ಬಾರ್ಟೂಲೂಮೇಯು ಡೀಯಸ್ ದೆ ನೋವೇಸ್
ಬಾರ್ಟೂಲೂಮೇಯು ಡೀಯಸ್ ದೆ ನೋವೇಸ್ (1450-1500). ಪೋರ್ಚುಗೀಸ್ ನಾವಿಕ. ಗುಡ್ಹೋಪ್ ಭೂಶಿರದ ಆವಿಷ್ಕರ್ತ. ರಾಜಮನೆತನದ ರಕ್ಷಕವೀರನಾಗಿದ್ದ.
ಇವನ ಜನನದ ವರ್ಷ ಮತ್ತು ಸ್ಥಳ ಖಚಿತವಾಗಿ ತಿಳಿದುಬಂದಿಲ್ಲ. 1478ರಲ್ಲಿ ಬಾರ್ಟೂಲೂಮೇಯು ಡೀಯಸ್ ಎಂಬೊಬ್ಬನಿಗೆ, ಗಿನಿ ಕರಾವಳಿಯಿಂದ ಪೋರ್ಚುಗಲ್ಲಿಗೆ ಕೊಂಡೊಯ್ಯುತ್ತಿದ್ದ ದಂತದ ಮೇಲೆ ಮಾಮೂಲು ಸುಂಕಗಳಿಂದ ವಿನಾಯಿತಿ ನೀಡಿದುದು ಕಂಡು ಬರುತ್ತದೆ. ಅವನೇ ಈ ಡೀಯಸ್ ಆಗಿರಬಹುದು. 1481ರಲ್ಲಿ ಡಿಯಾಗೊದ ಅಝಂಬೂಜ ಎಂಬವನ ನೇತೃತ್ವದಲ್ಲಿ 2ನೆಯ ಜಾನ್ ದೊರೆ ಗೋಲ್ಡ್ ಕೋಸ್ಟಿಗೆ ಕಳುಹಿಸಿದ ನೌಕೆಗಳಲ್ಲೊಂದಕ್ಕೆ ಇವನು ಅಧಿಪತಿಯಾಗಿದ್ದ. ಐದು ವರ್ಷಗಳ ಅನಂತರ 2ನೆಯ ಜಾನ್ ಇವನಿಗೆ ವರ್ಷಾಶನವನ್ನು ನೀಡಿದ.
1487ರ ಆಗಸ್ಟಿನಲ್ಲಿ ಡೀಯಸ್ ಮೂರು ಹಡಗುಗಳೊಂದಿಗೆ ಆಫ್ರಿಕದ ತೀರದ ಕಡೆಗೆ ಯಾನ ಮಾಡಿದ. ಆಫ್ರಿಕನ್ ತೀರಪಟವನ್ನು ರಚಿಸುವುದೂ ಭಾರತಕ್ಕೆ ಸಮುದ್ರಮಾರ್ಗವೊಂದನ್ನು ಕಂಡು ಹಿಡಿಯುವುದೂ ಈ ಯಾನದ ಉದ್ದೇಶಗಳಲ್ಲಿ ಎರಡು. ಇವನಿಗೆ ಮುಂಚೆ ಡೀಯೊಗೊ ಕೌನ್ ಎಂಬವನು ಪಶ್ಚಿಮ ಆಫ್ರಿಕ ತೀರದಲ್ಲಿ ದ.