶೀತಸಾಗರ ಪ್ರವಾಹ ಸಹಾಯಕವಾಗಿದೆ. ಒಳಪ್ರದೇಶಕ್ಕೆ ಬಂದಂತೆಲ್ಲ ಖಂಡಾಂತರ ವಾಯುಗುಣ ಕಂಡುಬರುತ್ತದೆ. ಕೆಲವೊಮ್ಮೆ ಅಪರೂಪವಾಗಿ ಮೂಡಲಗಾಳಿ ಬೀಸುತ್ತದೆ. ಈ ಮರಳುಗಾಡಿನ ಮಾರುತ ಬೀಸಿದಾಗ ಉಷ್ಣತೆ 350ಅ ಯಿಂದ 400ಅ ಗೆ ಏರುತ್ತದೆ. ತೀರ ಪ್ರದೇಶದ ಟ್ಯಾನ್ ಜೀರ್‍ನಲ್ಲಿ 120ಅ ಜನವರಿಯಲ್ಲಿದ್ದರೆ ಆಗಸ್ಟ್‍ನಲ್ಲಿ 240ಅ ಇರುತ್ತದೆ. ಅದೇ ತಿಂಗಳುಗಳಲ್ಲಿ ಕಾಸಬ್ಲಾಂಕದಲ್ಲೂ ಸುಮಾರಾಗಿ ಅಷ್ಟೇ ಉಷ್ಣತೆ ಇರುತ್ತದೆ. ಒಳನಾಡಿನ ಕೆಲವು ಪ್ರದೇಶಗಳಲ್ಲಿ ಉಷ್ಣತಾ ವ್ಯತ್ಯಾಸ ಹೆಚ್ಚು. ಪರ್ವತ ಪ್ರದೇಶಗಳಲ್ಲಿ ಕೆಲವೊಮ್ಮೆ - 200ಅ ಯಷ್ಟು ಉಷ್ಣತೆ ಕುಗ್ಗಿರುತ್ತದೆ.

ಮಳೆಗಾಲದ ಅವಧಿ ನವಂಬರ್‍ನಿಂದ ಜನವರಿ ತನಕ, ಕೆಲವೊಮ್ಮೆ ಮಾರ್ಚ್ ತನಕವೂ ಮಳೆ ಬರುವುದುಂಟು. ಉತ್ತರದ ಅರ್‍ರಿಫ್ ಮತ್ತು ಮೊಮೆಸ್ ಅಟ್ಲಾಸ್‍ಗಳಲ್ಲಿ ವಾರ್ಷಿಕ ಸರಾಸರಿ ಮಳೆ 119 ಸೆಂಮೀ ದಕ್ಷಿಣದ ಕಡೆ ಅಟ್ಲಾಸ್‍ವರೆಗೆ ಕೇವಲ 20-25 ಸೆಂಮೀ ಮಳೆಬೀಳುವ ಪ್ರದೇಶಗಳಿವೆ. 2015 ಮೀ ಎತ್ತರದ ಪರ್ವತಗಳಲ್ಲಿ ಮಂಜು ಬೀಳುತ್ತದೆ. ಉತ್ತರದ ಅಟ್ಲಾಂಟಿಕ್ ಬಯಲುಗಳಲ್ಲು 40-ಸೆಂಮೀವರಗೆ ಮಳೆಬೀಳುವ ಪ್ರದೇಶಗಳಿವೆ.

ಸಸ್ಯ ಮತ್ತು ಪ್ರಾಣಿಸಂಪತ್ತು

[ಬದಲಾಯಿಸಿ]

ಇಲ್ಲಿಯ ಸಸ್ಯವರ್ಗ ಪಶ್ಚಿಮ ಮೆಡಿಟರೇನಿಯನ್ ಮಾದರಿಯದು. ಪರ್ವತ ಪ್ರದೇಶಗಳಲ್ಲಿ ಸೀಡರ್, ಫರ್ ಮತ್ತು ಜೂನಿಪರ್ ಮರಗಳಿವೆ. ದಕ್ಷಿಣಕ್ಕೆ ಉಷ್ಣವಲಯದ ಅರ್ಗನ್ ಮರಗಳು ವ್ಯಾಪಕವಾಗಿವೆ. ಕಾರ್ಕ್, ಓಕ್ ಮರಗಳು, ರಿವ್ ಮತ್ತು ರ್ಹಾರ್ಬ್ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ಮುಲೂಯ ಕಣಿವೆ ಮತ್ತು ಸೂಸ್‍ನ ಎತ್ತರದ ಪ್ರದೇಶಗಳಲ್ಲಿ ಪೈನ್ ಜಾತಿಯ ಥೂಜ ಮರಗಳು ಹೆಚ್ಚಾಗಿವೆ.

ಕಡಿಮೆ ಮಳೆಬರುವ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಕಾಡು ಆಲಿವ್ ಮತ್ತು ಮಾಸ್ಟ್ರಿಕ್ ಮರಗಳು ಕಂಡುಬರುತ್ತವೆ. ಬಯಲುಗಳ ಒಣಪ್ರದೇಶಗಳಲ್ಲಿ ಕುಳ್ಳಾದ ಪಾಮ್ ಮರಗಳಿವೆ. ತಡ್ಲ ಮತ್ತು ಹೌಜ್ ಪ್ರದೇಶಗಳಲ್ಲಿ ಜೂ ಜೂಬ್ ಎಂಬ ಹಣ್ಣು ಬಿಡುವ ಮರಗಳಿವೆ. ಮರುಭೂಮಿಯ ಉತ್ತರದ ಗಡಿಯಲ್ಲಿ ಅಟ್ಲಾಸ್‍ನ ಪೂರ್ವಕ್ಕೆ ದ್ರಾಕ್ಷಿ ಬೆಳೆ ಕಂಡುಬರುತ್ತದೆ.

