ಭಾರತದಲ್ಲಿ ಭಿಕ್ಷಾಟನೆ
ಗೋಚರ
ಧಾರ್ಮಿಕ ಭಿಕ್ಷೆ ಮತ್ತು ಭಿಕ್ಷುಕ ವೃತ್ತಿ
[ಬದಲಾಯಿಸಿ]- ಒಂದು ಕಾಲಕ್ಕೆ ಭಾರತದಲ್ಲಿ ಭಿಕ್ಷುಕ ವೃತ್ತಿ ಸಮಾಜದ ಗೌರವಕ್ಕೆ ಪಾತ್ರವಾಗಿತ್ತು. ಗುರುಕುಲದಲ್ಲಿದ್ದ ವಿದ್ಯಾರ್ಥಿಗಳು ಭಿಕ್ಷಾಹ್ನವನ್ನು ಸಂಗ್ರಹಿಸಿ, ಗುರುಗಳಿಗೆ ಒಪ್ಪಿಸಿ ಗುರಕುಲದಲ್ಲಿರುವವರೆಲ್ಲರೂ ಹಂಚಿಕೊಂಡು ಉಣ್ಣವುದು ಪ್ರಾಚೀನ ವಿದ್ಯಾಭ್ಯಾಸಕ್ಕೆ ಹೊಂದಿಕೊಂಡ ಪದ್ಧತಿ. ಈಗಲೂ ಉಪನಯನ ಸಂಸ್ಕಾರದಲ್ಲಿ ವಟುವು 'ಭವತಿ ಭಿಕ್ಷಾಂದೇಹಿ' ನಂಟರಿಷ್ಟರಿಂದ ಭಿಕ್ಷೆ ಪಡೆದು ಗುರುಗಳಿಗೆ/ಪುರೋಹಿರಿಗೆ ಟಪ್ಪಿಸುವ ಸಂಪ್ರದಾಯವಿದೆ. ಇಂದಿಗೂ ಕೆಲವು ಕಡೆ 'ಮದಕರಿ ವೃತ್ತಿ' ಎಂದು ಧಾರ್ಮಿಕ ಪದ್ದತಿಯಲ್ಲಿ ಭಿಕ್ಷೆ ಎತ್ತುವ ಪದ್ದತಿ ಇದೆ.
- ಆದರೆ ಇಂದು ಅದು ಭಾರತದಲ್ಲಿ 'ಭಿಕ್ಷುಕ ವೃತ್ತಿ'ಯಾಗಿ ಸಮಾಜದಲ್ಲಿ ಕಳಂಕಿತವಾಗಿರುವುದು ಶೋಚನೀಯ. ಪ್ರಪಂಚದ ಯಾವುದೇ ರಾಷ್ತ್ರಕ್ಕಿಂತ ಭಿಕ್ಷುಕರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳೇ ಹೆಚ್ಚಾಗಿ ಭಿಕ್ಷಾಟನೆ ಮಾಡುತ್ತಿರುವುದು ಆಶ್ಚರ್ಯ ಉಂಟು ಮಾಡುತ್ತಿದೆ. ಅಂಗವಿಕಲ ಭಿಕ್ಷುಕರೂ ಅತಿಯಾಗಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ರೋಗ, ಮಾನಸಿಕ ವೈಕಲ್ಯಗಳು, ಆಲಸ್ಯತನ, ಭಿಕ್ಷಾಟನೆಗೆ ಕಾರಣವಾಗಿವೆ. ಸಮಾಜಕ್ಕೆ ಭಿಕ್ಷಾಟನೆ ಪಿಡುಗಾಗಿರುವುದು ಸಧೃಡ ಭಿಕ್ಷುಕರಿಂದಾಗಿ ಎನ್ನಬಹುದು. ನಿರುದ್ಯೋಗಿಗಳು ಸೋಮಾರಿಗಳು ಇಂಥವರು ಜನರನ್ನು ಹೆದರಿಸಿ ದುಡ್ಡು ಕೇಳುತ್ತಾರೆ. ಇವರು ವಾಸ್ತವದಲ್ಲಿ ಕಳ್ಳತನ ಮಾಡುವವರೂ ಆಗಿರುತ್ತಾರೆ. ಇಂಥ ಭಿಕ್ಷುಕರಿಂದ ಸಮಾಜಕ್ಕೆ ಹಾನಿ. ಸನ್ಯಾಸಿ, ಸಾಧುಗಳು, ಫಕೀರರು ಇಂಥವರಿಂದ ಧರ್ಮದ ಹೆಸರಿನಲ್ಲಿ ಇಂದಿಗೂ ಭಿಕ್ಷಾಟನೆ ನಡೆಯುತ್ತಿದೆ.
