ವಿಷಯಕ್ಕೆ ಹೋಗು

ಮುಂಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

   

ನಸ್ರಾಣಿಗಳು ಅಥವಾ ಕೇರಳದ ಸಿರಿಯನ್ ಕ್ರಿಶ್ಚಿಯನ್ನರು ಮುಂಡು ಧರಿಸುತ್ತಾರೆ (ಹಳೆಯ ವರ್ಣಚಿತ್ರದಿಂದ). 1938 ರಲ್ಲಿ ಕೊಚ್ಚಿನ್ ಗವರ್ನಮೆಂಟ್ ರಾಯಲ್ ವಾರ್ ಎಫರ್ಟ್ಸ್ ಸೌವೆನಿರ್‌ನಲ್ಲಿ ಪ್ರಕಟವಾದ ಫೋಟೋ.
ಮುಂಡುಂ ನೆರಿಯಾಟ್ಟುಂ ಧರಿಸಿರುವ ನಾಯರ್ ಮಹಿಳೆ, ರಾಜಾ ರವಿವರ್ಮ ಅವರ ಚಿತ್ರಕಲೆ
ಮುಂಡು ಮತ್ತು ಮೇಲ್ಮುಂಡು ಧರಿಸಿದ ವ್ಯಕ್ತಿ

ಮುಂಡು ( ಮಲಯಾಳಂ : ಮುಂಟು ; ಉಚ್ಛಾರ [ಮುಂಡು] ) ಎಂಬುದು ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು, ಲಕ್ಷದ್ವೀಪ ದ್ವೀಪಸಮೂಹ ಮತ್ತು ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌ನಲ್ಲಿ ಸೊಂಟದ ಸುತ್ತ ಧರಿಸುವ ಉಡುಪಾಗಿದೆ. ಇದು ಧೋತಿ ಮತ್ತು ಲುಂಗಿಯಂತಿದ್ದು ಸಾಮಾನ್ಯವಾಗಿ ಬಿಳಿ ಅಥವಾ ಕೆನೆ ಬಣ್ಣದ ಹತ್ತಿಯಲ್ಲಿ ನೇಯಲಾಗುತ್ತದೆ. ಹತ್ತಿಯನ್ನು ಬಿಳುಪುಗೊಳಿಸುವುದರ ಮೇಲೆ ಬಣ್ಣವು ಅವಲಂಬಿತವಾಗಿದ್ದು ಖದ್ದರ್ ಮುಂಡು, ನೆರಿಯಾಟ್ಟು ಎಂದು ಕರೆಯಲಾಗುತ್ತದೆ. ಆಧುನಿಕ ಕಾಲದಲ್ಲಿ, ಎರಡು ವಿಧದ ಮುಂಡುಗಳು ಪ್ರಚಲಿತದಲ್ಲಿವೆ. ಒಂದು ಸುತ್ತಿನ ಮುಂಡು ಮತ್ತು ಎರಡು ಸುತ್ತಿನದ್ದು. ಒಂದು ಸುತ್ತಿನ ಮುಂಡನ್ನು ಸೊಂಟದ ಸುತ್ತಲೂ ಒಂದೇ ಸುತ್ತಿನಲ್ಲಿ ಸುತ್ತಿಕೊಳ್ಳಲಾಗುತ್ತದೆ, ಆದರೆ ಎರಡು ಸುತ್ತಿನದ್ದನ್ನು ಧರಿಸುವ ಮೊದಲು ಅರ್ಧಕ್ಕೆ ಮಡಚಲಾಗುತ್ತದೆ. ಒಂದು ಸುತ್ತಿನ ಮುಂಡು ತೆಳುವಾಗಿರುವುದರಿಂದ ಬಳಸುವ ಮೊದಲು ಗಂಜಿಗೆ ಅದ್ದಿ ದಪ್ಪಗೊಳಿಸಲಾಗುತ್ತದೆ.