ಒಂಟೆಗಳು ಮತ್ತು ಕುದುರೆಗಳು ಪ್ರಾಚೀನ ಕಾಲದಿಂದಲೂ ಇದೆ. ಸಿಂಹ ಮತ್ತು ಆನೆಗಳು ಇಲ್ಲಿ ಕಂಡುಬರುವುದಿಲ್ಲ. ಕಾಡುಕುರಿ, ಚಿಗರಿ, ಮೊದಲಾದ ಪ್ರಾಣಿಗಳು ಅಟ್ಲಾಸ್ ಪ್ರದೇಶದಲ್ಲಿವೆ. ಕರಾವಳಿಯಲ್ಲಿ ಹೇರಳ ಮತ್ಸ್ಯ ಸಂಪತ್ತಿದೆ. ಮೀನನ್ನು ಡಬ್ಬಿಗಳಲ್ಲಿ ತುಂಬಿ ರಫ್ತು ಮಾಡುತ್ತಾರೆ. ದನ ಮತ್ತು ಕುರಿಗಳನ್ನು ಸಾಕುತ್ತಾರೆ. ಸುಮಾರು 50.000 ಮಂದಿ ಮತ್ಸ್ಯೋದ್ಯಮಾವಲಂಬಿಗಳಾಗಿರುವರು. 1982 ರಲ್ಲಿ 4.13.999 ಟನ್ ಮೀನನ್ನು ಹಿಡಿಯಲಾಗಿತ್ತು.

ಆರ್ಥಿಕ ಸ್ಥಿತಿ

[ಬದಲಾಯಿಸಿ]

ದೇಶದಲ್ಲಿ ಖನಿಜ ಮತ್ತು ಜಲವಿದ್ಯುತ್ ಸಂಪನ್ಮೂಲಗಳು ಸಾಕಷ್ಟಿದ್ದರೂ ಇತರ ಕಾರಣಗಳ ಜೊತೆಗೆ ಇಲ್ಲಿಯ ಯೋಜನೆಗಳಲ್ಲಿ ಸಾಕಷ್ಟು ಯಶಸ್ಸು ಸಾಧಿಸಲಾಗದೆ ಆರ್ಥಿಕ ಪ್ರಗತಿ ಕುಂಠಿತವಾಗಿದೆ.

ಪ್ರಪಂಚದ ಒಟ್ಟು ಫಾಸ್ಫೇಟ್ ನಿಕ್ಷೇಪದ ಶೇಕಡಾ 40ರಷ್ಟು ಇಲ್ಲೇ ಇದ್ದು ಫಾಸ್ಫೇಟ್ ಉತ್ಪಾದಕ ರಾಷ್ಟ್ರಗಳಲ್ಲಿ ಮುಂದಾಗಿದೆ. ಅಂದಾಜು ನಿಕ್ಷೇಪ 57.200 ಮಿಲಿಯನ್ ಟನ್‍ಗಳು. 1982 ರಲ್ಲಿ 17.00 ಮಿಲಿಯನ್ ಟನ್ ಫಾಸ್ಫೇಟ್. 1.48.000 ಟನ್‍ಸೀಸ, 6.000 ಟನ್ ಕೊಬಾಲ್ಟ್, 22.000 ಟನ್ ಸತುವು, 94.000 ಟನ್ ಮ್ಯಾಂಗನೀಸ್, 27.000 ಟನ್ ಬೆಳ್ಳಿಯನ್ನು ಉತ್ಪಾದಿಸಲಾಗಿತ್ತು. 1978 ರಲ್ಲಿ ಒಟ್ಟು 28.29.284 ಮಿಲಿಯನ್ ಡರ್‍ಹ್ಯಾಮ್‍ಗಳ ಬೆಲೆಯ ಖನಿಜೋತ್ಪತ್ತಿಯಾಗಿತ್ತು. 1980 ರಲ್ಲಿ 48.000 ಟನ್ ಕ್ರೂಡ್ ಆಯಿಲ್ ಪಡೆಯಲಾಗಿತ್ತು. ಎಸೆವಿರದ ಬಳಿ ಸ್ವಾಭಾವಿಕ ಅನಿಲ ಪತ್ತೆಯಾಗಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಮುಖ್ಯ ಮೂಲ. 1982 ರಲ್ಲಿ 5077.4 ಮಿಲಿಯನ್ ಕೆವಿ ವಿದ್ಯುತ್ ಉತ್ಪಾದಿಸಲಾಗಿತ್ತು.

ಈ ದೇಶದ ಶೇಕಡಾ 70 ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿಯ ಮುಖ್ಯ ಬೆಳೆ ಗೋದಿ, ಬಾರ್ಲಿ; ಜೊತೆಗೆ ತಿಂಗಳ ಹುರುಳಿ ಕಡಲೆ, ಮೆಂತ್ಯ, ಕೊತ್ತುಂಬರಿ, ಜೀರಿಗೆ, ತೊಗರಿ ಹಾಗೂ ಇತರ ಕಾಳುಗಳು, ಹತ್ತಿ, ಕಬ್ಬು ಮೊದಲಾದವನ್ನೂ ಬೆಳೆಸುತ್ತಾರೆ. ಕಾಡುತಾಳೆ ಮರ ಎಲ್ಲೆಲ್ಲೂ ಕಂಡುಬಂದು ಬಹು ಉಪಯೋಗಿ ಎನಿಸಿದೆ. ಟಿಜ್ರ ಮರವನ್ನು ಚರ್ಮ ಹದಮಾಡಲು ಬಳಸುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ಇದೆ. ಕಾರ್ಕ್, ದೇವದಾರು ಮತ್ತು ಓಕ್ ಮರ, ಆಲಿವ್ ಬಳ್ಳಿ ಮತ್ತು ಎಸ್ಪಾರ್ಟೊ ಹುಲ್ಲುಗಳ ಉತ್ಪನ್ನಗಳು ಇಲ್ಲಿ ರಫ್ತು ವಸ್ತುಗಳಾಗಿವೆ. ಜಂಭೀರ ಜಾತಿಯ ವಿವಿಧ ಹಣ್ಣುಗಳನ್ನು ಬೆಳೆಸುತ್ತಾರೆ. 1975 ರಲ್ಲಿ 8.30.000 ಹೆಕ್ಟೊಲೀಟರ್ ಮದ್ಯವನ್ನು ತಯಾರಿಸಲಾಗಿತ್ತು.