ಭಿಕ್ಷಾಟನೆ ಅಪರಾಧ
[ಬದಲಾಯಿಸಿ]- ಹಲವರ ಪ್ರಕಾರ ಭಿಕ್ಷಾಟನೆ ಒಂದು ಫ್ಯಾಷನ್, ಒಂದು ಉದ್ಯೋಗ, ಒಂದು ಮನರಂಜನೆ. ಕೆಲವರು ಅದೊಂದು ಅಪರಾಧ, ಭಿಕ್ಷಾಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಬೇಕು, ಭಿಕ್ಷಾಟನೆ ಮಾಡುವವರನ್ನು ಶಿಕ್ಷಿಸಬೇಕು ಎನ್ನುತ್ತಾರೆ. ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಯನ್ನು ಪ್ರೋತ್ಸಾಹಿಸಬೇಡಿ’ ಎಂದು ಸಾರುವ ಸರ್ಕಾರಿ ಜಾಹೀರಾತುಗಳೂ ಇವೆ. ಭಿಕ್ಷಾಟನೆಯನ್ನು ಒಂದು ಲಾಭದಾಯಕ ಉದ್ಯೋಗ ಮಾಡಿಕೊಂಡ ಭಿಕ್ಷುಕರೂ ಇದ್ದಾರೆ. ತನ್ನ ಮನೆಯಲ್ಲಿ ಆತ್ಮಗೌರವದೊಂದಿಗೆ ಎರಡು ಹೊತ್ತಿನ ಊಟ ಸಿಕ್ಕುವವರು ಭಿಕ್ಷೆ ಬೇಡಲಾರರು.
- ಭಿಕ್ಷಾಟನೆಯನ್ನು ಅಪರಾಧವೆಂದು ಘೋಷಿಸಿ ಭಿಕ್ಷುಕರನ್ನು ಶಿಕ್ಷೆಗೆ ಒಳಪಡಿಸುವ ಕಾನೂನೊಂದು ಕರ್ನಾಟಕದಲ್ಲಿ ಜಾರಿಯಲ್ಲಿದೆ- ಕರ್ನಾಟಕ ಪ್ರಾಹಿಬಿಷನ್ ಆಫ್ ಬೆಗ್ಗರಿ ಆ್ಯಕ್ಟ್–1975. ಇಂತಹ ಕಾನೂನುಗಳು ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ. ಈ ಕಾನೂನಿನಲ್ಲಿ ಭಿಕ್ಷುಕರ ಬಗ್ಗೆ ಸ್ವಲ್ಪ ಮಾನವೀಯ ದೃಷ್ಟಿಯೂ ಇದೆ- ಅವರಿಗೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತದೆ, ಅವರನ್ನು ಬಂಧಿಸಿದರೂ ಒಂದರಿಂದ ಮೂರು ವರ್ಷಗಳವರೆಗೆ ಪರಿಹಾರ ಕೇಂದ್ರದಲ್ಲಿ ಇರಬೇಕೆಂದು ಕಡ್ಡಾಯಗೊಳಿಸಲಾಗುತ್ತದೆ, ಅವರು ಮತ್ತೆ ಭಿಕ್ಷಾಟನೆ ಮಾಡುವುದಿಲ್ಲ ಎಂದು ಭರವಸೆ ಕೊಟ್ಟರೆ ಅವರನ್ನು ಬಿಟ್ಟುಬಿಡಲಾಗುತ್ತದೆ. ಆದರೂ ಈ ಕಾನೂನು ಭಿಕ್ಷಾಟನೆಯನ್ನು ಅಪರಾಧವೆಂದು ಪರಿಗಣಿಸುತ್ತದೆ, ಮತ್ತೆ ಮತ್ತೆ ಭಿಕ್ಷಾಟನೆ ಮಾಡುವವರನ್ನು ಜೈಲಿಗೆ ದೂಡುತ್ತದೆ. ಈ ಕಾನೂನನ್ನು 1976ರ ಏಪ್ರಿಲ್ ಒಂದರಂದು ರಾಜ್ಯದಲ್ಲಿ ಭಿಕ್ಷುಕರಿಗೆ ಪರಿಹಾರ ನೀಡುವ ವ್ಯವಸ್ಥೆ ಇರುವ ಹಲವು ನಗರಗಳಲ್ಲಿ ಜಾರಿಗೆ ತರಲಾಯಿತು. ನಂತರ ರಾಜ್ಯದ ಎಲ್ಲಾ ಕಡೆಗೆ ಅವರಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದರಿಂದ ರಾಜ್ಯದಲ್ಲೆಲ್ಲ 1997ರ ನವೆಂಬರ್ 6ರಂದು ಜಾರಿಗೆ ತರಲಾಯಿತು.
