ಬಿ.ಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿ.ಕೃಷ್ಣ[ಬದಲಾಯಿಸಿ]

B.krishna

ಸಾಮಾನ್ಯರನ್ನು ರಂಜಿಸಿದ ನಾಟಕಗಳೆಲ್ಲ ಸಾಮಾನ್ಯವಾಗಿ ವೃತ್ತಿನಾಟಕ ಸಂಘಗಳಿಂದಲೇ ಪ್ರದರ್ಶಿಸಲ್ಪಟ್ಟವೆಂಬುದು ಬಹುಮಟ್ಟಿಗೆ ದಿಟ. ಆದರೆ ವೃತ್ತಿನಾಟಕ ಸಂಘಗಳ ಜಾಡನ್ನು ಬಿಟ್ಟು ಹೊಸ ಜಾಡಿನಲ್ಲಿ ಸಾಮಾಜಿಕ ನಾಟಕಗಳನ್ನು ಆಭಿನಯಿಸಿ, ಜನ ಮೆಚ್ಚುಗೆ ಗಳಿಸಿದ ಮಿತ್ರಮಂಡಲಿಗಳದೂ ಈ ರಂಜನಾ ರಂಗದಲ್ಲಿ ಗಣನೀಯ ಕೊಡುಗೆ ಇದೆಯೆಂಬುದನ್ನು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಇಂಥ ಮಿತ್ರಮಂಡಲಿಗಳು (ಅಮೆಚೂರ್ ನಾಟಕ ಸಂಘಗಳು) ಕರ್ನಾಟಕದಲ್ಲಿ ಇಪ್ಪತ್ತನೇ ಶತಮಾನದ ಮೂರನೆ ದಶಕದ ಆದಿಯಲ್ಲೇ ಹಲವಾರು ಹುಟ್ಟಿಕೊಂಡಿದ್ದವು. ಆದರೆ ಆವುಗಳ ವ್ಯಾಪ್ತಿ ವಿಸ್ತಾರವಾಗಿರಲಿಲ್ಲ ಆಷ್ಟೇ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಂದಿನ ಅಧ್ಯಾಪಕ, ಪ್ರಾಧ್ಯಾಪಕರೆಲ್ಲರೂ, ತಮ್ಮ ವಿದ್ಯಾಥಗಳಲ್ಲಿರಬಹುದಾದ ಅಭಿನಯಕಲೆಯು ಪ್ರಬುದ್ಧವಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇದಕ್ಕೆಂದೇ ಲಲಿತ ಕಲಾಸಂಘವೊಂದನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ ನಾಟಕ ವಿಭಾಗಕ್ಕೆ ಒಂದು ಉಪಸಮಿತಿಯೂ ಇತ್ತು.

ಬಿ.ಕೃಷ್ಣ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಮೇ ೮,೧೮೯೫ ರಂದು ಹುಟ್ಟಿದರು.