ಕುರಿ, ಮೇಕೆ ಮತ್ತು ಒಂಟೆಗಳಿಂದ ಬರುವ ಆದಾಯ ವ್ಯವಸಾಯದಿಂದ ಬರುವ ಒಟ್ಟು ಆದಾಯ 1/3 ಭಾಗದಷ್ಟಿದೆ. ಹತ್ತಿಬಟ್ಟೆಗಳು ಮತ್ತು ಹದಗೊಳಿಸಿದ ಆಹಾರ ವಸ್ತುಗಳು ಮುಖ್ಯ ರಫ್ತು ವಸ್ತುಗಳಾಗಿವೆ.

1973ರಿಂದಲೂ ದೇಶದಲ್ಲಿ ಪಂಚವಾರ್ಷಿಕ ಯೋಜನೆ ಜಾರಿಯಲ್ಲಿದೆ. 1982ರಲ್ಲಿ ಸಿಮೆಂಟ್ ಉತ್ಪಾದನೆ 3.75 ಮಿಲಿಯನ್ ಮೆ.ಟನ್ ಗಳಷ್ಟಿತ್ತು. ಸಕ್ಕರೆ ಸಂಸ್ಕರಣದ ಘಟಕಗಳಿವೆ. ಫ್ರೆಂಚ್ ಸಹಯೋಗದಿಂದ ಕಾಸಬ್ಲಾಂಕ ಮತ್ತು ಮೊರಾಕೋದ ಪ್ರಾಚೀನ ಕುಶಲ ಟ್ಯಾಂಜೀರ್‍ಗಳಲ್ಲಿ ಕರು ತಯಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ. ಕಲಾವಸ್ತುಗಳಾದ ರತ್ನಗಂಬಳಿಗಳು, ಚರ್ಮದ ವಸ್ತುಗಳು ಮತ್ತು ಲೋಹ ತಯಾರಿಕೆಗಳ ಉದ್ಯಮ ಬೆಳೆಯುತ್ತಿದೆ. ವಿದೇಶಗಳಿಗೆ ಈ ಉತ್ಪನ್ನಗಳು ರಫ್ತಾಗುತ್ತಿವೆ. ಮೊರಾಕೋ ಐರೋಪ್ಯ ಮಾರುಕಟ್ಟೆಯೊಂದಿಗೆ ಮೈತ್ರಿ ಹೊಂದಿದೆ. ಇದರಿಂದಾಗಿ ಅದರ ಉತ್ಪನ್ನಗಳಿಗೆ ಬೇಡಿಕೆ ಇದೆ.

ಸಾರಿಗೆ ಸಂಪರ್ಕ

[ಬದಲಾಯಿಸಿ]

ಪ್ರಾಂತೀಯ ರಾಜಧಾನಿಗಳಾದ ಊಜ್ದಾ, ಫೆಜ್, ಮರಾಕೆಷ್, ಆಗ್ದೀರ್ ಮತ್ತು ಟ್ಯಾನ್‍ಜೀರ್‍ಗಳ ನಡುವೆ ಒಳ್ಳೆಯ ಸಂಪರ್ಕ ಜಾಲವಿದೆ. ಈ ನಗರಗಳಿಂದ ವಾಣಿಜ್ಯ ಕೇಂದ್ರ ಕಾಸಬ್ಲಾಂಕದೊಡನೆ ಹೆದ್ದಾರಿ ಸಂಪರ್ಕಗಳಿವೆ. ವಿವಿಧ ಬಗೆಯ ಮಾರ್ಗಗಳನ್ನು ಒಳಗೊಂಡಂತೆ 1983ರಲ್ಲಿ ಒಟ್ಟು 57.592 ಕಿಮೀ ರಸ್ತೆಯಿತ್ತು. ರಸ್ತೆಗಳ ಮೂಲಕ ಸಾಗಿಸುವ ವಾರ್ಷಿಕ ಸರಕಿನ ಪ್ರಮಾಣ 6.8 ಮಿಲಿಯನ್ ಟನ್‍ಗಳು (1975).

ಊಜ್ದಾ, ತಾಜಾ, ಫೆಜ್, ಮೆಕ್‍ನೆಸ್, ರಬಾತ್ ಮತ್ತು ಕಾಸಬ್ಲಾಂಕಗಳು ರಾಷ್ಟ್ರದ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿ ಸೇರಿವೆ. ಮರಾಕೆಷ್-ಕಾಸಬ್ಲಾಂಕ-ಫೆಜ್ ಮಧ್ಯೆ ವಿದ್ಯುತ್ ರೈಲುಮಾರ್ಗವಿದೆ. ಉತ್ತರದ ಟ್ಯಾನ್‍ಜೀರ್‍ನಿಂದ ದಕ್ಷಿಣದ ಫಾಸ್ಫೇಟ್ ಗಣಿಗಳವರೆಗೂ ರೈಲುಮಾರ್ಗವನ್ನು ವಿಸ್ತರಿಸಲಾಗಿದೆ. 1981ರಲ್ಲಿ ಒಟ್ಟು 1,779 ಕಿಮೀ ರೈಲುಮಾರ್ಗವಿತ್ತು. ರೈಲುಮಾರ್ಗದ ಮೂಲಕ 1.127 ಮಿಲಿಯನ್ ಪ್ರಯಾಣಿಕರನ್ನು (1981) 47 ಮಿಲಿಯನ್ ಮೆ.ಟನ್‍ಗಳ ಸರಕನ್ನು (1985) ಸಾಗಿಸಲಾಗಿದೆ.

ದೇಶದಲ್ಲಿ 30 ವಾಣಿಜ್ಯ ವಿಮಾನ ನಿಲ್ದಾಣಗಳಿವೆ. ಅವುಗಳ ಪೈಕಿ 8 ಅಂತಾರಾಷ್ಟ್ರೀಯ ನಿಲ್ದಾಣಗಳು. ನೌಸೆರ್, ಟ್ಯಾನ್‍ಜೀರ್, ಬೋಕ್ ಹಾಫ್, ಸಲೆ, ಆಗ್ದೀರ್ ಮುಖ್ಯ ನೆಲೆಗಳು. ರಾಯಲ್ ಏರ್ ಮೊರಾಕೊ 1953ರಲ್ಲಿ ಪ್ರಾರಂಭವಾಯಿತು.