ಪುರುಷರು

[ಬದಲಾಯಿಸಿ]

ಮುಂಡಿನ ಅಂಚು ದಪ್ಪವಾಗಿ ನೇಯಲ್ಪಟ್ಟಿದ್ದು ಇದನ್ನು 'ಕರ' ಎಂದು ಕರೆಯುತ್ತಾರೆ. ಈ ಕರವನ್ನು ಬಣ್ಣ ಮಾಡಬಹುದು ಮತ್ತು ವಿವಿಧ ಗಾತ್ರಗಳಲ್ಲಿ ಬರುತ್ತದೆ. ಇದರಲ್ಲಿ ಎರಡು ಬಣ್ಣದ ಅಲಂಕಾರಿಕ ಕರ (ಮುಂಡಿನ ಅಂಚಿನಲ್ಲಿ ಬಣ್ಣದ ಪಟ್ಟಿ) ಸಹ ಇದೆ. [] ಮದುವೆಯಂತಹ ಶುಭ ಸಂದರ್ಭಗಳಲ್ಲಿ ಧರಿಸುವ ಮುಂಡಿನಲ್ಲಿ ಚಿನ್ನದ ಕಸೂತಿಯಿದ್ದು ಅದನ್ನು ಮುಂಡು ಕಸವು ಎಂದು ಕರೆಯುತ್ತಾರೆ. ಮುಂಡಿನ ತುದಿಯನ್ನು ಕರ ಕಾಣುವಂತೆ ಎಚ್ಚರಿಕೆಯಿಂದ ಮಡಿಸಿ ಧರಿಸುತ್ತಾರೆ. ಕರವು ಸಾಮಾನ್ಯವಾಗಿ ಸುತ್ತಿರುವ ವ್ಯಕ್ತಿಯ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತದೆಯಾದರೂ ಎಡಭಾಗದ ಕರ ಶೈಲಿಯೂ ಪ್ರಚಲಿತದಲ್ಲಿದೆ. ಮುಂಡು ಧರಿಸುವ ವಿಧಾನಕ್ಕೆ ತನ್ನದೇ ಆದ ಶಿಷ್ಟಾಚಾರದ ನಿಯಮಗಳಿದ್ದು ಪುರುಷರು ಸಾಮಾನ್ಯವಾಗಿ ಕೆಲಸ ಮಾಡುವಾಗ, ಸೈಕ್ಲಿಂಗ್ ಮಾಡುವಾಗ, ಚಿಕ್ಕ ಸ್ಕರ್ಟ್ ಅನ್ನು ಹೋಲುವಂತೆ ಉಡುಪನ್ನು ಅರ್ಧಕ್ಕೆ ಮಡಚುತ್ತಾರೆ. ಇತರರೊಡನೆ ಇರುವ ಸಮಯದಲ್ಲಿ ಮುಂಡಿನ ಮಡಿಕೆಯು ತನ್ನಷ್ಟಕ್ಕೇ ಸಡಿಲಗೊಂಡು ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತದೆ. ಹಸಿರು ಅಥವಾ ಕಪ್ಪು ಬಣ್ಣದಲ್ಲಿ ಬರುವ ಹಳದಿ ಪಾಕೆಟ್‌ ಹೊಂದಿದ ಜನಪ್ರಿಯ ವೆಲ್ಕ್ರೋ ಬೆಲ್ಟ್ ಬೆಲೆಬಾಳುವ ವಸ್ತುಗಳನ್ನು ಇಡಲು ಮತ್ತು ಮುಂಡನ್ನು (ಲುಂಗಿ) ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳಲು ಉಪಯುಕ್ತವಾಗಿದೆ. ಮಹಿಳೆಯರು ಧರಿಸುವ ನೆರಿಯಾಟ್ಟು ಅಥವಾ ತುಂಡನ್ನು ಹೋಲುವ 'ಮೇಲ್ಮುಂಡು' ಅಥವಾ 'ಮುಂಡು' ಮಲಯಾಳಿ ಪುರುಷರ ಸಾಂಪ್ರದಾಯಿಕ ಉಡುಪಾಗಿದೆ..