೧೯೨೮ ರಿಂದ ೧೯೩೨ ರವರೆಗೆ ಬಿ.ಕೃಷ್ಣ ಎಂಬ ವಿದ್ಯಾರ್ಥಿ ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿದ್ದರು. ನಾಟಕ ವಿಭಾಗದ ಉಪಸಮಿತಿಗೆ ಅವರೇ ಅಧ್ಯಾಕ್ಷರಾಗಿದ್ದರು. ಈ ಉಪಸಮಿತಿಯ ಆಶ್ರಯದಲ್ಲಿ ಅಂದಿನ ಕಾಲೇಜು ವಿದ್ಯಾರ್ಥಿಗಳು ಬೆಂಗಳೂರು, ತುಮಕೂರು, ಚನ್ನಪಟ್ಟಣ, ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಜಿಲ್ಲಾ ಮುಖ್ಯ ಕೇಂದ್ರಗಳಲ್ಲಿ ಹಲವಾರು ನಾಟಕಗಳನ್ನು ಅಭಿನಯಿಸಿ ಜನಪ್ರಿಯತೆ ಗಳಿಸಿಕೊಂಡಿದ್ದರು. ಅಂದಿನ ದಿನಗಳಲ್ಲಿ ಪ್ರಾಚಾರ ರಾಗಿದ್ದ "ಕನ್ನಡದ ಕಣ್ವ" ಬಿ.ಎಂ. ಶ್ರೀ. ಅವರ 'ಗದಾಯುದ್ಧ', ಪ್ರೊಫ಼ೆಸರ್ ಎ.ಮೂತ ರಾಯರ 'ಆಷಾಡಭೂತಿ', ವೆಂಕಟಾಚಾರ್ಯರ 'ಸಾವಿನ ಸಮಸ್ಯೆ', ಕನ್ನಡಕ್ಕೊಬ್ಬರೇ ಆದ ಕೈಲಾಸಂರವರ 'ಟೊಳ್ಳುಗಟ್ಟಿ', 'ಹೋರೂರು', 'ಪಾತೂ ತವರನೆ', 'ನೆರೆಹೊರ್ಕೆ', 'ಹುತ್ತದಲ್ಲಿ ಹುತ್ತ' ಕಾದಂಬರಿ ಸಾರ್ವಭಮ ಆ.ನ.ಕೃಷ್ಣರಾಯರ 'ಮದುವೆಯ ಮಂಚಲು' ಪ್ರಚಂಡ ವಾಗ್ಮಿ ಪ್ರೊ.ಜಿ.ಪಿ. ರಾಜರತ್ನಂ ಅವರ 'ಗಂಡುಗೊಡಲಿ' ಈ ನಾಟಕಗಳನ್ನೆಲ್ಲ ಅಭಿನಯಿಸಲಾಗುತ್ತಿತ್ತು.

ರಾಷ್ಟ್ರಕವಿ ಕುವೆಂಪು ನಿರಚಿತ 'ಯಮನ ಸೋಲು', 'ಬಲಿದಾನ', 'ಜಲಗಾರ', 'ಮಹಾರಾತ್ರಿ', 'ರಕ್ತಕಾಶಿ', 'ಮುದ್ದಣ-ಮನೋರಮೆ', 'ಮಚಕಟಕ' ನಾಟಕಗಳು ಈ ವಿದ್ಯಾರ್ಥಿ ಸಂಘದ ಮೆಚ್ಚಿನ ನಾಟಕಗಳಾಗಿದ್ದವು. ನಾರಾಯಣ ಶಾಸ್ತ್ರಿಯವರ ಪಂಚರಾತ್ರಿ, ಮಾಸ್ತಿಯವರ ಮಂಜುಳ, ವಿ.ಸೀ. ಅವರ ಸೊಹ್ರಾಬ್ ಮತ್ತು ರುಸ್ತುಂ, ಎಂ.ಆರ್.ಶ್ರೀ. ಅವರ ನಾಗರಿಕ ನಾಟಕಗಳನ್ನು ಅಭಿನಯಿಸಲಾಗುತ್ತಿತ್ತು. ಇದಲ್ಲದೆ ಷೇಕ್ಸ್ಪಿಯರ್, ಗಾಲ್ಸ್ ವರ್ದಿ, ರವೀಂದ್ರನಾಥ ಟಾಗೋರ್ ವಿರಚಿತ ಇಂಗ್ಲಿಷ್ ನಾಟಕಗಳನ್ನು ಈ ಸಂಘ ಅಭಿನಯಿಸುತ್ತಿತ್ತು.

