ಪೂರ್ವ ರಾಜನೊಣಹಿಡುಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೂರ್ವ ರಾಜನೊಣಹಿಡುಕ
Tyrannus-tyrannus-001.jpg
ವಯಸ್ಕ ಪಕ್ಷಿ'
Conservation status
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Animalia
ವಂಶ: Chordata
ವರ್ಗ: Aves
ಗಣ: Passeriformes
ಕುಟುಂಬ: Tyrannidae
ಕುಲ: Tyrannus
ಪ್ರಭೇದ: T. tyrannus
ದ್ವಿಪದ ಹೆಸರು
Tyrannus tyrannus
(Linnaeus, 1758)
KönigstyrannWorld.png
ಸಂತಾನ ಅಭಿವೃದ್ಧಿ ಸಮಯದ ವ್ಯಾಪ್ತಿ (ಘಾಡ ಹಸಿರು ) ಮತ್ತು ಚಳಿಗಾಲದ ವಲಸೆ (ಘಾಡ ಬೂದಿ )


ಪೂರ್ವ ರಾಜನೊಣಹಿಡುಕ (Eastern Kingbird), [ವೈಜ್ಞಾನಿಕ ಹೆಸರು: ಟೈರೆನಸ್ ಟೈರೆನಸ್ (Tyrannus tyrannus)] ಉತ್ತರ ಹಾಗು ದಕ್ಷಿಣ ಅಮೆರಿಕ ಖಂಡಗಳಲ್ಲಿನ ಮೈನಾ ಗಾತ್ರದ, ಟೈರೆಂಟ್ ಫ್ಲೈ - ಕ್ಯಾಚರ್ (tyrant flycatcher) ವಂಶದ, ಕೀಟಭಕ್ಷಕ ಪಕ್ಷಿ. ಮೈಯ್ಯ ಮೇಲ್ಭಾಗದ ಬಣ್ಣ ಘಾಡ ಬೂದಿ ಮತ್ತು ಕೆಳ ಮೈಯ್ಯ ಬಣ್ಣ ಉಜ್ವಲ ಬಿಳಿಯಿಂದ ಕೂಡಿದೆ. ಬಾಲ ಉದ್ದ ಮತ್ತು ಕರಿ ಬಣ್ಣದಾಗಿದ್ದು ಅದರ ತುದಿ ಬಿಳಿಯಾಗಿರುತ್ತದೆ. ನೆತ್ತಿಯ ಮೇಲೆ ಸಿಂಧೂರದಂತೆ ಕೆಂಪು ಕಿರು ಪಟ್ಟೆ [೨], ಮತ್ತು ಒಮ್ಮುಖದ ರೆಕ್ಕೆಗಳು ಇದರ ಮೇಲ್ಮೈ ಸ್ವರೂಪ. ದೊಡ್ಡ ತಲೆ, ವಿಶಾಲ ಭುಜದ ಈ ಹಕ್ಕಿ ಹೆಸರಿಗೆ ತಕ್ಕಂತೆ ತನ್ನ ರಾಜ್ಯವನ್ನು ಆಕ್ರಮಿಗಳಿಂದ ರಕ್ಷಿಸುತ್ತದೆ. ತನಗಿಂತ ದೊಡ್ಡ ಪಕ್ಷಿಗಳಾದ ಕೆಂಪು-ಬಾಲದ ಗಿಡುಗ, ಕಾಗೆ, ದೊಡ್ಡ ನೀಲಿ ಬಕ, ಅಳಿಲು ಮತ್ತು ಅನ್ಯ ಪ್ರಾಣಿ-ಪಕ್ಷಿಗಳನ್ನು ಎದುರಿಸಿ, ದರ್ಪದಿಂದ ಹಿಯಾಳಿಸಿ, ಅಟ್ಟುತವೆ. ತಂತಿಗಳ ಮೇಲೆ ಕೂತಿದ್ದು, ಸುಳಿವೀಯದೇ ಹಾರಿ ಕೇಟಗಳನ್ನು ಹಿಡಿದು ತಂದು ತಿನ್ನುವ ಇವು ಚಳಿ ಗಾಲದಲ್ಲಿ ಖಂಡದ ನಿತ್ಯ-ಹರಿದ್ವರ್ಣ ಕಾಡುಗಳಿಗೆ ವಲಸೆ ಹೋದಾಗ ಫಲಾಹಾರಿಗಳಾಗುತ್ತವೆ.

