ಬೆತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕೆಲಾಮಸ್ ರೊಟಾಂಗ್‍ನ ಕಾಂಡ

ಬೆತ್ತವು ಅರೆಕೇಸೀ (ಪಾಮೀ) ಕುಟುಂಬಕ್ಕೆ ಸೇರಿದ ಉಪಯುಕ್ತ ಸಸ್ಯ (ಕೇನ್, ರಟನ್). ಜಾತಿಯ ವೈಜ್ಞಾನಿಕ ಹೆಸರು ಕೆಲಾಮಸ್. ಇದರಲ್ಲಿ ಸುಮಾರು 390 ಪ್ರಭೇದಗಳಿವೆ. ಎಲ್ಲವೂ ಉಷ್ಣ ಮತ್ತು ಉಪೋಷ್ಣ ವಲಯಗಳ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವುವು. ಭಾರತದಲ್ಲಿ ಸುಮಾರು 30 ಪ್ರಭೇದಗಳು ಕಾಣಸಿಗುವುವು. ಇವು ಹಿಮಾಲಯ ಪರ್ವತ ಪ್ರದೇಶ, ಅಸ್ಸಾಮ್, ಕೇರಳ ಹಾಗೂ ಕರ್ನಾಟಕದ ಕೊಡಗಿನ ಅರಣ್ಯಗಳಲ್ಲಿ ಬೆಳೆಯುತ್ತವೆ. ಇವುಗಳಲ್ಲಿ ಪ್ರಮುಖವಾದವು ಇಂತಿವೆ: ಕೆಲಾಮಸ್ ರೊಟಾಂಗ್ (ಪಶ್ಚಿಮ ಘಟ್ಟಗಳು), ಕೆಲಾಮಸ್ ಅಂಡಮಾನಿಕಸ್ (ಅಂಡಮಾನ್ ದ್ವೀಪಗಳು), ಕೆಲಾಮಸ್ ಫ್ಲಾಜೆಲ್ಲಮ್ (ಅಸ್ಸಾಮ್) ಮತ್ತು ಕೆಲಾಮಸ್ ಲ್ಯಾಟಿಫೋಲಿಯಸ್ (ಪಶ್ಚಿಮ ಘಟ್ಟಗಳು). ಎಲ್ಲ ಪ್ರಭೇದಗಳೂ ಬಳ್ಳಿಗಳು; ತಮ್ಮ ಎಲೆ, ಎಲೆಕವಚಗಳ ಮೇಲಿರುವ ಕೊಕ್ಕೆಯಂತೆ ಮುಳ್ಳುಗಳ ನೆರವಿನಿಂದ ಎಲೆಯ ಮಧ್ಯನರದ ಪ್ರವರ್ಧನದಿಂದ ರಚಿತವಾಗುವ ತಂತುಗಳ ಸಹಾಯದಿಂದ ಕಾಡಿನ ಮರಗಳ ಮೇಲೆ ಏರುತ್ತ ಬೆಳೆಯುವುವು. ಈ ಗಿಡಗಳ ಕಾಂಡವೇ ಬಲುಬಳಕೆಯ ಬೆತ್ತ. ಕೆಲವೊಮ್ಮೆ ಕಾಂಡ 100 ಮೀ ಉದ್ದವಿರುವುದೂ ಉಂಟು. ಕಾಂಡ ಉರುಳೆಯಾಕಾರದ್ದಾಗಿದ್ದು ಅಡಿಯಿಂದ ಮೇಲಿನವರೆಗೂ ಒಂದೇ ದಪ್ಪಕ್ಕಿರುತ್ತದೆ. ಇದರ ಮೇಲೆ ಎಲೆಕವಚದ ಮುಳ್ಳುಗಳಿವೆ. ಕಾಂಡ ಅಗಿ ಗಟ್ಟಿ; ಸ್ವಲ್ಪ ಮಟ್ಟಿನ ಸ್ಥಿತಿಸ್ಥಾಪಕ ಗುಣವುಳ್ಳದ್ದು. ಕಾಂಡದ ಹೊರಮೈಮೇಲೆ ಸಿಲಿಕ ಎಂಬ ರಾಸಾಯನಿಕ ವಸ್ತುವಿನ ಸಂಗ್ರಹವಿದ್ದು, ಇದರಿಂದಾಗಿ ಕಾಂಡಕ್ಕೆ ಹೊಳಪು ಮತ್ತು ನಯ ಲಭಿಸಿವೆ. ಕಾಂಡದ ಬಣ್ಣ ಹಳದಿ.