ಅ. 21° 50'ವರೆಗೂ ಯಾನ ಮಾಡಿದ್ದ. ಕೌನ್ ತನ್ನೊಂದಿಗೆ ಪೋರ್ಚುಗಲ್ಲಿಗೆ ಕರೆತಂದಿದ್ದ ಇಬ್ಬರು ನೀಗ್ರೋಗಳನ್ನೂ ಡೀಯಸ್ ಕರೆದೊಯ್ದ. ಕೌನ್ ತಲಪಿದ್ದ ಕ್ರಾಸ್ ಭೂಶಿರವನ್ನು ದಾಟಿ, ತಾನು ಕರೆತಂದಿದ್ದ ಇಬ್ಬರು ನೀಗ್ರೋಗಳನ್ನು ಇಳಿಸಿ ಕ್ಯಾಬೊ ಡ ವೋಲ್ಟ ತಲಪಿ, ಅದರ ಮೇಲೆ ಸ್ತಂಭವನ್ನು ನೆಟ್ಟು ಪೋರ್ಚುಗಲ್ಲಿನ ಒಡೆತನ ಸ್ಥಾಪಿಸಿ ಮುಂದುವರಿದ. 13 ದಿವಸಗಳ ಕಾಲ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿದರೂ ಭೂಪ್ರದೇಶವನ್ನೇ ಕಾಣದೆ ಉತ್ತರಕ್ಕೆ ತಿರುಗಿ 1488ರ ಫೆಬ್ರವರಿ 3ರಂದು ಮಾಸೆಲ್ ಕೊಲ್ಲಿಯನ್ನು ಮುಟ್ಟಿ ಅಲ್ಲಿಂದ ಪೂರ್ವಾಭಿಮುಖವಾಗಿ ತೀರದಲ್ಲೇ ಪ್ರಯಾಣ ಮಾಡಿ ಪ್ಯಾಡ್ರೋನ್ ಭೂಶಿರದಲ್ಲಿ ಎರಡನೆಯ ಸ್ತಂಭವನ್ನು ಸ್ಥಾಪಿಸಿದ. ಆದರೆ ಅಲ್ಲಿ ಅವನ ಅಧಿಕಾರಿಗಳೂ ಇತರರೂ ಪೋರ್ಚುಗಲ್ಲಿಗೆ ಹಿಂದಿರುಗಬೇಕೆಂದು ಒತ್ತಾಯಿಸತೊಡಗಿದರು. ಗ್ರೇಟ್ ಫಿಷ್ ನದಿಯ ಮುಖಪ್ರದೇಶದವರೆಗೆ ಮಾತ್ರ ಹಾಗೂ ಹೀಗೂ ಅವರನ್ನು ಒಡಂಬಡಿಸಿ ಪರಿಶೋಧನೆಯನ್ನು ಮುಂದುವರಿಸಿದ. ಕರಾವಳಿ ಅಲ್ಲಿ ಈಶಾನ್ಯಾಭಿಮುಖವಾಗಿ ಸಾಗುವುದೆಂಬ ಅಂಶ ಅವನಿಗೆ ಖಚಿತವಾಯಿತು. ಆಫ್ರಿಕದ ದಕ್ಷಿಣ ತೀರವನ್ನು ಬಳಸಿ ಬರುವ ಸಮುದ್ರಮಾರ್ಗವೊಂದು ಉಂಟೆಂಬುದು ದೃಢವಾಯಿತು. ಆದರೆ ಯಾನವನ್ನು ಮುಂದುವರಿಸಿ, ಗುಡ್ಹೋಪ್ ಭೂಶಿರದ ಕಡೆಯಿಂದ ಭಾರತಕ್ಕೆ ಸಮುದ್ರಮಾರ್ಗವನ್ನು ತೆರೆಯುವ ಅದೃಷ್ಟ ಅವನದಾಗಲಿಲ್ಲ.