ಕಾಸಬ್ಲಾಂಕ ಮತ್ತು ಟ್ಯಾನ್‍ಜೀರ್‍ಗಳು ಇಲ್ಲಿನ ದೊಡ್ಡ ಬಂದರುಗಳು ಹಾಗೂ ಪ್ರಮುಖ ನೌಕಾ ಸಾರಿಗೆ ಮತ್ತು ಪ್ರವಾಸಿ ಕೇಂದ್ರಗಳು. ಆಗ್ದೀರ್ ಮತ್ತು ಮೊಹಮ್ಮದಿಯ ಕೂಡ ದೊಡ್ಡ ಬಂದರುಗಳು. ಇವಲ್ಲದೆ ಸಫಿ, ಕೆನಿಟ್ರ, ನಡೊರ್‍ಗಳು ಇತರ ಬಂದರುಗಳು. ಯುರೋಪಿನ ಕೆಲವು ರಾಷ್ಟ್ರಗಳ ಆರ್ಥಿಕ ಹಿತಾಸಕ್ತಿಗಳು ಇಲ್ಲಿರುವುದರಿಂದ ಇವುಗಳೊಂದಿಗೆ ನೌಕಾಸಂಚಾರ ಹೆಚ್ಚಿದೆ.

ಶಿಕ್ಷಣ

[ಬದಲಾಯಿಸಿ]

ಮೊರಾಕೋದ ಒಟ್ಟು ಆದಾಯದ ಐದನೆಯ ಒಂದು ಭಾಗವನ್ನು ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತಿದೆ. 7ರಿಂದ 13 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ವಿಧಿಸಲಾಗಿದ್ದರೂ ಶಾಲೆಗೆ ಹೋಗುವ ವಿದ್ಯಾರ್ಥಿಗಳಲ್ಲಿ ಶೇಕಡಾ 50 ಮಂದಿಗೆ ಮಾತ್ರ ಅವಕಾಶ ಸಿಗುತ್ತಿದೆ. ಸಾಂಪ್ರದಾಯಿಕ ಅರಾಬಿಕ್ ಶಾಲೆಗಳು ಮತ್ತು ಖಾಸಗಿ ಶಾಲೆಗಳಿವೆ. ಖಾಸಗಿ ಶಾಲೆಗಳಲ್ಲಿ ಹಲವು ವಿದೇಶಿ ಶಾಲೆಗಳಿವೆ. ಒಟ್ಟು 6 ವಿಶ್ವವಿದ್ಯಾಲಯಗಳಿವೆ. ಫ್ರೆಂಚ್ ಸಾಂಸ್ಕøತಿಕ ಮಿಷನ್ ಇಲ್ಲಿಯ ಮುಖ್ಯ ವಿದೇಶಿ ಶಿಕ್ಷಣ ಸಂಸ್ಥೆ. ಇದು ಮೊರೊಕೋದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ನೀಡುತ್ತಿದೆ. ವಯಸ್ಕರ ಶಿಕ್ಷಣ ಜಾರಿಯಲ್ಲಿದೆ.

ಆರೋಗ್ಯ

[ಬದಲಾಯಿಸಿ]

ನಾಗರಿಕ ಸೌಲಭ್ಯಗಳು ಪಟ್ಟಣಗಳ ಜನರಿಗೆ ಲಭ್ಯವಾಗಿದ್ದರೂ ಗ್ರಾಮೀಣ ಜನತೆ ಅವುಗಳಿಂದ ಇನ್ನೂ ದೂರ ಉಳಿದಿದ್ದಾರೆ. ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ದೇಶದ ಜನಸಂಖ್ಯೆಯ ದೃಷ್ಟಿಯಿಂದ ತೀರ ಕಡಿಮೆ. ಪಂಚವಾರ್ಷಿಕ ಯೋಜನೆಯಲ್ಲಿ ಇತ್ತ ಗಮನಹರಿದಿದೆ. 1982 ರಲ್ಲಿ 1303 ಮಂದಿ ವೈದ್ಯರಿದ್ದರು.

ವಾರ್ತಾ ಮಾಧ್ಯಮ

[ಬದಲಾಯಿಸಿ]

ಮೊರಾಕೋದಲ್ಲಿ ಅರಾಬಿಕ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪತ್ರಿಕೆಗಳು ಪ್ರಕಟವಾಗುತ್ತಿದೆ. ಅಲ್ಲಿ ಸ್ವತಂತ್ರ ಪತ್ರಿಕಾ ಸಂಸ್ಥೆ ಇದೆ. ಸಾಮಾನ್ಯವಾಗಿ ದಿನಪತ್ರಿಕೆಗಳ ಪ್ರಸಾರ 15-45 ಸಾವಿರ. ಸುದ್ದಿ ಪ್ರಸಾರ ಮತ್ತು ವಯಸ್ಕರ ಶಿಕ್ಷಣದಲ್ಲಿ ಆಕಾಶವಾಣಿ ಪ್ರಮುಖ ಪಾತ್ರವಹಿಸುತ್ತವೆ. ಆಕಾಶವಾಣಿಯಲ್ಲಿ ಅರಾಬಿಕ್, ಬರ್ಬರ್, ಫ್ರೆಂಚ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ರಬಾತ್‍ನಲ್ಲಿ ದೂರದರ್ಶನ ಕೇಂದ್ರವಿದೆ. ಅಂಚೆ, ತಂತಿ ಮತ್ತು ದೂರವಾಣಿ ಸೌಲಭ್ಯಗಳಿವೆ.

