ಮಂದಲ್ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗಿನ ಸುಂದರ ಪ್ರವಾಸಿತಾಣಗಳ್ಳೊಂದು ಮಂದಲ್ ಪಟ್ಟಿ(ಮಾಂದಲ ಪಟ್ಟಿ).ತನ್ನದೇ ಆದ ನಿಸರ್ಗ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ.

ಮಡಿಕೇರಿಯಿಂದ ಅಬ್ಬಿಫಾಲ್ಸ್ ನ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ರೀತಿಯ ಥ್ರೀಲ್. ಸುತ್ತ ಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು, ತೊರೆ ಝರಿಗಳು, ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳು, ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳು ನೋಡುತ್ತಾ ಹೋದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿರುತ್ತದೆ.

ಮೊದಲೆಲ್ಲ ಮಾಂದಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು. ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈಗ ಮಾಂದಲಪಟ್ಟಿ ಕೂಡ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದಷ್ಟು ದೂರ ಅಂದರೆ ಅರಣ್ಯ ಇಲಾಖೆ ವಸತಿ ಗೃಹದ ತನಕ ಡಾಂಬರು ರಸ್ತೆ ಮಾಡಲಾಗಿದೆ. ಆ ನಂತರ ಮಣ್ಣು ರಸ್ತೆಯಲ್ಲಿ ಸಾಗುವುದು ಅನಿವಾರ್ಯ.

ಸಮುದ್ರ ಮಟ್ಟದಿಂದ ಸುಮಾರು ೪೦೦೦ ಅಡಿ ಎತ್ತದಲ್ಲಿರುವ ಮಾಂದಲಪಟ್ಟಿಗೆ ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಾದರೂ ವರ್ಷದ ಹೆಚ್ಚಿನ ದಿನಗಳು ಅಲ್ಲಿ ನೀರವ ಮೌನ ನೆಲೆಸಿರುತ್ತದೆ. ಕೊಡವ ಭಾಷೆಯಲ್ಲಿ "ಮಾಂದಲ್ ಪಟ್ಟಿ" ಎಂದರೆ ಎತ್ತರದ ಜಾಗ ಎಂದರ್ಥ. ಬಹುಶಃ ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.

ಮಂದಲ್ ಪಟ್ಟಿ ಪ್ರವಾಸಿಗರ ಸ್ವರ್ಗ ತಾಣ ಎಂದರೆ ತಪ್ಪಾಗಲಾರದು. ಏಕೆಂದರೆ ಏರು ರಸ್ತೆಯಲ್ಲಿ ಹರಸಹಾಸ ಮಾಡಿ ಬೆಟ್ಟವೇರಬೇಕು. ಇಲ್ಲಿ ಫೋರ್ ವೀಲರ್ ಗಳು ಮಾತ್ರ ಸಲೀಸಾಗಿ ಮುಂದೆ ಸಾಗುತ್ತದೆ. ಹೆಚ್ಚಿನವರು "ನಡೆದು ನೋಡಾ ಕೊಡಗಿನ ಬೆಡಗಾ" ಎಂಬ ಕವಿ ವಾಣಿಯಂತೆ ನಡೆದೇ ಬೆಟ್ಟದ ಮೇಲೆ ಸಾಗುತ್ತಾರೆ. ಕಲ್ಲು, ಮುಳ್ಳನ್ನು ಮೆಟ್ಟುತ್ತಾ ಏರು ರಸ್ತೆಯಲ್ಲಿ ಸಾಗುವಾಗ ಆಯಾಸವಾಗುವುದು ಸಹಜ ಆದರೆ ಬೆಟ್ಟದ ತುತ್ತ ತುದಿ(ವ್ಯೂಪಾಯಿಂಟ್) ತಲುಪಿದಾಗ ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು.... ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು ...ಅಲೆಅಲೆಯಾಗಿ ತೇಲಿ ಬರುವ ಮಂಜು ... ಸುಂದರ ನಿಸರ್ಗ ಸೌಂದರ್ಯ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತವೆ. ನಡುಬೇಸಿಗೆಯಲ್ಲೂ ತಂಪು ಹವೆ. ಮುಂಜಾನೆ ಇಬ್ಬನಿಯ ಸಿಂಚನ, ಸಂಜೆ ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ಮನಮೋಹಕ ಅದು ವರ್ಣಿಸಲಸಾಧ್ಯ.

ಗ್ರಾಮಸ್ಥರಿಗೆ ಕ್ರೀಡಾತಾಣ[ಬದಲಾಯಿಸಿ]

ಮಂದಲ್ ಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣವಾದರೆ, ಸುತ್ತಲಿನ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಮಕ್ಕಂದೂರು, ದೇವಸ್ತೂರು, ಮುತ್ತುನಾಡು, ಹಚ್ಚಿನಾಡು ಗ್ರಾಮಗಳ ಯುವಕರಿಗೆ ವರ್ಷಕ್ಕೊಮ್ಮೆ ತಮ್ಮ ಕ್ರೀಡಾ ಸಾಹಸ ಮೆರೆಯಲು ಮೈದಾನವು ಹೌದು. ಇದು ಅಚ್ಚರಿ ಮೂಡಿಸಿದರು ಸತ್ಯ. ಕ್ರೀಡಾಕೂಟದ ದಿನದಂದು ಬೆಳಿಗ್ಗೆಯೇ ಜನರು ಬೆಟ್ಟವನ್ನೇರ ತೊಡಗುತ್ತಾರೆ.

