ವಿಷಯಕ್ಕೆ ಹೋಗು

ಭಾರತ್ ಸ್ಟೋರ್ಸ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Testcases other

ಭಾರತ್ ಸ್ಟೋರ್ಸ್

ಭಾರತ್ ಸ್ಟೋರ್ಸ್ ಪಿ.ಶೇಷಾದ್ರಿಯವರ ೭ನೆಯ ಚಲನಚಿತ್ರ. ಇದಕ್ಕೆ ೨೦೧೨ನೆಯ ಇಸವಿಯ ಉತ್ತಮ ಪ್ರಾದೇಶಿಕ ಚಲನಚಿತ್ರ-ಕನ್ನಡ ಎಂಬ ರಾಷ್ಟ್ರೀಯ ಪುರಸ್ಕಾರ ಸಂದಿದೆ. ಶೇಷಾದ್ರಿಯವರಿಗೆ ಇದು ಸತತ ಏಳನೆ ರಾಷ್ಟ್ರಪ್ರಶಸ್ತಿ.

ಸಾರಾಂಶ

[ಬದಲಾಯಿಸಿ]

ಜಾಗತೀಕರಣದ ಹಿನ್ನೆಲೆಯಲ್ಲಿ ಈ ಇಪ್ಪತ್ತು ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ಪಡೆದುಕೊಂಡಿರುವ ಆಧುನಿಕತೆಯ ಸ್ವರೂಪ ಉದಾರೀಕರಣದ ಕೊಡುಗೆ. ಕಣ್ಣು ಕೋರೈಸುವಂತೆ ತಲೆ ಎತ್ತಿರುವ ಮಾಲ್-ಮಾರ್ಟ್‌ಗಳು ಈ ಆಧುನಿಕತೆಯ ಒಂದು ಪ್ರತೀಕ. ಸಣ್ಣ ಸಣ್ಣ ಕಿರಾಣ ಅಂಗಡಿಗಳನ್ನು ನೆಚ್ಚಿಕೊಂಡಿದ್ದ ನಗರವಾಸಿಗಳು ಮಾಲ್-ಮಾರ್ಟ್ ಸಂಸ್ಕೃತಿಗೆ ಆಕರ್ಷಿತರಾದಾಗ ಸಂಭವಿಸುವ ಸಾಮಾಜಿಕ ತಲ್ಲಣಗಳು ‘ಭಾರತ್ ಸ್ಟೋರ್ಸ್’ ಚಲನಚಿತ್ರದ ತಿರುಳು.

ಚಿತ್ರದ ಕಥೆ

[ಬದಲಾಯಿಸಿ]

ಆಕೆ ಭಾರತಿ. ಸುಮಾರು ಒಂಬತ್ತು ವರ್ಷಗಳ ನಂತರ ಅಮೆರಿಕಾದಿಂದ ಗಂಡ ಶರತ್‌ನೊಂದಿಗೆ ಬೆಂಗಳೂರಿಗೆ ಬಂದಿದ್ದಾಳೆ. ಆಕೆಯ ಉದ್ದೇಶ ತನ್ನ ತಂದೆಯ ಸ್ನೇಹಿತ ಗೋವಿಂದಶೆಟ್ಟಿಯನ್ನು ಭೇಟಿಯಾಗಿ ಋಣ ಸಂದಾಯ ಮಾಡುವುದು.

‘ಭಾರತ್ ಸ್ಟೋರ್ಸ್’ ಎಂಬುದು ಗೋವಿಂದಶೆಟ್ಟಿ ನಡೆಸುತ್ತಿದ್ದ ಒಂದು ಪುಟ್ಟ ಕಿರಾಣಿ ಅಂಗಡಿ. ಒಂದು ಕಾಲದಲ್ಲಿ ಅದರ ಖ್ಯಾತಿಯಿಂದಾಗಿಯೇ ಆ ಬಸ್‌ನಿಲ್ದಾಣಕ್ಕೆ ‘ಭಾರತ್ ಸ್ಟೋರ್ಸ್ ಸ್ಟಾಪ್’ ಎಂದು ಹೆಸರು ಬಂದಿತ್ತು! ಗೋವಿಂದಶೆಟ್ಟಿಯನ್ನು ಹುಡುಕಿಕೊಂಡು ಬಂದ ಭಾರತಿಗೆ ಭಾರತ್ ಸ್ಟೋರ್ಸ್ ಹೆಸರಿನ ನಿಲ್ದಾಣ ಸಿಗುತ್ತದೆ, ಆದರೆ ಅಂಗಡಿಯಾಗಲಿ, ಶೆಟ್ಟಿಯಾಗಲಿ ಸಿಗುವುದಿಲ್ಲ!

