ವಿಷಯಕ್ಕೆ ಹೋಗು

ಮಧುರಚೆನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧುರಚೆನ್ನ
Born
ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ

ಜುಲೈ ೩೧, ೧೯೦೩
Diedಆಗಸ್ಟ್ ೧೫, ೧೯೫೩
Occupationಸಾಹಿತಿ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಧುರಚೆನ್ನ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು ವಿಜಯಪುರ ಜಿಲ್ಲೆಯವರು.

ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಹಲಸಂಗಿಯಲ್ಲಿ . ತಂದೆ ಸಿದ್ಧಲಿಂಗಪ್ಪ ತಾಯಿ ಅಂಬವ್ವ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆ. ಹುಟ್ಟಿದೂರಿನಲ್ಲೇ ವ್ಯಾಸಂಗ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮಸ್ಥಾನ.

ಸಾಹಿತ್ಯ

[ಬದಲಾಯಿಸಿ]

ಮಧುರಚೆನ್ನರು ಕನ್ನಡ ನವೋದಯದ ಪ್ರಾರಂಭಿಕ ಕಾಲದಲ್ಲಿನ ಮಹತ್ವದ ಬರಹಗಾರರು. ಹಲಸಂಗಿ ಗೆಳೆಯರೆಂದು ಪ್ರಖ್ಯಾತರಾಗಿ ಜಾನಪದ ಮತ್ತು ನವೋದಯ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಸಕ್ರಿಯ ಸಾಹಿತ್ಯಿಕ ಕ್ರಿಯಾಶೀಲ ತಂಡದಲ್ಲಿ ಮಧುರಚೆನ್ನರೂ ಒಬ್ಬರು. ಈ ಗುಂಪಿನ ಇತರರಲ್ಲಿ ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ ಧೂಲ್ಲಾ ಮುಂತಾದವರು ಪ್ರಮುಖರಾಗಿದ್ದರು.

ಜನರಾಡಿಕೊಳಬಹುದು ನನಗು ನಿನಗೂ ಕೂಡೆ

ಅವರೇನು ಬಲ್ಲರೋ ಒಳನಿಧಾನ,

ನನಗೆ ನೀನತಿ ಮಧುರ, ನಿನಗೆ ನಾ ಬಲುಚೆನ್ನ

ಹೀಗಂತಲೇ ನಾವು ಮಧುರಚೆನ್ನ.

ಇದು ಚೆನ್ನಮಲ್ಲಪ್ಪ ಎಂಬ ಮಹನೀಯರು ಮಧುರಚೆನ್ನ ಎಂಬ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿ, ಮಧುರ ಕವಿಗಳಾದ ಹಿರಿಮೆಯ ರೀತಿ.

ಮಧುರಚೆನ್ನರೆಂದು ಖ್ಯಾತಿಪಡೆದ ಕವಿ ಹಲಸಂಗಿ ಚೆನ್ನಮಲ್ಲಪ್ಪನವರು.ಇವರ ಪೂರ್ಣ ಹೆಸರು ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ. ಇವರು ಜನಿಸಿದ್ದು ಹಲಸಂಗಿಯಿಂದ ಪಶ್ಚಿಮಕ್ಕೆ ೬ ಮೈಲು ದೂರದಲ್ಲಿರುವ ಲೋಣಿ ಎನ್ನುವ ಊರಿನಲ್ಲಿ. ಜನನ ದಿನಾಂಕ ೧೯೦೩ ಜುಲೈ ೩೧. ಅವರು ಹುಟ್ಟಿದ ಊರು ಹಲಸಂಗಿಯ ನೆರೆ ಊರಾದ ಹಿರೇಲೋಣಿಯಾದರೂ ಅವರು ಬದುಕೆಲ್ಲ ಕಳೆದದ್ದು ಹಲಸಂಗಿಯಲ್ಲಿಯೇ. ಅವರು 1921ರಲ್ಲಿ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದರಾದರೂ ಅವರ ಶಾಲೆಯ ಓದು ಅಲ್ಲಿಗೇ ಮುಕ್ತಾಯಗೊಂಡಿತು. ಬಳಿಕ ಬಿಜಾಪುರಕ್ಕೆ ಹೋಗಿ ಅಲ್ಲಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಸಾಧ್ಯವಾದಷ್ಟು ಇಂಗ್ಲಿಷ್,ಸಂಸ್ಕೃತ ಹಾಗು ಹಳಗನ್ನಡಗಳನ್ನು ಕಲಿತರು. ಅವರ ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಮುಂತಾದವುಗಳೆಲ್ಲ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳಾಗಿವೆ.

