ಮೊದಲನೆಯ ಜೂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊದಲನೆಯ ಜೂಬ (ಅಥವಾ ಜೂಬ I) : ಉತ್ತರ ಆಫ್ರಿಕದ ಜೂಬ ಹೆಸರಿನ ರಾಜರಲ್ಲೊಬ್ಬ.( ಇನ್ನೊಬ್ಬ ಎರಡನೆಯ ಜೂಬ) . ಮೊದಲನೆಯ ಜೂಬನು ನ್ಯುಮಿಡೀಯದ ರಾಜ (ಕ್ರಿ.ಪೂ.ಸು. 85-46). ರೋಮನ್ ಚಕ್ರಾಧಿಪತ್ಯದ ನಾಯಕರಾದ ಪಾಂಪಿ ಮತ್ತು ಸೀಜರನ ನಡುವೆ ನಡೆದ ಅಂತರ್ಯುದ್ಧದಲ್ಲಿ ಪಾಂಪಿಯ ಪಕ್ಷ ವಹಿಸಿದ್ದ.

ಈತ ಸೀಜರನ ಕಟುವಿರೋಧಿಯಾಗಿದ್ದ. ಈತ ರೋಮಿಗೆ ಹೋಗಿದ್ದಾಗ ಸೀಜರನಿಂದ ಇವನಿಗೆ ಆದ ಅವಮಾನವೂ ನ್ಯುಮಿಡೀಯವನ್ನು ರೋಮನ್ ಸಾಮ್ರಾಜ್ಯದ ಪ್ರಾಂತ್ಯವನ್ನಾಗಿ ಮಾಡಬೇಕೆಂದು ಸೀಜರನ ದಂಡನಾಯಕ ಕ್ಯೂರೀಯೊ ನೀಡಿದ ಸಲಹೆಯೂ (ಕ್ರಿ.ಪೂ. 50) ಇವನ ವಿರೋಧಕ್ಕೆ ಕಾರಣಗಳು. ಕ್ರಿ.ಪೂ. 49ರಲ್ಲಿ ಕ್ಯೂರೀಯೊ ಪಾಂಪಿಯ ಕಡೆಯವರನ್ನು ಸದೆಬಡಿಯಲು ಆಫ್ರಿಕಕ್ಕೆ ದಂಡೆತ್ತಿಬಂದ. ಆಗ ಜೂಬ ಬಹು ದೊಡ್ಡ ಸೈನ್ಯದೊಡನೆ ಪಾಂಪಿಯ ನೆರವಿಗೆ ಹೋಗಿ ಕ್ಯೂರೀಯೊನನ್ನು ಸೋಲಿಸಿ ಕೊಂದ. ಆದರೆ ಕ್ರಿ.ಪೂ. 46ರಲ್ಲಿ ಸೀಜರನೊಂದಿಗೆ ಧ್ಯಾಪ್ಸಸ್‍ನಲ್ಲಿ ನಡೆದ ನೇರಯುದ್ಧದಲ್ಲಿ ಪಾಂಪಿಯ ಪಕ್ಷದವರು ಸೋಲಿಗೆ ಗುರಿಯಾದರು. ಸೋತ ಸೈನ್ಯದೊಡನಿದ್ದ ಜೂಬ ದೇಶಭ್ರಷ್ಟನಾಗಿ ಅಲೆಯಬೇಕಾಯಿತು. ಕೊನೆಗೆ ಜುಗುಪ್ಸೆಗೊಂಡು, ತನ್ನನ್ನು ಕೊಲ್ಲುವಂತೆ ಗುಲಾಮನೊಬ್ಬನನ್ನು ಕೇಳಿಕೊಂಡು ಮರಣವನ್ನಪ್ಪಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: