ವಿಷಯಕ್ಕೆ ಹೋಗು

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ

Coordinates: 17°23′06″N 78°29′10″E / 17.385°N 78.486°E / 17.385; 78.486
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಭಾರತ
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಭಾರತ
ಸಂಕ್ಷಿಪ್ತ ಹೆಸರುಐ.ಆರ್.ಡಿ.ಎ
ಪ್ರಧಾನ ಕಚೇರಿಪರಿಸಿರಾಮ ಭವನ್, ಭಷೀರ್ ಭಾಘ್, ಹೈದರಾಬಾದ್, ತೆಲಂಗಾಣ , ಭಾರತ,
ಸ್ಥಳ
  • ಹೈದರಾಬಾದ್, ತೆಲಂಗಾಣ
ಕಕ್ಷೆಗಳು17°23′06″N 78°29′10″E / 17.385°N 78.486°E / 17.385; 78.486
ಅಧ್ಯಕ್ಷ, ಐ.ಆರ್.ಡಿ.ಎ
ಟಿ.ಎಸ್. ವಿಜಯನ್[೧]
ಅಧಿಕೃತ ಜಾಲತಾಣirda.gov.in

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿ‌ಎ‌ಐ) ಒಂದು ಸ್ವಾಯತ್ತ ಮತ್ತು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಶಾಸನಬದ್ಧ ಸಂಸ್ಥೆಯಾಗಿದೆ.[೨] ಇದು ಭಾರತದಲ್ಲಿ ವಿಮೆ ಮತ್ತು ಮರು-ವಿಮೆ ಉದ್ಯಮಗಳನ್ನು ನಿಯಂತ್ರಿಸುವ ಮತ್ತು ಪರವಾನಗಿ ನೀಡುವ ಕಾರ್ಯವನ್ನು ಹೊಂದಿದೆ.[೩] ಇದನ್ನು ಭಾರತ ಸರ್ಕಾರವು ಅಂಗೀಕರಿಸಿದ ಸಂಸತ್ತಿನ ಕಾಯಿದೆಯಾದ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, ೧೯೯೯ ರ ಅಡಿಯಲ್ಲಿ ರಚಿಸಲಾಗಿದೆ. ಏಜೆನ್ಸಿಯ ಪ್ರಧಾನ ಕಛೇರಿಯು ತೆಲಂಗಾಣದ ಹೈದರಾಬಾದ್‌ನಲ್ಲಿದೆ.[೪][೫] ಅಲ್ಲಿಗೆ ಇದು ೨೦೦೧ ರಲ್ಲಿ ದೆಹಲಿಯಿಂದ ಸ್ಥಳಾಂತರಗೊಂಡಿತು.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹಿರಿಯ ನಾಗರಿಕರ ಅಗತ್ಯತೆಗಳನ್ನು ಪೂರೈಸಲು ವಿಶೇಷ ನೀತಿಗಳನ್ನು ಅಭಿವೃದ್ಧಿಪಡಿಸುವಂತೆ ಮತ್ತು ಅವರ ಕುಂದುಕೊರತೆಗಳು ಮತ್ತು ಬೇಡಿಕೆಗಳನ್ನು ಪೂರೈಸಲು ಮೀಸಲಾದ ವಾಹಕಗಳನ್ನು ಸ್ಥಾಪಿಸಲು ಆರೋಗ್ಯ ವಿಮಾ ಪೂರೈಕೆದಾರರಿಗೆ ನಿರ್ದೇಶನ ನೀಡಿದೆ. ೧ ಏಪ್ರಿಲ್ ೨೦೨೪ ರಿಂದ ಜಾರಿಗೆ ಬರುವಂತೆ, ಐಆರ್‌ಡಿ‌ಎ‌ಐ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಲು ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಮೊದಲು, ೬೫ ವರ್ಷಗಳು ಹೊಸ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಲು ವಯಸ್ಸಿನ ಮಿತಿಯಾಗಿತ್ತು.[೬]


ಐಆರ್‌ಡಿ‌ಎ‌ಐ ಅಧ್ಯಕ್ಷರು ಸೇರಿದಂತೆ ೧೦-ಸದಸ್ಯರ ಸಂಸ್ಥೆಯಾಗಿದ್ದು, ಭಾರತ ಸರ್ಕಾರದಿಂದ ನೇಮಕಗೊಂಡ ಐದು ಪೂರ್ಣಾವಧಿ ಮತ್ತು ನಾಲ್ಕು ಅರೆಕಾಲಿಕ ಸದಸ್ಯರು ಇದರಲ್ಲಿದ್ದಾರೆ.

ಇತಿಹಾಸ[ಬದಲಾಯಿಸಿ]

ಭಾರತದಲ್ಲಿ ವಿಮೆಯನ್ನು ಅನೇಕ ಐತಿಹಾಸಿಕ ದಾಖಲೆಗಳ ಬರಹಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಬೆಂಕಿ, ಪ್ರವಾಹಗಳು, ಸಾಂಕ್ರಾಮಿಕ ರೋಗಗಳು ಮತ್ತು ಕ್ಷಾಮದ ನಂತರ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ನೀಡಲಾಗುತ್ತದೆ. ೧೮೧೮ ರಲ್ಲಿ ಜೀವ-ವಿಮಾ ವ್ಯವಹಾರವು ಪ್ರಾರಂಭವಾಯಿತು. ಕಲ್ಕತ್ತಾದಲ್ಲಿ ಓರಿಯಂಟಲ್ ಲೈಫ್ ಇನ್ಶುರೆನ್ಸ್ ಕಂಪನಿಯು ೧೮೩೪ ರಲ್ಲಿ ವಿಫಲವಾಯಿತು.[೭] ೧೮೨೯ ರಲ್ಲಿ, ಮದ್ರಾಸ್ ಈಕ್ವಿಟಬಲ್ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜೀವ ವಿಮೆ ವ್ಯವಹಾರವನ್ನು ನಡೆಸಲು ಪ್ರಾರಂಭಿಸಿತು. ಬ್ರಿಟಿಷ್ ವಿಮಾ ಕಾಯಿದೆಯನ್ನು ೧೮೭೦ ರಲ್ಲಿ ಜಾರಿಗೊಳಿಸಲಾಯಿತು ಮತ್ತು ಬಾಂಬೆ ಮ್ಯೂಚುಯಲ್ (೧೮೭೧), ಓರಿಯಂಟಲ್ (೧೮೭೪) ಮತ್ತು ಎಂಪೈರ್ ಆಫ್ ಇಂಡಿಯಾ (೧೮೯೭) ವನ್ನು ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸ್ಥಾಪಿಸಲಾಯಿತು. ಆಗ ಅದರ ಮೇಲೆ ಬ್ರಿಟಿಷ್ ಕಂಪನಿಗಳ ಪ್ರಾಬಲ್ಯವಿತ್ತು.

೧೯೧೪ ರಲ್ಲಿ, ಭಾರತ ಸರ್ಕಾರವು ವಿಮೆ-ಕಂಪನಿ ರಿಟರ್ನ್ಸ್ ಅನ್ನು ಪ್ರಕಟಿಸಲು ಪ್ರಾರಂಭಿಸಿತು. ಭಾರತೀಯ ಜೀವ ವಿಮೆ ಕಂಪನಿಗಳ ಕಾಯಿದೆ, ೧೯೧೨ ಜೀವ ವಿಮೆಯನ್ನು ನಿಯಂತ್ರಿಸುವ ಮೊದಲ ಶಾಸನವಾಗಿದೆ. ೧೯೨೮ ರಲ್ಲಿ ಭಾರತೀಯ ವಿಮಾ ಕಂಪನಿಗಳ ಕಾಯಿದೆಯು ಭವಿಷ್ಯನಿಧಿ ವಿಮಾ ಸಂಘಗಳು ಸೇರಿದಂತೆ ಭಾರತೀಯ ಮತ್ತು ವಿದೇಶಿ ವಿಮಾದಾರರು ಭಾರತದಲ್ಲಿ ನಡೆಸಿದ ಜೀವ ಮತ್ತು ಜೀವ ವಿಮೆಯೇತರ ವ್ಯವಹಾರದ ಬಗ್ಗೆ ಅಂಕಿಅಂಶಗಳ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರವನ್ನು ಸಕ್ರಿಯಗೊಳಿಸಲು ಜಾರಿಗೆ ತರಲಾಯಿತು. ೧೯೩೮ ರಲ್ಲಿ ವಿಮೆದಾರರ ಚಟುವಟಿಕೆಗಳನ್ನು ನಿಯಂತ್ರಿಸಲು ಸಮಗ್ರ ನಿಬಂಧನೆಗಳೊಂದಿಗೆ ವಿಮಾ ಕಾಯಿದೆ, ೧೯೩೮ ರಿಂದ ಶಾಸನವನ್ನು ಕ್ರೋಢೀಕರಿಸಲಾಯಿತು ಮತ್ತು ತಿದ್ದುಪಡಿ ಮಾಡಲಾಯಿತು.

೧೯೫೦ ರ ವಿಮಾ ತಿದ್ದುಪಡಿ ಕಾಯಿದೆಯು ಪ್ರಧಾನ ಏಜೆನ್ಸಿಗಳನ್ನು ರದ್ದುಗೊಳಿಸಿತು. ಆವಾಗ ಸ್ಪರ್ಧೆಯ ಮಟ್ಟವು ಹೆಚ್ಚಾಗಿತ್ತು ಮತ್ತು ಅನ್ಯಾಯದ ವ್ಯಾಪಾರಗಳೂ ನಡೆಯುತ್ತಿದ್ದವು ಎಂಬ ಆರೋಪಗಳಿವೆ. ಭಾರತ ಸರ್ಕಾರವು ವಿಮಾ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಲು ನಿರ್ಧರಿಸಿತು.

೧೯೫೬ ರ ಜನವರಿ ೧೯ ರಂದು ಜೀವ ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ ಸುಗ್ರೀವಾಜ್ಞೆಯನ್ನು ಹೊರಡಿಸಲಾಯಿತು ಮತ್ತು ಆ ವರ್ಷ ಜೀವ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಎಲ್‌ಐ‌ಸಿ ಯು ೧೫೪ ಭಾರತೀಯ ಮತ್ತು ೧೬ ಭಾರತೀಯರಲ್ಲದ ವಿಮಾದಾರರನ್ನು ಮತ್ತು ೭೫ ಭವಿಷ್ಯನಿಧಿ ಸಂಘಗಳನ್ನು ತನ್ನದಾಗಿಸಿಕೊಂಡಿತು. ೧೯೯೦ ರ ದಶಕದ ಅಂತ್ಯದವರೆಗೂ ಎಲ್‌ಐ‌ಸಿ ಏಕಸ್ವಾಮ್ಯವನ್ನು ಹೊಂದಿತ್ತು. ವಿಮಾ ಉದ್ಯಮವನ್ನು ಖಾಸಗಿ ವಲಯಕ್ಕೆ ಪುನಃ ತೆರೆಯಲಾಯಿತು.

ಭಾರತದಲ್ಲಿ ಸಾಮಾನ್ಯ ವಿಮೆಯು ಪಶ್ಚಿಮದಲ್ಲಿ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಪ್ರಾರಂಭವಾಯಿತು. ೧೭ ನೇ ಶತಮಾನದಲ್ಲಿ ಸಮುದ್ರಯಾನ ವಾಣಿಜ್ಯದ ಬೆಳವಣಿಗೆಯಲ್ಲಿ ಪ್ರಾರಂಭವಾಯಿತು. ೧೯೦೭ ರಲ್ಲಿ ಇಂಡಿಯನ್ ಮರ್ಕೆಂಟೈಲ್ ಇನ್ಶೂರೆನ್ಸ್ ಅನ್ನು ಸ್ಥಾಪಿಸಲಾಯಿತು. ಇದು ಎಲ್ಲಾ ವರ್ಗದ ಸಾಮಾನ್ಯ ವಿಮೆಯನ್ನು ಅಂಡರ್ರೈಟ್ ಮಾಡಿದ ಮೊದಲ ಕಂಪನಿಯಾಗಿದೆ. ೧೯೫೭ ರಲ್ಲಿ ಜನರಲ್ ಇನ್ಶೂರೆನ್ಸ್ ಕೌನ್ಸಿಲ್ (ಭಾರತೀಯ ವಿಮಾ ಅಸೋಸಿಯೇಷನ್‌ನ ಒಂದು ವಿಭಾಗ) ರಚನೆಯಾಯಿತು, ಇದು ನ್ಯಾಯಸಮ್ಮತತೆ ಮತ್ತು ಉತ್ತಮ ವ್ಯಾಪಾರ ಅಭ್ಯಾಸಕ್ಕಾಗಿ ನೀತಿ ಸಂಹಿತೆಯನ್ನು ರೂಪಿಸಿತು.

ಹನ್ನೊಂದು ವರ್ಷಗಳ ನಂತರ, ಹೂಡಿಕೆಗಳನ್ನು ನಿಯಂತ್ರಿಸಲು ಮತ್ತು ಕನಿಷ್ಠ ಸಾಲ್ವೆನ್ಸಿ ಮಾರ್ಜಿನ್‌ಗಳನ್ನು ಹೊಂದಿಸಲು ವಿಮಾ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು ಮತ್ತು ಸುಂಕದ ಸಲಹಾ ಸಮಿತಿಯನ್ನು ಸ್ಥಾಪಿಸಲಾಯಿತು. ೧೯೭೨ ರಲ್ಲಿ, ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ಕಾಯಿದೆಯ ಅಂಗೀಕಾರದೊಂದಿಗೆ, ವಿಮಾ ಉದ್ಯಮವನ್ನು ೧ ಜನವರಿ ೧೯೭೩ ರಂದು ರಾಷ್ಟ್ರೀಕರಣಗೊಳಿಸಲಾಯಿತು. ನೂರ ಏಳು ವಿಮಾದಾರರನ್ನು ಒಟ್ಟುಗೂಡಿಸಿ ನಾಲ್ಕು ಕಂಪನಿಗಳಾಗಿ ವರ್ಗೀಕರಿಸಲಾಯಿತು: ನ್ಯಾಷನಲ್ ಇನ್ಶುರೆನ್ಸ್ ಕಂಪನಿ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ. ಭಾರತೀಯ ಜನರಲ್ ಇನ್ಶೂರೆನ್ಸ್ ಕಾರ್ಪೊರೇಶನ್ ಅನ್ನು ೧೯೭೧ ರಲ್ಲಿ ಸ್ಥಾಪಿಸಲಾಯಿತು. ಇದು ೧ ಜನವರಿ ೧೯೭೩ ರಂದು ಜಾರಿಗೆ ಬಂದಿತು.

೧೯೯೦ ರ ದಶಕದ ಆರಂಭದಲ್ಲಿ ವಿಮಾ ವಲಯದ ಮರು-ತೆರೆಯುವಿಕೆ ಪ್ರಾರಂಭವಾಯಿತು. ೧೯೯೩ ರಲ್ಲಿ, ಸರ್ಕಾರವು ಮಾಜಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆರ್.ಎನ್. ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ, ಹಣಕಾಸು ಕ್ಷೇತ್ರದಲ್ಲಿ ಪ್ರಾರಂಭವಾದವುಗಳಿಗೆ ಪೂರಕವಾದ ವಿಮಾ ಸುಧಾರಣೆಗೆ ಶಿಫಾರಸುಗಳನ್ನು ಪ್ರಸ್ತಾಪಿಸಲು ಒಂದು ಸಮಿತಿಯನ್ನು ಸ್ಥಾಪಿಸಿತು. ಸಮಿತಿಯು ೧೯೯೪ ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ವಿಮಾ ಉದ್ಯಮವನ್ನು ಪ್ರವೇಶಿಸಲು ಖಾಸಗಿ ವಲಯಕ್ಕೆ ಅನುಮತಿ ನೀಡಬೇಕೆಂದು ಶಿಫಾರಸು ಮಾಡಿತು.

ಮಲ್ಹೋತ್ರಾ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ, ೧೯೯೯ ರಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ವಿಮಾ ಉದ್ಯಮವನ್ನು ನಿಯಂತ್ರಿಸಲು ಮತ್ತು ಅಭಿವೃದ್ಧಿಪಡಿಸಲು ಸ್ಥಾಪಿಸಲಾಯಿತು. ಏಪ್ರಿಲ್ ೨೦೦೦ ರಲ್ಲಿ ಅದನ್ನು ಸಂಯೋಜಿಸಲಾಯಿತು. ಐಆರ್‌ಡಿಎ ಯ ಉದ್ದೇಶಗಳು ಹೆಚ್ಚಿದ ಗ್ರಾಹಕರ ಆಯ್ಕೆಯೊಂದಿಗೆ ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ಸ್ಪರ್ಧೆಯನ್ನು ಉತ್ತೇಜಿಸುವುದನ್ನು ಒಳಗೊಂಡಿವೆ.

ಐಆರ್‌ಡಿಎ ಆಗಸ್ಟ್ ೨೦೦೦ ರಲ್ಲಿ ನೋಂದಣಿ ಅರ್ಜಿಗಳಿಗೆ ಆಹ್ವಾನದೊಂದಿಗೆ ಮಾರುಕಟ್ಟೆಯನ್ನು ತೆರೆಯಿತು. ೧೯೩೮ ರ ವಿಮಾ ಕಾಯಿದೆಯ ಸೆಕ್ಷನ್ ೧೧೪ಎ ಅಡಿಯಲ್ಲಿ ನಿಯಮಾವಳಿಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿರುವ ಪ್ರಾಧಿಕಾರವು ೨೦೦೦ ರಿಂದ ಕಂಪನಿ ನೋಂದಣಿಯಿಂದ ಹಿಡಿದು ಪಾಲಿಸಿದಾರರ ಹಿತಾಸಕ್ತಿಗಳ ರಕ್ಷಣೆಯವರೆಗಿನ ನಿಯಮಾವಳಿಗಳನ್ನು ರೂಪಿಸಿದೆ.

ಡಿಸೆಂಬರ್ ೨೦೦೦ ರಲ್ಲಿ, ಜನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಗಸಂಸ್ಥೆಗಳನ್ನು ಸ್ವತಂತ್ರ ಕಂಪನಿಗಳಾಗಿ ಪುನರ್ರಚಿಸಲಾಯಿತು ಮತ್ತು ಜಿಐಸಿ ಅನ್ನು ರಾಷ್ಟ್ರೀಯ ಮರು-ವಿಮಾದಾರರನ್ನಾಗಿ ಪರಿವರ್ತಿಸಲಾಯಿತು. ಜುಲೈ ೨೦೦೨ ರಲ್ಲಿ ಜಿಐಸಿಯಿಂದ ನಾಲ್ಕು ಅಂಗಸಂಸ್ಥೆಗಳನ್ನು ಡಿ-ಲಿಂಕ್ ಮಾಡುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿತು. ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಅಗ್ರಿಕಲ್ಚರ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸೇರಿದಂತೆ ೨೮ ಸಾಮಾನ್ಯ ವಿಮಾ ಕಂಪನಿಗಳು ಮತ್ತು ೨೪ ಜೀವ ವಿಮಾ ಕಂಪನಿಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕಿಂಗ್ ಸೇವೆಗಳೊಂದಿಗೆ, ವಿಮಾ ಸೇವೆಗಳು ಭಾರತದ ಜಿಡಿಪಿಗೆ ಸುಮಾರು ಏಳು ಪ್ರತಿಶತವನ್ನು ಸೇರಿಸುತ್ತವೆ.

೨೦೧೩ ರಲ್ಲಿ ಐಆರ್‌ಡಿಎಐ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿಯನ್ನು ೨೬ ಪ್ರತಿಶತದಿಂದ ೪೯ ಪ್ರತಿಶತಕ್ಕೆ ಹೆಚ್ಚಿಸಲು ಪ್ರಯತ್ನಿಸಿತು. ೨೦೨೧ ರ ಯೂನಿಯನ್ ಬಜೆಟ್ ಪ್ರಕಾರ ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇಕಡಾ ೭೪ ಕ್ಕೆ ಏರಿಸಲಾಗಿದೆ.[೮]

ರಚನೆ[ಬದಲಾಯಿಸಿ]

Multi-coloured organisational chart
ಐಆರ್‌ಡಿಎಐ ಮತ್ತು ಅದರ ಸಂಬಂಧಿತ ಸಂಸ್ಥೆಗಳು

ಐಆರ್‌ಡಿಎಐ ಕಾಯಿದೆ ೧೯೯೯ ರ ವಿಭಾಗ ೪ ಪ್ರಾಧಿಕಾರದ ಸಂಯೋಜನೆಯನ್ನು ನಿರ್ದಿಷ್ಟಪಡಿಸುತ್ತದೆ. ಇದು ಭಾರತ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು, ಐದು ಪೂರ್ಣಾವಧಿ ಮತ್ತು ನಾಲ್ಕು ಅರೆಕಾಲಿಕ ಸದಸ್ಯರನ್ನು ಒಳಗೊಂಡಿರುವ ಹತ್ತು ಸದಸ್ಯರ ಸಂಸ್ಥೆಯಾಗಿದೆ. ಪ್ರಸ್ತುತ (ಜನವರಿ, ೨೦೨೩), ಪ್ರಾಧಿಕಾರಕ್ಕೆ ಶ್ರೀ. ದೇಬಾಶಿಶ್ ಪಾಂಡಾ ರವರು ಅಧ್ಯಕ್ಷರಾಗಿದ್ದಾರೆ.[೯] ಶ್ರೀಮತಿ ಟಿ.ಎಲ್. ಅಲಮೇಲು, ಕೆ.ಗಣೇಶ್, ಪೂರ್ಣಿಮಾ ಗುಪ್ತೆ, ಪ್ರವೀಣ್ ಕುಟುಂಬೆ ಮತ್ತು ಸುಜಯ್ ಬ್ಯಾನರ್ಜಿ ಅದರ ಪೂರ್ಣಾವಧಿಯ ಸದಸ್ಯರು.[೧೦]

ಕೆಲಸ[ಬದಲಾಯಿಸಿ]

  • ಐಆರ್‌ಡಿಎಐ ನ ಕಾರ್ಯಗಳನ್ನು ಐಆರ್‌ಡಿಎಐ ಕಾಯಿದೆ, ೧೯೯೯ ಸೆಕ್ಷನ್ ೧೪ ರಲ್ಲಿ ವ್ಯಾಖ್ಯಾನಿಸಲಾಗಿದೆ ಮತ್ತು ಅದು ಇವುಗಳನ್ನು ಒಳಗೊಂಡಿರುತ್ತದೆ:
  • ನೋಂದಣಿಗಳನ್ನು ನೀಡುವುದು, ನವೀಕರಿಸುವುದು, ಮಾರ್ಪಡಿಸುವುದು, ಹಿಂಪಡೆಯುವುದು, ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸುವುದು
  • ಪಾಲಿಸಿದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು
  • ಅರ್ಹತೆಗಳನ್ನು ನಿರ್ದಿಷ್ಟಪಡಿಸುವುದು, ಮಧ್ಯವರ್ತಿಗಳು ಮತ್ತು ಏಜೆಂಟರಿಗೆ ನೀತಿ ಸಂಹಿತೆ ಮತ್ತು ತರಬೇತಿ
  • ಸರ್ವೇಯರ್‌ಗಳು ಮತ್ತು ನಷ್ಟ ಮೌಲ್ಯಮಾಪಕರಿಗೆ ನೀತಿ ಸಂಹಿತೆಯನ್ನು ನಿರ್ದಿಷ್ಟಪಡಿಸುವುದು
  • ವಿಮಾ ವ್ಯವಹಾರಗಳ ನಡವಳಿಕೆಯಲ್ಲಿ ದಕ್ಷತೆಯನ್ನು ಉತ್ತೇಜಿಸುವುದು
  • ವಿಮೆ ಮತ್ತು ಮರು-ವಿಮಾ ಉದ್ಯಮದೊಂದಿಗೆ ಸಂಪರ್ಕ ಹೊಂದಿದ ವೃತ್ತಿಪರ ಸಂಸ್ಥೆಗಳನ್ನು ಉತ್ತೇಜಿಸುವುದು ಮತ್ತು ನಿಯಂತ್ರಿಸುವುದು
  • ಇತರ ಶುಲ್ಕಗಳನ್ನು ವಿಧಿಸುವುದು
  • ವಿಮಾದಾರರು, ಮಧ್ಯವರ್ತಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳನ್ನು ಪರಿಶೀಲಿಸುವುದು ಮತ್ತು ತನಿಖೆ ಮಾಡುವುದು
  • ವಿಮಾ ಕಾಯಿದೆ, ೧೯೩೮ (೧೯೩೮ ರ ೪) ಸೆಕ್ಷನ್ ೬೪ಯು ಅಡಿಯಲ್ಲಿ ಸುಂಕ ಸಲಹಾ ಸಮಿತಿಯಿಂದ ವ್ಯಾಪ್ತಿಗೆ ಒಳಪಡದ ವಿಮಾದಾರರು ನೀಡಬಹುದಾದ ದರಗಳು, ಅನುಕೂಲಗಳು, ನಿಯಮಗಳು ಮತ್ತು ಷರತ್ತುಗಳನ್ನು ನಿಯಂತ್ರಿಸುವುದು
  • ಪುಸ್ತಕಗಳನ್ನು ಹೇಗೆ ಇಡಬೇಕು ಎಂಬುದನ್ನು ಸೂಚಿಸುವುದು
  • ಕಂಪನಿಯ ನಿಧಿಗಳ ಹೂಡಿಕೆಯನ್ನು ನಿಯಂತ್ರಿಸುವುದು
  • ಸಾಲ್ವೆನ್ಸಿಯ ಅಂಚುಗಳನ್ನು ನಿಯಂತ್ರಿಸುವುದು
  • ವಿಮಾದಾರರು ಮತ್ತು ಮಧ್ಯವರ್ತಿಗಳು ಅಥವಾ ವಿಮಾ ಮಧ್ಯವರ್ತಿಗಳ ನಡುವಿನ ವಿವಾದಗಳನ್ನು ನಿರ್ಣಯಿಸುವುದು
  • ಸುಂಕದ ಸಲಹಾ ಸಮಿತಿಯ ಮೇಲ್ವಿಚಾರಣೆ
  • ವೃತ್ತಿಪರ ಸಂಸ್ಥೆಗಳನ್ನು ಉತ್ತೇಜಿಸಲು ಮತ್ತು ನಿಯಂತ್ರಿಸಲು ಹಣಕಾಸು ಯೋಜನೆಗಳಿಗೆ ಪ್ರೀಮಿಯಂ ಆದಾಯದ ಶೇಕಡಾವಾರು ಪ್ರಮಾಣವನ್ನು ನಿರ್ದಿಷ್ಟಪಡಿಸುವುದು
  • ಗ್ರಾಮೀಣ ಅಥವಾ ಸಾಮಾಜಿಕ ವಲಯದಲ್ಲಿ ಕೈಗೊಂಡ ಜೀವಿತ ಮತ್ತು ಸಾಮಾನ್ಯ ವಿಮಾ ವ್ಯವಹಾರದ ಶೇಕಡಾವಾರು ಪ್ರಮಾಣವನ್ನು ನಿರ್ದಿಷ್ಟಪಡಿಸುವುದು
  • ಫಾರ್ಮ್ ಮತ್ತು ಖಾತೆಗಳ ಪುಸ್ತಕಗಳನ್ನು ನಿರ್ವಹಿಸುವ ವಿಧಾನವನ್ನು ನಿರ್ದಿಷ್ಟಪಡಿಸುವುದು ಮತ್ತು ಖಾತೆಗಳ ಹೇಳಿಕೆಯನ್ನು ವಿಮಾದಾರರು ಮತ್ತು ಇತರ ವಿಮಾದಾರ ಮಧ್ಯವರ್ತಿಗಳಿಂದ ಸಲ್ಲಿಸಬೇಕು.

ವಿಮಾ ಭಂಡಾರ[ಬದಲಾಯಿಸಿ]

ಭಾರತದ ಪ್ರಧಾನ ಮಂತ್ರಿಗಳು ವಿಮಾ ಭಂಡಾರ ವ್ಯವಸ್ಥೆಯನ್ನು ಘೋಷಿಸಿದರು. ಪಾಲಿಸಿದಾರರಿಗೆ ಕಾಗದದ ಬದಲಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ವಿಮಾ ಪಾಲಿಸಿಗಳನ್ನು ಖರೀದಿಸಲು ಮತ್ತು ನಿರ್ವಹಿಸಲು ಸಹಾಯ ಮಾಡಿದರು. ಷೇರು ಠೇವಣಿ ಅಥವಾ ಮ್ಯೂಚುಯಲ್ ಫಂಡ್ ವರ್ಗಾವಣೆ ಏಜೆನ್ಸಿಗಳಂತಹ ವಿಮಾ ರೆಪೊಸಿಟರಿಗಳು, ಎಲೆಕ್ಟ್ರಾನಿಕ್ ಪಾಲಿಸಿಗಳು ಅಥವಾ ಇ-ಪಾಲಿಸಿಗಳಾಗಿ ವ್ಯಕ್ತಿಗಳಿಗೆ ನೀಡಲಾದ ವಿಮಾ ಪಾಲಿಸಿಗಳ ಎಲೆಕ್ಟ್ರಾನಿಕ್ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Press Release". IRDA. 21 February 2013. Archived from the original on 15 ಡಿಸೆಂಬರ್ 2013. Retrieved 8 ಫೆಬ್ರವರಿ 2017.
  2. Perappadan, Bindu Shajan. "IRDAI removes age bar for health insurance buying". The Hindu. Retrieved 21 April 2024.
  3. "Duties, powers and functions of IRDAI". IRDAI. Archived from the original on 18 ಸೆಪ್ಟೆಂಬರ್ 2016. Retrieved 18 September 2016.
  4. PTI (Nov 21, 2001). "IRDA to shift HQ to Hyderabad by Feb". The Times of India. Archived from the original on January 3, 2013.
  5. "Lok Sabha passes insurance bill with 4 amendments". 02/12/1999. Rediff News. Retrieved 19 June 2012.
  6. "Removal of age bar for health insurance". The Hindu. 21 April 2024. Retrieved 21 April 2024.
  7. "History of insurance in India". Insurance Regulatory and Development Authority of India. 31 July 2020. IRDA/GEN/06/2007. Archived from the original on 2 ಅಕ್ಟೋಬರ್ 2022. Retrieved 22 ಮೇ 2024.
  8. "IRDA chief bats for 49 per cent FDI". The Hindu. 4 October 2012. Retrieved 14 December 2013.
  9. "Composition of Authority". Insurance Regulatory and Development Authority. Archived from the original on 7 May 2013. Retrieved 18 December 2012.
  10. "PROFILES OF TOP MANAGEMENT". IRDAI. Archived from the original on 18 ಸೆಪ್ಟೆಂಬರ್ 2016. Retrieved 18 September 2016.