ಮಧುರಚನ್ನರ ವಿವಾಹ ಅವರ ೧೬ನೆಯ ವರ್ಷಕ್ಕೆ ಬಸಮ್ಮ ಎನ್ನುವ ೧೨ ವರ್ಷದ ಕನ್ಯೆಯ ಜೊತೆಗೆ ಆಯಿತು. ಅವರಿಗೆ ೬ ಹುಡುಗರು ಹಾಗೂ ಇಬ್ಬ್ಬರು ಹುಡುಗಿಯರು. ಮಧುರಚೆನ್ನರು ತಮ್ಮ ೧೪ನೆಯ ವಯಸ್ಸಿನಲ್ಲಿಯೆ ಸಾಹಿತ್ಯಸೃಷ್ಟಿಗೆ ತೊಡಗಿದರು. ೧೯ನೆಯ ವಯಸ್ಸಿಗೆ ಶಿಲಾಶಾಸನಗಳ ಹಾಗು ಜನಪದ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದರು. ಹಲಸಂಗಿಯಲ್ಲಿ ಗೆಳೆಯರ ಬಳಗವನ್ನು ಕಟ್ಟಿದರು. ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆದರೆ ಬಾಲ್ಯದಿಂದಲೂ ಅವರದು ಆಧ್ಯಾತ್ಮಿಕತೆಯ ಕಡೆಗೆ ಒಲೆದ ಮನಸ್ಸು ಕೆಲಕಾಲ ನಾಸ್ತಿಕರಾಗಿದ್ದರೂ ಸಹ, ಕೊನೆಗೊಮ್ಮೆ ಶ್ರೀ ಅರವಿಂದರನ್ನು ತನ್ನ ಗುರುಗಳೆಂದು ಭಾವಿಸಿದರು. ತೀವ್ರ ಆಧ್ಯಾತ್ಮಸಾಧನೆಯ ನಂತರ ಮಧುರಚೆನ್ನರು ೧೯೫೩ರ ಅಗಸ್ಟ ೧೫ರಂದು ದೇಹವಿಟ್ಟರು.

ಪತ್ರಿಕೆಯಲ್ಲಿ ಕಾರ್ಯ

[ಬದಲಾಯಿಸಿ]

ವಿಜಾಪುರದಲ್ಲಿ ಶ್ರೀ ಕೊಣ್ಣೊರ ಹಣಮಂತರಾಯರ ಸನ್ನಿಧಾನವನ್ನು ಕೆಲಕಾಲ ಪಡೆದ ಮಧುರಚೆನ್ನರು ಕೊಣ್ಣೊರರು ಹೊರಡಿಸುತ್ತಿದ್ದ ‘ಕಾವ್ಯಗುಚ್ಛ’ ಪತ್ರಿಕೆಗೆ ಪ್ರಾಚೀನ ಕವಿತೆಗಳ ಸರಳಾನುವಾದ ಬರೆದರು. ಈ ಕಾಲದಲ್ಲಿಯೇ ಅವರು ಬೇಂದ್ರೆಯವರನ್ನು ಕಂಡದ್ದು. ‘ಜಯಕರ್ನಾಟಕ; ಪತ್ರಿಕೆಯ ಸಂಬಂಧವನ್ನು ಬೆಳೆಸಿಕೊಂಡದ್ದು. ಇಲ್ಲಿಂದ ಪ್ರಾರಂಭವಾದ ಅವರ ಸಾಹಿತ್ಯಕ ಕಾರ್ಯ ಅವರ ಜೀವನದುದ್ದಕ್ಕೂ ಬೆಳೆಯುತ್ತಾ ಹೋಯಿತು.