ದಕ್ಷಿಣ ಭಾರತದಲ್ಲಿ ಪಾಶ್ಚಿಮಾತ್ಯ ಶೈಲಿಯ ಗಣನೀಯ ಪ್ರಭಾವದ ಹೊರತಾಗಿಯೂ, ಕೇರಳದ ಹಿಂದೂ ಸಾಂಪ್ರದಾಯಿಕ ಆಚರಣೆಗಳಲ್ಲಿ (ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿನ ಕೆಲವು ಹಿಂದೂ ಜಾತಿಗಳು) ಪುರುಷರು ಮುಂಡು ಧರಿಸುವುದು ಕಡ್ಡಾಯವಾಗಿದೆ. ಹಿಂದೂ ವಿವಾಹಗಳಿಗೆ ಪುರುಷರು ಶರ್ಟ್ ಅಥವಾ ಮೇಲ್ ಮುಂಡು ಜೊತೆಗೆ ಮುಂಡು ಧರಿಸಬೇಕು. ಕೇರಳ ಬ್ರಾಹ್ಮಣರು ಧಾರ್ಮಿಕ ಸಂದರ್ಭಗಳಲ್ಲಿ ಉತ್ತರೀಯಂ ಜೊತೆಗೆ ಮುಂಡು ಧರಿಸುತ್ತಾರೆ. ಪುರುಷರು ದೇವಸ್ಥಾನಗಳಿಗೆ ಭೇಟಿ ನೀಡುವಾಗ ಮತ್ತು ಧಾರ್ಮಿಕ ಕಾರ್ಯಗಳಿಗೆ ಹಾಜರಾಗುವಾಗ ಮುಂಡು ಧರಿಸುವುದು ಸೂಕ್ತವೆಂದು ಪರಿಗಣಿಸಲಾಗಿದ್ದರೂ ಕೆಲವೆಡೆ ಕಡ್ಡಾಯವಲ್ಲ. ಆದಾಗ್ಯೂ, ಗುರುವಾಯೂರ್ ದೇವಾಲಯ, ಪದ್ಮನಾಭಸ್ವಾಮಿ ದೇವಾಲಯ ಮುಂತಾದ ಕೇರಳದ ಕೆಲವು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು ಪುರುಷರು ಮುಂಡು ಮತ್ತು ಮೇಲ್ ಮುಂಡು ಧರಿಸುವುದು ಕಡ್ಡಾಯವಾಗಿದೆ. ಭಕ್ತರ ಅನುಕೂಲಕ್ಕಾಗಿ ಆಡಳಿತ ಮಂಡಳಿಗಳು ದೇವಾಲಯದ ಆವರಣದಲ್ಲಿ ಈ ಸಾಂಪ್ರದಾಯಿಕ ಉಡುಪನ್ನು ಬಾಡಿಗೆಗೆ ಕೊಡುವ ಅವಕಾಶವನ್ನು ಕಲ್ಪಿಸಿದೆ.


.

ಮಹಿಳೆಯರು

[ಬದಲಾಯಿಸಿ]

