ಮಂದಿರ ಕಲಶ

ವಿಕಿಪೀಡಿಯ ಇಂದ
Jump to navigation Jump to search
ಮುಂಬಾ ದೇವಿ ದೇವಸ್ಥಾನದ ಕಲಶ

ಮಂದಿರ ಕಲಶವು ಹಿಂದೂ ದೇವಸ್ಥಾನಗಳ ಶಿಖರಗಳಿಗೆ ಚಾವಣಿ ಒದಗಿಸಲು ಬಳಸಲಾದ ಲೋಹ ಅಥವಾ ಕಲ್ಲಿನ ಗುಮ್ಮಟ. ಇದು ಮರದ ಶಿಖರಪ್ರಾಯದಂತೆ ಇರುತ್ತದೆ. ಇದನ್ನು ಈ ಉದ್ದೇಶಕ್ಕಾಗಿ ಚಾಲುಕ್ಯರು, ಗುಪ್ತರು ಮತ್ತು ಮೌರ್ಯರ ಯುಗಗಳಿಂದ ಬಳಸಲಾಗಿದೆ.

ಮೂಲಭೂತವಾಗಿ, ನಾಲ್ಕು ಪ್ರಕಾರಗಳ ಮಂದಿರ ಕಲಶಗಳಿವೆ: ಕೊಂಬು ಕಲಶ - ಇದು ಅತ್ಯಂತ ಸಾಮಾನ್ಯವಾಗಿ ಬಳಸಲಾದ ಕಲಶವಾಗಿದೆ, ಉದಾಹರಣೆಗೆ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ. ಇದು ಗೂಳಿಯ ಕೊಂಬಿನಂತೆ ಆಕಾರ ಹೊಂದಿರುತ್ತದೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ; ತ್ರಿಕಲಶ - ಇದು ಮೂರು ಉದ್ದನೆಯ ಕಲಶಗಳ ಗುಂಪಾಗಿದೆ. ಇದನ್ನು ಬಹುತೇಕವಾಗಿ ಗೋಪುರಗಳು ಮತ್ತು ಮುಖ್ಯದ್ವಾರಗಳ ಮೇಲೆ ಬಳಸಲಾಗುತ್ತದೆ. ಉದಾಹರಣೆ: ಬದರಿನಾಥ್ ದೇವಸ್ಥಾನ; ಮಟಕಾ ಕಲಶ - ಈ ಕಲಶವು ಕೊಡಗಳು ಮತ್ತು ಮಣ್ಣಿನ ಬಿಂದಿಗೆಗಳಂತೆ ಆಕಾರ ಹೊಂದಿರುತ್ತದೆ. ಇದು ಕೊಡಗಳನ್ನು ಒಂದರ ಮೇಲೊಂದು ಇಟ್ಟಂತೆ ಕಾಣುತ್ತದೆ. ಉದಾಹರಣೆ: ಮುಂಬಾದೇವಿ ದೇವಸ್ಥಾನ; ಗೋಳ ಕಲಶ - ಈ ಕಲಶವು ದುಂಡಗಿದ್ದು ತುದಿಯಲ್ಲಿ ಬಹಳ ಚಿಕ್ಕ ಮತ್ತು ನವಿರಾದ ಅಗ್ರವನ್ನು ಹೊಂದಿರುತ್ತದೆ. ಉದಾಹರಣೆ: ಜಗನ್ನಾಥ ದೇವಸ್ಥಾನ, ಪುರಿ.

ಕಲಶಗಳನ್ನು ಬಹುತೇಕವಾಗಿ ಲೋಹಗಳಿಂದ ತಯಾರಿಸಲಾಗುತ್ತದೆ. ಮುಖ್ಯವಾಗಿ ಬಳಸಲಾದ ಲೋಹಗಳೆಂದರೆ ಉಕ್ಕು, ಕಬ್ಬಿಣ, ಅಲ್ಯುಮಿನಿಯಂ ಮತ್ತು ಕಂಚು. ಶ್ರೀ ಸಮಾಧಿ ಮಂದಿರ, ಶಿರಡಿ ಮತ್ತು ತಿರುಪತಿಯಂತಹ ಪ್ರಸಿದ್ಧ ದೇಗುಲಗಳಲ್ಲಿ, ಚಿನ್ನ ಮತ್ತು ಬೆಳ್ಳಿಯಂತಹ ಶ್ರೇಷ್ಠ ಲೋಹಗಳನ್ನು ಬಳಸಲಾಗುತ್ತದೆ. ಪ್ಲ್ಯಾಟಿನಮ್ ಅನ್ನು ಅಪರೂಪವಾಗಿ ಬಳಸಲಾಗುತ್ತದೆ. ಪ್ರಾಚೀನ ಕಾಲದಲ್ಲಿ, ಕಲ್ಲಲ್ಲಿ ಕೆತ್ತಿದ ದೇವಸ್ಥಾನಗಳು ಕಲ್ಲಿನ ಕಲಶವನ್ನು ಹೊಂದಿರುತ್ತಿದ್ದವು. ಎಲ್ಲೋರ ಗುಹೆಗಳು, ಹಂಪಿ ಮತ್ತು ಮಹಾಬಲಿಪುರಮ್‍ನಂತಹ ಅನೇಕ ದೇವಸ್ಥಾನಗಳು ಈಗಲೂ ಈ ಕಲ್ಲಿನ ಕಲಶಗಳನ್ನು ಹೊಂದಿವೆ. ದಕ್ಷಿಣ ಭಾರತದಲ್ಲಿ, ಕಟ್ಟಿಗೆಯಿಂದ ತಯಾರಿಸಿದ ಕಲಶಗಳು ಸಾಮಾನ್ಯವಾಗಿವೆ. ಜೊತೆಗೆ, ಹಿಂದೂ ಜನರಿಂದ ಮನೆಗಳಲ್ಲಿ ಬಳಸಲಾದ ಚಿಕ್ಕ ಕಟ್ಟಿಗೆಯ ದೇಗುಲಗಳಲ್ಲಿ, ಕಲಶಗಳನ್ನು ಕಟ್ಟಿಗೆಯಿಂದ ಕೆತ್ತಲಾಗುತ್ತದೆ ಅಥವಾ ಲೋಹದಿಂದ ತಯಾರಿಸಲಾಗುತ್ತದೆ.