ಆಧ್ಯಾತ್ಮ ಸಾಹಿತ್ಯಗಳ ಮೇಳೈಕೆ

[ಬದಲಾಯಿಸಿ]

ಮಧುರ ಚೆನ್ನರ ಬದುಕಿನ ಇನ್ನೊಂದು ಆಯಾಮವೆಂದರೆ ಅವರ ಆಧ್ಯಾತ್ಮಿಕ ಸಾಧನೆ:

ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು

ನನ್ನ ನಲ್ಲನ ಕತೆಗೆ ಮರುಳುಗೊಂಡೆ

ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು

ಈಸೊಂದು ದಿನಕರಗಿ ಗೊತ್ತುಗೊಂಡೆ

ಎಂದು ‘ನನ್ನನಲ್ಲ’ದಲ್ಲಿ ಮಧುರಚೆನ್ನರು ತಮ್ಮ ಆತ್ಮಕಥೆಯನ್ನು ಹೇಳಿಕೊಂಡಿದ್ದಾರೆ. ಅವರು ತಮ್ಮ ಹನ್ನೆರಡನೆಯ ವಯಸ್ಸಿನ ಸುಮಾರಿಗೆ ದೇವರನ್ನು ಕಾಣುವ ಹಂಬಲವುಳ್ಳವರಾದರು. ಸುಮಾರು ಹದಿನಾಲ್ಕು ವರ್ಷಗಳ ಸಾಧನೆಯಲ್ಲಿ ಹೋರಾಡಿ ಅವನನ್ನು ಅರಿತುಕೊಂಡರು. ಅನಂತರದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸಿದ ಅವರು ತಮ್ಮ ಧ್ಯೇಯವನ್ನು ಈಡೇರಿಸಿಕೊಂಡರು. ಅವರ ಆಧ್ಯಾತ್ಮಿಕ ಸಾಧನೆಯ ಕಥನ ಅವರ ಗದ್ಯಕೃತಿಗಳಾದ ‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮಸಂಶೋಧನೆ’ ಇವುಗಳಲ್ಲಿ ಮನೋಜ್ಞವಾಗಿ ಪ್ರಕಟಗೊಂಡಿದೆ.

ಮಧುರ ಚೆನ್ನರ ‘ನನ್ನನಲ್ಲ’ ಮರೆಯಲಾಗದ ಅನುಭಾವ ಗೀತ. ಈ ಸಂಕಲನದಲ್ಲಿ ‘ನನ್ನನಲ್ಲ’, ‘ಮಧುರಗೀತ’ ಎಂಬ ಎರಡು ಪ್ರಮುಖ ನೀಳ್ಗವಿತೆಗಳಿದ್ದು ಉಳಿದದ್ದು ಭಾವಗೀತೆಗಳಾಗಿವೆ. ‘ನನ್ನನಲ್ಲ’ ಅವರ ಹದಿನಾಲ್ಕು ವರ್ಷಗಳ ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುತ್ತದೆ.

ಯಾರ ಕೇಳಿದರಿಲ್ಲ ಯಾರು ಹೇಳಿದರಿಲ್ಲ

ಯಾರ ಬಳಿಯಲಿ ಅತ್ತುಕರೆದರಿಲ್ಲ

ಯಾರ ಕಡೆಗೇನುಂಟು ಮೀರಿಮಿಕ್ಕಿದ ಮಾತು

ಯಾರ ಬಳಿಗು ನೆಲೆಕಾಣಲಿಲ್ಲ

ಹೀಗೆ ಸಾಗುವ ಅವರ ಹುಡುಕಾಟ ಮುಂದೆ ಉತ್ಕಟ ಭಾವದ ಅನುಭಾವವನ್ನು ಚಿತ್ರಿಸುವುದು ಹೀಗೆ:

ಬಂತು ಬಂತೆಲೆ ಬಂತು, ಬಂತು ಘನಸಿರಿ ಬಂತು

ಬಂತೆಂದರೂ ಇದ್ದುದಿದ್ದೇ ಇತ್ತು,

ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ

ಇದ್ದದ್ದೆ ತುಂಬಿ ತುಳುತುಳುಕುತ್ತಿತ್ತು.

ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಯ ಶಬ್ದ

ನಿಶ್ಯಬ್ದವಿದ್ದರೂ ಮೌನವಲ್ಲ,

ನಿಸ್ಸೀಮ ನಿಸ್ಸೀಮ ಸೀಮದಲೆ ನಿಸ್ಸೀಮ

ನಿಸ್ಸೀಮವೆಂದರೂ ಶೂನ್ಯವಲ್ಲ.

ಇಲ್ಲಿಯ ಅನುಭಾವದ ಅಭಿವ್ಯಕ್ತಿ ಶಬ್ದಕ್ಕೆ ಮೀರಿದ ಅನುಭವವನ್ನು ವ್ಯಕ್ತಪಡಿಸುತ್ತದೆ. ಈ ಕುರಿತು ಡಾ. ವಿ. ಕೃ. ಗೋಕಾಕರು ಹೇಳುತ್ತಾರೆ: “.... ಆತ್ಮದ ದಿವ್ಯ ಅರುಣೋದಯದ ಶ್ರೀಮದ್ಗಂಭೀರ ವರ್ಣನೆ ಈ ಅದ್ಭುತ ಶಬ್ದ-ರಂಗದ ನಿಶ್ಯಬ್ದತೆಯನ್ನು ಅನುಭವಿಸಿಯೇ ನೋಡಬೇಕು. ಇಲ್ಲಿ ಅನುಭವದ ಆಳ ದರ್ಶನ ಧಬೆಧಬೆಯಾಗಿ ಧುಮ್ಮಿಕ್ಕಿದೆ. ಆ ಧವಲಗಂಗೆಯ ಧಾವವನ್ನು ನಿಂತು ನೋಡಬೇಕು”

ಮಧುರಚೆನ್ನರ ಇನ್ನೊಂದು ನೀಳ್ಗವನ ಮಧುರಗೀತ. ಇಂದೊಂದು ಸ್ನೇಹಸೂಕ್ತ, ಸಖ್ಯಯೋಗ ಗೀತ. ಈ ಕವಿತೆಯಲ್ಲಿ ಪ್ರೇಮ, ಮೋಹ ಗೆಳೆತನದ ಆದರ್ಶ ಮುಂತಾದವುಗಳೆಲ್ಲ ನಿರೂಪಿತವಾಗಿವೆ.

ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ

ಅದು ನಮ್ಮ ಬುದ್ಧಿಯಾಚೆಗಿನ ಮಾತು,

ಯಾವುದೇನೇ ಇರಲಿ ಪ್ರೀತಿಯಂಥಾ ವಸ್ತು

ಭವದಲ್ಲಿ ಕಾಣೆ ಮನಗಂಡ ಮಾತು.

ಮಧುರಚೆನ್ನರ ‘ದೇವತಾ ಪೃಥಿವಿ’ ದ. ರಾ ಬೇಂದ್ರೆಯವರು ನುಡಿದಂತೆ ಕೃತಿ ಸತಿಯ ಶಿರೋರತ್ನ. ಈ ಕವಿತೆಯ ವಸ್ತು – ಮಧುರಚೆನ್ನರು ತಮ್ಮ ‘ಬೆಳಗು’ ಕೃತಿಯಲ್ಲಿ ತಿಳಿಸಿಕೊಟ್ಟಂತೆ “ಪರ್ಯಾಯದಿಂದ (indirectly) ಈಶ ಪ್ರೇರಕತ್ವವನ್ನು ಒಪ್ಪಿಕೊಂಡ ಜೀವವು ಈಗ ತೀರ ಪ್ರತ್ಯಕ್ಷವಾಗಿ (directly) ಮತ್ತು ಅವಿಚ್ಚಿನ್ನವಾಗಿ ಅದನ್ನು ಅನುಭವಿಸಲೆಳಸುತ್ತಿದೆ” ಎಂಬ ಸಾಧನೆಯ ಒಂದು ಹಂತವನ್ನು ಒಳಗೊಂಡಿದೆ. ಅಂದರೆ ಪೃಥ್ವಿಯ ದೈವತ್ವ ಮತ್ತು ತಾಯ್ತನಗಳನ್ನು ಶ್ರದ್ಧೆಯಿಂದ ಒಪ್ಪಿಕೊಂಡ ಕವಿ ಒಂದು ಹಸಿವೆಯನ್ನು ಹಿಂಗಿಸಿಕೊಂಡು ಇನ್ನೊಂದು ಹಸಿವೆಗೆ (ಕೇವಲದ ಹಸಿವೆಗೆ) ಬಾಯ್ದೆರೆದಿದ್ದಾನೆ.