ಇಲ್ಲಿ ವಿವಿಧ ಗೆಯ ಕ್ರೀಡಾಕೂಟಗಳು ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯತ್ತದೆ.ಮಕ್ಕಳ ಶಕ್ತಿ, ಛಲ, ಜಾಣ್ನೆ ಪರೀಕ್ಷಿಸಲು ಅಂಬುಕಾಯಿ(ತೆಂಗಿನಕಾಯಿ) ಸ್ಪರ್ಧೆ ನಡೆಯುತ್ತದೆ. ಇದು ವಿಶಿಷ್ಟ ಕ್ರೀಡೆ. ಹತ್ತಾರು ಮಕ್ಕಳನ್ನು ಸುತ್ತ ನಿಲ್ಲಿಸಿ ಅವರ ಮಧ್ಯೆ ತೆಂಗಿನಕಾಯಿಯನ್ನು ಎಸೆಯಲಾಗುತ್ತದೆ. ಈ ತೆಂಗಿನಕಾಯಿಯನ್ನು ಎಲ್ಲರಿಂದ ತಪ್ಪಿಸಿ ಯಾರು ತಮ್ಮವಶ ಮಾಡಿಕೊಂಡು ಅದನ್ನು ಮೇಲಕ್ಕೆ ಎತ್ತಿ ತೋರಿಸುತ್ತಾರೆಯೋ ಅವರೇ ವಿನ್ನರ್. ಆದರೆ ಅದು ಸುಲಭವಲ್ಲ ತೆಂಗಿನಕಾಯಿಯನ್ನು ಬಹಳ ಸಮಯದವರೆಗೆ ಕಿತ್ತಾಟ, ಪರದಾಟ ನಡೆಯುತ್ತದೆ. ಕಾಯಿ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಸಾಗುತ್ತಲೇ ಇರುತ್ತದೆ.ನೆಲಕ್ಕೆ ಬಿದ್ದು ಎದ್ದು ಕೊನೆಗೆ ಯಾರ ಕೈಗೆ ಕಾಯಿ ಸಿಕ್ಕತ್ತದೆಯೋ ಅವರು ಅದನ್ನು ಮೇಲಕ್ಕೆ ಎತ್ತಿ ಪ್ರದರ್ಶಿಸುತ್ತಾರೆ. ಆಗ ಅವರನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇನ್ನು ಗುಡ್ಡಗಾಡು ಓಟ ಸ್ಪೆರ್ಧೆ ಇದರಲ್ಲಿ ಹಳ್ಳಿ ಹೈದರು ಕಾಲಿಗೆ ಯಾವೂದೇ ಶೂ ಹಾಕದೆ ಹತ್ತಾರು ಕಿ.ಮೀ ದೂರವನ್ನು ಓಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.

ಓಟದ ಸ್ಪರ್ಧೆಯೆಲ್ಲಾ ಮುಗಿಯುವ ವೇಳೆಗೆ ಸೂರ್ಯ ನೆತ್ತಿಯ ಮೇಲೆ ಬರುತ್ತಾನೆ. ಅಷ್ಟರಲ್ಲೇ ಹೊಟ್ಟೆಯೂ ಚುರುಗುಟ್ಟ ತೊಡಗುತ್ತದೆ.ಗ್ರಾಮಸ್ಥರೆಲ್ಲ ತಂದ ಊಟವನ್ನು ಎಲ್ಲರೂ ಸೇರಿ ಸಹಭೋಜನಮಾಡುತ್ತಾರೆ.

ಮಾಂದಲ್ ಪಟ್ಟಿಯ ಸೌಂದರ್ಯಕ್ಕೆ ಮನಸೋತ ಚಿತ್ರತಂಡಗಳು ಕೂಡ ಶೂಟಿಂಗ್ ಗಾಗಿ ಮಂದಲ್ ಪಟ್ಟಿಯನ್ನು ಆರಿಸುತ್ತಿದ್ದಾರೆ. ಗಾಳಿಪಟ ಚಿತ್ರದ ಚಿತ್ರಿಕರಣವನ್ನು ಸರಿಸುಮಾರಾಗಿ ಇಲ್ಲೆ ಮಾಡಲಾಗಿದೆ. ಆ ಚಿತ್ರದಲ್ಲಿ ಮಂದಲ್ ಪಟ್ಟಿಯನ್ನು "ಮುಗಿಲು ಪೇಟೆ"ಎಂಬುದಾಗಿ ಕರೆಯಲಾಗಿದೆ. ಹಾಗಾಗಿ ಮಾಂದಲ ಪಟ್ಟಿ ಯನ್ನು ಮುಗಿಲು ಪೇಟೆ ಅಂತಲೂ ಕರೆಯುವುದುನ್ನುಂಟು.[೧]

ಉಲ್ಲೇಖ[ಬದಲಾಯಿಸಿ]

  1. ಹೊರಮಲೆ ಸ್ಮರಣ ಸಂಚಿಕೆ ೨೦೧೧