ಮುಖ್ಯ ಸ್ಥಳಗಳು

[ಬದಲಾಯಿಸಿ]

ಕಾಸಬ್ಲಾಂಕ ಮೊರಾಕೋದ ಅತ್ಯಂತ ದೊಡ್ಡ ನಗರ. ಜನಸಂಖ್ಯೆ 2,940,623 (1994). ಇದನ್ನು ಪ್ರಾಚೀನ ನಗರ ಅಸ್ಪಾದ ನಿವೇಶನದಲ್ಲಿ ಸ್ಥಾಪಿಸಲಾಗಿದೆ. ಪೋರ್ಚುಗೀಸರು ಕಟ್ಟಿದ ಈ ನಗರ ವಾಣಿಜ್ಯ ಬಂದರೂ ಹೌದು. ಎರಡನೆಯ ಮಹಾಯುದ್ಧದ ಕಾಲದಲ್ಲಿ (1943) ಚರ್ಚಿಲ್ ಮತ್ತು ರೂಸ್‍ವೆಲ್ಟರು ಇಲ್ಲಿ ಸಭೆ ಸೇರಿದ್ದರು. ಇಂದು ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರವೆನಿಸಿದೆ. ರಬಾತ್ ಮೊರಾಕೋದ ರಾಜಧಾನಿ. ಇದು ಹಿಂದೆ ಫ್ರೆಂಚ್ ಮೊರಾಕೋದ ರಾಜಧಾನಿಯಾಗಿತ್ತು. ಜನಸಂಖ್ಯೆ 1.385.872 (1994). ಟ್ಯಾನ್‍ಜೀರ್ ಇನ್ನೊಂದು ಮುಖ್ಯ ಬಂದರು ನಗರ ಜನಸಂಖ್ಯೆ 526,215 (1994). ಇದು ಜಿóಬ್ರಾಲ್ಟರ್ ಜಲಸಂಧಿಯಲ್ಲಿದೆ. ರೋಮನ್ನರು ಇಲ್ಲಿ ಒಂದು ಪಟ್ಟಣ ಕಟ್ಟಿದ್ದರು. ಈಗ ಇದು ಬೇಸಿಗೆ ರಾಜಧಾನಿ. ಮರಾಕೆಷ್ ಪ್ರಾಚೀನ ರಾಜಧಾನಿ 1062ರಲ್ಲಿ ಸ್ಥಾಪಿತವಾಯಿತು. ಇದು ಮೊರಾಕೋದ ಪಾರಂಪರಿಕ ರಾಜಧಾನಿಗಳಲ್ಲೊಂದು. ಇಲ್ಲಿ ಪ್ರಾಚೀನ ಮಸೀದಿಗಳು, ಅರಮನೆಗಳು ಇವೆ. ಮಧ್ಯಯುಗದಲ್ಲಿ ಇಸ್ಲಾಮಿನ ಪ್ರಮುಖ ಕೇಂದ್ರಗಳಲ್ಲೊಂದಾಗಿತ್ತು. ಜನಸಂಖ್ಯೆ 745.541 (1994). ಫೆಜ್ ನಗರವನ್ನು 793ರಲ್ಲಿ ಸ್ಥಾಪಿಸಲಾಯಿತು. ಇದು ಇಸ್ಲಾಮಿನ ಪವಿತ್ರ ನಗರಗಳಲ್ಲೊಂದು. ಜನಸಂಖ್ಯೆ (774,754 (1994). ಇಲ್ಲಿ ಅರಮನೆ ಮತ್ತು ಅನೇಕ ಮಸೀದಿಗಳಿವೆ. ಮೆಕ್‍ನೆಸ್ ಮಧ್ಯಯುಗದ ರಾಜಧಾನಿ. ಜನಸಂಖ್ಯೆ 530,171 (1994). ಅರಮನೆ, ಮಸೀದಿಗಳಿವೆ. ಸಫಿ, ಊಜ್ದಾ, ಸಾವೂಟಾ, ಮಜಗಾನ್, ಕೆನಿಟ್ರಾ, ಆಗ್ದೀರ್, ಮೊಹಮ್ಮದೀಯ ಮೊದಲಾದವು. ಮೊರಾಕೋದ ಇತರ ಮುಖ್ಯ ನಗರಗಳಾಗಿವೆ.

ಜನಜೀವನ

[ಬದಲಾಯಿಸಿ]

ಮೊರಾಕೋದ ರಿಫ್ ಪರ್ವತಮಯ ಪ್ರದೇಶ. ಅಲ್ಲಿ ನೀರಾವರಿ ಸೌಲಭ್ಯವಿದೆ. ರೈತಾಪಿ ವರ್ಗಸ್ಥಿರವಾಗಿ ನೆಲೆನಿಂತಿದೆ. ಫೆಜ್ ಮತ್ತು ಮೆಕೆನೆಸ್‍ಗಳನ್ನು ಒಳಗೊಂಡ ರ್ಹಾರ್ಬ್‍ನಲ್ಲಿ ಬರ್ಬರ್ ಭಾಷೆ ಮಾತನಾಡುವ ಮೆಯೋನ್ ಅಟ್ಲಾಸ್‍ನ ಕುರುಬರಿದ್ದಾರೆ. ಈ ಅರೆ ಅಲೆಮಾರಿ ಬರ್ಬರ್ ಪಂಗಡಡಗಳು ಚಳಿಗಾಲದಲ್ಲಿ ಕಣಿವೆಯ ಹಳ್ಳಿಗಳಲ್ಲಿ ನೆಲಸುತ್ತವೆ. ಬೇಸಗೆಯಲ್ಲಿ ತಮ್ಮ ಕುರಿಗಳನ್ನು ಮೇಯಿಸಲು ಇತ್ತರದ ಇಳಿಜಾರು ಪ್ರದೇಶಗಳಿಗೆ ಹೋಗುತ್ತಾರೆ. ಮಧ್ಯಪರ್ವತ ಶ್ರೇಣಿಗಳಲ್ಲಿ ಅರೆ ಅಲೆಮಾರಿ ದನಗಾಹಿಗಳಿದ್ದಾರೆ. ಅಟ್ಲಾಂಟಿಕ್ ತೀರ ಪ್ರದೇಶದಲ್ಲಿ ಅರಬ್ಬೀ ಮಾತನಾಡುವ ವ್ಯವಸಾಯಗಾರರಿದ್ದಾರೆ. ಹೌಜ್ ಪ್ರದೇಶದಲ್ಲಿ ರೈತರೂ ಅರೆ ಅಲೆಮಾರಿ ದನಗಾಹಿಗಳೂ ನೆಲಸಿದ್ದಾರೆ. ಸೂಸ ಪ್ರಾಂತ್ಯದಲ್ಲಿ ಷ್ಲೇಹ್ ಎಂದು ಪರಿಚಿತರಾದ ಬರ್ಬರ್ ಜನರಿದ್ದಾರೆ. ಇದೊಂದು ಸಂಕೀರ್ಣ ಸಮುದಾಯ. ಇಲ್ಲಿ ಸಸ್ಯೋತ್ಪನ್ನ ಎಣ್ಣೆಗಳನ್ನು ಉತ್ಪಾದಿಸಲಾಗುತ್ತದೆ. ಮೊರಾಕೋ ಶೈಲಿಯ ಲೋಹ ತಯಾರಿಕೆ ಇಲ್ಲಿ ನಡೆಯುತ್ತದೆ.