ಶೆಟ್ಟಿಯ ಪತ್ತೆಯನ್ನು ಹುಡುಕುತ್ತಾ ಹೋದವಳಿಗೆ ಆತನ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಚಂದ್ರ ಮತ್ತು ಮಂಜುನಾಥ ಸಿಗುತ್ತಾರೆ. ಶೆಟ್ಟಿಯನ್ನು ತೀರ ಹತ್ತಿರದಿಂದ ಕಂಡ ಅವರಿಬ್ಬರು ಶೆಟ್ಟಿಯ ಒಂದೊಂದು ಹಂತದ ಕತೆಯನ್ನು ಹೇಳತೊಡಗುತ್ತಾರೆ. ಅದರ ಮೂಲಕ ಶೆಟ್ಟಿಯ ಕಿರಾಣಿ ಅಂಗಡಿಯ ವ್ಯಾಪಾರ, ಆತ ಮತ್ತು ಗಿರಾಕಿಗಳ ಸಂಬಂಧ, ಆತನ ಕುಟುಂಬ, ಅಲ್ಲಿನ ಆಗು-ಹೋಗುಗಳು ಎಲ್ಲವೂ ಪರಿಚಯವಾಗುತ್ತವೆ...

ಕೊನೆಗೆ ಭಾರತಿ ಗೋವಿಂದಶೆಟ್ಟಿಯನ್ನು ವೃದ್ಧಾಶ್ರಮವೊಂದರಲ್ಲಿ ಜೀವಚ್ಛವದಂತೆ ಮುದುಡಿಹೋಗಿದ್ದ ಸ್ಥಿತಿಯಲ್ಲಿ ಭೇಟಿಯಾಗುತ್ತಾಳೆ!

ಜಾಗತೀಕರಣ, ಉದಾರೀಕರಣ, ಔದ್ಯೋಗೀಕರಣಗಳ ದೆಸೆಯಿಂದ ಪ್ರಪಂಚ ಚಿಕ್ಕದಾಗುತ್ತಾ ಬಂತು. ಭಾರತ ದೇಶ ಕೂಡ ಇಪ್ಪತ್ತು ವರ್ಷಗಳ ಹಿಂದೆ ಇದನ್ನು ಒಪ್ಪಿಕೊಂಡಿತು. ಹಾಗಾಗಿ ಇಲ್ಲಿಯ ಬದುಕು ಹಂತ ಹಂತವಾಗಿ ಬದಲಾಗತೊಡಗಿತು. ನಗರಗಳಲ್ಲಿ ನಿಧಾನವಾಗಿ ಮಾಲ್‌ಗಳು ಮಾರ್ಟ್‌ಗಳು ತಲೆಯೆತ್ತತೊಡಗಿದವು. ವ್ಯಾಪಾರದ ವೈಖರಿ ಹೊಸ ರೂಪ ಪಡೆಯಿತು. ಗ್ರಾಹಕರು ಮಾಲ್ ಸಂಸ್ಕೃತಿಯತ್ತ ಆಕರ್ಷಿತರಾಗತೊಡಗಿದರು. ನಿಧಾನವಾಗಿ ‘ಭಾರತ್ ಸ್ಟೋರ್ಸ್’ ನಂತಹ ಕಿರಾಣಿ ಅಂಗಡಿಗಳ ವ್ಯಾಪಾರ ಕುಸಿಯತೊಡಗಿತು. ಈ ಬದಲಾವಣೆಯ ಬಿರುಗಾಳಿಗೆ ಸಿಕ್ಕವರಲ್ಲಿ ನಮ್ಮ ಗೋವಿಂದಶೆಟ್ಟಿಯೂ ಒಬ್ಬ. ಇದು ಒಬ್ಬ ಗೋವಿಂದಶೆಟ್ಟಿಯ ಸ್ಥಿತಿಯಲ್ಲ, ಇವನಂತಹ ಹಲವರ ಕಥೆ.

ನಿರ್ದೇಶಕರ ನುಡಿ

[ಬದಲಾಯಿಸಿ]

ಅಂದು, ಸಪ್ಟೆಂಬರ್ 14, 2012

ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ- ಭಾರತದ ಆರ್ಥಿಕ ಸುಧಾರಣೆಯ ನೆಪದಲ್ಲಿ ‘ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ಶೇಕಡ 51 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಯಿತು’- ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಇದರ ‘ಪರ’ ಮತ್ತು ‘ವಿರೋಧ’ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ತೀವ್ರತರದಲ್ಲಿ ಆರಂಭವಾದವು...

ಆಗ ಹುಟ್ಟಿದ್ದೇ ‘ಭಾರತ್ ಸ್ಟೋರ್ಸ್’ನ ಕಥೆ!