ಹಸವೀಗಿ ಮೊಲೆಯುಂಡೆ ಕಸಿವೀಸಿಗೇನುಳ್ಳೆ

ಹಾಲೊಲ್ಲೆ ಸಾಕು ಬಿಗಿದಪ್ಪೆ | ತಾಯಮ್ಮ

ಮಲಗಿರುವ ತಾಯಿ ಪೃಥಿವಿ||

ಮೊಲೆಹಾಲು ರುಚಿಗೊಂಡು ಮನದ್ಹಾಲ ಬಯಸೀನ

ಗುಟುಗುಟುಕಿಗೊಮ್ಮೆ ಮಿಕಿಮಿಕಿ | ಏಳಮ್ಮ

ಮಲಗಿರುವ ತಾಯಿ ಪೃಥಿವಿ ||

ದೈವತ್ವದ ಬಾಹ್ಯಸ್ವರೂಪದ ಸೌಂದರ್ಯವನ್ನು ಅನುಭವಿಸಿದ ಕವಿ, ಅದಕ್ಕೆ ಮಿಗಿಲಾಗಿ ಅಂತರಂಗದ ಐಸಿರಿಯನ್ನು ಕಾಣಲು ಹಂಬಲಿಸುತ್ತಿರುವುದು ಇಲ್ಲಿ ಕಂಡುಬರುತ್ತದೆ.

ಭಾವಗೀತೆಗಳು

[ಬದಲಾಯಿಸಿ]

ಮಧುರಚೆನ್ನರ ಇನ್ನುಳಿದ ಭಾವಗೀತಗಳಲ್ಲಿ ‘ಸಲಿಗೆಯ ಸಲ್ಲಾಪ’, ‘ನೋಂಪಿ’, ‘ಕೆಸರೊಳಗಿನ ಕಮಲ’, ‘ಸುಖದುಃಖ’, ‘ಸುಖ ಜೀವನ’, ‘ಧ್ರುವ’, ‘ಉಷಾದೇವಿ’, ‘ರೋಹಿಣಿ’, ‘ಮಾವಿನಗೊಲ್ಲೆ’ ಮುಂತಾದವುಗಳು ಭಾವ, ಭಾಷೆ, ಲಯ ಮುಂತಾದವುಗಳಿಂದ ಕನ್ನಡದ ಅತ್ಯುತ್ತಮ ಭಾವಗೀತಗಳ ಮಾಲಿಕೆಗೆ ಸೇರುತ್ತವೆ. “ಹೊಸಗನ್ನಡ ಕಾವ್ಯಕ್ಕೆ ಜಾನಪದ ಸತ್ವವನ್ನು ತುಂಬಿ, ಆತ್ಮಚಿಂತನೆಯ ಅನುಭಾವ ಮಾರ್ಗದಲ್ಲಿ ಅದನ್ನು ನಡೆಸಿಕೊಂಡು ಹೋಗಿ, ಕೃತಕೃತ್ಯರಾದ ಮಧುರಚೆನ್ನರು ಕೆಲವೇ ಕೃತಿಗಳನ್ನು ನೀಡಿದ್ದರೂ ಅವುಗಳ ಚೆಲುವು ಎಂದಿಗೂ ಮಾಸದಂತಹುದು” ಎಂಬ ಚೆನ್ನವೀರ ಕಣವಿಯರ ವಿಮರ್ಶೆ ಸಕಲರೂ ಒಪ್ಪಿಕೊಳ್ಳುವಂತಹದಾಗಿದೆ.