ವಿವರ[ಬದಲಾಯಿಸಿ]

ಪೂರ್ವ ರಾಜನೊಣಹಿಡುಕ ಸಾಧಾರಣ ಘಾತ್ರವಿದ್ದು, ಕೊಕ್ಕಿನಿಂದ ಬಾಲದವರೆಗಿನ ಅಳತೆ 19–23 cm (7.5–9 in), ಹರಡಿದ ರೆಕ್ಕೆಗಳ ಒಟ್ಟು ಅಳತೆ 33–38 cm (13–15 in), ತೂಕ 33-55 g (1.2-1.9 ಔನ್ಸ್).[೩] ಇವುಗಳ ಕರೆ ಉಚ್ಛ ಕಂಠದ ಚಿಲಿಪಿಲಿ, ಗೂಂಗುಟ್ಟುವಿಕೆ, ವಿದ್ಯುತ್ ಬೇಲಿ-ತಂತಿಯ ಕಂಪನಕ್ಕೆ ಹೋಲುವ ಕೂಗು ಗಾನರಹಿತವಾಗಿರುತ್ತದೆ. [೪] ತನ್ನ ಪ್ರದೇಶಕ್ಕೆ ಪ್ರವೇಶಿಸಿದ ಪ್ರಾಣಿ, ಪಕ್ಷಿಗಳು ತನಗಿಂತಲೂ ದೊಡ್ಡದು ಹಾಗು ಬಲಶಾಲಿಯಾದರೂ ಆಪತ್ತನ್ನು ಗ್ರಹಿಸುತ್ತಲೇ ಪೂರ್ವ-ರಾಜನೊಣಹಿಡುಕ ಕೊಕ್ಕನ್ನು ತೆರೆದು ಒಳಬಾಯಿಯ ಕೆಂಬಣ್ಣವನ್ನು ಪ್ರದರ್ಶಿಸುತ್ತದೆ. ಮೇಲಿಂದ ಬಂದು ಕುಕ್ಕಿ ಆಪತ್ತನ್ನು ಅಟ್ಟುವ ಛಲ ಇವುಗಳದ್ದು. ಇವು ಕಪ್ಪೆಗಳನ್ನು ಅಥವಾ ಹಸಿರು ಮಿಡತೆಯಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿದಾಗ ಅವುಗಳನ್ನು ಕಲ್ಲು ಇಲ್ಲವೇ ರೆಂಬೆಗಳಿಗೆ ಹೊಡೆಹೊಡೆದು ಅವುಗಳ ಮೂಳೆ ಇಲ್ಲವೇ ಮೈ ಕವಚವನ್ನು ಮುರಿದು ನುಂಗುತ್ತವೆ. ತಮ್ಮ ದೇಹಕ್ಕೆ ಬೇಕಾದ ನೀರನ್ನು ಪೂರ್ತಿಯಾಗಿ ಕೀಟ ಮತ್ತು ಫಲಾಹಾರದಿಂದಲೇ ಪಡೆದುಕೊಳ್ಳುತ್ತವೆ. ಇವುಗಳು ನೀರುಕುಡಿಯುವುದು ಅತಿ ವಿರಳ. [೫] [೬] ರಾಜ ಪಕ್ಷಿ “ಪಸೆರಿನೆಸ್” ಅಂದರೆ ರೆಂಬೆಗಳನ್ನು ಹಿಡಿದು ಕೂರುವುದಕ್ಕೆ ಅನುಕೂಲವಾಗಿರುವ ಕಾಲಿನ ಮಾರ್ಪಾಡು ಹೊಂದಿರುವ ಪಕ್ಷಿಗಳ ವರ್ಗಕ್ಕೆ ಸೇರಿವೆ. ಇವುಗಳ ಕರೆ ಸುಲಲಿತವಾದದ್ದಲ್ಲ. ಮರಿಗಳು 2 ವಾರಗಳಲ್ಲಿ ವಯಸ್ಕ ಪಕ್ಷಿಯಂತೆ ಕರೆಯತೊಡಗುತ್ತವೆ. [೫][೬]