ಭಿಕ್ಷುಕರ ಪುನರ್ವಸತಿಗೆ ಜನರ ಮೇಲೆ ತೆರಿಗೆ ಇದೆ
[ಬದಲಾಯಿಸಿ]- ಸ್ಥಳೀಯ ಸಂಸ್ಥೆಗಳು ವಸೂಲು ಮಾಡುವ ಹಲವು ತೆರಿಗೆಗಳ ಜೊತೆಗೆ, ಉದಾಹರಣೆಗೆ ಆಸ್ತಿತೆರಿಗೆಯ ಜೊತೆಗೆ, ತೆರಿಗೆಯ ಮೊತ್ತದ ಮೇಲೆ ಪ್ರತಿಶತ 3ರಷ್ಟು ಭಿಕ್ಷಾಟನಾ ಶುಲ್ಕವನ್ನೂ ವಸೂಲು ಮಾಡುವರು. ಈ ಹಣ ಕೇಂದ್ರ ಪರಿಹಾರ ನಿಧಿಗೆ ಸೇರುತ್ತದೆ. ಈ ನಿಧಿಯನ್ನು ಭಿಕ್ಷುಕರಿಗೆ ಪರಿಹಾರವನ್ನು ಕಲ್ಪಿಸಲು ಒಂದು ಸಮಿತಿ ಖರ್ಚು ಮಾಡುತ್ತದೆ. ಬೆಂಗಳೂರಿನಲ್ಲಿರುವ ಭಿಕ್ಷುಕರ ಪರಿಹಾರ ಕೇಂದ್ರವನ್ನು ಮೊದಲು ಭಿಕ್ಷುಕರ ಬಡಾವಣೆ- ಬೆಗ್ಗರ್ಸ್ ಕಾಲೊನಿ- ಎಂದು ಕರೆಯಲಾಗುತ್ತಿತ್ತು. ಇತ್ತೀಚೆಗೆ ಅದರ ಹೆಸರನ್ನು ಬದಲಾಯಿಸಿ ನಿರಾಶ್ರಿತರ ಪರಿಹಾರ ಕೇಂದ್ರ ಎಂದು ಕರೆಯಲಾಗುತ್ತಿದೆ. ಇಂಥ ಕೇಂದ್ರಗಳಲ್ಲಿ ಭಿಕ್ಷುಕರಿಗೆ ಸ್ವಾತಂತ್ರ್ಯ ಇಲ್ಲದಿರುವುದರಿಂದ ಅವರ ಪಾಲಿಗೆ ಅವು ಜೈಲುಗಳಿದ್ದಂತೆಯೇ. ಆದುದರಿಂದಲೇ ಭಿಕ್ಷುಕರು ಈ ಕೇಂದ್ರಗಳಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ತಪ್ಪಿಸಿಕೊಂಡು ಹೋದ ಭಿಕ್ಷುಕ ಮತ್ತೆ ಸಿಕ್ಕಿಹಾಕಿಕೊಂಡರೆ ಅವನನ್ನು ಮೂರು ತಿಂಗಳು ಜೈಲಿಗೆ ದೂಡಲಾಗುತ್ತದೆ.