ವಿದ್ಯಾಭ್ಯಾಸ[ಬದಲಾಯಿಸಿ]

ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪ್ರರಂಭಿಸಿದರು. ಕಾಲೇಜು ದಿನಗಳಲ್ಲಿ ಬಿ. ಕೃಷ್ಣ ಅವರು ಪ್ರೊಫ಼ೆಸರ್ ರೋಲೋ ಮತ್ತು ಪ್ರೊ. ಮೆಕೆಂಟಾಷ್ ಅವರುಗಳು ನಿರ್ದೆಶಿಸಿ ಸಿದ್ದಪಡಿಸಿದ್ದ ಷೇಕ್ಸ್ಪಿಯರ್ ಮಹಾಕವಿಯ ಪ್ರಸಿದ್ದ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಜೂಲಿಯಸ್ ಸೀಸರ್ ಮತ್ತು ಮರ್ಚೆಂಟ್ ಆಫ಼್ ವೆನಿಸ್ ನಾಟಕಗಳಲ್ಲಿ ಪೋರ್ಟಯಾ, ಮ್ಯಾಕ್ ಬೆತ್ನಲ್ಲಿ ಲೇಡಿ ಮ್ಯಾಕ್ ಬೆತ್ ಹ್ಯಾಮ್ಲೆಟ್ ನಲ್ಲಿ ಒಫ಼ೇಲಿಯಾ ಪಾತ್ರಗಳನ್ನು ಕೃಷ್ಣ ವಿದೇಶಿಯರೂ ಮೆಚ್ಚುವಂತೆ ನಿರ್ವಹಿಸುತ್ತಿದ್ದರು. ಕೈಲಾಸಂ ಅವರ ನಾಟಕಗಳಂತೂ ಅಂದಿನ ದಿನಗಳಲ್ಲಿ ರಂಗ ಮಂಚದಲ್ಲೊಂದು ಕ್ರಾಂತಿಯನ್ನೇ ಮೂಡಿಸಿದ್ದವು. ಈ ನಾಟಕಗಳಲ್ಲೆಲ್ಲ ಬಿ.ಕೃಷ್ಣ ಅವರು ಸ್ತ್ರೀ ಪಾತ್ರ ವಹಿಸುತ್ತಿದ್ದರು. ಸ್ತ್ರೀ ಪಾತ್ರಕ್ಕೆ ಹೇಳಿ ಮಾಅಡಿಸಿದಂತುದ್ದ ಅವರ ಕಂಠಸ್ವರಗಳು ಪ್ರೇಕ್ಷಕರನ್ನು ಸದಾ ವಂಚಿಸುತ್ತಿದ್ದವು. ರಂಗದ ಮೇಲಿನ ಸ್ತ್ರೀ ಪಾತ್ರಧಾರಿ ಪುರುಷ ವ್ಯಕ್ತಿಯೆಂದು ಕಿಂಚಿತ್ತಾದರೂ ಶಂಕೆಯೇ ಮೂಡುತ್ತಿರಲಿಲ್ಲ. ಪ್ರಸಿದ್ಧ ನಾಟಕಕಾರ ಮೊಲಿಯರ್ ವಿರಚಿತ "ಡಾಕ್ಟರ್ ಇನ್ ಸ್ಪೈಟ್" ನಾಟಕದಲ್ಲಿ (೧೯೨೮ ರಲ್ಲಿ) ಕೃಷ್ಣ ಅವರು ವಹಿಸುತ್ತಿದ್ದ ಸ್ತ್ರೀ ಪಾತ್ರವಂತೂ ನಭೂತೋನಭವಿಷ್ಯತಿ.