ಆಹಾರ ಮತ್ತು ಪರಿಸರ[ಬದಲಾಯಿಸಿ]

ಪೂರ್ವ ರಾಜನೊಣಹಿಡುಕ ಸಹಜವಾಗಿ ಕೀಟ ಭಕ್ಷಕ. ಹಾರುತ್ತಲೇ ಕೀಟಗಳನ್ನು ಹಿಡಿದು ತಂದು ತಿನ್ನುತ್ತವೆ. ವಲಸೆ ಹೋಗುತ್ತಿರುವ ಕೀಟಗಳ ಗುಂಪು ಇಲ್ಲವೇ ಸಂತಾನ ಅಭಿವೃದ್ಧಿಗಾಗಿ ಒಗ್ಗೂಡಿ ಹಾರುತ್ತಿರುವ ಕೀಟಗಳನ್ನು ಗಾಳಿಯಲ್ಲೇ ಹಿಡಿದು ತರುತ್ತವೆ. ಹುಲ್ಲು ಗಾವಲುಗಳಲ್ಲಿ, ಹೊಲಗಳಲ್ಲಿ ಬೆಳೆದಿರುವ ಹುಲ್ಲಿಗಿಂತಲೂ ಸ್ವಲ್ಪ ಎತ್ತರದಲ್ಲಿ ಅಂದರೆ - ಬೇಲಿ, ತಂತಿ, ಕುರಚಲುಗಳ ಮೇಲೆ ಕುಳಿತಿದ್ದು ಹಾರಿಬರುವ ಕೀಟಗಳಿಗಾಗಿ ಕಾದಿದ್ದು ಹಾರಿ ಗಾಳಿಯಲ್ಲೆ ಹಿಡುದು ತಂದು ಕೂತು, ತಂದ ಕೀಟ ಇಲ್ಲವೇ ಕಪ್ಪೆಗಳನ್ನು ಕುಳಿತ ಪೀಠಕ್ಕೆ ಹೊಡೆದು ಒಮ್ಮೆಲೆ ನುಂಗುತ್ತವೆ (ಕಿತ್ತಿ ಸ್ವಲ್ಪ ಸ್ವಲ್ಪವಾಗಿ ತಿನ್ನುವುದಿಲ್ಲ). ಹಿಡಿದ ಕೀಟ ಚಿಕ್ಕದಾದರೆ ಗಾಳಿಯಲ್ಲಿ ಹಾರುತ್ತಲೇ ಭಕ್ಷಿಸುತ್ತವೆ. ಇವು ಕೀಟಗಳನ್ನು ಒಮ್ಮೆಲೇ ನುಂಗುವುದರಿಂದ ಕೀಟಗಳ ಕವಚ ದೃಢವಾಗಿದ್ದಲ್ಲಿ ಕವಚವನ್ನು ಕಕ್ಕುವುದು ಸಾಮಾನ್ಯ. ಚಳಿಗಾಲದಲ್ಲಿ ಕೀಟಗಳು ಕಡಿಮೆಯಾದಾಗ ಫಲಾಹಾರಿಗಳಾಗಿ ಚಿಕ್ಕ ಚಿಕ್ಕ ಫಲಗಳಾದ, ಚರ್ರಿ, ರಾಸ್ಬೆರಿ ಯಂತಹ ಚಿಕ್ಕ ಚಿಕ್ಕ ಚಳಿಗಾಲದ ಹಣ್ಣುಗಳನ್ನು ತಿನ್ನುತ್ತವೆ. [೫][೬]

ಸಂತಾನ ಅಭಿವೃದ್ಧಿ[ಬದಲಾಯಿಸಿ]

