ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ

Coordinates: 19°02′11″N 72°49′15″E / 19.03648°N 72.82077°E / 19.03648; 72.82077
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ,ಕೆಲಸ ಪ್ರಗತಿಯಲ್ಲಿದೆ, ತಾಜ್‌ಲ್ಯಾಂಡ್ಸ್‌ ಹೋಟೆಲ್‌ ಕೊನೆಯಿಂದ.

19°02′11″N 72°49′15″E / 19.03648°N 72.82077°E / 19.03648; 72.82077

ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ वांद्रे-वरळी सागरी महामार्गವು ಒಂದು 8-ಪಥದ, ಸರಪಣಿ ಆಧರಿತ ಸೇತುವೆಯಾಗಿದ್ದು ಒತ್ತಡ-ನಿರ್ಮಿತ ಸಿದ್ಧ ಗಾರೆಯಿಂದ ಕೂಡಿದ ಎತ್ತರದ ಕಮಾನುಗಳನ್ನು ಹೊಂದಿದ್ದು, ಬಾಂದ್ರಾ ಹಾಗೂ ಮುಂಬಯಿಯ ಪಶ್ಚಿಮ ಉಪನಗರಗಳನ್ನು ವರ್ಲಿ ಮತ್ತು ಮಧ್ಯ ಮುಂಬಯಿಯೊಂದಿಗೆ ಸಂಪರ್ಕಿಸುತ್ತದೆ. ಇದು ಉದ್ದೇಶಿತ 'ಪಶ್ಚಿಮ ದ್ವೀಪ ಮುಕ್ತ ಮಾರ್ಗ ವ್ಯವಸ್ಥೆ'ಯ ಪ್ರಥಮ ಹಂತವಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆ (MSRDC)ಯ ರೂ. 1600 ಕೋಟಿ (ಸುಮಾರು $ 400 ಮಿಲಿಯನ್) ವೆಚ್ಚದ ಈ ಯೋಜನೆಯನ್ನು ಹಿಂದೂಸ್ಥಾನ್ ಕನ್ಸ್‌ಟ್ರಕ್ಷನ್‌ ಕಂಪೆನಿ ಕಾರ್ಯಗತಗೊಳಿಸುತ್ತಿದೆ. ವಿನ್ಯಾಸ ಮತ್ತು ಯೋಜನೆಯ ನಿರ್ವಹಣೆಯನ್ನು ಮೆಸರ್ಸ್ DAR ಕನ್ಸಲ್ಟೆಂಟ್ಸ್‌ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಂದ 30 ಜೂನ್‌ 2009 (ಮುಂದೂಡಿದ್ದರಿಂದ ವಾಸ್ತವವಾಗಿ 1 ಜುಲೈ 2009) ರಂದು ಸೇತುವೆಯ ಉದ್ಘಾಟನೆಯಾಯಿತು. ಈ ಸಮುದ್ರ ಸಂಪರ್ಕವು ಬಾಂದ್ರಾ ಮತ್ತು ವರ್ಲಿ ನಡುವಿನ ಪ್ರಯಾಣವನ್ನು ಕ್ಷಿಪ್ರಗೊಳಿಸಿ, 45-60 ನಿಮಿಷಗಳ ಪ್ರಯಾಣವನ್ನು 15 ನಿಮಿಷಗಳಿಗೆ ಇಳಿಸಲಿದೆ.[೧]

ಅವಲೋಕನ[ಬದಲಾಯಿಸಿ]