ಗದ್ಯ ಕೃತಿಗಳು

[ಬದಲಾಯಿಸಿ]

ಮಧುರಚೆನ್ನರ ಗದ್ಯಕೃತಿಗಳಲ್ಲಿ ‘ಪೂರ್ವರಂಗ’ ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮ ಸಂಶೋಧನೆ’ ಇವು ಆಧ್ಯಾತ್ಮಿಕ ಸಾಧನೆಯನ್ನು ಚಿತ್ರಿಸುವ ಸೃಜನಶೀಲ ಕೃತಿಗಳೆಂದೆನಿಸಿವೆ. ‘ಪೂರ್ಣಯೋಗದ ಪಥದಲ್ಲಿ’, ‘ಕನ್ನಡಿಗರ ಕುಲಗುರು’ ಇತ್ಯಾದಿಗಳು ಅವರ ಚಿಂತನಶೀಲ ಗದ್ಯಕೃತಿಗಳು. ‘ವಿಸರ್ಜನ’ ರವೀಂದ್ರನಾಥ ಠಾಗೂರರ ನಾಟಕದ ಅನುವಾದ. ‘ಮಾತೃವಾಣಿ’ ಶ್ರೀಮಾತೆಯವರ ‘ವರ್ಡ್ಸ್ ಆಫ್ ದಿ ಮದರ್’ ಅನುವಾದವಾಗಿದೆ.

ಶಾಸನ ದರ್ಶನ

[ಬದಲಾಯಿಸಿ]

ಬೇರೆ ಬೇರೆ ಪತ್ರಿಕೆಗಳಲ್ಲಿ ಚದರಿಹೋದ ತಮ್ಮ ಸಂಶೋಧನಾತ್ಮಕವಾದ ಒಟ್ಟು ಹದಿನಾಲ್ಕು ಲೇಖನಗಳನ್ನು ಮಧುರಚೆನ್ನರು ಪ್ರಕಟಿಸಿದ್ದು, ‘ವಿಜಾಪುರ ಶಾಸನ’, ‘ಅಭಿನವ ಪಂಪ ಮಹಾಕವಿ ಬರೆದ ವಿಜಾಪುರ ಶಿಲಾಲಿಪಿ’, ‘ಪ್ರಾಚೀನ ಕಾಲದ ಒಬ್ಬ ನಟಶ್ರೆಷ್ಟ ಹಾಗೂ ಒಬ್ಬ ಕವಿ’, ‘ಅರ್ಜುನವಾಡದ ಶಾಸನ’ ಈ ಮುಂತಾದವುಗಳು ನಮ್ಮ ಸಾಹಿತ್ಯ ಚರಿತ್ರೆಯ ಮೇಲೆ ಹೊಸ ಬೆಳಕು ಬೀರಿವೆ. ಅರವಿಂದ ಸಾಹಿತ್ಯ, ಶರಣ ಸಾಹಿತ್ಯ, ಜನಪದ ಸಾಹಿತ್ಯ, ಭಾಷಾಶಾಸ್ತ್ರ ಇತ್ಯಾದಿ ವಿಷಯಗಳನ್ನು ಕುರಿತು ಅವರು ಬರೆದ ಹಲವು ಲೇಖನಗಳು ಆಯಾ ಕ್ಷೇತ್ರಗಳಲ್ಲಿ ಕಾರ್ಯಮಾಡುವವರಿಗೆ ಅತ್ಯಂತ ಉಪಯುಕ್ತ ಸಾಮಗ್ರಿಯಾಗಿವೆ.