ಸಂತಾನಕ್ಕೆ ಸಂಬಂಧಿಸಿದ ಮಾಹಿತಿ[೫][೬][ಬದಲಾಯಿಸಿ]
 • ಮೊಟ್ಟೆಗಳ ಸಂಖ್ಯೆ : 2–5 ಮೊಟ್ಟೆಗಳು
 • ಮೊಟ್ಟೆಯ ಅಳತೆ
  • ಉದ್ದ : 0.8–1.1 ಇಂಚುಗಳು (2.1–2.7 cm)
  • ಅಗಲ : 0.6–0.8 ಇಂಚುಗಳು (1.6–2 cm)
 • ಕಾವುಕೊಡುವ ಅವಧಿ: 14–17 ದಿನಗಳು
 • ಮರಿಗಳು ಗೂಡು ಬಿಡುವ ಸಮಯ: ಮೊಟ್ಟೆಯೊಡೆದು 16–17 ದಿನಗಳು
 • ಮೊಟ್ಟೆಗಳು: ನುಣುಪಾದ, ಹೊಳಪಿಲ್ಲದ ತೊಗಟೆಯ ಮೇಲೆ ಕೆಂಪುಮಣ್ಣಿನ ಬಣ್ಣದ ಬೊಟ್ಟುಗಳು.
 • ಹುಟ್ಟಿದಾಗ ಮರಿಗಳು : ಕಣ್ಣು ತೆರೆದಿರುವುದಿಲ್ಲ, ಕೇಸರದ ಬಣ್ಣದ ಚರ್ಮದ ಮೇಲೆ ಬೂದಿ ಇಲ್ಲವೇ ಬಿಳಿ ಬಣ್ಣದ ಹಗುರ, ಎಳೆ ಪುಕ್ಕಗಳು ಇರುತ್ತವೆ.
ಗೂಡು ಮತ್ತು ಮೊಟ್ಟೆಗಳು