ಕರ್ನಾಟಕ ರಾಜ್ಯದ ಮಾಜಿ ನ್ಯಾಯಮೂರ್ತಿಗಳೂ ಹಂಗಾಮಿ ರಾಜ್ಯ ಪಾಲರೂ ಆಗಿದ್ದ ಶ್ರೀ ನಿಟ್ಟೂರು ಶ್ರೀನಿವಾಸರಾಯರು, ಒಂದು ಸಂದರ್ಭದಲ್ಲಿ ಬಿ.ಕೃಷ್ಣ ಅವರ ವಿಚಾರವಾಗಿ ಬರೆಯುತ್ತ, "ಕರ್ನಾಟಕ ನಾಟಕ ಪ್ರಪಂಚಕ್ಕೆ ಇವರ ಕೊಡುಗೆ ಒಂದು ಕೈಮರದಂತಿದೆ. ಅರ್ಧ ಶತಮಾನದಷ್ಟು ಕಾಲವೂ ಕೃಷ್ಣ ನಾಟಕ ರಂಗಕ್ಕೆ ಒಂದಲ್ಲೊಂದು ಕೊಡುಗೆ ನೀಡುತ್ತ ಬಂದಿದ್ದಾರೆ. ನಮ್ಮ ಸಾಂಸ್ಕೃತಿಕ ಪುನರುತ್ಥಾನದ ಸ್ವರ್ಣ ಯುಗವೆಂದು ಪರಿಗಣಿಸಲಾಗಿರುವ ೧೯೨೦-೩೦ರ ದಶಕಗಳಲ್ಲಿ ವಿದ್ವನ್ಮಣಿಗಳು ರಚಿಸಿದ ನಾಟಕಗಳಲ್ಲೆಲ್ಲ ಬಿ.ಕೃಷ್ಣ ಅವರು ಪ್ರಧಾನ ಸ್ತ್ರೀ ಪಾತ್ರ ನಿರ್ವಹಿಸಿ, ಶಾಶ್ವತ ಕೀರ್ತಿ ಭಾಜನರಾಗಿದ್ದಾರೆ" ಎಂದು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ. ಮತ್ತು ಬಿ.ಟಿ. ಪದವೀಧರರಾಗಿರುವ ಬಿ.ಕೃಷ್ಣ ಅವರು ಆಧ್ಯಯನ ಮಾಡಿದ್ದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ. ಆಗ ಕಾಲೇಜಿನ ಕಲಾ ಸಂಘದ ವತಿಯಿಂದ ಪ್ರದರ್ಶಿಸಲಾಗುತ್ತಿದ್ದ ನಾಟಕಾಗಳನ್ನು ಪಸಿದ್ಧ ವಿದ್ವಾಂಸರುಗಳಾಗಿದ್ದ, ಪ್ರೊಫ಼ೆಸರ್ ಜೆ.ಸಿ.ರೋಲೊ, ಪ್ರೊಫ಼ೆಸರ್ ಮೆಕೆಂಟಾಷ್, ಪ್ರೊಫ಼ೆಸರ್ ಬಿ.ಎಂ. ಶ್ರೀ., ಪ್ರೊಫ಼ೆಸರ್ ಎಸ್.ವಿ.ಕೃಷ್ಣಸ್ವಾಮಿ ಆಯ್ಯಂಗಾರ್ ಸಹ ನಾಟಕಗಳ ನಿರ್ದೇಶನದಲ್ಲಿ ಎತ್ತಿದ ಕೈಎನಿಸಿದ್ದರು. ಈ ನಾಟಕಗಲ್ಲೆಲ್ಲ ಕೃಷ್ಣ ಅವರ ಪಾತ್ರ ಇದ್ದೇ ಇರುತ್ತಿತ್ತು.

ವೃತ್ತಿ[ಬದಲಾಯಿಸಿ]

೧೯೩೨ರಲ್ಲಿ ಶಿಕ್ಷಣ ಇಲಾಘೆಯ ಸೇವೆಗೆ ಸೇರಿದ ಬಿ.ಕೃಷ್ಣ ಅವರು ೧೯೪೨ರ ವರೆಗೆ ನೌಕರಿ ಮಾಡಿದರು. ಅ ಅವಧಿಯಲ್ಲೂ ಬಣ್ಣದ ವಾಸನೆ ಅವರನ್ನು ಬಿಡಲಿಲ್ಲ. ಮೈಸೂರು ಸಂಸ್ಥಾನದ ಸರ್ಕಾರ ಪ್ರಚಾರಕ್ಕಾಗಿ ನಾಟಕ ಮಾಧ್ಯಮವನ್ನು ಬಳಸಿ ಕೊಳ್ಳುತ್ತಿತ್ತು. ಅಕ್ಷರಪ್ರಚಾರ ಹಾಗು ಅಭಿವೃದ್ಧಿ ಕಾರ್ಯಗಳನ್ನು ನಾಟಕವಾಡಿ ಪ್ರಚಾರ ಮಾಡುವುದು ರೂಢಿಯಾಗಿತ್ತು. ಅದರಲ್ಲಿ ಬಿ.ಕೃಷ್ಣ ಪ್ರಮುಖ ಪಾತ್ರ ವಹಿಸುತ್ತಿದ್ದರು.