ಹಲಸಂಗಿ ಗೆಳೆಯರು

[ಬದಲಾಯಿಸಿ]

ಹಲಸಂಗಿ ವಿಜಾಪುರ ಜಿಲ್ಲೆಯ ಉತ್ತರದ, ಸೊಲ್ಲಾಪುರ ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ಒಂದು ಸಣ್ಣ ಹಳ್ಳಿ. ಈ ಹಳ್ಳಿಯಲ್ಲಿಯೇ ಒಂದು ಗೆಳೆಯರ ಗುಂಪನ್ನು ಅವರು ಕಟ್ಟಿಕೊಂಡಿದ್ದರು. ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ ಧೂಲ್ಲಾ ಇವರೆಲ್ಲ ಅಲ್ಲಿಯ ಸಾಹಿತ್ಯ ಸ್ನೇಹಿತರು. ಸ್ನೇಹಿತರು ಎನ್ನುವುದಕ್ಕಿಂತ ಸೋದರರು ಎಂದು ಕರೆಯುವುದೇ ಹೆಚ್ಚು ಸೂಕ್ತವಾದದ್ದು. ಈ ಹಲಸಂಗಿ ಗೆಳೆಯರು ನವೋದಯ ಸಾಹಿತ್ಯಕ್ಕೆ ತಮ್ಮ ಕೊಡುಗೆಗಳನ್ನು ನೀಡಿದ್ದಲ್ಲದೆ, ಪ್ರಪ್ರಥಮವಾಗಿ ಜನಪದ ಸಾಹಿತ್ಯದಲ್ಲಿ ಅಮೂಲ್ಯವಾದ ಕೆಲಸವನ್ನು ಮಾಡಿದ್ದಾರೆ. ‘ಗರತಿಯ ಹಾಡು’, ‘ಮಲ್ಲಿಗೆ ದಂಡೆ’, ‘ಜೀವನ ಸಂಗೀತ’ ಈ ಜನಪದ ಹಾಡುಗಳ, ಲಾವಣಿಗಳ ಸಂಗ್ರಹಗಳು ಇಂದಿಗೂ ಅನುಪಮ ಕೊಡುಗೆಗಳಾಗಿ ಉಳಿದಿವೆ.

ಧಾರವಾಡ ಗೆಳೆಯರ ಗುಂಪಿನ ಗೆಳೆಯರೂ ಆಗಿದ್ದ ಹಲಸಂಗಿ ಗೆಳೆಯರು ತನ್ಮೂಲಕವೂ ನಾಡುನುಡಿಯ ಸೇವೆ ಮಾಡಿದ್ದಾರೆ. ಹಲಸಂಗಿ ಗೆಳೆಯರಲ್ಲಿಯೇ ‘ಮಧುರಚೆನ್ನ’ರದು ಅದಮ್ಯ ವ್ಯಕ್ತಿತ್ವ. ಸಾಹಿತ್ಯಕ ಹಿರಿಮೆಯಿಂದ, ಗೆಳೆಯ ಗುಂಪಿನ ಬಾಂಧವ್ಯದಿಂದ, ಅರವಿಂದ ಮಂಡಳದ ಸತ್ಸಂಗದಿಂದ ಅವರು ತಮ್ಮ ಪ್ರಭಾವಮುದ್ರೆಯನ್ನು ಮೂಡಿಸಿದ್ದಾರೆ. ಬೇಂದ್ರೆ ಒಂದು ಪದ್ಯದಲ್ಲಿ ಮಧುರಚೆನ್ನರನ್ನು ನೆನೆದುಕೊಳ್ಳುತ್ತ, ಅವರ ಅಸದೃಶ ಗೆಳೆತನವನ್ನು ಕುರಿತು ಆಡಿದ ಮಾತು ಎಂದೆಂದೂ ಮರೆಯದಂತಹದಾಗಿದೆ:

‘ಮಧುರಗೀತ’ವ ಹಾಡಿ ‘ನನ್ನನಲ್ಲ’ನ ಒಲಿಸಿ

ಹಲಸಂಗಿ ನಾಡಿನಲ್ಲಿ ನೆಲೆಸಿ ನಿಂತ

ನನ್ನ ‘ಚೆನ್ನ’ನಿಗೆಣೆಯಾ ಗೆಣೆಯರಾರೀಹರು

ಅವನೆ ಅವನಿಗು ಹೆಚ್ಚು ಅವನಿಗಿಂತ

ವಿದಾಯ

[ಬದಲಾಯಿಸಿ]

ಮಧುರ ಚೆನ್ನರು ೧೯೫೨ ಆಗಸ್ಟ್ ೧೫ರಂದು ಈ ಲೋಕವನ್ನಗಲಿದರು. ಇನ್ನೂ ಐವತ್ತು ವರುಷವೂ ತುಂಬುವುದಕ್ಕೆ ಮುಂಚೆಯೇ ಅಸ್ತಮಿಸಿದ ಅವರ ಬಾಳು ಪೂರ್ಣತ್ವದಿಂದ ಶೋಭಿತಗೊಂಡದ್ದು.