ಪ್ರಸ್ತುತ ಕೇವಲ ಮಾಹಿಂ ಸೇತುವೆಯು, ಪಶ್ಚಿಮ ಉಪನಗರಗಳನ್ನು ದ್ವೀಪ ನಗರಿ ಮುಂಬಯಿಯೊಂದಿಗೆ ಸಂಪರ್ಕಿಸುವ ಏಕೈಕ ಸಂಪರ್ಕ ಸೇತುವೆಯಾಗಿದೆ. ಈಗಿರುವ ಉತ್ತರ – ನೈಋತ್ಯ ಕಿರುದಾರಿಯು ವಿಪರೀತ ಜನದಟ್ಟಣೆಯಿಂದ ಕೂಡಿದ್ದು, ಗರಿಷ್ಠ ವಾಹನದಟ್ಟಣೆಯ ಸಮಯದಲ್ಲಿ ಮಾಹಿಂ ಸೇತುವೆಯ ಬಳಿ ವಿಪರೀತ ಅಡಚಣೆಯನ್ನುಂಟು ಮಾಡುತ್ತದೆ. ಈ ಸಮುದ್ರ ಸಂಪರ್ಕವು ಮುಂಬಯಿಯ ಪಶ್ಚಿಮ ಉಪನಗರಗಳು ಹಾಗೂ ಮಧ್ಯ ಮುಂಬಯಿಯ ನಡುವೆ, ಪ್ರಸ್ತುತ ಬಳಕೆಯಲ್ಲಿರುವ ಮಾಹಿಂ ಸೇತುವೆಯ ಜೊತೆಗೆ ಪರ್ಯಾಯ ಮಾರ್ಗವಾಗಿ ಬಳಕೆಯಾಗಲಿದೆ. ಮುಂದೆ ಈ ಸಂಪರ್ಕವು ಪಶ್ಚಿಮ ದ್ವೀಪ ಮುಕ್ತ ಮಾರ್ಗದ ಭಾಗವಾಗಲಿದೆ.

ಸೇತುವೆಯ ಪ್ರವೇಶ ನಿಯಂತ್ರಣವನ್ನು ವರ್ಲಿ ಭಾಗದ ಖಾನ್‌ ಅಬ್ದುಲ್ ಗಫಾರ್‌ ಖಾನ್‌ ರಸ್ತೆ ಯಲ್ಲಿರುವ, ಹಾಗೂ ಬಾಂದ್ರಾ ವಿಭಾಗದ ಲವ್‌ ಗ್ರೋವ್‌ ಜಂಕ್ಷನ್‌ನಲ್ಲಿನ ಸುಂಕದ ಕಚೇರಿಗಳಲ್ಲಿ ಮಾಡಲಾಗುವುದು.

ಪ್ರತಿದಿನ ಸುಮಾರು 120,000 PCU ಮಾನಕದಷ್ಟು ವಾಹನ ದಟ್ಟಣೆಯಾಗುವ ಮಟ್ಟಿಗೆ ಮಾಹಿಂ ಸೇತುವೆಯ ಬಳಿ ವಾಹನಗಳು ಸಂಚರಿಸುತ್ತವೆ ಹಾಗೂ ಗರಿಷ್ಠ ಸಂಚಾರದಟ್ಟಣೆಯ ಅವಧಿಯಲ್ಲಿ ಮಾಹಿಂನಿಂದ ವರ್ಲಿಯವರೆಗಿನ 8 ಕಿ.ಮೀ ದೂರ ಪಯಣಿಸಲು ಸುಮಾರು ನಲವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

MSRDCಯು ಬಾಂದ್ರಾ ವರ್ಲಿ ಸಮುದ್ರ-ಸಂಪರ್ಕ – ಪ್ಯಾಕೇಜ್‌ - IVನ್ನು ನಿರ್ಮಿಸುವ ಒಡಂಬಡಿಕೆಯನ್ನು, ಈಗಾಗಲೇ ಇಂತಹಾ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿಂದೂಸ್ಥಾನ್ ಕನ್ಸ್‌ಟ್ರಕ್ಷನ್‌ ಕಂಪೆನಿ, ಹಾಗೂ ಅದರ ವಿದೇಶಿ ಪಾಲುದಾರ, ಚೀನಾ ಹಾರ್ಬರ್ ಎಂಜಿನಿಯರಿಂಗ್‌ ಕಾರ್ಪೋರೇಷನ್‌ಗಳೊಂದಿಗೆ ಮಾಡಿಕೊಂಡಿದೆ. ಐದು ವರ್ಷಗಳ ಅವಧಿಗೆ ಹಾನಿ ಸರಿಪಡಿಸುವ ಹೊಣೆಗಾರಿಕೆಯನ್ನು ಹೊಂದಿರುವ HCCಗೆ ಸೇತುವೆಯ ನಿರ್ವಹಣೆಯ ಜವಾಬ್ದಾರಿಯೂ ಇದೆ.