ಪೂರ್ವ ರಾಜನೊಣಹಿಡುಕಗಳು, ಬಟ್ಟಲಾಕಾರದ ಆಳವಾದ ದೃಢ ಗೂಡನ್ನು ದಟ್ಟ ಮರಗಳಲ್ಲಿ, ಪೊದೆಗಳಲ್ಲಿ, ಕುರಚಲು ಗಿಡಗಳಲ್ಲಿ, ಕಂಬಗಳ ಮೇಲೆ ಹೀಗೆ ವಿಭಿನ್ನ ಪ್ರದೇಶಗಳನ್ನು ಸಂತಾನಭಿವೃದ್ಧಿ ಕ್ಷೇತ್ರವಾಗಿ ಆರಿಸಿಕೊಳ್ಳುತ್ತವೆ. ಕೆನಡಾದ, ಬ್ರಿಟೀಷ್ ಕೊಲಂಬಿಯ ರಾಜ್ಯದಲ್ಲಿ ಇವು ತೆರೆದ ಹುಲ್ಲುಗಾವಲುಗಳಲ್ಲಿ, ನೀರಿನ ನಡುವಿನ ಕುರಚಲು ದ್ವೀಪಗಳಲ್ಲೂ ಗೂಡು ಕಟ್ಟುತ್ತವೆ. ತಮ್ಮ ಕ್ಷೇತ್ರವನ್ನು ಹೊಕ್ಕ ಯಾವುದೇ ಪ್ರಾಣಿ ಅಥವ ಪಕ್ಷಿಗಳಿಂದ (ಕಾಗೆ, ಅಳಿಲು, ಹಾವುಗಳು, ಅನ್ಯ ಹಕ್ಕಿಗಳು) ಆಪತ್ತಿನ ಸಾಧ್ಯತೆ ಕಂಡಲ್ಲಿ ಪರಾಕ್ರಮದಿಂದ ಆಪತ್ತನ್ನು ಎದುರಿಸಿ ಅಟ್ಟುತ್ತವೆ. [೭] ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಕ್ಷೇತ್ರ ಪಾಲನೆಯಲ್ಲಿ ಭಾಗವಹಿಸುತ್ತವೆ. ಇವುಗಳ ಕ್ಷೇತ್ರ ಪಾಲನೆಯ ಹೊಣೆಯನ್ನು ಪರಾಕ್ರಮದಿಂದ ನಿಭಾಯಿಸುವುದರಿಂದಾಗಿ ಕಾಗೆಗಳು ಇವುಗಳ ಸಂತಾನ ಪಾಲನಾ ಕ್ಷೇತ್ರಗಳಲ್ಲಿ ಗೂಡನ್ನು ಹೂಡುವುದಿಲ್ಲ/ಹುಡುಕುವುದಿಲ್ಲ. ರಾಜ ನೊಣಹಿಡುಕ ತನ್ನ ಗೂಡಿನಲ್ಲಿ ಅನ್ಯ ಪಕ್ಷಿಗಳ (cowbird) ಮೊಟ್ಟೆಗಳಿದ್ದರೆ ಅವುಗಳನ್ನು ಪತ್ತೆಮಾಡಿ ಹೊರಹಾಕುತ್ತವೆ. [೮] ಹೆಣ್ಣು ಹಕ್ಕಿ ಎರಡು ವಾರಗಳಲ್ಲಿ ಬೆಳಗಿನ-ತಂಪು ಸಮಯದಲ್ಲಿ ಗೂಡು ಕಟ್ಟುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿ ಹೆಣ್ಣು ಹಕ್ಕಿಯನ್ನು ಆಪತ್ತಿನಿಂದ ಕಾಯಲು ಮತ್ತು/ಅಥವಾ ಅನ್ಯ ಗಂಡು ಹಕ್ಕಿಗಳೊಂದಿಗಿನ ಮೈಥುನವನ್ನು ತಡೆಯಲು ಎಚ್ಚರಿಕೆವಹಿಸುತ್ತವೆ. ಕಡ್ಡಿ, ಬೇರು, ನಾರು, ಮರದ ತೊಗಟೆಯ ನಾರು, ಕೆಲವೊಮ್ಮೆ ಸಿಗರೇಟಿನ ಫಿಲ್ಟರ್ ಗಳು, ಪ್ಲಾಸ್ಟಿಕ್ ಮತ್ತು ನೂಲು ಹೀಗೆ ಹಲವು ವಸ್ತುಗಳಿಂದ ದೃಢವಾಗಿ ಕಟ್ಟಲ್ಪಟ್ಟ ಪೂರ್ವ ರಾಜನೊಣಹಿಡುಕದ ಗೂಡಿನ ಅಗಲ 7’’ ಮತ್ತು ಆಳ 6’’ (‘’ = ಇಂಚುಗಳು) ಇರುತ್ತದೆ. ಗೂಡಿನ ಒಳಭಾಗದ ತಳದಲ್ಲಿ ಮೃಧುವಾದ, ಸೂಕ್ಷ್ಮ ಬೇರುಗಳು, ಹತ್ತಿನಾರು, ಪ್ರಾಣಿಗಳ ಕೂದಲು ಹಾಸಲಾಗಿರುತ್ತದೆ. [೫][೬]

ನಡತೆ[ಬದಲಾಯಿಸಿ]