ಪೋರ್ಚುಗಲ್ಲಿಗೆ ಹಿಂದಿರುಗುವಾಗ ಗುಡ್ ಹೋಪ್ ಭೂಶಿರದಲ್ಲಿ ಅವನು ಸ್ತಂಭವೊಂದನ್ನು ಸ್ಥಾಪಿಸಿದ. ಈ ಭೂಶಿರವನ್ನು ಅವನು ಬಿರುಗಾಳಿಗಳ ಭೂಶಿರ ಎಂದು ಕರೆದನೆಂಬ ಪ್ರತೀತಿಯಿದೆ. ಸ್ವದೇಶಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲಿ ಕ್ಯಾಮರೂನ್ಸ್ಗೆ ನೈಋತ್ಯದಲ್ಲಿರುವ ಪ್ರಿನ್ಸ್ ದ್ವೀಪವನ್ನು ಮುಟ್ಟಿ 1488ರ ಡಿಸೆಂಬರ್ನಲ್ಲಿ ಲಿಸ್ಬನನನ್ನು ತಲಪಿದ. 1260 ಮೈ. ಕರಾವಳಿಯನ್ನು ಇವನು ಕಂಡುಹಿಡಿದಿದ್ದ. ಪೇದ್ರೂ ದೆ ಕಾವಿಲ್ಯೌ ಎಂಬವನು 1487-88ರಲ್ಲಿ ಏಡನ್, ಕೈರೊಗಳಿಂದ ಹೊರಟು ಹಿಂದೂಸಾಗರದ ಒಂದು ದಂಡೆಯಾದ ಮಲಬಾರ್ ಕರಾವಳಿಯನ್ನೂ ಇನ್ನೊಂದು ದಂಡೆಯಾದ ಆಫ್ರಿಕದ ಆಗ್ನೇಯ ಕರಾವಳಿಯಲ್ಲಿರುವ ಸೋಫಾಲವನ್ನೂ ತಲಪಿದ್ದನೆಂಬ ವರದಿ ಬಂದಿತ್ತು. ಕಾವಿಲ್ಯೌ ಮತ್ತು ಡೀಯಸರ ಈ ಎರಡೂ ಸಂಚಾರಗಳ ಮಾರ್ಗಗಳನ್ನು ಪಕ್ಕಪಕ್ಕದಲ್ಲಿಟ್ಟು ನೋಡಿದಾಗ, ಆಫ್ರಿಕವನ್ನು ಬಳಸಿ ಭಾರತಕ್ಕೆ ಹೋಗುವ ಸಮುದ್ರಮಾರ್ಗ ಉಂಟೆಂಬುದು ಸಿದ್ಧವಾಯಿತು.
ಡೀಯಸ್ ಲಿಸ್ಬನ್ನಿಗೆ ಹಿಂದಿರುಗಿದಾಗ ಅವನಿಗೆ ಉತ್ಸಾಹಪೂರ್ಣ ಸ್ವಾಗತ ದೊರಕಿತು. ಆದರೆ ಡೀಯಸನಿಗೆ ವಿಶೇಷ ಪುರಸ್ಕಾರವೇನೂ ದೊರಕಿದಂತಿಲ್ಲ. 1497ರಲ್ಲಿ ಭಾರತಕ್ಕೆ ಹೊರಟ ಪರಿಶೋಧನ ತಂಡದ ನಾಯಕತ್ವವನ್ನು ವಹಿಸಲು 2ನೆಯ ಜಾನ್ ದೊರೆಯೂ ಅವನ ಮಗ 2ನೆಯ ಮ್ಯಾನ್ಯುಯೆಲನೂ ವ್ಯಾಸ್ಕೋಡ ಗ್ಯಾಮನನ್ನು ಆರಿಸಿದರು. ಸೇಂಟ್ ಗಾಬ್ರಿಯೆಲ್ ಮತ್ತು ಸೇಂಟ್ ರಾಫೇಲ್ ಹಡಗುಗಳ ನಿರ್ಮಾಣಕಾರ್ಯದ ಮೇಲ್ವಿಚಾರಣೆಯನ್ನು ಇವನಿಗೆ ವಹಿಸಲಾಯಿತು. ಕೇಪ್ ವರ್ಡ್ ದ್ವೀಪಗಳ ವರೆಗೆ ಮಾತ್ರ ಆ ತಂಡದೊಡನೆ ಯಾನ್ ಮಾಡಲು ಇವನಿಗೆ ಅನುಮತಿ ದೊರಕಿತು. 1500ರಲ್ಲಿ ಇವನು ಪೇದ್ರೂ ಆಲ್ವರಿಷ್ ಕಬ್ರಾಲನೊಂದಿಗೆ ಹೊರಟು ಭಾರತಕ್ಕೆ ಹೋಗುವ ಮಾರ್ಗದಲ್ಲಿ ಬ್ರಜಿûಲ್ ತೀರವನ್ನು ತಲಪಿದ. ಗುಡ್ಹೋಪ್ ಭೂಶಿರದ ಆಚೆ ಯಾನ ಮಾಡುತ್ತಿದ್ದಾಗ ಬಿರುಗಾಳಿಗೆ ಸಿಕ್ಕಿ ಇವನು 1500ರ ಮೇ 29ರಂದು ತೀರಿಕೊಂಡ.