ಮೂಲ ಯೋಜನೆಯನ್ನು ಬದಲಿಸಿ ಎರಡು ಪ್ರತ್ಯೇಕ ಗೋಪುರಗಳನ್ನು ಮುಖ್ಯ ಸರಪಣಿ ಆಧಾರದ ಸೇತುವೆಗೆ ಅಳವಡಿಸಲಾಗಿತ್ತು. ಇದರೊಂದಿಗೆ, ವರ್ಲಿ ಕೋಳಿವಾಡದ ಸ್ಥಳೀಯ ಮೀನುಗಾರರ ಆಗ್ರಹದ ಮೇರೆಗೆ ಅವರ ವಸತಿಯ ಹತ್ತಿರವಿರುವ ಸೇತುವೆಯ ಕೆಳಭಾಗದಲ್ಲಿ ದೋಣಿಗಳ ಸಂಚಾರವನ್ನು ಸುಲಲಿತಗೊಳಿಸಲು ಸೇತುವೆಯ ಎತ್ತರವನ್ನು ಹೆಚ್ಚಿಸಲೆಂದು, ವರ್ಲಿ ಭಾಗದಲ್ಲಿ ಸೇತುವೆಯನ್ನು ಸಮುದ್ರದೊಳಗೆ 150 ಮೀಟರ್‌ಗಳಷ್ಟು ಮರುಜೋಡಣೆ ಮಾಡಿ, ಹೊಸದಾಗಿ ಸರಪಣಿ ಆಧರಿತ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಕಾರ್ಯ ವ್ಯಾಪ್ತಿಯಲ್ಲಿ ಆದ ಬದಲಾವಣೆಗಳಿಂದ ಪ್ರಾಥಮಿಕ ಹಂತಗಳಲ್ಲಿ ತಡವಾದ ಕಾರಣ, ಯೋಜನಾ ವೆಚ್ಚವೂ ಏರಿಕೆ ಕಂಡಿತು. 30 ಜೂನ್‌ 2009ರ ಮಧ್ಯರಾತ್ರಿ 12:00ಕ್ಕೆ ಬಾಂದ್ರಾ ವರ್ಲಿ ಸಮುದ್ರ-ಸಂಪರ್ಕವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಬಾಂದ್ರಾ ವರ್ಲಿ ಸಮುದ್ರ ಸಂಪರ್ಕ(BWSL)ದ ಭಾಗವಾದ ಬಾಂದ್ರಾ ಸರಪಣಿ ಆಧರಿತ ಸೇತುವೆಯನ್ನು ಮೇ 27, 2008ರಂದು ಸಂಪರ್ಕದ ಇತರ ಎಲ್ಲೆಗಳಿಗೆ ಸಂಪರ್ಕಿಸಲಾಯಿತು. HCCಯು ಈ ಸಮುದ್ರ ಸಂಪರ್ಕ ನಿರ್ಮಾಣವನ್ನು ಮುಂಬಯಿಯ ಈ ಋತುವಿನಲ್ಲಿ, ಮಾನ್ಸೂನ್‌ ಹಾವಳಿಗೆ ಮುನ್ನವೇ ಪೂರ್ಣಗೊಳಿಸಿದ್ದು ಒಂದು ಗಮನಾರ್ಹ ಮೈಲುಗಲ್ಲಾಗಿದೆ.

BWSLನ ಬಾಂದ್ರಾ ಸರಪಣಿ ಆಧರಿತ ಭಾಗವು 600 ಮೀ. ಉದ್ದವಿದ್ದು, ಇದರ ಗೋಪುರಗಳು 126 ಮೀ.(ಸುಮಾರು 43 ಮಹಡಿ ಕಟ್ಟಡದಷ್ಟು) ಎತ್ತರವಿವೆ. ಸರಪಣಿ ಆಧಾರಿತ ವ್ಯವಸ್ಥೆಯು 2,250 ಕಿ.ಮೀ ಉದ್ದದ ಶಕ್ತಿಶಾಲಿಯಾದ, ಕಲಾಯಿ ಮಾಡಿದ ಉಕ್ಕಿನ ತಂತಿಗಳಿಂದ ಕೂಡಿದ್ದು ಇವು 20,000 ಟನ್‌ ಭಾರದ ಸರಪಣಿ ಆಧರಿತ ಸೇತುವೆಗೆ ಆಧಾರವಾಗಿರುತ್ತದೆ. ಎಂಜಿನಿಯರಿಂಗ್ ವಿಸ್ಮಯವೆನಿಸಿರುವ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕವು ಈ ಮಾದರಿಯ ಪ್ರಪ್ರಥಮ ಮುಕ್ತ ಸಮುದ್ರ ಸೇತುವೆಯಾಗಿದ್ದು, ಬಹುತೇಕ ಸಂಕೀರ್ಣ ಮತ್ತು ಉನ್ನತ ತಂತ್ರಜ್ಞಾನವನ್ನು ಬಳಸಿದ ಭಾರತದ ನಿರ್ಮಾಣ ಯೋಜನೆಗಳಲ್ಲಿ ಒಂದಾಗಿದೆ.