ಪೂರ್ವ ಮೊರಾಕೋದ ಮರುಭೂಮಿ ಪ್ರಭಾವದ ಪ್ರದೇಶದಲ್ಲಿ ಮಿಶ್ರ ನೀಗ್ರೊ ತಳಿಯ ಒಯಸಿಸ್ ನೆಲಸಿಗರು, ಅಲಮಾರಿ ಕುರುಬರು ಇದ್ದಾರೆ. ಅವರು ವ್ಯವಸಾಯ ಕಾರ್ಮಿಕರಾಗಿಯೂ ಜೀವನ ಸಾಗಿಸುತ್ತಾರೆ. ಮಹಾ ಅಲೆಮಾರಿಗಳಾದ ಒಂಟೆ ಮಾವುತರು ಆಗಾಗ ಮೊರಾಕೋದ ಗಡಿ ಪ್ರದೇಶಗಳಿಗೆ ಬಂದು ಹೋಗುತ್ತಾರೆ.

ನೆಲೆನಿಂತ ವ್ಯವಸಾಯಗಾರರು ಪಾರಂಪರಿಕ ಮನೆಗಳಲ್ಲೂ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ಡೇರೆಗಳಲ್ಲೂ ವಾಸಿಸುತ್ತಾರೆ. ಪರ್ವತಪ್ರದೇಶದ ಜನರು ಜೀವನೋಪಾಯಕ್ಕಾಗಿ ತೀರಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಒಳನಾಡಿನ ಅನೇಕ ಹಳ್ಳಿಗಳು ಬರಿದಾಗಿ ತೀರಪ್ರದೇಶದ ನಗರಗಳ ಜನದಟ್ಟಣೆಗೆ ಆಸ್ಪದವಿತ್ತಿದೆ.

ಭಾಷಾ ಮಿಶ್ರಣ

[ಬದಲಾಯಿಸಿ]

ಮೊರಾಕೋದ ಜನಸಂಖ್ಯೆಯನ್ನು ಮುಖ್ಯವಾಗಿ ಅರಬ್ಬರು ಮತ್ತು ಬರ್ಬರರೆಂದು ವಿಂಗಡಿಸಬಹುದು. ಈ ವಿಂಗಡನೆಗೆ ಜನಾಂಗ ಲಕ್ಷಣಗಳಿಗಿಂತಲೂ ಭಾಷೆಯೇ ಮುಖ್ಯ ಆಧಾರವಾಗಿದೆ. ಇಂದು ಅರಬ್ ಮತ್ತು ಬರ್ಬರ್ ಭಾಷೆಗಳೆರಡನ್ನೂ ಬಳಸುವವರು ಹೆಚ್ಚಾಗಿದ್ದಾರೆ. ಬರ್ಬರ್ ಒಂದನ್ನೇ ಮಾತನಾಡುವವರ ಪ್ರಮಾಣ ಶೇಕಡಾ 25ನ್ನು ದಾಟುವುದಿಲ್ಲ. ಪರ್ವತಪ್ರದೇಶಗಳಲ್ಲಷ್ಟೇ ಇವರು ಆಧುನಿಕವಾಗಿದ್ದಾರೆ. ಅರಬ್ಬರು 7ನೆಯ ಶತಮಾನದಿಂದ ಇಸ್ಲಾಮ್ ಧರ್ಮದ ವಿಸ್ತರಣೆಯೊಂದಿಗೆ ಇಲ್ಲಿಗೆ ಅಧಿಕವಾಗಿ ಬಂದು ನೆಲಸತೊಡಗಿದರು. ಇವರಲ್ಲದೆ ನೀಗ್ರೋಗಳು, ಸ್ಪೇನಿಯಾರ್ಡರು, ಫ್ರೆಂಚರು, ಯಹೂದಿಗಳು ಅಲ್ಪ ಪ್ರಮಾಣದಲ್ಲಿ ಬಂದು ನೆಲಸಿದ್ದಾರೆ. ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳು ನಗರ ಪ್ರದೇಶಗಳಲ್ಲಿ ಬಳಕೆಯಲ್ಲಿವೆ. ರಾಷ್ಟ್ರೀಯ ಭಾಷೆ ಅರಾಬಿಕ್, ಇದನ್ನು ಶೇಕಡಾ 75ರಷ್ಟು ಜನ ಮಾತನಾಡುತ್ತಾರೆ. ಫ್ರೆಂಚ್ ಸಹ ಭಾಷೆಯಾಗಿ ಮುಂದುವರಿದಿದೆ. ಅರಾಬಿಕ್ ಮತ್ತು ಫ್ರೆಂಚ್‍ನಲ್ಲಿ ಸ್ಥಳೀಯ ಸಾಹಿತ್ಯ ರಚನೆಯಾಗಿದೆ.

ಇತಿಹಾಸ

[ಬದಲಾಯಿಸಿ]