ಮಾಹಿತಿ ಆಧಾರ

[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯಾದ 'ಸಾಲು ದೀಪಗಳು' ಕೃತಿಯಲ್ಲಿ ಜಿ. ಪಿ. ಕಾಪಸೆ ಅವರ ಲೇಖನ.

ಮಧುರಚೆನ್ನರ ಸಾಹಿತ್ಯ

[ಬದಲಾಯಿಸಿ]
  • ನನ್ನ ನಲ್ಲ (ಕವನಸಂಗ್ರಹ)
  • ಪೂರ್ವರಂಗ (ಆಧ್ಯಾತ್ಮಿಕ ಆತ್ಮಕಥನ)
  • ಕಾಳರಾತ್ರಿ
  • ಬೆಳಗು
  • ಆತ್ಮಸಂಶೋಧನೆ (ಸ್ವಾನುಭವ ಕಥನ)
  • ಪೂರ್ಣಯೋಗದ ಪಥದಲ್ಲಿ (ಅರವಿಂದರ ಯೋಗ ವಿಚಾರಗಳು)
  • ಕನ್ನಡಿಗರ ಕುಲಗುರು (ವಿದ್ಯಾರಣ್ಯರ ಜೀವನದ ಬಗೆಗೆ ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ ರಚನೆ)

ಅನುವಾದ:

  • ವಿಸರ್ಜನ (ರವೀಂದ್ರನಾಥ ಠಾಕೂರರ ಬಂಗಾಲಿ ನಾಟಕದಿಂದ)
  • ಪೂರ್ಣಯೋಗ (ಶ್ರೀ ಅರವಿಂದರ 'ಯೋಗಿಕ ಸಾಧನ'ದಿಂದ)
  • ಮಾತೃವಾಣಿ (ಶ್ರೀ ಮಾತೆಯವರ 'ವರ್ಡ್ಸ ಆಫ್ ದ ಮದರ್'ದಿಂದ)
  • ಬಾಳಿನಲ್ಲಿ ಬೆಳಕು (ಟಾಲ್ ಸ್ಟಾಯ್ ರ ಆತ್ಮಕಥನ: ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ)
  • ಧರ್ಮಕ್ಷೇತ್ರೆ ಕುರುಕ್ಷೇತ್ರೆ (ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ)

ಹಲಸಂಗಿ ಗೆಳೆಯರ ಕೊಡುಗೆಯ ಆಳ

[ಬದಲಾಯಿಸಿ]

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.

ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”

ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುದಲ್ ಫ್ಲೀಟ್ ರ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.

ಗರತಿಯ ಹಾಡು :

ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.

ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಯಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ. ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. "ಜನವಾಣಿ ಬೇರು: ಕವಿವಾಣಿ ಹೂವು" ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.

ಬ್ಯಾಸಗಿ ದಿವಸಕ ಬೇವಿನ ಮರತಂಪ ತವರ ಮನಿಯಾ ದೀಪ ತವರೇರಿ ನೋಡೇನ ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...

ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು. ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು ಅಳಿಯ ಎಂಥವರು ನನಗ್ಹೇಳ | ಹಂಪೀಯ ವಿರುಪಾಕ್ಷಿಗಿಂತ ಚೆಲುವರು.

ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾಧಿಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ” ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.

ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ ಆಗಿದೆ.(ಡಾ.ಪ್ರಕಾಶ ಗ.ಖಾಡೆ ಅವರ ,ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಕೃತಿಯಿಂದ)

ನನ್ನನಲ್ಲ

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]