10 ವರ್ಷಗಳ ಹಿಂದೆಯೇ ಈ ಯೋಜನೆಗೆ ಚಾಲನೆ ನೀಡಿದ್ದರೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಂದಾಗಿ ತಡವಾಗಿತ್ತು. 1999ರಲ್ಲಿ ಶಿವ ಸೇನಾ ಮುಖಂಡ ಬಾಳಾಸಾಹೇಬ್‌ ಠಾಕ್ರೆಯವರು ಈ ಯೋಜನೆಗೆ ಅಡಿಪಾಯ ಹಾಕಿದರು.

UPA ಮತ್ತು INC ಅಧ್ಯಕ್ಷೆಯಾದ ಸೋನಿಯಾ ಗಾಂಧಿಯವರು, NCP ಅಧ್ಯಕ್ಷ ಶರದ್‌ ಪವಾರ್‌ರ ಉಪಸ್ಥಿತಿಯಲ್ಲಿ ಜೂನ್‌ 30, 2009 [೨] ರ ಮಂಗಳವಾರದಂದು ಸಮುದ್ರ ಸಂಪರ್ಕವನ್ನು ಉದ್ಘಾಟಿಸಿದರು.

ಸವಾಲುಗಳು[ಬದಲಾಯಿಸಿ]