೧೯೬೯ರಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಪ್ರಶಸ್ತಿ ಲಭಿಸಿದಾಗ ಕುವೆಂಪು ಅವರನ್ನು ಅಭಿನಂದಿಸಲು ಹಾಗೂ ಸನ್ಮಾನಿಸಲು, ಅವರದೇ ನಾಟಕಗಳನ್ನು ಅಭಿನಯಿಸಲು "ಕುವೆಂಪು ನಾಟಕ ಚಕ್ರ" ಎಂಬ ಕಾರ್ಯಕ್ರಮವೊಂದನ್ನು ಏರ್ಪಡಿಸಿದ ಕೀರ್ತಿ ಬಿ.ಕೃಷ್ಣ ಅವರ ಪಾಲಿನದು. ಬಿ.ಕೃಷ್ಣ ಮತ್ತು ಕುವೆಂಪು ಇಬ್ಬರೂ ವಿದ್ಯಾರ್ಥಿ ದೆಸೆಯಲ್ಲೇ ಸಂಗಾತಿಗಳಾಗಿದ್ದು "ಸತ್ಯವಾನ್ ಸಾವಿತ್ರಿ" ಪಾತ್ರಗಳಲ್ಲಿ (೧೯೨೮ರಲ್ಲಿ) ಕಾಲೇಜಿನ ರಂಗದಲ್ಲಿ ಮೆರೆದದ್ದೂ ಉಂಟು.

೧೯೬೯ರ ತಿಂಗಳಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ನಾಟಕ ಚಕ್ರದಲ್ಲಿ ರಾಜ್ಯದ ಹನ್ನೆರಡು ಹವ್ಯಾಸಿ ನಾಟಕ ತಂಡಗಳು ( ೨೫೦ ನಟರು) ಕುವೆಂಪು ಅವರ ೧೨ ನಾಟಕಗಳನ್ನು ಪ್ರದರ್ಶಿಸಿದವು.೧೯೭೦ ರಲ್ಲಿ ಅವರು ನಾಟಖಾ ಕಲೆಗೇ ಮೀಸಲಾದ 'ರಂಗಮಂಟಪ' ಸಂಸ್ಥೆಯನ್ನು ಸ್ಥಾಪಿಸಿ, ಅದರ ನಿರ್ದೆಶಕರಾಗಿ ಸೇವೆ ಸಲ್ಲಿಸಿದರು. ೧೯೭೦ ರಲ್ಲಿ ಅತ್ಯುತ್ತಮವೆಂದು ಹೆಸರುಗಳಿಸಿದ ತುಘಲಕ್, ಮಹಾಶಿಲ್ಪಿ, ಕುರುಡುಕಾಂಚಾಣ- ಈ ಮೂರು ನಾಟಕಗಳನ್ನು ಪ್ರದರ್ಶಿಸಲಾಯಿತು. ನುರಿತ ನಟರಿಂದ 'ಆಷಾಢಭೂತಿ' ನಾಟಕ ಪ್ರದರ್ಶನವೂ ನಡೆಯಿತು. ೧೯೭೦ ರಿಂದ ೭೩ರ ವರೆಗೆ ನಾಲ್ಕು ವರುಷ ಅವ್ಯಾಹತವಾಗಿ ಕೈಗಾರಿಕೋದ್ಯಮಗಳಲ್ಲಿ ನೌಕರಿಗಿರುವ ಕಲಾ ನಿವಾಸಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ತಳೆದು ರಂಗಮಂಟಪವು ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆಗಳ ನಾಟಕ ಸ್ಪರ್ಧೆಗಳನ್ನೂ, ನಾಟಕೋತ್ಸವಗಳನ್ನೂ ನಡೆಸಿತು. ಆ ಅವಧಿಯಲ್ಲೇ ಜೋಕುಮಾರ ಸ್ವಾಮಿ, ಸಂನ್ಯಾಸಿ ರಾವಾಣ ಮೊದಲಾದ ನಾಟಕಗಳು ಖ್ಯಾತಿಗಸಿದ್ದು.