ಬೆತ್ತದ ಗಿಡಗಳು ಬಲಿಯಲು ಬೇಕಾಗುವ ಕಾಲಾವಕಾಶದಲ್ಲಿ ವಿವಿಧ ಪ್ರಭೇದಗಳು ವೈವಿಧ್ಯವನ್ನು ತೋರುತ್ತವೆ. ಕೊಡಗಿನಲ್ಲಿ ಬೆಳೆಯುವ ಬೆತ್ತದ ಗಿಡಗಳು ಸುಮಾರು ಐದು ವರ್ಷಗಳಲ್ಲಿ ಬಲಿಯುತ್ತವೆ.

ಸಸ್ಯದ ಬುಡವನ್ನು ಕತ್ತರಿಸಿ ಬೆತ್ತವನ್ನು ಸಂಗ್ರಹಿಸಲಾಗುತ್ತದೆ. ಮೃದುವಾಗಿರುವ ಕಾಂಡದ ತುದಿಯ ಭಾಗಗಳನ್ನು ಕತ್ತರಿಸಿ ತೆಗೆದ ತರುವಾಯ ಉಳಿದ ಭಾಗವನ್ನು ಮರಗಳಿಗೆ ಉಜ್ಜಿ ಮುಳ್ಳುಗಳನ್ನು ತೆಗೆದು ಹಾಕಲಾಗುತ್ತದೆ. ಅನಂತರ ಹಸಿಯ ಬೆತ್ತವನ್ನು ಬೆಂಕಿಗೆ ಅಥವಾ ಬಿಸಿಲಿಗೆ ಒಡ್ಡಿ ಒಣಗಿಸಲಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

ದೃಢತೆ ಹಾಗೂ ಸ್ಥಿತಿಸ್ಥಾಪಕತೆ ಇವೆರಡೂ ಅಪರೂಪ ಗುಣಗಳನ್ನು ಪಡೆದಿರುವ ಬೆತ್ತದ ಉಪಯೋಗ ಅಸಂಖ್ಯಾತ. ಕೆಲಾಮಸ್ ಎಕ್ಸ್‍ಟೆನ್ಸಸ್‍ನಿಂದ ಪಡೆಯುವ ಅತಿ ಗಟ್ಟಿಯಾದ ಬೆತ್ತವನ್ನು ಹಗ್ಗಗಳಿಗೆ ಬದಲಾಗಿ ಮತ್ತು ಕೆಲವು ಬಗೆಯ ಸೇತುವೆಗಳ ಹೊರಜಿಗಳಾಗಿ ಉಪಯೋಗಿಸುತ್ತಾರೆ. ಕುರ್ಚಿ, ಮಂಚ, ಬಂಗಾಳ, ಬಿಹಾರ, ವಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬೆತ್ತವನ್ನಾಧರಿಸಿದ ಅನೇಕ ಕೈಗಾರಿಕೆಗಳು ಇವೆ.

ಪೀಠೋಪಕರಣಗಳ ತಯಾರಿಕೆಯಲ್ಲಿ ಬೆತ್ತಕ್ಕೆ ವಿಶೇಷ ಸ್ಥಾನವುಂಟು. ಬೆತ್ತವನ್ನು ಸೀಳಿ ಹೊರಗಿನ ಹೊಳಪು ಪದರವನ್ನು ಬಿಡಿಸಿ ಎಳೆಯಾಗಿ ಕತ್ತರಿಸಿ ಅನಂತರ ಹೆಣೆಯಲಾಗುತ್ತದೆ. ಬೆತ್ತ ಸೀಳಲು ಯಂತ್ರಗಳನ್ನೂ ಬಳಸುವುದಿದೆ. ಪೀಠೋಪಕರಣಗಳ ತಯಾರಿಕೆಯಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಬೆತ್ತದ ಪ್ರಭೇದಗಳೆಂದರೆ ಕೆಲಾಮಸ್ ರೊಟಾಂಗ್ ಮತ್ತು ಕೆಲಾಮಸ್ ಟೆನ್ಯುಯಿಸ್.