 1. ಜನವಸತಿಯ ಪ್ರದೇಶದ ಟಿ-ಜಂಕ್ಷನ್‌ನಲ್ಲಿ ಒಂದು ಟ್ರಾಫಿಕ್‌ ಸಿಗ್ನಲ್‌ ಅಳವಡಿಸಬೇಕಾದ ಕಾರಣ, ಸೇತುವೆಯ ಮುಕ್ತಾಯದ ನಂತರ ಯಾವುದೇ ಸಂಚಾರ ದಟ್ಟಣೆ ನಿರ್ವಹಣಾ ವ್ಯವಸ್ಥೆಯಿಲ್ಲ. ಇಷ್ಟಲ್ಲದೇ, ವಾಹನಗಳು ಸೇತುವೆಯಿಂದಿಳಿದ ನಂತರ 6 ಸಾಲಿನ ರಸ್ತೆಗೆ ಸಾಗಿದರೂ, ಈ ರಸ್ತೆಯಲ್ಲಿರುವ ಅನೇಕ ಕಟ್ಟಡಗಳಿಗೆ ಕಾರು ನಿಲುಗಡೆಗೆ ಸ್ಥಳವಿಲ್ಲದ ಕಾರಣ ಎರಡು ಸಾಲುಗಳು ಕಾರುಗಳ ನಿಲ್ದಾಣಕ್ಕೆ ಮೀಸಲಾಗಿವೆ.
 2. ಬೆಳಿಗ್ಗೆ 8 ಗಂಟೆಗೆ ಹಾಗೂ 11 ಗಂಟೆಗೆ (ಅಂದರೆ ವಿಪರೀತ ಸಂಚಾರ ದಟ್ಟಣೆಯ ಸಮಯದಲ್ಲಿ) ಮಕ್ಕಳು ಓಡಾಡುವ ಶಾಲೆಯೊಂದರ ಮುಂದೆ ಸೇತುವೆಯ ಪ್ರವೇಶ ದ್ವಾರ ಬಂದಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
 3. ವರ್ಲಿಯ ಸಮುದ್ರಾಭಿಮುಖ ರಸ್ತೆಯಲ್ಲಿ ಸೇತುವೆಯ ತುದಿಗೆ ಕೇವಲ 100 ಮೀಟರ್ ಅಂತರದಲ್ಲಿ ಒಂದು ಪಾರ್ಟಿ ಹಾಲ್‌ ಇದ್ದು, ಆ ಕಟ್ಟಡಕ್ಕೆ ಕನಿಷ್ಟ ನೆಲದಡಿಯ ಕಾರು ನಿಲುಗಡೆ ವ್ಯವಸ್ಥೆಯಿಲ್ಲದಿರುವುದರಿಂದ ಸಂಚಾರ ದಟ್ಟಣೆಯು ಮುಖ್ಯ ರಸ್ತೆಯ ಕಡೆಗೆ ಕೇಂದ್ರಿತವಾಗಿ ಮಧ್ಯಾಹ್ನ ಊಟದ ಹೊತ್ತಿನಲ್ಲಿ ಹಾಗೂ ರಾತ್ರಿ 7 ಗಂಟೆಯ ನಂತರ ಕೇವಲ ಎರಡು ಸಾಲುಗಳಲ್ಲಿ ಮಾತ್ರವೇ ವಾಹನಗಳು ಚಲಿಸಬಹುದು.
 4. ವರ್ಲಿ ಸಮುದ್ರಾಭಿಮುಖ ರಸ್ತೆಯು, ಮೂಲತಃ ಹಿಂದಿನ ಯೋಜನೆಯ ಪ್ರಕಾರ ಸಂಚಾರ ದಟ್ಟಣೆ ಕಡಿಮೆ ಮಾಡಲು ನಿರ್ಮಿಸಿದ ಮೇಲು ಹಾದಿಯಿರುವ ರಸ್ತೆಯೊಂದನ್ನು ಸಹಾ ಸಂಪರ್ಕಿಸಿದ್ದು, ಆದ ಕಾರಣ ಈಗ ಕಾರುಗಳು ಮೇಲು ಹಾದಿಯ ಕೆಳಗೆ ಕೇವಲ ನಾಲ್ಕು ಸಾಲುಗಳಿರುವ ರಸ್ತೆಯಲ್ಲಿ ಸಾಗಬೇಕಿದೆ. ಇಷ್ಟಲ್ಲದೇ ಈ ರಸ್ತೆಯ ಒಂದು ಬದಿಯಲ್ಲಿ ದೇವಸ್ಥಾನ (ಮಾರ್ಕಂಡೇಶ್ವರ ಮಂದಿರ) ಇದ್ದರೆ ಇನ್ನೊಂದು ಬದಿಯಲ್ಲಿ ವ್ಯಾಪಾರ ಮಳಿಗೆಯಿದೆ(ಏಟ್ರಿಯಾ ಶಾಪಿಂಗ್ ಮಾಲ್‌). ಹೀಗಾಗಿ ಸುಲಲಿತವಾದ ಸಂಚಾರ ದಟ್ಟಣೆ ಎಂಬುದು ಇಲ್ಲಿ ನಿಜವಾಗಿ ಕಾರ್ಯರೂಪಕ್ಕೆ ಬಂದಿಲ್ಲ.
 5. ಸದ್ಯದಲ್ಲಿ ಈ ಸೇತುವೆಯನ್ನು ಉಪಯೋಗಿಸಲು ವಿಧಿಸುವ ಸುಂಕ ನಾಲ್ಕು ಚಕ್ರದ ವಾಹನಗಳಿಗೆ ಪ್ರತಿ ಏಕಮುಖ ಪ್ರಯಾಣಕ್ಕೆ ಸುಮಾರು ರೂ.50 (~$1) ಇರಲಿದ್ದು, ಯಾವುದೇ ರೀತಿಯ ತಿಂಗಳ ಪಾಸುಗಳನ್ನು ಕೊಡಲಾಗುವುದಿಲ್ಲ. ಈ ಸುಂಕವು ಯುಕ್ತವಾದದ್ದಾಗಿದೆ; ಸರಿ ಸುಮಾರು ಮುಂಬಯಿಯ ಅಗ್ಗದ ಊಟದ ಬೆಲೆಯಷ್ಟಿದೆ. ಆದರೆ ಟ್ಯಾಕ್ಸಿಗಳಿಗಾಗಲಿ ಅಥವಾ ಬಸ್‌ಗಳಿಗಾಗಲಿ ಯಾವುದೇ ಸುಂಕ ವಿನಾಯಿತಿಗಳಿರುವುದಿಲ್ಲ.
 6. ಯೋಜನೆಯಲ್ಲಾಗುತ್ತಿದ್ದ ನಿರಂತರ ಬದಲಾವಣೆಗಳಿಂದ ಹಾಗೂ ಇನ್ನಿತರ ಅಡಚಣೆಗಳಿಂದ ಸೇತುವೆಯ ನಿರ್ಮಾಣ ವೆಚ್ಚ ರೂ. 300 ಕೋಟಿಯಿಂದ ರೂ. 1800 ಕೋಟಿಯಷ್ಟು ಅಂದರೆ 6 ಪಟ್ಟು ಹೆಚ್ಚಾಗಿದೆ. ಈ ವೆಚ್ಚವನ್ನು ಮರಳಿ ಪಡೆಯಲು ತಗಲುವ ಸಮಯ ಕನಿಷ್ಟ 10 ವರ್ಷಗಳಾದರೂ ಆದೀತು, ಆದರೆ ಈ ಪ್ರಮಾಣದ ಮೂಲಭೂತ ವ್ಯವಸ್ಥೆಯ ಯೋಜನೆಗಳಿಗೆ ಇದು ಸಹಜ.