ಚಲನಚಿತ್ರಗಳು[ಬದಲಾಯಿಸಿ]

೧೯೪೨ ರಿಂದೀಚೆಗೆ ಆಕಾಶವಾಣಿ ಪ್ರಸಾರ ಮಾಡಿದ ಹಲವಾರು ನಾಟಕಗಳಲ್ಲಿ ಬಿ.ಕೃಷ್ಣ ಅವರ ಪಾತ್ರ ನಿರ್ವಹಣೆ ಬಹುಕಾಲ ತಪ್ಪಿರಲಿಲ್ಲ. ಆಕಾಶವಾಣಿಯಲ್ಲೂ ಸ್ತ್ರೀ ಪಾತ್ರ ನಿರ್ವಹಿಸಿದ ಅನನ್ಯ ಕೀರ್ತಿ ಇವರದು. ೧೯೨೮-೩೦ರ ಅವಧಿತಯಲ್ಲಿ ವಿಶ್ವ ಖ್ಯಾತರಾಗಿದ್ದ ಕಲಾ ವಿಮರ್ಶಕ ಜಿ.ವೆಂಕಟಾ ಚಲಂ, ಹರೀಂದ್ರನಾಥ ಚಟ್ಟೋಪಾಧ್ಯಾಯ, ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ, ಡಾ||ನಾರಾಯಣ ಶಾಸ್ತ್ರಿ, ಟಿ.ಪಿ.ಕೈಲಾಸಂ, ಡಿ.ಕೆ.ಭಾರದ್ವಾಜ್, ಮೊದಲಾದವರ ತಂಡವನ್ನು ಕಟ್ಟಿಕೊಂಡು ಎಂ.ಭವನಾನಿ ಅವರು ನಿರ್ಮಿಸಿದ ಮೂಕಿ ಚಿತ್ರ "ವಸಂತ ಸೇನೆ" ಯಲ್ಲಿ ಪ್ರಮುಖ ಪಾತ್ರವಾದ ಕರ್ಣಪೂರಕನ ವೇಷ ಹಾಕಿದ್ದವರು ಬಿ.ಕೃಷ್ಣ. ಇತ್ತೀಚಿಗೆ ಅವರು 'ಕಂಕಣ', 'ಘಟಶ್ರಾದ್ಧ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಸುಸಂಸ್ಕೃತರೂ, ನಿಕರ್ವಿಗಳೂ, ನಿರಾಡಂಬರಿಗಳೂ, ಸ್ನೇಹಶೀಲರೂ ಆದ ಇವರ ಅನುಭವ, ಮಾರ್ಗದರ್ಶನ ಇಂದಿನ ಕಲಾವಿಲಾಸಿ ನಟರುಗಳಿಗೆ ಅಮೂಲ್ಯ ಸಂಪತ್ತು.

ಇವರು ಜೂನ್ ೨೩,೧೯೯೧ ರಂದು ನಿಧನರಾದರು.

ಉಲ್ಲೇಖ[ಬದಲಾಯಿಸಿ]

[೧]

  1. ಕರ್ನಾಟಕದ ರಂಗ ಕಲಾವಿದರು. ಸೀತಾರಾಮ್ಯಯ.