ಇದಕ್ಕೂ ಮುಂಚೆ, ಜುಲೈ 24, 1991

ಅಂದು ಕೇಂದ್ರ ಸರ್ಕಾರ ನಮ್ಮ ದೇಶದ ಆರ್ಥಿಕ ಉದಾರನೀತಿಗೆ ಹೊಸ ಭಾಷ್ಯ ಬರೆಯಿತು. ಇಂದಿನ ಪ್ರಧಾನಿಯವರು ಅಂದಿನ ಅರ್ಥಸಚಿವರಾಗಿದ್ದವರು! ಈ ಕಳೆದ ಇಪ್ಪತ್ತು ವರ್ಷಗಳಲ್ಲಿ ನಮ್ಮ ದೇಶದ ಅರ್ಥವ್ಯವಸ್ಥೆ ಹಲವಾರು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದೆ.

ಈ ಹಿನ್ನೆಲೆಯಲ್ಲಿ ಹಲವಾರು ಕಿರಾಣಿ ಅಂಗಡಿಗಳ ಮಾಲೀಕರನ್ನು, ಬೀದಿ ಬದಿಯ ವ್ಯಾಪಾರಿಗಳನ್ನು, ಗ್ರಾಹಕರನ್ನು ಮಾತನಾಡಿಸುತ್ತಾ ಹೋದಾಗ ಹತ್ತು ಹಲವು ಅಭಿಪ್ರಾಯಗಳು ವ್ಯಕ್ತವಾದವು. ಆದರೆ ಎಲ್ಲರ ಮಾತಲ್ಲೂ ಕೇಳಿಬಂದ ಒಂದು ಮುಖ್ಯ ವಿಚಾರವೆಂದರೆ, ಈ ಮಾರುಕಟ್ಟೆಯಲ್ಲಿ ನಾವು ಪೈಪೋಟಿ ಎದುರಿಸುವುದು ಕಷ್ಟ. ತಲೆ ತಲಾಂತರದಿಂದ ಬಂದ ಈ ವ್ಯಾಪಾರ ವಹಿವಾಟು ನಮ್ಮ ತಲೆಗೇ ಕೊನೆ, ಇಷ್ಟು ದಿನ ಮಾಲೀಕರಾದ ನಾವು ಇನ್ನು ನೌಕರರಾಗಿ ಬದುಕಬೇಕಷ್ಟೇ...

ಈ ಸಂಸ್ಕೃತಿಯ ತಲ್ಲಣದ ಹಿನ್ನೆಲೆಯಲ್ಲಿ ತಯಾರಾದ ಚಿತ್ರವೇ ‘ಭಾರತ್ ಸ್ಟೋರ್ಸ್’


ನಾವಿಂದು ಅನೇಕ ಬಿಕ್ಕಟ್ಟುಗಳಲ್ಲಿ ಬಸವಳಿದಿದ್ದೇವೆ. ನಮ್ಮ ರೈತರು ಆತಂಕದಲ್ಲಿದ್ದಾರೆ. ಕಾರ್ಮಿಕರು ಬಸವಳಿದಿದ್ದಾರೆ. ಮಧ್ಯಮವರ್ಗದವರು ಮಾರುಕಟ್ಟೆಯ ವಸ್ತುಗಳ ಮುಂದೆ ಆಯ್ಕೆಯ ಗೊಂದಲದಲ್ಲಿದ್ದಾರೆ. ಕೃಷಿಯನ್ನು ಬಲವಂತವಾಗಿ ಹಿನ್ನೆಲೆಗೆ ಸರಿಸುತ್ತಿದ್ದಾರೆ. ಭೂಮಿಯಲ್ಲಿ ಕೆಲಸ ಮಾಡುವ ದೈಹಿಕ ಶಕ್ತಿಗಳು ನಿರಾಸೆಗೊಂಡು ಸೊರಗಿವೆ. ಅಭಿವೃದ್ದಿಯ ಕಾನೂನಗಳಿಗೆ ಕಾರುಣ್ಯವಿಲ್ಲ. ಭೂಮಿ ಜೊತೆಯ ಸಂಬಂಧ ವಾಣಿಜ್ಯಗೊಂಡಿದೆ. ಗ್ರಾಮಗಳು ಬರಿದಾಗುತ್ತಿವೆ. ಗ್ರಾಮ ವ್ಯಾಜ್ಯಗಳು ಹೆಚ್ಚಿವೆ. ಗ್ರಾಮ ಸಮಾಜ ಗುಳೇಹೊರಟಿದೆ. ಬೀದಿ ಪ್ರತಿಭಟನೆಗಳು, ಹೋರಾಟಗಳು ದಿಕ್ಕೆಟ್ಟಿವೆ... ಮುಂದೇನು?