ಯೋಜನೆಯ ಸ್ಥಳ[ಬದಲಾಯಿಸಿ]

ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ನೀಲಿಯಲ್ಲಿ
 • ಈ ಯೋಜನೆಯು ಮಾಹಿಂನಲ್ಲಿನ ಪರ್ಯಾಯ ಜೋಡಿ ರಸ್ತೆ (ಅಂದರೆ ವೆಸ್ಟರ್ನ್ ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ಬಾಂದ್ರಾದಲ್ಲಿನ ಸ್ವಾಮಿ ವಿವೇಕಾನಂದ ರಸ್ತೆಗಳ ಛೇದಕ ರಸ್ತೆ)ಯಿಂದ ಆರಂಭವಾಗಿ ವರ್ಲಿ ವಿಭಾಗದಲ್ಲಿ ವರ್ಲಿಯನ್ನು ಸಂಪರ್ಕಿಸುವುದರೊಂದಿಗೆ ಪೂರ್ಣ ಯೋಜನೆಯು 5.6 ಕಿ.ಮೀ ಉದ್ದವಿದೆ.
 • ಮಾಹಿಂ ಛೇದಕ ರಸ್ತೆಯಲ್ಲಿ ಎಡ ತಿರುವುಗಳ ಅಗತ್ಯವಿಲ್ಲದ ಎದುರು-ಬದುರು ರಸ್ತೆಯೊಂದನ್ನು ಹಾಗೂ ಲವ್‌ಗ್ರೋವ್‌ ಛೇದಕ ರಸ್ತೆಯ ಬಳಿ ಫ್ಲೈಓವರ್‌ ಒಂದನ್ನು ಈ ಯೋಜನೆಯ ಅಂಗವಾಗಿ ಸುರಕ್ಷಿತ ಹಾಗೂ ಸಂಚಾರ ದಟ್ಟಣೆಯ ಕ್ಷಿಪ್ರ ನಿವಾರಣೆಗಾಗಿ ಪ್ರಸ್ತಾಪಿಸಲಾಗಿದೆ.

ಅಂಕಿ ಅಂಶಗಳು[ಬದಲಾಯಿಸಿ]