ಮಹಿಳೆಯರು ಧರಿಸುವ ಮುಂಡಿನ ಇನ್ನೊಂದು ಪ್ರಕಾರವನ್ನು 'ಮುಂಡುಂ ನೆರಿಯಾಟ್ಟುಮ್' ಎಂದು ಕರೆಯುತ್ತಾರೆ. ಇದು ಎರಡು ಮುಂಡಿನ ಒಂದು ಜೋಡಿಯಾಗಿದ್ದು ಎರಡೂ ಮುಂಡಿನ 'ಕರ' ಅಂದರೆ ಅಂಚು ಒಂದೇ ರೀತಿಯ ವಿನ್ಯಾಸ ಹೊಂದಿರುತ್ತದೆ. ಇದರಲ್ಲಿ ಒಂದು ಮುಂಡಿನ ತುಂಡು ಪುರುಷರು ಧರಿಸುವ ಮುಂಡಿನ ಅಳತೆಯಲ್ಲೇ ಇದ್ದು ಪುರುಷರು ಮುಂಡನ್ನುಡುವಂತೆ ಉಡಲಾಗುತ್ತದೆ ಹಾಗೂ ಇನ್ನೊಂದು ತುಂಡು ನೀಳವಾಗಿದ್ದು ಕುಪ್ಪಸದ ಮೇಲೆ ಎಡಭುಜದಿಂದ ನೇತಾಡುವ ರೀತಿ ಸೀರೆಯಂತೆ ಉಡಲಾಗುತ್ತದೆ. ಸಾಮಾನ್ಯವಾಗಿ ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುವ ಇದನ್ನು ಸೆಟ್-ಮುಂಡು ಎಂದು ಕರೆಯಲಾಗುತ್ತದೆ

ಔಪಚಾರಿಕ ಸಂದರ್ಭಗಳಲ್ಲಿ ಮುಂಡು ಜೊತೆಗೆ ತೊಡುವ ಒಂದು ಸಣ್ಣ ಬಟ್ಟೆಯನ್ನು (ಸಾಮಾನ್ಯವಾಗಿ ಭುಜದ ಮೇಲೆ ಹಾಕಲಾಗುತ್ತದೆ)ಕೇರಳದಲ್ಲಿ, ವೇಷ್ಟಿ ಎನ್ನುತ್ತಾರೆ.

ಕೇರಳ ಲುಂಗಿ

[ಬದಲಾಯಿಸಿ]

ಕೇರಳದಲ್ಲಿ ಪುರುಷರು ಮತ್ತು ಮಹಿಳೆಯರು ಧರಿಸುವ ಲುಂಗಿಯನ್ನು ಕೈಲಿ ಅಥವಾ ಕೈಲಿ ಮುಂಡು ಎಂದು ಕರೆಯುತ್ತಾರೆ. ಕಾರ್ಮಿಕರು ಕೆಲಸ ಮಾಡುವಾಗ ಲುಂಗಿ ಧರಿಸಲು ಬಯಸುವುದಲ್ಲದೇ ಸಾಕಷ್ಟು ಆರಾಮದಾಯಕವಾಗಿರುವುದರಿಂದ ಕೇರಳದ ಹೆಚ್ಚಿನ ಪುರುಷರು ಲುಂಗಿಯನ್ನು ಮನೆಯುಡುಗೆಯಾಗಿ, ಸಾಮಾನ್ಯ ಉಡುಪಾಗಿ ಬಳಸುತ್ತಾರೆ, ಲುಂಗಿಗಳು ಸಾಮಾನ್ಯವಾಗಿ ವರ್ಣಮಯವಾಗಿ ವಿವಿಧ ವಿನ್ಯಾಸಗಳಲ್ಲಿದ್ದರೂ ಮದುವೆಗಳು ಅಥವಾ ಇತರ ಧಾರ್ಮಿಕ ಸಮಾರಂಭಗಳಿಗೆ ಕೇಸರಿ ಬಣ್ಣದ ಲುಂಗಿಗಳನ್ನು (ಕಾವಿ ಮುಂಡು) ಸಾಮಾನ್ಯವಾಗಿ ಪುರುಷರು ಧರಿಸುತ್ತಾರೆ..

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "Dresses & Costumes Of Kerala".
  1. South India By Richard Plunkettx.  ISBN 1-86450-161-8
  2. Female Ascetics: Hierarchy and Purity in an Indian Religious Movement By Wendy Sinclair-Brull page number 170.  ISBN 0-7007-0422-1
  3. The Syrian Christians of Kerala By S. G. Pothan.
"https://kn.wikipedia.org/w/index.php?title=ಮುಂಡು&oldid=1252046" ಇಂದ ಪಡೆಯಲ್ಪಟ್ಟಿದೆ