ಮೊರಾಕೋ ಯೂರೋಪ್ ಮತ್ತು ಆಫ್ರಿಕಗಳ ನಡುವಿನ ಸಂಪರ್ಕ ಮಾರ್ಗದ ಆಯಕಟ್ಟಿನ ಸ್ಥಳದಲ್ಲಿದೆ. ಆದ್ದರಿಂದ ಫೀನೀಷಿಯನ್ನರು ಮತ್ತು ಕಾರ್ಥೇಜಿಯನ್ನರು ಬಲು ಹಿಂದಿನಿಂದಲೇ ಇಲ್ಲಿ ಬಂದರುಗಳನ್ನು ಹೊಂದಿದ್ದರು. ತರುವಾಯ ಈ ಪ್ರದೇಶ ರೋಮ್ ಸಾಮ್ರಾಜ್ಯದ ನಿಯಂತ್ರಣಕ್ಕೆ ಒಳಪಟ್ಟಿತು. ಅವರು ಇಲ್ಲಿ ಮೊರಿಟೇನಿಯ ಎಂಬ ಪ್ರಾಂತ್ಯವನ್ನು ರಚಿಸಿದ್ದರು. ಕ್ರಿ. ಶ. 7ನೆಯ ಶತಮಾನದಲ್ಲಿ ಮುಸ್ಲಿಮ್ ಪಡೆಗಳು ಈ ಭಾಗದಮೇಲೆ ದಾಳಿಮಾಡಿ ಆಕ್ರಮಿಸಿಕೊಂಡವು. 8ನೆಯ ಶತಮಾನದ ಹೊತ್ತಿಗೆ ಇಲ್ಲಿ ಅನೇಕ ಸಣ್ಣಪುಟ್ಟ ಮುಸ್ಲಿಮ್ ರಾಜ್ಯಗಳು ಹುಟ್ಟಿಕೊಂಡವು. 11ನೆಯ ಶತಮಾನದಲ್ಲಿ ಯೂಸುಫ್ ಇಬ್ನ್ ತಾಸ್‍ಫೆನ್ ನೇತೃತ್ವದಲ್ಲಿ ಸಮಗ್ರ ಮೊರಾಕೋ ಮತ್ತು ಆಲ್ಜೀರಿಯಾದ ಬಹು ಭಾಗಗಳು ಒಂದೇ ಆಡಳಿತದಡಿ ಬಂದವು. 12ನೆಯ ಶತಮಾನದಲ್ಲಿ ಉಚ್ಛ್ರಾಯಕ್ಕೆ ಬಂದ ಅಲ್‍ಮೊಹದರು ಸ್ಪೇನಿನ ಕೆಲವು ಭಾಗಗಳನ್ನೂ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಆದರೆ ಬಲುಬೇಗ ಸ್ಪೇನಿನಿಂದ ಕಾಲ್ತೆಗೆಯಬೇಕಾಯಿತು. 15 ಮತ್ತು 16ನೆಯ ಶತಮಾನಗಳಲ್ಲಿ ಸ್ಪೇನಿಯಾರ್ಡರು ಮತ್ತು ಪೋರ್ಚುಗೀಸರು ತಮ್ಮ ಪೌರಸ್ತ್ಯ ವ್ಯಾಪಾರಕ್ಕಾಗಿ ಮೊರಾಕೋದ ತೀರ ಪ್ರದೇಶಗಳಲ್ಲಿ ನೆಲಸತೊಡಗಿದರು. 17ನೆಯ ಶತಮಾನದ ತನಕ ಐರೋಪ್ಯರು ಒಳನಾಡಿನ ಮೇಲೆ ಪ್ರಭಾವ ಬೀರದಂತೆ ಇಲ್ಲಿಯ ರಾಜ್ಯಗಳು ತಡೆದಿದ್ದುವು. ಆದರೆ 1830ರಲ್ಲಿ ಫ್ರಾನ್ಸ್ ಆಲ್ಜೀರಿಯಾವನ್ನು ವಶಪಡಿಸಿಕೊಂಡಾಗ ಮೊರಾಕೋದ ಹೆಬ್ಬಾಗಿಲಿಗೆ ವಸಾಹತು ಸಾಮ್ರಾಜ್ಯ ಕಾಲಿರಿಸಿದಂತಾಯಿತು. 1844ರಲ್ಲಿ ಫ್ರೆಂಚರು ಮೊರಾಕೋವನ್ನು ಸೋಲಿಸಿದರು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಫ್ರೆಂಚರು ಮೊರಾಕೋದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸಫಲರಾದರು. ಫ್ರಾನ್ಸಿನ ಆಡಳಿತವನ್ನು 1904ರಲ್ಲಿ ಬ್ರಿಟನ್ ಮಾನ್ಯ ಮಾಡಿತು.

ಮೊರಾಕೋದ ದಕ್ಷಿಣ ತೀರಪ್ರದೇಶ ಸ್ಪಾನಿಷ್ ಸಹರದ ಒಂದು ಭಾಗವಾಯಿತು. 1912ರ ಹೊತ್ತಿಗೆ ಮೊರಾಕೋ ಫ್ರಾನ್ಸಿನ ರಕ್ಷಿತ ರಾಜ್ಯವೆಂದು ಪರಿಗಣಿಸಲ್ಪಟ್ಟಿತು. ರಿಫ್‍ನ ಪಂಗಡಗಳು ಅದಲ್-ಕ್ರೀಮ್‍ನ ನೇತೃತ್ವದಲ್ಲಿ ನಡೆಸಿದ ಪ್ರಬಲ ದಂಗೆಯನ್ನು ಫ್ರಾನ್ಸ್ ಅಡಗಿಸಿತು. 1934ರ ಹೊತ್ತಿಗೆ ಫ್ರಾನ್ಸ್ ಮೊರಾಕೋದ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಿತು. ಸುಲ್ತಾನ ನಾಮ ಮಾತ್ರ ದೊರೆಯಾದ.

1943ರಲ್ಲಿ ಒಂದು ರಾಜಕೀಯ ಸ್ವತಂತ್ರ ಪಕ್ಷ ಹುಟ್ಟಿಕೊಂಡು ಸಂಪೂರ್ಣ ಸ್ವಾತಂತ್ರ್ಯಕ್ಕೆ ಕರೆಕೊಟ್ಟಿತು. 1950-55ರಲ್ಲಿ ರಾಷ್ಟ್ರಾದ್ಯಂತ ಗಲಭೆಗಳಾದುವು. ಪರಿಣಾಮವಾಗಿ ಸುಲ್ತಾನ ಪದವಿ ತ್ಯಾಗಮಾಡಿದ. 1956ರಲ್ಲಿ ಫ್ರಾನ್ಸ್ ಮೊರಾಕೋಗೆ ಸ್ವಾತಂತ್ರ್ಯ ನೀಡಿತು. ಅದೇ ವರ್ಷದ ನವೆಂಬರ್ 12ರಂದು ಮೊರಾಕೋ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು. ಸ್ಪೇನ್ ಸಹ ತನ್ನ ನಿಯಂತ್ರಣದಲ್ಲಿದ್ದ ಕೆಲವು ಪ್ರದೇಶಗಳನ್ನು ಮೊರಾಕೋಗೆ ಬಿಟ್ಟುಕೊಟ್ಟಿತು. ಸ್ಪಾನಿಷ್ ಸಹರದ ಉಳಿದ ಪ್ರದೇಶವನ್ನು 1970ರಲ್ಲಿ ಮೊರಾಕೋ ಮತ್ತು ಅಲ್ಜೀರಿಯಾಗಳು ಪರಸ್ಪರ ಹಂಚಿಕೊಂಡವು.