 • ಈ ಮಾದರಿಯ ಮುಂಬಯಿಯ ಏಕೈಕ ಅಭೂತಪೂರ್ವ ಯೋಜನೆ.
 • ರೂ.1650 ಕೋಟಿಗಳ ಯೋಜನಾ ವೆಚ್ಚ [ರೂ.16.50 ಬಿಲಿಯನ್ INR](ಸುಮಾರು $330 ಮಿಲಿಯನ್).
 • 9 ಕೋಟಿ ರೂ.ಗಳು ಕೇವಲ ಸೇತುವೆಯ ದೀಪಾಲಂಕಾರಕ್ಕಾಗಿ ವೆಚ್ಚವಾಗಲಿದೆ.
 • ಸುಮಾರು 38000 KM ಉದ್ದದ ಉಕ್ಕಿನ ಹಗ್ಗಗಳು, 575000 ಟನ್ನುಗಳಷ್ಟು ಕಾಂಕ್ರೀಟ್‌ ಬಳಸಿ, 6000 ಮಂದಿ ಕೆಲಸಗಾರರು ಇದನ್ನು ಕಟ್ಟಿದ್ದಾರೆ.
 • ಸುಂಕದ ವೆಚ್ಚವನ್ನು ಸುಮಾರು Rs.40 ರಿಂದ Rs.50 /- ಆಗಬಹುದು ಎಂದು ಅಂದಾಜಿಸಲಾಗಿದೆ
 • ಸುಮಾರು 1 ಗಂಟೆಯಷ್ಟು ಸಂಚಾರ ಸಮಯವನ್ನು ಮತ್ತು 100 ಕೋಟಿಗಳಷ್ಟು 7 KM ದೂರದ ವಾಹನ ಬಳಕೆಯ ವೆಚ್ಚವನ್ನು ಈ ಸಂಪರ್ಕ ಉಳಿಸುತ್ತದೆ.
 • ಸೇತುವೆಯ ಅಂದಾಜು ಬಳಕೆ 125000 ವಾಹನಗಳು ಪ್ರತಿದಿನ.[೩]
 • ಮತ್ತು ಇದನ್ನು ರಾಜೀವ್‌ ಗಾಂಧಿ ಸೇತುವೆ ಎಂದು ಹೆಸರಿಸಲಾಗಿದೆ.

ವೈಶಿಷ್ಟ್ಯಗಳು[ಬದಲಾಯಿಸಿ]

 • ಇದು 2 ಪಥಗಳನ್ನು ಬಸ್‌ಗಳಿಗೆಂದೇ ಮೀಸಲಿರಿಸಿದ 8-ಪಥದ ಸೇತುವೆಯಾಗಿದೆ.
 • ಸಂಪರ್ಕ ಸೇತುವೆಯೊಂದನ್ನು ಮಹಾನಗರದ ಹೆಗ್ಗುರುತಾಗಿ ಹೊರಹೊಮ್ಮಿಸಿರುವ ಏಕೈಕ ಸೇತುವೆ ವಿನ್ಯಾಸವಾಗಿದೆ.
 • ಈ ಸಂಪರ್ಕವು ಕೇವಲ ಒಂದು ಗೋಪುರದ ಆಧಾರ ಹೊಂದಿದ ಬಾಂದ್ರಾ ಕಾಲುವೆಯ ಬಳಿ ಇರುವ 500 ಮೀಟರ್ ಉದ್ದದ ಸರಪಣಿ ಆಧರಿತ ಸೇತುವೆ ಮತ್ತು ವರ್ಲಿ ಕಾಲುವೆಯ ಬಳಿ ಪ್ರತಿ ಪಥದಲ್ಲೂ ಜೋಡಿ ಗೋಪುರ ಆಧಾರದ 350 ಮೀ ಉದ್ದದ ಸರಪಣಿ ಆಧರಿತ ಸೇತುವೆ ಹೊಂದಿದೆ.
 • 16 ಪಥದ ಸ್ವಯಂಚಾಲಿತ ಸುಂಕ ಸಂಗ್ರಹಣಾ ವ್ಯವಸ್ಥೆ ಹೊಂದಿದ ಆಧುನಿಕ ಕಚೇರಿ.
 • ಇದು ವಾಹನ ದಟ್ಟಣೆ ಮೇಲ್ವಿಚಾರಣೆ, ಕಣ್ಗಾವಲು, ಮಾಹಿತಿ ಮತ್ತು ಮಾರ್ಗದರ್ಶನ, ಸಾಧನ ಸಂಚಯ ಮತ್ತು ತುರ್ತು ಪರಿಸ್ಥಿತಿ ಬೆಂಬಲ ಸೇರಿದಂತೆ ಎಲ್ಲಾ ಅಗತ್ಯಗಳನ್ನು ನಿರ್ವಹಿಸಬಲ್ಲ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಜಾಣ್ಮೆಯ ಸೇತುವೆಯಾಗಿದೆ.
 • ವಿಹಾರ ಪಥ ಮತ್ತು ಉದ್ಯಾನ ನಿರ್ಮಾಣ ಅಭಿವೃದ್ಧಿಯಿಂದ ಉದ್ದೇಶಿತ ಪರಿಸರದ ಬೆಳೆಸುವಿಕೆಗೆ ಯತ್ನ.