ಗಣತಿ
[ಬದಲಾಯಿಸಿ]- 2011ರಲ್ಲಿ ನಡೆದ ಜನಗಣತಿ ಪ್ರಕಾರ ಗ್ರಾಮಾಂತರ ಭಾರತದಲ್ಲಿರುವ 17.97 ಕೋಟಿ ಕುಟುಂಬಗಳಲ್ಲಿ 6.69 ಲಕ್ಷ ಕುಟುಂಬಗಳು ಭಿಕ್ಷಾಟನೆ ಮಾಡಿ ಬದುಕುತ್ತಿರುವ ನಿರ್ಗತಿಕ ಕುಟುಂಬಗಳು.
- ಇವುಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಭಿಕ್ಷುಕ ಕುಟುಂಬಗಳು ಪಶ್ಚಿಮ ಬಂಗಾಳದಲ್ಲಿವೆ; ಅಂದರೆ 1.97 ಲಕ್ಷ ಕುಟುಂಬಗಳು.
- ಕರ್ನಾಟಕದಲ್ಲಿ 9,650 ಕುಟುಂಬಗಳಿವೆ. ಕರ್ನಾಟಕದಲ್ಲಿಯ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಂದರೆ 1,333 ಕುಟುಂಬಗಳಿವೆ.
- ಕೊಡಗಿನಲ್ಲಿ ಬರಿ 31 ಇಂತಹ ಕುಟುಂಬಗಳಿವೆ.(ಈ ಜನಗಣತಿಯ ನಗರ ಪ್ರದೇಶಗಳ ಅಂಕಿಸಂಖ್ಯೆಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.)
- ಕರ್ನಾಟಕದಲ್ಲಿ ಬರಿ 13 ಪರಿಹಾರ ಕೇಂದ್ರಗಳಿದ್ದು ಅವುಗಳಲ್ಲಿ ಬರಿ 831 ನಿರಾಶ್ರಿತರು ಇದ್ದಾರೆ.
ಪರಿಹಾರ
[ಬದಲಾಯಿಸಿ]- ಈ ಪರಿಹಾರ ಕೇಂದ್ರಗಳಲ್ಲಿ ಅವರಿಗೆ ಆಹಾರ, ವಸತಿ ಹಾಗೂ ವೃತ್ತಿ ತರಬೇತಿಗಳನ್ನು ನೀಡಲಾಗುತ್ತದೆ. 2011–12ರ ಕೇಂದ್ರ ಪರಿಹಾರ ಸಮಿತಿಯು ರೂ.70 ಕೋಟಿ ಮೊತ್ತದ ಮುಂಗಡ ಪತ್ರವನ್ನು ಹೊಂದಿತ್ತು. ಆದರೆ ಆದಾಯ ರೂ.47.78 ಕೋಟಿ ಹಾಗೂ ಖರ್ಚು ರೂ.45.70 ಕೋಟಿ ಮಾತ್ರವಾಗಿತ್ತು. ಬರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2015–16ರ ಮುಂಗಡಪತ್ರದ ಪ್ರಕಾರ ರೂ.176 ಕೋಟಿ ಮೊತ್ತ ಭಿಕ್ಷುಕರ ಶುಲ್ಕದ ಖಾತೆಯಲ್ಲಿ ಜಮೆ ಇದೆ. ಈ ವರ್ಷ ರೂ.57 ಕೋಟಿ ಆದಾಯವನ್ನು ಅಂದಾಜು ಮಾಡಲಾಗಿದೆ.
- ಭಿಕ್ಷುಕರ ಹಾಗೂ ಭಿಕ್ಷಾಟನೆ ಬಗ್ಗೆ ಜನಸಾಮಾನ್ಯರಲ್ಲಿರುವ ಮನೋಭಾವವನ್ನು ಬದಲಿಸಿ ಅನುಕಂಪದ ಕಾರ್ಯಕ್ರಮಕ್ಕೆ ತೊಡಗಿಸುವ ಅವಶ್ಯಕತೆ ಇದೆ; ಕಾನೂನಿನಲ್ಲಿ ಪರಿಹಾರ ಒದಗಿಸುವ ಅಂಶಗಳನ್ನು ಉಳಿಸಿಕೊಂಡು; ಭಿಕ್ಷುಕರ ಹೆಸರಿನಲ್ಲಿ ಸಂಗ್ರಹಿಸುವ ಧನರಾಶಿಯ ನೇರ ಪ್ರಯೋಜನ ಭಿಕ್ಷುಕರಿಗೇ ಆಗುವಂತೆ ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಬೇಕಾಗಿದೆ. [೧]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]