ದಪ್ಪ ಗಾತ್ರದ ಬೆತ್ತಗಳನ್ನು (ಕೆ.ಲ್ಯಾಟಿಫೋಲಿಯಸ್ ಮತ್ತು ಕೆ.ವಿಮಿನಾಲಿಸ್) ಕುರ್ಚಿ, ಮೇಜುಗಳ ಕಾಲುಗಳು, ಕೈಕೋಲು, ಛತ್ರಿಯ ಹಿಡಿ ಮತ್ತು ಪೋಲೋ ಆಟದ ಕೋಲುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕೆಲಾಮಸ್ ಸ್ಯೊಡೋವೈಕಾಲಿಸಿನ ಬೆತ್ತ ಮದ್ದುಗುಂಡು ಸಂಗ್ರಹಿಸುವ ಪೆಟ್ಟಿಗೆಗಳ ತಯಾರಿಕೆಗೆ ಬಳಕೆಯಾಗುತ್ತದೆ. ಪೀಠೋಪಕರಣಗಳನ್ನು ತಯಾರಿಸುವಾಗ ಉಳಿವ ಚೂರನ್ನು ಪ್ಯಾಕಿಂಗ್ ಪದಾರ್ಥವಾಗಿ ಉಪಯೋಗಿಸುವುದಿದೆ.

ಬೆತ್ತದ ಹಣ್ಣಿನ ತಿರುಳು ಅಂಟಂಟು. ಇದಕ್ಕೆ ಸಿಹಿ ಒಗರು ಮಿಶ್ರರುಚಿ ಇದೆ. ಇದು ಖಾದ್ಯಯೋಗ್ಯ. ಕೆಲವು ಸಲ ಕೆಲಾಮಸ್ ಎಕ್ಸ್‍ಟೆನ್ಸಸ್ ಹಾಗೂ ಕೆ.ಎರಕ್ಟಸ್‍ಗಳ ಬೀಜವನ್ನು ಅಡಿಕೆಯಂತೆ ಉಪಯೋಗಿಸುವುದೂ ಉಂಟು. ಕಾಂಡದ ಎಳೆಯ ಚಿಗುರನ್ನು ತರಕಾರಿಯಾಗಿ ಬಳಸುವುದಿದೆ. ಕೆಲಾಮಸ್ ರೀಡಿಯೈ ಪ್ರಭೇದದ ಬೀಜಗಳನ್ನು ಪುಡಿಮಾಡಿ ಹೊಟ್ಟೆಯ ಹುಣ್ಣಿಗೆ ಔಷಧವಾಗಿ ಬಳಸುತ್ತಾರೆ. ಕೆಲಾಮಸ್ ರೊಟಾಂಗಿನ ಬೇರನ್ನು ಅತಿಸಾರಕ್ಕೆ ಔಷಧವಾಗಿ ಕಾಂಪೂಚಿಯದಲ್ಲಿ ಬಳಸುತ್ತಾರೆ. ಕೆಲಾಮಸ್ ಟ್ರಾವಂಕೂರಿಕ ಪ್ರಭೇದದ ಎಳೆಯ ಎಲೆಗಳು ಅಗ್ನಿಮಾಂದ್ಯ ರೋಗಕ್ಕೆ ಮದ್ದು.

ಗ್ರಂಥಸೂಚಿ[ಬದಲಾಯಿಸಿ]

  • TPL (2013). "The Plant List Version 1.1". Royal Botanic Gardens, Kew and Missouri Botanical Garden. Retrieved 7 July 2015.CS1 maint: ref=harv (link)
  • Tomlinson, P. B.; Zimmerman, Martin, eds. (1978). Tropical Trees as Living Systems (Proceedings of the fourth Cabot Symposium held at Harvard Forest, Petersham Massachusetts on April 26-30, 1976). Cambridge University Press. ISBN 978-0-521-14247-2.CS1 maint: ref=harv (link)
  • Dransfield, John. Growth forms of rain forest palms. pp. 247–268., in Tomlinson & Zimmerman (1978)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಬೆತ್ತ&oldid=920373" ಇಂದ ಪಡೆಯಲ್ಪಟ್ಟಿದೆ