ಯೋಜನೆಯ ಲಾಭಗಳು / ಇತರೆ ವೈಶಿಷ್ಟ್ಯಗಳು[ಬದಲಾಯಿಸಿ]

 • ವಾಹನ ಬಳಕೆಯ ವೆಚ್ಚದ ಅಂದಾಜು ಉಳಿಕೆ (VOC): ಪ್ರತಿ ವರ್ಷ 100 ಕೋಟಿ [ಸಾಕ್ಷ್ಯಾಧಾರ ಬೇಕಾಗಿದೆ] ರೂಗಳು.
 • ಈ ಸಮುದ್ರ ಸಂಪರ್ಕ ಮುಂಬಯಿಗೆ ಒಂದು ಹೊಸ ಹೆಗ್ಗುರುತಾಗಿದೆ.

ಟೀಕೆಗಳು[ಬದಲಾಯಿಸಿ]

ಬಾಂದ್ರಾ-ವರ್ಲಿ ಸಂಪರ್ಕವು ಕೇವಲ ಒಂದು ಸಣ್ಣ ಪಟ್ಟಿಯಾಗಿದ್ದು ಎರಡು ದಶಕಗಳ ಹಿಂದೆ ರೂಪಿಸಿದ ಹಾಗೆ ಪಶ್ಚಿಮ ತೀರವನ್ನು ಸಹಾ ಪೂರ್ಣವಾಗಿ ವ್ಯಾಪಿಸಿಲ್ಲ. ವಿನ್ಯಾಸ ಬದಲಾವಣೆಗಳು ಹಾಗೂ ಪಾವತಿಗಳ ಮೇಲಿನ ತಕರಾರುಗಳಿಂದ ಯೋಜನೆ ವಿಳಂಬವಾಗಿ ಪೂರ್ಣಗೊಂಡಿತು. ಬಂದರಿನ ಆಚೆಗಿರುವ ಸಮುದ್ರಚಾಚು(ಪುಟ್ಟ ಬಂದರು)ವಿಗೆ ಕಟ್ಟುವ ಸೇತುವೆಗೆ ಎರಡು ಬಾರಿ ಹರಾಜು ಹಾಕಿದ್ದರೂ ಇದುವರೆಗೂ ಅದನ್ನು ಯಾರಿಗೂ[೪] ಆದೇಶ ನೀಡಿಲ್ಲ.

ಹೆಸರಿನ ಬಗ್ಗೆ ಟೀಕೆಗಳು[ಬದಲಾಯಿಸಿ]

ಈ ಸೇತುವೆಗೆ ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಹೆಸರನ್ನಿಡಲಾಗಿದ್ದು, ಅದನ್ನು ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಶಿವಸೇನೆ-ಬಿಜೆಪಿಗಳು ಸೇತುವೆಗೆ ವೀರ ಸಾವರ್ಕರ್‌[೫] ರ ಹೆಸರಿಡಬೇಕೆಂದು ಹೇಳಿವೆ. ಉದ್ಧವ್‌ ಠಾಕ್ರೆಯವರು ಸೇತುವೆಗೆ ಬಿ.ಆರ್‌. ಅಂಬೇಡ್ಕರ್ ಅಥವಾ ಹುತಾತ್ಮ ಬಾಬು ಗೇನು ರವರ ಹೆಸರಿಡಬಹುದೆಂದು ಹೇಳಿದ್ದಾರೆ.

ಆಕರಗಳು[ಬದಲಾಯಿಸಿ]

 1. ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಹಾಜಿ ಅಲಿಯವರೆಗೆ ವಿಸ್ತರಿಸಲಾಗಿದೆ
 2. ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಮಧ್ಯರಾತ್ರಿಯಲ್ಲಿ ಸಂಚಾರಕ್ಕೆ ತೆರವು
 3. http://business.rediff.com/slide-show/2009/jun/26/slide-show-2-fun-facts-about-the-bandra-worli-sea-link.htm
 4. "Bandra Worli Sea Link: Hi-tech incompetence". Economic Times. Retrieved 2009-07-01. {{cite web}}: Italic or bold markup not allowed in: |publisher= (help)
 5. http://www.rediff.com/news/report/2009/jul/01/drama-over-bandra-worli-sea-link.htm

ಹೊರಗಿನ ಕೊಂಡಿಗಳು[ಬದಲಾಯಿಸಿ]