ಸರ್ಕಾರ

[ಬದಲಾಯಿಸಿ]

ಪಾರಂಪರಿಕವಾಗಿ ಬಂದ ರಾಜಪ್ರಭುತ್ವ ಉಳಿದುಬಂದಿದೆ. ಆದರೆ 1962ರಿಂದ ಅದು ಸಂವಿಧಾನಾತ್ಮಕ ರಾಜಪ್ರಭುತ್ವವಾಗಿದೆ. 1963-65ರ ತನಕ ಸಂಸದೀಯ ಪದ್ಧತಿಯ ಸರ್ಕಾರವನ್ನು ಜಾರಿಗೆ ತಂದು ಪ್ರಯೋಗ ಮಾಡಲಾಯಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಆದ್ದರಿಂದ ಹಿಂದಿನ ದ್ವಿಸದನ ಪದ್ಧತಿಯನ್ನು ರದ್ದುಗೊಳಿಸಿ ಏಕಸದನ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಯಿತು. ರಾಜನಿಗೆ ಹೆಚ್ಚಿನ ಅಧಿಕಾರಗಳು ಮತ್ತೆ ಲಭ್ಯವಾದುವು. ಜನ ಪ್ರತಿನಿಧಿಗಳ ಸದನದ ಸದಸ್ಯತ್ವದ ಅವಧಿ ಆರು ವರ್ಷಗಳು.

ಈ ಏಕಸದನದ ಸದಸ್ಯರನ್ನು ಸಾರ್ವತ್ರಿಕ ಚುನಾವಣೆಯ ಮೂಲಕ ಆಯಲಾಗುತ್ತದೆ. 21 ವರ್ಷಗಳಿಗೆ ಮೇಲ್ಪಟ್ಟ ಎಲ್ಲ ಸ್ತ್ರೀಪುರುಷರು ಮತದಾನಮಾಡುವ ಹಕ್ಕುಳ್ಳವರಾಗಿದ್ದಾರೆ. ಸದನದ 1/3 ಭಾಗ ಸಂಘ ಸಂಸ್ಥೆಗಳ ಮೂಲಕ ಚುನಾಯಿತವಾಗುತ್ತದೆ.

ಸದನವನ್ನು ರಾಜ ವಿಸರ್ಜಿಸಬಹುದು. ಶಾಸನಸಭೆ ಅಂಗೀಕರಿಸಿದ ಶಾಸನವನ್ನು ಮತ್ತೆ ಹಿಂತಿರುಗಿಸಬಹುದು ಹಾಗೂ ತಾನಾಗಿಯೆ ಶಾಸನಗಳನ್ನು ಜನಾಭಿಪ್ರಾಯಕ್ಕೆ ಒಪ್ಪಿಸುವ ಅಧಿಕಾರವೂ ಇದೆ. ಶಾಸನಸಭೆಯನ್ನು ರಾಜ ವಿಸರ್ಜಿಸಿದ ಮೇಲೆ ಮತ್ತೆ ಚುನಾಯಿತವಾದ ಶಾಸನಸಭೆಯನ್ನು ಒಂದು ವರ್ಷಕ್ಕೆ ಮೊದಲು ವಿಸರ್ಜಿಸುವಂತಿಲ್ಲ.

ಪ್ರಧಾನಮಂತ್ರಿ ಸರ್ಕಾರದ ಮುಖ್ಯಾಧಿಕಾರಿ. ಅವನ ನೇತೃತ್ವದಲ್ಲಿ ಮಂತ್ರಿಮಂಡಲ ರಚಿಸುತ್ತಾರೆ. ಶಾಸನಸಭೆ ಅವಿಶ್ವಾಸದ ಮೂಲಕ ಮಂತ್ರಿಮಂಡಲವನ್ನು ಪದಚ್ಯುತಗೊಳಿಸಬಹುದು. ಹತ್ತೊಂಬತ್ತು ಪ್ರಾಂತ್ಯಗಳ ಮತ್ತು ಕಾಸಬ್ಲಾಂಕದ ಎರಡು ಜಿಲ್ಲೆಗಳ ಗವರ್ನರ್‍ಗಳನ್ನು ರಾಜಾಜ್ಞೆಯ ಮೂಲಕ ನೇಮಿಸಲಾಗುತ್ತದೆ.

1943ರಲ್ಲಿ ಮತ್ತು 1959ರಲ್ಲಿ ಸ್ಥಾಪನೆಯಾದ ಎರಡು ರಾಜಕೀಯ ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿವೆ. ಫ್ರೆಂಚ್ ಮಾದರಿಯಿಂದ ಪ್ರಭಾವಿತವಾಗಿರುವ ಇಲ್ಲಿಯ ನ್ಯಾಯಾಲಯಗಳು ಸ್ವತಂತ್ರವಾಗಿವೆ.

ಉಲ್ಲೇಖಗಳು

[ಬದಲಾಯಿಸಿ]
  1. La Constitution Archived 2007-10-25 ವೇಬ್ಯಾಕ್ ಮೆಷಿನ್ ನಲ್ಲಿ. . "Le Royaume du Maroc, État musulman souverain, dont la langue officielle est l'arabe, constitue une partie du Grand Maghreb Arabe."
  2. Conventional long form: Kingdom of Morocco - Conventional short form: Morocco - Local long form: Al Mamlakah al Maghribiyah - Local short form: Al Maghrib Archived 2018-12-18 ವೇಬ್ಯಾಕ್ ಮೆಷಿನ್ ನಲ್ಲಿ. - CIA World Factbook
  3. Pending resolution of the Western Sahara conflict.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೊರಾಕೊ&oldid=1116300" ಇಂದ ಪಡೆಯಲ್ಪಟ್ಟಿದೆ