ಪೂರ್ವ ರಾಜನೊಣಹಿಡುಕಗಳು ನಿಪುಣ ವಾಯುಗಾಮಿ, ಇವು ಹಾರುವಾಗ ತೇಲುವುದಿಲ್ಲ. ಸಮೀಪದಲ್ಲಿ ಪೀಠವಾವುದೂ ಇಲ್ಲದಿದ್ದಲ್ಲಿ ಹುಲ್ಲಿನಲ್ಲಿನ ಕೀಟಗಳನ್ನು ಹಿಡಿಯುವಾಗ, ಗಾಳಿಯಲ್ಲಿ ಏಕ ಸ್ಥಳದಲ್ಲಿ ರೆಕ್ಕೆಬಡಿಯುತ್ತ ಇದ್ದು ಕೀಟವನ್ನು ಸಂಪಾದಿಸಿಕೊಳ್ಳಬಲ್ಲವು. ಕೆಲವೊಮ್ಮೆ ಇವು, ಅನ್ಯ ರಾಜನೊಣಹಿಡುಕಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನ್ನು ಇಟ್ಟು ಸಂತಾನ ಪಾಲನೆಯ ಹೊಣೆಯನ್ನು ತಪ್ಪಿಸಿಕೊಳ್ಳುವುದನ್ನು ಗಮನಿಸಲಾಗಿದೆ. ಇವುಗಳ ಸಂಖ್ಯೆ ಪೂರ್ವ ಹಾಗು ದಕ್ಷಿಣದ ರಾಜ್ಯಗಳಲ್ಲಿ ಏರಿಳತಕ್ಕೆ ಗುರಿಯಾಗಿದ್ದರೂ ವಲಸೆ ಕ್ಷೇತ್ರದಲ್ಲಿ ಇವುಗಳ ಸಂಖ್ಯೆಗೆ ದಕ್ಕೆ ಕಂಡಿಲ್ಲದ ಕಾರಣ ಇವುಗಳು ಸಂತತಿ ದೃಢವಾಗಿದೆ ಎಂದು ಪರಿಗಣಿಸಲಾಗಿದೆ. ಕಾಡುಗಳು ಮಾಯವಾಗಿ ಅವುಗಳ ಜಾಗದಲ್ಲಿ ನಗರಗಳು ಬೆಳೆಯುತ್ತಿರುವಾಗ ಆಶ್ರಯ ಕಳೆದುಕೊಂಡ ರಾಜನೊಣಹಿಡುಕಗಳು ಕೆಲವೊಮ್ಮೆ ರಸ್ತೆ ಬದಿಯಲ್ಲಿ ಆಹಾರಕ್ಕಾಗಿ ಮತ್ತು ಗೂಡು ಕಟ್ಟುವ ಸಾಮಗ್ರಿಗಳನ್ನು ಸಂಗ್ರಹಿಸುವಾಗ ವಾಹನಗಳ ಹೊಡೆತಕ್ಕೆ ಸಿಕ್ಕಿ ಸಾಯುತ್ತವೆ. ಮಾನವ ತಿರಸ್ಕೃತ ವಸ್ತುಗಳನ್ನೂ ಗೂಡುಕಟ್ಟುವುದಕ್ಕೆ ಬಳಸುವುದರಿಂದ ಮರಿಗಳಿಗೂ ಮತ್ತು ಪಾಲಕರಿಗೂ ಹಾನಿ ಉಂಟಾಗಬಹುದು - ಗೂಡಿಗೆ ತಂದ ಪ್ಲಾಸ್ಟಿಕ್ ನೂಲಿಗೆ ಸಿಕ್ಕಿ ಹೆಣ್ಣು ಹಕ್ಕಿಯೊಂದು ಸತ್ತಿರುವುದನ್ನು ದಾಖಲಿಸಲಾಗಿದೆ. [೫][೬]

ಮೂಲಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. http://brucedegraaf.zenfolio.com/p751054844/h333550C6#h333550c6
 3. http://www.allaboutbirds.org/guide/Eastern_Kingbird/lifehistory
 4. http://bna.birds.cornell.edu/bna/species/253/articles/sounds
 5. ೫.೦ ೫.೧ ೫.೨ ೫.೩ ೫.೪ ೫.೫ Murphy, Michael T. 1996. Eastern Kingbird (Tyrannus tyrannus), The Birds of North America Online (A. Poole, Ed.). Ithaca: Cornell Lab of Ornithology; Retrieved from the Birds of North America
 6. ೬.೦ ೬.೧ ೬.೨ ೬.೩ ೬.೪ ೬.೫ USGS Patuxent Wildlife Research Center. 2011. http://www.pwrc.usgs.gov/bbl/longevity/longevity_main.cfm
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. http://bna.birds.cornell.edu/bna/species/253/articles/behavior
 • Foster, Mercedes S. (2007): The potential of fruiting trees to enhance converted habitats for migrating birds in southern Mexico. Bird Conservation International 17(1): 45-61. doi:10.1017/S0959270906000554 PDF fulltext

ಬಾಹ್ಯ ಕೊಂಡಿಗಳು[ಬದಲಾಯಿಸಿ]